ರಾಜತ್ವವೆನ್ನುವದು ಭೋಗವಲ್ಲ, ಕರ್ತವ್ಯ ನಿಭಾಯಿಸುವಿಕೆಯ ಹೊಣೆಗಾರಿಕೆ
ಹಿಂದಿನ ಸಂಚಿಕೆಯಲ್ಲಿ ಪ್ರಾಚೀನ ಭಾರತದಲ್ಲಿನ ಗಣರಾಜ್ಯ ಪದ್ಧತಿ ಮತ್ತು ನೇತಾರನ ಗುಣಗಳು ಹೇಗಿರಬೇಕೆನ್ನುವುದನ್ನು ನೋಡಿದ್ದೆವು.
ಅಗ್ನೇ ಪವಸ್ವ ಸ್ವಪಾSಅಸ್ಮೇ ವರ್ಚಃಸುವೀರ್ಯಮ್ I
ದಧದ್ರಯಿಂ ಮಯಿ ಪೋಷಮ್ I
ಉಪಯಾಮಗ್ರಹೀತೋSಸ್ಯಗ್ನಯೇ ತ್ವಾ ವರ್ಚಸSಏಷ ತೇ
ಯೋನಿರಗ್ನಯೇ ತ್ವಾ ವರ್ಚಸೇ I
ಅಗ್ನೇ ವರ್ಚಸ್ವಿನ್
ವರ್ಚಸ್ವಾಸ್ತ್ವಂ ದೇವೇಷ್ವಸಿ ವರ್ಚಸ್ವಾನಹಂ ಮನುಷ್ಯೇಷು ಭೂಯಾಸಮ್ IIಯ. 8-38II
ಭಾವಾರ್ಥ:- ಸಭಾಪತಿಯೇ ಅಗ್ನಿಯಂತೆ ಪರಿಶುದ್ಧನಾಗಿರು. ವೇದಾಧ್ಯಯವನ್ನು ಪ್ರೋತ್ಸಾಹಿಸು. ಧನವನ್ನು ರಕ್ಷಿಸು. ರಾಜ್ಯದ ವ್ಯವಹಾರಕ್ಕಾಗಿ , ವಿಜ್ಞಾನಮಯವಾದ ನ್ಯಾಯವ್ಯವಹಾರಕಾಗಿ ನಿನ್ನನ್ನು ನಾವು ಸ್ವೀಕರಿಸಿದ್ದೇವೆ. ನೀನು ಸದ್ಗುಣ, ತೇಜಸ್ಸನ್ನು ಹೊಂದಿ ನಮ್ಮನ್ನು ರಕ್ಷಿಸಬೇಕು. ಈ ರಾಜ್ಯವು ನಿನಗೆ ಸುಖದಾಯಕವಾದ ವಾಸಗ್ರಹವಾಗಿದೆ. ವಿಜ್ಞಾನಮಯನಾದ ಪರಮೇಶ್ವರನನ್ನು ನೀನು ಅರಿಯಬೇಕೆಂದು ನಿನ್ನನ್ನು ಪ್ರೇರೇಪಿಸುತ್ತೇವೆ. ಸಕಲ ವಿದ್ಯೆಗಳನ್ನು ತಿಳಿದವನಾದ ನೀನು ಶ್ರೇಷ್ಠ ವಿದ್ವಾಂಸನಾಗಿದ್ದೀಯೆ. ಈ ಎಲ್ಲ ಗುಣಗಳು ಪ್ರಜೆಗಳು ಉತ್ತಮ ಕರ್ಮದಲ್ಲಿ ನಿರತವಾಗಿರುವಂತೆ ಪ್ರೇರೇಪಿಸು.
ರಾಜನಾದವನಿಗೆ ವಿಧಿ ಮತ್ತು ನಿಷೇಧವನ್ನು ವಿಧಿಸುವ ಇಂತಹ ಹಲವಾರು ಮಂತ್ರಗಳು ವೇದಗಳಲ್ಲಿ ಸಿಗುತ್ತವೆ. ಹಿಂದೆಯೇ ಹೇಳಿದಂತೆ ರಾಜತ್ವವನ್ನು ಸಭಾಪತಿಯಾದವ ಭೋಗಕ್ಕಾಗಿ ನೋಡದೇ, ಧರ್ಮಮಾರ್ಗದಲ್ಲಿ ಪಜೆಗಳು ನಡೆಯುವಂತೇ ನೋಡಬೇಕಾಗಿದೆ. ಒಂದುವೇಳೆ ರಾಜನಾದವ ತಪ್ಪಿ ಧರ್ಮಭ್ರಷ್ಟನಾದರೆ ಎನ್ನುವ ಪ್ರಶ್ನೆ ಇಲ್ಲಿ ಎದುರಾಗುತ್ತದೆ. ಆಗ ಈಗಿನಂತೆ ನಿಯಮಿತವಾದ ಅವಧಿಗೆ ಪುನರಾಯ್ಕೆಯೋ ಅಥವಾ ಹೊಸ ನಾಯಕನ ಆಯ್ಕೆಯೋ ಇರಲಿಲ್ಲ. ಗ್ರೀಕ್ ಮತ್ತು ರೋಮನ್ ಸಾಮ್ರಾಜ್ಯದಲ್ಲಿಯೂ ರಾಜನನ್ನು ಬದಲಾಯಿಸುವ ಹಕ್ಕು ಇತ್ತು. ಎರಡೂ ಕಡೆಯೂ ಹೆಚ್ಚೂಕಡಿಮೆ ಒಂದೇ ರೀತಿಯ ಆಡಳಿತ ವ್ಯವಹಾರಗಳಿದ್ದವು. ಭಾರತದಲ್ಲಿ ವೇದಗಳ ಮೂಲಕ ಆ ಪದ್ಧತಿಯ ಅಧ್ಯಯನಕ್ಕೆ ಅವಕಾಶವಿದೆ. ಸೆಮೆಟಿಕ್ ಮತಗಳ ಪ್ರಭಾವದಿಂದ ಗ್ರೀಸಿನ ರಾಜತ್ವದ ವಿಧಿ ವಿಧಾನಗಳು ಲುಪ್ತವಾಗಿ ಹೋಗಿವೆ. ರಾಜನಾದವನು ಕರ್ತವ್ಯ ಭ್ರಷ್ಟನಾದರೆ ಆತನನ್ನು ಸಭಾಸದರು ಸಹಿಸುತ್ತಿರಲಿಲ್ಲ. ಅವನನ್ನು ಅಧಿಕಾರದಿಂದ ಇಳಿಸುತ್ತಾರೆ ಎನ್ನುವುದಕ್ಕೆ ವೇನ ಎನ್ನುವ ದೊರೆಯ ಚರಿತ್ರೆಯನ್ನು ಗಮನಿಸಬಹುದು.
ವೇನನೆನ್ನುವವನು ದೊರೆಯಾಗಿರುವ ಕಾಲಕ್ಕೆ ಧರ್ಮವನ್ನು ಉಲ್ಲಂಘಿಸಿದ್ದ. ಪ್ರಜಾಪೀಡಕನಾಗಿದ್ದ. ಆತ ಮೃತ್ಯುವಿನ ಮಗಳಾದ ಸುನೀಥೆ ಮತ್ತು ಅಂಗ ಎನ್ನುವವನ ಮಗನಾಗಿದ್ದ, ಸ್ವಭಾವದಲ್ಲಿ ಕಾಮುಕನಾಗಿದ್ದ. ಲೋಭಿಯಾಗಿದ್ದ ಆತ ಪ್ರಜೆಗಳನ್ನು ಹಿಂಸಿಸುವದರಲ್ಲಿಯೇ ಸಂತಸ ಪಡುತ್ತಿದ್ದ. ಅನ್ಯಾಯದ ರೀತಿಯಲ್ಲಿ ತೆರಿಗೆಯನ್ನು ವಿಧಿಸಿದ್ದ. ಯಜ್ಞದ ಕುರಿತು ಆತನಿಗೆ ತಿರಸ್ಕಾರವಿತ್ತು. “ನ ಯಷ್ಟವ್ಯಂ ನ ಹೋತವ್ಯಂ- ನನ್ನ ರಾಜ್ಯದಲ್ಲಿ ಯಾರೇ ಆಗಲಿ ಯಜ್ಞಗಳನ್ನು ಮಾಡಬಾರದು ಹೋಮಗಳನ್ನು ಮಾಡಬಾರದು” ಎಂದು ಶಾಸನವನ್ನು ವಿಧಿಸಿದ್ದ. ಯಜ್ಞಗಳನ್ನು ತನ್ನ ಕುರಿತೇ ಮಾಡತಕ್ಕದ್ದು; ತನ್ನನ್ನೇ ಪ್ರಜೆಗಳು ಆರಾಧಿಸತಕ್ಕದ್ದು ಎಂದು ಆತ ಘೋಷಿಸಿದ. ಮರೀಚಿಮುನಿಯ ನೇತೃತ್ವದಲ್ಲಿ ಆತನಿಗೆ ಬುದ್ಧಿವಾದವನ್ನು ಹೇಳಲು ಹೋದ ಪ್ರಜೆಗಳನ್ನು ಆತ ಧಿಕ್ಕರಿಸುತ್ತಾನೆ. ಆಗ ಋಷಿಗಳು ಮತ್ತು ಇತರ ಪ್ರಜೆಗಳು ಆತನ ವಿರುದ್ಧ ಬಂಡಾಯವೆದ್ದು ಆತನನ್ನು ಸಂಹರಿಸಿಬಿಡುತ್ತಾರೆ. ನಂತರ ಆತನ ದೇಹವನ್ನು ಕಡೆದಾಗ ಪ್ರಥು ಜನಿಸುತ್ತಾನೆ. ಆತ ರಾಜ್ಯದ ಅಧಿಕಾರವನ್ನು ವ್ಯವಸ್ಥಿತವಾಗಿ ಹಂಚಿಕೆ ಮಾಡುತ್ತಾನೆ ಎನ್ನುವ ವಿಷಯ ಹರಿವಂಶದಲ್ಲಿ ಬರುತ್ತದೆ. ರಾಜ ನಿರಂಕುಶನಾದಾಗ ಆತನ ಮೇಲೆ ಧರ್ಮದಂಡವನ್ನು ಪ್ರಯೋಗಿಸಲು ಋಷಿಮುನಿಗಳು ಹಿಂಜರಿಯುತ್ತಿರಲ್ಲ. ಇದು ರಾಜತ್ವದ ವಿರುದ್ಧ ನಡೆಯುವ ವಿದ್ರೋಹವಲ್ಲ. ವಿದ್ರೋಹದಲ್ಲಿ ನೇತೃತ್ವವನ್ನು ವಹಿಸಿದವರೇ ಮುಂದೆ ರಾಜ್ಯವನ್ನು ಆಳುತ್ತಾರೆ. ಇಲ್ಲಿ ರಾಜ್ಯದ ನೇತೃತ್ವವನ್ನು ವಹಿಸಲು ಅವರು ಯಾರೂ ಮುಂದೆ ಬರದೇ ವೇನನ ಮಗನನ್ನೇ ರಾಜನನ್ನಾಗಿಸಿ ಆತನಿಂದ ಸಮರ್ಥವಾಗಿ ರಾಜ್ಯವಾಳುವಂತೆ ನೋಡಿಕೊಳ್ಳುತ್ತಾರೆ. ಇತಿಹಾಸವನ್ನು ಗಮನಿಸಿದರೆ ನಂದರನ್ನು ಉರುಳಿಸಿ ಚಂದ್ರಗುಪ್ತನನ್ನು ರಾಜನನ್ನಾಗಿ ಮಾಡಿದ ಆಚಾರ್ಯ ಚಾಣಕ್ಯನ ಉದಾಹರಣೆಯಿದೆ.
ರಾಜತ್ವವಿರುವುದು ಹೊಣೆಗಾರಿಕೆಯನ್ನು ನಿಭಾಯಿಸಲು
ಭಾರತೀಯ ಪರಂಪರೆಯ ಪ್ರಸಿದ್ಧ ರಾಜರುಗಳೆಲ್ಲರೂ ಅಧಿಕಾರವನ್ನು ಚಲಾಯಿಸುವುದು ಜನಸೇವೆಗಾಗಿ ಎಂದೇ ಭಾವಿಸುತ್ತಿದ್ದರು. ಬೃಹದಾರಣ್ಯಕ ಉಪನಿಷತ್ತಿನಲ್ಲಿ ರಾಜನ ಹೊಣೆಗಾರಿಕೆಯ ಮಹತ್ವದ ವಿಷವನ್ನು ಪ್ರಸ್ತಾಪಿಸುತ್ತಾ ʼʼರಾಜನಾದವನು ಧರ್ಮವನ್ನು ಸದಾಕಾಲವೂ ಕಾಪಾಡಬೇಕು; ಎಲ್ಲ ಪ್ರಜೆಗಳನ್ನೂ ಸಮಾನ ಭಾವದಿಂದ ನೋಡಬೇಕು. ಬಲಿಷ್ಟರು ದುರ್ಬಲರನ್ನು ಶೋಷಿಸದಂತೆ ನೋಡಬೇಕು” ಎಂದು ಹೇಳಿದೆ. ರಾಜ ತಪ್ಪು ಮಾಡಿದರೆ ಪ್ರಜೆಗಳು ನೇರವಾಗಿ ಆತನನ್ನು ಪ್ರಶ್ನಿಸಬಹುದಾಗಿತ್ತು. ರಾಮಾಯಣದಲ್ಲಿ ಸಗರನ ಕಥೆ ಬರುತ್ತದೆ. ಆತ ಸಮರ್ಥನಾದ ರಾಜನಾಗಿದ್ದ. ಆದರೆ ಆತನ ಮಗ ಅಸಮಂಜಸನೆನ್ನುವವ ಪ್ರಜಾಪೀಡಕನಾಗಿದ್ದ. ಆತ ಅಯೋಧ್ಯೆಯಲ್ಲಿನ ಶಿಶುಗಳನ್ನು ಸರಯೂ ನದಿಯಲ್ಲಿ ಮುಳುಗಿಸಿ ಅವರ ಆಕ್ರಂದನವನ್ನು ನೋಡಿ ಸಂತೋಷಪಡುತ್ತಿದ್ದ. ಆಗ ಪ್ರಜೆಗಳೆಲ್ಲರೂ ಸಗರನ ಬಳಿಬಂದು ಅಸಮಂಜಸನ ಕ್ರೌರ್ಯದ ವಿರುದ್ಧ ದೂರು ಕೊಡುತ್ತಾರೆ. ಸಗರ ತನ್ನ ಮಗ ಎನ್ನುವ ಯಾವ ಮಮಕಾರವನ್ನು ಇಟ್ಟುಕೊಳ್ಳದೇ ಆತನನ್ನು ರಾಜ್ಯದಿಂದ ಗಡಿಪಾರು ಮಾಡಿ ಅರಣ್ಯಕ್ಕೆ ಕಳಿಸುತ್ತಾನೆ. ಆತನ ಮಗ ಅಂಶುಮಂತನನ್ನು ಪಟ್ಟಕ್ಕೆ ಏರಿಸುತ್ತಾನೆ. ಅಂಶುಮಂತ ಧರ್ಮಪರಾಯಣನಾಗಿದ್ದ.
ಭರತನ ಹೆಸರನ್ನು ಎಲ್ಲರೂ ಕೇಳೇ ಇರುತ್ತೇವೆ. ಆತ ತುಂಬಾ ಧರ್ಮಾತ್ಮನಾದ ದೊರೆ. ದುಷ್ಯಂತ ಮತ್ತು ಶಕುಂತಲೆಯರ ಮಗನಾಗಿದ್ದ ಈತನಿಗೆ ಸರ್ವದಮನ ಎನ್ನುವ ಹೆಸರೂ ಇದೆ. ಭರತ ಮಹಾ ತೇಜೋವಂತ ರಾಜನಾಗಿದ್ದವ. ಆತ ಮಹಾ ಪರಾಕ್ರಮಿಯಾಗಿದ್ದ. ಧರ್ಮಮಾರ್ಗದಲ್ಲಿ ಸದಾಕಾಲವೂ ನಡೆಯುತ್ತಿದ್ದ. ಆತನ ವ್ಯಕ್ತಿತ್ವದ ಕಾರಣದಿಂದಲೇ ನಮ್ಮ ದೇಶಕ್ಕೆ ಭರತ ಎನ್ನುವ ಹೆಸರು ಬಂದಿರುವುದು. ಆತನಿಗೆ ಅನೇಕ ಮಕ್ಕಳಿದ್ದರು. ಆದರೆ ಅವರೆಲ್ಲರೂ ನಿಷ್ಪ್ರಯೋಜಕರಾಗಿದ್ದರು. ರಾಜ್ಯದಾಡಳಿತ ನಡೆಸಲು ಸಮರ್ಥರಾಗಿರಲಿಲ್ಲ. ತನ್ನ ನಂತರದಲ್ಲಿ ರಾಜ್ಯವನ್ನು ತನ್ನ ಮಕ್ಕಳೇ ಆಳಬೇಕೆನ್ನುವ ಯಾವ ಮಮಕಾರವನ್ನು ಆತ ಹೊಂದಿರಲಿಲ್ಲ. ಯೋಗ್ಯರು ಮಾತ್ರ ಸಿಂಹಾಸನಕ್ಕೆ ಅರ್ಹರು ಎನ್ನುವುದು ಆತನ ನಿಲುವಾಗಿತ್ತು. ಹಾಗಾಗಿ ಆತ ತನ್ನ ಮಕ್ಕಳನ್ನು ರಾಜ್ಯಕ್ಕೆ ಅನರ್ಹರು ಎಂದು ಘೋಷಿಸಿದ. ಆಗ ದೇವತೆಗಳು ಭರದ್ವಾಜ ಗೋತ್ರದ ವಿತಥನನ್ನು ದತ್ತಕಕ್ಕೆ ತೆಗೆದುಕೊಂಡು ಸಿಂಹಾಸನಾಧಿಪತಿಯನ್ನಾಗಿ ಮಾಡುವಂತೆ ಸೂಚಿಸುತ್ತಾರೆ. ರಾಜನಾದವನಿಗೆ ತನ್ನವೆನ್ನುವ ಮಮಕಾರವಿರಲೇಬಾರದಿತ್ತು.
ವೇದಕಾಲದಲ್ಲಿರುವ ಗಣತಂತ್ರದ ವ್ಯವಸ್ಥೆಯಿಂದ ನಂತರದಲ್ಲಿ ರಾಜ ಪ್ರಭುತ್ವದ ಕಡೆ ಹೊರಳಿದರೂ ಮೂಲತಃ ಉತ್ತಮ ಆಡಳಿತವನ್ನು ನೀಡಬೇಕೆನ್ನುವ ವೇದದ ನಿರ್ವಚನವನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿತ್ತು ಎನ್ನುವುದಕ್ಕೆ ಇನ್ನೂ ಹಲವಾರು ಉದಾಹರಣೆಗಳನ್ನು ಕೊಡಬಹುದು. ಪ್ರಜೆಗಳ ಕರ್ತವ್ಯ ನಿಭಾವಣೆಯಲ್ಲಿ ರಾಜನಾದವ ಅಲಕ್ಷ್ಯ ಮಾಡಲೇ ಕೂಡದು. ಸದಾಕಾಲ ಆತ ತನ್ನ ಕರ್ತವ್ಯದಲ್ಲಿಯೇ ನಿರತನಾಗಿರಬೇಕು. ಚಾಣಕ್ಯ ತನ್ನ ನೀತಿಶಾಸ್ತ್ರದಲ್ಲಿ ರಾಜನಿಗೆ ಕೇವಲ ಮೂರು ಗಂಟೆಗಳ ಕಾಲ ಮಾತ್ರ ವಿಶ್ರಾಂತಿಗೆ ಅವಕಾಶವನ್ನು ಕೊಟ್ಟಿದ್ದಾನೆ. ಇದನ್ನು ಗಮನಿಸಿದರೆ ರಾಜನ ಕಾರ್ಯಭಾರದ ಗುರುತ್ವ ಮತ್ತು ಶ್ರಮದಾಯಕದ ಅರಿವಾಗುತ್ತದೆ.
ಈ ಕಾಲದಲ್ಲಿ ರಾಜ್ಯದ ನೇತೃತ್ವವೆನ್ನುವುದು ಸಭಾಪತಿ ಎನ್ನುವುದಕ್ಕಿಂತ ಸಿಂಹಾಸನಾಧಿಶ್ವರ ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ರಾಜ ಮತ್ತು ಪ್ರಜೆಗಳಲ್ಲಿ ಅಧಿಕಾರದ ಮತ್ತು ಸ್ಥಾನದ ಅಂತರವಿತ್ತು. ಇಲ್ಲಿ ರಾಜನಾದವನ ಅಧಿಕಾರ ಸ್ಪಷ್ಟವಾಗಿ ಅನುವಂಶೀಯವಾಗಿ ಬದಲಾಗಿರುವುದನ್ನು ಕಾಣುತ್ತೇವೆ. ಹಣ, ಅಂತಸ್ತು, ಅಧಿಕಾರವಿರುವೆಡೆ ನಿರಂಕುಶ ಮನೋಭಾವ ಸಹಜವಾಗಿ ಬಂದುಬಿಡುತ್ತದೆ. ಹಾಗೆ ಆಗಬಾರದು ಎನ್ನುವ ಕಾರಣಕ್ಕೆ ರಾಜನನ್ನು ಸತ್ಯವೆನ್ನುವ ಧರ್ಮದ ಕಟ್ಟಿನಲ್ಲಿ ಬಂಧಿಸಿಡಲಾಯಿತು. ಒಂದು ಅರ್ಥದಲ್ಲಿ ಇವೆಲ್ಲವೂ ಸಂವಿಧಾನವೇ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಧರ್ಮ ಮತ್ತು ಸತ್ಯದ ಕುರಿತು ವಿವರ ಬರುತ್ತದೆ. ಜನಸಮುದಾಯದ ನಾಯಕನಾದವ ತನಗಿಂತ ಬೇರೆ ಯಾರೂ ಇಲ್ಲ, ತಾನೇ ಸರ್ವೋತ್ತಮ ಎಂದು ಭಾವಿಸಿಬಿಡಬಹುದು ಎನ್ನುವ ಕಾರಣಕ್ಕೆ “ತದೇತತ್ ಕ್ಷತ್ರಸ್ಯ ಕ್ಷತ್ರಂ ಯದ್ಧರ್ಮಸ್ತಸ್ಮಾದ್ಧರ್ಮಾತ್ ಪರಂ – ಧರ್ಮವಿದೆಯಲ್ಲ ಅದು ಕ್ಷತ್ರಕ್ಕೂ ಕ್ಷತ್ರವು. ಆದುದರಿಂದ ಧರ್ಮಕ್ಕಿಂತ ಶ್ರೇಷ್ಠವಾದುದು ಇಲ್ಲ” ಎನ್ನುವ ವಿವರವಿದೆ. ಯಾವುದು ಧರ್ಮ ಹಾಗಾದರೆ, “ಯೋ ವೈ ಸಃ ಧರ್ಮಃ ಸತ್ಯ ವೈ ತತ್, ತಸ್ಮಾತ ಸತ್ಯಂ ವದಂತ ಮಾಹುಃ – ಆ ಧರ್ಮವಿದೆಯಲ್ಲ, ಅದು ಸತ್ಯವೇ, ಆದುದರಿಂದ ಸತ್ಯವನ್ನು ಹೇಳುವವನನ್ನು ‘ಧರ್ಮವನ್ನೇ ಹೇಳುತ್ತಾನೆ’ ಎನ್ನುತ್ತಾರೆ”. ಇದು ಕ್ಷತ್ರಿಯತ್ವವನ್ನು ಸತ್ಯವಿಮುಖವಾಗದಂತೆ ಮಾಡುವ ನಿಯಂತ್ರಣವಾಗಿದೆ. ಪ್ರಜೆಗಳನ್ನು ರಕ್ಷಿಸಲು ರಾಜನ ಅಗತ್ಯವಿದೆ. ರಾಜನನ್ನು ಪ್ರಜೆಗಳು ತಮ್ಮ ನಾಯಕನನ್ನಾಗಿ ಆರಿಸುತ್ತಾರೆ. ಆದರೆ ಆತ ಹದ ತಪ್ಪದಂತೆ ನೊಡಲು ʼಅದಂಡೋಸ್ಮಿʼ ಎನ್ನುವಾಗ ʼಧರ್ಮ ದಂಡ್ಯೋಸಿʼʼ ʼನಿನ್ನ ತಲೆಯ ಮೇಲೆ ಧರ್ಮ ದಂಡ ಯಾವತ್ತಿಗೂ ಇರುತ್ತದೆʼ ಎನ್ನುವ ಎಚ್ಚರಿಕೆಯನ್ನು ವೇದೋಪನಿಷತ್ತುಗಳು ನೀಡುತ್ತಲೇ ಬಂದಿವೆ.
ವೇದ ಮತ್ತು ಉಪನಿಷತ್ತಿನ ಕಾಲದ ನಂತರ ಮಹಾಕಾವ್ಯದ ವಿಷಯಕ್ಕೆ ಬಂದಾಗ ರಾಜ್ಯತ್ವವೆನ್ನುವುದು ಅನುವಂಶೀಯತೆಯ ಜೊತೆಗೆ ಪ್ರಭುತ್ವದ ಸ್ವರೂಪವನ್ನೂ ಪಡೆದುಕೊಂಡಿತ್ತು. ಅದರೂ ಮುಂದಿನ ರಾಜನಾಗುವವನನ್ನು ನಿಯುಕ್ತಿ ಮಾಡುವಾಗ ಪ್ರಜೆಗಳ ಅನುಮೋದನೆಯ ಅಗತ್ಯವಿತ್ತು ಎನ್ನುವುದನ್ನು ರಾಮಾಯಣದಲ್ಲಿ ನೊಡಬಹುದು. ಅಯೋಧ್ಯಾಕಾಂಡದಲ್ಲಿ ದಶರಥ “ತನಗೆ ವಯಸ್ಸಾಯಿತು, ಅಧಿಕಾರ ಸಾಕು ಇನ್ನು ರಾಮನಿಗೆ ಯುವರಾಜ ಪಟ್ಟವನ್ನು ಕಟ್ಟುತ್ತೇನೆ” ಎಂದು ಪ್ರಜೆಗಳ ಅನುಮೋದನೆಯನ್ನು ಕೇಳುತ್ತಾನೆ. ಅದಾಗಲೇ ತನ್ನ ಗುಣಗಳಿಂದ ಪ್ರಜಾಜನರ ಮನಸ್ಸನ್ನು ಗೆದ್ದಿದ್ದ ರಾಮನನ್ನು ಪ್ರಜೆಗಳು ಸಂತೋಷದಿಂದಲೇ ಸ್ವೀಕರಿಸುತ್ತಾರೆ. ಕೈಕೇಯಿಯ ಕಾರಣದಿಂದ ರಾಮ ಅರಣ್ಯಕ್ಕೆ ಹೋಗುವಾಗ ಪ್ರಜೆಗಳು ಅರಣ್ಯಕ್ಕೆ ತಾವೂ ಬರುತ್ತೇವೆಂದು ಹೊರಡುತ್ತಾರೆ. ರಾಮನೇ ಅವರನ್ನು ವಂಚಿಸಿ ಅರಣ್ಯಕ್ಕೆ ಹೋಗುವ ಘಟನೆ ರಾಮಾಯಣದಲ್ಲಿ ರೋಚಕವಾಗಿ ಬಂದಿದೆ. ಒಟ್ಟಾರೆಯಾಗಿ ರಾಜತ್ವವೆನ್ನುವುದು ಪ್ರಜೆಗಳ ಒಲವಿನ ಮೇಲೆ ನಿರ್ಧಾರವಾಗುತ್ತಿತ್ತೇ ಹೊರತೂ ತಮ್ಮ ಮನಸ್ಸಿಗೆ ಬಂದಂತೆ ನಿರ್ಧಾರವನ್ನು ಪ್ರಭುತ್ವ ತೆಗೆದುಕೊಳ್ಳುವಂತಿರಲಿಲ್ಲ. ಇಂದಿಗೂ ಶ್ರೇಷ್ಠವಾದ ರಾಜತ್ವಕ್ಕೆ ಉದಾಹರಣೆಯಾಗಿರುವುದು ರಾಮರಾಜ್ಯ. ರಾಮರಾಜ್ಯವೆಂದರೆ ಹೇಗಿತ್ತು ಎನ್ನುವುದಕ್ಕೆ ರಾಮಾಯಣದ ಯುದ್ಧ ಕಾಂಡದ 128ನೆಯ ಸರ್ಗದಲ್ಲಿ ವಿವರವಾದ ವರ್ಣನೆಗಳು ಸಿಗುತ್ತವೆ.
ಸರ್ವಂ ಮುದಿತಮೇವಾಸೀತ್ಸರ್ವೋ ಧರ್ಮಪರೋSಭವತ್ I
ರಾಮಮೇವಾನುಪಶ್ಯನ್ತೋ ನಾಭ್ಯಹಿಂಸನ್ಪರಸ್ಪರಮ್ II ರಾ. 128-100 II
ಸಮಸ್ತ ಲೋಕವೂ ಆನಂದಮಯವಾಗಿತ್ತು. ಸಮಸ್ತರೂ ಧರ್ಮಪರಾಯಣರಾಗಿದ್ದರು. ಶ್ರೀರಾಮನನ್ನೇ ಸದಾ ಸಂದರ್ಶಿಸುತ್ತಿದ್ದ ಮತ್ತು ಅವನ ಆದರ್ಶವನ್ನೂ ಅನುಸರಿಸುತ್ತಿದ್ದ ಪ್ರಜೆಗಳಲ್ಲಿ ಎಂದಿಗೂ ಪರಸ್ಪರ ಜಗಳವಾಗುತ್ತಿರಲಿಲ್ಲ. ಒಬ್ಬರು ಮತ್ತೊಬ್ಬರನ್ನು ಹಿಂಸಿಸುತ್ತಿರಲಿಲ್ಲ.
ಇದೊಂದು ಶ್ಲೋಕದ ಮೂಲಕ ರಾಮನ ಆದರ್ಶದ ರಾಜತ್ವವೆನ್ನುವುದು ಹೇಗಿತ್ತು ಎನ್ನುವುದು ಅರ್ಥವಾಗುತ್ತದೆ. ಸಕಲ ಪ್ರಜೆಗಳೂ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುತ್ತಿದ್ದರು. ಪ್ರಜೆಗಳು ರಾಜನ ನಿರ್ಧಾರವನ್ನು ಕಟುವಾಗಿ ಟೀಕಿಸಬಹುದಿತ್ತು ಎನ್ನುವುದನ್ನು ಸೀತಾವಿಯೋಗದಲ್ಲಿ ನೋಡಬಹುದಾಗಿದೆ. ಸೀತೆಯ ಚಾರಿತ್ರ್ಯದ ಕುರಿತು ಮೂಲ ರಾಮಾಯಣದಲ್ಲಿ ಅಗಸ ಹೇಳಿದ ಕಥೆಯಿಲ್ಲ. ರಾಜನ ಗೂಢಚಾರರಿಗೆ ಪ್ರಜೆಗಳು ಕಟ್ಟೆ ಕಟ್ಟೆಯ ಮೇಲೆ, ಮನೆ ಮನೆಗಳಲ್ಲಿ, ಬೀದಿಬೀದಿಗಳಲ್ಲಿ, ರಾವಣನ ಸೆರೆಯಲ್ಲಿರುವ ಸೀತೆಯ ಶೀಲದ ಮೇಲೆ ಸಂಶಯದ ಕುರಿತು ಮಾತಾಡಿಕೊಳ್ಳುತ್ತಿದ್ದರು. ಅದು ರಾಮನ ಕಿವಿಗೆ ತಲುಪುತ್ತದೆ. ಹಾಗಾಗಿ ತಾನು ಪ್ರಜೆಗಳ ಅಭಿಪ್ರಾಯವನ್ನು ಮನ್ನಿಸುವವ ಎನ್ನುವುದನ್ನು ತೋರಿಸಲು ಸೀತೆಯನ್ನು ತ್ಯಜಿಸುವ ನಿರ್ಧಾರಕ್ಕೆ ರಾಮ ಬರುತ್ತಾನೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆ ಹೀಗಿತ್ತು!
ಮಹಾಭಾರತದ ಕಾಲಕ್ಕೆ ಬರುವಾಗ ಮಾತ್ರ ಪ್ರಜೆಗಳ ಮಾತಿಗೆ ಬೆಲೆ ಕೊಡುವ ಅಭಿಪ್ರಾಯ ಶಿಥಲವಾಯಿತು. ಇಲ್ಲಿ ರಾಜನಾದವ ಹೇಗೆ ನಡೆಯಬೇಕೆನ್ನುವ ವಿಧಿ ವಿಧಾನಗಳು ಭೀಷ್ಮನಿಂದ ಧರ್ಮರಾಜನಿಗೆ ಉಪದೇಶಿಸಲ್ಪಟ್ಟಿದೆ. ಪಾಂಡವರನ್ನು ಅರಣ್ಯಕ್ಕೆ ಅಟ್ಟುವ ಸಂದರ್ಭದಲ್ಲಿ ಕೆಲವೊಂದಿಷ್ಟು ಪ್ರಜೆಗಳು ಧರ್ಮರಾಜನನ್ನು ಹಿಂಬಾಲಿಸುತ್ತಾರೆ. ಆದರೆ ಆ ಕುರಿತು ಧೃತರಾಷ್ಟ್ರನಾಗಲೀ, ದುರ್ಯೋಧನನಾಗಲೀ ಚಿಂತಿಸುವುದಿಲ್ಲ. ಇಲ್ಲಿ ಪ್ರಭುತ್ವವೆನ್ನುವುದು ಮೇಲಿನಿಂದ ಹೇರಲ್ಪಟ್ಟಿತ್ತು. ಆದರೂ ಶಾಂತಿಪರ್ವದಲ್ಲಿನ ಭೀಷ್ಮರ ಉಪದೇಶದಲ್ಲಿ ನ್ಯಾಯಪರತೆಗೆ ತುಂಬಾ ಮಹತ್ವವನ್ನು ಕೊಟ್ಟಿದೆ. ಮಹತ್ವದ ವಿಷಯವೆಂದರೆ ಇಲ್ಲಿ ಅರ್ಥಶಾಸ್ತ್ರದ ಕುರಿತು ಆಧುನಿಕರೂ ಅಧ್ಯಯನ ಮಾಡುವಂತಹ ವಿಷಯಗಳಿವೆ. ಉತ್ತಮ ಸರಕಾರದ ಆಡಳಿತ ಹೇಗಿರಬೇಕು ಮತ್ತು ಕರಗಳ ಸಂಗ್ರಹದ ವಿಷಯದಲ್ಲಿ ರಾಜನಾದವ ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ವಿವರವಾಗಿ ಹೇಳಿದೆ.
ದಮಯನ್ನಿವ ದಮ್ಯಾನಿ ಶಶ್ವದ್ಭಾರಂ ವಿವರ್ಧಯೇತ್ I
ಮೃದುಪೂರ್ವಂ ಪ್ರಯತ್ನೇನ ಪಾಶಾನಭ್ಯವಹಾರಯೇತ್ IIಶಾಂ.8-88II
ರಾಜನಾದವನು ಕರವನ್ನು ಸ್ವಲ್ಪ ಸ್ವಲ್ಪವೇ ಸಂಗ್ರಹ ಮಾಡಬೇಕು. ಎಳೆಗರುವಿಗೆ ಸ್ವಲ್ಪ ಸ್ವಲ್ಪವೇ ಭಾರವನ್ನು ಹೇರಿ ನಂತರ ಆ ಭಾರವನ್ನು ಹೆಚ್ಚಿಸುವಂತೆ ಕರವನ್ನು ಸಂಗ್ರಹಿಸಬೇಕು. ದುರ್ಬಲರಾದವರಿಂದ ಕರವನ್ನು ಸಂಗ್ರಹಿಸಕೂಡದು. ಹೊಸತಾಗಿ ಪ್ರಾರಂಭಿಸಿದ ಉದ್ಯೋಗದಿಂದ ಕರವನ್ನು ಕೆಲಕಾಲ ಸಂಗ್ರಹಿಸಕೂಡದು. ಹೀಗೆ ಅನೇಕ ವಿವರಗಳಿವೆ. ಇಂದಿನ Tax Holiday ಎನ್ನುವ ಕಲ್ಪನೆಯ ಮೂಲವನ್ನು ಇಲ್ಲಿ ಗುರುತಿಸಬಹುದು. ಇನ್ನು ಮನುಸ್ಮೃತಿಯಲ್ಲಿ ಇವು ಇನ್ನಷ್ಟು ವಿಶದವಾಗಿವೆ.
ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆ. ಪ್ರಜಾಪ್ರಭುತ್ವದ ಈ ಬೇರುಗಳು ನಮ್ಮೊಳಗೆ ವೈಜ್ಞಾನಿಕವಾಗಿ ಇವೆ. ಅಂತಿಮವಾಗಿ Good governance ಅಥವಾ ಉತ್ತಮ ಸರಕಾರ ನಮ್ಮ ಸಂವಿಧಾನದ ಉದ್ಧೇಶವೂ ಹೌದು. ಚುನಾವಣೆಯ ಮುಗಿದು ಹೊಸ ಸರಕಾರ ಬಂದ ಈ ಹೊತ್ತಿನಲ್ಲಿ ಚುನಾವಣೆಯ ಪ್ರಚಾರದಲ್ಲಿನ ದ್ವೇಷಗಳನ್ನು ಮರೆತು ಬುದ್ಧ ಹೇಳಿದ ಬಹುಜನ ಸುಖಾಯ ಬಹುಜನ ಹಿತಾಯ ಎನ್ನುವ ಕಲ್ಯಾಣ ಆಜ್ಯದ ಸ್ಥಾಪನೆಯಾಗುವುದು ಬಹು ಮುಖ್ಯ.
ಪಂ. ಜವಹರಲಾಲ್ ನೆಹರೂ ಅವರು ಉತ್ತಮ ಸರಕಾರದ ಕುರಿತು ಅಗಷ್ಟ 14, 1947 ರಂದು Tryst with destiny ಎಂದೇ ಪ್ರಸಿದ್ಧವಾದ ಭಾಷಣದಲ್ಲಿ ಭಾರತೀಯ ನೆಲೆಯಲ್ಲಿ ಉತ್ತಮ ಸರಕಾರವೆಂದರೆ ಹೇಗಿರಬೇಕು ಎನ್ನುವುದರ ದಿಕ್ಸೂಚಿಯನ್ನು ನೀಡಿದ್ದರು. “The Good governance in India context is the ending of poverty and ignorance and disease and inequality of opportunities. Good governance must aim at expansion in social opportunities and removal of poverty. In short, good governance, means securing justice, empowerment, employment and efficient delivery of services”
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಬುದ್ಧ ಪೂರ್ಣಿಮೆ: ಶಾಕ್ಯಮುನಿ ಗೌತಮ: ಮಧ್ಯಮಮಾರ್ಗದ ಹರಿಕಾರ