ಅಳುವ ಇಳೆಯ ಉಳಿಸಿದ ಕೃಷ್ಣಾವತರಣ
ಜಗದೀ ಮಾಯೆಯ ಹೊಳಲಿಡುತಿರುವಾ
ಮರೆ ದೈವದ ಕೊಳಲ
ನಮ್ಮೆದೆ ಅರೆಚಣವಾದರು ಲಾಲಿಸಿ
ನೀಗಲಿ ಭವದಳಲ
(ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರ “ಗೋಕುಲ ನಿರ್ಗಮನ” ಕೃತಿಯ ನಾಂದಿ ಪದ್ಯ)
ಕೃಷ್ಣ ಎಂದರೆ ಒಂದು ಆಕರ್ಷಣೆ. ಬಿಡಿಸಲಾರದ ಮೋಹ, ಬಂಧ, ಚತುರ ಹೇಗೆ ಬೇಕಾದರೂ ಕಲ್ಪಿಸಿಕೊಳ್ಳಬಹುದು. ಭಾರತೀಯ ಕಾವ್ಯ ಪರಂಪರೆ ಕಟ್ಟಿಕೊಟ್ಟ ಪಾತ್ರಗಳಲ್ಲಿ ಇಷ್ಟೊಂದು ವೈವಿಧ್ಯಮಯ ವ್ಯಕ್ತಿತ್ವ ಬೇರೆ ಎಲ್ಲೂ ಸಿಗದು. ಮಹಾಕಾವ್ಯದ ನಾಯಕರು ದೇವರಾಗಿ ಮಾನಸದಲ್ಲಿ ನೆಲೆಸಿರುವ ಎರಡು ಉದಾಹರಣೆಗಳೇ ರಾಮ ಮತ್ತು ಕೃಷ್ಣರು. ರಾಮ ತಾನು ದೇವರೆಂದು ಒಪ್ಪಿಕೊಳ್ಳುವುದೇ ಇಲ್ಲ. ರಾವಣವಧೆಯ ನಂತರ ಸೀತೆಯನ್ನು ಅಗ್ನಿ ಪರೀಕ್ಷೆಗೆ ಒಳಪಡಿಸುವಾಗ ದೇವತೆಗಳು, ಬ್ರಹ್ಮ, ಸಾಕ್ಷಾತ್ ದಶರಥನ ಸಹಿತ ಬಂದು ಈ ನಿನ್ನ ನಾಟಕ ಸಾಕು ಇಷ್ಟೆಲ್ಲ ಪಾತ್ರದೊಳಗೆ ಮುಳುಗಿ ಹೋಗಬಾರದು ಎಂದು ಹೇಳುವ ಸನ್ನಿವೇಶ ಬರುತ್ತದೆ. ಆಗ ರಾಮ ಅವರಿಗೆ
ಆತ್ಮಾನಾಂ ಮಾನುಷಂ ಮನ್ಯೇ ರಾಮಂ ಧಶರಥಾತ್ಮಜಂ
ಸೋಹಂ ಯಸ್ಯ ಯತಶ್ಚಾಹಂ ಭಗವಾಂಸ್ತದ್ಬ್ರವೀತು ಮೇ II
“ದೇವತೆಗಳೆ ನಾನು ಮನುಷ್ಯನೆಂದು ದಶರಥನ ಮಗನಾದ ರಾಮನೆಂದೂ ತಿಳಿದಿರುವೆನು. ನಾನು ಯಾರವನು. ಯಾವ ಪ್ರಯೋಜನಕ್ಕಾಗಿ ಎಲ್ಲಿಂದ ಬಂದಿರುವೆನು ಎಂಬುದು ನಿಮಗೇನಾದರೂ ತಿಳಿದಿದ್ದರೆ ನೀವೇ ದಯಮಾಡಿ ಹೇಳಿ” ಎಂದು ಮರುಪ್ರಶ್ನೆ ಹಾಕುತ್ತಾನೆ. ಈ ಪ್ರಶ್ನೆಗಳನ್ನು ಕೇಳಿದ ದೇವತೆಗಳು ರಾಮನನ್ನು ಯಾರು ಎಂದು ಹೇಳುವುದು ಎಂದು ತಿಳಿಯದೇ ಮೌನವಾಗಿಬಿಟ್ಟರು. ಓರ್ವನ ಪರಿಚಯವನ್ನು ಹೇಳುವಾಗ ಆತನ ಕುರಿತು ಸಮಗ್ರವಾದ ತಿಳುವಳಿಕೆ ಇಲ್ಲದೇ ಹೇಳಲಾಗದು. ರಾಮ ಸಹ ಭೂಮಿಯಲ್ಲಿ ತಾನು ಮಾಡುತ್ತಿರುವ ಕಾರ್ಯ ತನಗೆ ಗೊತ್ತಿಲ್ಲದೇ ಮಾಡುತ್ತಿರುವುದಲ್ಲ ಎನ್ನುವುದನ್ನು ಸೂಕ್ಷ್ಮವಾಗಿ ಹೇಳುತ್ತಾನೆ. ನಿಮಗೇನು ಗೊತ್ತಿದೆ ಎನ್ನುವುದರ ಅರ್ಥ ತನಗೆ ತಿಳಿದಿದೆ; ನಿಮಗೆ ತಿಳಿದಿಲ್ಲ ಎನ್ನುವ ಉತ್ತರವನ್ನೂ ನೀಡುತ್ತದೆ.
ರಾಮಾಯಣದಲ್ಲಿ ವಾಲ್ಮೀಕಿಯ ಹುಡುಕಾಟವೂ ಹದಿನಾರು ಗುಣಗಳಿರುವ ಮನುಷ್ಯನ ಕುರಿತೇ ಹೊರತೂ ದೇವರಾಗಿ ಅಲ್ಲ. ಹಿಂಸಾರತಿಯಲ್ಲಿಯೇ ಬದುಕನ್ನು ಸಾಗಿಸುತ್ತಿರುವ ಬೇಡ ಸಮಾಜಕ್ಕೂ ಬೇಡನಾಗಿದ್ದ. ಸಪ್ತರ್ಷಿಗಳ ಮಾತಿನಿಂದ ಪ್ರಭಾವಿತನಾದ ಬೇಡ ತನ್ನೊಳಗಿರುವ ಮಾನವತ್ವವನ್ನು ಹೊರತರುವ ಪ್ರಕ್ರಿಯೆಯೇ ಹುತ್ತಗಟ್ಟಿದ ಸ್ಥಿತಿ. ಆತನಿಗೆ ರಾಮನ ರೂಪ ಅಸ್ಪಷ್ಟವಾಗಿ ಕಾಣಿಸಿತು ಎನ್ನುವುದನ್ನು ಅಡಿಗರು “ರಾಮನವಮಿಯ ದಿವಸ” ಕವನದಲ್ಲಿ ತುಂಬಾ ಚನ್ನಾಗಿ ಬರೆದಿದ್ದಾರೆ.
ವೇದೋಪನಿಷದಗಳ ಭೂತಗನ್ನಡಿಯೊಳಗೆ
ಪಡಿಮೂಡಿದಾಕೃತಿಗೆ ತಾನೆ ಮುಗ್ಧ
ಮತ್ಸ್ಯಕೂರ್ಮವರಾಹ ಮೆಟ್ಟಲುಗಳೇರುತ್ತ
ಹುತ್ತಗಟ್ಟಿದ ಕೈ ಕಡೆದ ನೋಟ.
ವಾಲ್ಮೀಕಿಗೆ ವೇದ ಉಪನಿಷತ್ತುಗಳಲ್ಲಿ ವರ್ಣಿಸಿದ ಪುರುಷನ ರೂಪು ನೆನಪಿಗೆ ಬರುತ್ತದೆ. ನಾವು ಅನುಭವದ ಮೇಲೆ ಪ್ರಪಂಚವನ್ನು ಕಾಣುವಷ್ಟು ಸುಲಭವಾಗಿ ದರ್ಶನದ ಮೂಲಕ ನಂಬಲಾರೆವು. ಹುತ್ತಗಟ್ಟುವುದೆಂದರೆ ಹರಳುಗಟ್ಟುವುದು. ಆದರೆ ಯಾವುದೋ ಒಂದು ವ್ಯಕ್ತಿತ್ವ ಆತನ ಮನಸ್ಸಿನೊಳಗೆ ಪಡಿಮೂಡಿದೆ. ಅದು ದರ್ಶನವಲ್ಲ; ಸಾರಸಂಗ್ರಹವಾಗಿ ಕುಳಿತಿರುವಂತಹದು. ಅಮೂರ್ತವಾದ ಮೂರ್ತಿ ಅದು. ಋಷಿಗಳೇನೋ ನಿನ್ನೊಳಗಿನ ದೋಷವನ್ನು ತೆಗೆದು ಹಾಕು ಎಂದು ಹೇಳಿಬಿಟ್ಟರು. ಯಾವ ದೋಷಗಳೂ ಇಲ್ಲದ ಹದಿನಾರು ಗುಣಗಳಿಂದ ಕೂಡಿದ ಮನುಷ್ಯ ಇರಲು ಸಾಧ್ಯವೇ ಎನ್ನುವ ಸಂಶಯ ವಾಲ್ಮೀಕಿಗೆ ಬಂದಿದೆ. ಈ ಸಂಶಯ ಬಂದ ಹೊತ್ತಿನಲ್ಲಿಯೇ ವಾಲ್ಮೀಕಿಯ ಬಳಿಗೆ ಬಂದ ನಾರದನ ಹತ್ತಿರ ಆತ ಕೇಳುವುದು “ಕೋನ್ವಸ್ಮಿನ್ಸಾಮ್ಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್” ಅಂತಹಾ ವ್ಯಕ್ತಿ ಲೋಕದಲ್ಲಿ ಇದ್ದಾನೆಯೋ ಅಥವಾ ಅದು ಕೇವಲ ಆದರ್ಶದ ಕಲ್ಪನೆಯೋ ಎನ್ನುವುದು ವಾಲ್ಮೀಕಿಯ ಸಂಶಯ (ಏತದಿಚ್ಛಾಮ್ಯಹಂ ಶ್ರೋತ್ರುಂ ಪರಂ ಕೌತೂಹಲಂ ಹಿ ಮೇ) ಆಗ ನಾರದರಿಂದ ಆತನಿಗೆ ರಾಮಾಯಣದ ದರ್ಶನವಾಗುತ್ತದೆ. ಅದಕ್ಕೇ ರಾಮ ಎನ್ನುವುದು ಆದರ್ಶದ ತತ್ತ್ವ. ದೋಷರಹಿತ ಅವಸ್ಥೆ ವಾಲ್ಮೀಕಿಯ ಕನಸೂ ಆಗಿದೆ. ಗಾಂಧೀ ಹೇಳಿದ ರಾಮರಾಜ್ಯದ ಕನಸೂ ಒಂದು ಆದರ್ಶ. ಆದರೆ ಅದು ರೂಢಿಗತವಾಗಬಹುದಾದ ಸಾಮ್ರಾಜ್ಯವೂ ಹೌದು.
ಕೃಷ್ಣ ಹಾಗಲ್ಲ. ತಾನು ಜನಿಸಿದ ಕೂಡಲೇ ಸ್ವತಃ ತನ್ನನ್ನು ದೇವರೆಂದು ಘೋಷಿಸಿಕೊಂಡವ. ಹಾಗಂತ ರಾಮ ಕೃಷ್ಣ ಇಬ್ಬರ ಅವತಾರಕ್ಕೂ ದೇವತೆಗಳ ಆಗ್ರಹವಿದೆ. ರಾಮನ ಅವತಾರಕ್ಕೆ ಕಾರಣ ರಾವಣನ ದೌಷ್ಟ್ಯ. ಹಾಗಾಗಿ ದೇವತೆಗಳು ಬ್ರಹ್ಮನೊಡಗೂಡಿ ನಾರಾಯಣನ ಹತ್ತಿರ ರಾವಣನ ನಿಗ್ರಹದ ಹೊಣೆಯನ್ನು ವಹಿಸುತ್ತಾರೆ. ಕೃಷ್ಣಾವತಾರಕ್ಕೆ ದೇವತೆಗಳ ಆಗ್ರಹ ಇದೆಯಾದರೂ, ಮೂಲತಃ ಅದಕ್ಕೆ ಕಾರಣ ಇಳೆಯ ಆರ್ತನಾದ. ಮಹಾಭಾರತದಲ್ಲಿ ಈ ಕುರಿತ ವಿವರಗಳಿಲ್ಲ. ಅಲ್ಲಿ ಕೃಷ್ಣ ಭಗವಾನ್ ಎನ್ನುವುದಕ್ಕಿಂತ ಓರ್ವ ಚತುರ ರಾಜನೀತಿಜ್ಞನಾಗಿ ಕಾಣಿಸಿಕೊಳ್ಳುತ್ತಾನೆ. ಕೃಷ್ಣಾವತಾರದ ಹಿನ್ನೆಲೆಯನ್ನು ಭಾಗವತ ಮತ್ತು ಹರಿವಂಶದಲ್ಲಿ ವಿವರವಾಗಿ ವರ್ಣಿಸಲಾಗಿದೆ. ರಾಮಾಯಣದಲ್ಲಿ ರಾಕ್ಷಲೋಕ ಸಮಗ್ರ ಭೂಮಿಯನ್ನು ಆಕ್ರಮಿಸಿರಲಿಲ್ಲ. ಅವರ ಉಪಟಳ ಭೂಮಿಯಲ್ಲಾಗುತ್ತಿತ್ತು. ಕಾಲನೇಮಿಯೆನ್ನುವ ರಾಕ್ಷಸನನ್ನು ಮಹಾವಿಷ್ಣು ಸಂಹರಿಸಿದ ಮೇಲೆ ರಾಕ್ಷಸರ ಬಾಧೆ ನಿವಾರಣೆಯಾಗಿತ್ತು. ಆದರೆ ದ್ವಾಪರದಲ್ಲಿ ಹಾಗಾಗಲಿಲ್ಲ. ರಾಕ್ಷಸರೆಲ್ಲರೂ ರಾಜರಾಗಿ ಜನಿಸಿದ್ದರು. ಸಮಗ್ರ ಭೂಮಂಡಲವನ್ನು ಅವರು ಆಕ್ರಮಿಸಿಕೊಂಡಿದ್ದರು. ಅವರ ದುಷ್ಟತನ ಮೇರೆ ಮೀರಿತ್ತು. ಅವರು ದೇವತೆಗಳ ವಿರೋಧಿಗಳಾಗಿರಲಿಲ್ಲ. ವೇದ-ವೇದಾಂಗಗಳನ್ನೂ, ಯಜ್ಞಯಾಗಾದಿಗಳನ್ನೂ, ಶ್ರಾದ್ಧಕರ್ಮಗಳನ್ನೂ ನಿಯಮಿತವಾಗಿ ಮಾಡುತ್ತಿದ್ದರು. ಅವರ್ಯಾರೂ ದೇವರಾಜನಾದ ಇಂದ್ರನ ಪೀಠದ ಆಕಾಂಕ್ಷಿಗಳಾಗಿರಲಿಲ್ಲ. ಮೇಲಾಗಿ ದೇವತೆಗಳಿಗೆ ಬೇಕಾದ ಹವಿಸ್ಸನ್ನು ಅರ್ಪಿಸುವ ಕಾರಣದಿಂದ ಮಳೆ ಬೆಳೆಗಳೆಲ್ಲವೂ ಕಾಲ ಕಾಲಕ್ಕೆ ಸರಿಯಾಗಿ ಆಗುತ್ತಲೇ ಇದ್ದವು. ಆದರೆ ಅವರಲ್ಲಿ ಅಪರಮಿತವಾದ ಸೈನ್ಯ ಸಂಗ್ರಹದ ಕಾರಣದಿಂದ ಭೂಮಿಗೆ ಸಹಿಸಿಕೊಳ್ಳಲಾಗುತ್ತಿಲ್ಲ.
ಭಾಗವತ ಪುರಾಣದ ಪ್ರಕಾರ ಈ ಕ್ಷತ್ರಿಯರೆಲ್ಲರೂ ಅಧರ್ಮಿಷ್ಠರಾಗಿ ಸೊಕ್ಕಿನಿಂದ ವ್ಯವಹರಿಸುತ್ತಿದ್ದರು. ತ್ರೇತಾಯುಗದಲ್ಲಿರುವಂತೆ ಒಂದೇ ರಾಜ ಮನೆತನದ ಪ್ರಭಾವ ದ್ವಾಪರದಲ್ಲಿ ಇರಲಿಲ್ಲ. ಆಗ ಹೈಹೇಯರು, ಮಾಗಧರು, ಪಾಂಚಾಲರು ಜೊತೆಗೆ ಹಸ್ತಿನಾವತಿಯವರು ಜೊತೆಗೆ ವಾಯುವ್ಯ ಭಾಗದಲ್ಲಿ ಮ್ಲೇಚ್ಛರು ಪ್ರಬಲರಾಗಿದ್ದರು. ಆಡಳಿತ ಸರ್ವಾಧಿಕಾರಿ ಪ್ರವೃತ್ತಿಯಿಂದ ಕೂಡಿತ್ತು. ಹರಿವಂಶ ಸಹ ಹಿಂದಿನ ದೇವಾಸುರ ಯುದ್ಧದ ನಂತರ ಅಳಿದ ರಾಕ್ಷಸರೆಲ್ಲರೂ ಇದೀಗ ರಾಜರುಗಳಾಗಿದ್ದಾರೆ ಎಂದು ವಿವರಿಸುತ್ತದೆ. ಮಹಾವಿಷ್ಣುವಿನಿಂದ ಹತನಾದ ಕಾಲನೇಮಿ ಎನ್ನುವವ ದೈತ್ಯ ಕಂಸನಾಗಿ ಮಥುರೆಯನ್ನು ಆಳುತ್ತಿದ್ದ. ಬಲಿಷ್ಠರಾದ ದೊರೆಗಳಾದ ಜರಾಸಂಧ, ಶಲ್ಯ, ಕಂಸ, ಶಿಶುಪಾಲ ಮುಂತಾದವರು ವಾಮಾಚಾರದಲ್ಲಿ ತೊಡಗಿದ್ದರು. ಜರಾಸಂಧನಂತೂ ಇಪ್ಪತ್ತು ಸಾವಿರ ರಾಜರುಗಳನ್ನು ಸೆರೆಯಲ್ಲಿಟ್ಟು ಅವರನ್ನು ನರಬಲಿ ಕೊಡಲು ಬಯಸಿದ್ದ. ಕಂಸ ದಿಗ್ವಿಜಯದ ನೆವದಿಂದ ಮಾಡಿದ ದುರಾಚಾರಗಳಿಗೆ ಲೆಕ್ಕವೇ ಇಲ್ಲ. ಅನೇಕ ರಾಜರುಗಳು ಸ್ತ್ರೀಯರನ್ನು ಭೋಗವೆಂದು ತಿಳಿದು ಅವರನ್ನು ಸೆರೆಯಲ್ಲಿಟ್ಟು ತಮಗೆ ಬೇಕಾದ ರೀತಿಯಲ್ಲಿ ಅವರನ್ನು ಅನುಭವಿಸುತ್ತಿದ್ದರು. ಸಜ್ಜನರಿಗೆ ಅಲ್ಲಿ ಬೆಲೆ ಮತ್ತು ಸ್ಥಾನವೇ ಇರಲಿಲ್ಲ.
ಈ ಹಿಂದಿನ ಯುಗದಲ್ಲಿ ಸ್ವರ್ಗಕ್ಕೆ ರಾಕ್ಷಸರಿಂದ ತೊಂದರೆ ಬಂದ ಕಾರಣಕ್ಕೆ ದೇವರ ಅವತಾರವಾದರೆ, ಇಲ್ಲಿ ಮನುಷ್ಯರು ನೆಲೆಸಿರುವ ಭೂಮಿಗೇ ಸಹಿಸಲಾರದ ನೋವಿತ್ತು. ಕೃಷಿಮಾಡುವಾಗಲೂ ಭೂಮಿಯನ್ನು ಸೀಳುತ್ತಾರೆ. ರಾಜ್ಯದ ವಿಭಾಗಕ್ಕೂ ಗಡಿಗಳನ್ನು ಸೀಳುತ್ತಾರೆ. ಆ ಕಾಲದ ಕ್ಷತ್ರಿಯರ ಯುದ್ಧರತಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಕೃಷಿಗಿಂತಲೂ ಯುದ್ಧವೇ ರಾಜರುಗಳ ಮೂಲ ಆದಾಯವಾಗಿತ್ತು. ಪ್ರಕೃತಿಯನ್ನು ನಾವು ಮರೆತು ಮಲೆತರೆ, ಪ್ರಕೃತಿಯೇ ಪ್ರತಿಕಾರವನ್ನು ತೋರುತ್ತದೆ ಎನ್ನುವುದನ್ನು ಇಲ್ಲಿ ಸೂಚ್ಯವಾಗಿ ಹೇಳಲಾಗಿದೆ. ಅಧರ್ಮವನ್ನು ಆಚಾರವನ್ನಾಗಿಸಿಕೊಂಡ ಪುರುಷರು ಸದಾಕಾಲ ಸುಳ್ಳು ಹೇಳುತ್ತಾ ಇನ್ನೊಬ್ಬರ ಸಂಪತ್ತನ್ನು ಅಪಹರಿಸುವುದರಲ್ಲಿಯೇ ಕಾಲವನ್ನು ಕಳೆಯುತ್ತಿದ್ದರು. ಮದೋನ್ಮತ್ತ ರಾಜರುಗಳ ಪೀಡನೆಯನ್ನು ಪರಿಹರಿಸಲಿಕ್ಕಾಗಿ ಭೂದೇವಿ ಆಕಳ ರೂಪವನ್ನು ತಾಳಿ ಸೃಷ್ಟಿಕರ್ತನಾದ ಬ್ರಹ್ಮನ ಹತ್ತಿರ ಹೋಗಿ ಗೋಳಿಟ್ಟಳು. ಸೃಷ್ಟಿಸಿದ ಬ್ರಹ್ಮನಿಗೆ ಅವರನ್ನು ನಾಶಮಾಡುವ ಅಧಿಕಾರವಿಲ್ಲ. ಈ ಹಿಂದೆ ಹಿರಣ್ಯಾಕ್ಷ ಭೂಮಿಯನ್ನು ಸಾಗರದಲ್ಲಿ ಮುಳುಗಿಸಿದಾಗ ಮಹಾವಿಷ್ಣು ವರಾಹವತಾರವನ್ನು ತಾಳಿ ಆತನನ್ನು ಕೊಂದು ಭೂಮಿಯನ್ನು ಎಬ್ಬಿಸಿ ಸ್ವಸ್ಥಾನದಲ್ಲಿ ಇರಿಸಿದ್ದ. ಈ ಕಾರಣಕ್ಕೆ ಭೂಮಿಯನ್ನು ಉಳಿಸಲು ಅವರೆಲ್ಲರೂ ಶೇಷಶಯನನ ಹತ್ತಿರ ಹೋಗಿ ಬೇಡಿಕೊಂಡರು. ಈ ಹಿನ್ನೆಲೆಯಲ್ಲಿ ಭೂಮಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ ಕೃಷ್ಣನ ಜನ್ಮವಾಗುತ್ತದೆ. ದೇವತೆಗಳೆಲ್ಲರೂ ಈ ಕಾರ್ಯದಲ್ಲಿ ಸಹಕರಿಸಲು ತಮ್ಮ ತಮ್ಮ ಅಂಶಗಳಿಂದ ಭೂಮಿಯಲ್ಲಿ ಸಾತ್ವಿಕರಾಗಿ ಜನಿಸುತ್ತಾರೆ. ಋಷಿಗಳು ಗೋಕುಲದಲ್ಲಿ ಗೋಪಾಲಕರಾಗಿ ಹುಟ್ಟಿ ಭಗವಂತನ ಅವತಾರಕ್ಕೆ ಒಂದು ಹದನಾದ ವೇದಿಕೆಯನ್ನು ಕಲ್ಪಿಸಿಕೊಡುತ್ತಾರೆ.
ಬೇರೆ ಯಾವ ಅವತಾರದಲ್ಲಿಯೂ ಹುಟ್ಟುವುದಕ್ಕಿಂತ ಮುಂಚೆ ತನ್ನ ಆಗಮನವಾಗುತ್ತದೆ ಎಂದು ಭಗವಂತ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಆದರೆ ಇಲ್ಲಿ ನಾರದರ ಮೂಲಕ ಕಂಸನಿಗೆ ಈ ಎಲ್ಲ ವಿಷಯಗಳನ್ನು ತಿಳಿಸಿ ಆತನಿಗೆ ಸುಧಾರಿಸಿಕೊಳ್ಳಲು ಒಂದು ಅವಕಾಶವನ್ನು ಕೊಡುತ್ತಾನೆ. ಇಷ್ಟಾದರೂ ಆತ ತನ್ನ ಸ್ವಭಾವವನ್ನು ಬದಲಾಯಿಸುವುದಿಲ್ಲ. ಮುಂದೆ ದೇವಕಿಯ ವಿವಾಹದಲ್ಲಿ ಬಹಿರಂಗವಾಗಿಯೇ ಕಂಸನ ವಧೆಗೆ ಭಗವಂತ ಅವತರಿಸುತ್ತಾನೆ ಎನ್ನುವುದನ್ನು ಆಕಾಶವಾಣಿಯ ರೂಪದಲ್ಲಿ ತಿಳಿಸಲ್ಪಡುತ್ತದೆ. ಸಿಟ್ಟಿಗೆದ್ದ ಕಂಸ ವಸುದೇವ ಸಮಾಧಾನಿಸಿದ ಮೇಲೆ ಈ ವಾಣಿಯನ್ನು ಉಪೇಕ್ಷೆ ಮಾಡುತ್ತಾನೆ. ಮತ್ತೊಮ್ಮೆ ನಾರದ ಮೂಲಕ ಆತನಿಗೆ ಜೀವ ಭಯವನ್ನು ತೋರಿಸಿ ಆತ ಶಿಶು ಹತ್ಯೆಯನ್ನು ಮಾಡುವಂತೆ ಪ್ರೇರೇಪಿಸುವುದು ಕೃಷ್ಣಾವತಾರದ ಪ್ರಮುಖ ವಿಷಯ. ಕೃಷ್ಣಾವತಾರಕ್ಕೆ ಕಂಸವಧೆ ಮೂಲ ಕಾರಣವಲ್ಲ; ಭೂಮಿಯನ್ನು ಕಾಡುತ್ತಿರುವ ರಾಜರುಗಳ ನಿರ್ಮೂಲನೆಯಾಗಬೇಕಾಗಿದೆ. ಅದಕ್ಕೆ ಕಂಸ ವಧೆಯನ್ನು ಒಂದು ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾನೆ. ಹುಟ್ಟಿದ ತಕ್ಷಣವೇ ತಾನು ದೇವರೆಂದು ತನ್ನ ತಂದೆ ತಾಯಿಯರಿಗೇ ದರ್ಶನ ಕೊಟ್ಟ ಭಗವಂತ ತನ್ನ ಆಗಮನದ ಸುಳಿಹನ್ನು ನೀಡುತ್ತಲೇ ಕಂಸನಲ್ಲಿ ಜೀವಭಯ ಹುಟ್ಟಿಸುತ್ತಲೇ ಅವನಿಂದ ತಪ್ಪುಗಳಾಗುವಂತೇ ಪ್ರೇರೇಪಿಸುತ್ತಲೇ ಇರುತ್ತಾನೆ. ಭಗವಂತನ ಈ ಲೀಲೆ ದೇವತೆಗಳಿಗೂ ಅರ್ಥವಾಗುವುದಿಲ್ಲ ಎನ್ನುವುದನ್ನು
ಜಾಗರ್ತಿ ಕೋSತ್ರ ಕಃ ಶೇತೇ ಕಶ್ಚ ಶಕ್ತಶ್ಚ ನೇಙ್ಗತೇ I
ಕೋ ಭೋಗವಾನ್ಕೋ ದ್ಯುತಿಮಾನ್ ಕೃಷ್ಣಾತ್ಕೃಷ್ಣತರಶ್ಚ ಕಃ II
ಎಚ್ಚರವಾಗಿರುವವನು ಯಾರು, ಮಲಗಿರುವವನು ಯಾರು, ಸರ್ವಶಕ್ತಿವಂತನೇ ಆಗಿದ್ದರೂ ಯಾವ ಚೇಷ್ಟೇಯನ್ನು ಮಾಡದ ಇವನು ಯಾವನು, ಭೋಗವಂತನು ಯಾರು, ಅತ್ಯಂತ ಕಾಂತಿಯಿಂದ ಕೂಡಿದ ಇವನು ಯಾರು, ಸೂಕ್ಷ್ಮಕ್ಕೂ ಸೂಕ್ಷ್ಮತರನಾಗಿರುವ ( ಕೃಷ್ಣಾತ್ ಕೃಷ್ಣತರಶ್ಚ ಕಃ) ಈತ ಯಾರು ಎನ್ನುವುದು ದೇವತೆಗಳ ಪ್ರಶ್ನೆ. ರಾಮಾಯಣದಲ್ಲಿ “ಆತ್ಮಾನಾಂ ಮಾನುಷಂ ಮನ್ಯೇ…” ತಾನು ಮಾನವನೆಂದೇ ತಿಳಿದುಕೊಂಡಿರುವ ಅದಲ್ಲದಿದ್ದರೆ ನಾನು ಯಾರು ಹಾಗಾದರೆ ಎಂದು ಮರು ಪ್ರಶ್ನೆ ಹಾಕಿದ್ದ ರಾಮ. ಅದರ ಮುಂದುವರೆದ ಭಾಗವಾಗಿ ದೇವತೆಗಳಿಗೂ ಅರ್ಥವಾಗದ ‘ಪರಾ’ ವಸ್ತು ಎನ್ನುವ ಉಪನಿಷತ್ ತತ್ತ್ವವನ್ನು ಹರಿವಂಶ ಹೇಳುತ್ತದೆ. ಮನುಷ್ಯ ರೂಪದಲ್ಲಿರುವ ರಾಮ ಯಾರು ಎಂದು ದೇವತೆಗಳಿಗೂ ತಿಳಿಯಲಿಲ್ಲ; ನಾರಾಯಣನಾಗಿ ಕ್ಷೀರಸಾಗರದಲ್ಲಿ ಮಲಗಿದವನನ್ನು ಪ್ರತ್ಯಕ್ಷವಾಗಿ ನೋಡಿದಾಗಲೂ ಆತ ಯಾರು ಎಂದು ತಿಳಿಯದ ಗೂಢಬ್ರಹ್ಮನೆನ್ನುವುದು ಸತ್ಯ.
ಕೃಷ್ಣನ ಬೃಂದಾವನದ ರಾಸಕ್ರೀಡೆ ಭಾಗವತದಲ್ಲಿ ಪ್ರಮುಖವಾಗಿದೆ. ಗೋಪಿಜಾರನೆನ್ನುವುದು ಆತನ ಹೆಸರುಗಳಲ್ಲೊಂದು. ಮಥುರಾದ ಯಮುನೆಯ ತೀರ ಗೋವುಗಳು ಮತ್ತು ಗೋಪಿಕೆಯರು ಕೃಷ್ಣನ ಬಾಲ್ಯದ ಅವಿನಾಭಾವಗಳು. ಗೋಪಿಯ ಕೊಳಲಗಾನ ಮತ್ತು ಗೋಪಿಕೆಯರ ರಾಸಲೀಲೆಯಲ್ಲಿ ಒಂದು ಅದ್ವೈತವಿರುವುದನ್ನು ಗಮನಿಸಬೇಕು. ಮರಣದ ನಿರೀಕ್ಷೆಯಲ್ಲಿರುವ ಪರೀಕ್ಷಿತ ಶುಕಮುನಿಗಳಿಂದ ಭಾಗವತ ಪುರಾಣಶ್ರವಣವನ್ನು ಮಾಡುತ್ತಿದ್ದ. ಮೃತನಾಗಿ ಜನಸಿದ ತನಗೆ ಜೀವ ಕೊಟ್ಟ ಕೃಷ್ಣನಲ್ಲಿ ಸ್ತ್ರೀಯರಿಗೆ ಅನುರಾಗವಿತ್ತೇ ಎನ್ನುವ ಸಂಶಯವಿದೆ. ಅದಕ್ಕೆ ಶುಕಮುನಿಗಳು ಕೊಟ್ಟ ವಿವರಣೆ ಹೀಗಿದೆ.
ಕಾಮಂ ಕ್ರೋಧಂ ಭಯಂ ಸ್ನೇಹಮೈಕ್ಯಂ ಸೌಹೃದಮೇವ ಚ I
ನಿತ್ಯಂ ಹರೌ ವಿದಧತೋ ಯಾನ್ತಿ ತನ್ಮಯತಾಂ ಹಿ ತೇ IIಭಾ.10-26-15 II
ಕಾಮದಿಂದಲಾಗಲೀ, ಕ್ರೋಧದಿಂದಲಾಗಲೀ, ಭಯದಿಂದಾಗಲೀ, ಸ್ನೇಹದಿಂದಾಗಲೀ, ಭಕ್ತಿಯಿಂದಾಗಲೀ ಯಾರು ಭಗವಂತನನ್ನು ನಿತ್ಯ ನಿರಂತರವಾಗಿ ತನ್ಮಯರಾಗಿ ಧ್ಯಾನಿಸುವರೋ ಅವರೆಲ್ಲರೂ (ಭಗವಂತನಲ್ಲಿಯೇ ಲೀನವಾಗಿಬಿಡುತ್ತಾರೆ) ತನ್ಮಯರೇ ಆಗಿಬಿಡುತ್ತಾರೆ.
ಇಲ್ಲಿ ಕೃಷ್ಣ ಮತ್ತೊಮ್ಮೆ ದೇವರಾಗಿ ನಮ್ಮೆದುರು ನಿಂತು ಬಿಡುತ್ತಾನೆ. ರಾಮ ತಾನು ಕೇವಲ ಓರ್ವ ಮನುಷ್ಯನೆಂದು ಹೇಳಿಕೊಂಡರೆ ಆತನನ್ನು ಉಳಿದವರು ಒಪ್ಪದೆ ಆತನನ್ನು ದೇವರೆಂದೇ ಭಾವಿಸುತ್ತಾರೆ. ಕೃಷ್ಣ ತಾನು ದೇವರು ಎಂದು ಹೇಳಿಕೊಳ್ಳುತ್ತಲೇ ಮನುಷ್ಯರೊಡನೇ ಮನುಷ್ಯನಾಗಿ ಓಡಾಡುತ್ತಿರುತ್ತಾನೆ. ಆತನ ವ್ಯಕ್ತಿತ್ವದ ಆಕರ್ಷಣೆ ಹೇಗಿದೆಯೆಂದರೆ ಆತನನ್ನು ದೇವರನ್ನಾಗಿ ನೋಡುವುದಕ್ಕಿಂತಲೂ ತಮ್ಮೊಳಗೇ ಒಬ್ಬನಾಗಿ ನೋಡುವುದನ್ನೇ ಲೋಕ ಇಷ್ಟ ಪಡುತ್ತದೆ. ಬಾಯಿಯಲ್ಲಿ ಮೂರು ಜಗತ್ತನ್ನೂ ತೋರಿದ ಕೃಷ್ಣ ದೇವರಾಗಿ ತನ್ನಿಂದ ದೂರವಾಗುವುದನ್ನು ಯಶೋಧೆ ಬಯಸಳು. ನಂದಗೋಪನಿಗೂ ಏಳು ವರ್ಷದ ಈ ಬಾಲಕನ ಬಾಲ್ಯದ ಲೀಲೆಗಳು ಒಗಟಾಗಿ ತೋರಿದಾಗ ಅವನಿಗೆ ಮಹರ್ಷಿಗಳಾದ ಗರ್ಗ ಕೃಷ್ಣನ ವರ್ಣನೆಯನ್ನು ಮಾಡುತ್ತಾ ಆತನ ಮಹಾವಿಷ್ಣುವಿನ ಅವತಾರ ಎನ್ನುವ ಗುಟ್ಟನ್ನು ಹೇಳುತ್ತಾರೆ. ಆದರೆ ನಂದನಿಗೆ ಆತನು ದೇವರೇ ಆದರೆ ತನ್ನ ಕೈ ತಪ್ಪಿಹೋಗುತ್ತಾನೆ ಎನ್ನುವ ಕಾರಣಕ್ಕಾಗಿ ಈ ವಿಷಯವನ್ನು ತನ್ನ ಮಡದಿ ಯಶೋಧೆಯ ಹತ್ತಿರುವೂ ಮುಚ್ಚಿಟ್ಟಿರುವ ಸಂಗತಿ ಬರುತ್ತದೆ. ಗೋಪಿಕಾ ರಾಸಲೀಲೆಯನ್ನು ಮತ್ತು ಯುಗಳಗೀತೆಯನ್ನು ಈ ದೃಷ್ಟಿಯಿಂದ ನೋಡಿದಾಗ ಭಾಗವತದ ಕಥೆಗಳಿಗೆ ಹೊಸ ಹೊಳಹು ಸಿಗುತ್ತದೆ.
ರಾಸಲೀಲೆ ಎಂದರೆ ಅಧ್ಯಾತ್ಮದ ಪ್ರಕಾರ ಒಂದಾಗುವ ಕ್ರಿಯೆ. ಅದ್ವೈತೀ ಭಾವ. ಕಾವ್ಯ ವಿಷಯವನ್ನು ಅಲಂಕಾರದಲ್ಲಿ ವಿವರಿಸುತ್ತದೆ. ವಾಸ್ತವದ ಅನೃತ ಕಾವ್ಯದಲ್ಲಿ ಅಲಂಕಾರವಾಗುತ್ತದೆ. ರಾಸಕ್ರಿಯೆಯನ್ನು ವರ್ಣಿಸುವ ಅಧ್ಯಾಯ 29ರಲ್ಲಿಯೇ ಕೃಷ್ಣ
ಶ್ರವಣಾದ್ಧರ್ಶನನಾದ್ಧ್ಯಾನಾನ್ಮಯಿ ಭಾವೋSನುಕೀರ್ತನಾತ್ I
ನ ತಥಾ ಸನ್ನಿ ಕರ್ಷೇಣ ಪ್ರತಿಯಾತ ತತೋ ಗೃಹಾನ್ II 10-27 II
“ನನ್ನ ಲೀಲೆಗಳ ಕುರಿತಾದ ಶ್ರವಣದಿಂದ, ಕೀರ್ತನ, ದರ್ಶನ ಮತ್ತು ನನ್ನ ವಿಗ್ರಹವನ್ನು ಧ್ಯಾನಿಸುವುದರಿಂದ ಯಾವ ವಿಧವಾದ ಅನನ್ಯಪ್ರೇಮವುಂಟಾಗುವುದೋ ಅಂಥ ನಿಶ್ಚಲ ಪ್ರೇಮವು ಅಂಗಸಂಗದಿಂದುಂಟಾಗಲಾರದು. ಆದುದರಿಂದ ನೀವೆಲ್ಲರೂ ಶೀಘ್ರವಾಗಿ ಮನೆಗೆ ಹೋಗಿ” ಎನ್ನುತ್ತಾನೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರೈತ ಹೋರಾಟಕ್ಕೆ ಸಂಘಟನೆಯ ರೂಪ ಕೊಟ್ಟ ಸಂನ್ಯಾಸಿ
ಗೋಪಿಕಾ ಸ್ತ್ರೀಯರಿಗೆ ಕೃಷ್ಣ ದೇವರೆಂದು ಭಾವಿಸಲು ಮನಸ್ಸು ಒಪ್ಪುವುದಿಲ್ಲ. ಆತನನ್ನು ತಮ್ಮೊಳಗೆ ಓರ್ವನನ್ನಾಗಿಸಿಕೊಳ್ಳಲು ಬಯಸುತ್ತಾರೆ. ಮೂರ್ತ ಪ್ರಪಂಚದಲ್ಲಿ ವಾಸಿಸುವವರಿಗೆ ಅಮೂರ್ತವೆನ್ನುವುದು ಕಲ್ಪನೆಯೇ ಹೊರತೂ ಅದು ಅನುಭವವಾಗುವುದಿಲ್ಲ. ಅಮೂರ್ತದ ಅನುಭವವಾಗಲು ಮೂರ್ತವೆನ್ನುವುದು ಅಮೂರ್ತವನ್ನು ಏರಲಿರುವ ಮೆಟ್ಟಿಲು ಎನ್ನುವುದು ಅರಿವಾದಾಗಲೇ ಸಾಧ್ಯ. ಇದನ್ನು ಪುತಿನ “ಗೋಕುಲ ನಿರ್ಗಮನ” ದಲ್ಲಿ ವಿವರಿಸುವುದು ಹೀಗೆ.
ಕೊಳಲುಲಿವಾಲಿಪೆವೆಲ್ಲ- ಆದೊಡೆ
ಮುರಳೀಧರ ಕಾಣಲೊಲ್ಲ
ಎಲ್ಲಿಹನೀ ಗೋಪಬಾಲ-ಪೇಳಿ
ರೆಲ್ಲಿಹ ನೀ ಮೋದಶೀಲ
ಪುತಿನ ಅವರ ಗೋಕುಲ ನಿರ್ಗಮನದ ವಿರಹ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಒಂದು ಅತ್ಯಪರೂಪದ ಕೃತಿ, ಇಲ್ಲಿ ಗೋಪಿಕೆಯರು ಕೃಷ್ಣನನ್ನು ತಡೆಯಲು ಪ್ರಯತ್ನಿಸಿದರೂ ಅವನ ಪ್ರೇಮಪಾಶದಲ್ಲಿ ಬಂಧಿತರಾದವರಿಗೆ ಅವನನ್ನು ತಡೆಯುವ ಶಕ್ತಿಯಿಲ್ಲ. ಆದರೆ ರಾಧೆ ಹಾಗಲ್ಲ, ತನ್ನ ಮಾಯೆಯಿಂದ ಭಗವಂತನನ್ನೇ ಬಂಧಿಸಿಬಿಟ್ಟಿದ್ದಾಳೆ. ಆಕೆಯೇನಾದರೂ ಬಂದರೆ ಕೃಷ್ಣ ಮಥುರೆಗೆ ಹೋಗಲಾರದಂತೆ ಮಾಡುವ ಸಾಧ್ಯತೆ ಇದೆ. ಆದರೆ ಕೃಷ್ಣನ ಅವತಾರವೇ ಲೋಕೋದ್ಧಾರಕ್ಕಾಗಿ ಆಗಿರುವ ಕಾರಣ ಮಾಯೆ ರಾಧೆಯನ್ನು ಆ ಹೊತ್ತಿಗೆ ಮರೆಮಾಚಿಟ್ಟಿದ್ದಾಳೆ. ರಾದೆಯೆಂದರೆ ಬಿದಿರನ ಕೊಳನಿನ ನಾದವೂ ಹೌದು. ಇನ್ನು ಮುಂದೆ ನಾದವಿಲ್ಲ; ಕೇವಲ ರಣೋನ್ಮಾದ ಎನ್ನುವ ಮೂಲಕ ಪುತಿನ ಅವರು ಈ ಮಾಯೆಯಿಂದ ಜಗದೋದ್ಧಾರನನ್ನು ಬಿಡಿಸಿಬಿಡುತ್ತಾರೆ.
“ಗೋಕುಲ ನಿರ್ಗಮನದ” ನಾಂದಿ ಪದ್ಯದ ಅರ್ಥವನ್ನು ಈ ಹಿನ್ನೆಲೆಯಲ್ಲಿ ನೋಡುವಾಗ ಆ ಕಾವ್ಯದ ಅರ್ಥವೇ ಬೇರೆಯಾಗಿಬಿಡುತ್ತದೆ. ಮಾಯೆಯೂ ನಾದವೇ. ಅದು ನಮ್ಮನ್ನು ಆವರಿಸಿಕೊಂಡಿದೆ. ಹಾಗಾಗಿ ಗೋಪಿಕಾ ಸ್ತ್ರೀಯರಂತೆ ನಮ್ಮ ಕಲ್ಪನೆಯ ಭಗವಂತ ನಮ್ಮೆದುರಿಗೆ ಕಾಣಿಸುತ್ತಿಲ್ಲ. ನಮ್ಮ ಹೊರ ಆವರಣಕ್ಕಿಂತ ಒಳಮುಖರಾಗಿ ಉಪನಿಷತ್ತುಗಳು ಹೇಳುವಂತೆ ಅಲ್ಲಿರುವ ಪುರುಷ ಊದುತ್ತಿರುವ ಕೊಳಲಿಗೆ ಒಂದು ಅರೆಕ್ಷಣ ಆಲಿಸಿ. ಗೂಡಿನೊಳಗೆ ಇರುವ ಹುಳಕ್ಕೆ ತಾನು ಪತಂಗವಾಗಬೇಕೆನ್ನುವ ಆಸೆಯಿಂದ ಅದನ್ನೇ ಧ್ಯಾನಿಸಿದಾಗ ಕೊನೆಗೆ ಪತಂಗವೇ ಆಗಿ ಪರಿವರ್ತಿತವಾಗುವ ರೀತಿಯಲ್ಲಿ ಭವದ ಬಂಧನವನ್ನೆಲ್ಲ ಹರಿದುಕೊಂಡು ಅವನನ್ನೇ ಸೇರುತ್ತೇವೆ.
ಪಟವ ದಾರ ತುಯ್ಯುವೊಲು
ಮನವ ತುಯ್ವುದೀ ಕೊಳಲು
ಅದರ ಸರಕೆ ಹಾರಾಡೆ
ನೆಲವೆಲರೊಳು ತಾರಾಡೆ –ಬನ್ನಿ ಬನ್ನಿ (ಗೋಕುಲ ನಿರ್ಗಮನ)
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸ್ವಾತಂತ್ರ್ಯ ಚಳವಳಿಯಲ್ಲಿ ರೈತ ಹೋರಾಟದ ಬೇರುಗಳು