:: ರಾಜೀವ್ ಹೆಗಡೆ
ನನ್ನ ಆತ್ಮೀಯರೊಬ್ಬರು ಮೂರು ವರ್ಷಗಳ ಹಿಂದೆ ಡೀಪ್ ಫೇಕ್ ವಿಡಿಯೋ (Deep fake video) ಹಾಗೂ ಆ್ಯಪ್ ಬಗ್ಗೆ ಮಾತನಾಡಿದ್ದರು. ಚೀನಾವು ಇಂತಹದೊಂದು ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿದೆ. ಒಂದೊಮ್ಮೆ ಈ ಆ್ಯಪ್ ಜನಸಾಮಾನ್ಯರು ಹಾಗೂ ಸಮಾಜ ಘಾತುಕ ಶಕ್ತಿಗಳಿಗೆ ಸಿಕ್ಕರೆ, ಯಾವುದೇ ದೇಶದ ವಿರುದ್ಧ ಯುದ್ಧ ಮಾಡುವ ಅಗತ್ಯವಿಲ್ಲ, ಇದೊಂದು ಸಾಕಾಗುತ್ತದೆ ಎಂದಿದ್ದರು. ಕಳೆದ ಕೆಲ ತಿಂಗಳಿಂದ ಅದರ ಟೀಸರ್‌ನ್ನು ನಾವು ನಮ್ಮ ದೇಶದಲ್ಲಿ ನೋಡುತ್ತಿದ್ದೇವೆ.
ಕೆಲವು ವಾರಗಳ ಹಿಂದೆ ಹಿಂದಿ ನಟಿ ಊರ್ವಶಿಯ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಇದಾದ ಬಳಿಕ ರಶ್ಮಿಕಾ (Rashmika mandanna) ವಿಡಿಯೋ ಈಗ ಸದ್ದು ಮಾಡುತ್ತಿದ್ದೆ. ನಾನು ಪರಿಶೀಲಿಸಿದಂತೆ ಸಾಕಷ್ಟು ಸೋಷಿಯಲ್ ಮೀಡಿಯಾ (Social media) ಇನ್‌ಫ್ಲ್ಯೂಯನ್ಸರ್‌ಗಳ ವಿಡಿಯೋ ಕೂಡ ಅಪ್‌ಲೋಡ್ ಮಾಡಲಾಗಿದೆ. ಇವೆಲ್ಲ ಡೀಪ್ ಫೇಕ್ ಎನ್ನುವ ಡಿಜಿಟಲ್ ಭಯೋತ್ಪಾದನೆಯ (Digital terrorism) ಟೀಸರ್‌ಗಳು. ಈ ವಿಡಿಯೋಗಳು ಶೀಘ್ರದಲ್ಲೇ ನಮ್ಮ-ನಿಮ್ಮ ಮನೆಯ ಬಾಗಿಲಿಗೂ ಬರಬಹುದು, ಹುಷಾರಾಗಿರಿ.
ಭಾರತದಂಥ ಮಡಿವಂತಿಕೆ ಹಾಗೂ ಗೌರವಯುತ ದೇಶದಲ್ಲಿ ಈ ಡೀಪ್ ಫೇಕ್ ವಿಡಿಯೋಗಳು ಸಮಾಜವನ್ನು ಅಲ್ಲೋಲ-ಕಲ್ಲೋಲ ಮಾಡಬಹುದು. ಅದೆಷ್ಟೋ ಅಮಾಯಕರ ಜೀವ ತೆಗೆಯಬಹುದು. ಏಕೆಂದರೆ ನಮ್ಮ ದೇಶದಲ್ಲಿ ಎರಡು ವರ್ಗವಿದೆ. ಮೊದಲನೆಯದು ಮರ್ಯಾದೆಗೆ ಅಂಜುವವರು. ಇನ್ನೊಂದು ವರ್ಗವು ಸತ್ಯಾಸತ್ಯತೆಯನ್ನು ಪರಿಶೀಲಿಸಿದೇ ʼಲೇಬಲ್ʼ ಕಟ್ಟುತ್ತದೆ. ಈ ಕಾರಣದಿಂದ ಭವಿಷ್ಯದಲ್ಲಿ ಯಾರಿಗಾದರೂ ʼಹಣೆಪಟ್ಟಿʼ ಕಟ್ಟಿ ವಿಡಿಯೋ ಹರಿಬಿಡುವುದು ದೊಡ್ಡ ದಂಧೆ ಆಗಬಹುದು. ಈ ಸಾಮಾಜಿಕ ಜಾಲತಾಣ ಎಷ್ಟು ಕ್ರೂರವೆಂದರೆ ಸುಳ್ಳೆಂದು ಗೊತ್ತಿದ್ದರೂ, ಬೇರೆಯವರ ನೋವನ್ನು ನೋಡಿ ಮಜಾ ತೆಗೆದುಕೊಳ್ಳುತ್ತದೆ.
ಇದರ ಜತೆಗೆ ನಿಮಗೆ ಬೇಕಾದ ಚಾಟ್‌ಗಳನ್ನು ಕ್ರಿಯೇಟ್ ಮಾಡುವ ವೆಬ್‌ಸೈಟ್ ಹಾಗೂ ಇತರ ಟೂಲ್‌ಗಳು ಕೂಡ ಬಂದಿವೆ. ಹೀಗಾಗಿ ಯಾರನ್ನೇ ಬೇಕಾದರೂ ಗುರಿಯಾಗಿಸಿಕೊಂಡು ಅಶಾಂತಿ ಸೃಷ್ಟಿಸಬಹುದು. ನೆಗೆಟಿವ್ ಸುದ್ದಿಗಳು ವೈರಲ್ ಆದಂತೆ, ಇದು ಫೇಕ್ ಎನ್ನುವುದು ಎಲ್ಲಿಯೂ ಶೇರ್ ಆಗುವುದಿಲ್ಲ. ಹೀಗಾಗಿ ನಿದ್ರೆಯಲ್ಲಿರುವ ಸರ್ಕಾರ ಏನು ಮಾಡಲಿದೆ ಎನ್ನುವ ಮಾಹಿತಿಯಿಲ್ಲ. ಹಾಗೆಯೇ ಇವೆಲ್ಲ ರಕ್ತಬೀಜಾಸುರನಂತೆ, ಒಂದನ್ನು ನಿಷೇಧಿಸಿದಾಗ, ಇನ್ನು ನಾಲ್ಕು ಬರುತ್ತವೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಡೀಪ್ ಫೇಕ್ ವಿಡಿಯೋ ಹಾವಳಿ, ಕಠಿಣ ಕ್ರಮ ಅಗತ್ಯ
ಹೀಗಾಗಿ ಜಾಗೃತರಾಗಿ, ಜತೆಗೆ ಒಂದಿಷ್ಟು ಮನವಿ….
- ಡೀಪ್ ಫೇಕ್ ಅಥವಾ ಯಾವುದೇ ವಿವಾದಾತ್ಮಕ ವಿಡಿಯೋ ಕಾಣಿಸಿದಾಗ ಕೂಡಲೇ ರಿಪೋರ್ಟ್ ಮಾಡಿ.
- ಸತ್ಯವಾಗಲಿ, ಅಸತ್ಯವಾಗಲಿ ಅದನ್ನು ಅಲ್ಲಿಯೇ ಬಿಟ್ಟುಬಿಡಿ.
- ದುರದೃಷ್ಟವಶಾತ್ ನಮ್ಮ ಮನೆಯಲ್ಲಿಯೇ ಇಂತಹ ಸನ್ನಿವೇಶ ಎದುರಾದರೆ, ಮೊದಲು ಸಂತ್ರಸ್ತರಾಗಿರುವರ ಶಕ್ತಿಯಾಗಿ. ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿ.
- ದಯವಿಟ್ಟು ಸಂತ್ರಸ್ತರಿಗೆ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ಮತ್ತಷ್ಟು ಹಿಂಸೆ ನೀಡಬೇಡಿ.
- ತಂತ್ರಜ್ಞಾನ ಬೆಳೆದಂತೆ ನಾವು ಈ ನಿಟ್ಟಿನಲ್ಲೂ ಶಿಕ್ಷಿತರಾಗಬೇಕು ಹಾಗೂ ಮನಸ್ಸನ್ನು ಗಟ್ಟಿ ಮಾಡಿಕೊಳ್ಳಲೇಬೇಕು.
- ಆ ವಿಡಿಯೋಗಳು ಯಾವುದೇ ರೂಪದಲ್ಲಿ ಇರಬಹುದು. ಆದರೆ ದಯವಿಟ್ಟು ಅದರ ಸಂತ್ರಸ್ತರಿಗೆ ಹಣೆಪಟ್ಟಿ ಕಟ್ಟಬೇಡಿ.
- ಒಂದೊಮ್ಮೆ ವಿಡಿಯೋ ಅಸಲಿಯಾಗಿದ್ದರೂ ಕೂಡ, ಮೇಲೆ ಹೇಳಿರುವ ವಿಚಾರಗಳು ಅನ್ವಯವಾಗುತ್ತದೆ.
ಡೀಪ್ ಫೇಕ್ ರೀತಿಯ ತಂತ್ರಜ್ಞಾನವು ನಿಜವಾಗಿಯೂ ಭಯೋತ್ಪಾದನೆಯ ಮತ್ತೊಂದು ರೂಪ. ಆದರೆ ಆ ತಂತ್ರಜ್ಞಾನದ ಉತ್ಪನ್ನಗಳನ್ನು ನಾವು ಶೇರ್ ಮಾಡದಿದ್ದರೆ ನಾವು ಭಯೋತ್ಪಾದಕರಾಗುವುದಿಲ್ಲ. ಇದರ ವಿರುದ್ಧ ನಾವೆಲ್ಲರೂ ಸೇನಾನಿಗಳಾಗಲೇಬೇಕು. ಇಂದು ಬೇರೆಯವರ ವಿಡಿಯೋ ನೋಡಲು ಖುಷಿಯಾಗಬಹುದು. ಆದರೆ ಅದು ನಮ್ಮ ಮನೆ ಬಾಗಿಲಿಗೆ ಬಂದರೆ ಏನು ಕಥೆ ಎನ್ನುವುದನ್ನು ಒಮ್ಮೆ ಆಲೋಚಿಸಿ. ಈಗಿನಿಂದಲೇ ಜಾಗೃತರಾಗಿ.
ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ವೈರಲ್ ಡೀಪ್‌ಫೇಕ್ ವಿಡಿಯೋ ಅಪಾಯಕಾರಿ ಎಂದ ಕೇಂದ್ರ ಸಚಿವ; ಮೂಲ ವಿಡಿಯೋ ಇಲ್ಲಿದೆ