ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಸೆಪ್ಟೆಂಬರ್ 11ರ ದಾಳಿ ನಡೆದ ಇಪ್ಪತ್ತು ವರ್ಷಗಳ ಬಳಿಕ, ಅಮೆರಿಕಾ ಕೊನೆಗೂ ಆ ದಾಳಿಯ ಹಿಂದಿನ ರೂವಾರಿ, ಅಲ್ ಖೈದಾ ಮುಖಂಡ, ಐಮನ್ ಅಲ್ ಜವಾಹಿರಿಯನ್ನು ಹೊಡೆದುರುಳಿಸಿದೆ. ಅಫ್ಘಾನಿಸ್ತಾನದ ಕಾಬೂಲಿನಲ್ಲಿನ ಸುರಕ್ಷಿತ ತಾಣವೊಂದರಲ್ಲಿ ಸುಖವಾಗಿದ್ದ ಜವಾಹಿರಿಯನ್ನು ಅಮೆರಿಕಾ ತಾನು ಸಂಪಾದಿಸಿರುವ ಕೌಂಟರ್ ಟೆರರಿಸಂ ಮತ್ತು ನಗರ ಪ್ರದೇಶಗಳಲ್ಲಿ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಪ್ರಯೋಗಿಸಿ ಸಂಹರಿಸಿತು. ಜವಾಹಿರಿಗೆ ಸಾವಿನ ಸಂದೇಶ ಹೊತ್ತೊಯ್ದಿದ್ದು ಅಮೆರಿಕಾದ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿ. ಸುತ್ತಮುತ್ತಲೂ ಅಮಾಯಕ ಜನರಿರುವ ಪ್ರದೇಶದಲ್ಲಿ ಅಮೆರಿಕಾ ಅದು ಯಾಕೆ ಕ್ಷಿಪಣಿ ಪ್ರಯೋಗ ನಡೆಸಿತು ಎಂದು ಓದುಗರಿಗೆ ಆಶ್ಚರ್ಯ ಮೂಡದಿರದು.
ಹೆಲ್‌ಫೈರ್ ಆರ್9ಎಕ್ಸ್ ಯಾಕೆ ನಿಂಜಾ ಬಾಂಬ್ ಎನಿಸಿದೆ?
1980ರ ದಶಕದಲ್ಲಿ ಜಪಾನಿನಲ್ಲಿ ಒಂದು ಅಡುಗೆಮನೆಯ ಚಾಕುವಿನ ಜಾಹೀರಾತು ಪ್ರಸಾರವಾಗುತ್ತಿತ್ತು. ಅದರಲ್ಲಿ ಆ ಚಾಕು ಅಲ್ಯೂಮಿನಿಯಂ ಕ್ಯಾನ್‌ಗಳನ್ನೂ ಸುಲಭವಾಗಿ ಕತ್ತರಿಸಿ, ಬಳಿಕವೂ ಹರಿತವಾಗಿ ಉಳಿಯುತ್ತಿತ್ತು. ಆದ್ದರಿಂದ ಹೆಲ್‌ಫೈರ್ ಕ್ಷಿಪಣಿಯೂ ಸಹ ಆ ಜಾಹೀರಾತಿನಂತೆ “ಫ್ಲೈಯಿಂಗ್ ಜಿನ್ಸು” ಎಂದೇ ಕರೆಯಲ್ಪಡುತ್ತಿತ್ತು. ಇದು ಸಿಡಿತಲೆಯನ್ನು ಹೊತ್ತೊಯ್ಯುವುದಿಲ್ಲ. ಬದಲಿಗೆ ಶರವೇಗದಲ್ಲಿ ಶತ್ರುವನ್ನು ಸೀಳಬಲ್ಲ ಆರು 18 ಇಂಚಿನ ಬ್ಲೇಡ್‌ಗಳನ್ನು ಉಪಯೋಗಿಸಿ, ಗುರಿಯಾಗಿದ್ದ ಶತ್ರುವನ್ನು ಕತ್ತರಿಸಿ ಹಾಕುತ್ತದೆ. ಈ ಕುರಿತು ಅತ್ಯಂತ ಕಡಿಮೆ ಮಾಹಿತಿ ಲಭ್ಯವಾಗಿದ್ದರೂ, ಈ ಬ್ಲೇಡ್‌ಗಳು ಹೈ ಕಾರ್ಬನ್ 1060 ಖಡ್ಗದ ಸ್ಟೀಲ್‌ನಿಂದ ಮಾಡಲ್ಪಟ್ಟಿವೆ ಎನ್ನಲಾಗಿದೆ. ಸ್ಟೀಲ್‌ಗಿಂತ ಟೈಟಾನಿಯಂ ಹೆಚ್ಚು ಶಕ್ತಿಶಾಲಿ ಎಂಬ ಕಾರಣಕ್ಕೆ ಅದನ್ನು ಉಪಯೋಗಿಸಿರಬಹುದೆಂದು ಅಭಿಪ್ರಾಯಗಳು ಇರಬಹುದು. ಆದರೆ ಟೈಟಾನಿಯಂ ಸ್ಟೀಲ್‌ಗಿಂತ ಮೃದುವಾಗಿದ್ದು, ಹೆಚ್ಚು ಪರಿಣಾಮಕಾರಿ ಎನ್ನಲು ಸಾಧ್ಯವಿಲ್ಲ.
ಆದರೆ ಇನ್ನೊಂದೆಡೆ ಕ್ಷಿಪಣಿಯ ಮುನ್ನುಗ್ಗುವ ರೆಕ್ಕೆಗಳು ಹೆಚ್ಚಿನ ಸಾಂದ್ರತೆ ಹೊಂದಿರುವ ಅಲಾಯ್ ಎನ್ನಲಾಗುತ್ತದೆ. ಇದರ ತಳಭಾಗ ಕಡಿಮೆ ತೂಕ ಹೊಂದಿರುವ ಸಂಯೋಜಿತ ವಸ್ತುವಿನಿಂದ ಮಾಡಿರಬಹುದು. ಈ ಸಂಯೋಜಿತ ವಸ್ತು ಟಂಗ್‌ಸ್ಟನ್ ಆಗಿರಲೂಬಹುದು. ಅದರೊಡನೆ ಯುರೇನಿಯಂ ಸಹ ಒಂದು ಆಯ್ಕೆಯಾಗಿದ್ದರೂ, ಈ ಆಯುಧದ ಗುರಿ ಕನಿಷ್ಠ ಪ್ರಮಾಣದ ನಾಶವಾಗಿರುವುದರಿಂದ ಯುರೇನಿಯಮ್ಮಿನ ಪ್ರಭಾವ ಮತ್ತು ಚಂಚಲತೆ ಅದನ್ನು ಸೂಕ್ತವಲ್ಲ ಎಂದು ನಿರ್ಧರಿಸುವಂತೆ ಮಾಡುತ್ತದೆ.
ಮಿಲಿಟರಿ ಪರಿಭಾಷೆಯಲ್ಲಿ ಹೆಲ್‌ಫೈರ್ ಕ್ಷಿಪಣಿ ಎಜಿಎಂ-114 ಆರ್9ಎಕ್ಸ್ ಎಂದು ಕರೆಯಲ್ಪಡುತ್ತದೆ. ಇದು ಅಮೆರಿಕಾ ನಿರ್ಮಿತ ಕ್ಷಿಪಣಿಯಾಗಿದ್ದು, ವ್ಯಕ್ತಿಯ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ಸುತ್ತಮುತ್ತಲಿನ ವ್ಯಕ್ತಿಗಳು ಮತ್ತು ಆಸ್ತಿಪಾಸ್ತಿಗಳಿಗೆ ಯಾವ ಹಾನಿಯೂ ಎದುರಾಗುವುದಿಲ್ಲ. ಇದು ಚಲನಶಕ್ತಿಯನ್ನು ಉಪಯೋಗಿಸಿ, ಅತ್ಯಂತ ವೇಗವಾಗಿ ದಪ್ಪನೆಯ ಸ್ಟೀಲ್ ಶೀಟ್‌ಗಳನ್ನೂ ಕತ್ತರಿಸಿ, ಗುರಿಯ ಮೇಲೆ ದಾಳಿ ನಡೆಸುತ್ತದೆ. ಈ ಸಂದರ್ಭದಲ್ಲಿ ಬೇರಾವ ವ್ಯಕ್ತಿಗಾಗಲಿ, ವಸ್ತುಗಳಿಗಾಗಲಿ, ಗುರಿ ಇರುವ ಕಟ್ಟಡಕ್ಕಾಗಲಿ ಅದು ಹಾನಿಯನ್ನೂ ಉಂಟುಮಾಡುವುದಿಲ್ಲ. ಕ್ಷಿಪಣಿಯಿಂದ ಹೊರಬರುವ ಬ್ಲೇಡ್‌ಗಳು ಕ್ಷಿಪ್ರವಾಗಿ ನಿಗದಿತ ಗುರಿಯ ಮೇಲೆ ದಾಳಿ ನಡೆಸುತ್ತವೆ. ಆದರೆ ಸಿಡಿತಲೆಯನ್ನು ಹೊಂದಿರುವ ಕ್ಷಿಪಣಿಯಾದರೆ ಗುರಿ ಇರುವ ಕಟ್ಟಡವನ್ನೂ ಧ್ವಂಸಗೊಳಿಸಬಲ್ಲದು.
ಇದನ್ನೂ ಓದಿ: ಸಮರಾಂಕಣ ಅಂಕಣ | ರಣಭಯಂಕರ Rafale Jet ಅಪಾರ ಸಾಮರ್ಥ್ಯದ ಗುಟ್ಟೇನು?
ಲಾಕ್‌ಹೀಡ್ ಮಾರ್ಟಿನ್ ಮತ್ತು ನಾರ್ತ್ರೋಪ್ ಗ್ರುಮ್ಮನ್ ಸಂಸ್ಥೆಗಳ ಸಹಯೋಗದಿಂದ ನಿರ್ಮಿಸಲಾಗಿರುವ ಈ ಹೆಲ್‌ಫೈರ್ ಕ್ಷಿಪಣಿಯಲ್ಲಿ ನಿಂಜಾ ಹೊರತುಪಡಿಸಿ, ಲಾಂಗ್ ಬೋ ಹಾಗೂ ರೋಮಿಯೋ ಎಂಬ ಆವೃತ್ತಿಗಳೂ ಸೇರಿವೆ.
ಸ್ಟೆಲ್ತ್ ಕ್ಷಿಪಣಿ ಹೇಗೆ ಸಾಧ್ಯವಾಯಿತು?
ಅಮೆರಿಕಾ ಅಧ್ಯಕ್ಷರಾಗಿದ್ದ ಒಬಾಮಾ ಅವರ ಅವಧಿಯಲ್ಲಿ, ಅಮೆರಿಕಾ ತನ್ನ ಕಾರ್ಯಾಚರಣೆಗಳ ಸಂದರ್ಭದಲ್ಲಿ ಇರಾಕ್, ಸಿರಿಯಾ, ಸೊಮಾಲಿಯಾ, ಯೆಮೆನ್, ಆಫ್ಘಾನಿಸ್ತಾನ, ಪಾಕಿಸ್ತಾನ ಮತ್ತಿತರ ಪ್ರದೇಶಗಳಲ್ಲಿ ನಾಗರಿಕರ ಸಾವು ನೋವುಗಳನ್ನು ತಪ್ಪಿಸುವ ಉದ್ದೇಶದಿಂದ ಈ ಕ್ಷಿಪಣಿಯ ನಿರ್ಮಾಣ ಕಾರ್ಯಕ್ಕೆ ಕೈ ಇಟ್ಟಿತು. ಇದು ಒಂದು ಮಾನವೀಯ ಮೌಲ್ಯಗಳ ಹಾಗೂ ಕಾನೂನು ಆಧಾರಿತ ಕ್ರಮವಾಗಿದ್ದು, ಇಂತಹ ಕಾರ್ಯಾಚರಣೆಗೆ ಅಮೆರಿಕಾಗೆ ಬೆಂಬಲವೂ ಲಭ್ಯವಾಗುತ್ತಿತ್ತು.
ಅಮೆರಿಕಾದ ಕ್ಷಿಪಣಿ ದಾಳಿಯಿಂದ ಬಚಾವಾಗಲು ಉಗ್ರಗಾಮಿಗಳೂ ಸಹ ಉಪಾಯಗಳನ್ನು ಯೋಚಿಸಿ, ಮಹಿಳೆಯರು ಮತ್ತು ಮಕ್ಕಳೊಡನೆ ಬಚ್ಚಿಟ್ಟುಕೊಳ್ಳುತ್ತಿದ್ದರು. ಆಗ ಅವರು ಅಮೆರಿಕಾ ದಾಳಿಗೆ ಅವಕಾಶ ಇಲ್ಲದಂತೆ ಮಾಡಿಬಿಡುತ್ತಿದ್ದರು. ಬೇರೆ ಕ್ಷಿಪಣಿಗಳ ದಾಳಿ ನಡೆದರೆ, ಆ ಸ್ಥಳದಲ್ಲಿ ಬೆಂಕಿ, ನಾಶವಾದ ವಾಹನಗಳು, ಚದುರಿ ಬಿದ್ದ ಕಟ್ಟಡಗಳು ಇರುವಂತೆ ಹೆಲ್‌ಫೈರ್ ಕ್ಷಿಪಣಿ ದಾಳಿ ನಡೆಸಿದ ಸಂದರ್ಭದಲ್ಲಿ ಅಂತಹ ಯಾವ ಕುರುಹೂ ಉಳಿದಿರುವುದಿಲ್ಲ. ಬಹುತೇಕ ಐದು ಅಡಿಗಳ ಉದ್ದವಿರುವ, ನೂರು ಪೌಂಡ್‌ಗಿಂತ ಕೊಂಚ ತೂಕವಿರುವ ಆರ್9ಎಕ್ಸ್ ಕ್ಷಿಪಣಿ ತಾನು ದಾಳಿ ನಡೆಸಿದ್ದಕ್ಕೆ ಯಾವ ಸಾಕ್ಷಿಯನ್ನೂ ಉಳಿಸುವುದಿಲ್ಲ.
ವರದಿಗಳ ಪ್ರಕಾರ, 2017ರಲ್ಲಿ ಅಮೆರಿಕಾ ಸೇನೆ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿಯನ್ನು ಸಿರಿಯಾದಲ್ಲಿ ಇನ್ನೊಬ್ಬ ಪ್ರಮುಖ ಅಲ್ ಖೈದಾ ಉಗ್ರಗಾಮಿ, ಅಬು ಹನಿ ಅಲ್ ಮಸ್ರಿಯನ್ನು ಸಂಹರಿಸಲು ಉಪಯೋಗಿಸಿತ್ತು. ಮಸ್ರಿಯ ಸಾವಿನ ನಂತರ ಪ್ರಕಟಗೊಂಡ ಫೋಟೋಗಳಲ್ಲಿ ಅವನು ಪ್ರಯಾಣಿಸುತ್ತಿದ್ದ ಕಾರಿನ ಮೇಲ್ಭಾಗದಲ್ಲಿ ಕೊರೆದಿದ್ದ ದೊಡ್ಡದಾದ ಒಂದು ತೂತು ಕಾಣಿಸಿಕೊಂಡಿತ್ತು. ಅಲ್ಲಿ ಏನೋ ಸ್ಫೋಟ ನಡೆದಿತ್ತು ಎನ್ನಲು ಯಾವ ಸುಟ್ಟ ಗುರುತುಗಳೂ ಇರಲಿಲ್ಲ. ಕಾರಿನ ಮುಂಭಾಗದ ಗಾಜು ಬಿರುಕು ಬಿಟ್ಟಿದ್ದರೂ, ಅದರ ವೈಪರ್ ಇನ್ನೂ ಮೊದಲಿದ್ದಲ್ಲೇ ಇತ್ತು.
ಇದನ್ನೂ ಓದಿ: ಸಮರಾಂಕಣ ಅಂಕಣ | Iran drones: ಇರಾನನ್ನು ಡ್ರೋನ್ ಸೂಪರ್ ಪವರ್ ಅನ್ನುತ್ತಾರೆ ಯಾಕೆ?
ಕನಿಷ್ಠ ಪಕ್ಷ ಥಿಯರಿಯಲ್ಲಾದರೂ ಈ ಆಯುಧ “ರೈಟ್ ಸೀಟ್, ಲೆಫ್ಟ್ ಸೀಟ್” ಸಮಸ್ಯೆ, ಅಂದರೆ ಚಲಿಸುವ ಕಾರಿನಲ್ಲಿ ಚಾಲಕನ ಬದಲು ಪ್ರಯಾಣಿಕರ ಆಸನದಲ್ಲಿ ಕುಳಿತವರ ಮೇಲೆ ದಾಳಿ ನಡೆಸುವ ಸಂಭಾವ್ಯತೆಗೆ ಉತ್ತರ ನೀಡಿದೆ. ಹೆಲ್‌ಫೈರ್ ಕ್ಷಿಪಣಿಯನ್ನು ಸೀಕ್ರೆಟ್ ವೆಪನ್ ಎಂದೂ ಕರೆಯಲಾಗುತ್ತದೆ. ಇದನ್ನು ಉನ್ನತ ಮಟ್ಟದ ಗುರಿಗಳ ಮೇಲೆ ದಾಳಿ ನಡೆಸುವುದಕ್ಕಾಗಿ ಇಡಲಾಗಿದೆ. 2011ರ ಬಳಿಕ, ಈ ಆಯುಧ ಬೆರಳೆಣಿಕೆಯಷ್ಟು ಸಲ ಮಾತ್ರವೇ ಬಳಸಲ್ಪಟ್ಟಿದೆ.
ಅಂಕಣಕಾರರ ಪರಿಚಯ: ಗಿರೀಶ್ ಲಿಂಗಣ್ಣ ಅವರು ಎಡಿಡಿ ಎಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಇಂಡೋ – ಜರ್ಮನ್ ಸಹಯೋಗದ ಸಂಸ್ಥೆ) ನಿರ್ದೇಶಕರಾಗಿದ್ದಾರೆ. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಪ್ರಮುಖ ವಿಶ್ಲೇಷಕರಾಗಿದ್ದಾರೆ. ಅವರ ಲೇಖನಗಳು ಅಂತಾರಾಷ್ಟ್ರೀಯ, ರಾಷ್ಟ್ರ ಹಾಗೂ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗುತ್ತಿವೆ.