Site icon Vistara News

ದಶಮುಖ ಅಂಕಣ: ತರ್ಕ ಮೀರಿದ ಭಾವಗಳ ಆಪ್ತಗೊಳಿಸುವುದೇ ಹಬ್ಬ!

festivals india

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/08/WhatsApp-Audio-2023-08-29-at-10.12.53-1.mp3

ವಾಕಿಂಗ್ (walking) ಮಾಡುತ್ತಿದ್ದಾಗ ಕಂಡ ದೃಶ್ಯವಿದು- ಪಾರ್ಕಿನ ಬೆಂಚೊಂದರ ಮೇಲೆ ಮೂರ್ನಾಲ್ಕು ಮಂದಿ ಬೆವರೊರೆಸಿಕೊಳ್ಳುತ್ತಾ ಕುಳಿತಿದ್ದರು. ಪಾರ್ಕು ಸುತ್ತಿದ್ದಕ್ಕೋ ಅಥವಾ ಸುತ್ತುವಾಗ ದೊಡ್ಡ ದನಿಯಲ್ಲಿ ಆಡುತ್ತಿದ್ದ ಮಾತಿಗೋ- ಅಂತೂ ಎಲ್ಲರೂ ಆಯಾಸಗೊಂಡಂತೆ ಕಾಣುತ್ತಿದ್ದರು. ಕೂತಾಗಲೂ ಅವರ ಮಾತು ಮುಗಿದಿರಲಿಲ್ಲ. ಯಾವುದೋ ವಿಷಯದಲ್ಲಿ ತಮ್ಮದೇ ಸರಿ ಎಂದು ಪೌರಾಣಿಕ ಉಲ್ಲೇಖಗಳನ್ನೆಲ್ಲಾ ನೀಡುತ್ತಾ ಎಲ್ಲರೂ ವಾದಿಸುತ್ತಿದ್ದರು. ಯಾವುದೋ ಹಬ್ಬದ ಬಗ್ಗೆ ಅವರ ಮಾತು ನಡೆದಂತಿತ್ತು. ಹಬ್ಬಗಳ (Festivals) ಕುರಿತು ಇಷ್ಟೊಂದು ಬಿರುಸಾಗಿ, ಬೆವರು ಬರುವಂತೆ ಚರ್ಚಿಸುವುದಕ್ಕೇನಿದೆ ಎಂದು ಆ ಕ್ಷಣಕ್ಕೆ ಮೋಜೆನಿಸಿತು. ಆದರೆ ಮನುಷ್ಯನ ಸ್ವಭಾವದ (human nature) ಬಗ್ಗೆ ಮನದಲ್ಲೇ ಮಂಥನ ಪ್ರಾರಂಭವಾದ ಮೇಲೆ, ಅವರ ವರ್ತನೆಯ ಬಗ್ಗೆ ಇನ್ನಷ್ಟು ಹೊಳಹುಗಳು ದೊರೆಯುತ್ತಾ ಹೋದವು. ಯಾರದ್ದೋ ಮಾತಿನ ನೆವದಲ್ಲಿ ಮಾನವ ಸ್ವಭಾವಗಳ ಬಗ್ಗೆ ನಮ್ಮದೂ ಒಂದಿಷ್ಟು ಮಾತು…

ಹಸಿವೆ, ನಿದ್ದೆ, ಸೂರು, ವಸ್ತ್ರ ಮುಂತಾದ ಮೂಲಭೂತ ಅಗತ್ಯಗಳು ಒದಗಿದ ಮೇಲೆ ನಮಗೆ ಇನ್ನೇನು ಬೇಕಾಗುತ್ತದೆ? ದೇಹದ ಯೋಗಕ್ಷೇಮಗಳು ಪೂರ್ಣಗೊಂಡ ಮೇಲೆ ಮಾನಸಿಕ ಸಂತೃಪ್ತಿಯತ್ತ ಗಮನ ಹೊರಳುವುದು ಸಹಜ ತಾನೆ? ಮನಸ್ಸಿನ ಅಗತ್ಯಗಳೂ ಒದಗುತ್ತ ಹೋದಂತೆ… ಹೆಚ್ಚುತ್ತಾ ಹೋಗುತ್ತವೆ ಬಯಕೆಗಳು. ಹಮ್ಮು, ಬಿಮ್ಮು, ಅಹಮ್ಮು, ಇಸಮ್ಮು ಮುಂತಾದ- ಬದುಕಿಗೆ ಶುದ್ಧ ಮೇಕಪ್‌ನಂತೆ ಭಾಸವಾಗುವ- ಎಷ್ಟೊಂದು ವಿಷಯಗಳು ನಮ್ಮ ಜೋಳಿಗೆಯನ್ನು ತುಂಬುತ್ತಾ ಹೋಗುತ್ತವಲ್ಲ. ಹೀಗೆ ನಂನಮ್ಮ ಸೈದ್ಧಾಂತಿಕ ವಾದಗಳನ್ನು (Ideology) ಸಮರ್ಥಿಸಿಕೊಳ್ಳುವುದಕ್ಕೆ ಅಗತ್ಯವಾದ ದ್ರವ್ಯಗಳನ್ನು ನಾವು ಹೆಕ್ಕಿಕೊಳ್ಳುವುದು ಪೌರಾಣಿಕ (mythical) ಅಥವಾ ಐತಿಹಾಸಿಕ (historical) ವಸ್ತು-ವಿಷಯಗಳಿಂದ. ಎಲ್ಲಾ ದೇಶ, ಸಂಸ್ಕೃತಿ, ಸಂಪ್ರದಾಯಗಳಿಗೂ ಇಂಥ ಪೌರಾಣಿಕ ಮತ್ತು ಐತಿಹ್ಯಗಳ ಪರಂಪರೆ ಇದ್ದೇ ಇರುತ್ತದೆ. ಈಗ ನಮ್ಮ ಕಣ್ಣೆದುರಿಗೆ ಇರುವಂಥ ಸಾಲು ಸಾಲು ಹಬ್ಬಗಳನ್ನೇ ತೆಗೆದುಕೊಂಡರೆ, ಎಲ್ಲಾ ಹಬ್ಬಗಳಿಗೂ ಅದರದ್ದೇ ಆದ ಹಿನ್ನೆಲೆಯೊಂದಿದೆ. ನಮ್ಮ ವರ್ತಮಾನಗಳು ರೂಪುಗೊಳ್ಳುವುದೂ ಇಂಥದ್ದೇ ಹಿನ್ನೆಲೆಗಳ ಬೆಳಕಿನಲ್ಲಿ. ನಮ್ಮ ಆಚರಣೆ ಹಾಗೆ, ನಮ್ಮ ಕ್ರಮ ಹೀಗೆ ಎಂಬಂಥ ಬದುಕಿನ ಪ್ರಸಾದನಗಳು ಜೀವ ತಳೆಯುವುದಕ್ಕೂ ಇಂಥ ಆಚರಣೆಗಳಿಗೂ ಗಾಢವಾದ ನಂಟಿಲ್ಲವೇ. ಕೈಯಲ್ಲಿ ಹೂವು, ಬಾಳೆಕಂಬ ಹಿಡಿದು ಹೋಗುವವರು ಹಬ್ಬದ ಸಂಭ್ರಮಕ್ಕಿಂತ ಆಚರಣೆಯ ಪಾರಮ್ಯದ ಬಗ್ಗೆ ಬಡಬಡಿಸುವುದನ್ನು ನೋಡಿದಾಗ- ನೋಡಿದವರಿಗೆ ವೈರಾಗ್ಯ ಬಂದರೆ ಅತಿಶಯವಲ್ಲ!

ಇದೇ ಮಂಥನದ ಮುಂದುವರಿದ ಭಾಗವಾಗಿ ಮನಸ್ಸು ಹೊರಳಿದ್ದು ಹಬ್ಬಗಳ ಮೂಲದೆಡೆಗೆ. ಕೆಡುಕಿನ ಮೇಲೆ ಒಳಿತಿನ ಜಯ ಎಂಬ ಸದಾಶಯ, ಎಲ್ಲರೂ ಒಟ್ಟಾಗಿ ಸೇರುವ ನೆವಕ್ಕೊಂದು ಆಚರಣೆ, ಪ್ರಕೃತಿಯ ಆರಾಧನೆ, ಬಾಂಧವ್ಯ ವೃದ್ಧಿಗೊಂದು ಸದ್ಭಾವನೆ- ಇಂಥವೇ ಹಬ್ಬಗಳ ಮೂಲಸ್ರೋತವಾಗಿ ಕಾಣುತ್ತವೆ. ಈಗ ಬಾಂಧವ್ಯ ವೃದ್ಧಿ ಎನ್ನುವುದು ಅತ್ಯಂತ ಸಾಮಾನ್ಯವಾದ, ಆಡುಮಾತಿನ ಕಲ್ಪನೆಯಾಯಿತು. ಇದನ್ನೇ ಪರಾಂಬರಿಸಿದರೆ, ಬಂಧುತ್ವದ ಆಚರಣೆಯೇ ಮೂಲ ಉದ್ದೇಶವಾದಂಥ ಹಬ್ಬಗಳು ನಮ್ಮ ಬಾಂಧವ್ಯವನ್ನೆಷ್ಟು ವೃದ್ಧಿಸುತ್ತಿವೆ? ಭೀಮನ ಅಮಾವಾಸ್ಯೆ, ಪಂಚಮಿ ಹಬ್ಬ, ರಕ್ಷಾಬಂಧನ, ಭಾವನ ಬಿದಿಗೆ, ವಟ ಪೂರ್ಣಿಮೆ ಮುಂತಾದವು ಕೇವಲ ಆಚರಣೆಗಷ್ಟೆಯೇ? ಈ ಹಬ್ಬಗಳು ಹುಟ್ಟಿದ ಹಿನ್ನೆಲೆಗಳಿಗೆ ಇಂದಿನ ಬದುಕಿನಲ್ಲಿ ಏನಾದರೂ ಅರ್ಥ ಉಂಟೇ? ಇವುಗಳ ಮಹತ್ತಿಗೆ ನಾವೆಷ್ಟು ಬೆಲೆ ಕೊಡುತ್ತೇವೆ? ಅವುಗಳ ಪ್ರಸ್ತುತತೆಯನ್ನು ಆದರಿಸುವಷ್ಟು ವ್ಯವಧಾನ ನಮಗಿದೆಯೇ? ಸಾಂಸ್ಕೃತಿಕವಾಗಿ ನಮ್ಮ ಅಗತ್ಯಗಳನ್ನು ನೆರವೇರಿಸುತ್ತವೆಯೇಕ್ಕೆ ಇವು? ನಮಗೇಕೆ ಬೇಕು ಇವು?

ಕೆಲವೆಡೆ ಅಳಿಯನ ಅಮಾವಾಸ್ಯೆ ಎಂದೂ ಕರೆಸಿಕೊಳ್ಳುವ ಭೀಮನ ಅಮಾವಾಸ್ಯೆ, ಗಂಡನ ಪೂಜೆಗೆ ಮೀಸಲಾದ ದಿನ. ಪತಿಯ ದೀರ್ಘಾಯಸ್ಸು ಮತ್ತು ಸಮೃದ್ಧಿಯನ್ನು ಆಶಿಸಿ ಪೂಜೆ ಮಾಡುವ ಕ್ರಮ ವ್ಯಾಪಕವಾಗಿದೆ. ಇದಕ್ಕಿರುವ ಪೌರಾಣಿಕ ಹಿನ್ನೆಲೆ, ನಾನಾ ಕಥೆಗಳು, ಆಚರಣೆಯ ವೈವಿಧ್ಯತೆಗಳು ಏನೇ ಇರಲಿ- ದಾಂಪತ್ಯದ ಜೀವಾಳವಾದ ಹೊಂದಾಣಿಕೆಯನ್ನು ಸಾಧಿಸಲು ಇದೆಷ್ಟು ಪೂರಕ? ಒಬ್ಬರಿಗೊಬ್ಬರು ಸಮಯವನ್ನೇ ಕೊಡಲಾಗದಷ್ಟು ವ್ಯಸ್ತರಾಗಿರುವ ಇಂದಿನ ಬದುಕಿನಲ್ಲಿ, ಒಂದು ಪೂಜೆಯು ಮನದಲ್ಲಿ ಪ್ರೀತಿಯನ್ನು ಉಜ್ಜುಗಿಸಬಲ್ಲದೇ? ಸಾಹಚರ್ಯದ ಭಾವವನ್ನು ಉದ್ದೀಪಿಸಬಲ್ಲದೇ? ಸಂಬಂಧದ ಬದ್ಧತೆಯನ್ನು ನೆನಪಿಸಬಲ್ಲದೇ? ಇದೆಲ್ಲಾ ಸಾಧಿತವಾಗುತ್ತದೆ ಎಂದಾದರೆ ಪತ್ನಿಯನ್ನು ಪೂಜಿಸುವುದಕ್ಕೂ ಪತಿಗೊಂದು ದಿನವಿದ್ದರೆ ಅನುಕೂಲವಾದೀತೆ? ಈ ಮಂಥನಕ್ಕಿರುವುದು ಆಚರಣೆಯನ್ನು ಕಹಿಯಾಗಿಸುವ ಉದ್ದೇಶವಲ್ಲ, ಬಾಂಧವ್ಯ ಬಿಗಿಯಾಗಲೆಂಬ ಆಶಯ ಮಾತ್ರ.

ಇದು ಕೂಡಿಬಂದ ಅಥವಾ ನಾವೇ ನೋಡಿಕೊಂಡ ಸಂಬಂಧದ ಮಾತಾಯಿತು. ಹಾಗಲ್ಲದೆ ಹುಟ್ಟಿನಿಂದಲೇ ಬಂದ ಸಂಬಂಧಗಳಿಗೂ ಮೀಸಲಾದ ಹಬ್ಬಗಳಿವೆಯಲ್ಲ. ಉದಾ, ಅಣ್ಣ-ತಂಗಿ ಹಬ್ಬ ಎಂದೇ ಕರೆಸಿಕೊಳ್ಳುವ ನಾಗರಪಂಚಮಿ ಹಬ್ಬ. ಹೀಗೆಂದ ತಕ್ಷಣವೇ ನಮಗೆ ನೆನಪಾಗುವುದು- ʻಅಣ್ಣ ಬರಲಿಲ್ಲ ಯಾಕ ಕರಿಯಾಕʼ! ಉತ್ತರ ಕರ್ನಾಟಕದ ಭಾಗದಲ್ಲಿ ನಾಗಪ್ಪನ ಪೂಜೆ ಇಲ್ಲವೆಂದಲ್ಲ. ಆದರೆ ವ್ಯಾಪಕವಾಗಿ ಪ್ರಚಲಿತದಲ್ಲಿರುವುದು ಅಣ್ಣ-ತಂಗಿ ಹಬ್ಬ ಅಂತಲೇ. ಅದರ ಬೆನ್ನಿಗೇ ಬರುವುದು, ಅಂಥದ್ದೇ ಭಾವಗಳನ್ನು ಹೊತ್ತ ರಕ್ಷಾಬಂಧನ (Rakshabandhan). ಇದು ಹೆಚ್ಚು ಚಾಲ್ತಿಯಲ್ಲಿರುವುದು ಅಣ್ಣ-ತಂಗಿ ಹಬ್ಬ ಎಂದೇ ಹೌದಾದರೂ ಇದರ ಆಚೀಚಿನ ವಿಷಯಗಳು ಆಸಕ್ತಿಕರವಾಗಿವೆ.

ಉಳಿದೆಲ್ಲಾ ಹಬ್ಬಗಳಿಗೆ ಇರುವಂತೆ ಇದರ ಬೆನ್ನಿಗೂ ಬಹಳಷ್ಟು ಪೌರಾಣಿಕ ಕಥಾನಕಗಳು ಚಾಲ್ತಿಯಲ್ಲಿವೆ. ಆದರೆ ಲಿಂಗ ಭೇದವಿಲ್ಲದಂತೆ, ಸಂಬಂಧಗಳ ಹಂಗಿಲ್ಲದಂತೆ ಒಬ್ಬರಿಗೊಬ್ಬರು ರಕ್ಷೆಯನ್ನು ಕೋರುವಂಥ ಬಂಧವಿದು ಎನ್ನುವ ಕಥೆಗಳು ನಿಜಕ್ಕೂ ಮುದ ನೀಡುತ್ತವೆ. ಕೃಷ್ಣ ಮತ್ತು ದ್ರೌಪದಿಯರ ಸಹೋದರತ್ವದ ಕಥೆ ಇದರಲ್ಲಿ ಮುಖ್ಯವಾಗಿದ್ದು. ಕೃಷ್ಣನ ಬೆರಳಿಗೆ ಗಾಯವಾಗಿ ರಕ್ತ ಒಸರುವಾಗ, ದ್ರೌಪದಿ ತನ್ನ ವಸ್ತ್ರವನ್ನೇ ಹರಿದು ಕಟ್ಟಿದ್ದಳಂತೆ. ಕೃಷ್ಣನ ನೆರವಿಗೆ ಆಕೆ ಧಾವಿಸಿದ್ದಕ್ಕೆ ಪ್ರತಿಯಾಗಿ ಆಕೆಯ ರಕ್ಷಣೆಗೆ ಕೃಷ್ಣ ಧಾವಿಸಿದ ಎನ್ನುವಂಥ ಅಕ್ಷಯ ವಸ್ತ್ರದ ಕಥೆ ಜೊತೆಗಿದೆ. ಆದರೆ ರಕ್ಷಾ ಬಂಧನವನ್ನು ಶ್ರಾವಣ ಹುಣ್ಣಿಮೆಯಂದೇ ಏಕೆ ಆಚರಿಸಬೇಕು ಎಂಬುದಕ್ಕೆ ಈ ಕಥೆಗಳಲ್ಲಿ ಸೂಕ್ತ ಉತ್ತರಗಳಿದ್ದಂತೆ ಕಾಣುತ್ತಿಲ್ಲ. ಅಂದರೆ ಕಾಲ, ಸ್ಥಳ ಮುಂತಾದ ವಿವರಗಳಿಗೆ ಅಂಟಿಕೊಳ್ಳದೆ, ಬಂಧುತ್ವದ ಭಾವವನ್ನಷ್ಟೇ ಮಿಡಿಯುವ ಆರ್ದ್ರತೆ ಇದಕ್ಕಿದೆ.

raksha-bandhan

ದೇವತೆಗಳು ರಕ್ಕಸರೊಂದಿಗೆ ನಡೆಸಿದ ಯುದ್ಧದಲ್ಲಿ ಇಂದ್ರನ ರಕ್ಷಣೆಗಾಗಿ ಆತನ ಪತ್ನಿ ಶಚೀದೇವಿ ರಕ್ಷಾಬಂಧನ ಬಿಗಿದ ಕಥೆಯಿದೆ. ಬಲಿಯ ಅರಮನೆಯಲ್ಲಿದ್ದ ವಿಷ್ಣುವನ್ನು ಮರಳಿ ಪಡೆಯಲು ಲಕ್ಷ್ಮೀದೇವಿ ಮಹಾಬಲಿಗೆ ರಕ್ಷಾ ಬಂಧನ ಕಟ್ಟಿದ ಕಥೆಗಳಿವೆ. ಅಭಿಮನ್ಯುವಿನ ರಕ್ಷಣೆಗಾಗಿ ಕುಂತೀದೇವಿ ರಕ್ಷಾಸೂತ್ರ ಬಿಗಿದ ಕಥೆ; ಯಮ ಮತ್ತು ನದಿ ಯಮುನೆಯ ಕಥೆಯೂ ದೊರೆಯಬಹುದು. ಪೌರಾಣಿಕ ಕಥೆಗಳ ಸೊಗಸಿರುವುದೇ ಇಲ್ಲಿ. ರಕ್ಷೆಯನ್ನು ಯಾರು, ಯಾರಿಗೆ, ಯಾವತ್ತು, ಯಾಕಾಗಿ ಕಟ್ಟಿದರು ಎಂಬೆಲ್ಲಾ ವಿವರಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇವೆಲ್ಲಾ ಬುದ್ಧಿಗೆ ಗ್ರಾಸವಲ್ಲ, ಭಾವಕ್ಕೆ ಬೇಕಾದವು. ಅದನ್ನು ಜನಪದರು ತಮಗೆ ಬೇಕಾದಾಗ, ಬೇಕಾದಂತೆ ನಿರ್ಣಯಿಸಿಕೊಳ್ಳುವಂಥ ನಮ್ಯತೆ ಇವುಗಳಿಗಿದೆ. ಇಲ್ಲಿ ಪ್ರಧಾನವಾಗುವುದು- ಮಾನವರಿಗೆ ಅಗತ್ಯವಾಗಿ ಬೇಕಾಗುವ ಪ್ರೀತಿಯ ಬಂಧ ಮತ್ತು ರಕ್ಷೆಯೆಂಬ ಕವಚ. ಹಾಗೆಂದೇ ಸಂಬಂಧ-ಸಾರಿಗೆ ಇಲ್ಲದವರೂ ಯಾರದ್ದೋ ಅಣ್ಣನೋ ತಂಗಿಯೋ ಅಥವಾ ಹಿತರಕ್ಷಕರೋ ಆಗಬಹುದಾದ ಅವಕಾಶವಿಲ್ಲಿದೆ. ಅಂದರೆ ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಇರಬಹುದಾದ ಕಾಳಜಿ, ಪ್ರೀತಿ ಮತ್ತು ಸದಾಶಯಗಳಿಗೆ ಮಾತ್ರವೇ ಇಲ್ಲಿ ಮಹತ್ವ.

ಇದನ್ನೂ ಓದಿ: ದಶಮುಖ ಅಂಕಣ: ಮನದ ಸಿಕ್ಕು ಬಿಡಿಸುವ ಬಿಕ್ಕುಗಳು

ಮಾನವ ಸ್ವಭಾವಗಳ ಬಗೆಗಿನ ಕುತೂಹಲ ಇಷ್ಟಕ್ಕೆ ತಣಿಯುವುದಿಲ್ಲ. ಇಂಥ ಕಥೆಗಳು ಐತಿಹಾಸಿಕವಾಗಿಯೂ ಪ್ರಚಲಿತವಾಗಿವೆ. ಇವುಗಳ ಸತ್ಯಾಸತ್ಯತೆಗಳ ಬಗ್ಗೆ ಸ್ವಷ್ಟತೆ ಇಲ್ಲದಿರುವುದಕ್ಕೆ, ಅವುಗಳನ್ನು ದಂತಕಥೆಗಳೆಂದೇ ಕರೆದು ನೆಮ್ಮದಿಯಿಂದಿರೋಣ. ರಜಪೂತರ ರಾಣಿ ಕರ್ಣಾವತಿಯು ಬಹಾದುರ್ ಷಾನ ದಾಳಿ ತಡೆಯುವುದಕ್ಕೆ ನೆರವು ಕೋರಿ, ಮೊಘಲ್ ದೊರೆ ಹುಮಾಯೂನ್‌ಗೆ ರಾಖಿ ಕಳಿಸಿದ ಕಥೆಯಿದೆ. ಭಾರತದ ಮೇಲೆ ದಂಡೆತ್ತಿ ಬಂದಿದ್ದ ಅಲೆಕ್ಸಾಂಡರ್‌ನ ಜೀವ ತೆಗೆಯಬಾರದೆಂದು ಕೋರಿ ಆತನ ಪತ್ನಿಯು, ಎದುರಾಳಿ ಪುರೂರವನಿಗೆ ರಾಖಿ ಕಳಿಸಿದ ಕಥೆಯಿದೆ. ಅಂದರೆ ಕಥೆ ಪೌರಾಣಿಕ ಮೂಲದ್ದೇ ಇರಲಿ, ಐತಿಹ್ಯಗಳಿಂದಲೇ ಎದ್ದು ಬರಲಿ, ಅವುಗಳಲ್ಲಿ ಒಂದಿಷ್ಟು ಅಸ್ಪಷ್ಟತೆಯಿದೆ. ಈ ತಿಳಿಯದೇ ಉಳಿದ ಈ ಭಾವಗಳೇ ಅಲ್ಲವೆ ಮಾನವರ ಆಸಕ್ತಿ ಕೆರಳಿಸುವುದು, ಅವರನ್ನು ತಮ್ಮತ್ತ ಸೆಳೆಯುವುದು? ಇಂಥ ಆಸಕ್ತಿಗಳೇ ಆಚರಣೆಗಳ ತಳಹದಿ ಎಂದು ತಿಳಿಯೋಣವೇ?

ಅಂದರೆ, ಹಬ್ಬಗಳ ಮೂಲಕ ನಾವು ಏನನ್ನೇ ಆಚರಿಸಿದರೂ- ತರ್ಕ, ಲೆಕ್ಕ, ಸೂತ್ರ, ಪಾತ್ರಗಳನ್ನು ಮೀರಿ, ನಮ್ಮ ಭಾವಕೋಶಕ್ಕದು ಬೇಕು. ನಮ್ಮ ಸಾಂಸ್ಕೃತಿಕ ಬೇರುಗಳಿಗೆ ಅಂತರ್ಗಾಮಿಯಾಗಿ ಪ್ರವಹಿಸಿ ನೀರುಣಿಸುವ ಸೆಲೆಗಳಿವು. ಹಾಗಾಗಿಯೇ ಎಲ್ಲಾ ಅಸ್ಪಷ್ಟತೆ ಮತ್ತು ಅಸಂಗತಗಳನ್ನು ಮೀರಿಯೂ ನಮಗವು ಆಪ್ತವೆನಿಸುತ್ತವೆ. ಇನ್ನೂ ಹೇಳುವುದಾದರೆ, ಈ ರಕ್ಷೆಯೆಂಬ ಬಂಧ ಕಾಲೇಜಿನಲ್ಲಿ ಕಾಡುವವರಿಂದ ತಪ್ಪಿಸಿಕೊಳ್ಳುವಷ್ಟು ಲೌಕಿಕವೂ ಆದೀತು, ಚಂದಾ-ಮಾಮಾನಿಗೆ ಭೂಮಿ-ತಾಯಿಯೇ ಕಟ್ಟುವಷ್ಟು ಪರಾರ್ಥವೂ ಆದೀತು!

ಇದನ್ನೂ ಓದಿ: ದಶಮುಖ ಅಂಕಣ : ತಾಳ್ಮೆಯೆಂಬ ಪರಿಪಾಕ

Exit mobile version