Site icon Vistara News

ದಶಮುಖ ಅಂಕಣ: ನೆರಳಲ್ಲಿ ಅರಳಿದ ಚಿತ್ರಗಳು

shadow art

ಈ ಅಂಕಣವನ್ನು ಇಲ್ಲಿ ಕೇಳಿ:

http://vistaranews.com/wp-content/uploads/2023/06/WhatsApp-Audio-2023-06-06-at-10.30.43-1.mp3

ಮನೆಯಾತ ಮತ್ತು ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಾತನ ನಡುವೆ ಜೋರು ವಾಗ್ವಾದ ನಡೆಯುತ್ತಿತ್ತು-

ʻತಗೀರಿ ನಿಮ್ ಕಾರು ಅಂದ್ನಲ್ಲಾ. ಇನ್ನೂ ಇಲ್ಲೇ ನಿಲ್ಸಿದ್ರೆ ಸರಿ ಇರಲ್ಲʼ ಮನೆಯಾತ ಗೇಟಿನೊಳಗಿಂದಲೇ ಜಬರಿಸಿದ. ʻನಿಮ್ದೊಳ್ಳೆ ಕಥೆ! ನಿಮ್ ಗೇಟಿನ್ಮುಂದೆ ನಾನೇನು ನಿಲ್ಸಿಲ್ಲವಲ್ಲ. ಯಾಕ್ಸುಮ್ನೆ ಗಲಾಟೆ ಮಾಡ್ತೀರಿ?ʼ ಸಮರ್ಥಿಸಿಕೊಂಡ ಕಾರಿನೊಡೆಯ. ʻಗೇಟಿನ್ ವಿಷ್ಯನೇ ಅಲ್ಲ ಇದೀಗ. ಅಲ್ನೋಡಿ…ʼ ಎನ್ನುತ್ತಾ ಮನೆಯಾತ ರಸ್ತೆಯತ್ತ ಕೈತೋರಿದ. ʻಹೂಂ… ರಸ್ತೆ ಮೇಲೆ ನಿಲ್ಸಿದ್ದೀನಿ, ಏನೀಗ? ರಸ್ತೆ ಏನ್ ನಿಮ್ಮಪ್ಪುಂದಾ?ʼ ಈಗ ಕಾರಿನೊಡೆಯನೂ ದನಿಯೇರಿಸಿದ. ʻರಸ್ತೆಯಲ್ಲ, ರಸ್ತೆ ಮೇಲೆ ಬಿದ್ದಿರೊ ನೆರಳು ನಂದುʼ ಎಂದ ಮನೆಯಾತ! ಆತನ ಕಾಂಪೌಂಡಿನೊಳಗಿದ್ದ ಮರದ ನೆರಳು ರಸ್ತೆಯ ಮೇಲೆ ಹರಡಿಕೊಂಡಿತ್ತು. ಅದೇ ಕಾರಣಕ್ಕಾಗಿ ಕಾರಿನೊಡೆಯ ಅಲ್ಲಿ ಕಾರು ನಿಲ್ಲಿಸಿದ್ದ. ಅದೀಗ ಅವರ ಜಗಳಕ್ಕೆ ಮೂಲವಾಗಿತ್ತು. ಪಕ್ಕದ ಅಂಗಡಿಯಲ್ಲಿ ಕಿರಾಣಿ ವಸ್ತುಗಳನ್ನು ಹಾಕಿಸಲು ನಿಂತಿದ್ದ ನಮಗೆ ಇವರ ಜಗಳದಿಂದ ಪುಕ್ಕಟ್ಟೆ ಮನರಂಜನೆ. ಮಾತ್ರವಲ್ಲ, ಪ್ರೊ. ನಿಸಾರ್ ಅಹಮದ್ ಅವರ ಇದೇ ಧಾಟಿಯಲ್ಲಿರುವ ʻಹಕ್ಕುʼ ಎಂಬ ಕವನ ನೆನಪಾಯ್ತು.

ನೆರಳಿನ ಮೇಲೆ ಯಾರಾದರೂ ಹೀಗೆ ಹಕ್ಕುಸ್ವಾಮ್ಯ ಸಾಧಿಸಬಹುದೇ ಎಂಬ ಕುತೂಹಲ ಮೂಡಿದ್ದು ಆಗಲೇ. ಅವರವರ ನೆರಳೇ ಅವರಿಗೆ ಶಾಶ್ವತವಲ್ಲ ಎನ್ನುವಾಗ, ರಸ್ತೆ ಮೇಲೆ ಬಿದ್ದ ಮರದ ನೆರಳು ತನ್ನದೆನ್ನುವುದನ್ನು ಏನೆಂದು ಬಣ್ಣಿಸುವುದು? ಅದಕ್ಕೂ ಮೊದಲು, ನೆರಳನ್ನು ಏನೆಂದು ಬಣ್ಣಿಸಬಹುದು? ಅಮೂರ್ತವಾದದ್ದು ಎನ್ನೋಣವೇ? ಅದು ಮೂಲಮೂರ್ತಿಯ ಪಡಿಯಚ್ಚು ತಾನೇ? ಹಾಗಾದರೆ ಅಮೂರ್ತ ಹೇಗಾದೀತು? ಹಾಡು-ಕಥೆಯಂತೇನೂ ಅಲ್ಲವಲ್ಲ? ನೋಡಲು ದಕ್ಕಿದರೂ, ಹಿಡಿಯಲು ಸಿಕ್ಕದಲ್ಲಾ!… ಹೀಗೆ ತನ್ನಷ್ಟಕ್ಕೆ ಹರಿಯುತ್ತಿತ್ತು ತಲೆಯಲ್ಲಿ ಲಹರಿ. ಇನ್ನೂ ಪ್ರಾರಂಭವಾಗದ ಕಾರ್ಗಾಲವನ್ನೇ ನೆನಪಿಸಿಕೊಳ್ಳುತ್ತಾ, ಬಿಸಿಲಿನಲ್ಲಿ ಸುಡುವ ನೆತ್ತಿಯನ್ನು ತಣಿಸಿಕೊಳ್ಳುವುದಕ್ಕೆ ನೆರಳಿನ ಬಗೆಗೊಂದು ತಂಪಾದ ಹರಟೆಯಿದು.

ಬಾಲ್ಯದಿಂದ ಹಿಡಿದು ವಾರ್ಧಕ್ಯದವರೆಗಿನ ದಿನಗಳನ್ನು ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದವರೆಗಿನ ಅವಧಿಗೆ ಸಮೀಕರಿಸುವುದು ಸಾಮಾನ್ಯ. ಅದೇ ತರ್ಕವನ್ನು ಮುಂದುವರಿಸುತ್ತಾ ಹೋಗೋಣ. ಬೆಳಗು ಮತ್ತು ಸಂಜೆಯ ಸಮಯದಲ್ಲಿ ಸೂರ್ಯನ ಬಿಸಿಲು ಓರೆಯಾಗಿ ಬೀಳುವುದರಿಂದ ನೆರಳು ಉದ್ದವಾಗಿರುತ್ತದೆ. ನೆತ್ತಿಯ ಮೇಲೆ ಸೂರ್ಯ ಬಂದಾಗ, ಅಂದರೆ ಸುಡು-ಮಧ್ಯಾಹ್ನದ ನೆರಳು ಗಿಡ್ಡ. ನೆರಳು ಎಂಬುದಕ್ಕೆ ಆಶ್ರಯ ಎಂಬ ಅರ್ಥವೂ ಇದೆಯಲ್ಲ. ಆ ಧಾಟಿಯಲ್ಲಿ ಯೋಚಿಸಿದರೆ, ಬದುಕಿನ ಬೆಳಗು ಮತ್ತು ಸಂಜೆಯಲ್ಲಿ ಆಶ್ರಯ ಹೆಚ್ಚು ಬೇಕಾಗುತ್ತದೆ. ಸುಡು-ಯೌವನದಲ್ಲಿ ಆಶ್ರಯ ಗಿಡ್ಡವಾದರೂ ಅಡ್ಡಿಯಿಲ್ಲ ಎನ್ನೋಣವೇ!

ನಮ್ಮ ಜನಪದರ ಬದುಕಿನಲ್ಲಿ ನೆರಳು ಎಂಬುದು ಬಿಟ್ಟೂಬಿಡದೆ ಅವರನ್ನು ಹಿಂಬಾಲಿಸಿದೆ. ಗಡಿಯಾರಗಳು ವ್ಯಾಪಕವಾಗಿ ಬಳಕೆಯಲ್ಲಿ ಇಲ್ಲದ ಸಮಯದಲ್ಲಿ, ಬಿಸಿಲು ಮತ್ತು ನೆರಳು- ಸಮಯವನ್ನು ಅಳೆಯುವಂಥ ಮಾಪನಗಳಾಗಿದ್ದವು ಅವರ ಪಾಲಿಗೆ. ʻನಾಳೆ ಎಷ್ಟೊತ್ತಿಗೆ ಬರುವೆ?ʼ ಎಂಬ ಪ್ರಶ್ನೆಗೆ- ʻನೆರಳು ಮೈಮೇಲೆ ಬೀಳೋ ಹೊತ್ತಿಗೆ ಬರ್ತೀನಿ ಅಥವಾ ನೆರಳು ಉದ್ದ ಆಗೋ ಹೊತ್ತಿಗೆ ಬರ್ತೀನಿʼ ಎಂಬಂಥ ಮಾತುಗಳು ಸಾಮಾನ್ಯವಾಗಿದ್ದವು. ʻನನ್ನಯ್ಯನಂತೋರು ಹನ್ನೆರಡು ಮಕ್ಕಳು ಹೊಂಗೆಯ ಮರದಾ ನೆರಳಲ್ಲಿ/ ಹೊಂಗೆಯ ಮರದಾ ನೆರಳಲ್ಲಾಡುವಾಗ ಸನ್ಯಾಸಿ ಜಪವಾ ಮರೆತಾನʼ ಎಂಬ ತಾಯಿಯ ಭಾವದಲ್ಲಿ ಕಾಣುವುದು, ಮಕ್ಕಳು ಹೊಂಗೆಯ ನೆರಳಲ್ಲಿ ತಣ್ಣಗೆ ಆಡಿಕೊಂಡಿರುವ ಸಂಭ್ರಮವೇ ತಾನೇ. ಅದಕ್ಕಾಗಿಯೇ ಇರಬೇಕು, ʻಹೊಂಗೆಯ ನೆರಳು, ತಾಯಿಯ ಮಡಿಲುʼ ಎಂಬ ಲೋಕೋಕ್ತಿ ಪ್ರಚಲಿತದಲ್ಲಿರುವುದು.

ನಮ್ಮ ನಿತ್ಯ ಬದುಕಿನ ಎಷ್ಟೋ ಸಣ್ಣ-ಸರಳ ಸಂಗತಿಗಳು ನೆರಳಿನಿಂದ ಪ್ರಭಾವಿತವಾಗಿವೆ. ಉದಾ, ನಮ್ಮ ಭಾಷೆ. ನೆರಳು ಎಂಬುದನ್ನು ಛಾಯೆ, ಪ್ರತಿರೂಪ, ಆಸರೆ, ಆಶ್ರಯ ಎಂದೆಲ್ಲಾ ಅರ್ಥಗಳಲ್ಲಿ ಬಳಸುತ್ತೇವೆ. ʻಆತ ಕುಟುಂಬಕ್ಕೆ ನೆರಳಾದʼ ಎನ್ನುವಾಗ, ಆತ ಆಶ್ರಯ ನೀಡಿದ ಎನ್ನುವಂತೆ ಬಳಕೆಯಾದರೆ, ʻತಾಯಿಯ ನೆರಳಲ್ಲೇ ಮಗು ಬೆಳೆಯಿತುʼ ಎನ್ನುವಾಗ ಮಗು ಆಸರೆಯಲ್ಲಿ ಬೆಳೆದಿದೆ ಎಂಬ ಅರ್ಥವಿದೆ. ಹಾಗಾದರೆ ನೆರಳಾಗು ಮತ್ತು ನೆರಳಿನಲ್ಲಿರುವ ಎನ್ನುವ ಮೂಲಕ, ಒಂದೇ ಶಬ್ದ ಆಶ್ರಯದಾತ ಮತ್ತು ಆಶ್ರಿತ ಎಂಬ ಎರಡೂ ಭಾವಗಳನ್ನು ಹೊಮ್ಮಿಸುತ್ತದಲ್ಲ. ʻನೆರಳು ಬಿದ್ರೂ ಸಹಿಸಲ್ಲʼ ಎನ್ನುತ್ತಾ ಕೋಪ ತೋರುವವರೂ ಇದ್ದರೆ, ʻನನ್ನ ನೆರಳಿಗೂ ವಿಷಯ ಗೊತ್ತಾಗಿಲ್ಲʼ ಎನ್ನುತ್ತಾ ಸಿಕ್ಕಾಪಟ್ಟೆ ಗುಟ್ಟು ಮಾಡುವವರೂ ಇರಬಹುದು. ಆದರೆ ʻತನ್ನ ನೆರಳಿನಿಂದ ತಪ್ಪಿಸಿಕೊಂಡು ಓಡುತ್ತಿದ್ದʼ ಎನ್ನುವ ವಿವರಣೆ ಬಂದರೆ, ಅವರ ಮಾನಸಿಕ ಆರೋಗ್ಯದ ಬಗ್ಗೆ ಪ್ರಶ್ನೆಗಳೆದ್ದರೆ ಅಚ್ಚರಿಯಿಲ್ಲ.

ಕಪ್ಪು-ಬಿಳುಪು ಎನ್ನುವಂಥದ್ದೇ ಅರ್ಥದಲ್ಲಿ ನೆರಳು-ಬೆಳಕು ಎನ್ನುವ ಪದಗಳೂ ಬಳಕೆಯಾಗುತ್ತವೆ. ಈ ʻನೆರಳುʼ ಎಂಬುದು ಕೆಲವೊಮ್ಮೆ ʻಪ್ರಭಾವʼ ಆಗಿಯೂ ಕಾಡಿಸಬಹುದು. ಪ್ರಭಾವಿಗಳ ನೆರಳಿನಲ್ಲಿರುವಾಗ, ಬದುಕುವುದು ಸುಲಭವಾದರೂ ಬೆಳೆಯುವುದು ಕಷ್ಟ ಎಂಬ ಮಾತೇ ಇಲ್ಲವೇ. ಹಾಗಾಗಿಯೇ ದೊಡ್ಡ ಮರದ ನೆರಳಿನಲ್ಲಿ ಸಣ್ಣ ಸಸ್ಯಾದಿಗಳು ಬೆಳೆದಾವೇ ಹೊರತು, ಸಸಿಯೊಂದು ಬೆಳೆದು ಹೆಮ್ಮರವಾಗುವುದು ಕಷ್ಟ.

ಈ ನೆರಳಿಗೆ ವೈಜ್ಞಾನಿಕ ಮುಖವೂ ಢಾಳಾಗಿಯೇ ಇದೆ. ಅಂದರೆ, ನೆರಳನ್ನು ವೈಜ್ಞಾನಿಕವಾಗಿ ವ್ಯಾಖ್ಯಾನಿಸಿ ತಲೆತಿನ್ನುವ ಉದ್ದೇಶ ಖಂಡಿತಕ್ಕೂ ಇಲ್ಲ ಇಲ್ಲಿ. ಬದಲಿಗೆ ಕೆಲವು ಕುತೂಹಲಕರ ವಿದ್ಯಮಾನಗಳು ನೆನಪಾಗುತ್ತಿವೆ. ಮೊದಲಿಗೆ ಗ್ರಹಣಗಳು. ಸೂರ್ಯ, ಚಂದ್ರ ಮತ್ತು ಭೂಮಿಗಳ ನಡುವಿನ ನೆರಳು-ಬೆಳಕಿನಾಟವೇ ಚಂದ್ರ ಮತ್ತು ಸೂರ್ಯ ಗ್ರಹಣಗಳಿಗೆ ಕಾರಣ ಎಂಬುದು ಗೊತ್ತಿರುವಂಥದ್ದೇ. ಇನ್ನೊಂದು ಆಸಕ್ತಿಕರ ವಿದ್ಯಮಾನವೆಂದರೆ ಶೂನ್ಯನೆರಳಿನದ್ದು. ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ಶೂನ್ಯನೆರಳಿನ ದಿನ ಅಥವಾ ಶೂನ್ಯನೆರಳಿನ ಹೊತ್ತು ಸಂಭವಿಸುತ್ತದೆ. ನಿಗದಿತ ಕೋನದಲ್ಲಿ ಭೂಮಿ ಸೂರ್ಯನನ್ನು ಹಾಯುವಾಗ, ನಮ್ಮ ನೆರಳು ಸಂಪೂರ್ಣವಾಗಿ ನಮ್ಮ ಕಾಲಡಿಗೇ ಬಿದ್ದು ಶೂನ್ಯ ನೆರಳನ್ನು ಸೃಷ್ಟಿಸುತ್ತದೆ. ಸಾಮಾನ್ಯವಾಗಿ ಏಪ್ರಿಲ್ ತಿಂಗಳು ಮತ್ತು ಆಗಸ್ಟ್ ತಿಂಗಳಲ್ಲಿ ಶೂನ್ಯ ನೆರಳಿನ ಘಳಿಗೆಗಳನ್ನು ಕಾಣಬಹುದು.

ನೆರಳಿನ ಪರಿಸರದ ಆಯಾಮಗಳು ಹೇಳಿ ಮುಗಿಸಲಾರದಷ್ಟಿವೆ. ಕಾಲ್ನಡಿಗೆಯ ಹಾದಿಯುದ್ದಕ್ಕೂ ಸಾಲು ಮರಗಳನ್ನ ನೆಡಿಸುತ್ತಿದ್ದ ಹಿಂದಿನ ಕಾಲದ ಪರಿಸರ-ಸ್ನೇಹಿ, ಪ್ರಜಾವತ್ಸಲ ರಾಜರಿಂದ ಹಿಡಿದು, ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಯಂಚಿನ ಮರಗಳನ್ನು ಬೀಳಿಸುತ್ತಿರುವ ಇಂದಿನಕಾಲದ ಪ್ರಭುಗಳವರೆಗೆ- ನೆರಳಿನ ಕಥೆಗಳನ್ನು ಹೇಳಿದಷ್ಟಕ್ಕೂ ತೀರುವುದಿಲ್ಲ. ನಿನ್ನೆಯಷ್ಟೇ ಮುಗಿದ ಪರಿಸರ ದಿನದಂದು ಮಣ್ಣಿಗೆ ಊರಲ್ಪಟ್ಟ ಸಸಿಗಳಲ್ಲಿ ಎಷ್ಟು ಬೆಳೆಯುತ್ತವೆ, ಎಷ್ಟು ಮಣ್ಣು ಕಚ್ಚುತ್ತವೆ ಎಂಬುದೂ ಗಮನಾರ್ಹ ಸಂಗತಿಯೇ. ಯಾವುದೇ ಸ್ವಾರ್ಥವಿಲ್ಲದೆ ಸಾಲು ಮರಗಳನ್ನು ನೆಡುವವರು, ಕಾನು ಬೆಳೆಸುವವರು, ಮರಗಳನ್ನೇ ದೇವರೆಂದು ಪೂಜಿಸುವವರು, ಪ್ರಭುತ್ವ ಉರುಳಿಸುವ ಮರಗಳನ್ನು ಅಪ್ಪಿಕೊಂಡು ಬದುಕಿಸುವವರು- ಇಂಥ ಎಷ್ಟೋ ಕಥೆಗಳನ್ನು ನಾವೆಲ್ಲ ಕೇಳಿರುತ್ತೇವೆ. ಲೋಕವೆಲ್ಲಾ ತಂಪಾಗಿರಲಿ ಎಂಬ ಕಾಳಜಿಯಿಂದ ನೆರಳು ಹೆಚ್ಚಿಸುವ ಕಾಯಕ ಮಾಡುವಂಥ ಎಲ್ಲರ ಹೊಟ್ಟೆಯೂ ತಣ್ಣಗಿರಲಿ.

ಅಲ್ಲೊಂದಿಲ್ಲೊಂದು ಪ್ರಸ್ತಾಪಗಳು ಬರುತ್ತಾ, ಕನ್ನಡ ಸಾಹಿತ್ಯವನ್ನೂ ನೆರಳು ತಂಪಾಗಿರಿಸಿದೆ. ʻತುಂಗೆ ದಡದಲ್ಲಿ ಹೊಂಗೆ ನೆರಳಲ್ಲಿ ಹರಟೆ ಹೊಡೆಯಬೇಕುʼ ಎಂದು ಬಯಸುತ್ತಾರೆ ಕವಿ ಸುಮತೀಂದ್ರ ನಾಡಿಗರು. ಈ ಮೂಲಕ ʻಹೊಂಗೆ ನೆರಳು ತಂಪು ಮತ್ತು ಆರಾಮದಾಯಕʼ ಎಂಬ ಜನಪ್ರಿಯ ಭಾವನೆಯನ್ನು ಮತ್ತೆ ನೆನಪು ಮಾಡುತ್ತಾರೆ. ಆದರೆ ಎಲ್ಲಕ್ಕಿಂತ ಪ್ರಧಾನವಾಗಿ ನೆನಪಾಗುವುದು ಪು.ತಿ. ನರಸಿಂಹಾಚಾರ್ ಅವರ ʻನೆರಳುʼ ಎಂಬ ಕವನ. ಇಂದಿನ ಬದುಕನ್ನು ಪುರಾಣದ ಚೌಕಟ್ಟಿನಲ್ಲಿಟ್ಟು ಶೋಧಿಸುವುದು ಪು.ತಿ.ನ ಅವರ ಶೈಲಿ. ಈ ಕವಿತೆಯೂ ಅದೇ ಜಾಡಿನಲ್ಲಿದೆ.

ಇದನ್ನೂ ಓದಿ: ದಶಮುಖ ಅಂಕಣ: ನೆಮ್ಮದಿಯೆಂಬ ಗಮ್ಯದ ಹಾದಿ ಯಾವುದು?

ʻಮೇಲೊಂದು ಗರುಡ ಹಾರುತಿಹುದು/ ಕೆಳಗದರ ನೆರಳು ಓಡುತಿಹುದು/ ಅದಕೆ ಅದರಿಚ್ಚೆ ಹಾದಿ/ ಇದಕು ಹರಿದತ್ತ ಬೀದಿʼ ಎನ್ನುವಂತೆ ಪ್ರಾರಂಭವಾಗುತ್ತದೆ. ಈ ಗರುಡ ಪಕ್ಷಿ ಮೇಲೆ ಹಾರಿದಾಗ, ಕೆಳಗಿನ ನೆಲ, ಮನೆ, ಕೊಳ, ಬಾವಿ, ಗಿಡ, ಗಂಟಿ, ತೆವರು, ತಿಟ್ಟು ಎನ್ನುವಂತೆ ಎಲ್ಲದರ ಮೇಲೂ ಅದರ ನೆರಳು ಆವರಿಸಿಕೊಳ್ಳುತ್ತದೆ. ಆದರೆ ಇಡೀ ಕವನದ ವಸ್ತು ನೆರಳೂ ಅಲ್ಲ, ಗರುಡವೂ ಅಲ್ಲ- ಬದಲಿಗೆ, ಗಾಂಧಿ. ಈ ಕವಿತೆಯ ಕೇಂದ್ರ ಪ್ರಜ್ಞೆಯಾದ ಗರುಡವನ್ನು ನಮ್ಮ ರಾಷ್ಟ್ರಪ್ರಜ್ಞೆಯಾದ ಗಾಂಧಿಗೆ ಸಮೀಕರಿಸಿದರೆ- ಎಲ್ಲೆಡೆ ಪಸರಿಸುವ ಅದರ ನೆರಳನ್ನು ಸ್ವಾತಂತ್ರ್ಯಕ್ಕಾಗಿ ಅವರನ್ನು ನೆರಳಿನಂತೆ ಹಿಂಬಾಲಿಸುವ ಕೋಟಿಕೋಟಿ ಅಹಿಂಸಾ ಸೇನಾನಿಗಳಿಗೆ ಹೋಲಿಸಲಾಗಿದೆ.

ಅಂತೂ ನೆರಳಲ್ಲಿ ಕುಳಿತು, ನೆರಳಿನ ಮೇಲೆಯೇ ಒಂದಷ್ಟು ಹರಟೆಯಾಯಿತು. ಈ ಲಹರಿಯೇನು ಇಲ್ಲಿಗೇ ಮುಗಿಯಲಿಲ್ಲ. ತಮ್ಮದೇ ನೆರಳನ್ನು ಫೋಟೋಗ್ರಾಫ್ ಮಾಡಿಕೊಳ್ಳುವ ಉತ್ಸಾಹಿಗಳು, ತಮ್ಮ ನೆರಳು ಎಂಬುದನ್ನು ತಿಳಿಯದೆ ಅದನ್ನು ಹಿಡಿಯ ಹೋಗುವ ಮಕ್ಕಳು, ನೆರಳಿರುವುದೇ ನಿದ್ದೆ ಮಾಡಲು ಎಂಬಂಥ ಸುಖಜೀವಿಗಳು, ನೆರಳಿಗೆ ಬಣ್ಣ ಇರುವುದೇ ಇಲ್ಲ ಎಂದು ವಾದಿಸುವವರು, ನೆರಳಿನ ಹಕ್ಕುಸ್ವಾಮ್ಯ ಸಾಧಿಸುವವರು- ಇಂಥ ಹಲವು ನಮೂನೆಯ ಜನರನ್ನು ಕಂಡಾಗಲೆಲ್ಲಾ ನೆರಳಲ್ಲಿ ಕುಳಿತು ಮತ್ತೆ ಹರಟುವ ಮನಸ್ಸಾಗುತ್ತದೆ. ಆದರೆ ಅಷ್ಟು ಪುರುಸೊತ್ತು ನಿಮಗೂ ಇರಬೇಕಲ್ಲ!

ಇದನ್ನೂ ಓದಿ: ದಶಮುಖ ಅಂಕಣ: ʻ… ನಿನ್ನ ಕಲೆಗೆ ಯಾವುದು ಭಾರʼ!

Exit mobile version