Site icon Vistara News

ಧವಳ ಧಾರಿಣಿ ಅಂಕಣ: ಭಾರತದ ಅಂತಃಶಕ್ತಿಯನ್ನು ಜಾಗೃತಗೊಳಿಸಿದ ವಾಮನ ಮೂರ್ತಿ

lal bahadur shastry

ಲಾಲ್ ಬಹಾದ್ದೂರ್ ಶಾಸ್ತ್ರಿ: ಆತ್ಮನಿರ್ಭರ ಭಾರತದ ರೂವಾರಿ

A leader is the one in the charge, the person who convinces other people to follow. A great leader inspires confidence in other people and moves them to action.

ಲಾಲ್ ಬಹಾದ್ದುರ್ ಶಾಸ್ತ್ರಿಯವರು (lal bahadur shastri) ಭಾರತದ ಪ್ರಧಾನಿ ಹುದ್ದೆಗೆ ಏರಿರುವುದರ ಕುರಿತು ಅವರನ್ನು ಕೆಲ ರಾಜಕೀಯ ವಿಶ್ಲೇಷಕರು An Accidental Prime Minister ಎಂದು ಕರೆಯುವದುಂಟು. “ಶಾಸ್ತ್ರೀಜಿಯವರಿಗೆ ತನ್ನದೇ ಆದ ಚರಿಷ್ಮಾ ಇದ್ದಿರಲಿಲ್ಲ, ಇವರ ಕುರಿತಾಗಿ ಅವರ ಪಕ್ಷದಲ್ಲಿಯೇ ವಿಶೇಷ ನಿರೀಕ್ಷೆಯನ್ನೇನ್ನೂ ಇಟ್ಟುಕೊಂಡಿರಲಿಲ್ಲ” ಎಂಬಂತೆಲ್ಲ ಮಾತುಗಳನ್ನು ಕೇಳುವಾಗ ಇತಿಹಾಸವನ್ನು ಪುನರವಲೋಕಿಸುವುದು ಒಳ್ಳೆಯದು. ಅವರ ಜನ್ಮದಿನವೂ ಮಹಾತ್ಮಾ ಗಾಂಧೀಜಿಯವರ (Mahatma Gandhi) ಜನ್ಮದಿನದಂದೇ ಬರುವ ಕಾರಣ ಅವರು ಗಾಂಧೀಜಿಯ ನೆರಳಿನಲ್ಲಿಯೇ ಕಳೆದುಹೋಗುತ್ತಿದ್ದಾರೆ. ಇನ್ನು ದೇಶದ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸಿದರೂ, ಕೇವಲ ಹದಿನೆಂಟು ತಿಂಗಳಿಗೇ ದೇಶದ ದೌರ್ಭಾಗ್ಯದಿಂದಾಗಿ ಅವರನ್ನು ನಾವು ಕಳೆದುಕೊಳ್ಳಬೇಕಾಗಿಬಂತು. ಆದರೆ ಭಾರತದ ಅಂತಃಶಕ್ತಿಯನ್ನು ನಿರಂತರವಾಗಿ ಜಾಗೃತವಾಗಿರುವಂತೆ ಅಡಿಗಲ್ಲು ಹಾಕಿದ ಈ ವಾಮನಮೂರ್ತಿಯ ಸಾಧನೆ ಎಂದಿಗೂ ನೆನಪಿನಲ್ಲಿರುವಂತಹದ್ದು. 1964ರ ಮೇ 24ರಂದು ಜವಾಹರಲಾಲರ (jawaharlal nehru) ನಿಧನ ರಾಜಕೀಯ ಪಂಡಿತರ ಭಾಷೆಯಲ್ಲಿ ಹೇಳುವಂತೆ ಒಂದು ದೊಡ್ಡ ನಿರ್ವಾತವನ್ನು ಸೃಷ್ಟಿಸಿತ್ತು. Who after Nehru ಎನ್ನುವ ಕೂಗು ಅವರು ಬದುಕಿರುವಾಗಲೇ ಚರ್ಚೆಗೆ ಬಂದಿತ್ತು. ಹಾಗಂತ ಶಾಸ್ತ್ರೀಜಿಯವರ ಆಯ್ಕೆ ಆಕಸ್ಮಿಕವೇನೂ ಆಗಿರಲಿಲ್ಲ. ಅವರ ರಾಜಕೀಯ ಬದುಕಿನಲ್ಲಿ ಅವರು ತೋರಿದ ಕಾರ್ಯಕ್ಷಮತೆಯೇ ಅವರನ್ನು ಪ್ರಧಾನಿಯಪಟ್ಟದ ಮೇಲೆ ಕೂರಿಸಿದ್ದು ಎನ್ನುವದನ್ನು ಮರೆಯಬಾರದು.

1952ರಲ್ಲಿ ನಡೆದ ಲೋಕಸಭೆಗೆ ನಡೆದ ಮೊದಲನೆಯ ಚುನಾವಣೆಯಲ್ಲಿ ಕಾಂಗ್ರೇಸ್ಸು ಒಟ್ಟೂ 489 ಸ್ಥಾನಗಳಲ್ಲಿ 364 ಸ್ಥಾನಗಳನ್ನು ಗೆದ್ದು ಅಭೂತಪೂರ್ವ ಜಯವನ್ನು ಸಾಧಿಸಿತು. ಇದು ಸ್ವಾಭಾವಿಕವಾಗಿ ಕಾಂಗೆಸ್ಸಿನವರಿಗೆ ತೃಪ್ತಿಕೊಟ್ಟ ವಿಷಯ ಆದರೆ ಒಟ್ಟೂ ಚಲಾವಣೆಯಾದ ಮತಗಳ ಪೈಕಿ ಕಾಂಗ್ರೇಸ್ಸಿಗೆ 45% ಮತಗಳು ಬಿದ್ದಿದ್ದವು. ಅಖಿಲ ಭಾರತೀಯ ಮಟ್ಟದ ಪ್ರಭಾವಶಾಲಿಯಾದ ವಿರೋಧ ಪಕ್ಷವಿಲ್ಲದಿದ್ದರೂ ಕಾಂಗ್ರೆಸಿಗೆ ಬಿದ್ದ ಮತಗಳ ಸಂಖ್ಯೆ ತೃಪ್ತಿದಾಯಕವಾಗಿರಲಿಲ್ಲ. ಪ್ರಾದೇಶಿಕವಾಗಿ ಕಾಂಗ್ರೆಸನ್ನು ವಿರೋಧಿಸುವವರೂ ಗಣನೀಯವಾಗಿ ಇದ್ದಾರೆ ಎನ್ನುವುದು ಸ್ಪಷ್ಟವಾಯಿತು. ಇದು ನೆಹರೂ ಅವರ ಚಿಂತೆಗೂ ಕಾರಣವಾಯಿತು. 1950ರಲ್ಲಿ ಉಪಪ್ರಧಾನಿಗಳಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ನಿಧನರಾದಾಗ ನೆಹರೂ ಅವರ ನಿರ್ಣಯವನ್ನು ಪ್ರಶ್ನಿಸುವ ಮತ್ತು ರಚಾನತ್ಮಕವಾದ ಟೀಕೆಗಳನ್ನು ಮಾಡುವ ನಾಯಕರೇ ಮಂತ್ರಿಮಂಡಳದಲ್ಲಿ ಇದ್ದಿರಲಿಲ್ಲ. ಆದರೆ ಗುಂಪುಗಾರಿಕೆಗೇನೂ ಕಾಂಗ್ರೆಸ್ಸಿನಲ್ಲಿ ಕಡಿಮೆಯಿರಲಿಲ್ಲ. ಒಳಗೊಳಗೇ ಸಂಪುಟದಲ್ಲಿ ಎರಡನೆಯ ಸ್ಥಾನಕ್ಕಾಗಿ ನಾಯಕರುಗಳಲ್ಲಿಯೇ ಲಾಬಿಗಳು ಪ್ರಾರಂಭವಾಗಿದ್ದವು. ಇದರಲ್ಲಿ ಮುಖ್ಯರಾದವರು ಮುರಾರ್ಜಿ ದೇಶಾಯಿ ಮತ್ತು ಜಗಜೀವನ ರಾಮ ಅವರು.

ಈ ಗುಂಪುಗಾರಿಕೆಯನ್ನು ಗಮನಿಸಿದ ನೆಹರು ಎರಡನೆಯ ಸ್ಥಾನಕ್ಕಾಗಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಆಹ್ವಾನಿಸಿದ್ದು ಕಾಂಗ್ರೇಸ್ಸಿನವರನ್ನಲ್ಲ. ಗೆದ್ದಿರುವದು ಹನ್ನರಡೇ ಸ್ಥಾನಗಳೇ ಆದರೂ, ತನ್ನದೇ ಆದ ಸಿದ್ಧಾಂತಗಳ ಬದ್ಧತೆಯ ಕಾರಣಕ್ಕಾಗಿ ಅದಾಗಲೇ ಜನಸಾಮಾನ್ಯರ ಗಮನವನ್ನು ಸೆಳೆದಿದ್ದ ಪ್ರಜಾ ಸೋಶಿಯಲಿಷ್ಟ ಪಕ್ಷದ ನಾಯಕರಾದ ಜಯಪ್ರಕಾಶ ನಾರಾಯಣರನ್ನು. ಜೆಪಿಯವರ ಅಸಾಧಾರಣ ರಾಜಕೀಯ ಸಂಘಟನೆ, ಅಮೇರಿಕಾದಲ್ಲಿನ ಅವರ ವಿಧ್ಯಾಭ್ಯಾಸದ ಕಾರಣ ಅವರಲ್ಲಿರುವ ಬೌದ್ಧಿಕ ಮಟ್ಟ ಇವು ನೆಹರೂರವರನ್ನು ಪ್ರಭಾವಿಸಿದ್ದವು. ಅವರಿಬ್ಬರ ಭೇಟಿಯಲ್ಲಿನ ನಡವಳಿಕೆಗಳನ್ನು ದಾಖಲಿಸಿದ ಅಂದಿನ ICS ಅಧಿಕಾರಿಗಳೊಬ್ಬರಾದ ಬೃಜ್ ಮೋಹನ್ ನೆಹರು ಅವರ ಪ್ರಕಾರ ನೆಹರೂ ಅವರಿಗೆ ತನ್ನ ಸಂಪುಟದಲ್ಲಿ ತನ್ನನ್ನು ವಿಶ್ಲೇಷಿಸಬಲ್ಲ ಸಮರ್ಥ ನಾಯಕ ಬೇಕಾಗಿತ್ತು. ತಾನು ಯಾವತ್ತೂ ತಪ್ಪೆಸಗದ ವ್ಯಕ್ತಿತ್ವವುಳ್ಳವ ಎನ್ನುವ ಅಹಂ ನೆಹರುರವರಲ್ಲಿತ್ತು. ತನ್ನ ಸಂಪುಟದಲ್ಲಿನ ಇನ್ನಿತರ ಸಚಿವರು ತನ್ನ ನಿರ್ಧಾರದ ಕುರಿತು ವಿಮರ್ಶೆ ಮಾಡಿ ವಿರೋಧಗಳಿದ್ದರೆ ಅದನ್ನು ಹೇಳಲಾರದಂತಹ (Man of straw) ಅಂಜುಕುಳಿಗಳು ಎನ್ನುವ ಅಭಿಪ್ರಾಯವನ್ನು ಅವರು ತಾಳಿದ್ದರು. ಇದು ಮಹಾತ್ಮಾ ಗಾಂಧಿಯವರ ಗಮನಕ್ಕೂ ಬಂದಿತ್ತು ಎಂದು H Y ಶಾರದಾ ಪ್ರಸಾದ ಅವರ ಮಗ RVS ಪ್ರಸಾದ ಬರೆದಿದ್ದಾರೆ. ಪಟೇಲರ ನಂತರ ನಿರ್ವಾತವಾದ ಆ ಸ್ಥಾನಕ್ಕೆ ಸೂಕ್ತ ವ್ಯಕ್ತಿಯೆಂದರೆ ಅದು ಜೆಪಿ; ಅವರು ಕಾಂಗ್ರೆಸ್ಸಿಗೆ ಬಂದರೆ ಒಳ್ಳೆಯದು ಎಂದು ನೆಹರು ಭಾವಿಸಿದ್ದರು. ಆದರೆ ಸದಾ ಅಧಿಕಾರದಿಂದ ದೂರ ಇರಬಯಸುವ ಜೇಪಿ ಈ ಆಹ್ವಾನವನ್ನು ನಿರಾಕರಿಸಿದರು. ಈ ವಿಷಯ ಪ್ರಜಾ ಸೋಶಿಯಲಿಷ್ಟ ಪಕ್ಷದಲ್ಲಿ ಚರ್ಚೆಗೆ ಬಂದಾಗ ಆಚಾರ್ಯ ಕೃಪಲಾನಿ ನೆಹರೂವಿಗೆ ಬಾಹ್ಯ ಬೆಂಬಲ ಕೊಡಲು ಸಮ್ಮತಿಸಿದರೂ, ರಾಮಮೋಹನ ಲೋಹಿಯಾ, ಆಚಾರ್ಯ ನರೇಂದ್ರ ದೇವ ಸರಕಾರಕ್ಕೆ ಬೆಂಬಲ ನೀಡುವುದನ್ನಾಗಲೀ, ಕ್ಯಾಬಿನೆಟ್ಟಿಗೆ ಸೇರುವುದನ್ನಾಗಲೀ ಬಲವಾಗಿ ವಿರೋಧಿಸಿದ ಕಾರಣ ಜೆಪಿಯವರು ಒಪ್ಪಲಿಲ್ಲ. ಈ ಕಾರಣದಿಂದಾಗಿ ನೆಹರು, ಜೆಪಿಯವರದೇನಿದ್ದರೂ ಜವಾಬ್ದಾರಿ ತೆಗೆದುಕೊಳ್ಳದ ಕೇವಲ ಟೀಕೆಯನ್ನಷ್ಟೇ ಮಾಡುವ ವ್ಯಕ್ತಿತ್ವದವರು ಎನ್ನುವ ಅಭಿಪ್ರಾಯಕ್ಕೆ ಬಂದರು. ಅಲ್ಲಿಂದ ಮುಂದೆ ಸಂಪುಟದ ಎರಡನೆಯ ಸ್ಥಾನ ಖಾಲಿಯಾಗಿಯೇ ಉಳಿಯಿತು. ಇದು ಶಾಸ್ತ್ರಿಯವರನ್ನು ಉತ್ತರ ಪ್ರದೇಶದ ರಾಜಕಾರಣದಿಂದ ದೆಹಲಿಗೆ ಕರೆದು ತರುವುದಕ್ಕೂ ಕಾರಣವಾಯಿತು.

ಅದಾಗಲೇ ಶಾಸ್ತ್ರೀಜಿ ಉತ್ತರ ಪ್ರದೇಶದ ರಾಜಕಾರಣದಲ್ಲಿ ತಮ್ಮ ಸರಳ ಮತ್ತು ಜನಪರ ನಿಲುವಿನಿಂದ ಹೆಸರು ಮಾಡಿದ್ದರು. ಸ್ವಾತಂತ್ರ್ಯೋತ್ತರದಲ್ಲಿ ಅವರ ರಾಜಕೀಯ ಬದುಕು ಉತ್ತರಪ್ರದೇಶದಲ್ಲಿ ಗೃಹ ಮತ್ತು ಸಾರಿಗೆ ಸಚಿವರಾಗಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಅವರು ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಿದರು. ಚಳುವಳಿಕಾರರ ಮೇಲೆ ಲಾಠಿ ಬೀಸುವದಕ್ಕಿಂತ ನೀರಿನ ಫಿರಂಗಿ ಎರಚಿ ಗುಂಪನ್ನು ಚದುರಿಸುವದನ್ನು ಬಳಕೆಗೆ ತಂದರು. ಅಷ್ಟೇ ಅಲ್ಲ, ಮಹಿಳೆಯರೂ ಸಹ ಕಂಡಕ್ಟರ್ ಹುದ್ದೆಗೆ ಅರ್ಹರು ಎಂದು ಮೊತ್ತಮೊದಲ ಬಾರಿಗೆ ಭಾರತದ ಇತಿಹಾಸದಲ್ಲಿ ಲಿಂಗಸಮಾನತೆಯನ್ನು ತಂದರು. ಅವರ ಕಾರ್ಯವೈಖರಿ ನೆಹರೂರ ಕಣ್ಣಿಗೆ ಬೀಳುವುದಕ್ಕೆ ತಡವಾಗಲಿಲ್ಲ. ಶಾಸ್ತ್ರೀಜಿಯವರನ್ನು 1951ರಲ್ಲಿ ದೆಹಲಿಗೆ ಕರೆಯಿಸಿ ಕಾಂಗ್ರೆಸ್ಸಿನ ಮಹಾಕಾರ್ಯದರ್ಶಿಯನ್ನಾಗಿ ನೇಮಕಮಾಡಿದರು. ಜೊತೆಗೆ ಮಹಾಚುನಾವಣೆಯ ಮ್ಯಾನೇಜರ್ ಆಗಿಯೂ ಅವರ ಮೇಲೆ ಜವಾಬ್ದಾರಿಯನ್ನು ಹೊರಿಸಲಾಯಿತು. ನಂತರ ಮಂತ್ರಿಮಂಡಳದಲ್ಲಿ ರೇಲ್ವೇ ಮಂತ್ರಿಯಾದರು. ರೈಲಿನ ಸುರಕ್ಷೆ ಮತ್ತು ಕಾರ್ಯದಕ್ಷತೆಗಾಗಿ ಅವರು ಮಾಡಿದ ಸುಧಾರಣೆ ಇಂದಿಗೂ ರೇಲ್ವೆಯಲ್ಲಿ ಒಂದು ಮಾನದಂಡವಾಗಿ ಉಳಿದಿದೆ. ರೈಲಿನಲ್ಲಿ ಜನಸಾಮಾನ್ಯರಿಗೆ ಕೈಗೆಟಕುವ ಖರ್ಚಿನಲ್ಲಿ ಪ್ರಯಾಣ ಬೆಳೆಸುವ ಉದ್ದೇಶದಿಂದಾಗಿ ಮೂರನೆಯ ದರ್ಜೆಯ ಬೋಗಿಯನ್ನು ಪ್ರಾರಂಭಿಸಿದರು. ಆದರೆ 1956ರಲ್ಲಿ ತಮಿಳುನಾಡಿನಲ್ಲಿ ಆದ ಭೀಕರ ಅಫಘಾತದಲ್ಲಿ ನೂರೈವತ್ತಕ್ಕೂ ಹೆಚ್ಚು ಜನ ಮೃತಪಟ್ಟ ಕಾರಣದಿಂದ ಅವರು ನೈತಿಕ ಹೊಣೆ ಹೊತ್ತು ರಾಜಿನಾಮೆ ಸಲ್ಲಿಸಿದರು. ನೆಹರು ಎಷ್ಟೇ ಒತ್ತಡ ಹಾಕಿದರೂ ತಮ್ಮ ನಿಲುವನ್ನು ಬದಲಿಸಲೇ ಇಲ್ಲ.

ಅವರಂತಹ ಪ್ರಾಮಾಣಿಕ, ಅರ್ಪಣಾ ಮನೋಭಾವದ, ದಕ್ಷತೆಯ ಕಾರ್ಯದಲ್ಲಿ ನಿಷ್ಠತೆಯಿರುವವರು ಸಂಪುಟದಲ್ಲಿ ಇರಲೇ ಬೇಕೆನ್ನುವ ಕಾರಣಕ್ಕೆ ಅವರ ಮನವೊಲಿಸಿ 1957ರಲ್ಲಿ ಅವರನ್ನು ಪುನಃ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ ಕೊನೆಗೆ ಗ್ರಹ ಖಾತೆಯನ್ನು ಕೊಟ್ಟರು. ಇದೇ ಕಾಲಕ್ಕೆ ಮೊದಲು ಆಸ್ಸಾಂನಲ್ಲಿ ಪ್ರಾರಂಭವಾದ ಬಂಗಾಲಿ ಅಧಿಕೃತಭಾಷೆಯ ವಿವಾದ ದಕ್ಷಿಣದ ರಾಜ್ಯಗಳಲ್ಲಿ ಇದು ಹಿಂದಿ ವಿರೋಧಿ ರೂಪವನ್ನು ತಳೆಯಿತು. ಆಸ್ಸಾಮಿಯರ ವಿಶ್ವಾಸಕ್ಕೆ ತೆಗೆದುಕೊಂದು ಸಮಸ್ಯೆಯನ್ನು ಬಗೆಹರಿಸಿದ್ದುದಲ್ಲದೇ ತಮಿಳುನಾಡಿನಲ್ಲಿ ನಡೆಯುತ್ತಿರುವ ಉಗ್ರಸ್ವರೂಪದ ಹೋರಾಟವನ್ನೂ ಸಹ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಿದರು. ತ್ರಿಭಾಷಾ ಸೂತ್ರವನ್ನು 1962ರಲ್ಲಿ ಸಂಸತ್ತಿನಲ್ಲಿ ಮಂಡಿಸಿದವರು ಅವರು. ಇಂದಿಗೂ ಇದು “ಶಾಸ್ತ್ರಿ ಸೂತ್ರ” ಎಂತಲೇ ಪ್ರಸಿದ್ದವಾಗಿದೆ. ಅವರು ತಮ್ಮ ಮೃದು ಮಾತಿನಲ್ಲಿಯೇ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಸಾರ್ವಜನಿಕ ಬದುಕಿನಲ್ಲಿ ಬ್ರಷ್ಟಾಚಾರ ಕಡಿಮೆಯಾಗಬೇಕೆಂದು CBIಯನ್ನು ಹುಟ್ಟುಹಾಕಿದವರೂ ಸಹ ಶಾಸ್ತ್ರಿಯವರೇ.

1963ರಲ್ಲಿ ಕಾಶ್ಮೀರದ ಹಝರತಬಾಲ್ ಮಸೀದಿಯಲ್ಲಿ ಪ್ರವಾದಿಗಳ ಅವಶೇಷ ಕಳುವಾಯಿತು. ಇದರಿಂದ ಇಡೀ ಕಾಶ್ಮೀರ ಹೊತ್ತಿ ಉರಿಯತೊಡಗಿತು. ಸಮಸ್ಯೆಯನ್ನು ಬಗೆಹರಿಸಲು ನೆಹರು ತಮ್ಮ ನಂಬಿಗಸ್ತರಾದ ಶಾಸ್ತ್ರಿಜೀಯವರನ್ನು ಕಳುಹಿಸಿಕೊಟ್ಟರು. CBI ತಂಡ ದೆಹಲಿಯಿಂದ ಶ್ರೀನಗರಕ್ಕೆ ಬಂದು ಕಳ್ಳರನ್ನು ಹಿಡಿಯಲು ಸಫಲರಾದರೂ ಸಿಕ್ಕಿದ ಅವಶೇಷದ ಅಸಲಿಯತ್ತಿನ ಕುರಿತು ಗುಸು ಗುಸು ಎದ್ದಿತ್ತು. ಆಗ ಸಮಗ್ರ ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಶೇಷದ ಸತ್ಯಾಸತ್ಯತೆಯನ್ನು ಅವರ ಸಮಕ್ಷಮದಲ್ಲಿ ತಜ್ಞರನ್ನು ಕರೆಯಿಸಿ ಪ್ರಮಾಣಿಕರಿಸಿದರು. ಹೀಗೆ ರಾಜಕೀಯ ಸಂಕಟದ ಕಾಲಕ್ಕೆಲ್ಲ ನೆಹರೂರವರಿಗೆ ಸಾಥ್ ನೀಡಿದವರು ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರು.

1959ರಲ್ಲಿ ನೆಹರೂರವರಿಗೆ ಎಪ್ಪತ್ತು ವರ್ಷ ವಯಸಾಗಿದ್ದಾಗ ಮೊದಲಬಾರಿ ಅಧಿಕೃತವಾಗಿ Who after Nehru ಎನ್ನುವ ಚರ್ಚೆ ಮುನ್ನೆಲೆಗೆ ಬಂತು. ನೆಹರು ತಾನು ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ಬಯಸಿದ್ದರು. ಅವರ ಆರೋಗ್ಯವೂ ಆ ಕಾಲಕ್ಕೆ ಕ್ಷೀಣಿಸುತ್ತಿತ್ತು. ಈ ಕಾಲಕ್ಕೆ ನೆಹರೂರವನಂತರ ಅವರ ಮಗಳು ಇಂದಿರಾಗಾಂಧಿ ಯೋಗ್ಯ ಆಯ್ಕೆ ಎನ್ನುವ ವಿಷಯ ಮುನ್ನೆಲೆಗೆ ಬಂತು. ಇದನ್ನು ಪ್ರಾರಂಬಿಸಿದವರು ಅದಾಗಲೇ ಎಂಭತ್ತು ದಾಟಿ ತಮ್ಮ ರಾಜಕೀಯ ಭವಿಷ್ಯದ ಮುಸ್ಸಂಜೆಯಲ್ಲಿರುವ ಗೋವಿಂದ ವಲ್ಲಭ ಪಂತ್ ಮತ್ತು ನವಲಶಂಕರ ದೇಬರ್. ಹೆಚ್ ವೈ ಶಾರದಾಪ್ರಸಾದರ ಪ್ರಕಾರ ಈ ವಿಷಯದಲ್ಲಿ ನೆಹರೂ ಗೊಂದಲದಿಂದಿದ್ದರು. (The Book I won’t be Writing & Other Essay). ಇದೇ ಸಂದರ್ಭದಲ್ಲಿ ಮುರಾರ್ಜಿ ದೇಸಾಯಿಯವರು ತಾವು ನೆಹರೂರವರ ನಂತರದ ಸ್ಥಾನದಲ್ಲಿರುವ ವ್ಯಕ್ತಿ ಎನ್ನುವ ಸುದ್ದಿಯನ್ನು ಹಬ್ಬಿಸಿದರು.

ಜಗಜೀವನ ರಾಮ ಅವರ ಹೆಸರೂ ಹರಿದಾಡತೊಡಗಿತು. ಮುರಾರ್ಜಿಯವರ ಜಿಗುಟಿನ ವ್ಯಕ್ತಿತ್ವದ ಕಾರಣಕ್ಕೆ ನೆಹರೂ ಸಹಿತ ಬಹುತೇಕ ಕಾಂಗ್ರೆಸ್ಸಿಗರಲ್ಲಿ ಅವರ ಕುರಿತು ಸಹಮತವಿರಲಿಲ್ಲ. ಮುರಾರ್ಜಿಯವರು ತನ್ನ ಉತ್ತರಾಧಿಕಾರಿಯಾದರೆ ಅದು ಕಾಂಗ್ರೆಸ್ಸಿಗೆ ಮಾರಕವಾಗುವುದು ಎಂದು ಅವರು ನಂಬಿದ್ದರು. ಈ ಕಾರಣದಿಂದ 1963ರಲ್ಲಿ “ಕಾಮರಾಜ ಯೋಜನೆಯಂತೆ” ಸಂಪುಟದಿಂದ ಮುರಾರ್ಜಿ ದೇಸಾಯಿ ಮತ್ತು ಲಾಲ್ ಬಹಾದ್ದೂರ ಶಾಸ್ತ್ರೀಜಿಯವರ ಸಹಿತ ಕೆಲವರನ್ನು ಕೈಬಿಟ್ಟಿದ್ದರು. ಕೆಲವೇ ದಿನಗಳಲ್ಲಿ ಶಾಸ್ತ್ರೀಜಿಯವರನ್ನು ಖಾತಾರಹಿತ ಮಂತ್ರಿಯಾಗಿ ತಮ್ಮ ಸಂಪುಟಕ್ಕೆ ನೆಹರೂ ತೆಗೆದುಕೊಂಡರು. ಈ ನಡುವೆ ನೆಹರೂ ಅನಾರೋಗ್ಯಕ್ಕೆ ತುತ್ತಾದರು. ಆಗ ಪ್ರಧಾನಮಂತ್ರಿಗಳ ಖಾತೆಗಳನ್ನೆಲ್ಲ ಸಮರ್ಥವಾಗಿ ನಿರ್ವಹಿಸಿದ ಆಡಳಿತಾತ್ಮಕ ಕ್ರಮಗಳಿಂದಾಗಿ ನೆಹರೂ, ಕಾಮರಾಜ ಮೊದಲಾದವರಲ್ಲಿ ಶಾಸ್ತ್ರೀಜಿಯವರ ಕುರಿತು ಸದಭಿಪ್ರಾಯ ಮೂಡಿತು. 1964ರಲ್ಲಿ ನೆಹರೂ ನಿಧನರಾಗಿ ಕಾವು ಆರುವ ಮುನ್ನವೇ ಮುರಾರ್ಜಿ ದೇಸಾಯಿಯವರ ಮಗ ಕಾಂತಿಲಾಲ್ ದೇಸಾಯಿ ಬಹಿರಂಗವಾಗಿ ತಮ್ಮ ತಂದೆಯವರಿಗೆ ಕಾಂಗ್ರೆಸ್ಸಿನಲ್ಲಿ ಬಹುಮತವಿದೆ, ಶಾಸ್ತ್ರೀಜಿಯವರಿಗೆ ಪ್ರಧಾನಿ ಪಟ್ಟದ ಕನಸು ಕಾಣುವದು ಬೇಡವೆಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿರುವದು ಕಾಂಗ್ರೇಸ್ಸಿನಲ್ಲಿ ರೋಷಕ್ಕೆ ಕಾರಣವಾಯಿತು. ಆಗ ಕಾಮರಾಜ, ನಿಜಲಿಂಗಪ್ಪ, ಮುಂತಾದವರು ನೇರವಾಗಿ ಲಾಲ್ ಬಹಾದ್ದೂರ ಶಾಸ್ತ್ರೀಜಿಯವರನ್ನು ಒಪ್ಪಿಸಿ ಅವರೇ ಆಯ್ಕೆಯಾಗುವಂತೆ ಮಾಡಿದರು. ಈ ಮೂಲಕ ಭಾರತಕ್ಕೆ ಮರೆಯಲಾರದ ನಾಯಕನೋರ್ವ ದೊರಕಿದ.

1964 ಜೂನ್ 2ರಂದು ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶಾಸ್ತ್ರೀಜಿಯವರ ಎದುರಿನ ಹಾದಿ ಕಠಿಣವಾಗಿತ್ತು. ಚೈನಾ ಯುದ್ಧದ ಮುಖಭಂಗದಿಂದಾಗಿ ದೇಶದ ಪ್ರತಿಷ್ಠೆ ಮಂಕಾಗಿತ್ತು. ಇತ್ತ ದುರ್ಬಲ ನಾಯಕ ಭಾರತಕ್ಕೆ ದೊರೆತ ಎಂದು ಪಾಕ್ ತನ್ನ ತಂಟೆಯನ್ನು ಪ್ರಾರಂಭಿಸಿತ್ತು. 1965ರ ಜೂನ್ ತಿಂಗಳಲ್ಲಿಯೇ ಆ ದೇಶ ತನ್ನ ಸೈನಿಕರನ್ನು ನುಗ್ಗಿಸಲಿಕ್ಕೆ ಪ್ರಾರಂಭಿಸಿತು. ಭಾರತಕ್ಕೆ ಈ ಸವಾಲನ್ನು ಎದುರಿಸುವ ಅನಿವಾರ್ಯತೆ. ಶಾಸ್ತ್ರೀಜಿ ಧೈರ್ಯಗೆಡಲಿಲ್ಲ. ತಕ್ಕ ಉತ್ತರ ಕೊಡಲು ಪ್ರಾರಂಭಿಸಿದರು. ಅಗಸ್ಟ 2ರಂದು ಅಧಿಕೃತ ಯುದ್ಧ ಪ್ರಾರಂಭವಾಗಿಯೇ ಬಿಟ್ಟಿತು. ಇತ್ತ ದೇಶದಲ್ಲಿನ ಭೀಕರ ಬರಗಾಲದಿಂದಾಗಿ ಆಹಾರಧಾನ್ಯದ ಕೊರತೆ ಉಂಟಾಗಿತ್ತು. ಜನರಿಗೆ ಉಣಬಡಿಸಲು ಗೋಧಿ ಆಮದು ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಯಿತು. ವಿದೇಶಿಯರು ಭಾರತದ ಪರಿಸ್ಥಿತಿಯನ್ನು “Living from ship to mouth” ಹಡಗಿನಿಂದ ನೇರವಾಗಿ ಗ್ರಾಹಕರ ಹೊಟ್ಟೆಗೆ ಎಂದು ತಮಾಷೆ ಮಾಡುತಿದ್ದರು. ಆಹಾರಧಾನ್ಯಕ್ಕಾಗಿ ಭಾರತ ನೇರವಾಗಿ ಅಮೇರಿಕಾವನ್ನೇ ಆಶ್ರಯಿಸಿತ್ತು. ಯುದ್ಧವನ್ನು ನಿಲ್ಲಿಸದಿದ್ದರೆ ಗೋಧಿಯ ರಫ್ತನ್ನು ನಿಲ್ಲಿಸುತ್ತೇನೆಂದು ಅಮೇರಿಕಾ ಬೆದರಿಕೆ ಹಾಕಿತು. ಸಿ ರಾಜಗೋಪಾಲಾಚಾರಿಯವರು “ಭಾರತದ ಆರ್ಥಿಕತೆಯ ದೊಡ್ಡ ಅಪಾಯವೆಂದರೆ ದುಬಾರಿ ತೆರಿಗೆ ಮತ್ತು ಸೋವಿಯತ್ ಮಾದರಿಯ ಯೋಜನೆಗಳನ್ನು ಅವಲಂಬಿಸಿರುವದು. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ” ಎಂದು ನೆಹರೂ ತೀರಿಕೊಂಡ ಸಂದರ್ಭದಲ್ಲಿ ಎಚ್ಚರಿಸಿದ್ದರು. ಒಂದುಕಡೆ ಬಾಹ್ಯ ಶತ್ರುಗಳು ಇನ್ನೊಂದು ಕಡೆ ಆಹಾರದ ಪೂರೈಕೆಯ ಸವಾಲುಗಳನ್ನು ಎದುರಿಸಲು ಶಾಸ್ತ್ರೀಜಿಯವರು ಆಯ್ದುಕೊಂಡ ಮಾರ್ಗ ಜನರಲ್ಲಿ ಸ್ಫೂರ್ತಿ ಮತ್ತು ಆಶಾವಾದವನ್ನು ಮೂಡಿಸುವದಾಗಿತ್ತು. ಹಾಗಾಗಿ ಅವರು “ಜೈ ಜವಾನ ಜೈ ಕಿಸಾನ್” ಎನ್ನುವ ಘೋಷಣೆಯನ್ನು ಕೊಡುವದರ ಮೂಲಕ ಜನರಲ್ಲಿ ದೇಶಾಭಿಮಾನ ಮತ್ತು ಸ್ವಾಲಂಬನೆಯ ಕಿಚ್ಚುಹತ್ತಿಸಿದರು. ವಾರದಲ್ಲಿ ಒಂದು ಹೊತ್ತು ಉಪವಾಸವಿರುವಂತೆ ಮನವಿ ಮಾಡಿದರು.

ಇದು ಯಾವ ಮಟ್ಟಿಗೆ ಪ್ರಭಾವ ಬೀರಿತೆಂದರೆ ಇಂದಿಗೂ ದೇಶದಲ್ಲಿ ಶಾಸ್ತ್ರಿ ಸೋಮವಾರ ವ್ರತವನ್ನು ಆಚರಿವವರಿದ್ದಾರೆ. ಈ ಸವಾಲನ್ನು ಎದುರಿಸುವದು ಅತ್ಯಂತ ಅಗತ್ಯವಾಗಿತ್ತು. ಎಲ್ಲದನ್ನೂ ಮೊದಲೇ ಊಹಿಸಿದ್ದ ಶಾಸ್ತ್ರೀಜಿಯವರು ತಮ್ಮ ಸಂಪುಟಕ್ಕೆ ಆಧುನಿಕ ದೃಷ್ಟಿಕೋನವನ್ನು ಹೊಂದಿದ್ದ ಸಿ. ಸುಬ್ರಹ್ಮಣ್ಯರನ್ನು ಕೃಷಿ ಮತ್ತು ಆಹಾರಧಾನ್ಯಗಳ ಇಲಾಖೆಯನ್ನು ನೋಡಿಕೊಳ್ಳುವಂತೆ ಮನವಿ ಮಾಡಿದರು. ನೆಹರೂರವರ ಸಂಪುಟದಲ್ಲಿ ಬಲು ಮಹತ್ವದ ಉಕ್ಕು ಗಣಿಗಾರಿಕೆ ಮತ್ತು ಭಾರೀ ಎಂಜಿನಿಯರಿಂಗ್ ಖಾತೆಗಳನ್ನು ಹೊಂದಿದ್ದ ಅವರಿಗೆ ಕೃಷಿ ಮತ್ತು ಆಹಾರಧಾನ್ಯದ ಇಲಾಖೆ ಎಂದರೆ ಅದು ಕಡಿಮೆ ಮಹತ್ವದ್ದಾಗಿತ್ತು. ಆದರೆ ಪರಿಸ್ಥಿತಿಯನ್ನು ಅರ್ಥೈಯಿಸಿಕೊಂಡ ಸುಬ್ರಹ್ಮಣ್ಯ ಅವರು ಒಪ್ಪಿಕೊಂಡಿದ್ದಷ್ಟೇ ಅಲ್ಲ, ದೇಶದಲ್ಲಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಸ್ವಾಲಂಬನೆಗೆ ಬುನಾದಿಯನ್ನು ಹಾಕಿಬಿಟ್ಟರು. ಅವರು ಡಾ. ಸ್ವಾಮಿನಾಥನ್ ಅವರನ್ನು ಈ ಕಾರ್ಯದ ಅನುಷ್ಠಾನಕ್ಕಾಗಿ ಆಯ್ದುಕೊಂಡರು. ಈ ಇಬ್ಬರ ಜೋಡಿಯಿಂದಾಗಿ ಭಾರತ ಇಂದು ಆಹಾರಧಾನ್ಯದಲ್ಲಿ ಸ್ವಾಲಂಬನೆಯನ್ನು ಸಾಧಿಸಲು ಸಾಧ್ಯವಾಗಿದೆ. ಭಾರತದಲ್ಲಿ ಶ್ವೇತ ಕ್ರಾಂತಿಯ ಬುನಾದಿಯನ್ನೂ ಶಾಸ್ತ್ರೀಜಿಯವರೇ ಹಾಕಿಕೊಟ್ಟವರು. ಆಹಾರ ಮತ್ತು ಹಾಲಿನಲ್ಲಿ ದೇಶ ಸ್ವಾವಲಂಬಿಯಾದರೆ ಆರೋಗ್ಯ ಮತ್ತು ಆರ್ಥಿಕತೆ ಎರಡೂ ಸುಧಾರಿಸುವದೆನ್ನುವದನ್ನು ಅವರು ಮನಗಂಡಿದ್ದರು. ಹಾಗಾಗಿ ಅವರು ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮೂಲಕ ಶ್ವೇತಕ್ರಾಂತಿಯನ್ನು ಅನುಷ್ಠಾನಗೊಳಿಸಿದರು. ಮುಂದೆ ಅಮುಲ್ ಎಂದು ಕುರಿಯನ್ ಮೂಲಕ ಈ ದೇಶ ಸಾಧಿಸಿದ ಪ್ರಗತಿ ನಮ್ಮೆದುರಿನಲ್ಲಿಯೇ ಇದೆ. ಅಮೇರಿಕಾದ ಒತ್ತಡಕ್ಕೆ ಭಾರತ ತಲೆಬಾಗಬೇಕಾಗಿ ಬರಲಿಲ್ಲ. ಭಾರತದ ಹಸಿರು ಕ್ರಾಂತಿ ಮತ್ತು ಶ್ವೇತಕ್ರಾಂತಿಯ ಮೂಲ ಪುರುಷರು ಲಾಲ್ ಬಹಾದ್ದೂರರು. ಆತ್ಮ ನಿರ್ಭರ ಭಾರತದ ಕನಸನ್ನು ಅಂದೇ ಕಂಡ ಮೊದಲ ನೇತಾರ ಶಾಸ್ತ್ರೀಜಿಯವರು. ಅವರು ಪಾಕಿಸ್ಥಾನವನ್ನು ಹೇಗೆ ಯುದ್ಧದಲ್ಲಿ ಮಣಿಸಿದರು ಎನ್ನುವದು ಜಗತ್ತಿನೆದುರಿಗೇ ಇದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Gandhi Jayanthi: ಅಹಿಂಸೆಗೊಂದು ಅಸ್ಮಿತೆಯನ್ನು ಕೊಟ್ಟ ಸನಾತನಿ

ಶಾಸ್ತ್ರಿಯವರ ಬಾಲ್ಯ ಬಡತನದ ಹಿನ್ನೆಲೆಯಿಂದ ಕೂಡಿತ್ತು. ಉತ್ತರ ಪ್ರದೇಶದ ಮೊಘಲಸರಾಯಿಯಲ್ಲಿ 1904 ಅಕ್ಟೋಬರ್ 2ರಂದು ಕಾಯಸ್ಥ ಕುಟುಂಬದಲ್ಲಿ ಜನಿಸಿದ ಅವರು ಒಂದುವರೆ ವರ್ಷವಾಗಿರುವಾಗಲೇ ತಂದೆ ಶಾರದಾಪ್ರಸಾದ ಶ್ರೀವಾಸ್ತವರನ್ನು ಕಳೆದುಕೊಂಡರು. ಅವರ ತಾಯಿ ರಾಮಧುಲಾರಿ ದೇವಿಯವರು ಬಹಳ ಕಷ್ಟಪಟ್ಟು ಮಗನನ್ನು ಬೆಳೆಸಿದರು. ಶಾಸ್ತ್ರೀಜಿಯವರಿಗೆ ಜ್ಞಾನದ ಕಿಡಿ ಮತ್ತು ದೇಶಭಕ್ತಿಯನ್ನು ಮೂಡಿಸಿದವರು ವಾರಣಾಸಿಯ ಹಾಯ್­_ಸ್ಕೂಲಿನಲ್ಲಿ ಶಿಕ್ಷಕರಾಗಿದ್ದ ನಿಷ್ಕಾಮೇಶ್ವರ ಪ್ರಸಾದ ಮಿಶ್ರ ಎನ್ನುವವರು. ಅವರಿಂದ ದೇಶಭಕ್ತಿಯ ಪಾಠ ಕಲಿತ ಶಾಸ್ತ್ರೀಜಿಯವರು ಗಾಂಧೀಜಿಯವರ ವಿಚಾರಧಾರೆಗಳಿಂದ ಸಹಜವಾಗಿಯೇ ಪ್ರಭಾವಿತರಾಗಿದ್ದರು. ಹಾಗಾಗಿ 1921ರಲ್ಲಿ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಕರೆಗೆ ಹತ್ತನೆಯ ತರಗತಿಯ ತನ್ನ ವಿಧ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಚಳುವಳಿಗೆ ಧುಮುಕಿದರು. ಮೈನರ್ ಆಗಿರುವ ಕಾರಣಕ್ಕೆ ಅವರ ಬಿಡುಗಡೆಯೂ ಆಯಿತು. ನಂತರ ಕಾಶಿ ವಿದ್ಯಾಪೀಠದಲ್ಲಿ ತತ್ವಶಾಸ್ತ್ರ ಮತ್ತು ಮಾನವಿಕ ಶಾಸ್ತ್ರದಲ್ಲಿ ಶಾಸ್ತ್ರೀ ಪದವಿಯನ್ನು ಪಡೆದರು. ಶಾಸ್ತ್ರೀ ಎನ್ನುವ ಅಡ್ಡಹೆಸರು ಈ ಕಾರಣಕ್ಕಾಗಿ ಅವರಿಗೆ ಸೇರ್ಪಡೆಯಾಯಿತು. ಈ ನಡುವೆ 1928ರಲ್ಲಿ ಲಲಿತಾ ದೇವಿಯವರನ್ನು ಮದುವೆಯಾದರು. 1930ರ ಉಪ್ಪಿನ ಸತ್ಯಾಗ್ರಹದಲ್ಲಿ ಶಾಸ್ತ್ರೀಜಿ ತನ್ನ ಸಂಘಟನಾಶಕ್ತಿಯಿಂದ ಅಭೂತಪೂರ್ವ ಜನಬೆಂಬಲ ದೊರಕಿಸಿದರು. 1937ರಲ್ಲಿ ಅವರನ್ನು ಉತ್ತರಪ್ರದೇಶ ಕಾಂಗ್ರೇಸ್ಸಿನ ಸಂಘಟನಾ ಕಾರ್ಯದರ್ಶಿಯನ್ನಾಗಿ ಮಾಡಿದಾಗ ಪಕ್ಷವನ್ನು ಸಮಗ್ರವಾಗಿ ಸಂಘಟಿಸಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿ ಚಳುವಳಿಯ ತೀವ್ರತೆಯನ್ನು ಹೆಚ್ಚಿಸಿದರು. ಆಗ ಅವರಿಗೆ ಒಂದುವರೆ ವರ್ಷ ಜೈಲುಶಿಕ್ಷೆಯಾಯಿತು. ಆ ಮೇಲೆ ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿಯೂ ಇವರಿಗೆ 1940, 1941 ಮತ್ತು 1946ರಲ್ಲಿ ಜೈಲುಶಿಕ್ಷೆಯಾಗಿತ್ತು. ಒಟ್ಟೂ ಒಂಭತ್ತು ವರ್ಷ ಅವರು ಜೈಲಿನಲ್ಲಿದ್ದರು.

ಶಾಸ್ತೀಜಿಯವರದ್ದು ಸಮಾಜವಾದ ಎನ್ನುವದಕ್ಕಿಂತ ಸಮನ್ವಯವಾದವಾಗಿತ್ತು. ಗಾಂಧೀ ಮಾರ್ಗದಲ್ಲಿ ಅಚಲವಾದ ವಿಶ್ವಾಸವುಳ್ಳ ಅವರು ಅಹಿಂಸೆಗಿಂತಲೂ ಸತ್ಯವನ್ನು ಪ್ರತಿಪಾದಿಸುವದಕ್ಕೆ ಮಹತ್ವವನ್ನು ಕೊಟ್ಟರು. ಪ್ರಧಾನಮಂತ್ರಿಯೆಂದರೆ ಸಮಾನರಲ್ಲಿ ಮೊದಲಿಗಮಾತ್ರ ಎಂದು ನಂಬಿದ್ದರು. ಕಠಿಣವಾದ ಸಂದರ್ಭಗಳಲ್ಲಿಯೂ ಅಭಿವ್ಯಕ್ತಿಸಬೇಕಾಗಿ ಬರುವಾಗ ವಿನಮ್ರತೆಯಿಂದ ಆದರೆ ಅಷ್ಟೇ ದೃಢವಾಗಿ ನಿರ್ಧಾರ ಕೈಗೊಳ್ಳುತ್ತಿದ್ದರು. ಪುಟ್ಟ ದೇಹದಲ್ಲಿ ಅಪಾರವಾದ ಧೀಶಕ್ತಿ, ಅಸಮಾನ್ಯ ಸಾಮಾನ್ಯತನದ ವ್ಯಕ್ತಿತ್ವ ಅವರದಾಗಿತ್ತು. ಮೇಡಂ ಕ್ಯೂರಿಯ ಜೀವನ ಚರಿತ್ರೆಯನ್ನು ಹಿಂದಿಗೆ ಅನುವಾದ ಮಾಡಿದ ಅವರು ಉರ್ದುವಿನಲ್ಲಿಯೂ ಕವಿತೆಯನ್ನು ಬರೆದಿದ್ದರು.

ಪಾಕಿಸ್ತಾನದೊಂದಿಗಿನ ಶಾಂತಿ ಒಪ್ಪಂದಕ್ಕೆ ಬರಲು ಕಾರಣ “ನಾವು ಶಾಂತಿಗೆ ಬದ್ಧರಾಗಿರುವದು ನಮ್ಮ ದೌರ್ಬಲ್ಯದಿಂದಲ್ಲ, ದೇಶಕ್ಕೆ ಮತ್ತು ಜಗತ್ತಿಗೆ ಶಾಂತಿಯೆನ್ನುವದು ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದೆ ಎನ್ನುವ ಕಾರಣಕ್ಕಾಗಿ”. ಇವರ ದೃಢನೀತಿಯಿಂದಾಗಿ ರಷ್ಯಾದ ನಾಯಕ ಕೊಸಗಿನ್ ಸಹ ಚಿಂತಿತರಾಗಿದ್ದರು. ಚಾರಿತ್ರಿಕ ಹಿನ್ನೆಲೆಯಿಲ್ಲದ ಈ ನಾಯಕ ಭಾರತದ ಆತ್ಮನಿರ್ಭರಕ್ಕೆ ಚರಿತ್ರೆ ಬರೆದು ತಾಷ್ಕೇಂಟಿನಲ್ಲಿ ಜನವರಿ 11, 1966ರಂದು ನಿಗೂಢವಾಗಿ ಚಿರಶಾಂತಿಗೆ ಸಂದರು.

A good Leader creates an inspiring vision of the future.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: Ganesh Chaturthi: ಶುದ್ಧ ಭಕ್ತಿಗೆ ಒಲಿಯುವ ಕರುಣಾಮಯ ಮೂರ್ತಿ

Exit mobile version