Site icon Vistara News

ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

king dasharatha dhavala dharini

ಕರ್ಮಫಲವನ್ನು ತಾನೇ ಅರಿತು ಅನುಭವಿಸಿದ ಸೂರ್ಯವಂಶದ ಮಹಾನ್ ಚಕ್ರವರ್ತಿ

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕವೆನ್ನುವುದು ದಶರಥನಿಗೆ ಮಹಾನ್ ಸಂಕಲ್ಪವಾಗಿತ್ತು. ಅದಕ್ಕಾಗಿಯೇ ಆತ ಏನೆಲ್ಲ ಕಸರತ್ತನ್ನು ಮಾಡಿದ್ದ ಎನ್ನುವುದನ್ನು ನೋಡಿದ್ದೇವೆ.

ಕೈಕೇಯಿ ಮಂಥರೆಯ ದುರ್ಬೋಧನೆಯಿಂದ ಎಷ್ಟರಮಟ್ಟಿಗೆ ಪ್ರಭಾವಿತಳಾಗಿದ್ದಳೆಂದರೆ ಅರಸನ ಯಾವ ಒದ್ದಾಟವೂ ಅವಳನ್ನು ಕರಗಿಸಲಿಲ್ಲ. ರಾಮನನ್ನು ಬಿಟ್ಟರೆ ತಾನು ಬದುಕಿರಲಾರೆ ಎನ್ನುವ ಮಾತುಗಳು ಕಾದ ಮರಳಲ್ಲಿ ಬಿದ್ದ ನೀರಿನಂತೆಯೇ ಇಂಗಿಹೋಯಿತು. ಕೈಕೇಯಿ ತಿರುಗಿ ರಾಜನಿಗೆ ಧರ್ಮೋಪದೇಶ ಮಾಡುತ್ತಾಳೆ. ಶೈಭ್ಯ, ಅಲರ್ಕ ಮೊದಲಾದ ರಾಜರ್ಷಿಗಳು ಪ್ರತಿಜ್ಞಾಬದ್ಧರಾಗಿ ತಮ್ಮ ತಮ್ಮ ಜೀವವನ್ನೇ ಒತ್ತೆಯಾಗಿರಿಸಿದ ಸಂಗತಿಯನ್ನು ಹೇಳುತ್ತಾ ಪರೋಕ್ಷವಾಗಿ ದೊರೆಯ ಸಾವಿನ ಕುರಿತು ತಾನು ಅಂಜುವವಳಲ್ಲ ಎನ್ನುತ್ತಾಳೆ. ಅವಳಿಗೆ ತನ್ನ ಮಗ ಭರತ ಪಟ್ಟಕ್ಕೇರಲೇ ಬೇಕಾಗಿದೆ. ಆಕೆ ಕೌಸಲ್ಯೆಯನ್ನು ಎಷ್ಟರಮಟ್ಟಿಗೆ ದ್ವೇಷಿಸುತ್ತಿದಳೆಂದರೆ “ರಾಮ ಪಟ್ಟಾಭಿಷೇಕವಾದೊಡನೆಯೇ ರಾಜಮಾತೆಯಾಗಿ ಸಕಲಪ್ರಜೆಗಳಿಂದ ಗೌರವವನ್ನು ಸ್ವೀಕರಿಸುವ ಕೌಸಲ್ಯೆಯನ್ನು ತಾನು ಒಂದು ದಿನವೂ ನೋಡಿಸಹಿಸಲಾರೆ ಎನ್ನುತ್ತಾಳೆ. ರಾಮನಿಗೆ ಪಟ್ಟಾಭಿಷೇಕವನ್ನು ಮಾಡಿ ಕೌಸಲ್ಯೆಯೊಂದಿಗೆ ನಿತ್ಯವೂ ರಮಿಸಲು ಇಚ್ಛಿಸುವ ನಿನ್ನ ಹುನ್ನಾರ ತನಗೆ ಗೊತ್ತು ಎಂದು ಜರಿಯುತ್ತಾಳೆ.

ದಶರಥನಿಗೆ ಮಾತು ಬಾರದಾಗಿದೆ. ಆತ ರಾಮನನ್ನು ಕಾಡಿಗೆ ಕಳುಹಿಸುವುದು ಬೇಡವೆಂದು ಬಗೆಬಗೆಯಲ್ಲಿ ಗೋಳಾಡುತ್ತಾನೆ. ಸ್ತ್ರೀಸುಖಕ್ಕೊಸ್ಕರವಾಗಿ ತನ್ನ ಪ್ರಿಯಸುತನನ್ನೇ ಅರಣ್ಯಕ್ಕೆ ಕಳುಹಿಸಿದ ತನ್ನನ್ನು ಅತಿಕಾಮಿಯೆಂದು ಪುರಜನರು ಆಡಿಕೊಳ್ಳುವರು, ಆ ಅಪವಾದ ಬರುತ್ತದೆಯೆಂದು ಗೋಗೆರೆಯುತ್ತಾನೆ. “ಹೆಂಗಸರೆಲ್ಲ ಮೋಸಗಾರರು, ಸ್ವಾರ್ಥಪರಾಯಣರು ಎಂದು ಉದ್ವೇಗದಿಂದ ಕೂಗಾಡುತ್ತಾನೆ. ಬಹುಶಃ ಆಗ ಆತನಿಗೆ ತನ್ನ ಹಿರಿಯ ಹೆಂಡತಿಯರಾದ ಕೌಸಲ್ಯೆ ಮತ್ತು ಸುಮಿತ್ರೆಯರ ನೆನಪಾಗಿರಬೇಕು. ಇಲ್ಲ, ಪ್ರಪಂಚದಲ್ಲಿ ಎಲ್ಲಾ ಹೆಂಗಸರೂ ಹಾಗಿಲ್ಲ’ ಕೇವಲ ಭರತನ ತಾಯಿಗೆ ಮಾತ್ರ ತನ್ನ ಮಾತು ಅನ್ವಯಿಸುತ್ತದೆ ಎಂದು ಕೂಗಾಡುತ್ತಾನೆ. ರಾಮನನ್ನು ಅರಣ್ಯಕ್ಕೆ ಕಳುಹಿಸುವ ಒಂದು ಮಾತನ್ನು ಬಿಟ್ಟು ಬೇರೆ ಏನನ್ನಾದರೂ ಕೇಳು ಎನ್ನುವ ಮಾತುಗಳು ಕೈಕೇಯಿಯ ಮೇಲೆ ಪರಿಣಾಮ ಬೀರದಿದ್ದಾಗ ಕೊನೆಯ ಅಸ್ತ್ರವೆನ್ನುವಂತೆ ದಶರಥ ಲೋಕಮರ್ಯಾದೆಯನ್ನು ಮೀರಿ ಅನಾಥನಂತೆ ಗೋಳಾಡುತ್ತಾ ಆಕೆಯ ಕಾಲಿಗೆ ನಮಸ್ಕರಿಸಲು ಹೋಗುತ್ತಾನೆ. ಆಗ ಕೈಕೇಯಿ ತಿರಸ್ಕಾರದಿಂದ ತನ್ನ ಕಾಲನ್ನು ದೂರಕ್ಕೆ ಚಾಚಿದುದರಿಂದ ಅವೂ ಆತನಿಗೆ ಸಿಕ್ಕದೇ ರೋಗಿಯೊಬ್ಬ ತತ್ತರಿಸಿ ಬೀಳುವಂತೆ ನೆಲದಮೇಲೆ ಬೀಳುತ್ತಾನೆ. ಅವನ ಈ ಸ್ಥಿತಿಯನ್ನು ನೋಡಿದ ರಾಮಾಯಣದ ಕವಿ ವಾಲ್ಮೀಕಿಗೂ ದಶರಥನ ಮೇಲೆ ಹೇಸಿಗೆಯುಂತಾಗುತ್ತದೆ. ಚಕ್ರವರ್ತಿ ತನ್ನ ಘನತೆಯನ್ನು ಮರೆತು ಹೀಗೆ ಮಾಡಬಾರದಿತ್ತು ಎಂದು ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ.

ಅತದರ್ಹಂ ಮಹಾರಾಜಂ ಶಯಾನಮತಥೋಚಿತಮ್.
ಯಯಾತಿಮಿವ ಪುಣ್ಯಾನ್ತೇ ದೇವಲೋಕಾತ್ಪರಿಚ್ಯುತಮ್৷৷ಅಯೋ. .13.1৷৷

ರಾಜಾಧಿರಾಜನಾದಂತಹ ದಶರಥನು ಕೈಕೇಯಿಯ ಪಾದಗಳ ಮೇಲೆ ಬೀಳಲು ಹೋಗಬಾರದಿತ್ತು(ಅತದರ್ಹಂ) ಎಂದು ಬಹಿರಂಗವಾಗಿಯೇ ಸಿಡಿಮಿಡಿಗೊಳ್ಳುತ್ತಾನೆ. ರಾಮಾಯಣದ ಈ ಸನ್ನಿವೇಶ ವಾಲ್ಮೀಕಿಯ ಕಣ್ಣಿಗೆ ಅಂಗೈಯಲ್ಲಿನ ನೆಲ್ಲಿಕಾಯಿಯಂತೆ ಸ್ಪಷ್ಟವಾಗಿ ಕಾಣುತ್ತಿದೆ. ನಿರುಧ್ವಿಘ್ನವಾಗಿ ಕಥೆಯನ್ನು ಹೇಳುತ್ತಾಹೋಗಬೇಕಾದ ಕವಿ ಸೀತೆಗೆ ತೊಂದರೆಯಾದ ಉತ್ಕಟಕ್ಷಣಗಳಲ್ಲಿ ರಸಭಾವವನ್ನು ಹತ್ತಿಕ್ಕಲಾರದೇ ತಾನೇ ಕಥೆಯೊಳಗೆ ಪ್ರವೇಶಿಸುವುದುಂಟು. ಆದರೆ ಇಲ್ಲಿ ಮಾತ್ರ ಆತನಿಗೆ ದಶರಥನ ಒಟ್ಟಾರೆಯ ವ್ಯವಹಾರವೇ ರೇಜಿಗೆ ಹುಟ್ಟಿಸಿದೆ. ಕೈಕೇಯಿಯನ್ನು ಇಕ್ಷಾಕುವಂಶಕ್ಕೇ ಅನರ್ಥಕಾರಿಣಿಯೆಂದು ತಿರಸ್ಕಾರದಿಂದ ಕವಿಹೇಳುತ್ತಾನೆ. ಸೂರ್ಯವಂಶದ ಪುಣ್ಯದ ಕಾರಣದಿಂದ ದಶರಥನಿಗೆ ಕೈಕೇಯಿಯ ಪಾದಗಳು ಸಿಗಲಿಲ್ಲ. ಎನ್ನುತ್ತಾನೆ. ಈ ಭಾಗವನ್ನು ದಶರಥವಿಲಾಪವೆನ್ನುವ ಹೆಸರಿನಿಂದ ಕರೆದರೂ ಇಲ್ಲಿ ಕಾಳಿದಾಸನ ಪ್ರಸಿದ್ಧಕಾವ್ಯ ರಘುವಂಶದ ಅಜವಿಲಾಪ ನೆನಪಿಗೆ ಬರುತ್ತದೆ. ರಘುವಂಶದಲ್ಲಿ ಅಜ ಮತ್ತು ಇಂದುಮತಿ ದಂಪತಿಗಳ ಪ್ರೇಮದ ವಿಷಯ ಪ್ರಸಿದ್ಧ. ದಿವ್ಯಪುಷ್ಪಮಾಲೆಯೊಂದು ಅಜನ ಪತ್ನಿ ಇಂದುಮತಿಯಮೇಲೆ ಬಿದ್ದಾಗ ಅವಳು ಮೃತಳಾಗುತ್ತಾಳೆ. ಆಗ ಅಜ ತನ್ನ ಪತ್ನಿಗಾಗಿ ಮಾಡುವ ದುಃಖವು ಅಜವಿಲಾಪವೆಂದೇ ಪ್ರಸಿದ್ಧಿಯಾಗಿದೆ. ಪತ್ನಿಯ ವಿರಹವನ್ನು ತಾಳಲಾರದೇ ಕುಗ್ಗಿ ಕುಗ್ಗಿ ಸಾಯುವ ಅಜನೂ ಸ್ತ್ರೀ ಕಾರಣದಿಂದ ಸಾಯುತ್ತಾನಾದರೂ ಅದು ಪ್ರೇಮಕಾವ್ಯದ ಉತ್ತುಂಗಗಳಲ್ಲೊಂದೆಂದು ಪರಿಗಳಿಸಲ್ಪಟ್ಟಿದೆ. ಅದರ ವಿರುದ್ಧವಾಗಿ ಅಜನ ಮಗನಾದ ದಶರಥನ ಒದ್ದಾಟವಿದೆ. ಅವನ ವಿಲಾಪಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸಲು ಯಾರೂ ಬರುವುದಿಲ್ಲ. ಅವನ ವಿಲಾಪಕ್ಕೆ ರಾತ್ರಿಯೇ ಹೆದರಿ ಓಡಿಹೋಯಿತು.

ಬೆಳಗಾದರೂ ದೊರೆ ಗೋಳಾಡುವುದನ್ನು ಬಿಟ್ಟು ರಾಮನನ್ನು ಪಟ್ಟಗಟ್ಟುವ ಯಾವ ಸೂಚನೆಯನ್ನೂ ನೀಡುವುದಿಲ್ಲ. ಎಲ್ಲಿಯಾದರೂ ಬೇರೆಯವರಿಗೆ ತಿಳಿದರೆ ತನ್ನ ಕೆಲಸ ಕೆಟ್ಟಿತೆನ್ನುವ ಚಿಂತೆ ಕೈಕೇಯಿಯಲ್ಲುಂಟಾಯಿತು. ರಾಜನನ್ನು ಧರ್ಮಪರಿಪಾಲನೆಯೆನ್ನುವ ಹಗ್ಗದಲ್ಲಿ ಕಟ್ಟಿಹಾಕಿದ್ದಳು.

ಸತ್ಯಮೇಕಪದಂ ಬ್ರಹ್ಮ ಸತೇ ಧರ್ಮಃ ಪ್ರತಿಷ್ಠಿತಃ
ಸತ್ಯಮೇವಾಕ್ಷಯಾ ವೇದಾಃ ಸತ್ಯೇನೈವಾಪ್ಯತೇ ಪರಮ್ II ಅಯೋ.14-7II

ಸತ್ಯವೆನ್ನುವುದೇ ಬ್ರಹ್ಮವಾಚಕವಾದ ಪ್ರಣವಸ್ವರೂಪವು. ಸತ್ಯದಲ್ಲಿಯೇ ಸಮಸ್ತ ಧರ್ಮಗಳೂ ಅಡಗಿರುವವು. ಕ್ಷಯವೃದ್ಧಿಗಳಿಲ್ಲದ ವೇದಗಳು ಸತ್ಯದ ಸ್ವರೂಪಗಳೇ ಆಗಿವೆ. ಪರಮೋತ್ಕ್ರಷ್ಟವಾದ ಲೋಕಗಳೂ ಸತ್ಯದ ಅವಲಂಬನೆಯಿಂದಲೇ ಲಭಿಸುತ್ತವೆ.

ಸಮಗ್ರವಾದ ಉಪನಿಷತ್ತಿನ ಸಾರವನ್ನು ಸಾರುವ ಈ ಮಾತು ಕೈಕೇಯಿಯಿಂದ ಬೇರೆ ಯಾವ ಸಂದರ್ಭದಲ್ಲಿಯಾದರೂ ಬಂದಿದ್ದರೆ ಆಕೆಯನ್ನು ಗಾರ್ಗಿ, ಲೋಪಾಮುದ್ರಾ ಮೊದಲಾದವರಸಾಲಿಗೆ ಸೇರಿಸಿಬಿಡುತ್ತಿದ್ದರೇನೋ. ಆಕೆಯ ತಂದೆ ಅಶ್ವಪತಿ ವೈಶ್ವಾನರ ವಿದ್ಯೆಯನ್ನು ಉದ್ಧಾಲಕನಿಗೆ ಕಲಿಸಿದ ಕುರಿತು “ಛಾಂದೋಗ್ಯ ಉಪನಿಷತ್ತಿನಲ್ಲಿ ಬರುತ್ತದೆ”. ರಾವಣನೂ ಸಹ ಎಲ್ಲಾ ವೇದಗಳನ್ನು ಓದಿಕೊಂಡಿದ್ದ. ಮೂಲತಃ ಸ್ವಭಾವದಲ್ಲಿ ಸಾತ್ವಿಕ ಗುಣಗಳಿಲ್ಲದಿದ್ದರೆ ಅವೆಲ್ಲವೂ ವ್ಯರ್ಥವಾಗುತ್ತದೆ. ಕೈಕೇಯಿಗಾಗಿರುವುದೂ ಅದೇ. ತನಗೆ ತಿಳಿದಿರುವ ಧರ್ಮಸೂತ್ರಗಳನ್ನು ತನ್ನ ಸ್ವಾಥಕ್ಕಾಗಿ ಬಳಸಿಕೊಳ್ಳುತ್ತಿದ್ದಾಳೆ. ಗಂಗಾನದಿಯೇ ಆದರೂ, ಬಚ್ಚಲುಮನೆಯಿಂದ ಹೊರಬಂದರೆ ಅದನ್ನು ಯಾರೂ ತೀರ್ಥವೆಂದು ಪರಿಗಣಿಸುವುದಿಲ್ಲ. ರಾಜನನ್ನು ಕರೆದೊಯ್ಯಲು ಸುಮಂತ್ರ ಕೈಕೇಯಿಯ ಅರಮನೆಗೆ ಬಂದಾಗ ಎಲ್ಲದರಲ್ಲಿಯೂ ಸೋತ ರಾಜನೇ “ರಾಮನನ್ನು ನೋಡಬೇಕೆಂದಿದ್ದೇನೆ, ಅವನನ್ನಿಲ್ಲಿಗೆ ಕರೆದುಕೊಂಡು ಬಾ” ಎನ್ನುತ್ತಾನೆ. ಆಗಲೆಂದು ಹೊರಟ ಸುಮಂತ್ರನಿಗೆ ಮನಸ್ಸಿನಲ್ಲಿ ಏನೋ ಒಂಡು ಸಂಶಯಕಾಡಿತು. ಸಭೆಗೆಬಂದವ ಅದಾಗಲೇ ಬಂದುಸೇರಿದ್ದ ಅರಸರ ವಿಷಯಗಳನ್ನು ತಿಳಿಸುವ ನೆವಮಾಡಿ ಮತ್ತೊಮ್ಮೆ ಕೈಕೇಯಿಯ ಅಂತಃಪುರಕ್ಕೆ ಬಂದ. ಕೈಕೇಯಿಗೆ ರಾಮನನ್ನು ಗುಪ್ತವಾಗಿ ಅರಣ್ಯಕ್ಕೆ ಕಳುಹಿಸಿ ಭರತನನ್ನು ಪಟ್ಟಾಭಿಷೇಕಕ್ಕೆ ಏರಿಸಬೇಕಿತ್ತು. ಚಾಣಾಕ್ಷಳಾಗಿದ್ದ ಆಕೆಗೆ ಈ ವಿಷಯ ಬಹಿರಂಗಕ್ಕೆ ಬಂದರೆ ಸಾಮಂತರೆಲ್ಲರೂ ತಿರುಗಿಬೀಳುವರು ಎನ್ನುವುದರ ಅರಿವಿತ್ತು. ಅದಕ್ಕಾಗಿಯೇ ಅವಳು ರಾಮ ತನ್ನ ಮನೆಗೇ ಬರಲಿ ಎಂದು ರಾಜನನ್ನು ಒತ್ತಾಯಿಸಿದಳು. ಎರಡನೆಯ ಸಾರಿ ಸುಮಂತ ಬಂದಾಗ ಸ್ವಲ್ಪ ಸಿಟ್ಟಿನಿಂದಲೇ ರಾಮನನ್ನು ಇಲ್ಲಿಗೆ ಕರೆತರಬೇಕು. ಇದು ತನ್ನ ಆಜ್ಞೆ ಎಂದು ಕಠೋರವಾಗಿಯೇ ಹೇಳುತ್ತಾನೆ. “ದಶರಥನ ಮಾತು ಸೋತ ಹೊತ್ತು ಅದು”. ದೊರೆ ಅಸಹಾಯಕನಾಗಿದ್ದ. ತನ್ನೆದುರೇ ತನ್ನ ಪರವಾಗಿ ಕೈಕೇಯಿ ರಾಮನಲ್ಲಿ ತನ್ನ ವರದ ಕುರಿತು ಒಡಂಬರಿಸುತ್ತಿರುವಾಗ ಮೌನವಾಗಿದ್ದ. ನಾಲಿಗೆ ಮಾತನ್ನು ಆಡುವುದು ಬುದ್ಧಿಯಬಲದಿಂದ. ದಶರಥನ ಬುದ್ಧಿಯನ್ನು ಸಂಪೂರ್ಣವಾಗಿ ಕೈಕೇಯಿ ಆಕ್ರಮಿಸಿಕೊಂಡಿದ್ದಳು. ರಾಮನ ಪ್ರಿಯಮಾತೆ ಕೈಕೇಯಿ ರಾಜನ ಪರವಾಗಿ ಆಡುವ ಮಾತಾಗಿದ್ದಳು. ಸಮಯ ಸರಿದಷ್ಟೂ ತನಗೇ ಅಪಾಯವೆಂದು ಅವಳಿಗೆ ಅರಿವಾಗತೊಡಗಿತು. ತಂದೆಯ ನೋಡಲು ಬಂದ ರಾಮ ಆತನ ಚಿಂತೆಗೆ ಕಾರಣವನ್ನು ಕೇಳೆದರೆ ಆತನಲ್ಲಿ ದೊರೆಯ ಮನಸ್ಸಿನಲ್ಲಿರುವುದು ಭರತನು ರಾಜನಾಗುವ ಮತ್ತು ರಾಮನ ಅರಣ್ಯಗಮನದ ವರಗಳನ್ನು ಹೇಳುತ್ತಾಳೆ. ಅಷ್ಟೇ ಅಲ್ಲ,’ “ಎಲ್ಲಿಯವರೆಗೆ ನೀನು ಈ ಅಯೋಧ್ಯೆಯನ್ನು ಬಿಟ್ಟು ಅರಣ್ಯಕ್ಕೆ ಹೋಗುವುದಿಲ್ಲವೋ ಅಲ್ಲಿಯವರೆಗೆ ರಾಜನು ಸ್ನಾನವನ್ನೂ ಮಾಡುವುದಿಲ್ಲ, ಊಟವನ್ನೂ ಮಾಡುವುದಿಲ್ಲ” ಎನ್ನುವ ಮಾತನ್ನು ಹೇಳಿದಾಗ ರಾಮ ಇನ್ನು ತಡಮಾಡುವುದು ಸರಿಯಲ್ಲವೆಂದು ಅರಣ್ಯಕ್ಕೆ ಹೊರಟಕಥೆ ಎಲ್ಲರಿಗೂ ಚಿರಪರಿಚಿತ.

king dasharatha kaikeyi dhavala dharini column

ದಶರಥನಿಗೆ ರಾಮನ ಅಗಲುವಿಕೆಯ ದುಃಖಕ್ಕಿಂತ ಆತ ಸುಮಂತ್ರನ ಹತ್ತಿರ ತನ್ನ ತಂದೆ ಮತ್ತು ತಾಯಿಗೆ ಹೇಳುವ ಸಂದೇಶ ಇನ್ನಷ್ಟು ಶೋಕವನ್ನು ಕೊಡುತ್ತದೆ. ರಾಮ ತನ್ನ ತಾಯಿಗೆ ತಾಳ್ಮೆಯಿಂದ ಇರಲು ಹೇಳಿಕಳುಹಿಸುತ್ತಾನೆ. ಹದಿನಾಲ್ಕುವರ್ಷಗಳ ತನಕ ಹೇಗೋ ಭರತನ ಜೊತೆ ಹೊಂದಿಕೊಂಡು ಹೋಗು ಎಂದಿದ್ದ. ಭರತನಿಗೂ ಕೈಕೇಯಿಯಂತೇ ತನ್ನ ತಾಯಯಿಂದರನ್ನು ನೋಡಿಕೊಳ್ಳುವಂತೆ ಕಾಠಿಣ್ಯದಿಂದ ತುಂಬಿದ ಎಚ್ಚರಿಕೆಯ ಸಂದೇಶನ್ನು ಕಳಿಹಿಸುತ್ತಾನೆ. ಕೌಸಲ್ಯಯ ಕುರಿತು ಹೇಳುವಾಗ ರಾಮನ ಕಣ್ಣಲ್ಲಿ ನೀರು ಹರಿಯುತ್ತಿರುವುದನ್ನು ಕಂಡ ಲಕ್ಷ್ಮಣ ಕ್ರುದ್ಧನಾಗಿರುವ ವಿಷಯವನ್ನು ಹೇಳುವಾಗ ಅರಸನಿಗೆ ಕಾಮಮೋಹಿತನಾಗಿದ್ದ ತಾನೇ ಅವಸರದಿಂದ ಕೈಕೇಯಿಯನ್ನು ಓಲೈಸಲು ಹೋದೆ ಅನಿಸುತ್ತದೆ. ರಾಜ ಯಾವ ನಿರ್ಣಯಗಳನ್ನು ಕೈಗೊಳ್ಳುವಾಲೂ ಮೊದಲು ಅಮಾತ್ಯರೊಡನೆ ಸಮಾಲೋಚಿಸಿ ಅವರ ಸಲಹೆಪಡೆದು, ಅದು ಧರ್ಮಸಮ್ಮತವಾಗಿದ್ದರೆ ತನಗೆ ಯುಕ್ತವಾದ ನಿರ್ಣಯವನ್ನು ಕೈಗೊಳ್ಳಬೇಕು. ಇಲ್ಲಿ ಅದೇನನ್ನೂ ಮಾಡದೇ ಇರುವ ಅಪರಾಧೀ ಭಾವ ಕಾಡುತ್ತದೆ. ವನವಾಸಕ್ಕೆ ಹೊರಟ ರಾಮ, ಸೀತಾ ಲಕ್ಷ್ಮಣರು ನಗುತ್ತಲೇ ಹೊರಟರು, ಗುಹನಲ್ಲಿ ಆಲದ ಹಾಲನ್ನು ತರಿಸಿ ತಪಸ್ವಿಗಳಂತೆ ಜಟಾಧಾರಿಯಾದ ವಿಷಯವನ್ನು ಕೇಳಿದ ಕೌಸಲ್ಯೆಯ ಮಾತ್ರಭಾವಕ್ಕೆ ಬಲವಾದ ನೋವನ್ನು ಕೊಡುತ್ತದೆ. ಅನೇಕವರ್ಷಗಳಕಾಲ ಧಶರಥನಿಂದ ಅಲಕ್ಷಕ್ಕೆ ಒಳಗಾದರೂ ಆಕೆ ಅದನ್ನೆಲ್ಲ ಸಹಿಸಿಕೊಂಡು ಮೌನಿಯಾಗಿದ್ದವಳು ಬಲುತೀಕ್ಷ್ಣವಾದ ಮಾತುಗಳಿಂದ ಗಂಡನನ್ನು ನಿಂದಿಸುತ್ತಾಳೆ. ಕೊನೆಯದಾಗಿ “ಮಹರಾಜಾ! ನಿನ್ನ ಈ ದುಶ್ಚರ್ಯೆಯಿಂದಾಗಿ ನಾನು ಮತ್ತು ನನ್ನ ಮಗನು ಮಾತ್ರ ವಿನಾಶ ಹೊಂದಲಿಲ್ಲ. ರಾಮನನ್ನು ಕಾಡಿಗಟ್ಟಿ ರಾಷ್ಟ್ರಸಹಿತವಾದ ರಾಜ್ಯವನ್ನು ಹಾಳುಮಾಡಿದೆ. (ಹತಂ ತ್ವಯಾ ರಾಜ್ಯಮಿದಂ ಸರಾಷ್ಟ್ರಂ ಹತಸ್ತಥಾತ್ಮಾ ಸಹ ಮಂನ್ತ್ರಿಭಿಶ್ಚ) ಮಂತ್ರಿಗಳೊಡನೇ ನೀನೂ ಹಾಳಾದೆ” ಎನ್ನುವ ಕಠೋರಮಾತುಗಳನ್ನಾಡುತ್ತಾಳೆ.

ಅದುತನಕ ಅದುಮಿಟ್ಟುಕೊಂಡ ಅವಮಾನ, ತಿರಸ್ಕಾರಗಳೆಲ್ಲವೂ ಸ್ಪೋಟಗೊಂಡಹೊತ್ತು ಅದು. ಆಕೆಯ ಮಾತುಗಳು ಎಷ್ಟು ತೀಕ್ಷ್ಣವಾಗಿತ್ತೆಂದರೆ ದಶರಥ ಅದನ್ನು ಕೇಳಿದವನೇ ಮೂರ್ಛಿತನಾದ. ಆತನನ್ನು ಉಪಚರಿಸಿದ ಕೌಸಲ್ಯೆ ತಾನು ಹಾಗೇ ಮಾತಾಡಬಾರದಾಗಿತ್ತೆಂದು ದುಃಖಪಡುತ್ತಾಳೆ. ದಶರಥನ ಕಾಲಿಗೆ ಬಿದ್ದು ತನ್ನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾಳೆ. ಕೌಸಲ್ಯಾ ಮತ್ತು ಸುಮಿತ್ರಾ ಇಬ್ಬರೂ ಸೇರಿ ಗಂಡನ ಶುಶ್ರೂಷೇ ಮಾಡುತ್ತಾ ತಾವೇ ದುಃಖಿಸುತ್ತಲೂ ಇರುತ್ತಾರೆ. ದಶರಥನಿಗೆ ತಾನು ಇಷ್ಟೆಲ್ಲಾ ಒಳ್ಳೆಯ ಕಾರ್ಯವನ್ನು ಮಾಡಿದರೂ ತನಗೆ ಏಕೆ ಹೀಗೆ ಆಯಿತು ಎಂದು ಚಿಂತಿಸುತ್ತಾ ಯಾವುದೋ ಒಂದು ವಿಷಯವನ್ನು ಹೇಳಲೋ ಬೇಡವೋ ಎನ್ನುವಂತೆ ಇದ್ದ. ಆರನೆಯದಿನದ ಅರ್ಧರಾತ್ರಿಯಲ್ಲಿ ಇದ್ದಕ್ಕಿದ್ದಂತೆ ತನ್ನ ಪುತ್ರವಿಯೋಗಕ್ಕೆ ಕಾರಣವಾದ ತನ್ನ ಕರ್ಮಫಲದ ಕುರಿತು ಹೇಳಲು ನಿಶ್ಚಯಿಸಿದ. ಅದು ಎಲ್ಲರಿಗೂ ತಿಳಿದ ಕಥೆಯಾದ ಶ್ರವಣಕುಮಾರನ ಕಥೆ, ರಾಮಾಯಣದಲ್ಲಿ ಶ್ರವಣಕುಮಾರ ಎನ್ನುವ ಹೆಸರಿಲ್ಲ. ಕರಣ ಎಂದು ಆತನ ಹೆಸರು. ಆತನ ತಂದೆ ಓರ್ವ ಋಷಿಯಾಗಿದ್ದ. ಈ ಕಥೆ ಒಂದೇ ರೀತಿಯದಾದರೂ ಕಾಲಾಂತರದಲ್ಲಿ ಬೇರೆ ಬೇರೆ ರಾಮಾಯಣಗಳಲ್ಲಿ ಶ್ರವಣಕುಮಾರ ಎನ್ನುವ ಹೆಸರು ಬಂತು.

ಈ ಘಟನೆ ನಡೆಯುವಾಗ ದಶರಥನಿಗೆ ಪ್ರಾಯದ ಕಾಲ. ಆತ ಶಬ್ದವೇಧಿ ವಿದ್ಯೆಯಲ್ಲಿ ಮಹಾಚತುರ ಎನ್ನುವ ಕೀರ್ತಿ ಹಬ್ಬಿತ್ತು. ಅದನ್ನು ಪ್ರಯೋಗಿಸುವ ಹವ್ಯಾಸ ದೊರೆಗೆ. ಹಾಗಾಗಿ ಕಾಡಿಗೆ ಹೋಗಿ ಬೇಟೆಯಾಡುವ ವ್ಯಸನವನ್ನು ಹಚ್ಚಿಕೊಂಡಿದ್ದ. ಯುವರಾಜನಾಗಿದ್ದ ಆತನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ (ದೇವ್ಯನೂಢಾ ತ್ವಮಭವೋ ಯುವರಾಜೋ ಭವಾಮ್ಯಹಮ್). ಮಳೆಗಾಲದ ಒಂದು ದಿನ ಬೇಟೆಗೆ ಹೋದಾಗ ಅನೆ ನೀರು ಕುಡಿಯುತ್ತಿರುವ ಸದ್ದು ಕೇಳಿಬಂತು. ತನ್ನ ಬಾಣದಿಂದ ಆನೆಯನ್ನು ಕೊಲ್ಲಬಲ್ಲೆ ಎನ್ನುವ ಹಮ್ಮಿನಿಂದ ಶಬ್ದ ಬಂದ ಕಡೆ ಬಾಣವನ್ನು ಬಿಟ್ಟ. ಮರುಕ್ಷಣದಲ್ಲಿ ಮನುಷ್ಯನ ಕೂಗು ಕೇಳಿಬಂತು. ಓಡಿಹೋಗಿ ನೋಡಿದರೆ ಆತ ಬಿಟ್ಟ ಬಾಣ ದೇಹದಲ್ಲಿ ನೆಟ್ಟುಕೊಂಡ ಕಾರಣದಿಂದ ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದ ಋಷಿಕುಮಾರನನ್ನು ಕಂಡ. ಎಲ್ಲವೂ ಕೈಮೀರಿ ಹೋಗಿತ್ತು. ಆತನೇ ಕುರುಡರಾದ ತನ್ನ ತಂದೆಯ ವಿಷಯವನ್ನು ಹೇಳಿ ಅವರಿಗೆ ನೀರನ್ನು ತೆಗೆದುಕೊಂಡು ಹೋಗು ಎಂದು ಕೇಳಿದ. ದಶರಥ ಯೌವನ ಮದದಿಂದ ಅಪರಾಧವನ್ನು ಮಾಡಿದರೂ ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಕುರುಡ ದಂಪತಿಗಳ ಬಳಿಗೆ ಬಂದು ಪ್ರಾಮಾಣಿಕವಾಗಿ ನಡೆದ ಸಂಗತಿಯನ್ನು ಹೇಳಿದ. ಬಾಲಕನ ಶವ ಸಂಸ್ಕಾರವನ್ನು ಅವರ ಹತ್ತಿರವೇ ಮಾಡಿಸಿದ. ಉದ್ಧೇಶಪೂರ್ವಕವಾಗಿ ತನ್ನ ಮಗನನ್ನು ಕೊಲ್ಲದ ಕಾರಣ ದೊರೆಗೆ ಬ್ರಹ್ಮಹತ್ಯಾ ಶಾಪವು ತಟ್ಟದು ಎಂದು ಹೇಳಿದರು. ಸಾಯುವ ಕಾಲದಲ್ಲಿ ತಮಗೆ ಆದ ರೀತಿಯಲ್ಲಿಯೇ ನಿನಗೂ ಪುತ್ರವಿಯೋಗವುಂಟಾಗಲಿ ಎಂದು ಶಾಪವನ್ನಿತ್ತು ಮಗನ ಚಿತೆಯನ್ನು ಏರಿ ದಿವ್ಯ ಶರೀರವನ್ನು ಧರಿಸಿ ಸ್ವರ್ಗಕ್ಕೆ ಹೋದರು.

king dasharatha kaikeyi dhavala dharini column

ರಾಜ ಕಾಲಾಂತರದಲ್ಲಿ ಅದನ್ನೆಲ್ಲ ಮರೆತಿದ್ದ. ಈಗ ರಾಮನ ಅಗಲುವಿಕೆಯೆನ್ನುವದು ಆತನಲ್ಲಿ ಅಪರಾಧೀ ಭಾವವನ್ನು ಮೂಡಿಸಿದೆ. ತನ್ನ ಕೊನೆಯ ದಿನಗಳು ಹತ್ತಿರ ಬಂತು ಎಂದು ದೊರೆಗೆ ಅನಿಸಲು ಸುರುವಾಯಿತು. ಸತ್ಯವಂತನಾದ, ಧರ್ಮಮಾರ್ಗದಲ್ಲಿ ನಡೆದ ತನಗೆ ಈ ಗತಿ ಏಕೆ ಬಂತು ಎಂದು ಚಿಂತಾಮಗ್ನನಾಗಿರುವಾಗ ಅವನಿಗೆ ತಾನೆಸಗಿದ ಈ ದುಷೃತ್ಯ ನೆನಪಿಗೆ ಬಂತು. ಪಶ್ಚಾತ್ತಾಪದಿಂದ ತೋಯ್ದು ಹೋಗಿದ್ದ. ಮುನಿಯ ಶಾಪ ಫಲಿಸುವ ಕಾಲ ಬಂತು ಎಂದು ಕೌಸಲ್ಯೆಗೆ ಹೇಳಿ ಇದಕ್ಕೆ ಕಾರಣ ತನ್ನ ಕರ್ಮಫಲ ಎನ್ನುತ್ತಾನೆ. ಮಾಡಿದ್ದಕ್ಕೆ ತಕ್ಕ ಕರ್ಮಫಲವನ್ನು ಅನುಭವಿಸುತ್ತಾರೆ ಎನ್ನುವ ನಂಬಿಕೆ ಪುನರ್ಜನ್ಮದಷ್ಟೇ ಪ್ರಾಚೀನವಾದುದು. ತಾನು ಬದುಕಬೇಕೆಮ್ದರೆ ರಾಮ ಬಂದು ತನ್ನನ್ನು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ತಾನು ಬದುಕುವೆ ರಾಘವನ ವಿಷಯದಲ್ಲಿ ಘನತೆಯಿಂದ ತಾನು ನಡೆದುಕೊಳ್ಳಲಿಲ್ಲ ವೆಂದು ನಿರಂತರವಾಗಿ ಶೋಕಿಸುತ್ತಾನೆ. ಇಷ್ಟಾದರೂ ಪಾಯಸದ ಮಹಿಮೆಯಿಂದ ಜನಿಸಿದ ಮಕ್ಕಳು ಎನ್ನುವ ವಿಷಯವೇ ಮರೆತುಹೋಗಿದೆ. ಋಷಿಮುನಿಗಳಿಗೆ ಕಂಡ ರಾಮನ ನಿಜರೂಪದ ಅರಿವು ದಶರಥನಿಗೆ ಆಗಲೇ ಇಲ್ಲ. ಅತನನ್ನು ಸಮಾಧಾನ ಮಾಡುತ್ತಾ ಕೌಸಲ್ಯೆ ಮತ್ತು ಸುಮಿತ್ರೆಯರು ತಮ್ಮ ನಡುವೆ ಮಲಗಿಸಿಕೊಂಡಿದ್ದರು ಆರುದಿನಗಳಿಂದಲೂ ಬಾರದ ನಿದ್ರೆ ಇಬ್ಬರೂ ರಾಣಿಯರಿಗೂ ತಡರಾತ್ರಿ ಬಂತು. ರಾಘವನ ನೆನಪು ಮಾಡುತ್ತಲೇ ಇದ್ದ ರಾಜನನ್ನು ಚಿರನಿದ್ರೆ ಸೆಳೆದುಬಿಟ್ಟಿತು.

ರಘುವಂಶದ ಘನತೆಯ ಚಕ್ರವರ್ತಿಯೆಂದು ಹೆಸರು ಮಾಡಿದ ಯಶೋವಂತನಾದ ದೊರೆ ತನ್ನ ಕರ್ಮ ಫಲವನ್ನು ಅನುಭವಿಸಿ ಕೊನೆಗಾಲವನ್ನು ಕಂಡ. ಯಾವಾತ ತನ್ನ ಕರ್ಮಫಲವನ್ನು ಜೀವಿತಾವಧಿಯಲ್ಲಿ ಅನುಭವಿಸುತ್ತಾನೆಯೋ, ಆ ಕಾರಣದಿಂದ ಅವರು ಪಶ್ಚಾತ್ತಾಪ ಪಡುತ್ತಾರೆಯೋ ಅಂತವರು ಸತ್ತಮೇಲೆ ನರಕದಲ್ಲಿ ಆ ಶಿಕ್ಷೆ ಅನುಭವಿಸುವುದಿಲ್ಲ. ಈ ಎಲ್ಲಾ ಅವಸ್ಥೆಯನ್ನು ಅನುಭವಿಸಿದ ಸೂರ್ಯವಂಶದ ಯಶೋವಂತ ಅರಸನೂ ಸಹ ಸ್ವರ್ಗಕ್ಕೆ ನಡೆದ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Exit mobile version