Site icon Vistara News

ದಶಮುಖ ಅಂಕಣ: ನೆಮ್ಮದಿಯೆಂಬ ಗಮ್ಯದ ಹಾದಿ ಯಾವುದು?

jungle safari

ಹೆಚ್ಚಿನ ತಯಾರಿ, ನಿರೀಕ್ಷೆ ಏನೂ ಇಲ್ಲದೆ, ಒಂದು ಹದಾ ಉತ್ಸಾಹದಿಂದ ಹೊರಟಿದ್ದಾಗಿತ್ತು ಅಂದು- ಅಡವಿ ಅಲೆಯುವುದಕ್ಕೆ. ಶಿರಸಿಯ ವಾನಳ್ಳಿಗೆ ಸಮೀಪದ ಜಾಜಿಗುಡ್ಡೆಯೆಂಬ ಕಣಿವೆಯೊಂದರಲ್ಲಿ ಇರುವ ಹೋಂ ಸ್ಟೇಗೆ ತೆರಳಿ ಅಲ್ಲಿಂದ ಮುಂದುವರಿಯುವುದು ಎಂಬ ಉದ್ದೇಶವಿತ್ತು. ಇದೀಗ ಆ ಹೋಂ ಸ್ಟೇ ಬಗೆಗಿನ ಅಧಿಕೃತ ಯಾ ಅನಧಿಕೃತ ರಿವ್ಯೂ ಇದಲ್ಲ; ಆತಿಥೇಯರನ್ನು ಕೀರ್ತಿಸಿ, ಅವರಿಗೆ ರೇಟಿಂಗ್‌ ಹೆಚ್ಚಿಸುವ ಉದ್ದೇಶವಿಲ್ಲ; ಹಾಗೆ ನೋಡಿದರೆ ಅಂಥ ಯಾವ ರಿವ್ಯೂ-ರೇಟಿಂಗ್‌ಗಳ ಅಗತ್ಯವೂ ಅವರಿಗಿಲ್ಲ; ಅಥವಾ ಆ ಮಟ್ಟಕ್ಕೆ ಅವರನ್ನು ಸೀಮಿತಗೊಳಿಸುವುದು ಪಾಪದ ಕೆಲಸ ಎಂದರೆ ತಪ್ಪಲ್ಲ! ಆದರೂ ಕೆಲವೇ ತಾಸುಗಳ ಅಲ್ಲಿನ ಒಡನಾಟದಲ್ಲಿ ಮನದ ಬಹಳಷ್ಟು ಸಿಕ್ಕುಗಳು ಸಡಿಲಾಗಿದ್ದು ಹೌದು. ಭವದಲ್ಲಿದ್ದೂ ಆ ಪರಿವೆಯನ್ನು ತೊರೆದಿದ್ದ ಅಂದಿನ ಅತ್ಯಲ್ಪ ಕ್ಷಣಗಳು, ಬದುಕಿನ ಸ್ವಾಸ್ಥ್ಯ ಎಂದರೇನು ಎಂಬುದನ್ನು ಮತ್ತೆ ಮತ್ತೆ ಚಿಂತಿಸುವಂತೆ ಮಾಡಿದ್ದವು.

ನಿಜಕ್ಕೂ ಯಾವುದನ್ನು ಬದುಕಿನ ಸ್ವಾಸ್ಥ್ಯ, ನೆಮ್ಮದಿ ಎಂದು ಕರೆಯಬಹುದು? ಬ್ಯಾಂಕಿನಲ್ಲಿ ಪ್ರತೀ ತಿಂಗಳು ಬಂದು ಬೀಳುವ ಆರೆಂಟಂಕಿಯ ಸಂಪಾದನೆಯನ್ನೇ? ವರ್ಷದಲ್ಲಿ ನಾವು ತಪ್ಪದೇ ಮಾಡುವ ದೇಶವಿದೇಶಗಳ ಪ್ರವಾಸವನ್ನೇ? ಬದುಕಿನ ನಾಗಾಲೋಟದಲ್ಲಿ ಮರೆತ ನಮ್ಮ ಬುಡವನ್ನು ಅರಸುತ್ತಾ ಹೋಗುವಂಥ ಹಳ್ಳಿಯ ರೆಸಾರ್ಟುಗಳಲ್ಲಿ ಇರಬಹುದೇ ನೆಮ್ಮದಿ? ಕರಿಯರ್‌ ಎಂಬ ಹೆಸರಿನಲ್ಲಿ ಸರ್ವತ್ರವನ್ನೂ ಮರೆಯುವ ವಿಸ್ಮೃತಿಯಲ್ಲಿ ಇರಬಹುದೇ? ಕಾಲಕಾಲಕ್ಕೆ ತಕ್ಕಂತೆ ಕಾರು, ಮನೆ, ಮದುವೆ, ಮಕ್ಕಳು ಎಂಬಂತಹ ಎಲ್ಲವೂ ಒದಗಿಬಂದರೆ ಸ್ವಾಸ್ಥ್ಯವೂ ಒದಗಿಬಂದ ಹಾಗೆಯೇ? ಮನಕ್ಕೊಪ್ಪುವ ಮಿತ್ರರು, ಮೋಜು ನೆಮ್ಮದಿ ನೀಡೀತೆ? ಸಂಸಾರ, ಸಂಪಾದನೆ, ಸಂಪತ್ತು, ಸುತ್ತಾಟ, ಸಹವಾಸ- ಇವೆಲ್ಲವೂ ಚೆನ್ನಾಗಿದ್ದರೆ ನೆಮ್ಮದಿ ಸಿಗುವುದೇನು ಸುಳ್ಳಲ್ಲವಲ್ಲ. ಆದರೆ ಇದಿಷ್ಟು ಸಾಕೇ? ಎಲ್ಲವೂ ಇದ್ದಾಗಲೂ ಯಾವುದೋ ಬೇರೆಯದರಲ್ಲಿ ನೆಮ್ಮದಿ ಹುಡುಕುತ್ತೇವಲ್ಲ, ಯಾಕಾಗಿ? ಭೌತಿಕ ಸಂಪತ್ತುಗಳೆಲ್ಲಾ ಇಲ್ಲದವರ ಮುಖದಲ್ಲೂ ಮಾಂತ್ರಿಕವಾದ ನಿರುಮ್ಮಳ ನಗು ಕಾಣಬಹುದಲ್ಲ, ಹೇಗೆ ಸಾಧ್ಯ?

ಮಳೆ-ಚಳಿಯಲ್ಲಿ ಹೊದೆಯಲು ಬೆಚ್ಚನೆಯ ಕೌದಿಯೂ ಇಲ್ಲದೆ, ಹಂಚು ಕಾಣದ ಮನೆಗಳಲ್ಲಿ ಕಳೆದಿದ್ದ ನಮ್ಮ ಎಷ್ಟೋ ಹಿರಿಯರು ಆ ಬಗ್ಗೆ ಕಿಂಚಿತ್‌ ಹಳವಂಡವೂ ಇರದಂತೆ ಬದುಕಿದ್ದವರು. ಮಾತ್ರವಲ್ಲ, ನಮಗಿಲ್ಲದಿರುವುದು ನಮ್ಮ ಮಕ್ಕಳಿಗಾದರೂ ದೊರೆಯಲಿ ಎಂಬ ಎಂದೂ ಮುಗಿಯದ ಕನವರಿಕೆಯಲ್ಲಿ, ಬೇಕಾದ್ದು ಬೇಡದ್ದೆಲ್ಲವನ್ನೂ ತಮ್ಮ ಮುಂದಿನವರಿಗೆ ತಂದೊಪ್ಪಿಸುವ ಹಪಾಹಪಿಯೂ ಅವರಲ್ಲಿ ಇರಲಿಲ್ಲ. ಬದಲಿಗೆ, ಪಾಲಿಗೆ ಬಂದಿದ್ದರಲ್ಲಿ ಖುಷಿ ಪಡುವ ಎನ್ನುವ ಪಾಠವನ್ನು ಸೂಚ್ಯವಾಗಿ ಮಾಡುತ್ತಿದ್ದರಲ್ಲ. ಈಗ ಕಾಲನ ಓಟದಲ್ಲಿ ಅವರಿಗಿಂತ ಬಹಳಷ್ಟು ಮುಂದಿರುವ ನಮಗೆ, ಅವರಿಗಿದ್ದಂಥ ನಿರುದ್ವಿಗ್ನ ಉಸಿರಾಟ, ನೆಮ್ಮದಿಯ ನಗುವನ್ನು ಯಾಕೆ ಸಾಧಿಸಲಾಗುವುದಿಲ್ಲ? ಈ ಗೋಜಲುಗಳ ಚಕ್ರವ್ಯೂಹದಲ್ಲಿ ಮನದ ಸಿಕ್ಕು ಬಿಡಿಸಿದ್ದೋ, ಇನ್ನಷ್ಟು ಹೆಚ್ಚಾಗಿದ್ದೋ ಎಂಬ ಭಾವ ಕಾಡಿತ್ತಾದರೂ, ಆ ಕಣಿವೆ ಹೋಂ ಸ್ಟೇದಲ್ಲಿದ್ದ ಪಿ.ಜಿ. ಮಾವನ ಕೈಯಲ್ಲಿನ ಅಗೋಚರ ಇಸ್ತ್ರಿ ಪೆಟ್ಟಿಗೆ ಸದ್ದಿಲ್ಲದೆ ತನ್ನ ಕೆಲಸ ಮಾಡುತ್ತಿತ್ತು.

“ಕಾಡಿನಲ್ಲಿ ನಡೆಯುವವರು ಶಬ್ದ ಮಾಡಬಾರದು. ಮೌನವಾಗಿ ಆಲಿಸುತ್ತಿದ್ದರೆ ಗಂಧರ್ವರು ಮಾತಾಡುವುದು ಕೇಳಿಸುತ್ತದೆ” ಎನ್ನುತ್ತಾ ಮೌನವಾಗಿ ನಕ್ಕರು ಪಿ.ಜಿ.ಮಾವ. ಅವರೊಡನೆ ಅಡವಿಯಲ್ಲಿ ಅಲೆದಿದ್ದು ಬಹಳ ಸೊಲ್ಪ ಹೊತ್ತು. ದೃಷ್ಟಿಯೂ ಒಳತೂರದಂಥ ಕಾಡಿನಲ್ಲಿ ಎಲ್ಲಿಂದಲೋ ತೇಲಿ ಬಂದ ಗಂಧ ಇಂಥ ಹೂವಿನದ್ದೇ ಎನ್ನುವಾಗ, ವಾಸನೆಯ ಮೇಲೆ ಅನತಿ ದೂರದಲ್ಲಿ ಇಂಥದ್ದೇ ಹಾವು ದಾರಿ ಹಾಯುವುದನ್ನು ಗ್ರಹಿಸುವಾಗ, ಹೊಳೆ ನೀರಿನ ಉಷ್ಣತೆಯನ್ನು ಆಧರಿಸಿ ನೀರಿನಡಿ ಸುಪ್ತವಾಗಿರುವುದು ಕಲ್ಲೊ, ಕೆಸರೊ, ಗುಂಡಿಯೋ ಎಂಬುದನ್ನು ಸೂಚಿಸುವಾಗ, ಕಾಡಿನ ಕಥೆಗಳಲ್ಲಿ ಬರುವ ಮಾಂತ್ರಿಕರಂತೆ ಕಾಣುತ್ತಾರವರು. “ಆಗಲಿ ಸ್ಥಾವರ ಜಂಗಮಕೆಲ್ಲಾ ಸಂತತ ಸಂಗೀತದ ಸ್ನಾನ/ ಮುಗಿಲನು ಮುಟ್ಟಲಿ ಮಂಗಳ ಧ್ವಾನವು ಪಡೆಯಲಿ ಜಡಚೇತನ, ಪ್ರಾಣ!” ಎಂದೆಲ್ಲಾ ಕಾಡಿನ ಬಗ್ಗೆ ವರ್ಣಿಸಿದ ಕಾವ್ಯಾನಂದರ ಸಾಲುಗಳು ಫಕ್ಕನೆ ನೆನಪಾದವು. ಕಾನನದ ಪಂಚಭೂತಗಳಲ್ಲಿ ತಮ್ಮನ್ನು ಲೀನವಾಗಿಸಿ, ನೆಮ್ಮದಿಯನ್ನೇ ಬದುಕಾಗಿಸಿಕೊಂಡ ಎಷ್ಟೋ ಮುಗ್ಧ ನಗೆಗಳಲ್ಲಿ ಇವರದ್ದೂ ಒಂದು. ನಾಗರಿಕ ಸವಲತ್ತುಗಳಲ್ಲೇ ಸ್ವರ್ಗ ಹುಡುಕುವ ಕಾಲಘಟ್ಟದಲ್ಲಿ, ಅಂಥ ಎಲ್ಲವುಗಳಿಂದ ದೂರವಾಗಿ, ಕಾನ್ಮರಗಳು ಮುದ್ದಾಡುವ ಸದ್ದನ್ನೇ ತಮ್ಮ ಉಸಿರಾಗಿಸಿಕೊಂಡು, ಈ ಬಗ್ಗೆ ಉಗುರಂಚಿನಲ್ಲೂ ಅಸಹನೆ ತೋರದಂಥ ಜೀವನಪ್ರೀತಿಯನ್ನು ಕಂಡಾಗ- ಪ್ರಶ್ನೆಗಳು ಹುಟ್ಟದಿರಲು ಸಾಧ್ಯವೇ? ಆದರೆ ಆಗ ಹುಟ್ಟಿದ ಪ್ರಶ್ನೆಗಳೇ ಉತ್ತರದಂತೆಯೂ ಕಾಣುತ್ತಿವೆ! ದಿಟಕ್ಕೂ, ಬದುಕಿನ ಸ್ವಾಸ್ಥ್ಯಕ್ಕೆ ನಿರ್ಣಾಯಕ ವ್ಯಾಖ್ಯೆಗಳೆಲ್ಲಿವೆ?

ತಾವು ಪರಂಪರೆಯಿಂದ ಬದುಕಿಬಂದ ಕಣಿವೆ ತಮ್ಮ ಕಣ್ಣೆದುರೇ ಮಗುಚಿದ್ದನ್ನು ಕಂಡು, ತಾವು ನಿಂತ ಕಣಿವೆಯೂ ಅದುರುತ್ತಿದೆ ಎಂಬ ಅರಿವಿನ ನಡುವೆಯೂ ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಅವರಿಗೆಲ್ಲ ಏನಿದೆ ಎಂಬ ಜಿಜ್ಞಾಸೆಗೆ ಉತ್ತರವೋ ಎಂಬಂತೆ ಕಾಣುವುದು ಅವರ ಜೀವನ ಮತ್ತು ಕಾನನ ಪ್ರೀತಿ ಮಾತ್ರ. ನಾವು ಹುಟ್ಟಿದೂರು ಎಂಬ ಮಮಕಾರದಷ್ಟೇ ಸಹಜ, ನಾನು ಹುಟ್ಟಿದ ಕಾಡು ಎಂಬುದು. ನಾವು ಮೆಟ್ಟಿದ ನೆಲ ಎಂಬಷ್ಟೇ ಸಹಜ, ನಾನು ಹತ್ತಿದ ಮರ ಎಂಬುದು. ಆದರೊಂದು, ಊರನ್ನು ಬೇಕಷ್ಟಕ್ಕೆ ಮಾತ್ರ ಬಳಸುವ ವ್ಯವಧಾನವನ್ನು ನಾವೆಂದೋ ಕಳೆದುಕೊಂಡಿದ್ದೇವೆ; ಆದರೆ ಕಾಡನ್ನು ಬೇಕಷ್ಟಕ್ಕೆ ಮಾತ್ರವೇ ಬಳಸುವ ತಾಳ್ಮೆ ಪಿ.ಜಿ. ಮಾವನಂಥವರಲ್ಲಿ ಇನ್ನೂ ಉಳಿದಿದೆ. ಹಾಗೆಂದೇ ಅವರಂಥವರಿನ್ನೂ ಅಲ್ಲಿ ಉಳಿದುಕೊಂಡಿದ್ದಾರೆ. ಮತ್ತದೇ ಪ್ರಶ್ನೆ- ಏನು ಸ್ವಾಸ್ಥ್ಯ ಎಂದರೆ? ಅಗತ್ಯವನ್ನು ಮಿತಗೊಳಿಸುವುದೇ ಅಥವಾ ಅಗತ್ಯದ ಹೆಸರಿನಲ್ಲಿ ಅಮಿತವಾದ ವಿಸ್ತರಣೆಯೇ?

ಕರಿಯರ್‌ ಅರಸುತ್ತಾ ಯಾವ್ಯಾವುದೋ ದೇಶಗಳಲ್ಲಿ ದುಡಿಯುವುದು, ನೆಲೆಸುವುದು ಬಹಳಷ್ಟು ಮಂದಿಗೆ ನೆಮ್ಮದಿ ನೀಡುವ ಸಂಗತಿ. ಕನಸುಗಳನ್ನು ಅರಸಿಕೊಂಡು ಹೋಗುವುದರಲ್ಲಿ ತಪ್ಪೇನು? ಇಷ್ಟಕ್ಕೂ, ಗುರಿ ತಲುಪಿದ್ದಕ್ಕಿಂತ ಹೆಚ್ಚಿನ ಸಂತೋಷ ನೀಡುವುದು ಗಮ್ಯದೆಡೆಗೆ ಕೊಂಡೊಯ್ಯುವ ಅನೂಹ್ಯ ದಾರಿಗಳಲ್ಲವೇ? ಅಂಥದ್ದೇ ದಾರಿಯನ್ನು ಅರಸಿಕೊಂಡು ಯಾವ್ಯಾವುದೋ ದೇಶಗಳಿಂದ ಬರುವವರನ್ನು ಅವರವರ ಗಮ್ಯದೆಡೆಗೆ ಕರೆದೊಯ್ಯುವ ಪಿ.ಜಿ. ಮಾವ ಪಶ್ಚಿಮ ಘಟ್ಟಗಳ ಬಹಳಷ್ಟು ರಹಸ್ಯಗಳನ್ನು ಸಂಚಿಯಲ್ಲಿ ಇರಿಸಿಕೊಂಡು, ಬೇಕಾದಾಗ ಕವಳದಂತೆ ಮೆಲ್ಲಬಲ್ಲರು. ಒಂದಂಕಿಯ ಮರಗಳ ಬಗ್ಗೆ, ಡಾನ್ಸಿಂಗ್‌ ಫ್ರಾಗ್‌ಗಳ ಬಗ್ಗೆ, ಯಾವ್ಯಾವುದೋ ಹಾವುಗಳ ಬಗ್ಗೆ- ಹೀಗೆ ಹಲವು ಉದ್ದೇಶಗಳನ್ನು ಹೊತ್ತು ಬರುವ ಅಧ್ಯಯನಕಾರರೊಂದಿಗೆ, ಆಗಸ ತೂತು ಬಿದ್ದಂತೆ ಸುರಿಯುವ ಮಳೆಗಾಲದ ರಾತ್ರಿಗಳಲ್ಲಿ, ಕಡಿದಾದ ಕಣಿವೆಗಳಲ್ಲಿ ಜರಿಯುತ್ತಾ ಸಾಗುವುದನ್ನು ಪ್ರೀತಿಯಿಂದ ಮೆಲ್ಲುವುದನ್ನು ಕಂಡಾಗ- ನೆಮ್ಮದಿ ಹೀಗೂ ದೊರಕೀತೆ ಎನಿಸಿದರೆ ಅಚ್ಚರಿಯೇನು?

ಇದನ್ನೂ ಓದಿ: ದಶಮುಖ ಅಂಕಣ: ನೆಂಟರೊಂದಿಗಿನ ನಂಟೆಂಬ ಅಂಟು

ಹಣ, ಸಂಪತ್ತು, ಖ್ಯಾತಿ, ಅಧಿಕಾರದಲ್ಲಿ ನೆಮ್ಮದಿ ಅರಸುವವರು ಸಾಲೋಸಾಲಾಗಿ ನಮ್ಮ ಮುಂದಿದ್ದಾರೆ. ಚುನಾವಣೆಯ ಕಣದಲ್ಲಿಳಿದು ಅಧಿಕಾರ ದಕ್ಕಿಸಿಕೊಳ್ಳಲು, ಒಂದೊಮ್ಮೆ ದೊರೆಯದಿದ್ದರೆ ಏನಕ್ಕೇನೂ ಮಾಡುವಂಥ ಮನಸ್ಥಿತಿಯವರು ನಮ್ಮೆಲ್ಲರ ಸ್ವಾಸ್ಥ್ಯ ಕದಡುತ್ತಿದ್ದಾರೆ. ಇಂತಹ ಮನಸ್ಥಿತಿಗಳು ಎಷ್ಟೋ ಮನೋವಿಜ್ಞಾನಿಗಳ ಅಧ್ಯಯನಕ್ಕೆ ವಸ್ತುವಾಗಬಹುದಾದ ಸಾಧ್ಯತೆ ಇದ್ದರೂ, ಬುದ್ದಿಪೂರ್ವಕವಾಗಿಯೇ ಇಂಥ ಬದುಕನ್ನು ಅಧಿಕಾರ ಬಯಸುವವರು ಆಯ್ದು ಕೊಂಡಿದ್ದೂ ನಿಜ ತಾನೇ. ಹಾಗಾದರೆ ಈ ಎಲ್ಲಾ ಥೈಲಿ-ಥಳುಕುಗಳೂ ನೆಮ್ಮದಿಯ ತಾಣಗಳಾಗಬಹುದೇ? ಈ ಮೂಲಕ ಅವರೇನನ್ನು ಅರಸುತ್ತಿದ್ದಾರೆ?

ಆಧುನಿಕ ಮೋಜಿನ ಬದುಕನ್ನು ಒಂದು ತಕ್ಕಡಿಯಲ್ಲಿರಿಸಿ, ಗೌಜಿಲ್ಲದ ಸರಳ ಬದುಕನ್ನು ಇನ್ನೊಂದು ತಕ್ಕಡಿಯಲ್ಲಿರಿಸಿ, ಎರಡನ್ನೂ ತೂಗಿ ತೋರಿಸುವ ಉದ್ದೇಶ ಖಂಡಿತಕ್ಕೂ ಇಲ್ಲಿಲ್ಲ. ಹುಟ್ಟಾ ಪೇಟೆಯವಳಾದ ನನ್ನ ಬೇರಿರುವುದು ಕಾಡಂಚಿನ ಕಟ್ಟೆಮನೆಯಲ್ಲಿ. ಆ ಎರಡೂ ಬದುಕುಗಳು ನನ್ನವೇ, ನನಗೆ ಪ್ರಿಯವೇ. ಆದರೂ ಎಲ್ಲೋ ವಿಳಾಸ ತಪ್ಪಿದಂತಾಗುವ ಬದುಕನ್ನು ಅರಸುವಾಗ ದಾರಿ ಹೊರಳುವುದು ಮಾತು ಬೇಡದ ಮೌನದೆಡೆಗೆ; ಇನ್ನೆಲ್ಲೋ ಕಾಡುವ ಅಸ್ವಸ್ಥತೆಗೆ ಔಷಧಿ ಹುಡುಕುವಾಗ ಮದ್ದಾಗಿ ಒದಗುವುದು ಎಲ್ಲ ಗಲಾಟೆಯ ನಡುವಿನ ನಿಶ್ಶಬ್ದ. ತುಂಬಿಯೂ ತುಳುಕದೆ, ಎಲ್ಲ ಇದ್ದೂ ಮೌನವಾಗಿರುವ ಕಾಡಿನಲ್ಲಿ ಬದುಕುವುದನ್ನು ಕಾಯೇನ ವಾಚಾ ಮನಸಾ ಆಯ್ದುಕೊಂಡು, ನೆಮ್ಮದಿಯಾಗಿರುವುದನ್ನು ಏನೆಂದು ಬಣ್ಣಿಸುವುದು? ಹೌದೇಹೌದು, ಸ್ವಾಸ್ಥ್ಯಕ್ಕೆ ವ್ಯಾಖ್ಯೆಗಳಿಲ್ಲ!

“ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ/ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ” ಎಂದು ಕುವೆಂಪು ಅವರು ಮತ್ತೆಮತ್ತೆ ಕನವರಿಸಿದ್ದರಲ್ಲಿ ಅಚ್ಚರಿ ಕಾಣುತ್ತಿಲ್ಲ.

ಇದನ್ನೂ ಓದಿ: ದಶಮುಖ ಅಂಕಣ: ಬಿಡುವೆಂಬ ಬಿಡುಗಡೆಯ ಹಾದಿ!

Exit mobile version