Site icon Vistara News

ಧವಳ ಧಾರಿಣಿ ಅಂಕಣ: ಪ್ರಕೃತಿಯಿಂದ ವ್ಯಕ್ತನಾಗಿ ಅವ್ಯಕ್ತದ ಮಾರ್ಗ ತೋರುವ ಮೂರ್ತಿ: ಮೃಣ್ಮಯಿ

ganapathi art

ಗಣೇಶ ಚತುರ್ಥಿ (Ganesh Chaturthi) ವಿಶೇಷ: ನಿರ್ವಿಕಲ್ಪ ಉಪಾಸನೆಯ ಮಾರ್ಗ: ಭಾಗ- 1

ಭಾರತದ ಮೂರ್ತಿಶಿಲ್ಪದ ಉಗಮದ ಇತಿಹಾಸವನ್ನು ಅಧ್ಯಯನಮಾಡುವಾಗ ಅನೇಕ ಮಹತ್ವದ ಮಾಹಿತಿಗಳು ಸಿಗುತ್ತದೆ. ಮೂರ್ತಿಪೂಜೆಯೆನ್ನುವುದು ಮಾನವಜನಾಂಗದ ಇತಿಹಾಸದಷ್ಟೇ ಹಳೆಯದು. ಯಾವಾಗ ಅಬ್ರಹಾಮಿಕ್ ಮತಗಳು ಜನಪ್ರಿಯವಾಯಿತೋ ಆಗ ಮೂರ್ತಿಪೂಜೆಯನ್ನು ಬಹಿಷ್ಕರಿಸಲಾಯಿತು. ಬೈಬಲ್ ಮೂರ್ತಿಪೂಜೆಯ ಕುರಿತು “All who make idols are nothing, and the things they treasure are worthless. Those who would speak up for them are blind; they are ignorant, to their own shame. – Isaiah 44:9-20. 9” ಎನ್ನುವ ಮೂಲಕ ಮೂರ್ತಿಪೂಜೆಯನ್ನು ಖಂಡಿಸುತ್ತದೆ. Idolatry ಅಥವಾ Paganism ಎನ್ನುವುದು ದ್ವಿತೀಯ ದರ್ಜೆಯ ಪೂಜೆ ಎನ್ನುವ ನಂಬಿಕೆ ಭಾರತದಲ್ಲಿಯೂ ಇತ್ತೀಚೆಗೆ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಇದಕ್ಕೆ ವೇದ ಮತ್ತು ವೇದಾಂತದ ಆಧಾರವನ್ನು ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಗಣೇಶನ ಮೂರ್ತಿಯ ಕುರಿತು ಬಲವಾದ ಆಕ್ಷೇಪಗಳನ್ನು ನೋಡಬಹುದಾಗಿದೆ. ಮಾನವ ಜನಾಂಗದ ಇತಿಹಾಸವನ್ನು ಅಧ್ಯಯನ ಮಾಡುವಾಗ ವಿಕಾಸಪಥದಲ್ಲಿ ಮಹತ್ವದ ದಾಖಲೆಗಳು ಸಿಗುವುದೇ ಆಯಾ ಜನಾಂಗಗಳು ಪೂಜಿಸುವ ಮೂರ್ತಿಗಳಿಂದ. ಅದರಲ್ಲಿಯೂ ಗಣಪತಿಯ ಮೂರ್ತಿಶಿಲ್ಪಗಳು ಪ್ರಪಂಚದಾದ್ಯಂತ ಕಾಣಸಿಗುವುದರ ಮೂಲಕ “ವಸುದೈವ ಕುಟುಂಬಕಂ” ಎನ್ನುವದಕ್ಕೆ ಸೂಕ್ತ ಉದಾಹರಣೆಯಾಗಿ ಕಾಣಸಿಗುತ್ತಾನೆ.

ಪ್ರಪಂಚದ ಯಾವ ಮೂಲೆಗೆ ಹೋದರೂ ಗಣೇಶನ ಯಾವುದಾದೊಂದು ಮೂರ್ತಿ ಸಿಕ್ಕೇ ಸಿಗುತ್ತದೆ. ಭಾರತೀಯ ಸಂಸ್ಕೃತಿ ಯಾವೆಲ್ಲಾ ಕಡೆಗಳಿಗೆ ಹಬ್ಬಿತ್ತು ಎನ್ನುವದಕ್ಕೆ ಬಲವಾದ ಆಧಾರ ಸಿಗುವದು ಈ ವಿಘ್ನೇಶ್ವರನ ಮೂರ್ತಿಯಿಂದಾಗಿ. ಈತನ ಕುರಿತು ಭಕ್ತಿ ಎಷ್ಟಿದೆಯೋ ಅಷ್ಟೇ ಜಿಜ್ಞಾಸೆಯೂ ಇದೆ. ಈತ ವೇದಗಳಲ್ಲಿ ಉಲ್ಲೇಖವಿಲ್ಲದ ದೇವತೆ. ಎಲ್ಲರಿಗೂ ಪೀಡೆಕೊಡುತ್ತಾ ನಂತರ ಯಾವುದೋ ಕಾರಣಕ್ಕಾಗಿ ದೇವರಾಗಿ ಸೇರ್ಪಡೆಗೊಂಡಿದ್ದಾನೆಯೆನ್ನುವದು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಪ್ರಚಾರದಲ್ಲಿದೆ. ಆತ “ವಿಘ್ನಕರ್ತಾ” ವಿಘ್ನಗಳನ್ನು ಕೊಡುವವನೂ ಆಗಿರುವುದರಿಂದ ಇದೆಲ್ಲವೂ ಗಣೇಶನ ಲೀಲೆಯಿದ್ದರೂ ಇರಬಹುದು! ಪ್ರಪಂಚದ ನಾಗರಿಕತೆಯ ಬೆಳವಣಿಗೆಯನ್ನು ಗಮನಿಸುವಾಗ ಸಿಂಧೂನದಿಯ ನಾಗರಿಕತೆಯನ್ನು ಪ್ರಮುಖವಾಗಿ ಗಮನಿಸುತ್ತಾರೆ. ಶಿವನನ್ನು ಪಶುಪತಿ ಎನ್ನುವ ಹೆಸರಿನಿಂದ ಆಗ ಪೂಜಿಸುತ್ತಿದ್ದರು ಎನ್ನುವುದು ಗೊತ್ತು. ಬಗೆದಷ್ಟೂ ಹೊಸ ಹೊಸ ವಸ್ತುಗಳು ದೊರೆಯುವ ಇಲ್ಲಿನ ಪಳೆಯುಳಿಕೆಗಳಲ್ಲಿ ಗಣೇಶನ ಮೂರ್ತಿಯನ್ನು ಹೋಲುವ ಮೂರ್ತಿಯೊಂದು ಸಿಕ್ಕಿದೆ. ಅಂದರೆ ಗಣೇಶನ ಮೂರ್ತಿಗೆ ಸುಮಾರು 5000 ವರ್ಷಗಳ ಇತಿಹಾಸವಿದೆಯೆನ್ನುವುದು ವಿದಿತವಾಗುತ್ತದೆ.

ಮೂರ್ತಿಪೂಜೆಯನ್ನು ಮಾಡುವಾಗ ವೈದಿಕ ಮತ್ತು ಅವೈದಿಕ ಹಾಗೂ ಆರ್ಯ ಮತ್ತು ಇತರರು ಎನ್ನುವ ವಿವಾದವನ್ನು ಸದಾ ಹುಟ್ಟುಹಾಕಲಾಗಿದೆ. ಹಳೆಯ ಶಿಲಾಯುಗಗಳ ಕಾಲದಿಂದ ಅಂದರೆ ಸುಮಾರು 3,50,000 ವರ್ಷಗಳಿಂದಲೇ ಧಾರ್ಮಿಕ ವಿಧಿ ವಿಧಾನಗಳನ್ನು ಮನುಷ್ಯ ಆಚರಿಸಿಕೊಂಡು ಬರುತ್ತಿದ್ದನೆಂದು ತಿಳಿದುಬರುತ್ತದೆ. ನಮಗೆ ಅಗೋಚರವಾದ ಯಾವುದೋ ಶಕ್ತಿಯೊಂದು ನಮ್ಮನ್ನು ಈ ಲೋಕಕ್ಕೆ ತಂದಿದೆ ಮತ್ತು ಬುದ್ಧಿಬಲಿತ ತಕ್ಷಣದಿಂದಲೇ, ಅದು ಸರ್ವಶಕ್ತ, ಸರ್ವವ್ಯಾಪಕ ಮತ್ತು ಸರ್ವಜ್ಞ ಎನ್ನುವುದನ್ನು ಮನುಷ್ಯ ತಿಳಿದಿದ್ದ. ಪ್ರಕೃತಿಯ ಎಲ್ಲ ಚಮತ್ಕಾರಗಳ ಹಿಂದೆ ಈ ಅಮೂರ್ತವಾದ ಶಕ್ತಿ ಇದೆ ಎನ್ನುವುದು ನಂಬಿಕೆ. ಇದು ಅಮೂರ್ತವಾದ ಕಲ್ಪನೆ. ಈ ಅಮೂರ್ತವಾಗಿರುವುದು ದರ್ಶನವಾಗಬೇಕಾದರೆ ಅದು ಮೂರ್ತವಾಗಬೇಕು. ಅದನ್ನೇ ಅಕ್ಷರವೆಂದು ವೇದಗಳು ಕರೆದಿರುವುದು. ಮೂರ್ತವೆನ್ನುವುದು ಅನುಭವದ ಆಧಾರದ ಮತ್ತು ಓದಿತಿಳಿದುಕೊಂಡ, ವ್ಯವಹರಿಸಿದ, ಶಾಸ್ತ್ರಗಳಿಂದ ಬದಲಾವಣೆಯನ್ನು ಪಡೆಯುತ್ತಲೇ ಹೋಗುತ್ತದೆ. ಉದಾಹರಣೆಗೆ ಶಿಲಾಯುಗದ ಮಾನವನಿಗೆ ಕಾಳಕತ್ತಲಲ್ಲಿ ಕೋಲ್ಮಿಂಚಿನಲ್ಲಿ ಕಂಡ ಯಾವುದೋ ಒಂದು ಆಕೃತಿ ದೇವರಂತೆ ಕಾಣಿಸಿದರೆ, ಈ ಕಲ್ಪನೆಯ ವಿಕಸನ ಸಿಂಧೂ ನದಿಯ ನಾಗರಿಕತೆಯ ಕಾಲದಲ್ಲಿ ಜೇಡಿಮಣ್ಣಿನಲ್ಲಿ, ಟೆರ್ರಾಕೋಟಿನಲ್ಲಿ ವಿಕಸಿತವಾಯಿತು. ಹೀಗೆ ಮೂರ್ತಿಗಳ ಉಗಮವಾಯಿತು. ಎದುರಿಗೆ ಕಾಣಿಸುವ ಮೂರ್ತಿ ನಮ್ಮ ಹೃದಯದಲ್ಲಿ ಪ್ರತಿಷ್ಠಿತವಾಗಬೇಕಾದರೆ ಅದು ಅಮೂರ್ತದಲ್ಲಿ ಲೀನವಾಗಬೇಕು. ನಾವು ದೇವರ ದರ್ಶನಕ್ಕೆ ತಿರುಪತಿಗೋ, ಧರ್ಮಸ್ಥಳಕ್ಕೋ ಹೋಗುತ್ತೇವೆ. ಅಲ್ಲಿಗೆ ಹೋಗಿ ದೇವರನ್ನು ನೊಡಿ ಧನ್ಯರಾದೆವು ಎಂದು ಕೊಳ್ಳುತ್ತಲೇ ಕಣ್ಣುಮುಚ್ಚಿ ಪ್ರಾರ್ಥಿಸಲು ತೊಡಗುತ್ತೇವೆ. ನೂರಾರು ಕಿಲೋಮೀಟರ್ ಹೋಗಿ ದೇವರನ್ನು ಕಂಡು ಕಣ್ಣುಮುಚ್ಚಿಕೊಳ್ಳುವ ಕ್ರಿಯೆಯೇ ಅಮೂರ್ತ. ಎದುರಿನಲ್ಲಿ ಕಾಣುವ ನಮ್ಮಿಷ್ಟದ ಮೂರ್ತಿಯನ್ನು ನಮ್ಮ ಎದೆಯಲ್ಲಿ ಪ್ರತಿಷ್ಠಾಪಿಸುತ್ತೇವೆ. ಇದೇ ದೇವರನ್ನು ಪೂಜಿಸುವ ವಿಧಾನ.

ಸ್ವಾತ್ಮಸಂಸ್ಥಮಜಂ ಶುದ್ಧಂ ತ್ವಾಮದ್ಯ ಗಣನಾಯಕ I

ಅರಣ್ಯಾಮಿವ ಹವ್ಯಾಶಂ ಮೂರ್ತ್ಯಾಮಾವಾಹಯಾಮ್ಯಹಂ II

(ಎಲೈ ಗಣನಾಯಕನೇ ನೀನು ಸ್ವಾತ್ಮಸಂಸ್ಥನು. (ನೀನು ನನ್ನ ಆತ್ಮದಲ್ಲಿರುವವನು) ಜನ್ಮವಿಲ್ಲದವನು,. ಶುದ್ಧನು. ಅರಣಿಯಲ್ಲಿರುವ ಅಗ್ನಿಯಂತೆ ನನ್ನ ಹೃದಯದಲ್ಲಿರುವ ನಿನ್ನನ್ನು ಎದುರಿಗಿರುವ ಮೂರ್ತಿಯಲ್ಲಿ ಸೇರಿಸುತ್ತೇನೆ).

ಮೂರ್ತಿಯೆನ್ನುವುದು ಕಲ್ಲಿನದ್ದಾಗಿರಲಿ, ಲೋಹ ಅಥವಾ ಮಣ್ಣಿನಿಂದ ಮಾಡಿರುವುದಾಗಿರಲೀ, ಪೂಜಿಸುವ ವಿಧಾನವೆನ್ನುವುದು ಹೀಗೆ. ಹಾಗಾಗಿ ಗಣಪತಿ, ವಿಷ್ಣು, ಸ್ಕಂದ ಶಿವನ ಮೂರ್ತಿಗಳೆಲ್ಲವೂ ರೂಢಿಗೆ ಬಂದಿರುವುದು. ಎಲಾ ಪೂಜಾ ವಿಧಾನಗಳ ಹಿಂದಿರುವುದು “ಪ್ರಾರ್ಥನೆ, ಸ್ತವನ, ಅರ್ಘ್ಯ, ನೈವೇದ್ಯ – ಬೇಡಿಕೆ, ಹೊಗಳುವಿಕೆ, ಅರ್ಪಣೆ”. ಪ್ರಸನ್ನನಾದ ದೇವರು ನಮ್ಮ ಇಚ್ಛೆಯನ್ನು ಪ್ರಸಾದದ ರೂಪದಲ್ಲಿ ಈಡೇರಿಸುತ್ತಾನೆಂದು ನಂಬುಗೆ ಇದರ ಹಿಂದೆ ಇದೆ.

ಹಾಗಾಗಿ ಗಣೇಶನ ಆರಾಧನೆಯೆನ್ನುವುದು ಎಲ್ಲಿಂದ ಪ್ರಾರಂಭವಾಯಿತು ಎನ್ನುವುದಕ್ಕಿಂತ ಮಾನವನ ಅಗತ್ಯದ ವಿಧಾನಗಳಿಗೆ ಆರಿಸಿಕೊಂಡ ವಿಧಾನವಾಗಿದೆ. ಇನ್ನು ವೇದಗಳು ಕೇವಲ ಅಮೂರ್ತವನ್ನೇ ಹೇಳುತ್ತವೆ ಎನ್ನುವುದೂ ಸಹ ಸತ್ಯವಲ್ಲ. ವೇದಗಳಲ್ಲಿ ಯಜ್ಞಗಳನ್ನು ಮಾಡುವಾಗ ಮೊದಲು ಮಂಡಲವನ್ನು ರಚಿಸುತ್ತಾರೆ. ಅಲ್ಲಿ ಇಷ್ಟದೇವತೆಯನ್ನು ಆಹ್ವಾನಿಸುತ್ತಾರೆ. ಎಲ್ಲಕ್ಕಿಂತಲೂ ಮೊದಲು ಗಣಪತಿ ಮಂಡಲವನ್ನು ರಚಿಸಿ ಅದನ್ನು ಪೂಜಿಸುವ ಕ್ರಿಯೆ ನಡೆಯುತ್ತದೆ. ಗರ್ಭಗುಡಿಯಲ್ಲಿಯೋ, ಹೊರಗಡೆ ಮಂಟಪದಲ್ಲಿಯೋ ಇರುವ ಗಣಪತಿಯನ್ನು ಯಜ್ಞನಡೆಯುವಲ್ಲಿ ತರಲಾಗದು ಎನ್ನುವುದರ ಕಾರಣದಿಂದ ಹೀಗೆ ಅರ್ಚಿಸುತ್ತಾರೆಯೇ ವಿನಃ ಬೇರೆಯಾವ ಕಾರಣಗಳೇನೂ ಇಲ್ಲ. ವೇದವಾಗಲಿ, ವೇದಾಂತವಾಗಲೀ ನಿರ್ಗುಣ ಬ್ರಹ್ಮನನ್ನು ನಾವು ತಲುಪುವ ಅಂತಿಮ ವಿಧಾನವನ್ನಾಗಿ ಹೇಳುತ್ತದೆಯೇ ಹೊರತೂ, ಎಲ್ಲೂ ಸಗುಣ ಬ್ರಹ್ಮದ ನಿರಾಕಾರವಿಲ್ಲ. ನಿರ್ಗುಣತ್ವದಲ್ಲಿ ಯಜ್ಞಗಳ ಕ್ರಿಯೆಗಳೂ ಇಲ್ಲ. ಈ ಸ್ಥಿತಿಯಲ್ಲಿ ಪೂಜೆ ಮತ್ತು ನಂತರ ಪ್ರಾರ್ಥನೆ ಯಾವುದೂ ಇಲ್ಲ.

ಗೃಹಸ್ಥರಿಗೆ ಸ್ಪಷ್ಟವಾಗಿ ಸಗುಣೋಪಾಸನೆಯನ್ನು ಹೇಳಲಾಗಿದೆ. ಹೀಗೆ ಹೇಳುವಾಗ ಸಗುಣದ ಪ್ರತೀ ಹಂತವನ್ನೂ “ನೇತಿ, ನೇತಿ –ಇದು ಸತ್ಯ ಆದರೆ ಇದೇ ಸತ್ಯವಲ್ಲ” ಎನ್ನುವ ಎಚ್ಚರಿಕೆಯೊಂದಿಗೆ ಅದನ್ನು ಕಳೆದುಕೊಳ್ಳುತ್ತಾ ಹೋಗಬೇಕು. ಭೂಮಿಯಿಂದ ಹಾರಿಬಿಟ್ಟ ರಾಕೇಟ್ ತನ್ನ ಒಂದೊಂದೇ ಕವಚವನ್ನು ಕಳೆದುಕೊಂಡು ಅಂತಿಮ ಗುರಿಯನ್ನು ತಲುಪುವಂತೆ ಸಾಧಕನು ಸಾಧಿಸುತ್ತಲೇ ಹೋಗಬೇಕಾಗುತ್ತದೆ. ಹೊರಗಡೆ ಆರಾಧಿಸುವ ಪರಮಾತ್ಮನನ್ನು ತನ್ನೊಳಗೆ ಸೇರಿಸಿಕೊಳ್ಳುವದೇ ಪೂಜಾ ವಿಧಾನ. ಅದನ್ನೇ ಮಂತ್ರಪುಷ್ಪದ ಕೊನೆಗೆ ಬರುವ “ಯೋSಪ್ಸು ನಾವಂ ಪ್ರತಿಷ್ಟಿತಾಂ ವೇದ, ಪ್ರತ್ಯೇವ ತಿಷ್ಠತಿ – ಅಂತಿಮವಾದ ಗಮ್ಯಸ್ಥಾನದ ಕುರಿತು ಹೇಳುತ್ತದೆ. ಶಂಕರಾಚಾರ್ಯರು ಈ ಕಾರಣದಿಂದಲೇ ಪಂಚಾಯತನ ಪೂಜೆಯನ್ನು ಅನುಷ್ಠಾನಕ್ಕೆ ತಂದು ಸನಾತನ ಧರ್ಮಕ್ಕೆ ಒಂದು ಸರಳ ಅರ್ಥವನ್ನು ಮತ್ತು ಅಂತಿಮ ಗುರಿಯನ್ನು ಸಾಧಿಸುವ ವಿಧಾನಕ್ಕಾಗಿ ಅದೈತೋಪಾಸನೆಯನ್ನೂ ಬಳಕೆಗೆ ತಂದರು. ವೇದಕಾಲದಲ್ಲಿ ಬಹುದೇವತಾರಾಧನೆ ಇತ್ತು ಎನ್ನುವದನ್ನು ಅವೆಲ್ಲವೂ ಅಂತಿಮವಾಗಿ ಓರ್ವನೇ ದೇವನಿಗೆ ಸೇರುವದೆನ್ನುವದನ್ನು ಋಗ್ವೇದದ “ಏಕಂ ಸತ್ ವಿಪ್ರಾ ಬಹುದಾ ವದಂತಿ” (1-164/46) ಗಮನಿಸಬಹುದು. ಶಂಕರಾಚಾರ್ಯರು ಇದಕ್ಕೆಲ್ಲ ಒಂದು ವ್ಯವಸ್ಥಿತವಾದ ಕ್ರಮವನ್ನು ಅನುಸರಿಸಿ ಷಾಣ್ಮತವನ್ನು ಒಂದುಗೂಡಿಸಿ ಸೂರ್ಯ, ಗಣಪತಿ, ಅಂಬಿಕೆ ಶಿವ ವಿಷ್ಣುದೇವರುಗಳ ಪೂಜೆಯನ್ನು ಜಾರಿಗೆ ತಂದರು. ಆದರೆ ಪಂಚಾಯತನ ಪೂಜೆಯಲ್ಲಿ ಎಲ್ಲಾ ದೇವರುಗಳನ್ನು ಅರ್ಚನೆಮಾಡುವದು ಆಯಾ ದೇವತೆಗಳನ್ನು ಪ್ರತಿನಿಧಿಸುವ ಲಿಂಗಗಳು ಮತ್ತು ಶಾಲಗ್ರಾಮಗಳ ಮೂಲಕ. ಈ ದೇಶದಲ್ಲಿ ಮೊದಲು ಸೀಮಿತ ಸಂಖ್ಯೆಯಲ್ಲಿದ್ದ ಗಾಣಪತ್ಯ ಎನ್ನುವ ಪಂಥದ ದೇವರಾಗಿದ್ದ ಗಣಪತಿ ನಂತರದಲ್ಲಿ ‘ಓಂ’ಕಾರದ ಸ್ವರೂಪನಾಗಿ ಅಥರ್ವಶೀರ್ಷದ ಪ್ರಭಾವದಿಂದ ಸಾಕ್ಷಾತ ಬ್ರಹ್ಮನೇ ಆಗಿ ಮೂಡಿಬಂದಿದ್ದಾನೆ.

ಗಣಪತಿಯ ಕುರಿತಾದ ಮಂತ್ರಗಳೇ ಇಲ್ಲ ಎನ್ನುವುದು, ಹಾಗಾಗಿ ಆತ ವೈದಿಕ ದೇವರಲ್ಲವೆನ್ನುವ ಆಕ್ಷೇಪವನ್ನು ಗಮನಿಸಬಹುದಾಗಿದೆ. ಗಣಪತಿಯನ್ನು ಆರಾಧಿಸುವ ಮಂತ್ರಗಳಲ್ಲಿ ಬಹು ಪ್ರಸಿದ್ಧವಾದುದು

ಗಣಾನಾಂತ್ವಾ ಗಣಪತಿಂ ಹವಾಮಹೇ ಕವಿಂ ಕವೀನಾಮುಪಮಶ್ರವಸ್ತಮಂ

ಜ್ಯೇಷ್ಠsರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆ ನಃ ಶೃಣ್ವನ್ನೂತಿಭಿಃ ಸೀದಸಾದನಂ

ಗಣಪತಿಗೆ ಈ ಮಂತ್ರದಿಂದಲೇ ಅರ್ಚಿಸುವದು ಸಾಮಾನ್ಯವಾದ ಕ್ರಮವೂ ಹೌದು. ಮಹತ್ವದ ವಿಷಯವೆಂದರೆ ಸಾಯಣ ಭಾಷ್ಯದ ಪ್ರಕಾರ ಅವು ಗಣಪತಿಯ ಕುರಿತಾದದ್ದಲ್ಲ; ಬ್ರಹ್ಮಣಸ್ಪತಿಯೆಂದರೆ ಸೂರ್ಯರಶ್ಮಿಗಳ ಸಹಾಯದಿಂದ ಸಮುದ್ರದಿಂದ ನೀರನ್ನು ಹೀರಿ ಮೋಡಗಳನ್ನಾಗಿಸಿ ಮಳೆಸುರಿಸಿ ಅನ್ನಕ್ಕೆ ಕಾರಣನಾಗುವ ಪಾಲಕ ಎನ್ನುವ ಅರ್ಥವಿದೆ. ಅದೇರೀತಿ ಹತ್ತನೆಯ ಮಂಡಲದಲ್ಲಿ ಬರುವ “ನಿ ಷು ಸೀದ ಗಣಪತೆಯೇ ಗಣೇಷು..” ಎನ್ನುವಲ್ಲಿ ಗಣೇಷ ಎನ್ನುವದಕ್ಕೆ ಇಂದ್ರ ಎನ್ನುವ ಅರ್ಥವನ್ನು ಸಾಯಣರು ಹೇಳುತ್ತಾರೆ. ಸಾಯಣಾಚಾರ್ಯರು ಗಣಪತಿ ಎನ್ನುವ ಶಬ್ಧ ಬಂದಲ್ಲೆಲ್ಲ “ಪಶುಸಮೂಹ ಪತಿತ್ವಂ” ಎಂದು ಪಶುಗಳಿಗೆ ಒಡೆಯನಾದ ರುದ್ರನಕುರಿತಾಗಿದೆ ಎಂದು ಹೆಚ್ಚಿನ ಸಂದರ್ಭಗಳಲ್ಲಿ ಹೇಳುತ್ತಾರೆ. ತೈತ್ತರೀಯದಲ್ಲಿಯೂ ರುದ್ರನಿಗೆ ಗಣಪತಿಯೆಂದಿದ್ದಾರೆ. ಶಿವನಂತೆ ಗಜಾನನನೂ ನಾಗಯಜ್ಞೋಪವೀತ, ಗಜಚರ್ಮಾಂಬರಧರ, ಫಾಲಚಂದ್ರ; ಹೀಗೆ ಅನೇಕ ಹೋಲಿಕೆಗಳಿವೆ. ವೇದಗಳಲ್ಲಿ ಗಣಪತಿಯ ಉಲ್ಲೇಖವೇ ಇಲ್ಲ ಎಂದು ಅಂದುಕೊಂಡರೆ ತೈತ್ತರೀಯ ಸಂಹಿತೆಯಲ್ಲಿ ಮತ್ತು ವಾಜಸೇನೇಯ ಸಂಹಿತೆಯಲ್ಲಿ “ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ” ಎನ್ನುವ ಮಂತ್ರವಿದೆ. ಭಾಷ್ಯದ ಒಂದೇ ಕಾರಣದಿಂದ ವೇದಗಳಲ್ಲಿ ಗಣಪತಿಯ ಪೂಜೆ ಇತ್ತೋ ಇಲ್ಲವೋ ಎನ್ನುವದು ಸ್ಪಷ್ಟವಾಗುವದಿಲ್ಲ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀಕೃಷ್ಣ; ತಾನು ದೇವರೆನ್ನುತ್ತಲೇ ಮನುಷ್ಯರೊಡನೆ ಒಡನಾಡಿದವ

ಗಣಗಳ ಪತಿಯಾದವನನ್ನು ಉಲ್ಲೇಖಿಸಿ ಅದಕ್ಕೆ ಮೂಲರೂಪವಾದ ದೇವನನ್ನು ಆರಾಧಿಸುವ ಪದ್ಧತಿ ವೇದಗಳ ಕಾಲದಲ್ಲಿಯೇ ಆರಂಭವಾಗಿರಬಹುದು ಎನ್ನುವದನ್ನೂ ಊಹಿಸಬಹುದಾಗಿದೆ. ಪ್ರಕೃತಿಯನ್ನು ಆರಾಧಿಸುವ ಕಾಲದಿಂದ ವಿಗ್ರಹಾರಾಧನೆಗಳಿಗೆ ಬರುವಾಗ ವೇದಮಂತ್ರಗಳ ವಿಶೇಷಣಗಳನ್ನು ತಾವು ಆರಾಧಿಸಿಕೊಂಡು ಬಂದಿರುವ ದೇವರುಗಳಿಗೆ ಬಳಸುವದು ರೂಢಿಗೆಬಂದಿದೆ. ಬ್ರಹ್ಮಣಸ್ಪತೇ ಎನ್ನುವದರ ಅರ್ಥ-ಪ್ರವೃದ್ಧವಾದ ಕರ್ಮಗಳಿಗೆ ಪ್ರಭುವಾದವ ಎಂದಾಗುತ್ತದೆ. ನಮ್ಮ ಆಚರಣೆಗಳ ಪ್ರಕಾರ ಗಣಪತಿ ಸರ್ವಶಕ್ತ ದೇವತೆ. ಗಣಪತಿ ಅಥರ್ವಶೀರ್ಷದಲ್ಲಿ ಆತನನ್ನು ಬ್ರಹ್ಮ, ವಿಷ್ಣು, ರುದ್ರ, ಸೂರ್ಯ ಹೀಗೆ ಎಲ್ಲಾ ದೇವರುಗಳ ಮೂಲ ಸ್ವರೂಪ ಎಂದೇ ಹೊಗಳುತ್ತಾರೆ. ಇನ್ನು ಗಣಪತಿಗೆ ಬ್ರಹ್ಮಣಸ್ಪತ ಎನ್ನುವದಕ್ಕೆ ಗಣೇಶಪುರಾಣದಲ್ಲಿ ಕತೆಯೊಂದು ಬರುತ್ತದೆ. ಕಶ್ಯಪರ ಮಗನಾಗಿ ಮಹೋತ್ಕಟನೆನ್ನುವ ಹೆಸರಿನ ಗಣೇಶ ಬಾಲಕನಾಗಿರುವಾಗಲೇ ವಿಘಾತ, ಪಿಂಗಾಕ್ಷ, ವಿಶಾಲ, ಪಿಂಗಲ ಮತ್ತು ಚಪಲ ಎನ್ನುವ ರಾಕ್ಷಸರನ್ನು ತನ್ನ ಕೈಯಲ್ಲಿದ್ದ ಮಂತ್ರಾಕ್ಷತೆಯಿಂದಲೇ ಸಂಹರಿಸಿದ ಕಥೆಯಿದೆ. ಆಗ ದೇವತೆಗಳೆಲ್ಲ ಬಂದು ಈತನಿಗೆ ಅನೇಕ ವಿಧವಾದ ಆಯುಧವನ್ನೂ ವರಗಳನ್ನೂ ಕೊಡುತ್ತಾರೆ. ಬ್ರಹ್ಮ ಆತನಿಗೆ ಸದಾಕಾಲ ತಾನು ಧರಿಸುತ್ತಿದ್ದ ಕಮಲವನ್ನು ಕೊಟ್ಟು ಬ್ರಹ್ಮಣಸ್ಪತಿ ಎಂದು ಹೆಸರಿಟ್ಟ ಎಂದು ವಿನಾಯಕ ಬ್ರಹ್ಮಣಸ್ಪತಿಯಾದ ಬಗೆಯನ್ನು ವಿವರಿಸುತ್ತದೆ. ಗಣಪತಿಯ ಉಪಾಸನಾ ವಿಧಾನದಲ್ಲಿ ಪುರಾಣಗಳು ಮಹತ್ವದ ಪಾತ್ರವನ್ನು ವಹಿಸುತ್ತದೆ. ಮಹಾಭಾರತದ ಆದಿಪರ್ವದಲ್ಲಿಯೇ ವ್ಯಾಸರು ಗಣಪತಿಯ ಹತ್ತಿರ ಮಹಾಭಾರತಕ್ಕೆ ಲಿಪಿಕಾರನಾಗಬೇಕೆಂದು ಕೇಳಿಕೊಳ್ಳುವುದು ಬರುತ್ತದೆ. ಸರಳವಾಗಿ ದೇವರುಗಳ ಮಹಿಮೆಯನ್ನು ವರ್ಣಿಸುತ್ತಲೇ ಬದುಕಿನ ಸಾರ್ಥಕತೆಯನ್ನು ಸಾಧಿಸುವುದು ಧರ್ಮಗಳ ಉದ್ಧೇಶವಾಗಿವೆ.

ಅದೇ ರೀತಿ ವೇದಗಳಲ್ಲಿ ಉಲ್ಲೇಖವಿಲ್ಲ ಎನ್ನುವ ಕಾರಣಕ್ಕೆ ದೇವರಾಗುವುದಿಲ್ಲವೆನ್ನುವದಾದರೆ ನಮ್ಮ ಇಂದಿನ ಯಾವ ದೇವರೂ ಸಹ ದೇವರಾಗಲೂ ಸಾಧ್ಯವಿಲ್ಲ. ವೇದದಲ್ಲಿ ವರ್ಣಿತವಾದ ಇಂದ್ರ, ಬ್ರಹಸ್ಪತಿ ವರುಣ ಇವರ್ಯಾರೂ ಸಹ ಇಂದು ಪ್ರಸ್ತುತವಾಗಿಲ್ಲ. ಪುರುಷಸೂಕ್ತದಲ್ಲಿ ಬರುವ ಪುರುಷನೆನ್ನುವವ ವಿಷ್ಣುವಲ್ಲ, ವೇದದ ರುದ್ರ ಶಂಕರನೂ ಅಲ್ಲ. ವೇದದಲ್ಲಿ ಬರುವ ಇಂದ್ರಸ್ತುತಿಯಲ್ಲಿ ನಮಗೆ ಕಾಣಸಿಗುವದು ಸ್ವರ್ಗಕಾಮವಾಗಿರುವ ಯಜ್ಞಗಳು; ಅದೇ ಉಪನಿಷತ್ತಿಗೆ ಬಂದರೆ ಅಲ್ಲಿನ ಮಂತ್ರಗಳ ಹುಡುಕಾಟವಿರುವದು ನಮ್ಮ ಮೂಲಸೃಷ್ಟಿಯ ಕುರಿತು. ಅದನ್ನೇ ಬ್ರಹ್ಮ ಎಂದು ಆ ಬ್ರಹ್ಮ ಬೇರೆಲ್ಲಿಯೂ ಇಲ್ಲ ನಮ್ಮೊಳಗೇ ಇದೆ, ನಾವೇ ಬ್ರಹ್ಮವಾಗಬಹುದೆನ್ನುವ ಜ್ಞಾನಕಾಂಡ ಎಂದು ಕರೆಯಲ್ಪಡುವದನ್ನು ಕಾಣಬಹುದು.

ವಿನಾಯಕನ ಪೂಜೆ ಮತ್ತು ಮಹಿಮೆಯ ಕುರಿತಾದ ಕಥನವನ್ನು ಮುಂದಿನ ಭಾಗದಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರೈತ ಹೋರಾಟಕ್ಕೆ ಸಂಘಟನೆಯ ರೂಪ ಕೊಟ್ಟ ಸಂನ್ಯಾಸಿ

Exit mobile version