Site icon Vistara News

ದಶಮುಖ ಅಂಕಣ: “ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ”

dashamukha column spring time

ದಶಮುಖ ಅಂಕಣ: ಋತುಗಳು (Seasons) ವಿಶ್ವದೆಲ್ಲೆಡೆ ಒಂದೇ ತೆರನಾಗಿಲ್ಲ. ಕೆನಡಾ, ಅಮೆರಿಕದ ಬೇಸಿಗೆಯ (Summer) ಋತುವಿನಲ್ಲಿ ಭಾರತದಲ್ಲಿ ಮಳೆಗಾಲ (monsoon); ಈ ದಿನಗಳಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯದಲ್ಲಿ ಚಳಿಗಾಲ (winter)! ಭೌಗೋಳಿಕವಾಗಿ ಆ ದೇಶಗಳು ಎಲ್ಲೆಲ್ಲಿವೆ ಎನ್ನುವುದರ ಮೇಲೆ ಯಾವ ದಿನಗಳಲ್ಲಿ ಯಾವ ಋತು ಎನ್ನುವುದು ನಿರ್ಧಾರವಾಗುವುದು ಸಾಮಾನ್ಯ ವಿದ್ಯಮಾನ. ಸ್ಪ್ರಿಂಗ್ ಟೈಮ್ ಅಥವಾ ಹೂ ಬಿಡುವ ದಿನಗಳು ಸಹ ಸಹಜವಾಗಿ ಭಿನ್ನವೇ ಆಗಿರುತ್ತದೆ. ದಿನಗಳು ಬೇರೆಯಾದರೂ, ಆ ದಿನಗಳಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳು ಬೇರೆಯಲ್ಲವಲ್ಲ. ನಮ್ಮಲ್ಲಿದು ವಸಂತ ಋತು. ವಸಂತ ಎನ್ನಿ, ಬೈಸಾಖಿ ಎನ್ನಿ, ಸ್ಪ್ರಿಂಗ್ (Spring) ಎನ್ನಿ, ಹೆಸರು ಯಾವುದಾದರೇನು… ಎಲ್ಲವೂ ಒಂದೇ ಋತುವಿಗೆ ಸಂಬಂಧಿಸಿದ್ದು. ʻಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯʼ ತರುವುದಕ್ಕೆ ಪ್ರಕೃತಿಗೆ ಗಡಿ, ಸೀಮೆಗಳ ಹಂಗಿಲ್ಲ. ಇದೇ ಹಿನ್ನೆಲೆಯಲ್ಲಿ ಹೊಸತನಕ್ಕೂ ವಸಂತನಿಗೂ ಇರುವ ಅಂಟು ಕುತೂಹಲಕ್ಕೆ ಕಾರಣವಾಗಿದೆ.

ನಮ್ಮ ವಸಂತ ಋತುವಿಗೂ ಹೊಸತನಕ್ಕೂ ಇರುವುದು ಅಂಟು, ನಂಟು- ಎರಡೂ ಹೌದು. ಹಾಗೆಂದೇ ಭಾರತದ ಒಳಗಿನ ಲೆಕ್ಕವಿಲ್ಲದಷ್ಟು ಜಾತಿ, ಭಾಷೆ, ಪ್ರಾಂತ್ಯಗಳ ಜನ ವಸಂತ ಋತುವಿನುದ್ದಕ್ಕೂ ಹೊಸ ವರ್ಷ ಇಲ್ಲವೇ ಸುಗ್ಗಿಯ ಹಬ್ಬವನ್ನಾಚರಿಸುತ್ತಾರೆ. ಸಾಮಾನ್ಯವಾಗಿ ಕೇಳಿಬರುವ ಯುಗಾದಿ, ಗುಡಿಪಡ್ವಾಗಳ ಹೊರತಾಗಿ ಸಿಖ್ ಬಾಂಧವರು ಆಚರಿಸುವ ಬೈಸಾಖಿ, ಅಸ್ಸಾಂನ ಬೋಹಾಗ್ ಬಿಹು ಅಥವಾ ರಂಗೋಲಿ ಬಿಹು, ಬಂಗಾಳದ ಪೊಲೇಹ ಬೊಐಸಾಖ್, ಕಾಶ್ಮೀರದ ನವ್ರಿ, ಸಿಂಧಿ ಜನರ ಚೇತಿ ಚಾಂದ್, ಸೌರಮಾನ ಯುಗಾದಿ ಅಥವಾ ವಿಶು, ಹಿಮಾಚಲ ಪ್ರದೇಶದ ದೋಗ್ರಾ, ಒಡಿಸ್ಸಾದ ವಿಶು ಸಂಕ್ರಾಂತಿ, ಮಣಿಪುರದ ಚೈರೋಬ… ಅಂತೂ ದೇಶದ ಉದ್ದಗಲಕ್ಕೂ ಒಂದಿಲ್ಲೊಂದು ಹೆಸರಿನಿಂದ ವಸಂತನ ಆಗಮನವನ್ನು ಹೊಸವರ್ಷವೆಂದೇ ಸಂಭ್ರಮಿಸುತ್ತಾರೆ. ಶಿಶಿರದಲ್ಲಿ ಬೋಳಾಗಿ ನಿಂತ ಪ್ರಕೃತಿಯೆಲ್ಲ ಹಸಿರು ಧರಿಸಿ, ಲೋಕಕ್ಕೆಲ್ಲ ಉಸಿರು ತುಂಬುವ ಈ ದಿನಗಳಲ್ಲಿ ನಾವು ಮಾತ್ರವೇ ಯುಗಾದಿ ಆಚರಿಸುತ್ತೇವೆ ಎಂದು ಭಾವಿಸುವಂತಿಲ್ಲ. ವಿಶ್ವದ ಎಷ್ಟೊಂದು ಸಂಸ್ಕೃತಿಗಳು ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತವೆ ಗೊತ್ತೆ?

ಹೌದು, ಭಾರತದಲ್ಲಿ ಮಾತ್ರವೇ ಅಲ್ಲ, ಇನ್ನೂ ಬಹಳಷ್ಟು ದೇಶಗಳಲ್ಲಿ ವಸಂತ ಋತುವಿನಲ್ಲೇ ಹೊಸ ವರ್ಷದ ಆಚರಣೆಯಿದೆ. ಜನವರಿ ಮೊದಲ ತಾರೀಖಿನ ಹೊಸವರ್ಷವೆಂಬುದು ಬೇರೆಯದೇ ಆದ ಕ್ಯಾಲೆಂಡರಿನ ಲೆಕ್ಕಾಚಾರ. ಆದರೆ ಪ್ರಕೃತಿಯ ಎಣಿಕೆಗೆ ಸ್ಪಂದಿಸುವುದು ನಮ್ಮ ಯುಗಧರ್ಮ. ಪ್ರಕೃತಿಯಂತೆಯೇ ಶತಶತಮಾನಗಳಿಂದ ನಡೆದು ಬಂದಂಥ ನಿರಂತರತೆಯಿದು. ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ತತ್ವ ಬಹುಶಃ ನಾಗರೀಕತೆಯಷ್ಟೇ ಹಳೆಯದಿರಬೇಕು. ಈ ಮಾತಿನ ವ್ಯಾಪ್ತಿಯನ್ನು ತಿಳಿಯುವುದಕ್ಕೆ ಫೆಬ್ರವರಿಯಿಂದ ಪ್ರಾರಂಭವಾಗಿ ಎಪ್ರಿಲ್ವರೆಗಿನ ದಿನಗಳಲ್ಲಿ ಬರುವ ಬೇರೆಬೇರೆ ದೇಶಗಳ ಸಾಂಪ್ರದಾಯಿಕ ಹೊಸವರ್ಷಗಳನ್ನು ಸಹ ತಿಳಿಯಬೇಕು ನಾವು. ಚೀನಾ, ಕೊರಿಯ, ವಿಯೆತ್ನಾಂ, ಟಿಬೆಟ್, ಇರಾನ್, ಕಜಕಿಸ್ತಾನ, ಉಜ್ಬೆಕಿಸ್ತಾನ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಲಾವೊಸ್, ಕಾಂಬೋಡಿಯ, ಥಾಯ್ಲೆಂಡ್… ಪಟ್ಟಿ ಇನ್ನೂ ಉದ್ದವಿದೆ. ಈ ಎಲ್ಲಾ ದೇಶಗಳಲ್ಲಿ ಕ್ಯಾಲೆಂಡರ್ ಹೊಸ ವರ್ಷದ ಹೊರತಾಗಿ ಹೂ ಬಿಡುವ ಕಾಲದಲ್ಲಿ ಸಾಂಪ್ರದಾಯಿಕವಾದ ಬೇರೆಯದೇ ರೀತಿಯಲ್ಲಿ ನವವರ್ಷವನ್ನು ಸ್ವಾಗತಿಸುತ್ತಾರೆ.

ಯಾವುದೇ ದೇಶದಲ್ಲಾದರೂ, ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹೊಸ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಲೋಭ ತೋರುವವನೇ ಅಲ್ಲ. ಹಾಗಾದರೆ ವಸಂತ ಎಂದರೆ ಸಂತಸ ಮಾತ್ರವೇ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಹೊಸತನ, ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಹೇಳುತ್ತಿದ್ದರೆ ಇನ್ನೂ ಎಷ್ಟೊಂದು ಇದೆಯಲ್ಲ. ಅಲ್ಲಿಗೆ ವಸಂತನಿಗೂ ಹೊಸತನಕ್ಕೂ ತಳುಕು ಹಾಕುವುದು ಗಡಿ, ಸೀಮೆಗಳನ್ನು ಮೀರಿದ ಭಾವ; ಇಡೀ ಯುಗಧರ್ಮದ ಸ್ವಭಾವ ಎಂದಾಯಿತು.

Spring Tourism

ವಸಂತನ ಋತುವಿನ ಅಥವಾ ಚೈತ್ರಮಾಸದ ವರ್ಣನೆಗಳು ಸಂಸ್ಕೃತ ಕಾವ್ಯಗಳಿಂದ ತೊಡಗಿ, ಹಳೆಗನ್ನಡ ಕಾವ್ಯಗಳಿಂದ ಹಿಡಿದು, ಇಂದಿನವರೆಗೂ ಕಂಡುಬರುತ್ತದೆ. ಇವೆಲ್ಲವುಗಳಲ್ಲಿ ಕಾಣುವುದು ಪ್ರಕೃತಿಯಲ್ಲಿರುವ, ಆ ಮೂಲಕ ನಮ್ಮಲ್ಲೂ ಇರುವಂಥ ಹೊಸತನ. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಕಾಳಿದಾಸ. ಆತನ ʻಮಾಳವಿಕಾಗ್ನಿ ಮಿತ್ರʼದಲ್ಲಿ ವಸಂತನ ಒಂದಿಷ್ಟು ವರ್ಣನೆಗಳನ್ನು ಕಾಣಬಹುದು. ಆದರೆ ಎಲ್ಲಕ್ಕಿಂತ ಮನಸೆಳೆಯುವುದು ಆತನ ʻಋತುಸಂಹಾರʼದಲ್ಲಿನ ವರ್ಣನೆಗಳು. ವರುಷದ ಆರೂ ಋತುಗಳನ್ನು ವರ್ಣಿಸುವ ಈ ಖಂಡಕಾವ್ಯದ ಕೊನೆಯ ಸರ್ಗದಲ್ಲಿ ಬರುವ ವಸಂತನ ವರ್ಣನೆಗಳ ಕನ್ನಡಾನುವಾದ (ಕೃಪೆ- ಹಂಸಾನಂದಿ) ಹೀಗಿವೆ- “ಹೊಮ್ಮಿರುವ ಮಾಂದಳಿರ ಮೊನಚು ಬಾಣಗಳನ್ನು/ ಚಿಮ್ಮಿಸಲು ದುಂಬಿಸಾಲಿನ ಬಿಲ್ಲ ಹೆದೆಯ/ ಹಮ್ಮುಗೊಳಿಸುತ ಯೋಧ ಬಂದಿಹ ವಸಂತನಿವ/ ನೊಮ್ಮೆಗೇ ಪ್ರಣಯಿಗಳ ಮನವ ಪೀಡಿಸಲು// ಕುಸುಮಿಸಿಹ ವೃಕ್ಷಗಳು ಕೊಳದಲ್ಲಿ ಕಮಲಗಳು/ ನಸುಗಂಪು ಗಾಳಿ; ಜೊತೆ ಬಯಸುವೆಣ್ಣುಗಳು/ ಮಸುಕು ಸಂಜೆಯ ನಲಿವು ಹಾಯಾದ ಹಗಲುಗಳು/ ಎಸೆದಾವು ಮಿಗೆ ಗೆಳತಿ ಹಿತ ವಸಂತದಲಿ”

ಹಳೆಗನ್ನಡದ ವಿಷಯಕ್ಕೆ ಬಂದರೆ ಮೊದಲು ನೆನಪಾಗುವವನು ಪಂಪ. ʻನೀನೇ ಭುವನಕ್ಕಾರಾಧ್ಯನೈ, ಭೃಂಗ ಕೋಕಿಳ ಕೀರ ಪ್ರಿಯ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ವಸಂತದಲ್ಲಿ ತೂಗುವ ಮಾವಿನ ಮರವನ್ನು ಕೊಂಡಾಡುತ್ತಾನೆ. ಅಭಿನವ ಪಂಪನೆಂದೇ ಹೆಸರಾಗಿದ್ದ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿನ ರಾಮ, ಕಳೆದು ಹೋದ ತನ್ನ ಸೀತೆಯನ್ನು ಹುಡುಕುತ್ತಾ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆಯಿದೆ. ಹಿಂದಿನವರು ನಿಸರ್ಗದೊಂದಿಗೆ ಇಷ್ಟೊಂದು ನಿಕಟವಾಗಿ ಬೆರೆತು ಬದುಕಿದ್ದರ ಹಿನ್ನೆಲೆಯಲ್ಲೇ, ಪ್ರಕೃತಿಗೆ ಹೊಸತನ ಬಂದ ಕಾಲದಲ್ಲಿ ಅವರಿಗೂ ಹೊಸತನ ಬಂದಂತೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಹರಿಹರ, ಕುಮಾರವ್ಯಾಸನಿಂದ ತೊಡಗಿ ಅವರಿಗಿಂತ ಇತ್ತೀಚಿನ ಜಯದೇವ ಕವಿಯ ಕಾವ್ಯಗಳೆಲ್ಲ ವಸಂತನಿಂದ, ಚೈತ್ರದಿಂದ ಸಿಂಗಾರಗೊಂಡಂಥವು.

ಇದನ್ನೂ ಓದಿ: ದಶಮುಖ ಅಂಕಣ: ಮೌನವೆಂಬ ಭಾವಸೇತು

ಹೊಸಗನ್ನಡ ಕವಿಗಳೂ ಹೊಸವರ್ಷದ ಹೊಸತನಕ್ಕೆ ಸೋತವರೇ. ರಸಋಷಿ ಕುವೆಂಪು ಅವರು, “ಗೀತೆಯ ಘೋಷದಿ ನವ ಅತಿಥಿಯ ಕರೆ/ ಹೃದಯ ದ್ವಾರವನಗಲಕೆ ತೆರೆ ತೆರೆ/ ನವಜೀವನ ರಸ ಬಾಳಿಗೆ ಬರಲಿ/ ನೂತನ ಸಾಹಸವೈತರಲಿ” ಎಂದು ತಮ್ಮ ʻಯುಗಾದಿʼ ಎನ್ನುವ ಕವನದಲ್ಲಿ ಆಶಿಸುತ್ತಾರೆ. ಕೆ.ಎಸ್. ನರಸಿಂಹಸ್ವಾಮಿಯವರ ಮಧುಮಾಸದ ಹೊಸತನ ಇದಕ್ಕಿಂತ ಭಿನ್ನವಲ್ಲ. “ಬಾನ್ನೀಲಿಯ ಕೊನೆಯಿಲ್ಲದ ನೀಲಾಂಬರದೊಳಗೆ/ ಬಂದಾಡುವ ಬಿಳಿಮುಗಿಲಿನ ತಣ್ಣೆಳಲಿನ ಕೆಳಗೆ/ ಮಾಂದಳಿರಿನ ತೋರಣವಿಹ ಮುಂಬಾಗಿಲ ಬಳಿಗೆ/ ಮಧುಮಾಸವೆ ಅಡಿ ಇಡುತಿದೆ ಹೊಸವರ್ಷದ ಬೆಳಗೆ” ಎಂದು ಸಂಭ್ರಮಿಸುತ್ತಾರೆ. ನಿಸಾರ್ ಅಹಮದ್ ಅವರ ʻವರ್ಷಾದಿʼ ಕವಿತೆಯಲ್ಲಿ, “ಹೊಸ ಬಟ್ಟೆಯ ತೊಟ್ಟ ಚೈತ್ರ/ ಜಲದರ್ಪಣ ಮಗ್ನ ನೇತ್ರ/ ಮುಗಿಲಿನ ಪಂಚಾಂಗ ತೆರೆಸಿ/ ಕುಳಿತಿಹ ಫಲ ತಿಳಿಯ ಬಯಸಿ” ಎಂದು ಚೈತ್ರಮಾಸದ ನವ್ಯತೆಯನ್ನು ಭವ್ಯತೆಯನ್ನು ವರ್ಣಿಸುತ್ತಾರೆ. ಜಿ.ಎಸ್.ಶಿವರುದ್ರಪ್ಪನವರ ʻಯುಗಾದಿಯ ಹಾಡʼನ್ನೂ ಕಾಡುವುದು ಚೈತ್ರ ಮಾಸಕ್ಕಿರುವ ಹೊಸ ಸ್ಪರ್ಶವೇ. “ಬಂದ ಚೈತ್ರದ ಹಾದಿ ತೆರೆದಿದೆ/ ಬಣ್ಣ-ಬೆಡಗಿನ ಮೋಡಿಗೆ/ ಹೊಸತು ವರ್ಷದ ಹೊಸತು ಹರ್ಷದ/ ಬೇವು ಬೆಲ್ಲದ ಬೀಡಿಗೆ” ಎಂದು ಹಾಡುತ್ತಾರೆ. ಇವರುಗಳು ಮಾತ್ರವಲ್ಲ, ವರಕವಿ ಬೇಂದ್ರೆ, ಪು.ತಿ.ನರಸಿಂಹಾಚಾರ್, ಗೋಪಾಲಕೃಷ್ಣ ಅಡಿಗರ ಆದಿಯಾಗಿ ನಮ್ಮೆಲ್ಲ ಮೇರು ಕವಿಗಳಿಗೆ ವಸಂತನಿಗೂ ಹೊಸತನಕ್ಕೂ ನಡುವೆ ಪ್ರವಹಿಸುವ ವಾಹಿನಿ ಕಾಡಿದೆ.

ಎಲೆಗಳು ಉದುರುವಾಗಲೂ, ಚಿಗುರುವಾಗಲೂ ಪ್ರಕೃತಿಯದ್ದು ಅದೇ ಹದ. ಈ ನಡುವಿನ ಅವಧಿಯಲ್ಲಿ ಏನು ನಡೆಯುತ್ತದೆಂಬ ಗುಟ್ಟನ್ನೆಂದೂ ಬಿಟ್ಟುಕೊಡದ ನಿಸರ್ಗ, ನಮಗೆ ತೋರಿಸಿ ಕೊಡುವುದು ಹೊಸತನವನ್ನು ಮಾತ್ರ. ಇದನ್ನೇ ಉಂಡು, ಉಟ್ಟು ನಡೆಯೋಣ. ಎಲ್ಲರ ಕಂಗಳಲ್ಲಿ ಪಲ್ಲವಿಸಿರುವ ಹೊಸ ಚಿಗುರು ಬೆಳೆಯಲಿ, ಹೂವಾಗಿ, ಕಾಯಾಗಿ, ಹಣ್ಣಾಗಲಿ. ಪ್ರಕೃತಿಯಂತೆಯೇ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಬದುಕು.

ಇದನ್ನೂ ಓದಿ: ದಶಮುಖ ಅಂಕಣ: ಉಪವಾಸದ ಹಿಂದೆ ಎಷ್ಟೊಂದು ನೆನಪುಗಳು!

Exit mobile version