Site icon Vistara News

ದಶಮುಖ ಅಂಕಣ: ಬೆಳಗೆಂಬ ಬೆರಗು!

winter morning

ಈ ಅಂಕಣವನ್ನು ಇಲ್ಲಿ ಆಲಿಸಿ:

https://vistaranews.com/wp-content/uploads/2023/12/WhatsApp-Audio-2023-12-05-at-11.22.25-AM.mp3

ಈ ಮಾಗಿಯ ಬೆಳಗುಗಳು (winter mornings) ಎಂದಿಗೂ ಮಾಗುವುದೇ ಇಲ್ಲ! ಕಾರಣ, ಪ್ರತಿ ಬೆಳಗ್ಗೆಯೂ ನಿದ್ದೆ ಮಾಗುವ ಮುನ್ನವೇ ಏಳಬೇಕು. ಇದರರ್ಥ ನಾವೇನು ನಸುಕಿನ ನಾಲ್ಕಕ್ಕೆ ಏಳುತ್ತೇವೆಂದಲ್ಲ, ಬೆಳಗ್ಗೆ ಏಳಕ್ಕೆ ಎದ್ದರೂ ನಿದ್ದೆ ಹರಿಯುವುದಿಲ್ಲ. ಬಲಿತು ಹಣ್ಣಾಗದ, ಅಪಕ್ವ ನಿದ್ದೆಯನ್ನು ಒದ್ದು ಏಳುವ ಸಾಹಸ ಸಣ್ಣದಲ್ಲ. ಬೆಚ್ಚನೆಯ ಹೊದಿಕೆಯನ್ನು ನಾವೇ ಅಪ್ಪಿ ಹಿಡಿದಿರುತ್ತೇವೋ, ಅದೇ ನಮ್ಮನ್ನು ಬಿಡುವುದಿಲ್ಲವೋ ಎಂಬ ಗೊಂದಲದ ನಡುವೆ ಏಳುವುದೆಂದರೆ, ನಮ್ಮ ಇಚ್ಛಾಶಕ್ತಿಯ ಪರೀಕ್ಷೆಯ ಕಾಲವೇ ತಾನೆ? ಕಿರುಚುವ ಅಲರಾಂನ ಬಾಯಿಗೆ ಬಡಿಯುವಾಗ ಮುಂಬೆಳಗೂ ಗೋಚರಿಸದಿದ್ದರೆ, ಗಂಟೆಯನ್ನು ಮತ್ಮತ್ತೆ ಪರಾಂಬರಿಸಬೇಕಾಗುತ್ತದೆ. ʻಈಗಿನ್ನೂ ನಡುರಾತ್ರಿ!ʼ ಎಂಬ ಹುಸಿ ಭಾವವನ್ನು ಕೊಡವಿಕೊಂಡು ಒಮ್ಮೆ ಕಿಟಕಿಯಾಚೆಗೆ ಹಣುಕಿದರೆ ಕಾಣುವುದು- ʻ…ಬರಿ ಬೆಳಗಲ್ಲೋ ಅಣ್ಣಾʼ!

ದಿನವೂ ಅದೇ ಬೆಳಗು, ಅದೇ ಬೈಗು… ಒಮ್ಮೆಯಾದರೂ ಸಾಕೆನಿಸಿದ್ದು ಉಂಟೇ? ನವನವೋನ್ಮೇಷಶಾಲಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಪ್ರತಿ ಋತುವಿಗೆ, ಪ್ರತಿ ದಿನಕ್ಕೆ, ಪ್ರತಿ ಸ್ಥಳಕ್ಕೆ, ಪ್ರತಿ ಜೀವಕ್ಕೆ, ಭಾವಕ್ಕೆ, ಭಕುತಿಗೆ ಪ್ರತಿಯೊಂದು ಸೂರ್ಯೋದಯವೂ (Sunrise) ಭಿನ್ನ, ಅನನ್ಯ. ಸೂರ್ಯನ ಹುಟ್ಟಿನ ಹೊರತಾಗಿ ಜಗತ್ತಿನ ಇನ್ಯಾವ ಹುಟ್ಟೂ ಈ ಪರಿಯಲ್ಲಿ ಶುದ್ಧ ಆನಂದದ ಅನುಭೂತಿಯನ್ನು ನೀಡಲಿಕ್ಕಿಲ್ಲ. ಇಷ್ಟೊಂದು ನಿತ್ಯನೂತನ ಎನಿಸಿದ ಸೃಷ್ಟಿಕ್ರಿಯೆಯೊಂದು ಕವಿಗಳ ಕಣ್ಣಿಗೆ ಗೋಚರಿಸಿದ್ದು ಹೇಗೆ (sunrise in poetry) ಎಂಬ ಸಹಜ ಕುತೂಹಲವಿದು. ಇದೇ ಹಿನ್ನೆಲೆಯಲ್ಲಿ, ಕವಿ ಕಣ್ಣಿನಲ್ಲಿ ರವಿ ಮೂಡಿದ ಬಿಂಬಗಳನ್ನು ಅರಸುತ್ತಾ ಹೊರಟಿದ್ದಾಗಿದೆ.

ಬೇಂದ್ರೆ ಕಾವ್ಯದ ಅನುಸಂಧಾನದಲ್ಲಿ ಶಬ್ದಕ್ಕೆ ಅರ್ಥಗಳನ್ನು ಹುಡುಕುವುದು ರಸಾವಿಷ್ಕಾರದ ಮಿತಿ. ವಾಚ್ಯದಿಂದ ಚಿತ್ತವೃತ್ತಿಯತ್ತ ಸಾಗಿದಾಗಲೇ ಕಾವ್ಯ ದಕ್ಕುವುದು. ಆದಾಗ್ಯೂ ಶಬ್ದಗಳಲ್ಲಿ ಹಿಡಿಯುವುದಕ್ಕೆ ಇದೊಂದು ಪ್ರಯತ್ನ. ಬೆಳಗು ಎನ್ನುವುದು ಬೇಂದ್ರೆಯವರನ್ನು ಭಾವಸಮಾಧಿಗೆ ದೂಡಿದ್ದು ಎಷ್ಟು ಬಾರಿಯೊ! ಈ ಸಮಯವು ಅವರಿಗೆ ಒಮ್ಮೆ ಮುತ್ತಿನ ನೀರಿನ ಎರಕದಂತೆ ಕಂಡರೆ, ಇನ್ನೊಮ್ಮೆ ಬೆಳಕೆಂಬ ಬೇಟೆಗಾರನಂತೆ ಕಾಣುತ್ತದೆ. ಈ ನಿತ್ಯ ನಾಟಕರಂಗಕ್ಕಾಗಿ ಅವರೊಮ್ಮೆ ʻಉಷಾಸೂಕ್ತʼವನ್ನು ಹಾಡಿದರೆ ಇನ್ನೊಮ್ಮೆ ʻಸೂರ್ಯನ ಹೊಳಿʼಯನ್ನೇ ಹರಿಸುತ್ತಾರೆ. ಅವರ ʻವಸಂತ ಮುಖʼ ಎನ್ನುವ ಕವನದಲ್ಲಿ, “ಉದಿತ ದಿನ! ಮುದಿತ ವನ/ ವಿಧವಿಧ ವಿಹಗಸ್ವನ/ ಇದುವೆ ಜೀವ, ಇದು ಜೀವನ/ ಪವನದಂತೆ ಪಾವನ” ಎಂದು ಬಣ್ಣಿಸುತ್ತಾರೆ. ಇದೀಗ ಬೆಳಕು ಒಡೆದ ಕ್ಷಣದಲ್ಲಿ ಸುತ್ತಲಿನ ವನ, ವನವಾಸಿಗಳೆಲ್ಲ ಸಚೇತನರಾಗುತ್ತಾ, ಜೀವ-ಜೀವನದ ನಡುವಿನ ಸಾಮರಸ್ಯವೆಂಬುದು ಉಷಾಕಾಲದ ಗಾಳಿಯಷ್ಟೇ ಶುದ್ಧವಾಗಿ ಭಾಸವಾಗುತ್ತಿದೆ ಅವರಿಗೆ.

ಇನ್ನೊಂದು ಕವನದಲ್ಲಿ ಬೆಳಗು- ರಾತ್ರಿಗಳ ನಡುವಿನ ಅನನ್ಯ ನಂಟು ಅವರನ್ನು ಸೆಳೆಯುತ್ತದೆ. “ಬೆಳಗು ಗಾಳಿ ತಾಕಿ ಚಳಿತು/ ಇರುಳ ಮರವು ಒಡೆದು ತಳಿತು/ ಅರುಣ ಗಂಧ ಹರಹಿ ಒಳಿತು/ ನಸುಕು ಬಂತು” ಎಂದು ಸಂಭ್ರಮಿಸುತ್ತಾರೆ. ಉದಯಕಾಲದ ವರ್ಣನೆಯನ್ನು ಹೊತ್ತ ಮತ್ತೊಂದು ಕವನದಲ್ಲಿ, “ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್‌ ಎಂದು ಬಿಟ್ಟ ಮಾರ/ ಗುಡಿಗೋಪುರಕ್ಕು ಬಲೆ ಬೀಸಿ ಬಂದ, ಅಗೊ ಬೆಳಕು ಬೇಟೆಗಾರ” ಎನ್ನುವ ಕುಶಲ ಉಪಮೆಯನ್ನು ಚಿತ್ರಿಸುತ್ತಾರೆ. “ಸೂರ್ಯನ ಹೊಳಿ” ಎನ್ನುವ ಕವನದಲ್ಲಿ ಒಡನಾಟಕ್ಕಾಗಿ ಹಂಬಲಿಸುತ್ತದೆ ಕವಿಮನ. “ಬಂದದ ಸೂರ್ಯನ ಹೊಳಿ/ ನಡೀ ಮೈತೊಳಿ, ನೀರಿನ್ಯಾಗಿಳಿ/ ಬಾ ಗೆಣೆಯಾ, ಯಾಕ ಮೈಛಳೀ” ಎಂದು ಬಿಸಿಲಲ್ಲೇ ತೋಯಿಸಿಬಿಡುತ್ತಾರೆ. ಅವರ ಪಾಲಿಗೆ ಬೆಳಗೆಂದರೆ ಕೇವಲ ದೃಶ್ಯವೈಭವವಲ್ಲ, ಇಡೀ ಲೋಕವನ್ನು ಸಚೇತನಗೊಳಿಸುವ ಕ್ರಿಯೆ. ಹಾಗಾಗಿಯೇ ಬೆಳಗೆನ್ನುತ್ತಿದ್ದಂತೆ ಅಷ್ಟೊಂದು ವೈವಿಧ್ಯಮಯ ಭಾವಗಳ ಸಂಚಾರ ಅವರ ಕವನಗಳಲ್ಲಿ. “ಅರಿಯದು ಆಳವು ತಿಳಿಯದು ಮನವು/ ಕಾಣದೋ ಬಣ್ಣಾ/ ಕಣ್ಣಿಗೆ ಕಾಣದೋ ಬಣ್ಣಾ” ಎಂದು ಬೆಳಗಿನ ಬಣ್ಣವನ್ನು ಕಾಣಲೆಂದು ಭಾವತೀವ್ರತೆಯಿಂದ ಕಣ್ಮುಚ್ಚುತ್ತಾರೆ.

ಕುವೆಂಪು ಅವರ ಕಾವ್ಯಗಳಲ್ಲಿ ರವಿದರ್ಶನ ಹೇಗಿದೆ ಎಂಬ ಬಗ್ಗೆ ಪಿಎಚ್‌ಡಿಗಳನ್ನು ಮಾಡಿದ್ದರೆ ಅಚ್ಚರಿಯಿಲ್ಲ. ʻಉದಯರವಿʼ ಎನ್ನುವ ಅವರ ಮನೆಯ ಹೆಸರೇ ಸೂರ್ಯೋದಯದ ಬಗೆಗೆ ಅವರಿಗಿದ್ದ ಅಸೀಮ ಪ್ರೀತಿಯನ್ನು ಸೂಚಿಸುತ್ತದೆ. ಪ್ರತಿಯೊಂದು ಮಾಸ, ಋತುಗಳಲ್ಲಿ ʻಶಿಶುರವಿʼಯ ಬೆಳವಣಿಗೆ ಚೋದ್ಯಗಳನ್ನು ಹೃದ್ಯವಾಗಿ ಚಿತ್ರಿಸುತ್ತಾರವರು. ಅವರ ʻಶರತ್ಕಾಲದ ಸೂರ್ಯೋದಯʼ ಎಂಬ ಕವನದಲ್ಲಿ, “ಹಚ್ಚನೆ ಪಚ್ಚನೆ ವೇದಿಕೆಯಲ್ಲಿ/ ಸಾಸಿರಗಟ್ಟಲೆ ಮುತ್ತನು ಚೆಲ್ಲಿ/ ರನ್ನದ ಕಿರುಹಣತೆಗಳಲ್ಲಿ/ ಶ್ಯಾಮಲ ತೈಲದಿ ಹೊನ್ನಿನ ಬತ್ತಿ/ ಕಾಮನಬಿಲ್ಲಿನ ಬೆಂಕಿಯು ಹೊತ್ತಿ/ ಸೊಡರುರಿಯುತ್ತಿದೆ ಅಲ್ಲಲ್ಲಿ!” ಎಂದು ಹುಲ್ಲಿನ ತಲೆಯ ಇಬ್ಬನಿಯ ಮೇಲೆ ಶಿಶುರವಿಯ ಕಿರಣಗಳು ಮೂಡಿಸಿದ ಕಾಮನಬಿಲ್ಲಿನ ಸೊಡರುಗಳ ಅನೂಹ್ಯ ವರ್ಣನೆಯನ್ನು ಕಟ್ಟಿಕೊಡುತ್ತಾರೆ.

ಅವರ ಕಾವ್ಯ ಪ್ರಪಂಚದಲ್ಲಿ ಸುಮ್ಮನೊಂದು ಸುತ್ತು ಹೊಡೆದರೆ ಹೆಜ್ಜೆಹೆಜ್ಜೆಗೆ ಬಾಲರವಿ ಎದುರಾಗುತ್ತಾನೆ. ʻಬಾ ಫಾಲ್ಗುಣ ರವಿ ದರ್ಶನಕೆ, ಆನಂದಮಯ ಈ ಜಗಹೃದಯ, ನೋಡು ತಳಿತ ತಳಿರ ನಡುವೆ ಅರುಣ ಕಿರಣ ಸರಿಯ ಸುರಿಸಿ, ಈ ಸುಂದರ ಪ್ರಾತಃಕಾಲದಿ, ಏನಿದೀ ದಿವ್ಯ ದೃಶ್ಯʼ ಎಂದು ಜಗದ ಸುತ್ತುಗಟ್ಟಿ ಪ್ರಾತಃಕಾಲವನ್ನು ಬಣ್ಣಿಸುತ್ತಾರವರು. ʻಉಷೆಯು ನಿಶೆಯ ಚುಂಬಿಸುವʼ ಆ ಘಳಿಗೆಯಲ್ಲಿ, “ಉದಯಿಸಿ ಬರೆ ಬಾಲರವಿ, ಉದಯಗಿರಿ ಲಲಾಟದಿ/ ಧ್ಯಾನಲೀನನಾಗೆ ಕವಿ ಶೈಲ ಶಿಲಾ ಪೀಠದಿ” ಎಂದು ಕವಿಮನ ಧ್ಯಾನಕ್ಕೆ ಜಾರುತ್ತದೆ. ʻಪ್ರಾತಃಕಾಲʼ ಎಂಬ ಕವಿತೆಯಲ್ಲಿ, “ಆಹ! ನಾಕವೆ ನಮ್ಮ ಲೋಕಕೆ ಕಳಚಿ ಬಿದ್ದಿದೆ ಬನ್ನಿರಿ! ತುಂಬಿಕೊಳ್ಳಲು ನಿಮ್ಮ ಹೃದಯದ ಹೊನ್ನ ಬಟ್ಟಲ ತನ್ನಿರಿ” ಎಂದು ಸಂಭ್ರಮಿಸುತ್ತಾರೆ.

ಭಾದ್ರಪದದ ಸುಪ್ರಭಾತ, ಫಾಲ್ಗುಣ ಮಾಸದ ಸೂರ್ಯೋದಯ, ಶರತ್ಕಾಲದ ಸೂರ್ಯೋದಯ, ಆಷಾಢ ಸುಪ್ರಭಾತ, ವೈಶಾಖದ ಸೂರ್ಯೋದಯ- ಹೀಗೆ ಕಾಲಕಾಲಕ್ಕೆ ಉದಯರವಿಯ ಸೌಂದರ್ಯವನ್ನವರು ವರ್ಣಿಸಿದ್ದಾರೆ. ಎಲ್ಲಿಯವರೆಗೆಂದರೆ ರವಿಯನ್ನು ತನ್ನ ಕೆಳೆಯನಂತೆ ಕಂಡು ಕಾಲೆಳೆಯುವ ಸಾಲುಗಳೂ ಇವೆ. “ಬರಿ ಬಣಗು ಬ್ರಹ್ಮಚಾರಿಯೊ ನೀನು ಹಾಗಿದ್ದರೆ/ ಬುದ್ಧಿ ಹೇಳುವೆ ಕೇಳು, ಬೇಗನೆ ಮದುವೆಯಾಗು/ ಉಷೆಯ ಊರೊಳು ಇನಿತು ತಳುವಿ/ ಬರಬಹುದಂತೆ” ಎಂದು ಸೂರ್ಯನನ್ನು ಛೇಡಿಸುತ್ತಾರೆ.

ಜಿ.ಎಸ್.‌ ಶಿವರುದ್ರಪ್ಪನವರ ಕವಿತೆಯಲ್ಲಿ ರವಿ ಮತ್ತು ಕವಿಯ ನಡುವಿಗೊಂದು ಸುಂದರ ಆಟ ನಡೆಯುತ್ತಿದೆ. “ಯಾರವರು ಯಾರವರು ಯಾರು?/ ಬಾಗಿಲಲಿ ಬಂದವರು ನಿಂದವರು ಯಾರು? ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು? ತುಂಬಿದ್ದ ಕತ್ತಲನು ಕಳೆದವರು ಯಾರು?” ಎಂದು ಬಾಗಿಲಾಚೆಗೆ ಇರುವವನ ಬಗ್ಗೆ ಗೊತ್ತಿದ್ದೂ ಸೋಜಿಗ ತೋರುತ್ತಾರೆ. ಅವರ ಇನ್ನೊಂದು ಕವನದಲ್ಲಿ, “ಬಾಂದಳ ಚುಂಬಿತ ಶುಭ್ರ ಹಿಮಾವೃತ/ ತುಂಗ ಶೃಂಗದಲಿ ಗೃಹವಾಸಿ/ ದೀನ ಅನಾಥರ ದುಃಖಿ ದರಿದ್ರರ/ ಮುರುಕು ಗುಡಿಸಲಲಿ ಉಪವಾಸಿ!” ಎನ್ನುತ್ತ ಸೂರ್ಯನಿಗೆ ಉಪ್ಪರಿಗೆ ಮನೆ, ಮುರುಕು ಗುಡಿಸಲು- ಎಲ್ಲ ಒಂದೇ ಎಂಬ ಸತ್ಯವನ್ನು ಬಿಚ್ಚಿಡುತ್ತಾರೆ. ಇನ್ನು, ಮಾಸ್ತಿ ವೆಂಕಟೇಶ ಅಯ್ಯಂಗಾರರ ನೇಸರನೂ ನಾಡನ್ನು ಬೆಳಗಿಸಲೆಂದೇ ಬಂದವ. “ಮೂಡಣ ಬೈಲಿಂದ ಮೇಲಕ್ಕೆ ಹಾರಿ/ ದೂರದ ಮಲೆಯ ತಲೆಯನೆ ಏರಿ” ಇರುಳನ್ನು ಹೊರಳಿಸುವವ.

ಇದನ್ನೂ ಓದಿ: ದಶಮುಖ ಅಂಕಣ: ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ!

ನಮ್ಮ ಇಳೆವೆಣ್ಣಿನೊಂದಿಗೆ ನೇಸರನ ಪ್ರೇಮದಾಟ ಹೊಸದೇನಲ್ಲ. ಯಾವುದೇ ಬಂಧನಗಳಿಗೆ ಸಿಲುಕದೆಯೂ ಅವಿಚ್ಛಿನ್ನವಾಗಿ ಸಾಗಿಬಂದ ಅನಂತ ಪ್ರಣಯಿಗಳಿವರು. ಹಸಿರು ಸೀರೆಗೊಪ್ಪುವ ಹೂ ಕುಬಸವನ್ನು ತೊಟ್ಟು ಇಬ್ಬನಿಯ ಮಾಲೆ ಧರಿಸಿ ಕಾದವಳ ನಿರೀಕ್ಷೆ ಬಿ.ಆರ್.‌ ಲಕ್ಷ್ಮಣರಾಯರ ಕವನದಲ್ಲಿ ಹುಸಿ ಹೋಗಲಿಲ್ಲ. “ಕಂಡೊಡನೆ ನೇಸರನ ಕೆಂಪಾದವು ಕೆನ್ನೆ/ ಪುಲಕಿಸಿ ನಸು ಬಿಸಿಯೇರಿತು ಒಡಲು/ ಅವನು ಸೋಕಿದೊಡನೆ/ ನಾಚಿಕೆಯ ಮಂಜುತೆರೆ ಸರಿಸುತ್ತ ಪ್ರಿಯತಮನು/ ಇಳೆಯ ಚುಂಬಿಸಿದನು!” ಎಂಬಂತೆ ಕಾಣುತ್ತದೆ ಕವಿ ಕಣ್ಣಿಗೆ.

ಸೂರ್ಯೋದಯದ ರಂಗಿನಷ್ಟೇ ವೈವಿಧ್ಯಮಯ ಅದರ ವರ್ಣನೆಗಳು. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ʻಬಾ ಬಾ ಓ ಬೆಳಕೇ, ಕರುಣಿಸಿ ಈ ನೆಲಕೆʼ ಕವನದಲ್ಲಿ ಸೂರ್ಯನೆಂಬಾತ ಗೆಳೆಯ, ಪ್ರೇಮಿಯೆಲ್ಲಾ ಅಲ್ಲ. “ವಿಶ್ವದೆದೆಯ ಪದಕವೆ/ ಬಾಂದಳದ ತಿಲಕವೆ/ ನಿನ್ನೊಳಗಿರುವ ಸತ್ಯ ತೋರು/ ಬಂಗಾರದ ಫಲಕವೇ” ಎಂದು ವಿಶ್ವಕ್ಕೆಲ್ಲಾ ಸತ್ಯದರ್ಶನ ಮಾಡಿಸುವವನಂತೆ ಗೋಚರಿಸುತ್ತಾನೆ. ʻಚೆಲುವೆ ಯಾರೊ ನನ್ನ ತಾಯಿಯಂತೆʼ ಎಂಬ ಇನ್ನೊಂದು ಕವನದಲ್ಲಿ, ಉದಯರವಿಯು ಕೆಂಪಗೆ, ದುಂಡಗೆ ಭೂತಾಯಿಯ ಹಣೆಗಿಟ್ಟ ಬೊಟ್ಟಿನಂತೆ ಕಾಣುತ್ತಾನೆ ಕವಿಗೆ.

ಪ್ರಕೃತಿಯ ಆರಾಧನೆಯೇ ಪರಮನ ಆರಾಧನೆ ಎಂಬ ಮಾತಿನಂತೆ, ಮುಂಜಾನೆಯ ಮೆಲುಗಾಳಿಯಲ್ಲಿ, ಎಳೆಕಿರಣದ ಬಿಸುಪಿನಲ್ಲಿ, ಇಬ್ಬನಿಯ ತಬ್ಬುಗೆಯಲ್ಲೇ ಅನಂತನನ್ನು ಅರಸಿದವರು ನಮ್ಮ ಕವಿಗಳು. ಮುಂಬೆಳಗಿನ ಹೊಂಬಣ್ಣದ ಎಳೆಯೊಂದೇ ಸಾಕು, ಅವರ ಮಾನಸ ಸರಸಿಯಲ್ಲಿ ತಿರೆ ಸಗ್ಗವಾಗುವುದಕ್ಕೆ; ಲೋಕ ಮೀರಿದ ಮೋಹದಲ್ಲಿ ಆ ನಾಕವನ್ನೂ ಮರೆಯುವುದಕ್ಕೆ! ಹಾಗಾಗಿ ಮಾಗಿಯ ಚಳಿ ಇದ್ದರಿರಲಿ, ಏಳಿ ಬೇಗ, ಕಾಣಿ ಬೆಳಗೆಂಬ ಬೆರಗ!

ಇದನ್ನೂ ಓದಿ: ದಶಮುಖ ಅಂಕಣ: ಶುಭಾಶಯ ಪತ್ರಗಳೆಂಬ ಚಿತ್ರ-ಕಾವ್ಯಗಳು

Exit mobile version