ಕೃಷ್ಣಾವತಾರಕ್ಕೊಂದು ನೆರಳಾದವಳು
ಲೋಕೋತ್ತರರಾದ ಮಕ್ಕಳ ಮಹಾತಾಯಂದಿರಿಗೆ ತಮ್ಮ ಮಕ್ಕಳ ಲಾಲನೆ ಪಾಲನೆಯ ಪ್ರೀತಿ ಮತ್ತು ಮಮತೆ ಸಿಗಲೇ ಇಲ್ಲವೆಂದು ತೋರುತ್ತದೆ. ಜೀಸಸ್‌ನ ತಾಯಿ ಮೇರಿ ಇರಬಹುದು, ವಾಮನನ ತಾಯಿ ಅದಿತಿ, ರಾಮ ಲಕ್ಷ್ಮಣರ ತಾಯಿಯಂದಿರಾದ ಕೌಸಲ್ಯೆ, ಸುಮಿತ್ರೆ, ಇತ್ತೀಚಿಗೆ ಸ್ವಾಮಿ ವಿವೇಕಾನಂದರ ಅಮ್ಮ ಭುವನೇಶ್ವರಿ ದೇವಿಯವರವರೆಗೂ, ಅವರ ಬವಣೆಗಳನ್ನು ಗಮನಿಸಿದರೆ ಈ ಸಂಗತಿ ಸ್ಪಷ್ಟವಾಗುತ್ತದೆ.
ಈ ಎಲ್ಲ ಮಹಾತಾಯಿಯರಿಗಿಂತಲೂ ಸಾಕ್ಷಾತ್ ದೇವರೇ ಮಗನಾಗಿ ಜನಿಸಿದರೂ ಪುತ್ರಶೋಕವನ್ನು ಅನುಭವಿಸಿದ ಕೃಷ್ಣನ ತಾಯಿಯಾದ ದೇವಕಿ ಮಾತ್ರ ಇವರೆಲ್ಲರಿಗಿಂತಲೂ ಭಿನ್ನವಾಗಿ ನಿಲ್ಲುತ್ತಾಳೆ. ರಾಮಾಯಣದಲ್ಲಿ ವಾಲ್ಮೀಕಿ ಮಹರ್ಷಿಗಳು ಕೌಸಲ್ಯೆಯ ಮತ್ತು ಸುಮಿತ್ರೆಯ ವಿಷಯವಾಗಿ ಸ್ವಲ್ಪವನ್ನಾದರೂ ವಿವರಿಸಿದ್ದಾರೆ. ವ್ಯಾಸರು ಕುಂತಿ ಮತ್ತು ಗಾಂಧಾರಿಯ ಕುರಿತು ತಿಳಿಸಿದ್ದಾರೆ. ದೇವಕಿಯ ವಿಷಯದಲ್ಲಿ ಮಾತ್ರ ಹುಟ್ಟಿದ ಮಕ್ಕಳೆಲ್ಲರೂ ತನ್ನ ಕಣ್ಣೆದುರೇ ಅಣ್ಣನಾದ ಕಂಸನಿಂದ ಕೊಲ್ಲಲ್ಪಟ್ಟಾಗ ಆಕೆಯ ಹೃದಯವು ಚೀರಿಕೊಂಡ ಬಗೆಯ ಕುರಿತು ಯಾವ ಗ್ರಂಥದಲ್ಲಿಯಾದರೂ ಇದೆಯೋ ಎಂದು ಗಮನಿಸಿದರೆ ಎಲ್ಲಿಯೂ ಕಾಣಿಸುತ್ತಿಲ್ಲ. ಎಲ್ಲಾ ಕಡೆಯೂ ಆಕೆಯನ್ನು ಭಾಗ್ಯಶಾಲಿ ಎಂದೇ ಚಿತ್ರಿಸಿದ್ದಾರೆ.
ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ಬದುಕಿನ ನಶ್ವರತೆಯನ್ನು ಹೇಳುವಾಗ ಕೃಷ್ಣನ ಮಹಾತ್ಮೆಯಲ್ಲಿ ದೇವಕಿಯ ಪೂರ್ವಜನ್ಮದ ಚರಿತ್ರೆಗಳನ್ನು ಹೇಳುತ್ತಾ ಅವಳನ್ನು ದೈವೀಸಂಭೂತಳು ಎಂದು ವೈಭವೀಕರಿಸಿದ್ದಾರೆ. ಆಕೆ ಯಾವ ಯಾವ ಜನ್ಮದಲ್ಲಿಯೋ ಪರಮಾತ್ಮನ ಕುರಿತು ತಪಸ್ಸು ಮಾಡಿರಬಹುದಾದರೂ ಭಗವದ್ಗೀತೆಯಲ್ಲಿ ಹೇಳಿರುವಂತೆ ಈ ಜನ್ಮದಲ್ಲಿ ಅನುಭವಿಸಿದ ಕರ್ಮಗಳಿಗೆ ನೋವು, ವಿಷಾದ, ಪರಿತಾಪಗಳಿಗೆಲ್ಲ ಬೆಲೆಯೇ ಇಲ್ಲವಾಗಿಬಿಟ್ಟಿವೆ. ಕುಂತಿ, ಗಾಂಧಾರಿ, ಸತ್ಯವತಿ, ಅಂಬೆ ಹೀಗೆ ಅನೇಕ ಸ್ತ್ರೀಯರ ನೋವುಗಳಿಗೆ ಇಂಬು ಕೊಟ್ಟ ಮಹಾಭಾರತದ ಚರಿತ್ರೆಯಲ್ಲಿಯಾಗಲೀ, ಭಾಗವತದಲ್ಲಿಯಾಗಲೀ, ಇಲ್ಲವೇ ಹರಿವಂಶದಲ್ಲಿಯಾಗಲೀ ದೇವಕಿಯ ಕುರಿತು ವಿವರಗಳು ಬಂದಿವೆಯಾದರೂ ಈ ಪಾತ್ರ ಕೇವಲ ಕೃಷ್ಣ ಎನ್ನುವ ಪರಮಾತ್ಮನನ್ನು ಭೂಮಿಗೆ ಕೊಟ್ಟವಳು ಎನ್ನುವ ವಿವರವಿದೆಯೇ ಹೊರತು ಆಕೆಯ ಮನದ ನೋವನ್ನು ಹೊರಹಾಕುವ ಪ್ರಯತ್ನವನ್ನು ಮಹಾಕಾವ್ಯ ಮತ್ತು ಪುರಾಣಗಳಲ್ಲಿಲ್ಲ. ಹೆಚ್ಚೇನು ಸಂಸ್ಕೃತದಲ್ಲಿಯಾಗಲಿ, ಬೇರೆ ಭಾಷೆಯಲ್ಲಿಯಾಗಲೀ ಯಾರೂ ಇವಳ ಕಡೆ ಗಮನವನ್ನೇ ಹರಿಸಿಲ್ಲ.
ದೇವಕಿಯ ಪ್ರವೇಶ ಭಾಗವತದಲ್ಲಿ ಆಗುವುದು ಆಕೆಯ ಮದುವೆಯ ಕಾಲದಲ್ಲಿ. ಮಥುರಾ ಪಟ್ಟಣ ಸಮಸ್ತ ಯದುವಂಶೀಯ ರಾಜರಿಗೂ ರಾಜಧಾನಿಯಾಗಿತ್ತು. ಈಕೆ ದೇವಕ ಎನ್ನುವವನ ಮಗಳು. ಈ ದೇವಕ ಮಥುರೆಯ ದೊರೆಯಾದ ಶೂರಸೇನನ ಅಣ್ಣ. ಶೂರಸೇನನ ಮಗ ಕಂಸ. ಈತ ಮಹಾ ಕ್ರೂರಿಯಾಗಿದ್ದ. ಆದರೆ ಈತನಿಗೆ ತನ್ನ ಚಿಕ್ಕಪ್ಪನ ಮಗಳಾದ ದೇವಕಿಯೆಂದರೆ ತುಂಬಾ ಪ್ರೀತಿ. ಆಕೆಯ ಲಗ್ನವನ್ನು ವಸುದೇವ ಎನ್ನುವ ವೃಷ್ಣೀ ವಂಶದವನೊಂದಿಗೆ ನಿಶ್ಚಯಿಸಿದ. ವಸುದೇವ ಜನಿಸಿದ ಕಾಲಕ್ಕೆ ದೇವತೆಗಳು ಆನಕಾ(ತಮ್ಮಟೆ) ಮತ್ತು ದುಂದುಭಿ (ನಗಾರಿ)ಯನ್ನು ಭಾರಿಸಿದ ಕಾರಣದಿಂದ ಈತನಿಗೆ ಆನಕದುಂದುಭಿಯೆನ್ನುವ ಹೆಸರೂ ಇತ್ತು. ಈತನ ತಂದೆ ಶೂರನೆನ್ನುವವ. ಕುಂತಿ ಈತನ ಸಹೋದರಿ.
ವಸುದೇವನಿಗೆ ದೇವಕಿ ಮೊದಲ ಹೆಂಡತಿಯೇನೂ ಆಗಿರಲಿಲ್ಲ. ಈ ಮೊದಲೇ ಆತನಿಗೆ ಮದುವೆಯಾಗಿತ್ತು. ಕೆಲವೊಂದು ಕಡೆ ಈ ಸಂಖ್ಯೆ ಹದಿನೆಂಟು, ಇನ್ನು ಕೆಲವುಕಡೆ ಹದಿನಾಲ್ಕು ಮಂದಿ ಪತ್ನಿಯರಿದ್ದರು ಎನ್ನುವುದನ್ನು ತಿಳಿಸುತ್ತದೆ. ಅಂತೂ ಆತ ಬಹುಪತ್ನಿ ವಲ್ಲಭನಾಗಿದ್ದ. ಮೊದಲೇ ತಿಳಿಸಿದಂತೆ ತನ್ನ ಪ್ರೀತಿಯ ತಂಗಿಯ ಮದುವೆಯನ್ನು ಕಂಸ ವೈಭವದಿಂದಲೇ ಮಾಡಿ ತಾನೇ ಮದುಮಕ್ಕಳಿರುವ ರಥವನ್ನು ಬಲು ವೈಭವದಿಂದ ನಡೆಸಿಕೊಂಡು ಹೊರಟ. ಆಗಲೇ ಅಶರೀರವಾಣಿಯೊಂದು “ಅಸ್ಯಾಸ್ತ್ವಾಮಷ್ಟಮೋ ಗರ್ಭೋ ಹನಾ ಯಾಂ ವಹಸೇsಬುಧ” ನಿನ್ನ ತಂಗಿಯ ಎಂಟನೆಯ ಗರ್ಭದಲ್ಲಿ ಹುಟ್ಟುವ ಶಿಶುವು ನಿನಗೆ ಮೃತ್ಯುವಾಗುತ್ತದೆ ಎಂದು ಕಂಸನನ್ನು ಸಂಬೋಧಿಸಿ ಹೇಳಿತು.
ಮರಣಭಯ ಎಂಥವರನ್ನೂ ಕಂಗಾಲು ಮಾಡಿ ಅದಕ್ಕೆ ಕಾರಣವಾದವರ ಮೇಲೆ ಕ್ರೋಧ ಉಕ್ಕೇರುವಂತಾಗುತ್ತದೆ. ಕಂಸನ ಪ್ರೀತಿ ಕ್ರೋಧವಾಗಿ ಪರಿವರ್ತಿತವಾಯಿತು. ಅವಳನ್ನು ಕೊಂದೇ ಹಾಕುವೆ ಎಂದು ಕತ್ತಿಯನ್ನು ಎತ್ತಿದ. ಅಸಹಾಯಕತೆಯಿಂದ ದೇವಕಿ ನಡುಗುತ್ತಾ ಇದ್ದರೆ, ವಸುದೇವ ತತ್ತ್ವಜ್ಞಾನವನ್ನು ಕಂಸನಿಗೆ ಬೋಧನೆ ಮಾಡಲು ಹೊರಡುತ್ತಾನೆ. ಆದರೆ ಅದು ಆ ಕ್ರೂರಿಯ ಮೇಲೆ ಪರಿಣಾಮವನ್ನು ಬೀರದೇ ಹೋದಾಗ ಮರಣವೆನ್ನುವುದು ದೇವಕಿಯಿಂದಲ್ಲ, ಆಕೆಯ ಮಕ್ಕಳಿಂದ ತಾನೇ. ಆಕೆಯ ಗರ್ಭದಲ್ಲಿ ಜನಿಸಿದ ಎಲ್ಲ ಮಕ್ಕಳನ್ನು ನಿನಗೆ ತಂದೊಪ್ಪಿಸುತ್ತೇನೆ ಎಂದು ಭಾಷೆ ಕೊಟ್ಟ. ಈಗ ಕಂಸನಿಗೆ ಸಮಾಧಾನವಾದರೂ ದೇವಕಿಯ ಮನಸ್ಥಿತಿ ಹೇಗಿರಬಹುದೆನ್ನುವ ವಿವರಣೆ ಸಿಗುವುದಿಲ್ಲ. ಕಂಸ ಆಗ ಅವರನ್ನು ಸೆರಮನೆಗೆ ಅಟ್ಟಲಿಲ್ಲ; ವಸುದೇವ ತನ್ನ ಅರಮನೆಯಲ್ಲಿಯೇ ಇದ್ದ.
ಮೊದಲ ವರ್ಷಕ್ಕೆ ಮಗುವೊಂದು ಜನಿಸಿತು. ಕೊಟ್ಟ ಮಾತಿನಂತೆ ವಸುದೇವ ಆ ಹಸುಳೆಯನ್ನು ತಂದು ಕಂಸನಿಗೆ ಒಪ್ಪಿಸಿದ. ವಸುದೇವನಿಗೆ ಇನ್ನುಳಿದ ರಾಣಿಯರಿಂದ ಅದಾಗಲೇ ಮಕ್ಕಳಾಗಿದ್ದರು, (ಪುರಾಣಗಳಲ್ಲಿ ಬೇರೆ ಬೇರೆ ಸಂಖ್ಯೆಗಳಿವೆ). ಹಾಗಾಗಿ ಆತನಿಗೆ ಏನೂ ಅನಿಸಿರಲಿಲ್ಲವೇನೋ. ದೇವಕಿ ಅಷ್ಟು ಸುಲಭವಾಗಿ ತನ್ನಮೊದಲ ಮಗುವನ್ನು ಕೊಡಲು ಒಪ್ಪಿದಳೇ ಎನ್ನುವ ಪ್ರಶ್ನೆ ಇಲ್ಲಿ ಬರುತ್ತದೆ. ಗಂಡ ತನ್ನ ಮಕ್ಕಳನ್ನು ಕಂಸನಿಗೆ ಕೊಡುತ್ತೇನೆ ಎಂದಾಗ ಬಹುಶಃ ಕಾಲಕ್ರಮೇಣ ಆತನ ಕೋಪ ಕಳೆದು ತನ್ನ ಮೇಲಿನ ಮೊದಲಿನ ಪ್ರೀತಿಯೇ ಬಂದು ಎಲ್ಲವನ್ನೂ ಮರೆಯಬಹುದು ಎಂದು ಅಂದುಕೊಂಡಿದ್ದಳು. ಚೊಚ್ಚಲ ಹೆರಿಗೆಯಾದಾಗ ತಕ್ಷಣವೇ ಆ ಮಗುವನ್ನು ಕೊಡಲಿಲ್ಲ. ಆತನಿಗೆ ಕೀರ್ತಿಮಂತನೆನ್ನುವ ನಾಮಕರಣವೂ ಆಗಿತ್ತು. ವಸುದೇವನಿಗೆ ಹೆಂಡತಿಯಲ್ಲಿನ ಭೋಗವೇ ಮುಖ್ಯವಾಯಿತು. ತಾನು ಕೊಟ್ಟ ಮಾತಿನಂತೆ ಕಂಸನಿಗೆ ಶಿಶುವನ್ನು ಕೊಡಲು ಉದ್ಯುಕ್ತನಾದ. ತನ್ನ ಗಂಡ ಏಕಾಏಕಿ ಆ ಶಿಶುವನ್ನು ಎತ್ತಿಕೊಂಡು ಕಂಸನಲ್ಲಿ ಹೋಗುವಾಗ ತುಂಬಾ ರೋದಿಸಿದ್ದಾಳೆ. ವಿರಾಗಿಯಾದ ಶುಕಮುನಿಗೆ ದೇವಕಿಯ ಮನಸ್ಸಿನ ಭಾವನೆಯನ್ನು ವಿವರಿಸಲು ಗಂಟಲುಬ್ಬಿದೆ.
ಕೀರ್ತಿಮನ್ತಂ ಪ್ರಥಮಜಂ ಕಂಸಾಯಾನಕದುನ್ದುಭಿಃ I
ಆರ್ಪಯಾಮಾಸ ಕೃಚ್ಛೇಣ ಸೋsನೃತಾದತಿವಿಹ್ವಲಃ II ಭಾ. 10-1-57 II
ಬಹಳ ಕಷ್ಟದಿಂದ ಶಿಶುವನ್ನು ಕಂಸನಿಗೆ ಒಪ್ಪಿಸಬೇಕಾಯಿತಂತೆ ಎಂದು ಹೇಳಿ ಸುಮ್ಮನಾಗುತ್ತಾರೆ. ವಸುದೇವನಿಗೆ ತನ್ನ ಮಾತನ್ನು ಉಳಿಸಿಕೊಳ್ಳುವುದೇ ಮುಖ್ಯವಾಯಿತು ಎನ್ನುತ್ತಾರೆ. ಭಗವಂತನ ಭಕ್ತಿಯಲ್ಲಿ ಓರ್ವ ತಾಯಿಯ ಹೃದಯವಿದ್ರಾವಕ ರೋದನವೂ ಮುಚ್ಚಿಹೋಯಿತು. ಕಂಸನಿಗೂ ಈ ಶಿಶುವನ್ನು ನೋಡಿ ಕೂಲ್ಲಲು ಮನಸ್ಸಾಗುವುದಿಲ್ಲ. ವಸುದೇವನ ಪ್ರಾಮಾಣಿಕತೆಗೆ ಸಂತೋಷವಾಯಿತು. ಎಂಟನೆಯ ಮಗು ತನ್ನ ವೈರಿ ಎಂದು ತಿಳಿದು ಈ ಶಿಶುವಿನ ಸಂಗಡ ಸುಖವಾಗಿರಿ ಎಂದು ತಿರುಗಿ ಕಳುಹಿಸಿಕೊಟ್ಟ. ಆದರೆ ಈ ಭಾವ ಹೆಚ್ಚು ಹೊತ್ತು ಇರುವುದಿಲ್ಲ. ನಾರದರು ಬಂದು ಕಂಸನಿಗೆ ಯದುವಂಶೀಯರೆಲ್ಲರೂ ದೇವತೆಗಳ ಅಂಶವೆಂದು ಹೇಳಿಬಿಡುತ್ತಾರೆ. ಸ್ವಬಾವತಃ ಕ್ರೂರನಾದ ಕಂಸ ತನ್ನ ನಿಜಸ್ವಭಾವವನ್ನು ತೋರುತ್ತಾನೆ. ನೇರವಾಗಿ ಬಂದು ದೇವಕಿ ವಸುದೇವರನ್ನು ಕಾರಾಗೃಹದಲ್ಲಿ ಇರಿಸಿ ಅವರ ಕಣ್ಣೆದುರಿನಲ್ಲಿಯೇ ಮೊದಲ ಪುತ್ರನಾದ ಕೀರ್ತಿಮಂತನ ಸಮೇತ ನಂತರ ಹುಟ್ಟಿದ ಉಳಿದ ಆರು ಮಕ್ಕಳನ್ನೂ ಅವರೇ ವಿಷ್ಣುವಿರಬಹುದೇನೋ ಎನ್ನುವ ಸಂಶಯದಿಂದ ನಿರ್ದಯವಾಗಿ ಕೊಲ್ಲುತ್ತಾನೆ.
ಇಲ್ಲಿಯೂ ದೇವಕಿಯ ಪುತ್ರಶೋಕವನ್ನು ವಿವರಿಸದೇ ಎಲ್ಲರೂ ಮೃತ್ಯುವಶರಾದರೆನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲವೆಂದು ಬಿಡುತ್ತಾರೆ ಶುಕಮುನಿಗಳು. ಅವಳ ಏಳನೆಯ ಗರ್ಭ ಜಾರಿ ಅದನ್ನು ವಸುದೇವನ ಹಿರಿಯ ಪತ್ನಿ ರೋಹಿಣಿಯ ಗರ್ಭದಲ್ಲಿ ಸ್ಥಾಪಿಸಿದಾಗ ಆ ಕಂದ ಅಲ್ಲಿ ಬದುಕಿದ ಎಂದು ಸಮಾಧಾನವಾಗುತ್ತದೆ. ಎಂಟನೆಯ ಸಲ ದೇವಕಿ ಗರ್ಭವತಿಯಾದಾಗ ಅವಳಲ್ಲಿ ಅಲೌಕಿಕ ಪ್ರಭೆ ಇತ್ತಂತೆ. ಅವಳನ್ನು ನೋಡಲು ಬಂದ ಕಂಸನಿಗೆ ತನ್ನನ್ನು ಕೊಲ್ಲವು ಜನಿಸುವ ಪುತ್ರ ಈ ಗರ್ಭದಲ್ಲಿರುವವನೇ ಎನ್ನುವುದರಿವಾಯಿತು. ದೇವಕಿಯನ್ನೇ ಕೊಲ್ಲಬೇಕೆಂದು ಅಂದುಕೊಂದರೆ ಆಕೆ ಹೆಣ್ಣು ಮೇಲಾಗಿ ತನ್ನ ತಂಗಿ ಎನ್ನುವ ಭಾವ ಅವನನ್ನು ತಡೆಯಿತು. ದೇವಕಿಗೆ ಹಾಗಲ್ಲ, ತನಗೇ ಸಾವು ಬಂದರೂ ಚಿಂತೆಯಿಲ್ಲ; ತನ್ನ ಮಗುವಾದರೂ ಬದುಕಿಕೊಳ್ಳಲಿ ಎಂದು ಅನಿಸುತ್ತಿದ್ದಿರಬೇಕು,
ಎಂಟನೆಯ ಗರ್ಭವನ್ನು ತಾಳಿದಾಗ ಅವಳಿಗೆ ಮಗುವಿನ ಮೇಲಿನ ಮಮಕಾರಗಳೆಲ್ಲವೂ ಹೊರಟುಹೋಗಿರಬೇಕು. ಲಾಲಿಸಿ ಒಂದಲ್ಲ, ಎರಡಲ್ಲ, ಏಳು ಮಕ್ಕಳು ಹುಟ್ಟಿಯೂ ಕೈಗೆ ಸಿಗದೇ ಹೋದಾಗ ಮತ್ಯಾವ ಆಶೆ ಉಳಿದೀತು ಆಕೆಗೆ. ದೇಹವನ್ನು ಕೊರಡಿನಂತೆ ಒಪ್ಪಿಸಿರಬೇಕು, ಫಲ ಬಂದಾಗ ನಿರ್ಲಿಪ್ತಳಾಗಿರುವ ವೈರಾಗ್ಯ ಭಾವ ತನ್ನಿಂದ ತಾನೇ ಮೂಡಿದೆ. ಆದರೂ ಪ್ರಸವವೇದನೆಯಿಂದ ಎಚ್ಚರಾದಾಗ ಪಕ್ಕದಲ್ಲಿ ಕಾಣಿಸಿದ ಹೆಣ್ಣು ಶಿಶುವನ್ನು ನೋಡಿ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಈ ಮಗುವನ್ನೂ ಕಂಸ ಕೊಲ್ಲಲು ಬಂದಾಗ ಅಣ್ಣನ ಹತ್ತಿರ “ನಾನು ನಿನ್ನ ತಂಗಿಯಲ್ಲವೇ, ನನ್ನ ಹಲವಾರು ಮಕ್ಕಳನ್ನು ಕಳೆದುಕೊಂಡಿರುವೆ. ಈಗ ಹುಟ್ಟಿರುವುದು ಹೆಣ್ಣು ಶಿಶು. ಇದು ಏನು ಮಾಡೀತು. ಇದನ್ನಾದರೂ, ಅದೂ ಹೆಣ್ಣು ಕಂದವೆನ್ನುವ ಕಾರಣಕ್ಕಾದರೂ ಉಳಿಸು” ಎಂದು ಬಿಕ್ಕಿ ಬಿಕ್ಕಿ ಬೇಡಿಕೊಳ್ಳುತ್ತಾಳೆ. ಎಂತಹ ಕ್ರೂರಿಗಳ ಹೃದಯವೂ ಕರಗಬೇಕು.
ಆದರೆ ಕಂಸನ ಹೃದಯ ಕರಗಲಿಲ್ಲ. ಆತನಿಗೆ ಯಾವುದೇ ವರಬಲವಿರಲಿಲ್ಲ. ತನ್ನಲ್ಲಿರುವ ಸ್ವಸಾಮರ್ಥ್ಯದಿಂದಲೇ ಮೆರೆಯುತ್ತಿದ್ದ. ಯೋಗಮಾಯೆಯಾಗಿದ್ದ ಆ ಶಿಶುವನ್ನು ಕೊಲ್ಲಲು ಎತ್ತಿದಾಗ ಆ ಶಿಶು ಆಕಾಶಕ್ಕೆ ಹಾರಿ “ನಿನ್ನನ್ನು ಕೊಲ್ಲುವ ಶಿಶು ಎಲ್ಲಿಯೋ ಒಂದು ಕಡೆ ಬೆಳೆಯುತ್ತಿದೆ” ಎಂದು ಉಸುರಿ ಗಹಗಹಿಸಿ ನಕ್ಕು ಹಾರಿ ಮರೆಯಾಯಿತು. ಅಂತೂ ತನ್ನ ಪ್ರಯತ್ನ ವಿಫಲವಾಯಿತೆಂದು ತಿಳಿದ ಕಂಸನಿಗೆ ಪಶ್ಚಾತ್ತಾಪವಾಯಿತು. ಕಂಸನದ್ದು ಇಲ್ಲಿ ಒಂದು ವಿಲಕ್ಷಣ ವ್ಯಕ್ತಿತ್ವ. ಎಲ್ಲಿಯೋ ಒಂದು ಕಡೆ ಅವನಿಗೆ ಅಂತಃಕರಣದಲ್ಲಿ ನೋವಿದೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಅಮಾಯಕರಾದ ಶಿಶು ಹತ್ಯೆಯ ಕುರಿತು ವಿಷಾದಗಳಿವೆ. ವಸುದೇವ ದೇವಕಿಯರ ಕಾಲನ್ನು ಹಿಡಿದುಕೊಂಡು ತನ್ನನ್ನು ಕ್ಷಮಿಸುವಂತೆ ಬೇಡಿಕೊಳ್ಳುತ್ತಾನೆ. ಜನನ ಮರಣದ ಕುರಿತು ತತ್ತ್ವೋಪದೇಶವನ್ನು ಮಾಡುತ್ತಾನೆ. ಕಂಸ ಸರಿಯಾದ ಮಾರ್ಗದಲ್ಲಿ ಸಾಗಿದ್ದರೆ ಮತ್ತೋರ್ವ ಜನಕ ಮಹಾರಾಜನಂತಹ ರಾಜರ್ಷಿಯಾಗಬಹುದಾದ ಗುಣಗಳಿದ್ದವು. ಆದರೆ ಎಲ್ಲವೂ ಆತನ ಕ್ರೂರಸ್ವಭಾವದಲ್ಲಿ ಮರೆಯಾಗಿಬಿಟ್ಟಿತು.
ದೇವಕಿಯ ಮನಸ್ಸು ಎಷ್ಟೊಂದು ಉದಾರವಾಗಿತ್ತು ಎನ್ನುವುದು ವ್ಯಕ್ತವಾಗುವುದು ಈಗ. ಯಾವ ಅಣ್ಣ ನಿಷ್ಕರುಣೆಯಿಂದ ತನ್ನ ಹಸುಗೂಸುಗಳನ್ನೆಲ್ಲವನ್ನೂ ಕೊಂದು ಹಾಕಿದ್ದನೋ ಅದೇ ಅಣ್ಣ ತನ್ನನ್ನು ಕ್ಷಮಿಸು ಎಂದಾಗ ಆಕೆಗೆ ಆತನಿಂದಾದ ಬವಣೆಗಳನ್ನು ಮರೆತು ಬಿಡುತ್ತಾಳೆ. ಉದಾರವಾಗಿ ಅಣ್ಣನಿಗೆ “ವತ್ಸʼ ಎಂದು ಕರೆದು ಆತನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ತಾನೂ ಅಳುತ್ತಾಳೆ. ಕಂಸ ತನ್ನ ಕೃತ್ಯಕ್ಕೆ ಜುಗುಪ್ಸೆಯನ್ನು ಹೊಂದಿ ಪಶ್ಚಾತ್ತಾಪಪಡುತ್ತಿರುವುದನ್ನು ಕಂಡು “ನಿನು ತನಗೆ ಮಾಡಿರುವ ಗರ್ಭಛೇದನವನ್ನು ಕ್ಷಮಿಸಿದ್ದೇನೆ” ಎನ್ನುವ ಮಮತಾಮಯಿ ಆಕೆ. “ಕಾರಣಂ ತ್ವಂ ವೈ ಪುತ್ರ ಕೃತಾನ್ತೋsಪ್ಯತ್ರ ಕಾರಣಮ್” ಕಾಲನಿಗೆ ನೀನು ನಿಮಿತ್ತ ಮಾತ್ರ; ಇದೆಲ್ಲವೂ ಕಾಲಚೋದಿತವಾದದ್ದು. ಹಾಗಾಗಿ ನಿನ್ನದೇನೂ ತಪ್ಪಿಲ್ಲವೆನ್ನುವಾಗ ದೇವಕಿಯ ದೊಡ್ಡಗುಣ ಎದ್ದು ಕಾಣುತ್ತದೆ. ಆಕೆಗೆ ಕಣ್ಣೀರು ಇಂಗಿಹೋಗಿದೆ. ಮತ್ತೇನು ಉಳಿದೀತು. ಎಲ್ಲ ಕಳೆದುಕೊಂಡಮೇಲೆ ಬರುವ ಭಾವವವೇ ವಿರಕ್ತಿ. ಈ ವಿರಕ್ತಿಭಾವವೇ ಆಕೆಯಿಂದ ಈ ಮಾತುಗಳನ್ನಾಡಿಸಿದೆ. ಹರಿವಂಶದಲ್ಲಿ ದೇವಕಿಯ ಈ ಉದಾತ್ತಭಾವದ ಮಾತುಗಳನ್ನು ಓದುತ್ತಿದ್ದರೆ ನಾವೇ ಆಕೆಯ ಸ್ಥಿತಿಗಾಗಿ ಮರುಗುತ್ತೇವೆ.
ಪುತ್ರಶೋಕವೆನ್ನುವುದು ನಿರಂತರವಾಗಿರುತ್ತದೆ. ಸಾಕ್ಷಾತ್ ಭಗವಂತನೇ ತನ್ನ ಮಗ ಎನ್ನುವುದನ್ನು ತಿಳಿದರೂ ದೇವಕಿಗೆ ತನ್ನ ಕಳೆದು ಹೋದ ಆರು ಮಕ್ಕಳ ಚಿಂತೆ ಸದಾ ಬಾಧಿಸುತ್ತಿತ್ತು. ಹೀಗಿರುತ್ತ ಕೃಷ್ಣ ತನ್ನ ಗುರುಗಳಾದ ಸಾಂದೀಪಿನಿಯ ಸತ್ತುಹೋದ ಮಗನನ್ನು ಯಮರಾಜನಿಂದ ಶ್ರೀಕೃಷ್ಣನು ಮರಳಿ ತಂದುಕೊಟ್ಟ ಎನ್ನುವ ಘಟನೆಯನ್ನು ಕೇಳುವಾಗ ಕಳೆದುಹೋದ ತನ್ನ ಮಕ್ಕಳನ್ನೂ ಒಮ್ಮೆ ನೋಡಬೇಕೆನ್ನುವ ಆಶೆ ಆಕೆಯ ಮನಸ್ಸಿನಲ್ಲಿಯೂ ಚಿಗುರುತ್ತದೆ. ಕೃಷ್ಣನ ಬಾಲಲೀಲೆಗಳನ್ನಂತೂ ನೋಡುವ ಯೋಗ ಸಿಗಲಿಲ್ಲ; ತನ್ನ ಮಗುವಿಗೆ ಹಾಲುಣಿಸುವ ಭಾಗ್ಯವೂ ಇಲ್ಲವಾಯಿತು. ಎಲ್ಲವೂ ಯಶೋದೆಯ ಪಾಲಾಯಿತು. ಈ ನೆನಪುಗಳು ಆಕೆಯನ್ನು ಹಿಂಡುತ್ತಿದ್ದವು. ಕೃಷ್ಣ ಮತ್ತು ಬಲರಾಮರಿಗೆ ಕೈ ಜೋಡಿಸಿ ಕಂಸನಿಂದ ಗತಿಸಿಹೋದ ತನ್ನ ಆರು ಮಕ್ಕಳನ್ನು ನೋಡುವ ಆಶೆಯನ್ನು ವ್ಯಕ್ತಪಡಿಸುತ್ತಾಳೆ. ಕೃಷ್ಣ ಅದಕ್ಕೆ ಒಪ್ಪಿಗೆಯನ್ನಿತ್ತು ಸುತಲಲೋಕಕ್ಕೆ ಹೋಗಿ ಅಲ್ಲಿಂದ ದೇವಕಿಯ ಆರು ಮಕ್ಕಳನ್ನೂ ತಂದು ತಾಯಿಯ ಮಡಿಲಲ್ಲಿ ಹಾಕಿದಾಗ ಆ ತಾಯಿಯ ಸಂತಸ ವರ್ಣಿಸಲಸದಳ. ಕೊರಡಾಗಿಹೋದ ಆಕೆಯ ಬಾಳಲ್ಲಿ ಮತ್ತೆ ಚಿಗುರು ಮೂಡುತ್ತದೆ. ಅವಳ ಎದೆಯಲ್ಲಿ ಹಾಲು ಉಕ್ಕೇರುತ್ತದೆ. ಮಕ್ಕಳನ್ನು ತೊಡೆಯಮೇಲೆ ಮಲಗಿಸಿ ಹಾಲು ಕುಡಿಸಿದಳು. ಕೃಷ್ಣ ಜನಿಸಿದ ತಕ್ಷಣವೇ ಒಮ್ಮೆ ಎದೆಹಾಲನ್ನು ಕುಡಿಸಿ ಆತನನ್ನು ಗೋಕುಲಕ್ಕೆ ಕಳುಹಿಸಿರಬೇಕು, ಅವ ಕುಡಿದು ಮಿಕ್ಕುಳಿದ ಹಾಲಾದುದರಿಂದ ಅದು ಅಮೃತವೇ ಆಗಿತ್ತಂತೆ. ಸ್ಮರ(ಕೀರ್ತಿಮಂತ), ಉದ್ಗೀಥ, ಪರಿಷ್ವಂಗ, ಪತಂಗ, ಕ್ಷುದ್ರಭೃತ ಮತ್ತು ಘೃಣೀ ಎನ್ನುವ ಈ ಆರೂ ಮಕ್ಕಳು ಅಮೃತಮಯವಾದ ಆ ಎದೆ ಹಾಲನ್ನು ಕುಡಿದ ಕಾರಣದಿಂದ ಮತ್ತು ಶ್ರೀಕೃಷ್ಣನ ಅಂಗಸ್ಪರ್ಶದಿಂದಲೂ ಯೋಗಿಗಳಿಗೂ ದುರ್ಲಭವೆನಿಸಿದ ಆತ್ಮಸಾಕ್ಷಾತ್ಕಾರವನ್ನು ಪಡೆದುಕೊಂಡು ದಿವ್ಯರಥದಲ್ಲಿ ಕುಳಿತು ದೇವಲೋಕಕ್ಕೆ ಪ್ರಯಾಣ ಬೆಳೆಸಿದರು.
ಯಶೋದೆಗೆ ಸಕಲ ಭಾಗ್ಯವೂ ದೊರಕಿತು. ವಸುದೇವನ ಇನ್ನಿತರ ರಾಣಿಯರಿಗೂ ಮಕ್ಕಳ ಲಾಲನೆ ಪಾಲನೆಯ ಯೋಗ ಸಿಕ್ಕಿದರೆ ಅದೆಲ್ಲದರಿಂದಲೂ ವಂಚಿತಳಾದವಳು ಈಕೆ. ಜಗದ್ವಂದ್ಯನನ್ನು ಜಗಕ್ಕೆ ಕೊಡಬೇಕಾದ ಅನಿವಾರ್ಯತೆಯಲ್ಲಿ ಮಕ್ಕಳಾಡಿಸುವ ಭಾಗ್ಯದಿಂದ ವಂಚಿತಳಾದವಳು.