Site icon Vistara News

ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!

scientific temperament

ಈ ಅಂಕಣವನ್ನು ಇಲ್ಲಿ ಕೇಳಿ:

https://vistaranews.com/wp-content/uploads/2023/02/WhatsApp-Audio-2023-02-28-at-113-1-1.mp3

ಇಂದು ಭ್ರಮರ-ಕೀಟ ನ್ಯಾಯದ ನೆನಪಾಗುತ್ತಿದೆ! ಅಂದರೆ-

ದುಂಬಿಯೊಂದು ನೆಲ ತೋಡಿ ಗೂಡು ಮಾಡಿ, ಅದರಲ್ಲಿ ಯಾವುದೋ ಕೀಟಗಳನ್ನು ತಂದು ಮುಚ್ಚಿಡುತ್ತದೆ. ಆ ಗೂಡಿನ ಬಳಿಯೇ ದುಂಬಿ ಗುಂಯ್‌ಗುಡುತ್ತಾ ಸುತ್ತುತ್ತಿರುತ್ತದೆ. ಹಲವು ದಿನಗಳವರೆಗೆ ಆ ಗೂಡೊಳಗಿದ್ದ ಕೀಟಗಳಿಗೆ ದುಂಬಿಯ ಝೇಂಕರಿಸುವ ಶಬ್ದವೇ ಕೇಳುತ್ತಿರುತ್ತದೆ. ಹಲವಾರು ದಿನಗಳ ನಂತರ ಆ ಗೂಡೊಳಗಿಂದ ಹೊರಬರುವ ಕೀಟಗಳು ದುಂಬಿಗಳೇ ಆಗಿ ರೂಪಾಂತರ ಹೊಂದಿರುತ್ತವೆ! ದುಂಬಿಯ ಸಂಸರ್ಗದಿಂದ ಸಾಮಾನ್ಯ ಕೀಟವೊಂದು ದುಂಬಿಯೇ ಆಗಿ ಮಾರ್ಪಡುವ ಅಸಾಮಾನ್ಯ ಸಂಗತಿಯೇ ಭ್ರಮರ-ಕೀಟ ನ್ಯಾಯ. ಸಾಮಾನ್ಯ ತರ್ಕದೊಂದಿಗೆ ಇದನ್ನು ನೋಡಿದರೆ, ʻಹೌದಲ್ಲವೇ! ಸಹವಾಸ ಎಂಬುದು ದೋಷವನ್ನು ತರುವಂತೆ, ಇಂಥ ಬದಲಾವಣೆಯನ್ನೂ ತರಬಹುದಲ್ಲವೇʼ ಎಂಬ ವಾದವನ್ನು ತಪ್ಪು ಎನ್ನಲಾದೀತೇ?

ಇದೇ ಸಂಗತಿಯ ಇನ್ನೊಂದು ಮುಖವನ್ನು ಗಮನಿಸಿ- ಭ್ರಮರ ತನ್ನ ಗೂಡಿನೊಳಗೆ ಕೀಟಗಳನ್ನು ತುಂಬಿಸಿಟ್ಟು ಸುತ್ತುತ್ತಿದೆ. ಕೆಲವು ದಿನಗಳ ಬಳಿಕ ಆ ಗೂಡನ್ನು ಕೆದಕಿ ನೋಡಿದರೆ, ಅದರೊಳಗೆ ದುಂಬಿಯ ಮೊಟ್ಟೆಯೊಡೆದು ಹೊರಬಂದ ಮರಿಗಳನ್ನು ಕಾಣಬಹುದು. ದುಂಬಿ ತಂದಿಟ್ಟ ಕೀಟಗಳನ್ನು ಅವು ಅರ್ಧ ತಿಂದಿರಬಹುದು. ಇನ್ನೂ ಕೆಲವು ದಿನ ಬಿಟ್ಟು ಗೂಡು ಕೆದರಿದರೆ, ಮರಿಗಳು ಕೀಟಗಳನ್ನು ಸಂಪೂರ್ಣ ತಿಂದು ಪೂರ್ಣಪ್ರಮಾಣದ ದುಂಬಿಗಳಾಗಿವೆ; ಗೂಡಿನಿಂದ ಹೊರಬರಲು ಸಜ್ಜಾಗಿವೆ. ಸಂಸರ್ಗದಿಂದ ಆದ ಬದಲಾವಣೆ ಎಂಬ ಭ್ರಮರ-ಕೀಟ ನ್ಯಾಯಕ್ಕೆ ಇದನ್ನು ಅನ್ವಯ ಮಾಡುವುದು ಹೇಗೆ? ಮೇಲ್ನೋಟಕ್ಕೆ ಸತ್ಯ ಎನಿಸುವ ಭ್ರಮರ-ಕೀಟ ನ್ಯಾಯದ ತಿರುಳನ್ನು ಭೇದಿಸಿದಾಗ ಕಾಣುವ ಸತ್ಯ ಬೇರೆಯೇ ಇದೆಯಲ್ಲವೇ? ಯಾವುದನ್ನೇ ಆದರೂ ಮೇಲ್ನೋಟಕ್ಕೆ ಕಾಣುವುದನ್ನು ನಂಬದೆ, ಅದರ ಯಥಾರ್ಥವೇನು ಎಂಬುದನ್ನು ಚಿಂತಿಸುವ, ಭೇದಿಸುವ, ವಿಘಟಿಸುವ, ವಿಶ್ಲೇಷಿಸುವ ಮೂಲಕ ಅರಿಯುವ ಮನಸ್ಥಿತಿಯನ್ನು ವೈಜ್ಞಾನಿಕ ಮನೋಭಾವನೆ ಎನ್ನೋಣವೇ? ಇದೇ ಜಾಡಿನಲ್ಲಿ ಮುಂದುವರಿದರೆ, ನಮ್ಮ ಬದುಕಿನಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವದ ಪಾತ್ರವೇನು, ಅಗತ್ಯವೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುವುದಿಲ್ಲ.

ಮೊಟ್ಟೆಯೊಳಗಿದ್ದ ದುಂಬಿಯ ಮರಿಗಳು ಪೂರ್ಣಪ್ರಮಾಣದ ದುಂಬಿಗಳಾಗುವ ಬಗೆಗಿನ ಕಾವ್ಯಾತ್ಮಕ ಚಿತ್ರಣವೆಂದು ಭ್ರಮರ-ಕೀಟ ನ್ಯಾಯವನ್ನು ನಾವು ಮೆಚ್ಚುವುದು, ಹೊಗಳುವುದು, ಉಲ್ಲೇಖಿಸುವುದು- ಇಂಥ ಯಾವುದೂ ತಪ್ಪಲ್ಲ. ಆದರೆ ಇದೇ ಸತ್ಯವೆಂದು ಒಪ್ಪಿದರೆ ಹೇಗೆ? ವೈಜ್ಞಾನಿಕ ಸತ್ಯಗಳು ಯಾವುದೇ ಕಾವ್ಯ, ಕಥೆ, ವ್ಯಕ್ತಿ, ಭಾವನೆ, ದೇಶ, ಭಾಷೆ, ಸಂಸ್ಕೃತಿ, ಸಂಸ್ಕಾರ, ನಂಬಿಕೆ ಮುಂತಾದ ಎಲ್ಲಕ್ಕಿಂತ ಮೇಲಿನವು. ನಮ್ಮೆಲ್ಲ ನಂಬಿಕೆ, ಸಂಸ್ಕಾರಗಳನ್ನು ಪ್ರಶ್ನಿಸಿಕೊಳ್ಳುವ, ಉತ್ತರಕ್ಕಾಗಿ ಮಾಹಿತಿ ಸಂಗ್ರಹಿಸಿ, ಅವಲೋಕಿಸಿ, ಪ್ರಯೋಗಿಸಿ, ಅಗತ್ಯವಾದರೆ ಮರುಪ್ರಯೋಗಕ್ಕೆ ಒಳಪಡಿಸುವ- ಸರಳವೂ ಅಲ್ಲದ, ಕಠಿಣವೂ ಅಲ್ಲದ ಹಾದಿಯಿದು. ಕಲಿಕೆ ಮತ್ತು ಅನ್ವೇಷಣೆ ಒಂದೇ ನಾಣ್ಯದ ಎರಡು ಮುಖಗಳಲ್ಲವೇ?

ವಿಜ್ಞಾನ ನಮ್ಮ ಬದುಕಿಗೆ ಏಕೆ ಮತ್ತು ಹೇಗೆ ಅಗತ್ಯ ಎನ್ನುವ ಬಗ್ಗೆ ಕಠೋರವಾದ ಸಿದ್ಧಾಂತಗಳನ್ನು ಮಂಡಿಸುವ ಉದ್ದೇಶದಿಂದ ಇದನ್ನು ಆರಂಭಿಸಿದ್ದಲ್ಲ; ನಮ್ಮ ಪೂರ್ವಸೂರಿಗಳು ಹೇಳಿದ್ದೆಲ್ಲವೂ ಹೇಗೆ ತಪ್ಪಾಗಿತ್ತು ಮತ್ತು ಅದನ್ನು ಬದಿಗೆಸೆದು ಆವಿಷ್ಕಾರಗಳನ್ನು ಮುಂದುವರಿಸಿದ ಮಾತ್ರದಿಂದಲೇ ನಾವೆಲ್ಲ ಹೇಗೆ ಬದುಕಿಕೊಂಡಿದ್ದೇವೆ ಎಂಬುದರ ವಿತಂಡ ವಿವರಣೆಯೂ ಇದಲ್ಲ; ವೈಜ್ಞಾನಿಕ ಚಿಂತನೆಗಳು ಮತ್ತು ಸಾಂಸ್ಕೃತಿಕ ನಂಬಿಕೆಗಳನ್ನು ಒಂದಕ್ಕೊಂದು ವಿರೋಧಿ ಸ್ಥಾನಗಳಲ್ಲಿ ನಿಲ್ಲಿಸಿ ಗುದ್ದಾಡಿಸುವ ಉದ್ದೇಶವಂತೂ ಇಲ್ಲವೇ ಇಲ್ಲ; ಪ್ರಾಚೀನ ನಂಬಿಕೆಗಳಿಗೆಲ್ಲಾ ವಿಜ್ಞಾನದ ಲೇಪ ಕೊಟ್ಟು, ಈಗಿನ ವಿಜ್ಞಾನದ ನಿರ್ಮಿತಿಗಳನ್ನು ಹೇಗೆ ನಮ್ಮ ವೇದ ಕಾಲದಲ್ಲಿಯೇ ಹೇಳಲಾಗಿತ್ತು ಎಂದು ಶೃತಪಡಿಸುವ ಆಸಕ್ತಿಯಂತೂ ಮೊದಲೇ ಇಲ್ಲ! ಪ್ರತಿಯೊಂದಕ್ಕೂ ಪ್ರಶ್ನೆ ಕೇಳುವ ನಮ್ಮ ಸಹಜ ಕುತೂಹಲವನ್ನು ಹತ್ತಿಕ್ಕಿಕೊಳ್ಳದೇ, ಉತ್ತರ ಹುಡುಕುವ ನಿಟ್ಟಿನಲ್ಲಿ ಪೂರ್ವಗ್ರಹವಿಲ್ಲದೇ ಮುಂದುವರಿದ ಮಾತ್ರಕ್ಕೆ, ಬದುಕು ಎಷ್ಟೆಲ್ಲಾ ಬದಲಾಗಬಹುದು ಎಂಬ ಸೂಕ್ಷ್ಮ ಚಿಂತನೆಯಷ್ಟೇ ಮಾಡುವ ಪ್ರಯತ್ನವಿದು.

ಈಗಿಲ್ಲಿ ಉಲ್ಲೇಖಿಸಿದ ಕೆಲವು ವಿಷಯಗಳನ್ನೇ ವಿಘಟಿಸುತ್ತಾ ಹೋದರೆ- ನಿಮ್ಮಜ್ಜಿ ಸದಾ ಮಾಡುತ್ತಿದ್ದ ಯಾವುದೋ ಪಾಯಸ ಮಾಡುತ್ತೀರಿ. ಅದನ್ನು ತಿಂದವರಾರೋ, ರುಚಿಗೆ ಮನಸೋತು, ನಿಮ್ಮಲ್ಲಿ ಮಾಡುವ ವಿಧಾನ ಕೇಳಿ ತಿಳಿದುಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಅವರು ಪ್ರಯತ್ನಿಸಿದರೂ ರುಚಿ ನೀವೋ ನಿಮ್ಮಜ್ಜಿಯೊ ಮಾಡಿದಂತಾಗುವುದಿಲ್ಲ, ಬೇರೆಯೇ ಬರುತ್ತದೆ. ಅಜ್ಜಿ ಮಾಡುತ್ತಿದ್ದ ಅಡುಗೆಯನ್ನೇ ನೀವು ಕಲಿತಿದ್ದರೂ, ರುಚಿ ಅವರಿಗಿಂತ ನಿಮ್ಮದೂ ಭಿನ್ನವೇ ಆಗಿರುತ್ತದೆ. ಹೀಗೇಕಾಯಿತು? ಅದರ ಬದಲು, ಪ್ಯಾಕೆಟ್‌ನಲ್ಲಿರುವ ಸಿದ್ಧ ಆಹಾರವನ್ನು ಖರೀದಿಸುತ್ತೀರಿ. ಒಂದಲ್ಲ ಹತ್ತು ಪ್ಯಾಕ್‌ಗಳ ರುಚಿ ನೋಡಿದರೂ ಬದಲಾಗುವುದಿಲ್ಲವಲ್ಲ! ಎರಡೂ ಆಹಾರ ತಯಾರಿಕೆಯೇ ಅಲ್ಲವೇ? ಒಂದು ಪ್ರಕರಣದಲ್ಲಿ ಆದ ರುಚಿಯ ಬದಲಾವಣೆ ಇನ್ನೊಂದರಲ್ಲಿ ಆಗಲಿಲ್ಲ ಯಾಕೆ?

ಪಾಯಸ ತಯಾರಿಕೆಯನ್ನೂ ಒಂದು ವೈಜ್ಞಾನಿಕ ಪ್ರಕ್ರಿಯೆಗೆ ಅಳವಡಿಸಿದರೆ, ಅಂದರೆ ಹಾಲು, ಸಕ್ಕರೆ ಇತ್ಯಾದಿಗಳ ಪ್ರಮಾಣ, ಯಾವುದನ್ನು ಯಾವಾಗ ಎಷ್ಟೆಷ್ಟು ಹಾಕಬೇಕೆಂಬ ನಿರ್ದಿಷ್ಟತೆ- ಹೀಗೆ ಸೂತ್ರೀಕರಿಸಿದರೆ ರುಚಿಯನ್ನು ಪಕ್ಕಾ ಮಾಡಬಹುದೇ? ಅನುಭವಿಗಳನ್ನು ಕೇಳಿ ತಿಳಿದು ಪಾಯಸ ಮಾಡಿದಾಗಲೂ ಆಗಿದ್ದು ಪಾಯಸವೇ, ಆದರೆ ನಿರೀಕ್ಷಿತ ರೀತಿಯಲ್ಲಿ ಅಲ್ಲ. (ಆಗಿದ್ದನ್ನು ಮೆಚ್ಚಬಹುದು, ಆ ಮಾತಲ್ಲ!) ಅಂದರೆ ಇಲ್ಲೀಗ ಯಾವುದು ಸರಿ, ಯಾವುದು ತಪ್ಪು ಎಂಬ ತರ್ಕವಿಲ್ಲ. ಆದರೆ ಪಾಕದ ಪ್ರಕ್ರಿಯೆಗೊಂದು ನಿರ್ದಿಷ್ಟ ರೂಪವನ್ನು ನೀಡಿದಾಗ, ನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೆ ದಟ್ಟವಾಗಿದೆ ಎಂದಾಯಿತಲ್ಲ. ಸೂತ್ರವಿಲ್ಲದ ಗಾಳಿಪಟದಂತೆ ಯಾವುದನ್ನೂ ಕ್ರಿಯೆಗಿಳಿಸದೆ, ಒಂದು ನಿರ್ದಿಷ್ಟ, ಆನ್ವಯಿಕ ಸ್ವರೂಪವನ್ನು ಒದಗಿಸಿ ಬದುಕನ್ನು ಸುಲಭ ಮಾಡುವ ವಿಧಾನವಿದು. ಪ್ರಕ್ರಿಯೆ ಸರಳವೇ ಆದರೂ ಅದರಲ್ಲೊಂದು ವೈಜ್ಞಾನಿಕತೆಯಿದೆ.

ಇದನ್ನೂ ಓದಿ: ದಶಮುಖ ಅಂಕಣ: ನಾಕು ತಂತಿಯ ರಾಗ ಹೊಮ್ಮಿಸುವ ಅನುರಾಗ…

ಹಾಗೆಂದು ಬದುಕಿನ ಎಲ್ಲದಕ್ಕೂ ಇದೇ ಸಿದ್ಧಾಂತವನ್ನು ಅನ್ವಯಿಸೋಣವೇ? ಕೈ ತುರಿಸುತ್ತಿದ್ದರೆ ಧನಾಗಮನ ಎಂಬ ನಂಬಿಕೆಯಿದೆ. ಅಥವಾ, ಸಾಲಿಗ್ರಾಮಕ್ಕೆ ಎರೆದ ತುಳಸಿ ತೀರ್ಥವನ್ನು ಕುಡಿದರೆ ರೋಗ ಪರಿಹಾರ ಎಂದು ಯಾರೋ ಹೇಳುತ್ತಾರೆ. ಸಾಲಿಗ್ರಾಮಕ್ಕೆ ಎರೆಯುವುದಾಗಲೀ, ತೀರ್ಥ ಕುಡಿಯುವುದಾಗಲೀ ಅವರವರ ನಂಬಿಕೆ, ಆಚರಣೆಗಳಿಗೆ ಸಂಬಂಧಿಸಿದ್ದು. ಆದರೆ ರೋಗ ಪರಿಹಾರ ಎನ್ನುವಲ್ಲಿ ಏನಿದೆ ಪುರಾವೆ ಎಂಬ ಪ್ರಶ್ನೆ ಬರಬೇಡವೇ? ತುಳಸಿಯಲ್ಲಿ ರೋಗ ಪರಿಹರಿಸುವ ಶಕ್ತಿ ಇದೆಯೆಂದಾದರೆ- ಅದಕ್ಕೆಷ್ಟು ತುಳಸಿ ಬೇಕು? ಅದನ್ನು ಹೇಗೆ ಸೇವಿಸಬೇಕು? ಯಾವೆಲ್ಲಾ ರೋಗಗಳನ್ನು ಪರಿಹಾರ ಮಾಡುತ್ತದೆ? ರೋಗ ಬಂದಾಗ ತೆಗೆದುಕೊಳ್ಳಬೇಕೋ, ಬಾರದಂತೆ ತೆಗೆದುಕೊಳ್ಳಬೇಕೋ? ಮುಂತಾದ ಹತ್ತಾರು ಪ್ರಶ್ನೆಗಳು ಸಹಜವಾಗಿ ಬರಬಹುದು. ಕೈ ತುರಿಸಿದರೆ ದುಡ್ಡು ಬರುವುದೆಂದು ನಂಬಿ ಕೂರುವ ಬಗ್ಗೆ ಆಕ್ಷೇಪವಿಲ್ಲ, ಆದರೆ ಇದರಿಂದ ಕೈ ತುರಿಕೆ ಪರಿಹಾರವಾಗುವುದಿಲ್ಲವಲ್ಲ. ಕೈಗೆ ಇರುವ ಅಲರ್ಜಿಯೊ, ಎಕ್ಸಿಮಾ, ಸೋರಿಯಾಸಿಸ್‌ ಅಥವಾ ಇನ್ನೇನೊ ಸಮಸ್ಯೆ ಪರಿಹಾರವಾಗುವುದಕ್ಕೆ ವಿಜ್ಞಾನ ಬೇಕಲ್ಲ. ನಂಬಿಕೆ, ಆಚರಣೆಗಳು ಅವರವರ ಸಮಾಧಾನಕ್ಕೆ ಬೇಕಾಗಿ; ಅದರಲ್ಲೇ ಫಲಿತಾಂಶವೂ ಬೇಕೆಂದು ನಿರೀಕ್ಷಿಸಿ, ವಿಜ್ಞಾನವನ್ನು ಬದಿಗಿಟ್ಟರೆ ತೊಂದರೆ ಯಾರಿಗೆ?

ಸಾಂಸ್ಕೃತಿಕ ಚಿಂತನೆಗಳಿಗೂ ಇಂಥದ್ದೇ ಆಯಾಮಗಳು ಇರಬಹುದಲ್ಲವೇ? ಉದಾ, ಮದುವೆಯಾದ ಮೇಲೆ ಮಕ್ಕಳಾಗುತ್ತವೆ ಎನ್ನುವ ಮಾತನ್ನೇ ತೆಗೆದುಕೊಳ್ಳೋಣ. ಹಾಗಾದರೆ ಮದುವೆಯಾಗದಿದ್ದರೆ ಮಕ್ಕಳಾಗುವುದಿಲ್ಲವೇ?- ಇದಕ್ಕೆ ಉತ್ತರ ಕೊಡುವುದು ವಿಜ್ಞಾನ. ಆಗಬೇಕೆ?- ಇದಕ್ಕೆ ಉತ್ತರ ಕೊಡುವುದು ನಾವು ಬೆಳೆದು ಬಂದ ಪರಿಸರ, ಸಂಸ್ಕೃತಿ, ನಂಬಿಕೆ ಇತ್ಯಾದಿ. ಅಂದರೆ, ಸಂಸ್ಕೃತಿ, ನಂಬಿಕೆ ಮತ್ತು ವೈಜ್ಞಾನಿಕತೆಗಳನ್ನು ಒಂದಕ್ಕೊಂದು ಬೆರೆಸದೆ, ಪ್ರತ್ಯೇಕವಾಗಿ ನೋಡುವುದಕ್ಕೆ, ಅದರ ಅನನ್ಯತೆಯನ್ನು ಗುರುತಿಸುವುದಕ್ಕೆ ಬೇಕಾಗಿರುವುದೂ ಸ್ಪಷ್ಟವಾದ ವೈಜ್ಞಾನಿಕ ಮನೋಭಾವವೇ!

ಇದನ್ನೂ ಓದಿ: ದಶಮುಖ ಅಂಕಣ: ಅದಲು ಬದಲು ಕಂಚಿ ಕದಲು

ಇಂದಿನ ವೈಜ್ಞಾನಿಕ ನಿರ್ಮಿತಿಗಳಿಗೆ ಪ್ರಾಚೀನತೆಯ ಲೇಪ ತೊಡಿಸುವ ಬಗ್ಗೆ ಹೇಳ ಹೊರಟರೆ, ಮೊದಲಿಗೇ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳಬೇಕಾಗಬಹುದು! ಆದರೂ, ನಮ್ಮ ಬದುಕುಗಳು ಸಲ್ಲುವುದು ನಂನಮ್ಮ ವರ್ತಮಾನಕ್ಕೆ ಎಂಬುದನ್ನು ಒಪ್ಪುವುದಾದರೆ ಮುಂದಿನ ಮಾತಿಗೆ ಅವಕಾಶವಿದೆ. ಉದಾ, ವಿಮಾನಗಳು ಇಂದಿನ ಆವಿಷ್ಕಾರವೇನಲ್ಲ, ರಾವಣನಲ್ಲಿ ಪುಷ್ಪಕ ವಿಮಾನವಿತ್ತಲ್ಲ; ಅಥವಾ, ಟೆಸ್ಟ್‌ಟ್ಯೂಬ್‌ ಬೇಬಿಗಳು ಈಗಿತ್ಲಾಗಿನ ನಿರ್ಮಿತಿಗಳಲ್ಲ, ಹಿಂದಿನ ಕಾಲದಲ್ಲೇ ಘೃತಭಾಂಡದಲ್ಲಿ ಮಕ್ಕಳು ಹುಟ್ಟಿದ್ದರಲ್ಲ- ಇಂಥ ವಾದಗಳು ಮತ್ತೆ ಬೇಡುವುದು ಪುರಾವೆಗಳನ್ನೇ. ಹಿಂದಿನ ಬಹಳಷ್ಟನ್ನು, ಅಂದರೆ ಪಾರಂಪರಿಕ ಜ್ಞಾನವನ್ನು ನಾವು ಇಂದಿಗೆ ನಿಶ್ಚಿತವಾಗಿ ತೆಗೆದುಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಸಾಕ್ಷಿ ಅಗತ್ಯವಿಲ್ಲದಿದ್ದರೂ, ಸಾಕ್ಷಿ ಕೊಡುವ ಸಾಧ್ಯತೆಯಂತೂ ಇದ್ದೇಇದೆ. ಭೂತವಿಲ್ಲದೆ, ಭವಿಷ್ಯವೂ ಇಲ್ಲವಲ್ಲ. ಹಾಗೆಂದ ಮಾತ್ರಕ್ಕೆ ಯಾವುದನ್ನು ತಂದಿಲ್ಲವೋ, ಯಾವುದು ಇರಲಿಲ್ಲವೋ ಅದಕ್ಕೂ ಸಾಕ್ಷಿ, ಪುರಾವೆಗಳನ್ನು ಎಲ್ಲಿಂದ ಮತ್ತು ಹೇಗೆ ತರಬೇಕು? ಇದೇ ನಿಟ್ಟಿನಲ್ಲಿ, “ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜೀವನಕೆ” ಎಂಬ ಡಿವಿಜಿ ಅವರ ಆಶಯದ ತಿರುಳನ್ನು ಅರಿಯಬೇಕು ನಾವು.

ಅಂದ ಹಾಗೆ, ಇಂದು ರಾಷ್ಟ್ರೀಯ ವಿಜ್ಞಾನ ದಿನ. ಭಾರತದ ಮೇರು ವಿಜ್ಞಾನಿ ಸರ್.‌ ಸಿ.ವಿ. ರಾಮನ್‌ ಅವರು ʻರಾಮನ್‌ ಪರಿಣಾಮʼವನ್ನು ಜಗತ್ತಿಗೆ ನೀಡಿದ ದಿನ. ಇವರಿಗಿಂತಲೂ ಮೊದಲು, ಬಹಳಷ್ಟು ವೈಜ್ಞಾನಿಕ ಕಾಣಿಕೆಗಳನ್ನು ಜಗತ್ತಿಗೆ ನೀಡಿದ ಘನ ವಿಜ್ಞಾನಿಗಳ ಪರಂಪರೆಯೇ ಭಾರತದಲ್ಲಿದೆ, ಕ್ಷೇತ್ರ ಯಾವುದೇ ಇರಲಿ. ಆದರೂ ನಮ್ಮ ಮನದಾಳದಲ್ಲಿ ಗಟ್ಟಿಯಾಗಿ ಕುಳಿತಿರುವ ನಾನಾ ಬಣ್ಣ ಮತ್ತು ವಾಸನೆಯ ಮೌಢ್ಯಗಳಿಂದ ಬಿಡುಗಡೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತಿಲ್ಲ. “ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,/ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ” ಎಂಬ ಕುವೆಂಪು ಅವರ ಕರೆ ಅಲ್ಲೆಲ್ಲೋ ಕೇಳಿಸುತ್ತಿದೆಯಲ್ಲ.

ಇದನ್ನೂ ಓದಿ: ದಶಮುಖ ಅಂಕಣ | ಬಣ್ಣಿಸುವುದು ಹೇಗೆ ಬದುಕನ್ನು? ಬಣ್ಣಗಳ ಮೂಲಕ!

Exit mobile version