ಈ ಅಂಕಣವನ್ನು ಇಲ್ಲಿ ಕೇಳಿ:
ʻಬಂದಿತಿದಿಗೋ ಬೇಸಿಗೆ, ಸಂದ ಸಮಯದ ಕೊರಗ ಕಳೆಯುತ ಮಂದಿಯೆಲ್ಲರ ಲೇಸಿಗೆʼ ಎಂಬ ಬೇಸಿಗೆಯ ತಂಪನ್ನು ವರ್ಣಿಸುವ ಕವಿವಾಣಿಯನ್ನು ಕೇಳಿದವರು, ಈಗಾಗಲೇ ಸೂರ್ಯ ಝಳಪಿಸುತ್ತಿರುವ ತಾಪದ ಮೊನೆಯನ್ನು ತೋರಿಸಿ ಹುಬ್ಬು ಗಂಟಿಕ್ಕಿದರೆ ತಪ್ಪಲ್ಲ. ಬೇಸಿಗೆ ಎನ್ನುತ್ತಿದ್ದಂತೆ ಬಿಸಿಲು, ಬೇಗೆ, ಬವಣೆ, ಬೆವರು, ಬಾಯಾರಿಕೆ, ಬಳಲಿಕೆ, ಬರ ಮುಂತಾದ ʻಬʼರ-ಪೂರವನ್ನೇ ಹರಿಸಬಹುದು. ಆದರೆ ಬೇಸಿಗೆಯ ತಾಪವನ್ನೆಲ್ಲಾ ಒಮ್ಮೆ ತಣ್ಣಗೆ ಕೂರಿಸಿ, ಅದರ ಮತ್ತೊಂದು ಮುಖದತ್ತ ದೃಷ್ಟಿ ಹರಿಸಿದರೆ ಕಾಣುವುದು, ವಸಂತನೆಂಬ ಅನಂಗ ಸಖ! ಚೈತ್ರಮಾಸ, ಮಧುಮಾಸ, ಶೃಂಗಾರಮಾಸ ಮುಂತಾದ ಹೆಸರುಗಳೆಲ್ಲಾ ಈ ಚತುರ ವಸಂತನ ಸಹವರ್ತಿಗಳದ್ದೇ. ಅರವಿಂದ, ಅಶೋಕ, ಚೂತ, ನವಮಲ್ಲಿಕೆ ಮತ್ತು ನೀಲೋತ್ಪಲಗಳೆಂಬ ಅನಂಗನ ಬಾಣ ಪಂಚಕಗಳು ಪರಿಣಾಮ ಬೀರುವುದಕ್ಕೆ ವಸಂತ ಆಗಮಿಸಲೇ ಬೇಕು- ಎಂಬಲ್ಲಿಗೆ ಪ್ರಕೃತಿಯ ಮೇಲೆ ಆತನ ಪ್ರಭಾವವೇನು ಎಂಬುದು ಸ್ಫುಟವಾಗುತ್ತದೆ.
ಈ ಬಾರಿ ಎಂದಿನಂತೆ ಇಲ್ಲದಿದ್ದರೂ, ಸಾಮಾನ್ಯವಾಗಿ ವಸಂತವೆಂದರೆ ಹಿತವಾದ ಕಾಲ. ಚಳಿಯ ಆರ್ಭಟವೆಲ್ಲಾ ಮುಗಿದಿದೆ, ಆದರೆ ಬಿಸಲಿನ ಪ್ರಕೋಪವಿನ್ನೂ ಜೋರಾಗಿಲ್ಲ ಎಂಬಂಥ ದಿನಗಳು. ಹಾಗೆಂದೇ ಈಗ ಸುಲಿಯುವ ತುಟಿಗಳು, ಒಡೆಯುವ ಹಿಮ್ಮಡಿಗಳು, ಬಿರಿಯುವ ಕೈಕಾಲುಗಳೆಲ್ಲಾ ಮಾರ್ಪಾಡಾಗಿ, ಪ್ರಕೃತಿಯ ನಿಯಮದಂತೆ ಹೊಸ ಹೊಳಪಿನಿಂದ ನಳನಳಿಸುತ್ತವೆ. ಉದುರಿ ಬೋಳಾಗಿ ಬೋಳುಗಳಚಿ ನಿಂತಿದ್ದ ಭೂಮಿಯೂ ಹಸಿರುಡುವ ಹೊತ್ತು. ಹಸಿರೆಂದರೇನು ಒಂದೇ ಬಣ್ಣವೇ? ಎಳೆ ಹಸಿರು, ತಿಳಿ ಹಸಿರು, ಗಿಳಿ ಹಸಿರು, ಸುಳಿ ಹಸಿರು, ಪಾಚಿ ಹಸಿರು, ಪಚ್ಚೆ ಹಸಿರು, ಅಚ್ಚ ಹಸಿರು, ಹಳದಿ ಮಿಶ್ರಿತ ನಿಂಬೆ ಹಸಿರು, ನೀಲಿ ಮಿಶ್ರಿತ ವೈಢೂರ್ಯದ ಹಸಿರು- ಒಂದೇ ವರ್ಣದಲ್ಲಿ ಎಷ್ಟೊಂದು ಛಾಯೆಗಳು! ಈ ಪರಿಯ ಹಸಿರಿನ ನಡುವೆ ನಾನಾ ವರ್ಣ ಮತ್ತು ವಿನ್ಯಾಸಗಳ ಹೂ-ಮಿಡಿಗಳ ವೈಭೋಗ. ಶಿಶಿರ ಸುರಿಯುವ ಕಸಿವಿಸಿಯನ್ನು ಸಂಪೂರ್ಣವಾಗಿ ತೊಡೆದು, ಎಲ್ಲೆಡೆ ಆಹ್ಲಾದ, ಉತ್ಸಾಹ, ಉಲ್ಲಾಸಗಳನ್ನು ಚೆಲ್ಲುವುದರಲ್ಲಿ ನಮ್ಮ ವಸಂತ ಬಲು ಉದಾರಿ.
ಚೈತ್ರ ಮಾಸದ ಮೊದಲ ದಿನವಾದ ಯುಗಾದಿ ಬರುವಷ್ಟರಲ್ಲಿ, ವ್ಯಾಯಾಮದ ಉತ್ಸಾಹಿಗಳಿಗೆ ಬೆಳಗ್ಗೆ ಏಳಲಾರದೆ ಮುದುರಿ ಮಲಗುವ ತಾಪತ್ರಯವಿಲ್ಲ. ಹಗಲು ನಿಧಾನವಾಗಿ ದೀರ್ಘವಾಗುವತ್ತ ಸಾಗುವುದರಿಂದ, ಮುಂಜಾನೆ ನಿರುಮ್ಮಳವಾಗಿ ಎದ್ದು ಬೆವರು ಹರಿಸಬಹುದು. (ವೈಶಾಖ ಬರುವಷ್ಟರಲ್ಲಿ ಶಾಖ ಹೆಚ್ಚಿ, ಬೆವರು ಹರಿಸುವ ಕಷ್ಟವೂ ಇಲ್ಲ, ತಾನಾಗಿ ಹರಿಯುತ್ತಿರುತ್ತದೆ!) ಚಾರಣ, ಪ್ರಯಾಣ ಇತ್ಯಾದಿಗಳಿಗೆ ಹೇಳಿ ಮಾಡಿಸಿದ ಕಾಲವಿದು. ಎಷ್ಟೋ ದೇಶಗಳಲ್ಲಿ ಸ್ಪ್ರಿಂಗ್ ಡ್ರೈವ್ ಅತ್ಯಂತ ಜನಪ್ರಿಯ. ಕಾರಣ, ಎಷ್ಟೋ ದೂರದವರೆಗೆ ಸಾಲಾಗಿ ಹೂ ಬಿಟ್ಟು ನಿಂತ ಮರಗಳ ನಡುವೆ ಜುಮ್ಮನೆ ಡ್ರೈವ್ ಮಾಡುವ ಸುಖ- ಸುಮ್ಮನೆ ಹೇಳುವುದಲ್ಲ, ಮಾಡಿಯೇ ಅರಿಯಬೇಕು. ಯುರೋಪ್‌ನ ಹಲವಾರು ದೇಶಗಳಿಗೆ ಹೂ ಬಿಡುವ ಕಾಲವನ್ನು ಕಣ್ತುಂಬಿಕೊಳ್ಳುವುದಕ್ಕಾಗಿಯೇ ಪ್ರಯಾಣಿಸುವವರ ಸಂಖ್ಯೆ ಲೆಕ್ಕವಿಲ್ಲದಷ್ಟು. ಫ್ರಾನ್ಸ್ ದೇಶದ ಘಮಘಮಿಸುವ ಲಾವೆಂಡರ್ ಹೂವುಗಳು ಮತ್ತು ಸೂರ್ಯಕಾಂತಿಗಳು, ಜರ್ಮನಿಯ ಚೆರ್ರಿ ಹೂಗಳ ಚಪ್ಪರ, ಇಟಲಿಯ ಮನ ಸೆಳೆಯುವ ಆರ್ಕಿಡ್‌ಗಳು, ಹಾಲೆಂಡ್‌ನ ಟುಲಿಪ್‌ಗಳ ವರ್ಣಲೋಕ, ಬ್ರಿಟನ್‌ನ ಬ್ಲೂಬೆಲ್‌ಗಳು, ಸ್ಪೇನ್‌ನಲ್ಲಿ ಹಿಮ ಹೊತ್ತಂತೆ ಕಾಣುವ ಬಾದಾಮಿ ಮರಗಳ ಬಿಳಿ ಹೂವುಗಳು- ಹೇಳುತ್ತಾ ಹೋದಷ್ಟಕ್ಕೂ ಮುಗಿಯುವುದೇ ಇಲ್ಲ ಹೂವುಗಳ ವೈಭವ.
ಯಾವುದೋ ದೇಶಗಳ ಮಾತೇಕೆ? ಅಗ್ದಿ ನಮ್ಮ ಕನ್ನಡದ ಕವಿ ಹರಿಹರನ ಪುಷ್ಟರಗಳೆಯಲ್ಲಿ ಪರಿಮಳಿಸುವ ಹೂವುಗಳೇನು ಕಡಿಮೆಯೇ? ಬೆಳ್ಳಂಬೆಳಗ್ಗೆ ಶಿವನನ್ನು ಪೂಜಿಸಲು ಹೊರಡುವ ಭಕ್ತನೊಬ್ಬ, ಹೂದೋಟಕ್ಕೆ ಹೋಗಿ, ಹೂವುಗಳನ್ನು ಕೊಯ್ದು, ಕಟ್ಟಿ ದೇವರಿಗೆ ಅರ್ಚಿಸುವ ವರ್ಣನೆಯನ್ನು ಹೊತ್ತ ರಗಳೆಯಿದು. ಇಡೀ ಕಾವ್ಯದುದ್ದಕ್ಕೂ ಶಿವನ ಭಕ್ತಿಯೇ ಪ್ರಧಾನವಾಗಿದ್ದರೂ, ಇಡೀ ಪ್ರಕ್ರಿಯೆಯ ನಿರೂಪಣೆ ಸುಂದರವಾಗಿದೆ, ಪುಷ್ಪಮಯವಾಗಿದೆ. ಶಿವನಿಗೆ ಸೇವಂತಿಗೆಯ ಅರಲ ಪನ್ನೀರಿನಿಂದ ಮುಖ ತೊಳೆಸುವ ಆ ಭಕ್ತ, ಪರಾಗದಿಂದ ವಿಭೂತಿಯ ತಿಲಕವನ್ನಿಕ್ಕಿ, ಜಟೆಯಲ್ಲಿರುವ ಸೋಮ ಮತ್ತು ಸುರನದಿಯರಿಗೆ ತೊಂದರೆಯಾಗದಂತೆ ಕೇತಕಿ, ಇರುವಂತಿ ಮತ್ತು ಸೇವಂತಿಯನ್ನು ಮುಡಿಸಿ, ಮರುಗ ಮತ್ತು ಸಂಪಿಗೆಗಳನ್ನೇ ಗಜ ಹಾಗೂ ಹುಲಿ ಚರ್ಮವಾಗಿ ಉಡಿಸುತ್ತಾನೆ ಎಂಬಂತೆ ನಾನಾ ರೀತಿಯ ವಿವರಗಳು ಶಿವ-ಭಕ್ತ-ಹೂವುಗಳ ಸುತ್ತ ಇಡೀ ಕಾವ್ಯದಲ್ಲಿ ಹರಡಿಕೊಂಡಿವೆ.
ವಸಂತ ಎಂದರೆ ಸಂತಸ ಮಾತ್ರವೇ? ಈ ಹೂವು, ಹಣ್ಣು, ಹಸಿರು, ಚಿಗುರು ಮುಂತಾದವೆಲ್ಲ ಯಾಕಿಷ್ಟು ಮುಖ್ಯವೆನಿಸುತ್ತವೆ ನಮಗೆ? ಏನೆಲ್ಲಾ ಭಾವಗಳು ಬೆರೆತಿವೆ ಇದೊಂದು ಋತುವಿನೊಂದಿಗೆ? ಏಳಿಗೆ, ಸಮೃದ್ಧಿ, ನಿರೀಕ್ಷೆ, ಭರವಸೆ, ಹರುಷ, ಹೊಸವರುಷ, ಪ್ರೀತಿ, ಒಲವು, ಶೃಂಗಾರ, ಝೇಂಕಾರ, ಕವಿಸಮಯ- ಇನ್ನೂ ಎಷ್ಟೊಂದು ಹೇಳುವುದಕ್ಕೆ ಇದೆಯಲ್ಲ. ಕೆಲವರಿಗೆ ಕೋಗಿಲೆ, ದುಂಬಿಗಳು ನೆನಪಾದರೆ, ಹಲವರು ಮಾವಿನ ಹಣ್ಣನ್ನೇ ಧೇನಿಸಬಹುದು. ಈ ವಿಷಯಗಳಲ್ಲಿ ಮೊದಲು ನೆನಪಾಗುವುದು ನಮ್ಮ ಪಂಪ. ʻನೀನೇ ಭುವನಕ್ಕಾರಾಧ್ಯನೈ ಚೂತರಾಜ, ತರುಗಳ್ ನಿನ್ನಂತೆ ಚೆನ್ನಂಗಳೇʼ ಎಂದು ಮಾವಿನ ಮರವನ್ನು ಕೊಂಡಾಡುತ್ತಾ, ಬನವಾಸಿಯಲ್ಲಿ ಮರಿದುಂಬಿಯಾಗಿ, ಕೋಗಿಲೆಯಾಗಿ ಹುಟ್ಟಲು ಹಂಬಲಿಸುತ್ತಾನೆ. ಇಂಥ ಘನಕವಿಯಿಂದ ಹಿಡಿದು, ʻಮಧುಮಾಸ ಬಂದಿಹುದು/ ಮಧುಕರಿಗಳೇ ಬನ್ನಿʼ ಎನ್ನುವ ಕುವೆಂಪು ಅವರು, ʻಬಾ ಭೃಂಗವೇ ಬಾ, ವಿರಾಗಿಯಂದದಿ ಭ್ರಮಿಸುವೆ ನೀನೇಕೆ?/ ಕಂಪಿನ ಕರೆಯಿದು ಸರಾಗವಾಗಿರೆ ಬೇರೆಯ ಕರೆ ಬೇಕೆ?ʼ ಎಂಬ ಬೇಂದ್ರೆಯವರು, ʻಇಮ್ಮಾವಿನ ಮಡಿಲಲ್ಲಿದೆ ದುಂಬಿಯ ಝೇಂಕಾರ/ ತರುಲತೆಗಳ ಮೈಗೊಪ್ಪಿದೆ ಕೆಂಪಿನಲಂಕಾರʼ ಎನ್ನುವ ಕೆ. ಎಸ್. ನರಸಿಂಹಸ್ವಾಮಿಗಳರವರೆಗೆ ಮಾವು, ದುಂಬಿ, ಕೋಗಿಲೆಗಳ ಬಗ್ಗೆ ಸೃಷ್ಟಿಯಾದ ಕವಿಸಮಯಗಳಿಗೆ ಲೆಕ್ಕವೇ ಇಲ್ಲ.
ನಿಸರ್ಗದೊಂದಿಗೆ ನಿಕಟವಾಗಿ ಬೆರೆತು ಬದುಕುತ್ತಿದ್ದ ಹಿಂದಿನವರ ರೀತಿ-ನೀತಿಗಳನ್ನು ಹಳೆಗನ್ನಡ ಕಾವ್ಯ ಪರಂಪರೆಯಲ್ಲೂ ಕಾಣಬಹುದು. ಸೀತೆಯನ್ನು ಅರಸುತ್ತಾ ಹೋಗುವ ರಾಮ, ʻತಳಿರೇ ತಾಮರೆಯೇ ಮೃಗಾಳಿ ಸಂಕುಲಮೇ ಮತ್ತ ಕೋಕಿಲಮೇ ಕಂಡಿರೇ ಪಲ್ಲವಾಧರೆಯʼ ಎಂದು ಸುತ್ತಲಿನ ಪ್ರಕೃತಿಯನ್ನು ಕೇಳುತ್ತಾ ಹೋಗುವ ವರ್ಣನೆ ನಾಗಚಂದ್ರನ ರಾಮಚಂದ್ರಚರಿತ ಪುರಾಣದಲ್ಲಿದೆ. ʻಕಂಡಿರೇ ಚೆನ್ನಮಲ್ಲಿಕಾರ್ಜುನನʼ ಎನ್ನುವ ಅಕ್ಕನೂ ಪ್ರಕೃತಿಯೊಂದಿಗೆ ಸಂವಾದಿಸುವುದನ್ನು ವಚನಗಳಲ್ಲಿ ಕಾಣಬಹುದು. ನಾಡೊಂದು ಸುಭಿಕ್ಷವಾಗುವುದು ಹೇಗೆ ಎನ್ನುವುದನ್ನು, ʻಫಲವಿಲ್ಲದ ಮಾವು ಮಾವಿಲ್ಲದ ಮಲ್ಲಿಗೆ ಮಲ್ಲಿಕಾಲತಿಕೆ ಇಲ್ಲದ ವನ ವನವಿಲ್ಲದ ಭೋಗಿಗಳಿಲ್ಲ ದೇಶದೆಡೆಯೊಳುʼ ಎಂದು ವರ್ಣಿಸುತ್ತಾನೆ ನಂಜುಂಡ ಕವಿ.
ಇದನ್ನೂ ಓದಿ: ದಶಮುಖ ಅಂಕಣ: ಏನು ಹೇಳುತ್ತಿವೆ ಈ ಪ್ರತಿಮೆಗಳು?
ನಿಸರ್ಗದೊಂದಿಗಿನ ಅನುಸಂಧಾನ ಹೀಗಾದರೆ, ವಸಂತನ ಬಗ್ಗೆ ಹರಿದು ಬಂದ ಕವಿಸಾಲುಗಳಿಗೆ ತುದಿ-ಮೊದಲು ಉಂಟೇ? ʻಪಸರಿಸಿತು ಮಧುಮಾಸ ತಾವರೆ/ ಎಸಳ ದೋಣಿಯ ಮೇಲೆ ಹಾಯ್ದವು/ ಕುಸುಮ ರಸದ ಉಬ್ಬರ ತೆರೆಯನು ಕೂಡ ದುಂಬಿಗಳುʼ ಎಂದು ರಸವನ್ನೇ ಹರಿಸುತ್ತಾನೆ ರೂಪಕಗಳ ರಾಜ ಕುಮಾರವ್ಯಾಸ. ಶೃಂಗಾರ ರಸವೆಂಬುದು ವಸಂತನೊಂದಿಗೆ ಸ್ಥಾಯಿ ಎನ್ನುವಷ್ಟು ನಿಕಟವಾದ್ದರಿಂದ, ʻಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ/ ಮಧುಕರ ನಿಕರ ಕರಂಬಿತ ಕೋಕಿಲ ಕೂಜಿತ ಕುಂಜ ಕುಟೀರೆʼ (ಸ್ಥೂಲವಾಗಿ ಹೇಳುವುದಾದರೆ, ಪ್ರಕೃತಿಯಲ್ಲಿ ಅರಳಿ ನಿಂತ ಹೂಗಿಡ ಬಳ್ಳಿಗಳ ಕುಸುಮಗಳ ಸುಗಂಧವನ್ನು ಕೋಮಲವಾದ ಮರುತ ಹೊತ್ತು ತರುತ್ತಿದ್ದಾನೆ. ಕುಟೀರದ ಸುತ್ತೆಲ್ಲ ದುಂಬಿಗಳು ಝೇಂಕರಿಸುತ್ತಿವೆ) ಎನ್ನುವ ಜಯದೇವ ಕವಿಯ ವರ್ಣನೆಯಿಂದ, ಕೃಷ್ಣ-ಗೋಪಿಕೆಯರ ಇನ್ನೊಂದು ಲೋಕವೇ ತೆರೆದುಕೊಳ್ಳುತ್ತದೆ. ಹೊಸಗನ್ನಡದ ಹಾದಿಗಳೂ ವಸಂತನಿಂದ ಸಿಂಗಾರಗೊಂಡಂಥವೇ. ಬಿಎಂಶ್ರೀ ಅವರ ʻವಸಂತ ಬಂದ, ಋತುಗಳ ರಾಜ ತಾ ಬಂದʼ ಎನ್ನುವ ಸಾಲುಗಳಿಂದ ಮೊದಲ್ಗೊಂಡರೆ, ʻಗಿಡದಿಂದುದುರುವ ಎಲೆಗಳಿಗೂ ಮುದ, ಚಿಗುರುವಾಗಲೂ ಒಂದೇ ಹದ/ ನೆಲದ ಒಡಲಿನೊಳಗೇನು ನಡೆವುದೋ, ಎಲ್ಲಿ ಕುಳಿತಿಹನೋ ಕಲಾವಿದ!ʼ ಎಂಬ ಅಚ್ಚರಿ ಚನ್ನವೀರ ಕಣವಿಯವರದ್ದಾದರೆ, ʻಋತು ವಸಂತ ಬಂದನಿದೋ, ಉಲ್ಲಾಸವ ತಂದನಿದೋ/ ಬತ್ತಿದೆದೆಗೆ ಭರವಸೆಗಳ ಹೊಸ ಬಾವುಟವೇರಿಸಿ/ ಹಳೆಗಾಡಿಗೆ ಹೊಸ ಕುದುರೆಯ ಹೊಸಗಾಲಿಯ ಜೋಡಿಸಿʼ ಎಂದು ಸಂಭ್ರಮ ಪಲ್ಲವಿಸುವ ಬಗೆಯನ್ನು ಜಿ.ಎಸ್.ಶಿವರುದ್ರಪ್ಪನವರು ವರ್ಣಿಸುತ್ತಾರೆ. ಇದಿಷ್ಟೇ ಅಲ್ಲ, ಕುವೆಂಪು, ಬೇಂದ್ರೆ, ಪುತಿನ, ಅಡಿಗರು- ಹೀಗೆ ವಸಂತನ ಸೌಂದರ್ಯಕ್ಕೆ ಸೋಲದ ಕವಿಗಳೇ ಇಲ್ಲ.
ಇಷ್ಟೆಲ್ಲಾ ಬೆಡಗಿನೊಂದಿಗೆ ಇದೀಗ ಬಂದಿರುವ ವಸಂತನೇನೂ ನಿಲ್ಲುವವನಲ್ಲ, ಉಳಿದೆಲ್ಲರಂತೆಯೇ ಅವನೂ ಋತುಚಕ್ರದೊಂದಿಗೆ ಉರುಳುವವನೇ. ಇಂದು ಚೆಲುವಾಗಿ ಹಬ್ಬಿನಿಂತ ವಲ್ಲರಿ ಮುಂದೊಮ್ಮೆ ಎಲೆ ಉದುರಿಸಲೇಬೇಕು, ಒಣಗಲೇಬೇಕು, ಮತ್ತೆ ಚಿಗುರಲೇಬೇಕು. ಹಳತೆಲ್ಲ ಮಾಗಿ, ಹೋಗಿ, ಹೊಸದಕ್ಕೆ ಹಾದಿ ಬಿಡುವ ಈ ನೈಸರ್ಗಿಕ ಕ್ರಿಯೆಯನ್ನು ಸಹಜವಾಗಿ ಒಪ್ಪಿಕೊಂಡವರು ಮಾತ್ರವೇ ಕಾಲಪ್ರವಾಹದಲ್ಲಿ ದಡ ಸೇರಲು ಸಾಧ್ಯ. ಹಾಗಾಗಿ ಕಾಲಕ್ಕೆ ತಕ್ಕಂತೆ ಮಾಗಲಿ, ಸಾಗಲಿ ನಮ್ಮೆಲ್ಲರ ಜೀವನಚಕ್ರ.
ಇದನ್ನೂ ಓದಿ: ದಶಮುಖ ಅಂಕಣ: ವೈಜ್ಞಾನಿಕತೆ ಮತ್ತು ಭ್ರಮರ-ಕೀಟ ನ್ಯಾಯ!