Site icon Vistara News

ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

seethapahara

ಅಬಲೆ ಸೀತೆಯ ಒದ್ದಾಟ ದೇವ ಬ್ರಹ್ಮನಿಗೆ ಸಂತಸ!

ದೃಷ್ಟ್ವಾ ಸೀತಾಂ ಪರಾಮೃಷ್ಟಾಂ ದೀನಾಂ ದಿವ್ಯೇನ ಚಕ್ಷುಷಾ
ಕೃತಂ ಕಾರ್ಯಮಿತಿ ಶ್ರೀಮಾನ್ವ್ಯಾಜಹಾರ ಪಿತಾಮಹಃ. ৷৷ಅ.52.10৷৷

ದೇವದೇವನಾದ (ಪಿತಾಮಹ) ಬ್ರಹ್ಮನು ದಿವ್ಯದೃಷ್ಟಿಯಿಂದ ಶತ್ರುವಾದ ರಾವಣನಿಂದ ಸಿಕ್ಕಿಬಿದ್ದ ಹತಾಶ ಸ್ಥಿತಿಯಲ್ಲಿದ್ದ ಸೀತೆಯನ್ನು ನೋಡಿ ಕಾರ್ಯವು ಸಿದ್ಧಿಯಾಯಿತು ಎಂದುಕೊಂಡನು.

ಅಸಹಾಯಕಳಾಗಿ ಸೀತೆ ಸಹಾಯಕ್ಕಾಗಿ ಯಾಚಿಸುತ್ತಿದ್ದರೆ ಬ್ರಹ್ಮ ಲೋಕ ಬಯಸಿದ ಕಾರ್ಯ ಈಡೆರುವ ಹೊತ್ತು ಬಂತು ಎಂದು ಸಂತಸಪಟ್ಟ ವಿಲಕ್ಷಣ ಘಟನೆ ಇದು!

ಜನಸ್ಥಾನದಲ್ಲಿ ರಾವಣ ಸೀತೆಯ ಮುಡಿಯನ್ನು ಹಿಡಿದು ತೊಡೆಯನ್ನು ತನ್ನ ಬಲಗೈಯಿಂದ ಅಮುಕಿ ಬಲಾತ್ಕಾರವಾಗಿ ಅಪಹರಿಸುತ್ತಿರುವಾಗ ಆಕೆ ಮಾಡುವ ರೋದನ ಎಂಥವರ ಕರುಳನ್ನೂ ಹಿಂಡುತ್ತದೆ. ಅಸಹಾಯಕಳಾಗಿ ಯಾರಾದರೂ ಬನ್ನಿ ಎಂದು ಗಿಡಮರ, ಮೃಗ ಪಕ್ಷಿಗಳನ್ನೆಲ್ಲ ಅವಳು ಕೂಗಿ ಕರೆಯುವಾಗ ಅವಳ ಕೂಗನ್ನು ನೋಡಲಾರದೇ ರಾವಣನ ಸಂಗಡ ಹೋರಾಡಿದ ಪಕ್ಷಿ ಜಟಾಯು ಸಹ ಸಾವಿಗೀಡಾಗಬೇಕಾಯಿತು. ರಾವಣನ ಕೈಯಲ್ಲಿ ವಿಲಿವಿಲನೆ ಒದ್ದಾಡುತ್ತಿರುವ ರಾಮನಿಂದ ರಹಿತಳಾಗಿರುವ ಸೀತೆಯನ್ನು ನೋಡಿ ಚರಾಚರಪ್ರಾಣಿಗಳಿಂದ ಕೂಡಿದ ಜಗತ್ತೇ ತನ್ನಸ್ವಭಾವವನ್ನು ಮರೆತು ಸ್ತಬ್ಧವಾಯಿತು. ಎಲ್ಲೆಲ್ಲೂ ಕಗ್ಗತ್ತಲು ಆವರಿಸಿತು. ಗಾಳಿಯೂ ಬೀಸುತ್ತಿರಲಿಲ್ಲ. ಸೂರ್ಯನೂ ಸಹ ಪ್ರಭಾಹೀನನಾದನು. ಹೀಗೆ ಸೀತೆಯ ದುಃಖಕ್ಕೆ ಲೋಕವೇ ಮರುಗುತ್ತಿರುವಾಗ ಬ್ರಹ್ಮ ಸಂತೋಷದಿಂದ ತನ್ನ ಕಾರ್ಯ ಸಾಧಿಸಿತು (Task Completed) ಎಂದು ಸಂತಸಪಟ್ಟನಂತೆ. ದಂಡಕಾರಣ್ಯದಲ್ಲಿರುವ ಎಲ್ಲಾ ಮಹರ್ಷಿಗಳೂ ಸಹ ರಾವಣ ವಧೆಯು ಸನ್ನಿಹಿತವಾಯಿತು ಎಂದು ಹರ್ಷಗೊಂಡರು ಹಾಗೂ ಸಾಧ್ವಿಯಾದ ಸೀತೆಯ ಹೃದಯವಿದ್ರಾವಕವಾದ ಸಂಕಟವನ್ನು ನೋಡಿ ವ್ಯಥಿತರೂ ಆದರು. ಒಂದೆಡೆ ಅಬಲೆಯ ಹೃದಯವಿಧ್ರಾವಕ ಕೂಗು ಇನ್ನೊಂದೆಡೆ ದಿವ್ಯದೃಷ್ಟಿಯುಳ್ಳವರ ಸಂತೋಷ! ಕರುಣಾಸ್ಥಿತಿಯಲ್ಲಿದ್ದ ವೈದೇಹಿಯ ಅವಸ್ಥೆಯನ್ನು ನೋಡಿ ಓದುಗರ ಕಣ್ಣು ಮಂಜಾಗಿ ಮುಂದೆ ಈ ಕಥೆಯನ್ನು ಓದುವುದೇ ಬೇಡ ಎನ್ನುವಂತಹ ಸ್ಥಿತಿಯಲ್ಲಿರುವಾಗ ಭಾವಪ್ರಪಂಚದಿಂದ ಹೊರಗೆಳೆಯುವ ಅಪೂರ್ವ ಶ್ಲೋಕ ಇದು.

ವಾಲ್ಮೀಕಿ ರಾಮಾಯಣದಲ್ಲಿ ಕೊಡುವ ಕಥಾನಕದ ತಿರುವು ಅಸದೃಶ್ಯ. ರೂಪಕ ಮತ್ತು ಧ್ವನಿ ಪ್ರಸ್ಥಾನಗಳನ್ನು ವಾಲ್ಮೀಕಿಯಷ್ಟು ಚನ್ನಾಗಿ ಬಳಸಿಕೊಂಡ ಕವಿ ಮತ್ತೊಬ್ಬರಿಲ್ಲವೆನ್ನಬಹುದು. ಮೇಲಿನ ಶ್ಲೋಕ ಇದಕ್ಕೊಂದು ನಿದರ್ಶನ. ರಾಮನೊಂದಿಗೆ ಅರಣ್ಯದಲ್ಲಿ ಸುಖವಾಗಿ ದಿನಕಳೆಯುತ್ತಿರುವ ಸೀತೆಯ ಪಾಲಿಗೆ ದಂಡಕಾರಣ್ಯದಲ್ಲಿ ನಡೆದ ಅಪಹಾರ ಆಕೆಯ ಬದುಕಿನಲ್ಲಿ ಮುಂದೆ ಎದುರಿಸಿದಂತಹ ಎಲ್ಲಾ ಕಷ್ಟಗಳಿಗೆ ನಾಂದಿಯಾಗಿದೆ. ಇಲ್ಲೊಂದೆ ಅಲ್ಲ, ರಾವಣ ವಧೆಯ ನಂತರ ಸೀತೆ ತನ್ನ ರಾಮನನ್ನು ಕಾಣಬೇಕೆಂದು ಸಂಭ್ರಮದಿಂದ ಬರುವಾಗ ಆತನ ಕಠೋರ ಬಿರುನುಡಿ ಅವಳ ನಿರೀಕ್ಷೆಯನ್ನು ನುಚ್ಚುನೂರು ಮಾಡಿಬಿಡುತ್ತದೆ. ಆಕೆ ಅಗ್ನಿಯನ್ನು ಪ್ರವೇಶಿಸುತ್ತಾಳೆ. ಆಗಲೂ ಆಕೆಯ ಸ್ಥಿತಿಗೆ ಜಗತ್ತೇ ಮರುಗುವಾಗ ವಾಲ್ಮೀಕಿ ದೇವತೆಗಳನ್ನು ದಶರಥನ ಸಹಿತವಾಗಿ ರಂಗಕ್ಕಿಳಿಸಿ ಇದೆಲ್ಲವೂ ನಾಟಕರಂಗದ ಒಂದೊಂದು ಅಂಶವೆಂದು ಎಚ್ಚರಿಸುತ್ತಾನೆ. ಮೂರನೆಯ ಸಾರಿ ಲಕ್ಷ್ಮಣ ರಾಮನ ಆಜ್ಞೆಗನುಸಾರವಾಗಿ ಸೀತೆಯನ್ನು ಕಾಡಿನಲ್ಲಿ ಬಿಡುವ ಹೊತ್ತಿನಲ್ಲಿಯೂ ಸ್ವತಃ ವಾಲ್ಮೀಕಿಯೇ ಪ್ರವೇಶಿಸಿ ಅವಳಿಗೆ ಆಶ್ರಯವನ್ನು ನೀಡಿ ಸಂತೈಸುತ್ತಾನೆ. ಇವೆಲ್ಲವೂ ಕವಿ ತನ್ನ ಕಾವ್ಯದಲ್ಲಿ ತಾನೇ ತನ್ಮಯನಾಗಿಬಿಟ್ಟಾಗ ಅದರಿಂದ ತಾನೇ ಹೊರ ಬರುವ ಸಂಗತಿಗಳು. ಕವಿಗೆ ರಾಮಾಯಣದ ಕಥೆ ಮತ್ತು ಅದು ಪಡೆದುಕೊಳ್ಳುವ ತಿರುವಿನ ಅರಿವಿದೆ. ನಾರದರು ಬಾಲಕಾಂಡದ ಪ್ರಾರಂಭದಲ್ಲಿಯೇ ರಾಮಾಯಣದ ಕಥೆಯನ್ನು ವಾಲ್ಮೀಕಿಗೆ ಹೇಳಿದ್ದಾರೆ. ಅದೇ ಗುಂಗಿನಲ್ಲಿದ್ದ ಮುನಿಗೆ ಬೇಡನಿಂದ ಹತವಾದ ಕ್ರೌಂಚಪಕ್ಷಿಯನ್ನು ಕಂಡ ಹೆಣ್ಣು ಕ್ರೌಂಚದ ರೋದನ ಮನಸ್ಸಿಲ್ಲಿ ಕರುಣಾರಸವನ್ನು ಉಕ್ಕಿಸಿತು. ಆಗ ಬಂದಿರುವುದೇ ಪ್ರಸಿದ್ಧವಾದ

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಶಾಶ್ವತೀಃಸ್ಸಮಾ
ಯತ್ಕ್ರೌಞ್ಚಮಿಥುನಾದೇಕಮವಧೀ: ಕಾಮಮೋಹಿತಮ್ ৷৷ಬಾ.2.15৷৷

ಕಾವ್ಯದಲ್ಲಿ ಶೋಕವೆನ್ನುವುದು ಭಾವತೀವ್ರತೆಯಾಗಿ ಬರಬೇಕೇ ಹೊರತೂ ಅದು ವಾಸ್ತವ ಆಗಬಾರದು. ರಸ ಸಿದ್ಧಾಂತದಲ್ಲಿ ರಸವನ್ನು ಬ್ರಹ್ಮಾನಂದ ಸಹೋದರ ಎಂದು ಕರೆದಿದ್ದಾರೆ. ಬ್ರಹ್ಮಾನಂದವೆನ್ನುವುದು ಸ್ವತಃ ಅನುಭವಿಸುವುಂತಹದ್ದು. ಅದನ್ನು ಹೇಳಿ ತಿಳಿಸಲಾಗದು. ಅದಕ್ಕಿಂತ ಸ್ವಲ್ಪ ಕಡಿಮೆಯದಾದ ಅನುಭೂತಿ ಸಿಗುವುದು ನವರಸಗಳಲ್ಲಿ. ಕರುಣ ರಸದ ಹಿಂದೆ ಇರುವ ಸ್ಥಾಯಿಭಾವ ಶೋಕ. ಶೋಕವನ್ನು ಉಕ್ಕಿಸುವುದೂ ಆನಂದವನ್ನು ಹೇಗೆ ಕೊಡಬಹುದು ಎನ್ನುವುದಕ್ಕೆ ಕಾವ್ಯ ಮೀಮಾಂಸಕರು ಕಾವ್ಯದಲ್ಲಿಯೋ ಅಥವಾ ನಾಟಕದಲ್ಲಿಯೋ ಕರುಣರಸವನ್ನು ಅನುಭವಿಸುವಾಗ ಶೋಕಿಸಿದರೂ ನಂತರ ಎಷ್ಟು ಚಂದವಾಗಿರುವ ಅಭಿನಯ ಅಥವಾ ಕಾವ್ಯ ಎನ್ನುವುದಾಗಿ ಆನಂದ ಪಡುತ್ತಾರೆ. ರಾಮಾಯಣದ ಕವಿಗೆ ಈ ರಸಸಿದ್ಧಾಂತದ ಕಲ್ಪನೆಯಿದೆ. ಹಾಗಾಗಿ ಕಾವ್ಯದಲ್ಲಿ ಎಲ್ಲೆಲ್ಲಿ ಭಾವ ಮೇರೆಮೀರಿ ತನ್ನನ್ನೇ ಅದರಲ್ಲಿ ಮುಳುಗಿಸಿಬಿಡುತ್ತದೆಯೋ ಆಗೆಲ್ಲಾ ಆತ ವ್ಯಾಕುಲ ಬೇಡ, ಇದು ಪೂರ್ವ ನಿರ್ಧರಿತ; ರಾವಣನ ವಧೆಗೆ ದೇವತೆಗಳೇ ರಚಿಸಿದ ವ್ಯೂಹ ಎನ್ನುವುದನ್ನು ತಿಳಿಸುವ ಶ್ಲೋಕಗಳನ್ನು ಬರೆಯುತ್ತಾರೆ. ಒಂದರ್ಥದಲ್ಲಿ Ice breaking. ಸೀತಾ ವಿಯೋಗದಲ್ಲಿ ಭಗವಂತನ ಕೆಲಸ ಪೂರ್ತಿಯಾಗಿರುವುದರಿಂದ ಅಲ್ಲಿ ವಾಲ್ಮೀಕಿ ಇಂತಹ ಯಾವ ಶ್ಲೋಕಗಳ ಗೊಡವೆಗೆ ಹೋಗುವುದಿಲ್ಲ. ನಟ ಪಾತ್ರಗಳಲ್ಲಿ ಮುಳುಗಬಾರದು; ಕವಿ ತನ್ನ ಕಾವ್ಯದಲ್ಲಿ ಕಳೆದುಹೋಗಬಾರದು ಎನ್ನುವ ಪ್ರಜ್ಞೆಗಳಿಗೆ ರಾಮಾಯಣ ಉತ್ತಮ ಉದಾಹರಣೆ.

ರಾಮಾಯಣದಲ್ಲಿ ಸೀತಾಪಹರಣ ಮಹತ್ವದ ಘಟನೆ. ಅಲ್ಲಿಯ ತನಕ ಒಂದು ಮನೆತನದ ಕಥೆಯಾಗಿ, ಪಿತೃವಾಕ್ಯಪರಿಪಾಲಕನಾದ ರಾಮನ ಕಥೆಯಿದೆ. ವಿರಾಧನನ್ನು ಕೊಲ್ಲುವಾಗಿನ ಅತನ ಶೌರ್ಯದ ಕುರಿತು ಉಲ್ಲೇಖವಿದ್ದರೂ ರಾಮನ ಪರಾಕ್ರಮದ ಪರಿಚಯವಾಗುವುದು ಆತ ದಂಡಕಾರಣ್ಯಕ್ಕೆ ಬಂದಮೇಲೆ. ರಾಮ ಅರಣ್ಯದಲ್ಲಿ ಮುನಿಗಳ ಆಶ್ರಮಗಳಲ್ಲಿ ಹತ್ತು ವರ್ಷಗಳನ್ನೂ, ಪಂಚವಟಿಯಲ್ಲಿ ಮೂರುವರ್ಷಗಳನ್ನೂ ಕಳೆದಿರುತ್ತಾನೆ. ಹದಿನಾಲ್ಕನೆಯ ವರ್ಷದ ಆರಂಭದಲ್ಲಿ ಸೀತಾಪಹರನವಾಗುತ್ತದೆ. ಪಂಚವಟಿಗೆ ಬರದೇ ಮುನಿಗಲ ಸಂಗಡ ರಾಮ ಸುಖವಾಗಿ ಇದ್ದು ದಿನಗಳನ್ನು ಕಳೆದು ಭರತನಿಗೆ ಮಾತು ಕೊಟ್ಟಂತೆ ಮರಳಿ ಅಯೋಧ್ಯೆಗೆ ಹೋಗಬಹುದಿತ್ತಾದರೂ ರಾಮ ಹಾಗೆ ಮಾಡದೇ ಅಲ್ಲಿಂದ ಮುಂದೆ ಪಂಚವಟಿಗೆ ವನವಾಸದ ಕೊನೆಯ ಅವಧಿಯನ್ನು ಕಳೆಯಲು ಬಂದಿರುವುದುದಾದರೂ ಯಾಕೆ ಎನ್ನುವ ಸಂಶಯ ಬರುತ್ತದೆ. ಶೂರ್ಪನಖಿಯ ಕಥೆ ಎಲ್ಲರಿಗೂ ಪರಿಚಿತ. ತನ್ನ ಕಿವಿ ಮತ್ತು ಮೂಗುಗಳನ್ನು ಕತ್ತರಿಸಿದ ನಂತರ ಆಕೆ ನೇರವಾಗಿ ದಂಡಕಾರಣ್ಯದಲ್ಲಿ ರಾವಣನಿಂದ ನಿಯುಕ್ತನಾದ ಖರನೆನ್ನುವ ರಾಕ್ಷಸನಲ್ಲಿ ಹೋಗಿ ರಾಮ ಲಕ್ಷ್ಮಣ ಸೀತೆಯನ್ನು ಕೊಲ್ಲಬೇಕು ಎಂದು ಬೇಡಿಕೊಳ್ಳುತ್ತಾಳೆ. ಅವನ ನೇತ್ರತ್ವದಲ್ಲಿ ಹದಿನಾಲ್ಕು ಸಾವಿರ ರಾಕ್ಷಸರ ದೊಡ್ಡ ಸೇನೆಯೇ ಅಲ್ಲಿ ಇತ್ತು. ರಥ, ಅಶ್ವ, ಗಜ ಮತ್ತು ಕಾಲಾಳುಗಳೆಲ್ಲರೂ ಇದ್ದರು. ಋಷಿಮುನಿಗಳ ಯಜ್ಞಗಳನ್ನು ಹಾಳುಗೆಡುವುತ್ತಾ ಅವರನ್ನು ತಿನ್ನುತ್ತಾ ಪುಂಡಾಟಿಕೆಯನ್ನು ನಡೆಸುತ್ತಿದ್ದರು.

ಜನಸ್ಥಾನದಲ್ಲಿ ಪರ್ವತೋಪಾದಿಯಲ್ಲಿ ರಾಕ್ಷಸರಿಂದ ಭಕ್ಷಿಸಲ್ಪಟ್ಟ ಋಷಿಮುನಿಗಳ ಎಲುವುಗಳು ಬಿದ್ದಿದ್ದವು. ಅವರನ್ನು ನಿಗ್ರಹ ಮಾಡುವುದು ರಾಮನ ಲಕ್ಷ್ಯವಾಗಿತ್ತು. ಅಗಸ್ತ್ಯರ ಆಶ್ರಮದಲ್ಲಿ ರಾಮ ಮತ್ತು ಅಗಸ್ತ್ಯರ ಸಂವಾದದಲ್ಲಿ ಇದು ಸ್ಪಷ್ಟವಾಗುತ್ತದೆ. ಅವರೇ ರಾಮನಿಗೆ ಪಂಚವಟಿ ಪ್ರದೇಶಕ್ಕೆ ಹೋಗಲು ಸಲಹೆ ನೀಡುತ್ತಾರೆ. ಮೊದಲ ಬಾರಿ ಸೀತೆ ರಾಕ್ಷಸರ ಘರ್ಜನೆಯನ್ನು ಕೇಳಿ ಭಯಗೊಂಡು ಮುಂದೆ ಹೋಗುವುದು ಬೇಡ ಎನ್ನುತ್ತಾಳೆ. ಹಿಂಸೆ ಬೇಡ; ಸುಮ್ಮನೇ ಇದ್ದುಬಿಡೋಣ. ತಮಗೆ ರಾಜ್ಯವೂ ಪುನಃ ಬೇಡ, ಮುನಿಗಳಾಗಿ ಅರಣ್ಯದಲ್ಲಿಯೇ ಇದ್ದುಬಿಡೋಣ ಎಂದು ಹೇಳುತ್ತಾಳೆ. ಆಗ ರಾಮ ಆಕೆಗೆ “ಕ್ಷತ್ರಿಯೈರ್ಧಾರ್ಯತೇ ಚಾಪೋ ನಾರ್ತಶಬ್ದೋ ಭವೇದಿತಿ৷৷ಅ.10.3৷৷ – ಕ್ಷತ್ರಿಯರ ಕೈಯಲ್ಲಿ ಧನಸ್ಸು ಇರುವದೇ ಆರ್ತರ ರಕ್ಷಣೆಗಾಗಿ” ಎಂದು ವನವಾಸದ ತನ್ನ ಉದ್ಧೇಶವನ್ನು ಪ್ರಕಟಿಸುತ್ತಾನೆ. ರಾಮಾಯಣದ ರೋಚಕ ಘಟ್ಟಗಳೆಲ್ಲವೂ ಪ್ರಾರಂಭವಾಗುವುದು ಇಲ್ಲಿಂದಲೇ. ಖರನೊಡನೆ ಯುದ್ಧ ಮಾಡುವಾಗ ರಾಮ ಹೇಳುವ ಈ ಶ್ಲೋಕವನ್ನು ಇದನ್ನು ಇನ್ನಷ್ಟು ವಿದಿಶೀಕರಿಸುತ್ತದೆ.

ಪಾಪಮಾಚರತಾಂ ಘೋರಂ ಲೋಕಸ್ಯಾಪ್ರಿಯಮಿಚ್ಛತಾಮ್.
ಅಹಮಾಸಾದಿತೋ ರಾಜಾ ಪ್ರಾಣಾನ್ಹನ್ತುಂ ನಿಶಾಚರ৷৷ಅ.29.10৷৷

ನಿಶಾಚರನೇ ಘೋರವಾದ ಪಾಪಗಳನ್ನು ಮಾಡುವವರ ಮತ್ತು ಜನರಿಗೆ ಅಹಿತವನ್ನು ಬಯಸುವವರ ಸಂಹಾರಕ್ಕಾಗಿಯೇ ರಾಜನಾದ (ದಶರಥ?)ನಿಂದ ನಿಯುಕ್ತನಾಗಿ ಇಲ್ಲಿಗೆ ಬಂದಿರುತ್ತೇನೆ.

ರಾಮ ತನ್ನ ವನವಾಸದ ಉದ್ಧೇಶವನ್ನು ಸ್ಪಷ್ಟವಾಗಿ ಹೇಳುವ ಈ ಶ್ಲೋಕ ಮಹತ್ವವಾದುದು. ಅಯೋಧ್ಯಾ ಕಾಂಡದಲ್ಲಿ ಎಲ್ಲೂ ದಶರಥ ರಾಮನಿಗೆ ವನವಾಸಕ್ಕೆ ಹೋಗುವಾಗ ದುಷ್ಟ ನಿಗ್ರಹದ ವಿಷಯವನ್ನು ಹೇಳಿರುವ ಸಂಗತಿ ಬಂದೇ ಇಲ್ಲ. ದಶರಥ ರಾಮನ ವಿರಹದಿಂದ ವಿಲಾಪಿಸಿ ಅದೇ ಕಾರಣಕ್ಕೆ ಮರಣಹೊಂದಿರುವ ಕಥೆ ಜಗತ್ಪ್ರಸಿದ್ಧ. ಒಂದು ಹೊತ್ತು ತನ್ನ ಜೊತೆಯಲ್ಲಿ ಊಟಮಾಡು ಎಂದರೂ ರಾಮ ಆ ಮಾತನ್ನು ತಿರಸ್ಕರಿಸಿ ಬಂದಿರುವ ಸಂಗತಿಯನ್ನು ವಾಲ್ಮೀಕಿ ಸ್ಪಷ್ಟವಾಗಿ ಬರೆದಿದ್ದಾನೆ. ಹಾಗಾದರೆ ಇಲ್ಲಿ ರಾಮ ಸುಳ್ಳು ಹೇಳಿದನೇ ಅಥವಾ ಇದು ಪ್ರಕ್ಷಿಪ್ತವೇ ಎನ್ನುವ ಸಂಶಯ ಬರುತ್ತದೆ. ಇದನ್ನು ಎರಡು ರೀತಿಯಿಂದ ಅರ್ಥೈಸಬಹುದಾಗಿದೆ. ಮೊದಲನೆಯದ ದಶರಥನೇ ಹೇಳಿರುವುದು ಅಂತಾದರೆ ದಂಡಕಾರಣ್ಯಕ್ಕೂ, ದಶರಥನಿಗೂ, ರಾಕ್ಷಸ ಸಂಹಾರಕ್ಕೂ ಬಹುನಿಕಟವಾದ ಸಂಬಂಧವಿದೆ. ಶಂಭರನನ್ನು ದಶರಥ ನಿಗ್ರಹಿಸಿರುವುದು ಹಾಗೂ ಆ ಸಂದರ್ಭದಲ್ಲಿ ಕೈಕೇಯಿಗೆ ಎರಡು ವರಗಳನ್ನು ಕೊಟ್ಟು ಅದೇ ಕಾರಣಕ್ಕೆ ರಾಮ ವನವಾಸಕ್ಕೆ ಬಂದಿರುವುದು ಸರಿಯಷ್ಟೆ. ಶಂಭರನೊಡನೆ ರಾಜಾ ದಶರಥನ ಯುದ್ಧ ನಡೆದಿರುವುದು ಸ್ವರ್ಗದಲ್ಲಿ ಅಲ್ಲ; ದಂಡಕಾರಣ್ಯದಲ್ಲಿಯೇ. ತನ್ನ ತಂದೆ ಹೇಗೆ ದುಷ್ಟರಾದ ರಾಕ್ಷಸರನ್ನುನಿಗ್ರಹಿಸಿದನೋ ಅದೇ ರೀತಿ ತಾನೂ ಸಹ ಆ ಕಂಕೈರ್ಯದಲ್ಲಿ ಮುಂದುವರಿಯುತ್ತಿದ್ದೇನೆ ಹಾಗಾಗಿ ಇದು ತನ್ನ ಕರ್ತವ್ಯ ಎನ್ನುವ ಅರ್ಥವನ್ನು ಹೊಂದಿಸಿಕೊಳ್ಲಬಹುದಾಗಿದೆ. ಇನ್ನೊಂದು ಆಗ ಅಯೋಧ್ಯೆಯನ್ನು ಆಳುತ್ತಿರುವವ ಭರತ. ರಾಮನ ಪಾದುಕೆಯನ್ನು ಸಿಂಹಾಸನದಲ್ಲಿರಿಸಿ ಭರತ ಆಳುತ್ತಿದ್ದರೂ ಅಯೋಧ್ಯಾ ಕಾಂಡದ ಈ ಕೆಳಗಿನ ಶ್ಲೋಕವನ್ನು ಗಮನಿಸಬಹುದು.

ತ್ವಂ ರಾಜಾ ಭರತ! ಭವ ಸ್ವಯಂ ನರಾಣಾಂ ವನ್ಯಾನಾಮಹಮಪಿ ರಾಜರಾಣ್ಮೃಗಾಣಾಮ್.
ಗಚ್ಛ ತ್ವಂ ಪುರವರಮದ್ಯ ಸಮ್ಪ್ರಹೃಷ್ಟಃ ಸಂಹೃಷ್ಟಸ್ತ್ವಹಮಪಿ ದಣ್ಡಕಾನ್ಪ್ರವೇಕ್ಷ್ಯೇ৷৷ಅ.107.17৷৷

ಭರತ ! ನೀನು ಮನುಷ್ಯರಿಗೆಲ್ಲರಿಗೂ ರಾಜನಾಗಿರು. ನಾನೂ ಸಹ ಈ ಅರಣ್ಯದಲ್ಲಿರುವ ಪಶು ಪಕ್ಷಿ ಮೃಗಗಳಿಗೆ ರಾಜನಾಗಿರುತ್ತೇನೆ. ನೀನು ನಗರಗಳಲ್ಲಿಯೇ ಶ್ರೇಷ್ಠವಾದ ಅಯೋಧ್ಯೆಗೆ ಹೋಗು. ನಾನೂ ಕೂಡಾ ಪರಮ ಸಂತುಷ್ಟನಾಗಿ ದಂಡಕಾರಣ್ಯವನ್ನು ಪ್ರವೇಶಿಸುತ್ತೇನೆ.

ರಾಮ ತನ್ನ ಅರಣ್ಯವಾಸದ ಉದ್ಧೇಶವಾಗಿ ದಂಡಕಾರಣ್ಯದಲ್ಲಿ ಅಯೋಧ್ಯೆಯ ರಾಜಶಾಸನವನ್ನು ಸ್ಥಾಪಿಸುತ್ತೇನೆ ಎಂದು ಘಂಟಾಘೋಷವಾಗಿ ಉದ್ಘೋಷಿಸಿದ್ದಾನೆ. ರಾಜ ಎನ್ನುವುದು ದಶರಥನಿಗೆ ಎಂದು ಅನೇಕ ವಿಮರ್ಶಕರು ಹೇಳಿರುವುದನ್ನು ಒಪ್ಪುವುದು ಕಷ್ಟ. ಮುಂದೆಯೂ ಸಹ ಅನೇಕ ಕಡೆ ಅಯೋಧ್ಯೆಯನ್ನು ಆಳುತ್ತಿರುವವ ಭರತ ಎಂದೇ ರಾಮ ಹೇಳುತ್ತಾನೆ. ಹಾಗಾಗಿ ತನ್ನ ತಮ್ಮನಿಗೆ ನೀಡಿದ ಆದೇಶವನ್ನು ಗಮನಿಸುವಾಗ ದುಷ್ಟ ನಿಗ್ರಹಕ್ಕಾಗಿ ತಾನು ಬಂದಿದ್ದೇನೆ ಎಂದು ಖರನಲ್ಲಿ ಹೇಳಿರುವ ಮಾತು ರಾಜನಾದ ಭರತನನ್ನು ಉದ್ಧೇಶಿಸಿಯೇ ಆಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅದೂ ಅಲ್ಲದೇ ಖರನ ಸೇನಾಪಡೆಯಲ್ಲಿ ಚತುರಂಗವಿರುವುದನ್ನು ಗಮನಿಸಿದರೆ ಅದು ರಾವಣನ ವ್ಯೂಹವಾಗಿ ಮಾಂಡಲೀಕವಾಗಿತ್ತು. ಇಲ್ಲಿ ಅರಣ್ಯವೆನ್ನುವುದೂ ಯಾರ ಆಡಳಿತಕ್ಕೂ ಸೇರುವುದಿಲ್ಲ ಎನ್ನುವ ಋಷಿವಾಣಿ ದಂಡಕಾರಣ್ಯಕ್ಕೆ ಅನ್ವಯಿಸುವುದಿಲ್ಲ ರಾಕ್ಷಸರನ್ನು ಕೊಂದು ಅರಣ್ಯವನ್ನು ತಪಸ್ವಿಗಳಿಗೆ ಮುಕ್ತವಾಗಿಸುವುದು ರಾಮನ ಉದ್ದೇಶ. ಈ ಕಾರಣಕ್ಕೂ ರಾಮನಿಗೆ ರಾವಣನನ್ನು ಎದುರಿಸಬೇಕಾಗಿ ಬರಬಹುದು ಎನ್ನುವುದರ ಅರಿವಿತ್ತು ಎನ್ನಬಹುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

ಎಲ್ಲದಕ್ಕೂ ಸಮಯವನ್ನು ಕಾಯಬೇಕು. ಇಲ್ಲಿ ರಾಕ್ಷಸರನ್ನು ಎದುರುಹಾಕಿಕೊಳ್ಳಲು ರಾಮನಿಗೆ ವ್ಯಾಜವಾಗಿ ಸಿಕ್ಕಿದವಳು ಶೂರ್ಪನಖಿ. ಆಕೆ ತನ್ನ ಘೋರವಾದ ಅಸಹ್ಯ ರೂಪದಿಂದಲೇ ಬಂದು ರಾಮನ ಹತ್ತಿರ ಮದುವೆಯಾಗು ಎಂದು ಹೇಳಿದ್ದಾಳೆ. ರಾಕ್ಷಸಿಗೆ ತಾನು ಪರಮ ಸುಂದರಿ ಎನ್ನುವ ಭಾವನೆಯಿತ್ತು. ವಾಲ್ಮೀಕಿ ಅರಣ್ಯಕಾಂಡದ 17ನೇ ಸರ್ಗದಲ್ಲಿ ರಾಮನ ಮತ್ತು ಶೂರ್ಪನಖಿಯ ರೂಪ ವಿಶೇಷಗಳನ್ನು ವಿನೋದವಾಗಿ ವರ್ಣಿಸುತ್ತಾನೆ. ಶ್ರೀರಾಮನು ಸುಂದರವಾದ ಮುಖವುಳ್ಳವನು, ರಾಕ್ಷಸಿಯದು ಗಂಟಿಕ್ಕಿದ ಮುಖ. ಇವನ ನಡುಭಾಗ ಸುಂದರವಾಗಿತ್ತು. ಆಕೆಗೆ ದೊಳ್ಳುಹೊಟ್ಟೆಯ ಕಾರಣದಿಂದ ಸೊಂಟವೇ ಕಾಣುತ್ತಿರಲಿಲ್ಲ, ಎಂಬಿತ್ಯಾದಿಯಾಗಿ ವಿವರಗಳಿವೆ. ಶೂರ್ಪನಖಿ ರಾಮನ ಹತ್ತಿರ ಸೀತೆಯ ರೂಪವನ್ನು ವಣಿಸುತ್ತಾ ಆಕೆ ವಿರೂಪಳಾಗಿದ್ದಾಳೆ, ತಾನು ಸುಂದರಿ ಎಂದು ತನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಾಳೆ. ಕೊನೆಗೆ ಸೀತೆಯನ್ನು ಮತ್ತು ಲಕ್ಷ್ಮಣನನ್ನು ತಿಂದುಬಿಡುವೆ ಆಗ ನೀನು ನನ್ನನ್ನು ಮದುವೆಯಾಗಬಹುದೆಂದು ಹೇಳಿ, ಆಕ್ರಮಣ ಮಾಡಲು ಹೋದಾಗ ರಾಮನೇ ಲಕ್ಷ್ಮಣನಿಗೆ ಆಕೆಯ ಕಿವಿ ಮೂಗುಗಳನ್ನು ಕತ್ತರಿಸಲು ಹೇಳುತ್ತಾನೆ.

ಅದರ ಪರಿಣಾಮವೇ ಆಕೆ ಖರನಲ್ಲಿಗೆ ಬಂದು ದೂರು ನೀಡಿದ್ದು ಮತ್ತು ರಾವಣ ವಧೆಗೆ ನಾಂದಿ ಹಾಡಲು ಖರದೂಷನ ತ್ರಿಶಿರರ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮ ಕೊಂದು ತನ್ನ ಬೆವರನ್ನು ಒರೆಸಿಕೊಂಡಿರುವುದು. ಹೀಗೆ ಶೂರ್ಪನಖಾಳ ಕಾರಣದಿಂದ ರಾಕ್ಷಸರ ವಧೆಯಾದಾಗ ಆ ಸಂಗತಿ ಮೊದಲು ರಾವಣನಿಗೆ ತಿಳಿಸುವುದು ಆ ರಾಕ್ಷಸಿಯಲ್ಲ. ಅಕಂಪನೆನ್ನುವ ರಾಕ್ಷಸ. ಆತ ಅದು ಹೇಗೋ ರಾಮ ಬಾಣದಿಂದ ತಪ್ಪಿಸಿಕೊಂಡು ರಾವಣನಿಗೆ ತಿಳಿಸಲು ಲಂಕೆಗೆ ಓಡಿಹೋದನು. ಇವನ್ನೆಲ್ಲವನ್ನು ನೋಡಿದರೆ ರಾಮನ ಉದ್ದೇಶವೇ ರಾವಣನನ್ನು ವಧಿಸುವುದಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಸೀತಾಪಹರಣದ ಕಥೆ ಅಕಂಪನನಿಂದಾಗಿ ಮುಖ್ಯ ವೇದಿಕೆಗೆ ಪ್ರವೇಶಿಸುತ್ತದೆ. ಅದನ್ನು ಮುಂದಿನ ಸಂಚಿಕೆಯಲ್ಲಿ ಗಮನಿಸೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೃಷ್ಟಿ ಸ್ಥಿತಿ ಲಯಕಾರಿಣಿಯಾದ ಜಗನ್ಮಾತೆಯ ಸ್ವರೂಪ ವೈಭವ: ನವರಾತ್ರಿ

Exit mobile version