Site icon Vistara News

ಧವಳ ಧಾರಿಣಿ ಅಂಕಣ: ಅತಿಥಿ ಸತ್ಕಾರವೇ ದೈವದ ಸೇವೆ ಎಂದ ದಂಪತಿ; ಮುದ್ಗಲ ಮತ್ತು ಮುದ್ಗಲಾನಿ

mudgala mudgalani vedic couple

ಉತ ತ್ವಾ ಸ್ತ್ರೀ ಶಶೀಯಸೀ ಪುಂಸೋ ಭವತಿ ವಸ್ಯಸಿ I

ಅದೇವತ್ರಾದರಾಧಸಃ II ಋ. 5.61.6 II

ಪುರುಷನೆನ್ನುವ ಮಾತ್ರಕ್ಕೆ ಆತನನ್ನು ಶ್ರೇಷ್ಠನೆನ್ನಲಾಗುವುದಿಲ್ಲ. ಯಜ್ಞಯಾಗಾದಿಗಳನ್ನು, ದಾನ ಧರ್ಮಗಳನ್ನು  ಮಾಡದ, ಲೋಭಿಗಳಾದವರು ಕೇವಲ ಪುರುಷರೆನ್ನುವ ಕಾರಣಕ್ಕೆ ಶ್ರೇಷ್ಠರಾಗುವುದಿಲ್ಲ.  ಇಂತಹ ಕೆಟ್ಟಸ್ವಭಾವದ ಪುರುಷರಿಗಿಂತ ದಾನಧರ್ಮಗಳಲ್ಲಿಯೂ ಪರೋಪಕಾರಗಳಲ್ಲಿಯೂ ನಿರತಳಾದ ಸ್ತ್ರೀಯೇ ಶ್ರೇಷ್ಠಳು. (ಭಾವಾರ್ಥ)

ತನ್ನ ಪತಿಯನ್ನು ಸದಾಕಾಲದಲ್ಲಿಯೂ ಸದ್ಗುಣ ಕಾರ್ಯಕ್ಕೆ ಪ್ರೇರೇಪಿಸುವ ಸ್ತ್ರೀಯರ ಕುರಿತು ಅನೇಕ ವಿವರಗಳು ವೇದ ಮತ್ತು ಉಪನಿಷತ್ತುಗಳಲ್ಲಿ ಬರುತ್ತವೆ. ಈ ಮೇಲಿನ ಋಕ್ಕಿನಲ್ಲಿ ಶ್ಯಾವಾಶ್ವನೆನ್ನುವ ಋಷಿ ತರಂತ ರಾಜನೆನ್ನುವವನ ಪತ್ನಿ ಶಶೀಯಸೀ ಎನ್ನುವವಳು ದಾನಧರ್ಮವನ್ನು ಮಾಡುವಂತೆ ತನ್ನ ಪತಿಯನ್ನು ಪ್ರೇರೇಪಿಸುವದನ್ನು ಮುನಿ ಹೊಗಳಿದ್ದಾನೆ. ವೇದಕಾಲದಲ್ಲಿ ಸ್ತ್ರೀಯರು ಸಂಸಾರ ಮತ್ತು ಧಾರ್ಮಿಕ ಕಾರ್ಯದಲ್ಲಿ ಪುರುಷರಿಗಿಂತಲೂ ಸದಾ ಮುಂದೆ ತೊಡಗಿಕೊಳ್ಳುತ್ತಿದ್ದರು ಎನ್ನುವುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಅಶ್ವಲಾ, ಘೋಷಾ, ಗಾರ್ಗಿ, ವಿಶ್ವವರಾ, ಲೋಪಾಮುದ್ರಾ ಹೀಗೆ ಅನೇಕ ಬ್ರಹ್ಮವಾದಿನಿಯರು  ಇರುವಂತೆ ಪರಾಕ್ರಮದಲ್ಲಿಯೂ ಪುರುಷರಿಗೆ ಜೊತೆಯಾಗಿ ನಿಂತು ಹೋರಾಟಮಾಡಿರುವ ಸ್ತ್ರೀಯರ ವಿಷಯವೂ ಅಲ್ಲಲ್ಲಿ ದಾಖಲಾಗಿದೆ. ಇಂದು ಹೆಣ್ಣುಮಕ್ಕಳು ಯುದ್ಧವಿಮಾನದಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸುವುದು, ಯುದ್ಧಭೂಮಿಯಲ್ಲಿ ಪುರುಷರಿಗೆ ಸರಿಸಮಾನವಾಗಿ ರಣಭೂಮಿಯಲ್ಲಿ ಹೋರಾಟ ಮಾಡುವದನ್ನು ಕಾಣುವ ಹೊತ್ತಿನಲ್ಲಿ ವೇದಕಾಲದಲ್ಲಿ ಸ್ತ್ರೀಯರು ಕೇವಲ ಬ್ರಹ್ಮವಾದಿನಿಯರಾಗಿ ಧರ್ಮೋಪದೇಶಕ್ಕೇ ಸೀಮಿತರಾಗದೇ ಸಂದರ್ಭ ಬಂದರೆ ಯುದ್ಧಭೂಮಿಯಲ್ಲಿಯೂ ಪರಾಕ್ರಮವನ್ನು ತೋರಿರುವುದನ್ನು ಕಾಣಬಹುದಾಗಿದೆ. ಅದೇ ರೀತಿ ವೇದಕಾಲದಲ್ಲಿನ ಒಂದು ಋಷಿದಂಪತಿಗಳು ಶಾಸ್ತ್ರ ಮತ್ತು ಶಸ್ತ್ರ ಎರಡರಲ್ಲಿಯೂ ನೈಪುಣ್ಯತೆಯನ್ನು ಹೊಂದಿದ್ದವರ ಕಥೆ ತುಂಬಾ ರೋಚಕವಾಗಿದೆ.  .

ಭಾರತೀಯ ಪರಂಪರೆಯಲ್ಲಿ ಕೀರ್ತಿಯನ್ನು ಅಳೆಯುವುದು ಆತ ಎಷ್ಟು ಯುದ್ಧದಲ್ಲಿ ಗೆದ್ದಿದ್ದಾನೆ ಎಂಬುದರಿಂದಾಗಿ ಅಲ್ಲ; ಆತನಲ್ಲಿರುವ ಸದ್ಗುಣ ಮತ್ತು ತ್ಯಾಗ ಮನೋಭಾವನೆಯಿಂದ ಸಮಾಜಕ್ಕೆ ಆತ ಹೇಗೆ ಆದರ್ಶನಾಗಿದ್ದಾನೆಂಬುದರಿಂದ ಅತನನ್ನು ಅಳೆಯಲಾಗುತ್ತಿದೆ. ಹರಿಶ್ಚಂದ್ರ, ರಂತಿದೇವ, ಭರತ, ಭಗೀರಥ ಮೊದಲಾದವರೆಲ್ಲರನ್ನು ನಾವು ನೆನಪಿಸಿಕೊಳ್ಳುವುದು ಅವರ ಸದ್ಗುಣಗಳ  ಕಾರಣದಿಂದಾಗಿಯೇ.  ಇಂತವರ ಸಾಲಿನಲ್ಲಿ ಸೇರಬಲ್ಲ ಮತ್ತೊಬ್ಬ ಮಹಾಪುರುಷ ಮುದ್ಗಲ ಮತ್ತು ಮುದ್ಗಲಾನಿ ಎಂದೆ ಪ್ರಸಿದ್ದಳಾದ ಆತನ ಪತ್ನಿ ಇಂದ್ರಸೇನಾ.  ಈ ಮುದ್ಗಲನೆನ್ನುವ ಮನ್ಯುವಿನ ಕಿರಿಯಪುತ್ರ  ಗರ್ಗ ಎನ್ನುವನ ವಂಶದವನು. ಈ ವಂಶದಲ್ಲಿ ಭರ್ಮ್ಯಾಶ್ಯನೆನ್ನುವ ದೊರೆ ಇದ್ದ. ಆತನಿಗೆ ಮುದ್ಗಲ, ಯುವೀನರ, ಬೃಹದಿಷು, ಕಾಂಪಿಲ್ಯ ಮತ್ತು ಸಂಜಯರೆನ್ನುವ ಐದು ಜನ ಮಕ್ಕಳು. ಭರ್ಮ್ಯಾಶ್ಯನಿಗೆ ಸಮರ್ಥರಾದ ಐವರು ಮಕ್ಕಳನ್ನು ನೋಡಿ ಸಂತೋಷವಾಯಿತು. “ ಈ ನನ್ನ ಐವರು ಮಕ್ಕಳು ಐದು ದೇಶಗಳನ್ನು ಪಾಲನೆಮಾಡಲು ಸಮರ್ಥರಾಗಿದ್ದಾರೆ”  ಎಂದು ಹೆಮ್ಮೆಪಡುತಿದ್ದ. ಅವರೆಲ್ಲರೂ ಪಾಂಚಾಲ (ಪಞ್ಚ ಅಲಂ) ಎನ್ನುವ ಹೆಸರಿನಿಂದ ಪ್ರಸಿದ್ಧರಾದರು. ಆದರೆ ಭರ್ಮ್ಯಾಶ್ಯನ ಹಿರಿಯ ಮಗನಾದ ಮುದ್ಗಲಿನಿಗೆ ರಾಜ ಸಿಂಹಾಸನಕ್ಕಿಂತ ಆಧ್ಯಾತ್ಮ ಪ್ರಪಂಚವೇ ಇಷ್ಟವಾಯಿತು. ಆತ ತನ್ನ ಕ್ಷತ್ರಿಯತ್ವವನ್ನು ಬಿಟ್ಟು ತಪಸ್ಸನ್ನು ಆಚರಿಸುತ್ತೇನೆಂದು ತನ್ನ ತಮ್ಮಂದಿರಿಗೆ ರಾಜ್ಯವನ್ನು ವಹಿಸಿ ಕುರುಕ್ಷೇತ್ರಕ್ಕೆ ಹೋಗಿ ತಪಸ್ಸಿನಲ್ಲಿ ನಿರತನಾದ. ಆತನ ಪತ್ನಿಯ ಹೆಸರು ಇಂದ್ರಸೇನಾ. ಈಕೆ ನಿಷಾದದ ದೊರೆಯಾದ ನಳ ಎನ್ನುವವನ ಮಗಳಾದದ್ದರಿಂದ ನಳಾಯಣೀ ಎನ್ನುವ ಹೆಸರೂ ಇತ್ತು. ಆದರೆ ಮುದ್ಗಲನ ಪತ್ನಿಯಾಗಿ ಆತನ ಎಲ್ಲ ಸತ್ವಗಳಿಗೆ ಸಹಭಾಗಿತ್ವವನ್ನು ನಿಭಾಯಿಸಿದ ಕಾರಣದಿಂದ ಆಕೆ ಮುದ್ಗಲಾನಿ ಎನ್ನುವ ಹೆಸರಿನಿಂದಲೇ ಪ್ರಸಿದ್ಧಳಾಗಿದ್ದಾಳೆ.

ರಾಜ ಸಿಂಹಾಸನದ ಸಕಲ ಭೋಗ ಭಾಗ್ಯವನ್ನು ಬಿಟ್ಟು ಅರಣ್ಯಕ್ಕೆ ಬಂದ ಈ ದಂಪತಿಗಳು ಆಯ್ದುಕೊಂಡ ಮಾರ್ಗ ಬಲು ಕಠಿಣತರದ್ದಾಗಿತ್ತು. ಆತ್ಮೋನ್ನತಿಗೆ ಈ ದೇಹವೆನ್ನುವುದು ಕೇವಲ ಮಾಧ್ಯಮವಾಗಿ ಇದ್ದರೆ ಸಾಕು ಎನ್ನುವ ಕಾರಣಕ್ಕಾಗಿ ಅವರು  ಶಿಲೋಂಛವೃತ್ತಿಗಳಿಂದ ಬದುಕುವ ಸಂಕಲ್ಪ ಕೈಗೊಂಡರು. ಹೊಲಗದ್ದೆಗಳಲ್ಲಿ ರೈತರು ಪೈರುಗಳನ್ನು ಕೊಯ್ದ ನಂತರ ಅಲ್ಲಿ ಬಿದ್ದರಬಹುದಾದ ಕಾಳುಗಳನ್ನು ಆಯ್ದು ತಂದು ಅದರಿಂದಲೇ ಉಪಜೀವನ ನಡೆಸುವುದನ್ನು ಶೀಲ ಮತ್ತು ಉಂಛವೃತ್ತಿಗಳೆಂದು ಕರೆಯುತ್ತಾರೆ. ದಂಪತಿಗಳಿಬ್ಬರೂ ಕೇವಲ ತಮ್ಮ ಹೊಟ್ಟೆ ಹೊರೆಯುವುದಕ್ಕಾಗಿ ಮನಸ್ಸನ್ನು ಒಂಡಬಡಿಸದೇ ಅತಿಥಿ ಸತ್ಕಾರದಲ್ಲಿ ದೇವರನ್ನು ಕಾಣುತ್ತಿದ್ದರು. ಹೊಲದಲ್ಲಿ ಕಾಳು ಎಷ್ಟಂತ ಸಿಕ್ಕೀತು! ಇರುವುದನ್ನೇ ಆಯ್ದು ಒಟ್ಟುಮಾಡಿ ಒಂದು ದ್ರೋಣವಾಗುವವರೆಗೆ ಹದಿನೈದು ದಿನಗಳಾಗುತ್ತಿದ್ದವು. (ಒಂದು ದ್ರೋಣವೆಂದರೆ ನಾಲ್ಕು ಸೇರು) ಹೀಗೆ ಸಂಗ್ರಹವಾದ ಆಹಾರ ಧಾನ್ಯಗಳನ್ನು ಹದಿನೈದು ದಿನಗಳವರೆಗೆ ಕಾದು ಪ್ರತೀ ಹುಣ್ಣಿಮೆ ಅಮವಾಸ್ಯೆಗಳಿಗೊಮ್ಮೆ  “ಇಷ್ಟೀ-ಕೃತಂ”  ಎನ್ನುವ ಯಾಗವನ್ನು ಮಾಡಿ ಅತಿಥಿಗಳನ್ನು ಕರೆದು ಉಪಚಾರ ಮಾಡಿ ಸತ್ಕರಿಸಿ ಕಳುಹಿಸುತ್ತಿದ್ದರು. ಜಾಗತಿಕವಾದ ಎಲ್ಲಾ ಧರ್ಮಗಳಲ್ಲಿಯೂ ಅತಿಥಿಸತ್ಕಾರದ ಶ್ರೇಷ್ಠತೆಯ ಕುರಿತು ಬೋಧನೆಗಳಿವೆ. ಉಪನಿಷತ್ತಿನ ಉದಾತ್ತ ವಾಕ್ಯವೇ “ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಃ ಕಸ್ಯಸ್ವಿದ್ಧನಂ”  ಗಳಿಸಿರುವುದನ್ನು ತ್ಯಾಗ ಮಾಡು, ಉಳಿದದ್ದನ್ನು ನೀನು ಅನುಭವಿಸು ಎನ್ನುವದಾಗಿದೆ. ವೇದೋಪನಿಷತ್ತುಗಳಲ್ಲಿ ಬರುವ ಸಾಮಾಜಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ಕಾಲದಲ್ಲಿಯೂ ಪ್ರವಾಹ, ಮುಂತಾದ ಪ್ರಕೃತಿವಿಕೋಪಗಳು ಆಗಾಗ ಸಂಭವಿಸುತ್ತಿತ್ತು ಎನಿಸುತ್ತದೆ. ಜನರೆಲ್ಲರೂ ಕಷ್ಟದ ಜೀವಿಗಳಾಗಿದ್ದರು. ಹಾಗಾಗಿ ದಾನ ನೀಡುವವರನ್ನು ಹುಡುಕಿಕೊಂಡು ಯಾಚಕರು ಬರುತ್ತಿದ್ದರು. ಹಾಗಾಗಿ ಯಾಚಕರಿಗೆ ದಾನವನ್ನು ಕೊಟ್ಟೇ ಕೊಡುವೆನೆಂದು ಸಂಕಲ್ಪಮಾಡಿಕೊಂಡ ಮುದ್ಗಲ ದಂಪತಿಗಳು ಕೊಡುವ ದಾನಕ್ಕಾಗಿ ಅತಿಥಿಗಳ ದಂಡೇ ಬರುತ್ತಿತ್ತು. ಮುದ್ಗಲಾನಿ ಬಂದವರನ್ನು ಮತ್ತಷ್ಟು ತೃಪ್ತಿ ಪಡಿಸುತ್ತಾ ತನ್ನ ಗಂಡನಿಗೆ ಇನ್ನೂ ಯಾಚಕರು ಬರುವಂತೆ ಬೇಡಿಕೊಳ್ಳಿ ಎಂದು ಕೇಳಿಕೊಳ್ಳುತ್ತಿದ್ದಳು. ಪಕ್ಷಿಗಳು ಹೇಗೆ ಧಾನ್ಯಕ್ಕಾಗಿ ಗದ್ದೆಗಳಲ್ಲಿ ಅಲೆಯುತ್ತವೆಯೋ ಅದೇರೀತಿ ಈ ದಂಪತಿಗಳಿಬ್ಬರೂ ಗದ್ದೆಗಳಿಗೆ ಹೋಗಿ ಧಾನ್ಯಗಳನ್ನು ಆರಿಸಿ ತಂದು ಪರಿಶುದ್ಧಾಂತರಂಗಿಕವಾಗಿ  ‘ಇಷ್ಟೀ ಕೃತಂ’ ಎನ್ನುವ ಯಾಗವನ್ನು ಮಾಡುತ್ತಿದ್ದರು.

ದೇವತೆಗಳನ್ನು ಯಜ್ಞದ ಮೂಲಕವೂ ಅತಿಥಿಗಳನ್ನು ದಾನದ ಮೂಲಕವೂ ತೃಪ್ತಿಪಡಿಸುವ ಇವನ ತ್ಯಾಗಬುದ್ಧಿಯನ್ನು ಗಮನಿಸಿದ ಇಂದ್ರನೇ ಸಾಕ್ಷಾತ ತನ್ನ ಪತ್ನಿಯೊಡನೆ ಬಂದು ಹವಿರ್ಭಾಗವನ್ನು ಪ್ರತ್ಯಕ್ಷವಾಗಿ ಸ್ವೀಕರಿಸುತ್ತಿದ್ದನು. “ಇವನ ಶೃದ್ಧಾ ಭಕ್ತಿ ಮತ್ತು ಮಾತ್ಸರ್ಯರಹಿತವಾದ ಮನಸ್ಸಿಗೆ  ಮೆಚ್ಚಿದ ಆತನ ಪ್ರಭಾವದಿಂದ ಆತನ ಮನೆಯಲಿ ಯಾರೇ ಅತಿಥಿಗಳು ಬಂದು ಊಟಮಾಡಿದ ತಕ್ಷಣ ಉಳಿದ ಅಗಳು ಮತ್ತೆ ಅಕ್ಷಯವಾಗಲಿ” ಎನ್ನುವ ವರವಿತ್ತನು. ಹಾಗಾಗಿ ಆತನ ಮನೆಗೆ ಎಷ್ಟೇ ಅತಿಥಿಗಳು ಬಂದು ಊಟಮಾಡಿ ಹೋದರೂ  ನಂತರ ಮತ್ತೆ ಅತಿಥಿಗಳು ಬಂದರೆ  ಆ ಪಾತ್ರೆಯಲ್ಲಿರುವ ಅಗಳನ್ನವು ಅತಿಥಿಗಳಿಗೆ ಬೇಕಾದಷ್ಟು ವೃದ್ಧಿಹೊಂದಿ ಅವರ ಹಸಿವನ್ನು ನೀಗುತ್ತಿದ್ದವು. ಅತಿಥಿಗಳಿಗೆಲ್ಲ ನೀಡಿದ ಮೇಲೆ ಉಳಿದದ್ದರಲ್ಲಿ ಮುದ್ಗಲ ದಂಪತಿಗಳು ತೃಪ್ತಿ ಪಡುತ್ತಿದ್ದರು. ಶಾಂತಿ ಮತ್ತು ಸಹನೆ ಮುದ್ಗಲ ದಂಪತಿಗಳು ನಡೆಸಿಕೊಂಡು ಬರುತ್ತಿರುವ ಅನುಷ್ಠಾನವಾಗಿತ್ತು.

ಈ ಸಂಗತಿ ದೂರ್ವಾಸ ಮುನಿಗೆ ತಿಳಿಯಿತು. ಇರನ್ನು ಪರೀಕ್ಷಿಸಬೇಕೆಂದು ಒಮ್ಮೆ ದಿಗಂಬರ ವೇಷಧಾರಿಯಾಗಿ ಅರೆಹುಚ್ಚನಂತೆ ದೂರ್ವಾಸ ಅತಿಥಿಗಳೆಲ್ಲ ಊಟಮಾಡಿ ಇನ್ನೇನು ದಂಪತಿಗಳು ಊಟಮಾಡಬೇಕೆನ್ನುವ ಹೊತ್ತಿನಲ್ಲಿ ಬಂದ. ದಂಪತಿಗಳು ಬಲು ಶ್ರದ್ಧೆಯಿಂದ ಭೋಜನವನ್ನು ಸಿದ್ಧ ಮಾಡಿ ದೂರ್ವಾಸನಿಗೆ ಬಡಿಸಿದರು. ಏನನ್ನೂ ಮಾತನಾಡದ ದೂರ್ವಾಸಮುನಿ ಗಬಗಬನೆ ಊಟವನ್ನು ಮಾಡಿಮುಗಿಸಿದನು. ದಂಪತಿಗಳು ಮತ್ತೆ ಬಡಿಸಿದರು. ಬಡಿಸಿದಷ್ಟನ್ನು ದೂರ್ವಾಸ ಒಂದೇ ಮುಷ್ಟಿಯಲ್ಲಿ ತಿಂದು ಮುಗಿಸಿದನು. ಆತನಿಗಿನ್ನೂ ತೃಪ್ತಿಯಾಗಿಲ್ಲವೆಂದು ಭಾವಿಸಿ ಮತ್ತೆ ಮತ್ತೆ ಬಡಿಸತೊಡಗಿದರು. ಅವೆಲ್ಲವನ್ನೂ ತಿಂದು ತೇಗಿದ ದೂರ್ವಾಸ ನಂತರ ಮುದ್ಗಲಾನಿಯನ್ನು ಕರೆದು ಭೋಜನದ ಪಾತ್ರೆಯನ್ನು ತರಿಸಿ ಅದರಲ್ಲಿ ಉಳಿದಿದ್ದ ಅಗುಳನ್ನು ತೆಗೆದು ತನ್ನ ಮೈಗೆ ಪೂಸಿಕೊಂಡು ಮಾತಾಡದೇ ಹೊರಟನು. ಇದರಿಂದ ಮುದ್ಗಲ ದಂಪತಿಗಳಿಗೆ ಭೋಜನಕ್ಕೆ ಏನೂ ಉಳಿಯಲಿಲ್ಲ. ಅವರು ಸ್ವಲ್ಪವೂ ಬೇಸರಿಸದೇ ಮತ್ತೆ ಹದಿನೈದು ದಿನಗಳ ಕಾಲ ಪುನಃ ಉಂಛವೃತ್ತಿಯಿಂದ ಧಾನ್ಯವನ್ನು ಸಂಗ್ರಹಿಸಿ ಇಷ್ಟಿಯನ್ನು ಮಾಡಿ ಅತಿಥಿಗಳಿಗೆ ಬಡಿಸುವುದರಲ್ಲಿ ನಿರತರಾದರು. ಎಲ್ಲ ಮುಗಿಯುವ ಹೊತ್ತಿನಲ್ಲಿ ಮತ್ತೆ ದೂರ್ವಾಸನ ಆಗಮನವಾಯಿತು. ಈ ಸರಿಯೂ ಅಷ್ಟೆ, ಭೋಜನವನ್ನು ಮಾಡಿ ಪಾತ್ರೆಯಲ್ಲಿರುವ ಅನ್ನವನ್ನು ಮತ್ತೊಮ್ಮೆ ತನ್ನ ಮೈಗೆಲ್ಲ ಹಚ್ಚಿಕೊಂಡು ಹೊರಟುಹೋದನು. ಮುದ್ಗಲನ ಪತ್ನಿ ಮತ್ತು ಪುತ್ರರಿಗೆ ಈ ಸಲವೂ ಆಹಾರವಿರಲಿಲ್ಲ.

ಆದರೂ ಅವರು ಬೇಸರಿಸದೇ ಪ್ರಶಾಂತ ಮನಸ್ಥಿತಿಯಿಂದ ಬರಲಿರುವ ಪಕ್ಷದ ‘ಇಷ್ಟೀಕೃತಂ’ ಯಾಗಕ್ಕಾಗಿ ಉಂಛವೃತ್ತಿಯಲ್ಲಿ ಧಾನ್ಯದ ಸಂಗ್ರಹಣೆಗೆ ತೊಡಗಿದರು. ಮುಂದಿನದೂ ಸಹ ಅದೇ ರೀತಿ ಪುನರಾವರ್ತನೆಯಾಯಿತು. ಒಟ್ಟು ಆರು ಬಾರಿ ದೂರ್ವಾಸ ಬರುವುದು ಊಟಮಾಡಿ ಮುದ್ಗಲನ ಮನೆಯವರಿಗೆ ಏನೂ ಇಲ್ಲದಂತೆ ಬರಿದುಮಾಡಿ ಹೋಗುವುದು ನಡೆಯಿತು. ದೂರ್ವಾಸನ ಉದ್ದೇಶ ಮುದ್ಗಲ ದಂಪತಿಗಳ ಸಹನೆಯನ್ನು ಪರೀಕ್ಷಿಸುವುದಾಗಿತ್ತು. ಸತತ ಮೂರು ತಿಂಗಳುಗಳ ಕಾಲ ಆಹಾರವಿಲ್ಲದೇ ಇದ್ದರೂ ಮುದ್ಗಲನಾಗಲೀ, ಅವರ ಪತ್ನೀ-ಸುತರಾಗಲೀ, ಸ್ವಲ್ಪವೂ ಬೇಸರಿಸದೇ ಬಹು ನಿರ್ಮಲವಾದ ಮನಸ್ಸಿನಿಂದ ದೂರ್ವಾಸನಿಗೆ ಆತಿಥ್ಯವನ್ನು ಮಾಡಿದರು. ಬಿದ್ದ ಧಾನ್ಯಗಳನ್ನು ಆಶ್ರಯಿಸಿ ಹಕ್ಕಿಗಳು ಬದುಕುವುವು. ಹಾಗಾಗಿ ಮುದ್ಗಲ ಗದ್ದೆಯಲ್ಲಿ ಬಿದ್ದ ಧಾನ್ಯಗಳಲ್ಲಿ ಕೇವಲ ಒಂದು ದ್ರೋಣ ಮಾತ್ರವೇ ಆರಿಸಿ ತಂದು ಅದರಲ್ಲಿಯೇ ಅತಿಥಿಸತ್ಕಾರವನ್ನು ಮಾಡುತ್ತಿದ್ದನು. ಎಂತಹ ಸಂದರ್ಭಬಂದರೂ ತಾನು ಅದಕ್ಕಿಂತ ಹೆಚ್ಚಿನದೇನನ್ನು ತರುತ್ತಿರಲಿಲ್ಲ. ಇನ್ನು ಈ ಪರೀಕ್ಷೆ ಸಾಕು ಎನಿಸಿತು ದೂರ್ವಾಸನಿಗೆ. ಆತ ಸಂತೋಷದಿಂದ ಮುದ್ಗಲ ದಂಪತಿಗಳನ್ನು ಸಂತೈಸಿ “ಹಸಿವೆಯೆನ್ನುವುದು ಬಲು ಘೋರವಾದುದು. ಹಸಿದವನಿಗೆ ಧರ್ಮಾಧರ್ಮಗಳ ವಿವೇಕವಿರುವುದಿಲ್ಲ. ನಾಲಿಗೆಯು ಯವಾಗಲೂ ರಸಾನುವರ್ತಿಯಾಗಿರುತ್ತದೆ. ಅಂತಹ ನಾಲಿಗೆಯೂ ಸಹ ತನ್ನ ಸ್ವಾಂತಂತ್ರ್ಯ ಕಳೆದುಕೊಂಡು ನಿನ್ನ ಆಜ್ಞಾನುವರ್ತಿಯಾಗಿದೆ.  ಬದುಕಲು ಅಗತ್ಯವಾದ ಅನ್ನ ಸಿಗದಾಗ ಮನುಷ್ಯ ವ್ಯಗ್ರನಾಗುತ್ತಾನೆ. ಮನಸ್ಸನ್ನು ನಿಗ್ರಹಿಸಲು ಶಕ್ಯನಾಗುವುದಿಲ್ಲ ಇಂತಹದನ್ನು ಮೀರಿ ನೀವು ಚಿತ್ತೈಕಾಗ್ರತೆ ಮತ್ತು ಇಂದ್ರಿಯ ನಿಗ್ರಹಸಾಧಿಸಿ ತಪಸ್ಸನ್ನು ಮಾಡುತ್ತಿರುವಿರಿ. ಈ ನಿಮ್ಮ ಸಾಧನೆಗಾಗಿ ನೀವು ಸ್ವರ್ಗಕ್ಕೆ ಶಶರೀರಾಗಿ  ಹೋಗಬಹುದಾಗಿದೆ” ಎಂದು ಹರಸಿದನು. ತಕ್ಷಣವೇ ಸ್ವರ್ಗದಿಂದ ವಿಮಾನ ಬಂದು ಮುದ್ಗಲ ದಂಪತಿಗಳನ್ನು ಸ್ವರ್ಗಕ್ಕೆ ಕರೆದೊಯ್ಯಲು ಬಂದಿತು. ಅದರಲ್ಲಿದ್ದ ದೇವದೂತನು ಅವರನ್ನು ಉದ್ಧೇಶಿಸಿ ದೇವಲೋಕದ ವೈಭೋಗಗಳನ್ನು ವರ್ಣಿಸಿ ಹೀಗೆ ವಿಮಾನದಲ್ಲಿ ಕುಳಿತು ಹೋಗುವುದು ಆತನಿಗೊದಗಿದ ಸುಕೃತವೆಂದು ತಿಳಿಸಿದನು. ಜಿತೇಂದ್ರಿಯನಾಗಿದ್ದ ಮುದ್ಗಲ ದೇವದೂತನ ಹತ್ತಿರ “ಸ್ವರ್ಗಲೋಕದಲ್ಲಿರುವವರ ಕಲ್ಯಾಣಗುಣಗಳೇನು, ಅಲ್ಲಿನವರು ಮಾಡುವ ತಪಸ್ಸು ಯಾವುದು. ಅವರ ತಪಸ್ಸಿನ ಉದ್ದೇಶವೇನು..”  ಎನ್ನುತ್ತಾ ಮರುಪ್ರಶ್ನೆಯನ್ನು ಹಾಕಿದನು. ಅದಕ್ಕೆ ದೇವದೂತನು “ಸ್ವರ್ಗವೆಂದರೆ ಅಲ್ಲಿ ಕೇವಲ ಸುಖಮಾತ್ರ ಇರುವುದು. ಇಲ್ಲಿ ಗಳಿಸಿದ ಪುಣ್ಯವನ್ನು ಅನುಭವಿಸುತ್ತಾ ರಂಭಾದಿ ಅಪ್ಸರೆಯರ ಸಹಿತ ವಿನೋದ ಮಾಡಬಹುದು” ಎಂದು ಸ್ವರ್ಗ ಸುಖದ ರಸಗವಳದ ವರ್ಣನೆಯನ್ನು ಮಾಡಿದನು. ಪುಣ್ಯ  ತೀರಿದ ಮೇಲೆ ಏನು ಎನ್ನುವ ಪ್ರಶ್ನೆಗೆ ದೇವದೂತ “ಹಾಗೆ ಮುಗಿದ ತಕ್ಷಣ ತಕ್ಷಣವೇ ಅವರು ಸ್ವರ್ಗದಿಂದ ಪತನ ಹೊಂದುತ್ತಾರೆ. ಆ ಸಮಯದಲ್ಲಿ ಅವರು ಭಯಪಡುತ್ತಾ ಮತ್ತೆ ಭೂಮಿಗೆ ಬಿದ್ದು ಮತ್ತೊಮ್ಮೆ ಜನಿಸುತ್ತಾರೆ” ಎಂದನು. ಆಗ ಮುದ್ಗಲ “ಅಂದರೆ ಸ್ವರ್ಗವೂ ಸಹ ಈ ಒಂದು ದೋಷವನ್ನು ಹೊಂದಿದೆಯೆಂದಾಯಿತು. ದೋಷರಹಿತವಾದ ಲೋಕದ ಕುರಿತು ನಾನು ಆಶಿಸಿದ್ದೆ. ಯಾವಲೋಕದಲ್ಲಿ ದೋಷವಿದೆಯೋ ಆ ಲೋಕ ನನಗೆ ಅಗತ್ಯವಿಲ್ಲ. ನೀನಿನ್ನು ತಿರುಗಿ ಹೋಗಬಹುದು” ಎಂದು ಸ್ವರ್ಗಸುಖವನ್ನೇ ತಿರಸ್ಕರಿಸಿ ಮತ್ತೆ ಪುನಃ ಶಿಲೋಂಛವೃತ್ತಿಯಲ್ಲಿ ನಿರತನಾದನು. ಹಸಿದು ಬಂದವರಿಗೆ ಯಥೇಚ್ಛವಾಗಿ ಉಪಚರಿಸುತ್ತಾ ದಂಪತಿಗಳು ದಿನಕಳೆದರು.  ಹೀಗೆ ಜಿತೇಂದ್ರಿಯತ್ವದಿಂದ ಚಿತ್ತಶುದ್ಧಿಯಾಗಿ ಆ ದಂಪತಿಗಳಲ್ಲಿ  ಆತ್ಮಸಾಕ್ಷಾತ್ಕಾರವಾಯಿತು. ದಿವ್ಯಸಾನ್ನಿಧ್ಯವನ್ನು ಅವರು ಪಡೆದರು. ಆತ್ಮಸಾಕ್ಶಾತ್ಕಾರದ ಕುರಿತು ಮುದ್ಗಲನಿಂದ ರಚಿತವಾದ ಉಪನಿಷತ್ತಿಗೆ ಮುದ್ಗಲೋಪನಿಷತ್ತೆಂದೇ ಹೆಸರು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಲ್ಯಾಣ ರಾಜ್ಯ: ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ

ಮುದ್ಗಲ ದಂಪತಿಗಳಿಗೆ ಧರ್ಮದ ಒಳತಿರುವು ಚೆನ್ನಾಗಿ ತಿಳಿದಿತ್ತು. ಮೌನ ಮತ್ತು ಶಾಂತಿಯೆನ್ನುವುದು ಸತ್ಪುರುಷರ ಸಹವಾಸದಲ್ಲಿ  ಮಾತ್ರವೆನ್ನುವುದನ್ನು ಅವರು ಅರಿತಿದ್ದರು. ದುಷ್ಟರನ್ನು ನಿಗ್ರಹಿಸುವಲ್ಲಿ ಅವರು ಯಾವತ್ತಿಗೂ ಹಿಂದೆ ಬೀಳುತ್ತಿರಲಿಲ್ಲ. ಅವರ ಆಶ್ರಮದಲ್ಲಿ ಸಾವಿರಾರು ಗೋವುಗಳಿದ್ದವು. ಒಮ್ಮೆ ಅವರು ಧಾನ್ಯಸಂಗ್ರಹಕ್ಕೆ ಹೋದಾಗ ದಸ್ಯುಗಳು ಬಂದು  ಒಂದು ಮುದಿಎತ್ತನ್ನು ಬಿಟ್ಟು ಅವರಲ್ಲಿರುವ ಎಲ್ಲಾ ಗೋವುಗಳನ್ನು ಅಪಹರಿಸುತ್ತಾರೆ. ಅಶ್ರಮಕ್ಕೆ ಬಂದಾಗ ಅವರಿಗೆ ವಿಷಯ ತಿಳಿಯುತ್ತದೆ. ಶಾಂತಿ ಸಮಾಧಾನ ಎಂದೆಲ್ಲ ಸದಾಕಾಲ ಚಿಂತಿಸುತ್ತಿರುವ ಮುದ್ಗಲನ ಕ್ಷತ್ರಿಯಧರ್ಮ ಜಾಗ್ರತವಾಗುತ್ತದೆ. ಆತನ ಪತ್ನಿ ನಳಾಯಣಿ ಇಂದ್ರಸೇನಾ ಸಹ ಈ ವಿಷಯದಲ್ಲಿ ತನ್ನ ಪತಿಯನ್ನು ಹುರಿದುಂಬಿಸುತ್ತಾಳೆ. ಅವರಲ್ಲಿರುವ ರಥಕ್ಕೆ ಕಳ್ಳರು ಬಿಟ್ಟುಹೋದ ಮುದಿಎತ್ತನ್ನೇ ಕಟ್ಟಿ ರಥವನ್ನು ಸಿದ್ಧಗೊಳಿಸುತ್ತಾಳೆ.  ಮುದ್ಗಲ ತನ್ನಲ್ಲಿರುವ ಕೋಲನ್ನೆ ಗದೆಯಂತೆ ಬಳಸಿ ಯುದ್ಧಕ್ಕೆ ಹೊರಡುತ್ತಾನೆ. ಆತನ ಪತ್ನಿ ಮುದ್ಗಲಾನಿಯೇ ಸಾರಥಿ. ಹೂಡಿರುವುದು ಮುದಿ ಎತ್ತು! ಸಾರಥಿ ತನ್ನ ಚಾಕಚಕ್ಯತೆಯಿಂದ ಎಂಥ ಪರಿಸ್ಥಿತಿಯಲ್ಲಿಯೂ ರಥವನ್ನು ಓಡಿಸಬಲ್ಲ ಎನ್ನುವುದಕ್ಕೆ ಮುದ್ಗಲಾನಿಯ ಕೌಶಲವನ್ನು ಗಮನಿಸಬಹುದು. ಪತ್ನಿಯ ಸಾರಥ್ಯದಲ್ಲಿ ಮುದ್ಗಲ ತನ್ನಲ್ಲಿರುವ ಗದೆಯನ್ನು ದಸ್ಯುಗಳ ಗುಂಪಿನ ಮೇಲೆ ಪ್ರಹರಿಸಿ ಅವರನ್ನು ಮುಂದೆ ಹೋಗದಂತೆ ತಡೆಯುತ್ತಾನೆ. ಅಲ್ಲಿ ಘೋರವಾದ ಯುದ್ಧ ನಡೆಯುತ್ತದೆ. ಒಂದು ಹಂತದಲ್ಲಿ ಮುದ್ಗಲನ ಕೈಸೋಲುವ ಪ್ರಸಂಗ ಎದುರಾಗುತ್ತದೆ. ಆಗ ಆತನ ಪತ್ನಿ ತಾನೇ ಆತನ ಸೇನಾನಿಯಂತೆ ವೈರಿಗಳನ್ನು ಎದುರಿಸಿ ಹೋರಾಡುತ್ತಾಳೆ. ಅವಳ ಪರಾಕ್ರಮದ ಎದುರು ಶತ್ರುಗಳು ಮಣಿಯುತ್ತಾರೆ.  ಋಗ್ವೇದದ ಹತ್ತನೆಯ ಮಂಡಲದ 102 ಸೂಕ್ತ ಮುದ್ಗಲ ಮತ್ತು ಆತನ ಪತ್ನಿಯ ಸಾಹಸ ಕಾರ್ಯವನ್ನು ವಿವರವಾಗಿ ವರ್ಣಿಸುತ್ತದೆ.

ಉತ್ಸ್ಮ ವಾತೋ ವಹತಿ ವಾಸೋ ಅಸ್ಯಾಂ  ಅಧಿರಥಂ ಯದಜಯತ್ಸಹಸ್ರಂ 

ರಥೀರಭೂನ್ಮುದ್ಗಲಾನೀ ಗವಿಷ್ಟೌ ಭರೇ ಕೃತಂ ವ್ಯಚೇದಿಂದ್ರಸೇನಾ  I I .10.102.2 I I

ಯಾವಾಗ ಮುದ್ಗಲನ ಪತ್ನಿಯು ದೊಡ್ಡದಾದ ರಥವನ್ನು ಹತ್ತಿ ಚೋರರು ಅಪಹರಿಸಿದ್ದ ಸಹಸ್ರ ಗೋವನ್ನು ಜಯಿಸಿ ತಂದಳೋ ಆಗ ಅವಳ ವಸ್ತ್ರವನ್ನು ಗಾಳಿಯು (ವಿಜಯದ ಸಂಕೇತವಾಗಿ) ಮೇಲಕ್ಕೆ ಹಾರಿಸುತ್ತಿತ್ತು. ಅಪಹೃತವಾದ ಗೋವನ್ನು ಹುಡುಕಿ ತರುವುದಕ್ಕಾಗಿ ನಡೆದ ಯುದ್ಧದಲ್ಲಿ ಮುದ್ಗಲನ ಪತ್ನಿಯು ರಥವನ್ನು ನಡೆಸುವ ಸಾರಥಿಯಾಗಿದ್ದಳು. ಶತ್ರುಗಳನ್ನು ಸೀಳುವ ಮುದ್ಗಲನ ಸೇನಾನಿಯಂತಿರುವ ಅವನ ಪತ್ನಿಯು ಯುದ್ಧದಲ್ಲಿ ಗೋವುಗಳನ್ನು ಕಳ್ಳರಿಂದ ಜಯಿಸಿ ತಂದಳು.

ಈ ಸೂಕ್ತದ ಮುಂದಿನ ಋಕ್ಕುಗಳು ಈ ದಂಪತಿಗಳ ಶೌರ್ಯ ಮತ್ತು ಮುದ್ಗಲ ಇಂದ್ರನನ್ನು ತನ್ನ ನೆರವಿಗಾಗಿ ಬರುವಂತೆ ಕೋರುವುದನ್ನು ಹಾಗೂ ಅದಕ್ಕಾಗಿ ಇಂದ್ರನನ್ನು ಸ್ತುತಿಸುವುದನ್ನು ತಿಳಿಸುತ್ತದೆ.

ಕ್ಷತ್ರಿಯನಾಗಿ ಜನಿಸಿದರೂ ಮುದ್ಗಲ ಆತ್ಮ ಸಾಕ್ಷಾತ್ಕರವನ್ನು ಅಪೇಕ್ಷಿಸಿ ಬ್ರಾಹ್ಮಣನಾಗಿ ಮಹತ್ತರವಾದ ಸಾಧನೆಯನ್ನು ಮಾಡಿದ ಮುದ್ಗಲ ಮಂತ್ರದೃಷ್ಟಾರ ಮಾತ್ರವಲ್ಲದೇ ಆತ ರಚಿಸಿದ ಉಪನಿಷತ್ತಿಗೆ ಮುದ್ಗಲೋಪನಿಷತ್ತು ಎಂದು ಹೆಸರಾಗಿದೆ.  ಆತ ಮತ್ತು ಆತನ ಪತ್ನಿ ನಳಾಯಣೀ ಇಂದ್ರಸೇನಾ ಇಬ್ಬರೂ ಶಸ್ತ್ರ ಮತ್ತು ಶಾಸ್ತ್ರದಲ್ಲಿ ಪಾರಂಗತರಾಗಿದ್ದರು. ಇವರಿಗೆ ಅನೇಕ ಮಕ್ಕಳು ಜನಿಸಿ ಅವರೆಲ್ಲರೂ ಮುಂದೆ ಮುದ್ಗಲ ಗೋತ್ರದವರು ಎಂದೇ ಪರಸಿದ್ಧರಾದರು. ಕಾಶಿಯಲ್ಲಿ ಶಿವ ಸಾನ್ನಿಧ್ಯ ಸದಾಕಾಲ ನೆಲಸಲಿಕ್ಕೆ ಕಾರಣನಾದ ದೀವೋದಾಸ ಮತ್ತು ಗೌತಮ ಋಷಿಯ ಪತ್ನಿ ಹಾಗೂ ರಾಮನಿಂದ ಉದ್ಧಾರವಾದ ಅಹಲ್ಯೆ ಈ ದಂಪತಿಗಳ ಮಕ್ಕಳು.  ಈ ದಂಪತಿಗಳ ಸಾಧನೆ ವಶಿಷ್ಟ, ಅತ್ರಿ, ಯಾಜ್ಞವಲ್ಕ್ಯ, ಉದ್ಧಾಲಕ ದಂಪತಿಗಳ ಸಾಧನೆಗಿಂತ ಕಡಿಮೆಯೇನೂ ಅಲ್ಲ. ದಾನ ಮತ್ತು ಶೌರ್ಯದಲ್ಲಿ ಸದಾಕಾಲವೂ ನಿರತರಾದ ಈ ದಂಪತಿಗಳು ತ್ಯಾಗ ಮತ್ತು ಸದಾಚಾರಕ್ಕೆ ಪ್ರೇರಣೆಯಾಗಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆ ಹೀಗಿತ್ತು!

Exit mobile version