ಭಾಗ- 2
ಹಿಂದಿನ ಭಾಗದಲ್ಲಿ ಅರ್ಜುನನ ವಿಷಾದ ಯೋಗಕ್ಕೂ ಮುನ್ನ ಧೃತರಾಷ್ಟ್ರನೊಳಗಿದ್ದ ತನ್ನವರು ಮತ್ತು ಹೊರಗಿನವರು ಅಂದರೆ ಪಾಂಡವರು ಎನ್ನುವ ಭಾವ ಯಾವಾಗ ಮೂಡಿತ್ತು ಎನ್ನುವದನ್ನು ಗಮನಿಸಿದ್ದೇವೆ. ಈಗ ಆತನ ಮಗ ಧುರ್ಯೋಧನ ಹೇಗೆ ಈ ಸಂದರ್ಭದಲ್ಲಿ ಮಾನಸಿಕ ಅಸಮತೋಲನದಲ್ಲಿದ್ದ ಎನ್ನುವದನ್ನು ಗಮನಿಸೋಣ.
ದೃಷ್ಟ್ವಾತು ಪಾಣ್ಡವಾನೀಕಂ ವ್ಯೂಢಂ ದುರ್ಯೋಧನಸ್ತದಾ
ಆಚಾರ್ಯಮುಪಸಙ್ಗಮ್ಯ ರಾಜಾ ವಚನಬ್ರವೀತ್
(ಭ. ಗೀ. 1-2)
(ವ್ಯೂಹಾಕಾರವಾಗಿ ರಚಿಸಿದ್ದ ಪಾಂಡವರ ಸೈನ್ಯವನ್ನು ನೋಡಿದ ಮೇಲಂತೂ ರಾಜನಾದ ದುರ್ಯೋಧನನು ಆಚಾರ್ಯನಾದ (ದ್ರೋಣರಲ್ಲಿ) ಹೀಗೆ ಹೇಳುತ್ತಾನೆ.)
ಬಾಲಗಂಗಾಧರ ಟಿಳಕರು ಗೀತೆಯ ಕುರಿತು “ಭಗವದ್ಗೀತೆ ಇಲ್ಲದಿದ್ದರೆ ಮಹಾಭಾರತಕ್ಕೆ ಯಾವ ತಾತ್ವಿಕ ಅರ್ಥವೂ ಇಲ್ಲ” ಎಂದಿದ್ದಾರೆ. ರಾಮಾಯಣದಲ್ಲಿಯೂ ರಾಮನಿಂದ ಭರತನಿಗೆ ರಾಜನೀತಿಯ ಉಪದೇಶ ಬರುತ್ತದೆ. ತುಂಬಾ ಮಹತ್ವದ ಸಂಗತಿಗಳನ್ನು ರಾಮ ಅಲ್ಲಿ ಭರತನಿಗೆ ವಿವರಿಸಿದ್ದಾನೆ. ಆದರೆ ಅದು ಕಾವ್ಯದ ತಿರುಳಾಗಿ ಬರದಿರುವದಕ್ಕೆ ಕಾರಣ ಆ ಭಾಗವಿಲ್ಲದಿದ್ದರೂ ರಾಮಾಯಣದ ಮಹತ್ವ ಕಡಿಮೆಯಾಗುವದಿಲ್ಲ. ಸಮಗ್ರವಾಗಿ ರಾಮನ ನಡೆಯೇ ಅಲ್ಲಿ ಪ್ರಧಾನವಾದುದು. ಆದರೆ ಮಹಾಭಾರತದಲ್ಲಿ ಹಾಗಲ್ಲ. ಚತುರ, ಗೊಲ್ಲ, ಪಾಂಡವ ಪಕ್ಷಪಾತಿ ಎಂದೆಲ್ಲ ಕರೆಯಿಸಿಕೊಂಡ ಕೃಷ್ಣ ಆಚಾರ್ಯನಾಗಿ ಗೋಚರಿಸುವದು ಭಗವದ್ಗೀತೆಯ ಮೂಲಕವಾಗಿ.
ಟಿಳಕರು ಮಹಾಭಾರತ ಮತ್ತು ಗೀತೆಯ ಶೈಲಿ ಒಂದೇ ಎಂದು ಅಭಿಪ್ರಾಯ ಪಡುತ್ತಾರೆ. ಗೀತೆಯೊಂದಿಲ್ಲದಿದ್ದರೆ ಮಹಾಭಾರತವೆನ್ನುವದು ಕೇವಲ ಅಸೂಯೆ, ಮೋಸ ಮತ್ತು ಸಿಂಹಾಸನಕ್ಕಾಗಿ ನಡೆದ ಒಂದು ಸಾಮಾನ್ಯವಾದ ಕಥೆಯಾಗಿಬಿಡುತ್ತಿತ್ತು. ಭಗವದ್ಗೀತೆಯೆನ್ನುವದು ಒಂದು ಜ್ಞಾನದೀಪವಾದರೆ ಇಡೀ ಮಹಾಭಾರತ ಈ ಜ್ಞಾನತತ್ವವನ್ನು ಬೆಳಗಿಸುವ ತೈಲವಾಗಿದೆ. “ಪ್ರಜ್ವಾಲಿತೋ ಜ್ಞಾನಮಯ ಪ್ರದೀಪ” ಎನ್ನುವ ಧ್ಯಾನ ಶ್ಲೋಕ ಇದನ್ನು ವಿವರಿಸಿದೆ. ಗೀತೆಯ ಮೊದಲ ಅಧ್ಯಾಯ ಅರ್ಜುನ ವಿಷಾದ ಯೋಗವೆಂದು ಕರೆದಿದ್ದಾರೆ. ಅರ್ಜುನನನ್ನು ಇಲ್ಲಿ ಅಸಮರ್ಪಕ ನಡವಳಿಕೆಯಿಂದ ಪಾರು ಮಾಡುವದು ಸ್ವಯಂ ಗೀತಾಚಾರ್ಯ. (Maladaptive behaviors are those that stops one from adapting to new or difficult circumstances) ಅರ್ಜುನ ಕೃಷ್ಣನನ್ನು “ವಾರ್ಷ್ಣೇಯ” ಅಂದರೆ ಬಯಸಿದ ಬಯಕೆಗಳನ್ನೆಲ್ಲಾ ಈಡೇರಿಸುವವ, ಎಂದು ಕರೆದಿದ್ದಾನೆ. ಪ್ರಕ್ಷುಬ್ಧವಾದ ಸಾಗರದಲ್ಲಿ ಹೊಯ್ದಾಡುತ್ತಿರುವ ನೌಕೆಯನ್ನು ನಿಪುಣನಾದ ನಾವಿಕ ಸರಿಯಾಗಿ ಹಾಯಿಯನ್ನು ಹಿಡಿದು ದಡ ಸೇರಿಸಬಲ್ಲ. ಅದೇ ರೀತಿ ಅರ್ಜುನನ ವಿಷಾದಗಳಿಗೆ ಕೃಷ್ಣ ಪರಿಹಾರವನ್ನು ಅರ್ಜುನನೊಳಗೇ ಮನನವಾಗುವಂತೆ ಮಾಡಿದ. ಹಾಗಾಗಿ ಕೊನೆಗೆ ತಾನು ಹೀಗೆ ಹೇಳಿದ ವಿಷಯಗಳನ್ನು ಚನ್ನಾಗಿ ಮನನ ಮಾಡಿಸಿಯಾದ ಮೇಲೆ “ಯಥೇಚ್ಛಸಿ ತಥಾ ಕುರು” ನಿನ್ನ ಇಚ್ಛೆ ಬಂದಂತೆ ಮಾಡು ಎನ್ನುತ್ತಾನೆ.
ಆದರೆ ಧೃತರಾಷ್ಟ್ರನ ಮನಸ್ಥಿತಿಯಲ್ಲಿ ಭಯ ಮತ್ತು ಆಸೆ ಇತ್ತು ಎನ್ನುವದನ್ನು ಮೊದಲನೇ ಶ್ಲೋಕದಲ್ಲಿ ʼಮಾಮಾಕಾಃ ಪಾಂಡವಾಶ್ಚೈವʼ ಎನ್ನುವದರಲ್ಲಿ ವ್ಯಕ್ತವಾಗಿದೆ. ಸಂಜಯನೂ ಸಾರಥಿ, ಕೃಷ್ಣನೂ ಸಾರಥಿ. ಆದರೆ ಸಂಜಯ ಕೃಷ್ಣನಂತಲ್ಲ. ಆತ ಅಲ್ಲಿ ಊಳಿಗದಾಳು ಅಷ್ಟೇ. ಹಾಗಾಗಿ ಆತ ತನ್ನ ಒಡೆಯನನ್ನು ಅತಿಕ್ರಮಿಸಲಾರ.
ಎರಡನೇ ಶ್ಲೋಕದಲ್ಲಿ ದುರ್ಯೋಧನನ ಪ್ರವೇಶವಾಗುತ್ತದೆ. ಆತ ಧೃತರಾಷ್ಟ್ರನ ಮಾನಸಿಕ ಸ್ಥಿತಿಯ ಮೂರ್ತರೂಪ. ಅದೇ ಕೆಲಕ್ಷಣಗಳ ಮೊದಲು ಆತನ ಅಜ್ಜ ಮತ್ತು ಸದ್ಯಕ್ಕೆ ಸೇನಾಪತಿಯಾದ ಭೀಷ್ಮ, ದುರ್ಯೋಧನನಿಗೆ ಪಾಂಡವರ ಮತ್ತು ಕೌರವರ ಸೇನಾಪ್ರಮುಖರ ಪರಿಚಯವನ್ನು ಮನನವಾಗುವಂತೆ ಮಾಡಿಕೊಟ್ಟಿದ್ದ. ಹಾಗೇ ಪರಿಚಯಿಸುವಾಗ ಎರಡು ಘಟನೆಗಳು ದುರ್ಯೋಧನನನ್ನು ವಿಚಲಿತನನ್ನಾಗಿ ಮಾಡಿದ್ದವು. ಮೊದಲನೆಯದು ಶಿಖಂಡಿಯನ್ನು ತೋರಿಸಿ ಆತನನ್ನು ತಾನು ಕೊಲ್ಲಲಾರೆ ಎಂದು ಅದಕ್ಕೆ ಕಾರಣವಾಗಿರುವ ಅಂಬೋಪಾಖ್ಯಾನದ ಕಥೆಯನ್ನು ಹೇಳಿರುವದು. ಎರಡನೆಯದು ಕರ್ಣನನ್ನು ಅರ್ಧರಥಿಕನ ಸಾಲಿಗೆ ಸೇರಿಸಿದಾಗ ಸಿಟ್ಟಿಗೆದ್ದ ಕರ್ಣ ಭೀಷ್ಮನ ಮೇಲೆಯೇ ಏರಿ ಹೋದದ್ದು. ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದರೂ ತನ್ನ ಪ್ರಾಣದ ಮೇಲಿನ ಹೆದರಿಕೆಯಿರುವ ಅಶ್ವತ್ಥಾಮ, ಅರ್ಜುನನ ಕುರಿತಾದ ವಾತ್ಸಲ್ಯವುಳ್ಳ ದ್ರೋಣ, ಸರ್ವದಾ ದಯಾಪರನಾದ ಕರ್ಣ… ಹೀಗೆ ತನ್ನ ಸೈನ್ಯದಲ್ಲಿರುವ ಅತಿರಥ ಮಹಾರಥರ ಗುಣ ದೋಷಗಳನ್ನು ಕೇಳಿದ ಮೇಲೆ ದುರ್ಯೋಧನ ಒಳಗೊಳಗೇ ಅಳುಕಿದ್ದಾನೆ. ಇದರ ನಡುವೆ ಕರ್ಣ ಭೀಷ್ಮರ ನಡುವಿನ ಭಿನ್ನಾಭಿಪ್ರಾಯ ಆತನ ಚಿಂತೆಗಳನ್ನು ಹೆಚ್ಚಿಸಿದೆ.
ವ್ಯಾಸರು ಇಲ್ಲಿ ಯುದ್ಧದ ಪೂರ್ವದಲ್ಲಿ ಧೃತರಾಷ್ಟ್ರ, ದುರ್ಯೋಧನ ಮತ್ತು ಅರ್ಜುನರ ಮನಸ್ಥಿತಿಯನ್ನು ನಮ್ಮೆದುರು ಬಿಚ್ಚಿಡುತ್ತಾರೆ. ಭೀಷ್ಮ ಧೈರ್ಯ ತುಂಬಿದರೂ ಧುರ್ಯೋಧನನ ಮನಸ್ಸಿನಲ್ಲಿ ಒಳಗೋಳಗೇ ಅಳುಕು. ಯುದ್ಧವೆನ್ನುವದು ಮನಸ್ಸಿನಾಟವೂ ಹೌದು. ಎಷ್ಟೇ ಅಬ್ಬರಿಸಿದರೂ ಕೌರವನಿಗೆ ಪಾಂಡವರ ಪರಾಕ್ರಮದ ಕುರಿತು ಅಳುಕಿದೆ. ಆ ಕಾರಣದಿಂದಲೇ ಮೋಸದ ಜೂಜಿನಲ್ಲಿ ಅವರ ಸಂಪತ್ತನ್ನು ಅಪಹರಿಸಿದ್ದ. ಅದೂ ಅಲ್ಲದೇ ದೈಹಿಕವಾಗಿ ತನ್ನೊಂದಿಗಿದ್ದವರೆಲ್ಲರೂ ಮಾನಸಿಕವಾಗಿ ಪಾಂಡವರ ಪಕ್ಷಪಾತಿಗಳು ಎಂದು ಆತನಿಗೆ ಮೊದಲೇ ತಿಳಿದಿದೆ. ಗೀತೆಯ ಮೊದಲ ಅಧ್ಯಾಯವಾದ ವಿಷಾದಯೋಗದಲ್ಲಿ ಅರ್ಜುನನಿಗುಂಟಾದ ವಿಷಾದಕ್ಕೆ ಕಾರಣ ಯುದ್ಧಭೂಮಿಯಲ್ಲಿರುವವರೆಲ್ಲರೂ ತನ್ನವರು ಎನ್ನುವ ಭಾವನೆ. ದುರ್ಯೋಧನನಿಗೆ ಹಾಗಿಲ್ಲ. ಆತನಿಗೆ ಮನಸ್ಸಿನಲ್ಲಿರುವದು ವಿಷಾದವಲ್ಲ. ಅದು ಗೊಂದಲ. ಈ ಗೊಂದಲವನ್ನು ಪರಿಹರಿಸಲು ಆತನಿಗೆ ಕೃಷ್ಣನಂತಹ ಮಾರ್ಗದರ್ಶಕ ಸಿಕ್ಕಿಲ್ಲ. ಕಪಟಿ ಶಕುನಿ ಕಪಟನಾಟಕಿಯಲ್ಲ. ಕಪಟನಾಟಕವೆಂದರೆ ತೋರಿಕೆಗೆ ಪ್ರದರ್ಶಿಸುವದು ಮಾತ್ರ. ಒಳಗಿನ ನಟ ಹಾಗಿಲ್ಲ. ಶಕುನಿಯ ಸಮಗ್ರ ವ್ಯಕ್ತಿತ್ವವೇ ಕಪಟತನ. ಇಂತಹವರು ಬಯಲಲ್ಲಿ ಬಂದರೆ ನಿಜವಾದ ಬಣ್ಣ ಬಯಲಾಗುವದು. ಬಯಲಲ್ಲಿ ನಿಂತವ ಅಡಗಿಕೊಳ್ಳಲೂ ಆಗುವದಿಲ್ಲ.
ಇಲ್ಲಿ ಯುದ್ಧವೆಂದಾಗ ದುರ್ಯೋಧನ ಹನ್ನೊಂದು ಅಕ್ಷೋಹಿಣಿ ಸೈನ್ಯವಿದ್ದೂ ಅಳುಕಿದ್ದಾನೆ. ಭೀಷ್ಮರು ಪಾಂಡವರ ಕಡೆಯ ವೀರರನ್ನು ಪರಿಚಯಿಸಿದ ಮೇಲೆ ಆತ ಪಾಂಡವರ ಸೇನೆಯತ್ತ ನೋಡಿದನಂತೆ. ಸಮಗ್ರವಾದ ಸೇನೆಯನ್ನಲ್ಲ. ಕೇವಲ ಆನೀಕವನ್ನು. (ದೃಷ್ಟ್ವಾತು ಪಾಣ್ಡವಾನೀಕಂ) ಅನೀಕಿನಿಯೆಂದರೆ ಒಂದು ಅಕ್ಷೋಹಿಣಿಯ ಹತ್ತನೆಯ ಒಂದು ಭಾಗ. (2187 ಆನೆ, 2187 ರಥ, 6561 ಕುದುರೆಗಳು ಮತ್ತು 10935 ಕಾಲಾಳುಗಳು). ದೃಷ್ಟದ್ಯುಮ್ನನ ನೇತೃತ್ವದಲ್ಲಿ ಶಿಸ್ತುಬದ್ಧವಾಗಿ ವ್ಯೂಹವನ್ನು ರಚಿಸಿಕೊಂಡು ಆಕ್ರಮಣಕ್ಕೆ ಸಿದ್ಧವಾಗಿ ನಿಂತ (ವ್ಯೂಢಂ) ಪಾಂಡವಸೇನೆಯ ಒಂದು ಆನೀಕವನ್ನು ನೋಡಿದೊಡನೆಯೇ ದುರ್ಯೋಧನನ ಮನಸ್ಸಿನಲ್ಲಿ ಅಳಕುಂಟಾಯಿತಂತೆ. ತನ್ನ ಸೇನೆಯಲ್ಲಿ ದೇವತೆಗಳನ್ನೇ ಸೋಲಿಸುವ ಪರಾಕ್ರಮಿಗಳಿದ್ದರೂ, ಸಂಪತ್ತು ಬೇಕಾದಷ್ಟಿದ್ದರೂ ಕೌರವನಿಗೆ ಮಾನಸಿಕ ಗೊಂದಲ ಕಾಡಿತ್ತು. ಅನುಭವ ಎನ್ನುವದು ಮಾನಸಿಕ ಸ್ಥಿತಿ. ಸಪ್ತತಾರಾ ಹೋಟೇಲಿನಲ್ಲಿ ಮಲಗಿದರೂ ಮಾನಸಿಕ ತೊಳಲಾಟದಿಂದ ಕೆಲವರಿಗೆ ನಿದ್ದೆ ಬರುವದಿಲ್ಲ. ಇಲ್ಲಿಯೂ ಹಾಗೆ.
ಹನ್ನೆರಡು ವರುಷ ವನವಾಸ ಮತ್ತು ಅಜ್ಞಾತವಾಸವನ್ನು ಅನುಭವಿಸಿದವರು ಪಾಂಡವರಾದರೂ ಅದನ್ನು ಅವರು ತಮ್ಮ ವ್ಯೂಹವನ್ನು ಬಲಿಯಲು ಬಳಸಿಕೊಂಡರು. ಅರ್ಜುನ ಐದು ವರ್ಷಗಳ ಕಾಲ ತಪಸ್ಸು ಮತ್ತು ದೇವಲೋಕಕ್ಕೆ ಹೋಗಿದ್ದು ಅಸ್ತ್ರಶಸ್ತ್ರಗಳ ಸಂಗ್ರಹಕ್ಕಾಗಿಯೇ. ಧರ್ಮರಾಯ ಋಷಿಮುನಿಗಳ ಸಹವಾಸದಲ್ಲಿ ಧರ್ಮಸೂಕ್ಷ್ಮತೆಯನ್ನು ಅರಿತುಕೊಂಡ. ಆದರೆ ಪಾಂಡವರ ವನವಾಸದ ಅವಧಿಯನ್ನು ಲೆಕ್ಕವಿಟ್ಟವ ಕೌರವ. ದಿನ ಸರಿದಂತೆ ಗೊಂದಲಕ್ಕೊಳಗಾದವನೂ ಆತನೇ. ಪಾಂಡವರನ್ನು ಹುಡುಕಲು ಗೋಗ್ರಹಣದ ನೆಪದಲ್ಲಿ ವಿರಾಟನ ರಾಜ್ಯದ ಮೇಲೆ ಏರಿಹೋಗಿ ಏಕಾಂಗಿಯಾಗಿದ್ದ ಅರ್ಜುನನೊಡನೆ ಪರಾಭವಗೊಂಡಿದ್ದ. ಈ ಎಲ್ಲ ಕಾರಣದಿಂದಲೇ ಭೀಷ್ಮರ ಮಾತುಗಳನ್ನು ಕೇಳಿಯೂ ಮಾನಸಿಕವಾಗಿ ಆಘಾತಗೊಂಡಿದ್ದ. Maladptivneess ಆತನನ್ನು ಆವರಿಸಿಕೊಂಡಿತ್ತು. ತಾನು ಗೆದ್ದೇ ಗೆಲ್ಲುತ್ತೇನೆ ಎಂದು ಯುದ್ಧಭೂಮಿಗೆ ಬಂದವ ಕೇವಲ ಒಂದು ಅನೀಕವನ್ನು ನೋಡಿಯೇ ವಿಪ್ಲವದಿಂದ ಗೊಂದಲಕ್ಕೊಳಗಾದ. ಆದರೂ ಆತನಿಗೆ ಹೊರಗಡೆ ತಾನು ಹೆದರಿಲ್ಲ ಎಂದು ತೋರಿಸಿಕೊಳ್ಳುಬೇಕಾಗಿತ್ತು. ಈಗ ಆತ ನೆಚ್ಚಿಕೊಳ್ಳುವದು ತನ್ನ ಮಿತ್ರ ಕರ್ಣ, ಭಾವ ಸೈಂಧವ, ಮಾವ ಶಕುನಿ, ತಮ್ಮ ದುಃಶಾಸನರುಗಳನ್ನಲ್ಲ. ಆಚಾರ್ಯರಾದ ದ್ರೋಣರನ್ನು. ಅವರೆಡೆ ಸಾಗಿ ಅವರೊಡನೆ “ನಿನ್ನ ಶಿಷ್ಯನೂ ಬುದ್ಧಿವಂತನೂ ಆದ ದೃಷ್ಟದ್ಯುಮ್ನನಿಂದ ವ್ಯೂಹಾಕಾರವಾಗಿ ರಚಿತವಾದ ಪಾಂಡುಪುತ್ರರ ಮಹಾಸೈನ್ಯವನ್ನು ನೋಡಿ” ಎನ್ನುತ್ತಾನೆ. ಇಲ್ಲಿ ದುರ್ಯೋಧನನ ಅಹಂಕಾರವನ್ನು ಗಮನಿಸಬಹುದು. ಕೃಪಾಚಾರ್ಯರು, ಭೀಷ್ಮ, ಶಲ್ಯ ಮುಂತಾದವರಿದ್ದರೂ ಅವರೊಡನೆ ಅಧಿಕಾರ ಚಲಾಯಿಸಲು ಆತನಿಗೆ ಅಳಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ
ಯುದ್ಧದ ವಿಷಯಗಳನ್ನು ಸೇನಾಪತಿಯಾದ ಭೀಷ್ಮರೊಡನೆ ಸಮಾಲೋಚಿಸಬೇಕಾದದ್ದು ಯುದ್ಧನೀತಿಯನ್ನು ಬಲ್ಲವರು ಹೇಳುವ ಮಾತು. ಭೀಷ್ಮರೊಡನೆ ಆತ ಪರಾಮರ್ಶೆ ಮಾಡಬೇಕಿತ್ತು. ಆದರೆ ಅವರ ಸಾತ್ವಿಕ ತೇಜಸ್ಸಿನ ಮುಂದೆ ದುರ್ಯೋಧನ ಮಾತಾಡಲಾರ. ದ್ರೋಣಾಚಾರ್ಯ ಹಾಗಲ್ಲ. ಅವರು ರಾಜಕುಮಾರರಿಗೆಲ್ಲ ಗುರುವಾದರೂ ಹಣಕ್ಕಾಗಿ ತನ್ನ ಬ್ರಾಹ್ಮಣ್ಯವನ್ನು ರಾಜಕುಟುಂಬಕ್ಕೆ ಒತ್ತೆಯಾಗಿಟ್ಟವರು. ಹಾಗಾಗಿಯೇ ಅವರಲ್ಲಿ ಅಧಿಕಾರವಾಣಿಯಿಂದಲೇ ಮಾತಾಡುತ್ತಾನೆ. “ವ್ಯೂಢಾಂ ದ್ರುಪದ ಪುತ್ರೇಣ ತವ ಶಿಷ್ಯೇಣ ಧೀಮತಾ- ನಿನ್ನ ಜಾಣ ಶಿಷ್ಯ ದ್ರುಪದ ಪುತ್ರನಿಂದ ಸಜ್ಜುಗೊಂಡಿದೆ” ಎನ್ನುವ ನಂಜಿನ ಮಾತನ್ನಾಡುತ್ತಾನೆ. ದ್ರೋಣರಿಗೆ ಸೃಂಜಯರ ಕುರಿತಾಗಿರುವ ದ್ವೇಷವನ್ನು ಜಾಗ್ರತಗೊಳಿಸುವ ಕಾರ್ಯವನ್ನು ಮಾಡುತ್ತಾನೆ.
ಮುಂದಿನ ಶ್ಲೋಕದಲ್ಲಿ ಆತ ಪಾಂಡವರ ಮ್ರಮುಖ ವೀರರ ಹೆಸರನ್ನೆಲ್ಲವನ್ನೂ ಮತ್ತೊಮ್ಮೆ ಹೇಳುವದು ದ್ರೋಣಾಚಾರ್ಯರಿಗೆ ತಿಳಿದಿಲ್ಲವೆಂದಲ್ಲ. ಭೀಷ್ಮರು ಆ ಎಲ್ಲ ವೀರರ ಪರಿಚಯ ಹೇಳಿದೊಡನೆಯೇ ಆತನ ಮನಸ್ಸಿನಲ್ಲಿರುವ ಅಳಕು ಇಲ್ಲಿ ವ್ಯಕ್ತವಾಗಿದೆ. ಅವರೆಲ್ಲರೂ ಭೀಮಾರ್ಜುನರಿಗೆ ಸಮನಾದ ವೀರರು ಎನ್ನುವದು ಇವನ ಕಳವಳವನ್ನು ಇಮ್ಮಡಿಗೊಳಿಸಿದೆ. ತಮ್ಮಲ್ಲಿರುವ ದಿವ್ಯಾಸ್ತ್ರಗಳಿಂದ ಎಲ್ಲರನ್ನೂ ನಾಶಮಾಡಬಲ್ಲ, ದ್ರೋಣಾಗ್ನಿ ಎನ್ನುವದು ಹುಲ್ಲು ಮತ್ತು ಸೊದೆಯ ರೂಪದಲ್ಲಿರುವ ಯುಧಿಷ್ಠಿರನ ಸೈನ್ಯವನ್ನೆಲ್ಲವನ್ನೂ ಸುಟ್ಟುಬಿಡಬಲ್ಲದು ಎನ್ನುವದನ್ನು ತಿಳಿದಿದ್ದಾನೆ. ಆದರೂ ಆತನಿಗೆ ಅಧೈರ್ಯ. ಅತನಿಗೆ ಭೀಮಾರ್ಜುನರಂತೇ ಎದುರುಪಾಳಯದ ಎಲ್ಲರೂ ಕಾಣುತ್ತಾರೆ. ನಮ್ಮ ಕಡೆ ಇರಬೇಕಾದ ಸಾತ್ಯಕಿ, ವಿರಾಟ ದ್ರುಪದರೆಲ್ಲರೂ ಪಾಂಡವರ ಕಡೆ ಇದ್ದಾರಲ್ಲ ಎನ್ನುವ ವಿಷಾದವನ್ನು ಆತನ ಮಾತಿನಲ್ಲಿ ಗಮನಿಸಬಹುದು. ಅಂತರಂಗದಲ್ಲಿ ಭಯವನ್ನೇ ತುಂಬಿಕೊಂಡ ವ್ಯಕ್ತಿಯಿಂದ ಬರಬಹುದಾಂತಹ ಮಾತುಗಳು ಇಲ್ಲಿ ದುರ್ಯೋಧನನಿಂದ ವ್ಯಕ್ತವಾಗಿವೆ. Cognitive dissonance has lead him to extreme emotion- ಆತನ ಅರಿವಿನಲ್ಲಿ ಅಪಶ್ರುತಿ ಮೂಡಿದೆ.
ದುಷ್ಟಭಾವನೆಯಿಂದ ಕೂಡಿದವನಿಗೆ ಮರಣಭಯದ ಮೊಳಕೆಯೊಡೆದಿದ್ದು ಇಲ್ಲಿಯೇ. ಅದನ್ನು ಒಪ್ಪಿಕೊಳ್ಳದೇ ಗುರುವೆಂದು ಲೆಕ್ಕಿಸದೇ ದ್ರೋಣಾಚಾರ್ಯರನ್ನು ಮಾತಿನಿಂದಲೇ ಚುಚ್ಚುತ್ತಾನೆ. ಸೇನಾಪತಿಯಾದ ಭೀಷ್ಮರನ್ನು ರಕ್ಷಿಸಬೇಕಾದದ್ದು ನಿಮ್ಮ ಕರ್ತವ್ಯ ಎನ್ನುವಲ್ಲಿ ತನ್ನ ಸೇನಾಪತಿಯ ಮೇಲೇ ರಾಜನಾದವನಿಗೆ ಗೌರವವಿಲ್ಲದಿರುವದನ್ನು ಗಮನಿಸಬಹುದು. ಈ ರೀತಿ Cognitive dissonance ಮನಸ್ಥಿತಿಯಿರುವವರಲ್ಲಿ ತಮ್ಮ ಶಕ್ತಿಯ ಕುರಿತು ಆತ್ಮವಿಶ್ವಾಸವಿರುವದಿಲ್ಲವೆನ್ನುವದಕ್ಕೆ ದುರ್ಯೋಧನನ ಈ ಶ್ಲೋಕಗಳೇ ಸಾಕ್ಷಿ. ಆತನಿಗೆ ಪಾಂಡವರ ಪಕ್ಷದಲ್ಲಿ ಭೀಮನೇ ಕಾಣುತ್ತಿದ್ದಾನೆ. ಅದನ್ನೇ,
ಅಪರ್ಯಾಪ್ತಂ ತದಸ್ಮಾಕಂ ಬಲಂ ಭೀಷ್ಮಾಭಿರಕ್ಷಿತಮ್ I
ಪರ್ಯಾಪ್ತಂ ತ್ವಿದಮೇತೇಷಾಂ ಬಲಂ ಭೀಮಾಭಿರಕ್ಷಿತಮ್ II ಭ-1-10
(ಭೀಷ್ಮರಿಂದ ರಕ್ಷಿತವಾದ ಆ ನಮ್ಮ ಸೇನೆ ಅಪರಿಮಿತವಾಗಿದೆ, ಆದರೆ ಭೀಮನಿಂದ ರಕ್ಷಿತವಾದ ಈ ಪಾಂಡವರ ಸೇನೆಯಾದರೂ ಪರಿಮಿತವಾಗಿದೆ.) ಎನ್ನುತ್ತಾನೆ.
ಈ ಮೊದಲು ಕೇವಲ ಪಾಂಡವರ ಸೈನ್ಯದ ಒಂದು ಭಾಗವನ್ನು (ಆನೀಕ) ನೋಡಿ ವಿಹ್ವಲನಾದ ದುರ್ಯೋಧನ ಕೊನೆಗೆ ತನ್ನ ಸೇನೆಯು ಅಪರಿಮಿತವಾಗಿದೆ ಎನ್ನುವ ಭಂಡಧೈರ್ಯವನ್ನು ತೋರುತ್ತಾನೆ. ಆತನಿಗೆ ಎದುರು ಪಾಳಯದಲ್ಲಿ ಭೀಮನೇ ಮುಖ್ಯನಾಗಿ ಕಾಣುತ್ತಾನೆ. ಯಥಾರ್ಥವಾಗಿ ಪಾಂಡವಸೇನೆಯ ಮುಂದಾಳು ದೃಷ್ಟದುಮ್ನ. ಆದರೆ ಭೀಮ ಪಾಂಡವರು ಬಲಿದ ವಜ್ರವ್ಯೂಹದ ಮುಂಬಾಗದಲ್ಲಿ ನಿಂತು ತನ್ನ ಸೇನೆಯನ್ನು ರಕ್ಷಿಸುತ್ತಿದ್ದನು. ಅದನ್ನೇ ಭೀಮಾಭಿರಕ್ಷಿತಮ್ ಎಂದಿರಬೇಕು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಭೋಗ ಮೀರಿದ ದೊರೆತನದ ಯೋಗ ಕಾಣಿಸಿದವನು
ಗಮನಿಸಬೇಕಾದ ಸಂಗತಿಯೆಂದರೆ ಇಲ್ಲಿ ದುರ್ಯೋಧನನಿಗೆ ದೂರದಲ್ಲಿರುವ ಪಾಂಡವ ಸೇನೆ ತನ್ನ ಸೇನೆಯಾಗಿ ಕಾಣುತ್ತಿದೆ. ತನ್ನನ್ನು ಆವರಿಸಿರುವ ತನ್ನ ಸೇನೆ ಆ ಸೇನೆ ಎನ್ನುವದರ ಮೂಲಕ ತನ್ನವರ ಮೇಲೆಯೇ ಆತನಿಗೆ ಅಪನಂಬಿಕೆ ಮೂಡಿದೆ. ಆತನ ವಿಕ್ಷಿಪ್ತ ಮನೋಭಾವ ಆತನಿಂದ ಈ ಮಾತುಗಳನ್ನು ಆಡಿಸುತ್ತಿದೆ. ತನ್ನ ಅಜ್ಜ ಭೀಷ್ಮರನ್ನು ನೀವೆಲ್ಲರೂ ಸೇರಿ ರಕ್ಷಿಸಬೇಕು ಎನ್ನುವ ಆದೇಶಗಳನ್ನು ಕೊಡುವದನ್ನು ನೋಡಿದರೆ ತನ್ನ ಸೇನಾಪತಿಯ ಮೇಲೆ ಅಪನಂಬಿಕೆ ಮೂಡಿದೆ. ಈ ಮೊದಲು ಕರ್ಣ ದುರ್ಯೋಧನನಿಗೆ ಭೀಷ್ಮನ ಕುರಿತು ತಿರಸ್ಕಾರದ ಮಾತುಗಳನ್ನು ಹೇಳಿದ್ದ. ಈ ದೂಷಣೆಗಳು ಆತನ ಭಿತ್ತಿಯಲ್ಲಿ ಉಳಿದುಕೊಂಡಿದ್ದವು. ಅವರಲ್ಲಿ ಅಪನಂಬಿಕೆ ಅದಾಗಲೇ ಬಂದಿವೆ ಎನ್ನುವದು ಸ್ಪಷ್ಟ. ಭೀಷ್ಮರು ದುರ್ಯೋಧನನ ಈ ಮನೋಭಾವವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತನ್ನನ್ನು ರಕ್ಷಿಸಬೇಕೆನ್ನುವ ಮಾತುಗಳು ಅವರಿಗೆ ಸಹ್ಯವಾಗಿಲ್ಲ. ಯಾವ ವಂಶಕ್ಕಾಗಿ ತನ್ನನ್ನೇ ತಾನು ಅರ್ಪಿಸಿಕೊಂಡು ನಿಸ್ಪ್ರಹತೆಯಿಂದ ಸೇವೆ ಸಲ್ಲಿಸುತ್ತಿರುವ ಆ ಹಿರಿಯ ಜೀವಕ್ಕೆ ಅದೆಷ್ಟು ನೋವು ಈ ಮಾತಿನಿಂದಾಯಿತೋ ಏನೋ. ತಾನೇ ತಂದು ಸಲಹಿದ ತನ್ನ ಮೊಮ್ಮಕ್ಕಳಾದ ಪಾಂಡವರ ವಿರುದ್ಧ ತನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ಕತ್ತಿ ಎತ್ತಿ ನಿಂತಿದ್ದರೋ ಅಂತಹ ಹಿರಿಯ ಜೀವಕ್ಕೆ ಸ್ಥಿಮಿತ ಕಳೆದುಕೊಂಡ ಕೌರವ ಕೊಟ್ಟ ಉಡುಗೊರೆ ಇದು. ಈ ರೊಚ್ಚು ಅವರನ್ನು ಕೆರಳಿಸಿರಬೇಕು. ತಾಳ್ಮೆ ಕಳೆದುಕೊಳ್ಳುವದಿಲ್ಲ ಅವರು. ಅವನಿಗೆ ಧೈರ್ಯ ತುಂಬುವದೇ ತನ್ನ ಕರ್ತವ್ಯವೆಂದು ತಿಳಿದು ಸಿಂಹನಾದವನ್ನು ಮಾಡಿ ಶಂಖನಾದವನ್ನು ಮಾಡುತ್ತಾರೆ. ಇದನ್ನು ಕೇಳಿಯೂ ದುರ್ಯೋಧನನ ಮನಸ್ಸಿನ ಸಂಶಯ ದೂರವಾಗಿಲ್ಲವೆನ್ನುವದನ್ನು 19ನೆಯ ಶ್ಲೋಕದಲ್ಲಿ ಕಾಣಬಹುದು. “ಸ ಘೋಷೋ ಧಾರ್ತರಾಷ್ಟ್ರಾಣಾಂ ಹೃದಯಾನಿ ವ್ಯದಾರಯತ್ʼʼ ಪಾಂಡವಪಕ್ಷದಿಂದ ಹೊರಟ ಶಂಖನಾದ ಕೌರವಾದಿಗಳ ಎದೆ ನಡುಗಿಸಿತಂತೆ.
ಗೀತೆಯ ವಿಷಾದ ಯೋಗದಲ್ಲಿ ಆತ್ಮವಿಶ್ವಾಸ ಮತ್ತು ತನ್ನ ಬಲದ ಕುರಿತು ಅಳುಕಿರುವ ದುರ್ಯೋಧನ ಗೊಂದಲದಿಂದಲೇ ಕೂಡಿದ್ದ ಮತ್ತು ಅದೇ ಗೊಂದಲದ ಕಾರಣದಿಂದಲೇ ಸತ್ತುಹೋದ ಎನ್ನುವದನ್ನು ಕಾಣಬಹುದಾಗಿದೆ. ಅರ್ಜುನನದು ಡಿವಿಜಿಯವರು ತಿಳಿಸಿದಂತೆ ವಿಷಾದವಲ್ಲ, ಅದು ಪ್ರಾಕೃತ ಕಾರುಣ್ಯ. ದೃತರಾಷ್ಟ್ರನದ್ದು ಭಯಗ್ರಸ್ತ ಸ್ವಾರ್ಥವಾದರೆ, ದುರ್ಯೋಧನನಲ್ಲಿ ಅರಿವಿನ ಅಸ್ಪಷ್ಟತೆ ಎದ್ದು ಕಾಣುತ್ತದೆ.