Site icon Vistara News

ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

ramayana1

ಬೇಡಿದವನಿಗೆ ದಕ್ಕಲಿಲ್ಲ; ಬೇಡದವನಿಗೊಲಿಯಿತು ಅಮೃತದ ಸುಕೃತ

ಇದಂ ತು ನೃಪಶಾರ್ದೂಲ! ಪಾಯಸಂ ದೇವನಿರ್ಮಿತಮ್
ಪ್ರಜಾಕರಂ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್
৷৷ಬಾ.16.19৷৷

ʼನೃಪ ಶಾರ್ದೂಲನೇ, ಈ ಪಾಯಸವು ದೇವನಿರ್ಮಿತವಾದುದು. ಪ್ರಜೋತ್ಪತ್ತಿಗೆ ಕಾರಣವಾಗುವಂತಹ ಆರೋಗ್ಯಕರವಾದ ದಿವ್ಯ ಪಾಯಸವಿದಾಗಿದೆ. ಇದನ್ನು ಸ್ವೀಕರಿಸು.ʼ

ರಾಮನ ಅವತಾರಕ್ಕೆ ಕಾರಣವಾಗುವ ಪಾಯಸದ ಪ್ರಕರಣ ಬಹು ಪ್ರಸಿದ್ಧವಾದದ್ದು. ಮಹಾಕಾವ್ಯ ಮತ್ತು ಪುರಾಣಗಳಲ್ಲಿ ಮಕ್ಕಳಿಲ್ಲದ ರಾಜರುಗಳ ಅನೇಕ ಕಥೆಗಳು ಬರುತ್ತದೆ. ಒಂದೊಂದೂ ರೋಚಕವಾದ ವಿಷಯಗಳಾಗಿವೆ. ರಾಮನನ್ನು ರೂಪಿಸಿದ ವಿಶ್ವಾಮಿತ್ರರು ಜನಿಸಿದ್ದು ಫಲದಲ್ಲಿ. ಫಲವೆಂದರೆ ರಸದ ಸಾರವನ್ನು ಹೀರಿ ಪಕ್ವವಾಗಿರುವಂತದ್ದು. ತನ್ನೊಡಲ್ಲಿ ತನ್ನ ತಾಯಿಯಾದ ಮರಗಳ ಪ್ರತಿರೂಪವನ್ನು ಹೊಂದಿರುವ ಬೀಜವನ್ನು ಆವರಿಸಿರುವಂತಹದ್ದು. ಗಿಡ ಮರ ಪ್ರಕೃತಿಯಲ್ಲಿ ಲಭ್ಯವಿರುವ ಎಲ್ಲ ಫಲಗಳನ್ನೂ ಎರಕಹೊಯ್ದ ಸಾರವಾಗಿವೆ. ಪಾಯಸದ ರಸ ಹಾಗಲ್ಲ. ಸ್ವಯಂ ಉದ್ಭವವಾದದ್ದಲ್ಲ. ಅದು ಸುಕೃತ. ತೈತ್ತರೀಯ ಉಪನಿಷತ್ತಿನಲ್ಲಿ ಬ್ರಹ್ಮನನ್ನು ಕುರಿತು ವರ್ಣಿಸುವಾಗ “ಯದ್ವೈತತ್ ಸುಕೃತಮ್ I ರಸೋ ವೈ ಸಹ I ರಸಗ್ಂ ಹ್ಯೇವಾಯ್ಂ ಲಬ್ಧ್ವಾನಂದೀ ಭವತಿ” ಎನ್ನುವ ಮಾತು ಬರುತ್ತದೆ. ಬ್ರಹ್ಮವೇ ಸುಕೃತವು, ಅಂದರೆ ಸ್ವಯಂಕೃತ. ತಾನೇ ತನ್ನನ್ನು ಎಲ್ಲ ರೂಪದಲ್ಲಿ ಪ್ರಕಟವಾಗಿರುವುದರಿಂದ ಅದು ಸುಕೃತ. ಯಾವುದೋ ಒತ್ತಡಕ್ಕೆ ತುತ್ತಾಗಿ ಸಿದ್ಧಮಾಡಿರುವುದಲ್ಲ. ತನ್ನಿಷ್ಟಕ್ಕಾಗಿ ತಾನೇ ಸೃಷ್ಟಿಸಿಕೊಂಡಿರುವುದು. ಅದಕ್ಕೆ ಲಭ್ಯವಿರುವ ಪರಿಕರಗಳೂ ಸಹ ಬ್ರಹ್ಮನ ಸೃಷ್ಟಿಯೇ ಆಗಿದೆ. ಬಲಾತ್ಕಾರವಿಲ್ಲದೇ ತನ್ನ ಆನಂದಕ್ಕಾಗಿ ಮಾಡಿರುವುದು ಯಾವತ್ತಿಗೂ ಆನಂದವನ್ನು ಕೊಡುತ್ತದೆ.

ಸಿದ್ಧಪಡಿಸಿರುವುದನ್ನೆಲ್ಲವನ್ನೂ ಭುಂಜಿಸಬೇಕೆಂದೇನೂ ಇಲ್ಲ. ಸಸ್ಯವೂ ಸ್ವಯಂ ತಾನೇ ರಸವನ್ನು ಸೃಷ್ಟಿಸಿ ಅದನ್ನು ತಾನೇ ಬಿಟ್ಟ ಫಲದಲ್ಲಿ ಜೋಪಾನವಾಗಿ ಇರಿಸುತ್ತದೆ. ತನಗಾಗಿ ಅಲ್ಲ. ಪ್ರಪಂಚದಲ್ಲಿರುವುದೆಲ್ಲವೂ ಬ್ರಹ್ಮ ಸೃಷ್ಟಿಯೇ ಆಗಿದೆ. ಸೃಷ್ಟಿಯ ಎಲ್ಲದನ್ನೂ ತಾನೇ ಒಟ್ಟುಗೂಡಿಸಿ ರೂಪಿಸುತ್ತದೆ. “ಮರದಿಂದ ಮರ ಹುಟ್ಟಿ ಮರಚಕ್ರ ಕಾಯಾಗಿ ತಿನ್ನಲಾರದ ಹಣ್ಣು ಬಲು ರುಚಿ” ಎನ್ನುವ ಗಾದೆಯನ್ನು ನೆನಪಿಸಿಕೊಳ್ಳಬಹುದು. ತಾಯಿ ತನ್ನ ಬಸಿರಫಲವನ್ನು ನೋಡಿ ತನ್ನ ಹೆಣ್ಣುತನ ಸಾರ್ಥಕವಾಯಿತೆಂದುಕೊಳ್ಳುತ್ತಾಳೆ. ಇಲ್ಲೆಲ್ಲೂ ಸ್ವಾರ್ಥವಿಲ್ಲ. ಬ್ರಹ್ಮವು ತಾನೇ ಎಲ್ಲವನ್ನೂ ಎಲ್ಲ ರೂಪದಿಂದ ಮಾಡಿರುವ ಕಾರಣ ಪುಣ್ಯರೂಪದಿಂದಲೂ ಅದೇ ಸುಕೃತವೆನಿಸಿಕೊಳ್ಳುತ್ತದೆ. ಯಾವಾಗ ಸ್ವೇಚ್ಛೆಯಿಂದ ಮಾಡುತ್ತೇವೆಯೋ ಅಲ್ಲಿ ಆನಂದವಿದೆ. ಆ ಆನಂದವನ್ನು ಅವನೇ ಅನುಭವಿಸುತ್ತಿರುವನು. ಆನಂದದ ಅಂತಿಮ ಗುರಿ ತೃಪ್ತಿ ನೀಡುವುದು. ಫಲನೀಡಿದ ಮರಕ್ಕೂ ತೃಪ್ತಿ, ಅನುಭವಿಸಿದ ಜೀವಿಗಳಿಗೂ ತೃಪ್ತಿ. ಅದೇ ರಸ, ರಸಾನಂದ. ಹಾಗಾಗಿ ಆನಂದಿತನಾಗಿದ್ದಾನೆ. ಫಲದಲ್ಲಿ ಇರುವುದೂ ರಸ. ಪಾಯಸವೂ ರಸವೇ. ರಸದ ಗುಣವಿಶೇಷತೆಯೆಂದರೆ ಅದು ಘನಪದಾರ್ಥದ ಹಾಗಲ್ಲ. ಅದರಲ್ಲಿ ಸೇರಿರುವ ಎಲ್ಲ ಬಗೆಯ ರುಚಿಗಳೂ ಸಮಪ್ರಮಾಣದಲ್ಲಿ ಸಮ್ಮಿಳಿತವಾಗಿರುತ್ತದೆ. ಪಾತ್ರೆಯ ಯಾವ ಭಾಗದಿಂದ ತೆಗೆದು ರುಚಿ ನೋಡಿದರೂ ಸಿಗುವ ತೃಪ್ತಿಯಲ್ಲಿ ವ್ಯತ್ಯಾಸವಿಲ್ಲ. ಆನಂದವನ್ನು ಹೊಂದಿ ಆನಂದ ಪಡಿಸುವವನೂ ಅವನೇ ಆದುದರಿಂದ ನಮ್ಮೊಳಗಿರುವ ಎಲ್ಲಾ ಪ್ರಾಣಗಳಾದ ಪ್ರಾಣ, ಅಪಾನ, ವ್ಯಾನ ಉದಾನ ಮತ್ತು ಸಮಾನ ಪ್ರಾಣಗಳಿಗೂ ಸಮಪ್ರಮಾಣದಲ್ಲಿ ಆನಂದ ಸಿಗುವುದು ರಸದ ವಿಶೇಷ. ದೇವ ನಿರ್ಮಿತ ಪಾಯಸವೆನ್ನುವ ರಸವನ್ನು ದೇವತೆಗಳು ಲೋಕಕ್ಕೆ ನೀಡಿರುವುದು ಈ ಕಾರಣಕ್ಕಾಗಿ. ತಮಗೂ ಆನಂದ, ಮಕ್ಕಳಿಲ್ಲದೆ ಕೊರಗುತ್ತಿರುವ ದಶರಥನ ಕುಟುಂಬಕ್ಕೂ ಆನಂದ, ಎಲ್ಲಕ್ಕಿಂತಲೂ ಮುಖ್ಯವಾಗಿ ಲೋಕವನ್ನು ಕಾಡುತ್ತಿರುವ, ಲೋಕವನ್ನು ರೋದಿಸುವಂತೆ ಮಾಡಿದ ಆಸುರೀ ಶಕ್ತಿಯ ಅಂತ್ಯಕ್ಕೆ ಕಾರಣವಾಗಬಹುದಾದ ಅಂಶವೂ ಅಲ್ಲಿ ಅಡಗಿದೆ. ರಾಮ ಎನ್ನುವ ಅರ್ಥ ʼರಮಿಸುವವʼ ಎಂದು.

ಮಕ್ಕಳಿಲ್ಲದ ದಶರಥನ ಅರಮನೆಗೆ ಆಡಲು ಬೇಕು ಎಂದು ದೇವತೆಗಳು ಮಕ್ಕಳನ್ನು ಕೊಟ್ಟಿಲ್ಲ. ಈ ಗೂಢವನ್ನು ಅರಿಯಬೇಕಾದರೆ ರಾಮನ ಅವತಾರಕ್ಕೆ ಕಾರಣವಾದ ಮತ್ತೊಂದು ರೂಪದ ಕುರಿತು ಅರಿಯಬೇಕಾಗಿದೆ. ಅದೇ ರಾವಣ. ಕೆಲ ಪುರಾಣಗಳ ನಂಬುಗೆಯಂತೆ ಆರು ಕೋಟಿ ವರ್ಷಗಳ ಕಾಲ ಲೋಕವನ್ನು ರೋದಿಸುವಂತೆ ಮಾಡಿದವ. ರಾಮನ ಅವತಾರಕ್ಕೆ ಕಾರಣ ಸಂತಾನದ ಬಯಕೆ, ರಾವಣನ ಉದ್ಭವಕ್ಕೂ ಕಾರಣ ಸಂತಾನದ ಬಯಕೆಯಾಗಿದೆ. ರಾಕ್ಷಸರನ್ನು ಪೂರ್ವ ದೇವತೆಗಳು ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಅವರ ಸೃಷ್ಟಿ. ಪ್ರಜಾಪತಿ ಜಗತ್ತಿನ ಜೀವಿಗಳನ್ನು ಸೃಷ್ಟಿಸಿದ ಕಾಲಕ್ಕೆ ಅಗಾಧವಾದ ಸಾಗರದಲ್ಲಿ ಎರಡು ಪ್ರಬೇಧಗಳು ಜನಿಸಿತು. ಹಿರಿಯದಾದವು “ರಕ್ಷಾಮ ರಕ್ಷಾಮ” ರಕ್ಷಿಸುತ್ತೇವೆ ಎಂದು ಹೇಳಿದರು. ಇನ್ನೊಬ್ಬರು ಯಕ್ಷಾಮ –ಪೂಜಿಸುತ್ತೇವೆ ಎಂದು ಹೇಳಿದರು. ರಕ್ಷಿಸುವವರು ರಾಕ್ಷಸರಾದರೆ ಪೂಜಿಸುವವರು ಯಕ್ಷರಾದರು. ಈ ಇಬ್ಬರ ಆವಾಸ ಸ್ಥಾನವೂ ಲಂಕೆಯಾಗಿತ್ತು. ರಕ್ಷಿಸುತ್ತೇನೆ ಎಂದು ಹೇಳಿದ ರಾಕ್ಷಸರು ಭಕ್ಷಕರಾಗಿ ಲೋಕ ಕಂಟಕರಾದಾಗ ಅವರ ಉಪಟಳವನ್ನು ತಾಳಲಾರದೇ ದೇವತೆಗಳು ಈಶ್ವರನ ಸಲಹೆಯಂತೆ ಮಹಾವಿಷ್ಣುವಿನ ಮೊರೆ ಹೊಕ್ಕರು. ಆತ ದೇವತೆಗಳ ಪರವಾಗಿ ಯುದ್ಧಕ್ಕೆ ಬಂದು ರಾಕ್ಷಸರ ಪ್ರಮುಖರಾದ ಮಾಲ್ಯವಂತ, ಸುಮಾಲಿ ಮತ್ತು ಮಾಲಿ ಇವರನ್ನು ಪರಾಭವಗೊಳಿಸಿದನು. ಮಾಲಿ ಯುದ್ಧದಲ್ಲಿ ಹತರಾದರೆ ಅವನ ಉಳಿದ ಸಹೋದರರಾದ ಮಾಲ್ಯವಂತ ಮತ್ತು ಸುಮಾಲಿ ರಸಾತಲದ ಬಿಲದಲ್ಲಿ ಅಡಗಿ ಯುಗಯುಗಗಳ ಕಾಲ ಜೀವವನ್ನು ಹಿಡಿದುಕೊಂಡಿದ್ದರು.

ಲಂಕೆಯಲ್ಲಿ ಯಕ್ಷರು ವಿಶ್ರವಸು ಋಷಿಯ ಮಗನಾದ ಕುಬೇರನ ನೇತೃತ್ವದಲ್ಲಿ ಸಿರಿಸಂಪತ್ತಿನಿಂದ ಮೆರೆಯುತ್ತಿದ್ದರು. ಜೀವ ಉಳಿಸಿಕೊಳ್ಳಲು ಬಿಲದಲ್ಲಿ ಅಡಗಿ ಕುಳಿತಿದ್ದ ಸುಮಾಲಿಯ ಮಗಳು ಕೈಕಸಿ. ತನ್ನ ತವರುಮನೆಯ ಕುಟುಂಬದ ಉನ್ನತಿಗಾಗಿ ಆಕೆ ಮಾಡಿದ ತ್ಯಾಗ ಬಹು ದೊಡ್ಡದು. ಬಲಿಷ್ಟವಾದ ತನ್ನ ಸಂತಾನದಿಂದ ತನ್ನ ಹೆತ್ತವರನ್ನು ಉದ್ಧರಿಸಬೇಕೆನ್ನುವ ವಿಶ್ರವಸ ಮಹರ್ಷಿಗೆ ತನ್ನನ್ನೇ ಅರ್ಪಿಸಿಕೊಂಡು ನಾಲ್ವರು ಪುತ್ರರನ್ನು ಪಡೆದಳು. ಅವರೇ ರಾವಣ, ಕುಂಭಶ್ರವಣ, ವಿಭೀಷಣ ಮತ್ತು ಶೂರ್ಪನಖಾ. ಬ್ರಹ್ಮರ್ಷಿಯ ಮಂತ್ರ ಮತ್ತು ರಾಕ್ಷಸರ ತಂತ್ರ ಈ ಎರಡರ ಒಗ್ಗೂಡುವಿಕೆಯೇ ರಾವಣಾದಿಗಳ ಜನನ. ವಿಶ್ರವಸ ಮಹರ್ಷಿಯಾದರೋ ತನ್ನ ಮೊದಲ ಮಗನಾದ ಕುಬೇರನಿಗೆ ವೈಶ್ರವಣ ಎಂದು ಹೆಸರಿಟ್ಟರೆ, ಕೈಕಸೆಯ ಮಕ್ಕಳ ಭೀಕರತೆಗೆ ತಕ್ಕಂತೆ ಅನ್ವರ್ಥಕ ನಾಮವೇ ಅಂಕಿತನಾಮವನ್ನಾಗಿಬಿಡುತ್ತದೆ. ಹತ್ತು ತಲೆಯುಳ್ಳವ ದಶಗ್ರೀವ, ಮಡಿಕೆಯಗಲದ ಕಿವಿಯುಳ್ಳವ ಕುಂಭಕರ್ಣ, ವಿರೂಪಳಾದ ಹೆಣ್ಣು ಮಗುವಿಗೆ ಶೂರ್ಪನಖಾ, ಭೀಷಣ ಅಲ್ಲದೇ ಇದ್ದವನಿಗೆ ವಿಭೀಷಣ ಎನ್ನುವ ಹೆಸರಾಯಿತು.

ಹುಟ್ಟಿಸಿದ ಅಪ್ಪ ಅದಕ್ಕೆ ತಕ್ಕಂತೆ ಸಂಸ್ಕಾರವನ್ನು ನೀಡದೇ ಅರಣ್ಯದಲ್ಲಿ ಅವರನ್ನು ಅಲಕ್ಷಿಸಿದಂತೆ ತೋರುತ್ತದೆ. ನೀವು ಬೇರೆ ನಾವು ಬೇರೆ ಎನ್ನುವ ರೀತಿಯಲ್ಲಿ ದರಿದ್ರ ಬದುಕು ಈ ತಾಯಿ ಮಕ್ಕಳದ್ದಾಗಿತ್ತು. ಅವರೆದುರು ವೈಭೋಗದ ಸಿರಿಯಿಂದ ಪುಷ್ಪಕ ವಿಮಾನದಲ್ಲಿ ಮೆರೆಯುತ್ತಿರುವ ಕುಬೇರ. ಹೊಟ್ಟೆಯುರಿಯಲು ಇನ್ನೇನು ಬೇಕು. ಸವತಿಯ ಮಕ್ಕಳ ವೈಭವ, ತನ್ನ ಮಕ್ಕಳ ಗತಿಗೆಟ್ಟ ಜೀವನ. ಇದಕ್ಕೆ ಪರಿಹಾರ ಹುಡುಕಲು ತಪಸ್ಸು ನೆರವಾಗುತ್ತದೆ ಎನ್ನುವ ತಾಯಿಯ ಉಪದೇಶದ ಕಾರಣ ರಾವಣಾದಿಗಳು ಭೀಕರವಾಗಿ ತಪಸ್ಸನ್ನು ಗೈದರು. ತನ್ನ ತಲೆಯನ್ನೇ ಹೋಮಿಸಿ ಹತ್ತು ಸಾವಿರ ವರ್ಷಗಳ ಕಾಲ ಮಾಡಿದ ತಪಸ್ಸಿಗೆ ಮೆಚ್ಚಿದ ಬ್ರಹ್ಮ ಅಮರತ್ವದ ವರವನ್ನು ಕೊಡಲು ಸಾಧ್ಯವಿಲ್ಲ ಎಂದ. ಸರಿ ಮಾನವರನ್ನು ಬಿಟ್ಟು ಪ್ರಪಂಚದ ಇತರ ಯಾವ ಜೀವಿಯಿಂದಲೂ ತನಗೆ ಸಾವು ಬರಬಾರದ ವರವನ್ನು ರಾವಣ ಬೇಡಿದ. ಮಾನವರೆಂದರೆ ಅಲಕ್ಷ, ಸರಸ್ವತಿಯ ಪ್ರಭಾವದಿಂದ ಕುಂಭಕರ್ಣ ನಿದ್ರೆಯನ್ನು ಬೇಡಿದ. ಸ್ವಭಾವತಃ ಮಹಾ ಬಲಶಾಲಿಯಾಗಿದ್ದ ಆತನಿಗೆ ವರ ಸಿಕ್ಕಿದ್ದರೆ ಯಾರೂ ತಡೆಯಲು ಸಾಧ್ಯವಿರುತ್ತಿರಲಿಲ್ಲ. ಈ ಎರಡರ ನಡುವೆ ವಿಭೀಷಣ ಮಾತ್ರ ತನ್ನ ಬುದ್ಧಿ ಎಂತಹ ಸಂದರ್ಭದಲ್ಲಿಯೂ ಧರ್ಮದಲ್ಲಿ ಸ್ಥಿರವಾಗಿರಲಿ ಎನ್ನುವ ವರವನ್ನು ಬೇಡಿದ. ಅಮರತ್ವವನ್ನು ಬೇಡಿದ ರಾವಣನಿಗೆ ಸಾಧ್ಯವಿಲ್ಲ ಎಂದ ಬ್ರಹ್ಮ, ವಿಭೀಷಣನಿಗೆ ಧರ್ಮ ಬುದ್ಧಿಯಲ್ಲಿ ಸ್ಥಿರವಾಗಿರುವಂತೆ ಕೇಳಿದ ವರವನ್ನು ನೀಡಿದ, ಅಷ್ಟೇ ಅಲ್ಲ ಜೊತೆಗೆ ಚಿರಂಜೀವತ್ವವನ್ನೂ ಸಹ ನೀಡಿದ. ರಾವಣ ಅಮರತ್ವವನ್ನು ಕೇಳಿದರೆ ಇಲ್ಲ ಎಂದವ ವಿಭೀಷಣನ ಬಯಸದೇ ಇದ್ದರೂ ಮರಣವಿಲ್ಲದ ವರವನ್ನು ನೀಡಿದ! ಇದು ಗೂಢ! ಎಲ್ಲಿ ಧರ್ಮ ಇರುತ್ತದೆಯೋ ಅಲ್ಲಿ ಹುಟ್ಟುಸಾವಿನ ಗೊಡವೆ ಇರುವುದಿಲ್ಲ!

ಇಲ್ಲಿಂದ ಪ್ರಾರಂಭವಾಯಿತು ರಾವಣನ ದರ್ಪ. ಮೂರು ಲೋಕವನ್ನೇ ಗಡ ಗಡ ನಡುಗಿಸಿದ. ಮೊದಲು ಕುಬೇರನನ್ನು ಲಂಕೆಯಿಂದ ಓಡಿಸಿ ತನ್ನ ಸ್ವಾಧೀನಕ್ಕೆ ತಗೆದುಕೊಂಡ. ದೇವತೆಗಳೆಲ್ಲ ಈತನ ಅಡಿಯಾಳಾಗಿ ಇರಬೇಕಾದ ಪರಿಸ್ಥಿತಿ. ಯಮಧರ್ಮನ ದಂಡವನ್ನೇ ಹಿಡಿದಾಗ ಸಾಕ್ಷಾತ ಬ್ರಹ್ಮನೇ ಅದನ್ನು ತಪ್ಪಿಸಿ ಯಮನಿಗೇ ನೀಡಬೇಕಾಯಿತು. ದೇವ-ಯಕ್ಷ-ಗಂಧರ್ವರು ರಾವಣನಿಂದ ಪೀಡಿತರಾಗಿ ತಮ್ಮ ತಮ್ಮ ಗುಣಗಳನ್ನೇ ಮರೆತು ಅಡಗಿ ಕುಳಿತುಕೊಳ್ಳಬೇಕಾಯಿತು. ರಾವಣ ಹೊರ ಹೊರಟರೆ ಸೂರ್ಯನೂ ತನ ಪ್ರಭೆಯನ್ನು ಕಡಿಮೆ ಮಾಡಿ ಆತನ ಕಾಂತಿಯೆದುರು ತನ್ನ ಕಾಂತಿಯನ್ನು ಹೀನಮಾಡಿಕೊಳ್ಳುತ್ತಿದ್ದ. ಸಮುದ್ರದ ಅಲೆ ಈತನನ್ನು ಕಂಡೊಡನೆ ಸ್ಥಿರವಾಗಿ ನಿಲ್ಲುತಿತ್ತು. ವೇದಗಳೂ ಇಂದ್ರನನ್ನು ಹೊಗಳುತ್ತವೆ. ಋಷಿಮುನಿಗಳ ಯಜ್ಞ ದೇವತೆಗಳಿಗೆ ಆಹಾರ. ಹಾಗಾಗಿ ನಂತರ ಈತನ ಗಮನ ಋಷಿಗಳನ್ನು ಹಿಂಸಿಸುವತ್ತ ತಿರುಗಿತು. ಯಜ್ಞಗಳನ್ನು ಧ್ವಂಸ ಮಾಡುವುದು ಮತ್ತು ಋಷಿಗಳನ್ನು ತಿಂದು ತೇಗುವುದು ರಾಕ್ಷಸರ ನಿತ್ಯದ ರೂಢಿಯಾಯಿತು. ಯಜ್ಞಾಹಾರವಿಲ್ಲದ ದೇವತೆಗಳ ಅನ್ನಕ್ಕೂ ಕಲ್ಲು ಬಿತ್ತು. ಊಟವಿಲ್ಲದೇ ಕೃಶವಾದ ಅವರು ತಮ್ಮ ಅಸ್ತಿತ್ವಕ್ಕಾಗಿ ಇದಕ್ಕೆ ಕಾರಣನಾದ ಬ್ರಹ್ಮನನ್ನೇ ಪರಿಹಾರಕ್ಕಾಗಿ ಬೇಡಿಕೊಂಡರು.

ಅಸ್ತಿತ್ವವನ್ನು ಸ್ಥಾಪಿಸಲು ನಡೆದ ಎರಡು ಗಮನಾರ್ಹ ಸಭೆ :

ತಮ್ಮನ್ನು ಪೀಡಿಸುವ ರಾವಣನನ್ನು ನಿಗ್ರಹಿಸಲು ದೇವತೆಗಳು ಬ್ರಹ್ಮನ ನೇತೃತ್ವದಲ್ಲಿ ಒಂದು ಸಭೆಯನ್ನು ಸೇರಿಸಿದರು. ಅಂತಿಂತಹ ಸಭೆಯಲ್ಲ ಅದು. ದೇವರಾಜ ಇಂದ್ರ, ಸಮುದ್ರರಾಜ ವರುಣ, ಸಾವಿನೊಡೆಯ ಯಮ, ಉಸಿರಿನೊಡೆಯ ವಾಯು, ಎಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲ ಅಗ್ನಿ ಇವರೆಲ್ಲ ತಮ್ಮ ತಮ್ಮ ಮೂಲಸ್ವರೂಪವನ್ನೇ ಕಳೆದುಕೊಂಡು ತೇಜೋಹೀನರಾಗಿ ತಲೆಯ ಮೇಲೆ ಕೈಹೊತ್ತು ಕುಳಿತ ಸಭೆ ಅದು. ಅವರಿಗೆ ಮಂತ್ರಶಕ್ತಿಯಿಂದ ಶಕ್ತಿ ತುಂಬಬೇಕಾಗಿದ್ದ ಸಪ್ತರ್ಷಿಗಳು ಕಣ್ ಕಣ್ ಬಿಟ್ಟು ಶೂನ್ಯವನ್ನು ದಿಟ್ಟಿಸುತ್ತಿದ್ದರು. ಇಷ್ಟಕ್ಕೆಲ್ಲಾ ನೀನೇ ಕಾರಣ ಎಂದು ಇವರೆಲ್ಲಾ ಎಲ್ಲಿ ತನ್ನನ್ನೇ ನೋಡುತ್ತಿದ್ದಾರೆಯೋ ಎಂದು ಸೃಷ್ಟಿಕರ್ತ ತಲೆ ತಗ್ಗಿಸಿ ಕುಳಿತಿದ್ದ. ದೇವತೆಗಳು ತಮ್ಮಕಷ್ಟಕ್ಕೆ ಕಾರಣರಾದವರನ್ನು ಇಲ್ಲಿ ದೂಷಿಸಲಿಕ್ಕೆ ಅಲ್ಲಿ ಸೇರಿರಲಿಲ್ಲ. ಪರಿಹಾರವನ್ನು ಶತಾಯು ಗತಾಯು ಕಂಡುಕೊಳ್ಳಲೇಬೇಕಾಗಿತ್ತು. ವರ ನೀಡಿದ ಬ್ರಹ್ಮನಿಗೆ ಅದರ ಪರಿಮಾರ್ಜನೆಯ ಹಾದಿ ಎಂದರೆ ಮಾನವರು ಮಾತ್ರ ಎನ್ನುವುದರ ಅರಿವಿದೆ. ಆದರೆ ಅಂತಹ ಮಹಾಬಲಿಷ್ಟನಾದ ಮಾನವ ಲೋಕದಲ್ಲಿ ಮತ್ತೊಬ್ಬ ಇನ್ನೂ ಹುಟ್ಟಿಲ್ಲ. ಹುಟ್ಟಿದ ಹೊರತೂ ರಾವಣನ ಸಾವು ಸಾಧ್ಯವಿಲ್ಲ. ಹೀಗಿರುವಾಗ ತಮ್ಮನ್ನು ಯಾರು ರಕ್ಷಿಸಬಹುದೆಂದು ಅವರೆಲ್ಲರೂ ಯೋಚಿಸುತ್ತಿರುವಾಗ ಇದ್ದಕ್ಕಿದ್ದಂತೆ ಗರುಡವಾಹನನಾಗಿ ಅಲ್ಲಿಗೆ ಮಹಾವಿಷ್ಣು ಆಗಮಿಸಿದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸರಯೂತೀರದ ಅಪರಿ; ಅಯೋಧ್ಯೆಯೆನ್ನುವ ಪ್ರಾಚೀನ ನಗರಿ

ವಿಷ್ಣು ಯಾವತ್ತೂ ಹೀಗೆ; ಎಲ್ಲಾ ಸಂಧರ್ಭದಲ್ಲಿಯೂ ಸಿಗುವುದಿಲ್ಲ. ಆದರೆ ಲೋಕಕ್ಕೆ ತೊಂದರೆಯುಂಟಾದಾಗ ಅಲ್ಲಿಗೆ ತಾನೇ ತಾನಾಗಿ ಆಗಮಿಸುತ್ತಾನೆ. ದೇವತೆಗಳ ಗುಣವೆಂದರೆ ಸಂಕಟದಲ್ಲಿದ್ದರೂ ಅದಕ್ಕೆ ಕಾರಣವಾದವರನ್ನು ದೂಷಿಸಲಾರರು. ಗೊಂದಲಕ್ಕೆಡೆಯಿಲ್ಲ. ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಪೂರಕ ವೇದಿಕೆಯನ್ನು ಒದಗಿಸುತ್ತಿದ್ದಾರೆ. ನಾರಾಯಣ ಬಂದಾಗಲೂ ಹಾಗೆ. ಈ ಹಿಂದೆ ಮಾಲಿ, ಸುಮಾಲಿ ಮತ್ತು ಮಾಲ್ಯವಂತನನ್ನು ಎದುರಿಸುವ ಹೊತ್ತಿನಲ್ಲಿಯೂ ದೇವತೆಗಳಿಗೆ ವಿಜಯವನ್ನು ತಂದು ಕೊಟ್ಟವ ಆತನೇ ತಾನೆ. ಭೂಮಿಯಲ್ಲಿ ಹುಟ್ಟು ಎನ್ನುವ ಭೃಗು ಮಹರ್ಷಿಯ ಶಾಪವನ್ನೂ ಸಹ ಲೋಕ ಕಲ್ಯಾಣಕ್ಕಾಗಿ ಬಳಸಿಕೊಂಡವ. ಆತನಲ್ಲಿಯೇ “ನೀನೇ ಭೂಲೋಕದಲ್ಲಿ ಮನುಷ್ಯನಾಗಿ ಅವತರಿಸಿ ರಾವಣನ ಸಂಹಾರಕ್ಕೆ ನೆರವಾಗಬೇಕೆಂದು” ಕೇಳಿಕೊಂಡರು. ಪ್ರತಿ ಸಲ ರಾಕ್ಷಸರ ಬಾಧೆ ಬಂದಾಗಲೂ ದೇವತೆಗಳೇ ವೈಕುಂಠಕ್ಕೆ ಹೋಗಿ ಪ್ರಾರ್ಥಿಸುವುದು ಪದ್ಧತಿ. ರಾವಣನ ದುಷ್ಟತನವನ್ನು ನಿವಾರಿಸಿದೇ ಇದ್ದರೆ ಆಗಲಿಕ್ಕಿಲ್ಲವೆಂದು ದೇವತೆಗಳು ಬರುವ ತನಕ ಕಾಯದೇ ತಾನೇ ಸ್ವಯಂ ಮುಂದಿನ ಹೆಜ್ಜೆಗೆ ಸಿದ್ಧನಾಗಿಯೇ ಬಂದಿದ್ದಾನೆ ರಾವಣನಂತವನನ್ನು ಕೊಲ್ಲಬೇಕಾದರೆ ಪೂರ್ಣ ಶಕ್ತಿ ಬೇಕು. ಆತನನ್ನು ಸುದರ್ಶನ ಚಕ್ರ ಸಹ ಏನೂ ಮಾಡಲು ಸಾಧ್ಯವಾಗದೆಯೇ ಹೋಗಿದೆ. ಇದಕ್ಕೆ ಪೂರ್ಣಕಲೆಯೊಂದಿಗೆ ಅವತಾರವಾಗಲೇ ಬೇಕು. ದೇವತೆಯಾಗಿ ಹೋದರೆ ಅಥವಾ ದೇವನ ಅಂಶವೆನ್ನುವ ಅವತಾರದಿಂದ ಹೋದರೆ ರಾವಣನ ಸೈನ್ಯದಲ್ಲಿ ದೇವಾಂತಕನೆನ್ನುವ ವರವನ್ನು ಪಡೆದ ರಾಕ್ಷಸನಿದ್ದಾನೆ. ನರಾಂತಕನೂ ಇದ್ದಾನೆ. ಹಾಗಾದರೆ ಮಾನವನಾಗಿ ಹೋದರೆ ಹೇಗೆ ಸಾಧ್ಯ ಎನ್ನುವ ಸಂಶಯ ಬರಬಹುದು. ವಾಲ್ಮೀಕಿ ನಾರದರಲ್ಲಿ “ಕೋನ್ವಸ್ಮಿನ್‌ ಸಾಂಪ್ರತಂ ಲೋಕೇ” ಅಂದರೆ ʼʼಸಂಪೂರ್ಣ ಪರಿಪೂರ್ಣರಾದ ಮನುಷ್ಯರು ಯಾರಾದರೂ ಇದ್ದಿರಬಹುದೇ?” ಎನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದು. ಹದಿನಾರು ಗುಣ ಎಂದರೆ ದೋಷ ರಹಿತ ಅಂತ ಅರ್ಥ. ಆತ ದೇವನೂ ಅಲ್ಲ; ಮಾನವನೂ ಅಲ್ಲ. ಆತನೇ ಪರಬ್ರಹ್ಮ ಎನ್ನುವುದರ ಸೂಕ್ಷ್ಮ ವಿಷಯವನ್ನು ನಾರದ ವಾಲ್ಮೀಕಿಗೆ ಹೇಳುತ್ತಾನೆ.

ಪರಬ್ರಹ್ಮವು ಲೋಕದ ಒಳಿತಿಗಾಗಿ ತನ್ನಿಂದಾಗಿ ತಾನೇ ಸ್ವಯಂ ಸಿದ್ಧಮಾಡಿ ಆನಂದವನ್ನು ಹೊಂದುವುದರ ಅರ್ಥವೇ “ರಸೋವೈ ಸಹ”. ಇಲ್ಲಿ ಪರಮಾತ್ಮ ತಾನೇ ಪಾಯಸದ ರಸವಾಗಿ ದೇವತೆಗಳಿಗೆ ಒದಗುವುದಾಗಿ ಭರವಸೆ ಕೊಟ್ಟಿದ್ದಾನೆ. ದೇವತೆಗಳು ಇಲ್ಲಿ ನಿಮಿತ್ತ ಮಾತ್ರ. ಅವರ ಕಾರ್ಯವನ್ನು ತಾನು ಬಗೆಹರಿಸುವೆನೆನ್ನುವ ಆನಂದ, ಸುರರಿಗೆ ಲೋಕ ಕಂಟಕನನ್ನು ನಿವಾರಣೆಮಾಡುವ ಗಳಿಗೆ ಬಂತಲ್ಲ ಎನ್ನುವ ಆನಂದ. ಲೋಕೋಪಕಾರಕ್ಕಾಗಿ ಬಂದ ಆನಂದ ಇದು. ಸ್ವರ್ಗದಲ್ಲಿ ದೇವತೆಗಳ ಅಸ್ತಿತ್ವವೆನ್ನುವುದು ಪರ್ಯಾಯವಾಗಿ ಲೋಕದಲ್ಲಿ ಧರ್ಮ ಸ್ಥಾಪನೆಗಾಗಿ ನಡೆಸುವ ಅಸ್ತಿತ್ವ. ಹೀಗೆ ಸುಕೃತದ ಫಲಸ್ವರೂಪವಾಗಿ ಎಲ್ಲಾ ಕಡೆ ಸಮಾನವಾಗಿ ಸಮ್ಮಿಳಿತಗೊಳ್ಳುವ ಪಾಯಸವಾಗಿ ಪರ್ಯಾವಸಾನಗೊಂಡಿತು. ಸಾಕ್ಷಾತ ಪುರುಷೋತ್ತಮನೇ ಅವತರಿಸುತ್ತಾನೆ ಎಂದಾಗ ಅದನ್ನು ಧಾರಣೆ ಮಾಡುವ ಶಕ್ತಿಯುಳ್ಳ ಕ್ಷೇತ್ರವೂ ಅಗತ್ಯ. ಅದೆಲ್ಲಿ ಎನ್ನುವದಕ್ಕಾಗಿ ಭೂಲೋಕದೆಡೆ ಗಮನ ಹೋದಾಗ ಅಲ್ಲಿಯೂ ಅಸ್ತಿತ್ವದ ಸ್ಥಾಪನೆಗಾಗಿ ಸಭೆಯೊಂದು ನಡೆಯುತ್ತಿತ್ತು. ಇಂದ್ರನಿಗೆ ಸಮಾನವಾಗಿ ಭೂಲೋಕದಲ್ಲಿ ದೊರೆ ಮಾಡುವ ಯಜ್ಞವೊಂದರ ವೇದಿಕೆಯದಾಗಿತ್ತು. ಅದುವೇ ದಶರಥ ಚಕ್ರವರ್ತಿಯ ಅಧ್ವಮೇಧ ಯಾಗ.

ಹಾಗಾಗಿ ಆ ಸಭೆಯ ಕುರಿತು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾವಣ ವಧೆಗೆ ನಾಂದಿಯಾದ ಸೀತಾಪಹರಣ

Exit mobile version