Site icon Vistara News

ಧವಳ ಧಾರಿಣಿ ಅಂಕಣ: ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧ ಹೇಗಿತ್ತು?

dhavala dharini column Hanuman's setubandha to meet Sugriva in ramayana by narayana yaji

ಸುಗ್ರೀವನ ಭೇಟಿಗೆ ಹನುಮಂತನ ಸೇತುಬಂಧದ ಅಪರೂಪದ ಸನ್ನಿವೇಶ

ಧವಳ ಧಾರಿಣಿ ಅಂಕಣ: ಭವತಾ ಸಖ್ಯಕಾಮೌ ತೌ ಭ್ರಾತರೌ ರಾಮಲಕ್ಷ್ಮಣೌ.
ಪ್ರತಿಗೃಹ್ಯಾರ್ಚಯಸ್ವೈತೌ ಪೂಜನೀಯತಮಾವುಭೌ৷৷ ಕಿ.5.7৷৷

ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು

ರಾಮಾಯಣದ ಕಿಷ್ಕಿಂಧಾಕಾಂಡದಿಂದ ತೊಡಗಿ ಯುದ್ಧ ಕಾಂಡದಕೊನೆಯ ತನಕ ಸುಗ್ರೀವ ಪ್ರಮುಖವಾದ ಪಾತ್ರವನ್ನು ವಹಿಸುತ್ತಾನೆ. ಅನೇಕ ಸಲ ಆತನ ವ್ಯಕ್ತಿತ್ವ ಮರ್ಕಟ ಸ್ವಭಾವಕ್ಕೆ ಅನುಗುಣವಾಗಿದೆ. ವಾಲಿಯನ್ನು ಸಂಹರಿಸಿದ ನಂತರದಲ್ಲಿ ಸೀತಾನ್ವೇಷಣೆಗೆ ಪ್ರಾರಂಭಿಸಿದನೋ, ಅಲ್ಲಿಂದ ಆತ ತುಂಬಾ ಪ್ರೌಢತ್ವದಿಂದಲೇ ವ್ಯವಹರಿಸುತ್ತಾನೆ. ಸುಗ್ರೀವನ ಜೊತೆ ರಾಮನ ಸಖ್ಯದಲ್ಲಿ ಆತನ ವ್ಯವಹಾರ ಮೇಲ್ನೋಟಕ್ಕೆ ಚಂಚಲತೆಯಿಂದ ಕೂಡಿತ್ತು ಎಂದು ತೋರಿದರೂ ವಾಸ್ತವವಾಗಿ ಆತ ಸೂಕ್ಷ್ಮವಾಗಿ ಎದುರಾದವರನ್ನು ಅಭ್ಯಸಿಸುತ್ತಿದ್ದ. ವಾಲಿ ಆತನನ್ನು ರಾಜ್ಯದಿಂದ ಹೊರಗಟ್ಟಿ ಆತನನ್ನು ಕೊಲ್ಲಬೇಕೆಂದು ಇಡೀ ಪ್ರಪಂಚವನ್ನೆಲ್ಲಾ ಓಡಾಡಿಸಿದ ವಿಷಯವನ್ನು ಸವಿಸ್ತಾರವಾಗಿ ಹಿಂದಿನ ಸಂಚಿಕೆಯಲ್ಲಿ ಗಮನಿಸಿದ್ದೇವೆ. ಮತಂಗ ಋಷಿಯ ಶಾಪದ ಕಾರಣಕ್ಕೆ ವಾಲಿಗೆ ಮತಂಗಾಶ್ರಮವಿರುವ ಋಷ್ಯಮೂಕ ಪರ್ವತವನ್ನು ತನ್ನ ಅಡಗುದಾಣವನ್ನಾಗಿಸಿಕೊಂಡ. ಋಷ್ಯಮೂಕ ಪರ್ವತಕ್ಕೆ ಆ ಹೆಸರು ಬಂದಿರುವುದಕ್ಕೆ ಕಾರಣ ಅದು ತಪಸ್ವಿಗಳ ಜ್ಞಾನಾರ್ಜನಗೆ ಹೇಳಿ ಮಾಡಿಸಿದ ಸ್ಥಳವಾಗಿತ್ತು ಎನ್ನುವ ಕಾರಣಕ್ಕಾಗಿ. ಋಷೀಣಾಂ ತತ್ರ ಪ್ರಾಪ್ವಾನಾಂ ಅಮೂಕಃ- ಅಲ್ಲಿಗೆ ಹೋದ ಋಷಿಗಳ ಅಜ್ಞಾನವು ಹೋಗಿಬಿಡುತ್ತಿತ್ತು ಹಾಗಾಗಿ ಆ ಪರ್ವತಕ್ಕೆ ಋಷ್ಯಮೂಕವೆನ್ನುವ ಹೆಸರು ಬಂತು. ಮೌನಿಗಳಾದ ಋಷಿಗಳ ಪರ್ವತ ಎನ್ನುವ ಇನ್ನೊಂದು ಅರ್ತವೂ ಋಷ್ಯಮೂಕಕ್ಕೆ ಇದೆ. ಅಲ್ಲಿ ಮತಂಗ ಮುನಿಗಳು ಮೌನವಾಗಿಯೇ ತಪಸ್ಸಿಗೆ ಕುಳಿತಿರುತ್ತಿದ್ದರು.

ದುಂದುಭಿಯಂತಹ ರಾಕ್ಷಸನನ್ನು ಕೊಂದು ವಾಲಿ ಲೋಕಕ್ಕೆ ಉಪಕಾರವನ್ನು ಮಾಡಿದರೂ ಆತನಿಗೆ ಶಾಪ ಏತಕ್ಕೆ ಬಂತು ಎಂದು ಅನುಕಂಪ ಬರುವುದು ಸಹಜ. ವಾಲಿ ಮತ್ತು ದುಂದುಭಿಯ ಜಗಳದ ಹಿನ್ನೆಲೆಯನ್ನು ಗಮನಿಸಬೇಕು. ದುಂದುಭಿ ಕೋಣನ ಆಕಾರವನ್ನು ಹೊಂದಿದ್ದ ರಾಕ್ಷಸ. ಆತನಿಗೆ ಸಾವಿರ ಆನೆಯ ಬಲವಿತ್ತು. ತನ್ನ ಪರಾಕ್ರಮವನ್ನು ತೋರುವ ಹುಚ್ಚು. ಆ ಕಾರಣಕ್ಕಾಗಿ ಆತ “ಮಹ್ಯಂ ಯುದ್ಧ ಪ್ರಯಚ್ಛ- ನನಗೆ ಯುದ್ಧದ ಆತಿಥ್ಯವನ್ನು ನೀಡಿ” ಎಂದು ಎಲ್ಲಾ ಬಲಶಾಲಿಗಳ ಹತ್ತಿರ ಹೋಗಿ ಕೇಳಿದ್ದ. ಮೊದಲು ಆತ ಹೋಗಿದ್ದು ಸಮುದ್ರ ರಾಜನಲ್ಲಿಗೆ.

ಮುದ್ರದೊಡಯನಿಗೆ ಆತನೊಡನೆ ಯುದ್ಧ ಮಾಡುವ ಸಾಮರ್ಥ್ಯವಿಲ್ಲವೆಂದು ಅರ್ಥವಲ್ಲ; ಇದು ವೃಥಾ ಜಗಳ, ಅದರಿಂದ ತನ್ನೊಡಲಲ್ಲಿದ್ದ ಜಲಚರಗಳಿಗೆ ತೊಂದರೆಯಾಗುತ್ತದೆ ಎಂದು ಆತ ಪರ್ವತಗಳ ರಾಜನಾದ ಹಿಮವಂತನನ್ನು ತೋರಿಸಿದ. ಆತ ದುಂದುಭಿಯ ಆಹ್ವಾನವನ್ನು ನಿರಾಕರಿಸುವ ಕಾರಣ ತನ್ನಲ್ಲಿ ಸತ್ವಗುಣಶೀಲರಾದ ತಪಸ್ವಿಗಳು ತಪಸ್ಸನ್ನು ಮಾಡುತ್ತಿದ್ದಾರೆ. ಅವರ ತಪಸ್ಸಿಗೆ ಭಂಗಬಾರದೆನ್ನುವಕಾರಣಕ್ಕಾಗಿ ಜಗಳಕ್ಕೆ ಬರಲು ಒಪ್ಪುವುದಿಲ್ಲ. ಜಗಳವೆನ್ನುವುದು ಇನ್ನೊಬ್ಬರ ಶಾಂತತೆಗೆ ಭಂಗತರುವಂತಹುದಾಗಬಾರದು ಎನ್ನುವ ವಿವೇಕ ಇರಬೇಕು. ಸಮುದ್ರರಾಜನಾಗಲಿ, ಹಿಮವಂತನಾಗಲೀ ದುಂದುಭಿಯ ಯುದ್ಧಾಹ್ವಾನವನ್ನು ತಿರಸ್ಕರಿಸಿದರು ಎಂದ ಕಾರಣಕ್ಕೆ ಅವರು ಸಣ್ಣವರೇನೂ ಆಗಲಿಲ್ಲ. ವಾಲಿ ಜಗಳಕ್ಕೆ ಒಪ್ಪಿದ್ದೂ ಅಲ್ಲದೇ ಯುದ್ಧಮಾಡಿ ಆ ರಾಕ್ಷಸನನ್ನು ಕೊಂದಮೇಲೆ ಆತನ ದೇಹವನ್ನು ಒಂದು ಯೋಜನದಷ್ಟು ದೂರ ಎಸೆದನು. ಆಗ ಸಿಡಿದ ರಕ್ತದ ಹನಿಗಳೂ ಮತಂಗ ಆಶ್ರಮದಲ್ಲಿ ಬಿದ್ದು ಆಶ್ರಮ ಮಲಿನವಾಯಿತು. ಸತ್ತಮೇಲೆ ವೈರವಿರಕೂಡದು ಎನ್ನುತ್ತದೆ ಧರ್ಮಶಾಸ್ತ್ರ. ವಾಲಿ ಸತ್ತಮೇಲೆಯಾಗಲೀ, ರಾವಣ ಸತ್ತಮೇಲೆಯಾಗಲಿ ಅವರ ಕಳೇಬರಕ್ಕೆ ರಾಮ ಗೌರವಯುತವಾಗಿ ಅಂತ್ಯಸಂಸ್ಕಾರವನ್ನು ಮಾಡಿಸುತ್ತಾನೆ. ವಿಭೀಷಣ ರಾವಣನ ಸಂಸ್ಕಾರಕ್ಕೆ ಒಪ್ಪದಿದ್ದರೆ ತಾನೇ ರಾವಣನ ಅಂತ್ಯಸಂಸ್ಕಾರವನ್ನು ಮಾಡುತ್ತೇನೆ ಎನ್ನುತ್ತಾನೆ. ಮತಂಗರು ಶಾಪವನ್ನು ಕೊಡುವಾಗ ಹೇಳುವ ಮಾತು

ಯೇನಾಹಂ ಸಹಸಾ ಸ್ಪೃಷ್ಟಶ್ಶೋಣಿತೇನ ದುರಾತ್ಮನಾ.

ಕೋಯಂ ದುರಾತ್ಮಾ ದುರ್ಭುದ್ಘಿರಕೃತಾತ್ಮಾ ಚ ಬಾಲಿಶಃ II ಕಿ.11.50৷৷

ನನ್ನನ್ನು ಅಪವಿತ್ರವಾದ ರಕ್ತದ ಮೂಲಕ ಮುಟ್ಟಿದ ದುರಾತ್ಮನು ಯಾವನು. ಮೂಢನಾದ, ದುರಾತ್ಮನಾದ, ದುರ್ಬುದ್ಧಿಯುಳ್ಳ, ಜಿತೇಂದ್ರಿಯನಲ್ಲದ (ಅಕೃತಾತ್ಮಾ) ಆ ಮೂರ್ಖನು ಯಾರಾಗಿಬಹುದು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡದಲ್ಲಿನ ರಾಜನೀತಿಯ ವಿಲಕ್ಷಣ ಘಟನೆ

ಇಲ್ಲಿ ಜಿತೇಂದ್ರಿಯ ಎನ್ನುವ ಶಬ್ಧವನ್ನು ಬಳಸಿದ್ದಾರೆ. ಮೈತೀಟೆಯನ್ನು ತೀರಿಸಿಕೊಳ್ಳುವುದಕ್ಕೆ ಯುದ್ಧವಲ್ಲ. ಲೋಕ ಹಿತಕ್ಕಾಗಿ ಯುದ್ಧ ಅಪರಾಧವಲ್ಲ. ಇಲ್ಲಿ ವಾಲಿ ಕೇವಲ ರಕ್ತದಿಂದ ಆಶ್ರಮವನ್ನು ಮಲಿನಮಾಡಿದ್ದಲ್ಲ. ಪರ್ವತಮಯವಾದ ದುಂದುಭಿಯ ದೇಹವನ್ನು ಬಿಸುಟು ಆಶ್ರಮದ ವೃಕ್ಷಗಳೆಲ್ಲವನ್ನೂ ಧ್ವಂಸಮಾಡಿದ್ದಾನೆ. ಅವರಿಗೆ ಈ ಕೃತ್ಯವನ್ನು ನಡೆಸಿದವ ವಾಲಿ ಎನ್ನುವುದು ತಿಳಿಯಿತು. “ಯಾವಾತ ಈ ಕೃತ್ಯವನ್ನು ಎಸಗಿದವೋ ಆತನೇನಾದರೂ ಇನ್ನುಮುಂದೆ ಈ ಆಶ್ರಮದ ಪ್ರದೇಶಕ್ಕೆ ಬಂದರೆ ಇಲ್ಲಿಯೇ ಮರಣ ಹೊಂದುವನು. ಪುತ್ರನಂತೆ ಅಕ್ಕರೆಯಿಂದ ಬೆಳೆಸಿದ ಅವರ ಆಶ್ರಮದ ಗಡ್ಡೆಗೆಣಸುಗಳ ವಿನಾಶಾರ್ಥವಾಗಿ ಆತನ ಮಂತ್ರಿಗಳೇನಾದರೂ ಆತನ ಆಶ್ರಮದ ಪರಿಸರದಲ್ಲಿದ್ದರೆ ಅವರು ಒಂದು ದಿನಗಳೊಳಗಾಗಿ ಆ ಪ್ರದೇಶದಿಂದ ಹೊರಟುಬಿಡಬೇಕು. ಹೋಗದೇ ಉಳಿದರೆ ಅಂತವರು ಹಲವಾರು ಸಾವಿರ ವರುಷಗಳ ಕಾಲ ಕಲ್ಲಾಗಿಬಿಡುವರು” ಎನ್ನುವ ಶಾಪ ಕೊಟ್ಟರು. ವಿಷಯ ಅರಿತ ವಾಲಿ ಓಡೋಡಿ ಬಂದು ಮತಂಗ ಮುನಿಗಳಿಗೆ ತನ್ನನ್ನು ಕ್ಷಮಿಸಿ ಎಂದರೂ ಅವರು ಕ್ಷಮಿಸದೇ ಆಶ್ರಮವನ್ನೇ ಬಿಟ್ಟು ಹೊರಟುಹೋದರು. ಆ ನಂತರದಲ್ಲಿ ವಾಲಿಯಾಗಲೀ ಆತನ ಕಡೆಯವರಾಗಲೀ, ಶಾಪದ ಭಯದಿಂದ ಮತಂಗಾಶ್ರಮದ ಪರಿಸರಕ್ಕೆ ಬರುತ್ತಿರಲಿಲ್ಲ. ವಾಲಿ ಸುಗ್ರೀವ ಎಲ್ಲಿಯೇ ಅಡಗಿದ್ದರೂ ಆತನನ್ನು ಹುಡುಕಿ ಕೊಲ್ಲಲು ಬರುತ್ತಿದ್ದ ಎಂದು ಅನಿಸುತ್ತದೆ. ತನ್ನ ಜೀವ ಉಳಿಸಿಕೊಳ್ಳಲು ಸುಗ್ರೀವ ಪ್ರಪಂಚದ ಎಲ್ಲಾ ಕಡೆ ನಿರಂತರವಾಗಿ ಎಲ್ಲಿಯೂ ನಿಲ್ಲದೇ ಹಾರುತ್ತಿದ್ದ. ಶಾಪದ ಘಟನೆ ಹನುಮಂತನಿಗೆ ಅದುಹೇಗೋ ತಿಳಿಯಿತು. ಆತ ಈ ವಿಷಯವನ್ನು ಸುಗ್ರೀವನಿಗೆ ಹೇಳಿದ. ಮತಂಗಮುನಿಗಳ ಶಾಪದ ಕಾರಣದಿಂದ ಋಷ್ಯಮೂಕ ಪರ್ವತ ಸುಗ್ರೀವನಿಗೆ ಸುರಕ್ಷಿತ ತಾಣವಾಗಿ ಉಳಿಯಿತು. ಸುಗ್ರೀವ ತನ್ನ ಹತ್ತಿರವೇ ಬಂದು ಉಳಿದದ್ದು ನೋಡಿದ ವಾಲಿಗೆ ಮೈ ಪರಚಿಕೊಳ್ಳುವಂತಾಗಿದ್ದಂತೂ ಸತ್ಯ.

ಲಕ್ಷ್ಮಣನಿಂದ ಸಮಾಧಾನಿಸಲ್ಪಟ್ಟ ರಾಮ ಋಷ್ಯಮೂಕ ಪರಿಸರದಲ್ಲಿ ತಿರುಗಾಡುತ್ತಿರುವುದನ್ನು ದೂರದಲ್ಲಿಯೇ ನೋಡಿದ ಸುಗ್ರೀವನಿಗೆ ನಡುಕ ಉಂಟಾಯಿತು. ಅವರ ತೇಜಸ್ಸು ಆತನನ್ನು ಭಯಪಡಿಸಿತು. ವಾಲಿಯೇನಾದರೂ ತನ್ನನ್ನು ಕೊಲ್ಲಲು ಬೇರೆಯವರನ್ನು ಕಳುಹಿಸಿರಬಹುದೆನ್ನುವ ಸಂಶಯದಿಂದ ಆತನ ಚಲನವಲನಗಳೇ ನಿಂತು ಹೋಯಿತು. ಆತ ಹೆದರಿಕೆಯಿಂದ ಏನು ಮಾಡುವುದು ಎಂದು ತಿಳಿಯದೇ ಒಂದು ಪರ್ವತದಿಂದ ಇನ್ನೊಂದು ಪರ್ವತಕ್ಕೆ ಹಾರತೊಡಗಿದ. ಆಗ ಹನುಮಂತ ಸುಗ್ರೀವನಿಗೆ ಸಮಾಧಾನವನ್ನು ಹೇಳಿ “ನೀನು ರಾಜನಾದವನು, ಹೀಗೆ ಹೆದರಕೂಡದು. ಚನ್ನಾಗಿ ಆಲೋಚಿಸಿ ಅವರ ಹಾವ ಭಾವವನ್ನು ತಿಳಿದು ಶತ್ರುವೋ ಅಲ್ಲವೋ ಎನ್ನುವುದನ್ನು ತಿಳಿಯಬೇಕೆನ್ನುತ್ತಾನೆ. ಸುಗ್ರೀವ ಹನುಮಂತನಿಗೆ ಬಂದವರು ಯಾರು ಎಂದು ತಿಳಿದುಕೊಂಡು ಬರಲು ಕಳಿಸುತ್ತಾನೆ.

ನಮ್ಮ ರಾಜ್ಯದ ಆನೆಗೊಂದಿಯಲ್ಲಿ ಹನುಮಂತ ಮೊದಲು ರಾಮ ಲಕ್ಷ್ಮಣರನ್ನು ಭೆಟ್ಟಿಮಾಡಿರುವುದು. ಇಲ್ಲಿಯತನಕ ಸುಗ್ರೀವನ ಸಚಿವನಾಗಿದ್ದ ಹನುಮಂತ ಇಲ್ಲಿಂದ ಮುಂದೆ “ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ” ಎಂದು ಪ್ರಸಿದ್ದನಾಗುವುದಕ್ಕೆ ಪೀಠಿಕೆ ಇದು. ಕಪಿಯ ರೂಪದಲ್ಲಿದ್ದರೆ ಯಾರಿಗೂ ನಂಬಿಕೆ ಹುಟ್ಟಲು ಸಾಧ್ಯವಿಲ್ಲವೆಂದು ಹನುಮಂತ ಬಿಕ್ಷುವಿನ ರೂಪದಲ್ಲಿ ರಾಮನ ಪರಿಚಯವನ್ನು ಕೇಳುತ್ತಾನೆ. ಕಿಷ್ಕಿಂಧಾ ಕಾಂಡದ 3 ನೆಯ ಸರ್ಗದಲ್ಲಿ ಹನುಮಂತ ರಾಮನ್ನು ಮಾತಾಡಿಸುವಾಗ ಉಪಯೋಗಿಸುವ ಭಾಷೆ, ದೇಹದ ಭಂಗಿ, ವಿನೀತ ಭಾವ, ತನ್ನ ಒಡೆಯನ ಕುರಿತು ಗೌರವ ಇವೆಲ್ಲವೂ ಸಮ್ಮಿಳಿತವಾಗಿದ್ದವು. ದೀರ್ಘವಾಗಿ ಮಾತಾಡಿದ್ದರಲ್ಲಿ ಒಂದೇ ಒಂದು ಅಪಶಬ್ಧವೂ ಇಲ್ಲವಾಗಿತ್ತು. ದೇಹದ ಯಾವ ಅವಯವಗಳಲ್ಲಿಯೂ ಯಾವುದೇ ದೋಷವಿರಲಿಲ್ಲ. ವಿಷಯನಿರೂಪಣೆಯಲ್ಲಿ ವಿಸ್ತಾರವಿರಲಿಲ್ಲ. ಸಮಯಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿದ್ದನು. ಸಂಶಯಕ್ಕೆಡೆಮಾಡುವಂತಹ ಯಾವ ಮಾತನ್ನೂ ಆತ ಆಡಲಿಲ್ಲ. ಮದ್ಯಸ್ವರದಲ್ಲಿ ವ್ಯಾಕರಣದಿಂದ ಸಂಸ್ಕೃತವಾದ ಶಬ್ದಗಳನ್ನು ಬಳಸಿ ಯಾವ ಯಾವ ವಾಕ್ಯಗಳನ್ನು ಎಲ್ಲೆಲ್ಲಿ ಆಡಬೇಕೋ ಅದನ್ನು ಮಾತ್ರವೇ ಆಡಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕೇಳುವವರ ಮನಸ್ಸಿಗೆ ಹರ್ಷವನ್ನುಂಟುಮಾಡುವ ಶುಭಕರವಾದ ಮಾತುಗಳನ್ನೇ ಆಡಿದ್ದ. ಇಲ್ಲಿ ಒಂದು ಸಂಶಯ ಬರುತ್ತದೆ. ಅಷ್ಟೊಂದು ಸುಂದರವಾಗಿ ಮಾತನಾಡಿದ್ದ ಹನುಮಂತ ತನ್ನ ವೇಷವನ್ನು ಮರೆಮಾಚಿ ಬಿಕ್ಶುವಿನ ವೇಷವನ್ನು ಧರಿಸಿರುವುದು ವಂಚನೆಯಲ್ಲವೇ. ಅದಕ್ಕೆ ವಾಲ್ಮೀಕಿ ಪ್ರಾರಂಬದಲ್ಲಿಯೇ ಹೇಳಿದ್ದಾನೆ. ನೇರವಾಗಿ ಆತ ಕಪಿಯ ರೂಪದಲ್ಲಿಯೇ ಹೋದರೆ ಆತ ಆಡುವ ಮಾತಿನ ಶೈಲಿಗೂ ಆತನ ಬಹಿರಂಗ ರೂಪಕ್ಕೂ ಅಂತರ ಕಂಡು ಇದು ಯಾವುದೋ ಮಾಯೆ ಎನ್ನುವ ಭಾವಕ್ಕೆ ರಾಮ ಲಕ್ಷ್ಮಣರು ಬರುವ ಸಾಧ್ಯತೆಯಿದೆ. ಬಿಕ್ಷುವಿನ ವೇಷವಾದರೆ ಆಡುವ ಮಾತಿಗೆ ಸಾಮ್ಯತೆ ಬರುತ್ತದೆ. ಅದೂ ಅಲ್ಲದೇ ರಾಮ ಲಕ್ಷ್ಮಣರೂ ಸಹ ತಾಪಸಿಗಳಂತೆ ಇದ್ದರು. ಆದರೆ ಅವರ ಕೈಯಲ್ಲಿ ಬಿಲ್ಲು ಬಾಣಗಳಿದ್ದವು. ಬತ್ತಳಿಕೆ ಬಿಗಿದ್ದರು. ಹೀಗಿರುವಾಗ ಅವರನ್ನು ಮೊದಲು ನೋಡಲು ಸರ್ವಮಾನ್ಯವಾದ ಬಿಕ್ಷುವಿನ ರೂಪ ಧರಿಸಿದರೆ ಅವರು ತನ್ನ ಕಡೆಗೆ ಗಮನವನ್ನು ಹರಿಸುತ್ತಾರೆ ಎನ್ನುವುದಾಗಿದೆ. ರಾಮ ಲಕ್ಷ್ಮಣರನ್ನು ಹತ್ತಿರದಿಂದ ಕಂಡಾಗ ಅವರಲ್ಲಿ ದಿವ್ಯ ಪ್ರಭೆ ದೇದೀಪ್ಯಮಾನವಾಗಿ ಬೆಳಗುತ್ತಿತ್ತು. ಆ ಪ್ರಭೆಯ ಎದುರು ಹನುಮಂತನಿಗೆ ತಾನು ವೇಷವನ್ನು ಮರೆಮಾಚಿರುವ ವಿಷಯವನ್ನು ಮುಚ್ಚಿಟ್ಟುಕೊಳ್ಳಲಾವದಾಗಲಿಲ್ಲ. ಆತ ತಾನು ಬಿಕ್ಷುವಿನ ವೇಷವನ್ನು ಧರಿಸಿ ಬಂದವ. ಕಾಮರೂಪಿಯಾದ ತಾನು ಇಚ್ಛೆಬಂದ ಕಡೆ ಹೋಗಬಲ್ಲೆ, ಇಚ್ಛೆಬಂದ ರೂಪವನ್ನು ಧರಿಸಬಲ್ಲೆ ಎಂದು ಪ್ರಾರಂಭದಲ್ಲಿಯೇ ಹೇಳಿಬಿಡುತ್ತಾನೆ. ಸುಗ್ರೀವನ ಸಚಿವ ತಾನು, ಆತನಿಗೆ ಪ್ರಿಯವನ್ನುಂಟುಮಾಡಬೇಕೆಂಬ ಆಶಯದಿಂದ ಈ ವೇಷದಲ್ಲಿ ಬಂದಿರುವೆ ಎನ್ನುತ್ತಾನೆ. ಆತನ ಮಾತಿನಲ್ಲಿ ಎಲ್ಲಿಯೂ ಕಪಟತೆ ತಿಲಮಾತ್ರವೂ ಇರಲಿಲ್ಲ. ಧ್ವನಿ ಹೃದಯ ಕಂಠ ಮತ್ತು ಮುಖಗಳ ಮೂಲಕವಾಗಿ ಹೊರಬರುತ್ತಿತ್ತು. ತನ್ನೊಡೆಯನ ಕ್ಷೇಮಕ್ಕಾಗಿ ವೇಷಧರಿಸುವುದು ಅಗತ್ಯವಿತ್ತು. ಆದರೆ ಅವರನ್ನು ನೋಡಿದಾಗ ಅದರ ಅವಶ್ಯಕತೆ ಉಳಿದಿಲ್ಲ ಎನ್ನುವುದು ಆತನ ಮಾತಿನ ಸಾರಾಂಶವಾಗಿತ್ತು. ರಾಮನಿಗೆ ಆತನ ಸರಳ ಮತ್ತು ಸುಂದರವಾದ ಭಾಷೆಯನ್ನು ಕೇಳಿ ಆನಂದವಾಯಿತು. ಅದಕ್ಕಿಂತಲೂ ಆತ ಸುಗ್ರೀವನ ಸಚಿವನೆನ್ನುವುದನ್ನು ಕೇಳಿ ಇಮ್ಮಡಿ ಆನಂದವಾಯಿತು. ಯಾರನ್ನು ತಾವು ಹುಡುಕಲು ಬಂದ್ದೇವೆಯೋ ಆತನ ಸಚಿವನೇ ತನ್ನನ್ನು ಎದುರುಗೊಳ್ಳಲು ಬಂದಿದ್ದಾನೆ. ಇದರಿಂದ ಅಯೋಧ್ಯೆಯ ಚಕ್ರವರ್ತಿ ಮನೆತನದವರು ಅಪರಿಚಿತರಂತೆ ಬೇರೊಬ್ಬರ ಭೇಟಿಗೆ ಹೋಗಿರುವುದಲ್ಲ, ರಾಜಪರಂಪರೆಯ ನಡಾವಳಿಯಂತೆ (Protocol) ಸಚಿವನೋರ್ವ ಎದುರುಗೊಳ್ಳಲು ಬಂದಿದ್ದಾನೆ. ರಾಜರುಗಳನ್ನು ಎದುರುಗೊಳ್ಳಲು ಯಾರು ಯಾರು ಹೋಗಬೇಕೆನ್ನುವ ನಡಾವಳಿಕೆಗಳು ಪ್ರಾಚೀನ ಕಾಲದಲ್ಲಿಯೂ ಇತ್ತು. ರಾಮನಿಗೆ ಆತನ ವ್ಯಕ್ತಿತ್ವ ಮೊದಲ ಭೇಟಿಯಲ್ಲಿಯೇ ಇಷ್ಟವಾಯಿತು. ಲಕ್ಷ್ಮಣನಿಗೆ ಆತ ಹೇಳುವ ಮಾತು

ನಾನೃಗ್ವೇದವಿನೀತಸ್ಯ ನಾಯಜುರ್ವೇದಧಾರಿಣಃ.
ನಾಸಾಮವೇದವಿದುಷಶ್ಶಕ್ಯಮೇವಂ ವಿಭಾಷಿತುಮ್ ৷৷ಕಿ.3.27৷৷

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅಧ್ಯಯನಮಾಡಿ ಶಿಕ್ಷಣ ಪಡೆಯದವನಿಗೆ ಹೀಗೆ ಮಾತಾಡಲು ಸಾಧ್ಯವಿಲ್ಲ. ಎನ್ನುತ್ತಾನೆ. ಇಲ್ಲಿ ಪ್ರತಿಯೊಂದು ವೇದದ ವಿಶೇಷವನ್ನುಹೇಳುವಾಗ “ವಿನೀತ”, “ಧಾರಿ” ಮತ್ತು “ವಿತ್” ಶಬ್ಧಗಳನ್ನು ವಿಶೇಷಣಗಳನ್ನಾಗಿ ಬಳಸಿದ್ದಾರೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಿಷ್ಕಿಂಧಾ ಕಾಂಡ ಭಾಗ 2: ದೀಪದ ಬುಡದಲ್ಲಿ ಕತ್ತಲೆ

ಸಂಭಾಷಣೆಯಲ್ಲಿ ಸಂವಹನ ಕ್ರಿಯೆ ತುಂಬಾ ಮುಖ್ಯ. ಇದೊಂದು ಮಾತಿನಲ್ಲಿ ಹನುಮಂತನ ವಾಕ್ ಪಟುತ್ವವನ್ನು ರಾಮ ಶ್ಲಾಘಿಸುತ್ತಾನೆ. ಋಗ್ವೇದದ ಪ್ರತಿವರ್ಣವೂ ಸ್ವರಪೂರ್ಣವಾಗಿರುತ್ತದೆ. ಅದನ್ನು ಉಚ್ಛರಿಸಬೇಕಾದರೆ ಸಾವಧಾನವಾಗಿ, ವಿನಿಯೋಗಿಸಬೇಕಾದ ಛಂದಸ್ಸು, ವ್ಯಾಕರಣ ಶುದ್ಧತೆ ಮತ್ತು ಗಂಭೀರ ಸ್ವರಬೇಕಾಗುತ್ತದೆ. ಅದನ್ನು ಸರಿಯಾಗಿ ಅಧ್ಯಯನ ಮಾಡಿದವನಿಂದಲೇ ಹೀಗೆ ಮಾತಾಡಲು ಸಾಧ್ಯ. ಹಾಗಾಗಿ ವಿನೀತ ಎನ್ನುವ ಶಬ್ದವನ್ನು ಬಳಸಿದ್ದಾನೆ. ವಿನೀತ ಎಂದರೆ ಆಚಾರ್ಯಮುಖೇನ ಶಾಸ್ತ್ರಬದ್ಧವಾಗಿ ಕಲಿತವ ಎಂದು ಅರ್ಥ. ಯಜುರ್ವೇದದಲ್ಲಿ ಪ್ರತಿಯೊಂದು ಅನುವಾಕನ್ನೂ ಇತರ ಅನುವಾಕಗಳೊಡನೆ ಸಂಕರ ಆಗದ ರೀತಿಯಲ್ಲಿ ಉಚ್ಛರಿಸಬೇಕು. ಅದಕೆ ಅಸಾಧಾರಣ ಧಾರಣಶಕ್ತಿಯ ಅವಶ್ಯಕತೆ ಇದೆ. ಸಾಮವೇದವು ಊಹರಹಸ್ಯಗಳಿಂದ ಗಾನರೂಪವಾಗಿದೆ. ಹನುಮಂತ ಆಡುವ ಮಾತಿನಲ್ಲಿ ಪದ್ಯದ ಗೇಯತೆಯೂ ಇತ್ತು. ಕಿವಿಗೆ ಇಂಪಾಗಿ ಆದರೆ ಅರ್ಥಗರ್ಭಿತವಾಗಿ ಇತ್ತು ಎನ್ನುವುದನ್ನು ಮೂರು ಶಬ್ದಗಳಾದ ವಿನೀತ, ಧಾರಿ ಮತ್ತು ವಿತ್ ಶಬ್ದಗಳ ಮೂಲಕ ರಾಮ ತಿಳಿಸುತ್ತಾನೆ. ರಾಮನೂ ಮೂರೂ ವೇದಗಳಲ್ಲಿ ಪಾರಂಗತನಾಗಿರುವುದರಿಂದಲೇ ಹನುಮಂತನ ಮಾತನ್ನು ಗ್ರಹಿಸಲು ಸಾಧ್ಯವಾಯಿತು ಎಂದೂ ಇಲ್ಲಿ ಅರ್ಥೈಸಬಹುದಾಗಿದೆ. ಮಂತ್ರಿ ಎದುರಾದಾಗ ರಾಜನಾದವ ಮಾತನ್ನಾಡುವುದಲ್ಲ. ಆತನ ಪರವಾಗಿ ಮಂತ್ರಿಯೋ ಅಥವಾ ಸಮರ್ಥ ದೂತನೋ ಮಾತನ್ನಾಡಬೇಕು. ಹಾಗಾಗಿ ಇಲ್ಲಿ ಹನುಮಂತನೊಡನೆ ಮುಂದಿನ ವಿಷಯವನ್ನು ಲಕ್ಷ್ಮಣ ಮಾತಾಡಲಿ ಎಂದು ರಾಮ ಇಂಗಿತವನ್ನು ವ್ಯಕ್ತಪಡಿಸುತ್ತಾನೆ. ಹಾಗಾಗಿ ಮುಂದೆ ಲಕ್ಷ್ಮಣ ಹನುಮಂತನಲ್ಲಿ ತಮ್ಮ ಅರಣ್ಯವಾಸದ ವಿಷಯವನ್ನು, ಸೀತಾಪಹರಣದ ವಿಷಯವನ್ನೂ ಸಹ ಸಮಗ್ರವಾಗಿ ತಿಳಿಸಿ ತಮ್ಮ ಭೇಟಿಯ ಉದ್ಧೇಶ ಸೀತೆ ಎಲ್ಲಿರುತ್ತಾಳೆಂದು ಕಂಡುಹಿಡಿಯಲು ಕಬಂಧನ ಸೂಚನೆಯ ಮೇರೆಗೆ ಸುಗ್ರೀವನೊಡನೆ ಆಶ್ರಯಕೋರಲು ಬಂದಿದ್ದೇವೆ ಎನುತ್ತಾ ಮೊದಲು ಹೇಳಿದ ಸುಗ್ರೀವಂ ಶರಣಂ ಗತಃ ಎನ್ನುವ ಆರು ಬಗೆಯ ಉಲ್ಲೇಖವನ್ನು ಮಾಡುತ್ತಾನೆ.

ಹನುಮಂತನು ಸೂರ್ಯನ ಹತ್ತಿರ ಸೂತ್ರ, ವೃತ್ತಿ, ವಾರ್ತಿಕ, ಮಹಾಭಾಷ್ಯ, ಶಾಸ್ತ್ರ, ಛಂದಃಶಾಸ್ತ್ರಗಳನ್ನೂ, ನವವ್ಯಾಕರಣಗಳನ್ನೂ ಕಲಿತವ. ಅಗಸ್ತ್ಯರು ಹನುಮಂತನ ಕುರಿತು ಆತ ಶಾಸ್ತ್ರವಿಷಯದಲ್ಲಿ ಬ್ರಹಸ್ಪತಿಯೊಡನೆ ಹೋಲಿಸಬಹುದು ಎನ್ನುತ್ತಾರೆ. ಆತನಿಗೆ ಲಕ್ಷ್ಮಣ ಸುಗ್ರೀವನೊಡನೆ ಶರಣಾಗತಿಗಾಗಿ ಬಂದಿದ್ದಾರೆ ಎಂದು ಹೇಳಿರುವುದು ಮನಸ್ಸಿಗೆ ಸರಿಕಾಣಲಿಲ್ಲ. ಅತನಿಗೆ ಸೂರ್ಯವಂಶದ ವಿಷಗಳೆಲ್ಲವೂ ತಿಳಿದಿದೆ. ಅವರ ಶ್ರೇಷ್ಠತೆಯ ಮತ್ತು ಮಹಾತ್ಮತೆಯ ಕುರಿತು ಗೌರವವಿದೆ. ಆದರೆ ಈ ವಾಕ್ ದೋಷವನ್ನು ಟೀಕಿಸಲೂ ಹೋಗುವುದಿಲ್ಲ. ರಾಮಲಕ್ಷ್ಮಣರನ್ನು ತನ್ನ ಭುಜದಮೇಲೆ ಹೊತ್ತು ಅವರನ್ನು ಋಷ್ಯಮೂಕ ಪರ್ವತಕ್ಕೆ ಕರೆತರುತ್ತಾನೆ. ಸುಗ್ರೀವ ಆಗ ಆಗಂತುಕರ ವಿಷಯದಲ್ಲಿ ಭಯಪಟ್ಟು ಅಲ್ಲೇ ಪಕದಲ್ಲಿದ್ದ ಮಲಯ ಪರ್ವತದಲ್ಲಿ ಇದ್ದ. ಆತನಲ್ಲಿ ರಾಮ ಲಕ್ಷ್ಮಣರ ಮತ್ತು ದಶರಥನ ಸಹಿತವಾಗಿ ಸೂರ್ಯವಂಶದ ದೊರೆಗಳ ಮಹಿಮೆಯನ್ನು ಹೇಳುತ್ತಾನೆ. ಅಂತಹ ಮಹಿಮಾನ್ವಿತರು ಸೀತಾನ್ವೇಷಣೆಯ ಸಲುವಾಗಿ ನಿನ್ನ ಸಹಾಯವನ್ನು ಬಯಸಿ ಬಂದಿದ್ದಾರೆ ಎನ್ನುತ್ತಾನೆ. ಇಲ್ಲಿ ಹನುಮಂತನ ಜಾಣ್ಮೆಯನ್ನು ಗಮನಿಸಬೇಕು. “ಸುಗ್ರೀವನಲ್ಲಿ ಶರಣಾಗತಿಯನ್ನು ಹೊಂದಲು ಬಂದಿದ್ದಾರೆ ಎನ್ನುವ ಮಾತಿನ ದೋಷವನ್ನು ಹನುಮಂತ ಪ್ರಾರಂಭದಲ್ಲಿ ಹೇಳಿದ ಶ್ಲೋಕದಂತೆ “ಸಹೋದರರಾದ ರಾಮಲಕ್ಷ್ಮಣರು ನಿನ್ನೊಡನೆ ಗೆಳೆತನವನ್ನು ಬೆಳೆಸುವ ಆಶಯವನ್ನು ಹೊಂದಿದ್ದಾರೆ. ಪೂಜನೀಯರಾದ ಇವರಿಬ್ಬರನ್ನೂ ನೀನು ಯಥೋಚಿತವಾಗಿ ಪ್ರತಿಗ್ರಹಿಸಿ ಪೂಜಿಸಬೇಕು” ಎಂದು ಬದಲಾಯಿಸಿ ಹೇಳುತ್ತಾನೆ.

“ನವವ್ಯಾಕರಣವೇತ್ತಾ -ಒಂಬತ್ತು ವ್ಯಾಕರಣ ಸಿದ್ಧಾಂತವನ್ನು ತಿಳಿದವ ಹನುಮಂತ ಎಂದು ಅಗಸ್ತ್ಯರು ಈತನನ್ನು ಹೊಗಳಿದ್ದು ಆತನ ಜಾಣ್ಮೆ ಮತ್ತು ಶಾಸ್ತ್ರಕೌಶಲ್ಯದ ಪರಿಣಿತಿಗಾಗಿ. ರಾಮನ ಅನುಗ್ರಹದಿಂದ ಹನುಮಂತ ಬ್ರಹ್ಮನೇ ಆಗುವನು- “ಬ್ರಹ್ಮಾ ಭವಿಷ್ಯತ್ಯಪಿ ತೇ ಪ್ರಸಾದಾತ್” ಎನ್ನುವ ಮಾತನ್ನೂ ಆಡುತ್ತಾರೆ. ಸುಂದರನೆನ್ನುವುದು ಆತನ ಇನ್ನೊಂದು ಹೆಸರು. ಅದು ಬಾಹ್ಯರೂಪದಿಂದ ಅಲ್ಲ, ಆತನ ವಿದ್ಯೆ ಮತ್ತು ವಿನಯಗಳ ಶೋಭೆಯಿಂದಾಗಿ. ಸುಗ್ರೀವನ ಸಚಿವ ರಾಮನೆಡೆಗೆ ಆಕರ್ಷಿತನಾಗುವುದು ಆತನ ಮೊದಲ ನೋಟದಲ್ಲಿಯೇ. ರಾಮನನ್ನು ನೋಡಿದ ತಕ್ಷಣ ಆತನ ಶಾಪ ವಿಮೋಚನೆಯಾಯಿತು ಎನ್ನುವ ಕಥೆ ಮೂಲ ರಾಮಾಯಣದಲ್ಲಿಲ್ಲ.

ಸುಗ್ರೀವನ ಚಂಚಲತೆಯ ವಿಷಯಗಳನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

Exit mobile version