Site icon Vistara News

ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಧವಳ ಧಾರಿಣಿ ಅಂಕಣ dasharatha sumantra

ಸುಮಂತ್ರ ಭಾಗ 1; ರಾಜ್ಯದ ರಹಸ್ಯಗಳನ್ನು ನಿಗೂಢವಾಗಿರಿಸಿದ ಮುತ್ಸದ್ಧಿ

ಧವಳ ಧಾರಿಣಿ ಅಂಕಣ: ತಸ್ಯಾಮಾತ್ಯಾ ಗುಣೈರಾಸನ್ನಿಕ್ಷ್ವಾಕೋಸ್ತು ಮಹಾತ್ಮನಃ
ಮನ್ತ್ರಜ್ಞಾಶ್ಚೇಙ್ಗಿತಜ್ಞಾಶ್ಚ ನಿತ್ಯಂ ಪ್ರಿಯಹಿತೇ ರತಾ: ৷৷ಬಾ.7.1৷৷

ಇಕ್ಷ್ವಾಕು ವಂಶದಲ್ಲಿ ಹುಟ್ಟಿದ ಮಹಾತ್ಮನಾದ ದಶರಥನಿಗೆ (king Dasharatha) ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಕಾರ್ಯವಿಚಾರತತ್ಪರರಾದ ಮತ್ತು ಪರರಮನಸಿನಲ್ಲಿರುವುದನ್ನು ಮುಖಭಾವದಿಂದಲೇ ತಿಳಿಯುಬಲ್ಲ, ಯಾವಾಗಲೂ ರಾಜನ ಹಿತರಕ್ಷಣೆಯಲ್ಲಿಯೇ ನಿರತರಾಗಿರುವ ಮಂತ್ರಿಗಳಿದ್ದರು.

ಮಂತ್ರಿಗಳ ವಿಚಾರಕ್ಕೆ ಬರುವಾಗ ರಾಮಾಯಣದ (Ramayana) ಪ್ರಾರಂಭದ ಬಾಲಕಾಂಡಗಳಿಂದ ಹಿಡಿದು ಕೊನೆಯ ಉತ್ತರಕಾಂಡದ ಸೀತಾವಿಯೋಗದ ವರೆಗಿನ ಭಾಗಗಳಲ್ಲಿ ಕಂಡುಬರುವ ಪ್ರಮುಖ ಹೆಸರು ಸುಮಂತ್ರ (Sumantra) ಎನ್ನುವ ಮಹಾ ಅಮಾತ್ಯನದ್ದು. ಅಯೋಧ್ಯೆಯ ಹಿತವನ್ನು ಕಾಪಾಡಲು ಅಷ್ಟ ಮಂತ್ರಿಗಳಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳಿದ್ದರು. ಅವರಲ್ಲಿ ಸುಮಂತ್ರನೆನ್ನುವ ಕೇವಲ ಮಂತ್ರಿ ಎನ್ನುವುದಕ್ಕಿಂತ ರಾಜನ ಅಂತರಂಗದ ಆಪ್ತನೂ ಆಗಿದ್ದ. ಅರ್ಥಶಾಸ್ತ್ರದಲ್ಲಿ ಸುಬಧ್ರವಾದ ರಾಜ್ಯಕ್ಕೆ “ರಾಜ, ಅಮಾತ್ಯ, ಜನಪದ, ದುರ್ಗ, ಕೋಶ, ಸೈನ್ಯ ಅಥವಾ ದಂಡ ಮತ್ತು ಮಿತ್ರ” ಎನ್ನುವ ಸಪ್ತಾಂಗ ಬಹಳ ಮಹತ್ವದ್ದು. ಅಮಾತ್ಯರಲ್ಲಿ ಮಂತ್ರಿಗಳು ಮತ್ತು ಪುರೋಹಿತ ವರ್ಗ ಎನ್ನುವ ಎರಡು ವಿಧಗಳಿವೆ. ದಕ್ಷ ಆಡಳಿತಕ್ಕೆ ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು.

ಸುಮಂತ್ರ ಎನ್ನುವ ಮಂತ್ರಿ ಅಯೋಧ್ಯೆಯ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ. ಆಯೋಧ್ಯೆಯಲ್ಲಿ ಸಚಿವ ಪದವಿಯೆನ್ನುವುದು ವಂಶಪರಂಪರೆಯ ಕಾರಣ ಮಾತ್ರದಿಂದಲೇ ಬರುತ್ತಿರಲಿಲ್ಲ. ಅವರಲ್ಲಿ ಯೋಗ್ಯತೆಯೂ ಇರಬೇಕಾಗಿತ್ತು. ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ, ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ.

ರಾಜನ ಆಪ್ತಸಲಹೆಗಾರ

ದಶರಥ ಮಹಾರಾಜನ ಬಾಲ್ಯದ ಒಡನಾಡಿ ಇವನಾಗಿದ್ದ. ಬಹುಶಃ ದಶರಥನದೇ ವಯಸ್ಸು ಈತನಿಗೆ. ಈ ಕಾರಣದಿಂದಲೇ ದಶರಥನಿಗೆ ಆತ ನಂಬಿಗಸ್ಥ ಮಂತ್ರಿಯಾಗಿದ್ದನು. ಆತನ ಅಂತರಂಗದ ಆಪ್ತನೂ ಆಗಿದ್ದನು. ದಶರಥ ಕೌಸಲ್ಯೆ ಮತ್ತು ಸುಮಿತ್ರೆ ಇಬ್ಬರನ್ನೂ ಮದುವೆಯಾಗಿ ಹಲವುಕಾಲ ಕಳೆದಿದ್ದರೂ ಅವರಿಬ್ಬರಲ್ಲಿ ಮಕ್ಕಳಾಗಿರಲಿಲ್ಲ. ಅಯೋಧ್ಯೆಯ ಸಿಂಹಾಸನಕ್ಕೆ ವಾರಸುದಾರರು ಇಲ್ಲದೆ ಇರುವ ಕಾರಣದಿಂದ ಮತ್ತೊಂದು ಮದುವೆಯಾಗಲು ಕನ್ಯಾನ್ವೇಷಣೆಗೆ ದೊರೆ ತೊಡಗಿದ. ಆಗ ಆತನಿಗೆ ಕೇಕೇಯದ ದೊರೆ ಅಶ್ವಪತಿಗೆ ಕೈಕೇಯಿ ಎನ್ನುವ ಸುಂದರಿಯಾದ ಮಗಳು ಇರುವ ವರ್ತಮಾನ ಬಂತು. ಆಕೆಯನ್ನು ಮದುವೆಯಾಗುವ ಉದ್ಧೇಶದಿಂದ ಅಶ್ವಪತಿರಾಜನಲ್ಲಿ ಕೇಳಿದಾಗ ಆ ದೊರೆ “ತನ್ನ ಮಗಳಲ್ಲಿ ಜನಿಸುವ ಪುತ್ರನಿಗೆ ರಾಜ್ಯದ ಉತ್ತರಾಧಿಕಾರ ಸಿಗಬೇಕೆಂದು” ನಿಯಮ ಹಾಕಿ ಅದಕ್ಕೆ ಒಪ್ಪುವುದಾದರೆ ಮಗಳನ್ನು ಕೊಡುವೆ ಎಂದ. ದಶರಥನಿಗೆ ಮದುವೆ ಆಗಬೇಕಾಗಿತ್ತು. ಅದಾಗಲೇ ಆತನಿಗೆ ಇಬ್ಬರು ಹೆಂಡತಿಯರ ಜೊತೆ ಇನ್ನು ಮುನ್ನೂರೈವತ್ತು ಉಪಪತ್ನಿಯರೂ ಇದ್ದರು. ಪಟ್ಟಮಹಿಷಿಯರಲ್ಲಿ ಜನಿಸಿದವರಿಗೆ ಮಾತ್ರ ರಾಜ್ಯದ ಅಧಿಕಾರಕ್ಕೆ ಏರುವ ಅರ್ಹತೆ ಇರುತ್ತಿತ್ತು. ಹೇಗಿದ್ದರೂ ಮೊದಲ ಇಬ್ಬರು ಪತ್ನಿಯರಿಗೆ ಮಕ್ಕಳಿಲ್ಲ, ಹಾಗಾಗಿ ಕೈಕೇಯಿಯಲ್ಲಿ ಜನಿಸಿದ ಮಕ್ಕಳಿಗೆ ಸಹಜವಾಗಿ ಅಧಿಕಾರ ಸಿಗುತ್ತದೆ ಎನ್ನುವ ಕಾರಣಕ್ಕೆ ದೊರೆ ಮರುಮಾತಿಲ್ಲದೇ ಒಪ್ಪಿಕೊಂಡ.

ಈ ವಿಷಯಕ್ಕೆ ಸಾಕ್ಷಿಯಾಗಿ ಸುಮಂತ್ರ ಮಾತ್ರವೇ ಇದ್ದ. ಆದರೆ ಬುದ್ಧಿವಂತನಾದ ದಶರಥ ಮತ್ತು ಸುಮಂತ್ರ ಇಬ್ಬರೂ ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಅಶ್ವಪತಿ ತನ್ನ ಮಗಳಾದ ಕೈಕೇಯಿಗೂ ಈ ಮಾತನ್ನು ಹೇಳಿರಲಿಲ್ಲ. ನಂತರ ಅದು ಹೇಗೋ ರಾಮನಿಗೆ ತಿಳಿದಿತ್ತು. ರಾಜನಾಗುವಿಕೆ ಎಂದರೆ ಅದಕ್ಕೆ ಇನ್ನಿತರ ಯೋಗ್ಯತೆಯೂ ಬೇಕಿತ್ತು. ಭರತ ವನವಾಸಕ್ಕೆ ಬಂದಾಗ ಆತನಲ್ಲಿ ರಾಮ, ದಶರಥ ಕನ್ಯಾಶುಲ್ಕವಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯ ಹೇಳುತ್ತಾನೆ. ಮದುವೆಯಾಗುವಾಗ ಸುಳ್ಳು ಹೇಳಬಹುದು ಎನ್ನುವ ಕಾರಣಕ್ಕೆ ರಾಜ್ಯದ ಹಿತರಕ್ಷಣೆಯಿಂದ ಸುಮಂತ್ರ ಈ ವಿಷಯನ್ನು ಮುಚ್ಚಿಟ್ಟಿದ್ದ. ಮಹಾಭಾರತದಲ್ಲಿ “ಮನ್ತ್ರಗೂಢಾ ಹಿ ರಾಜಸ್ಯ ಮನ್ತ್ರಿಣೋ ಯೇ ಮನೀಷಿಣಃ – ಬುದ್ಧಿವಂತರಾದ ಮಂತ್ರಿಗಳೇ ರಾಜ್ಯದ ರಾಜ ರಹಸ್ಯಗಳನ್ನು ನಿಗೂಢವಾಗಿರಿಸುತ್ತಾರೆ” ಎನ್ನುವ ವಾಕ್ಯವಿದೆ. ಅದಕ್ಕೆ ತಕ್ಕಂತೆ ಇದ್ದವ ಸುಮಂತ್ರ.

ರಾಜ ಮತ್ತು ಅಮಾತ್ಯ ಈ ಇಬ್ಬರ ನಡುವೆ ಇರುವ ಸಂಬಂಧ ಪತಿ ಮತ್ತು ಧಾರಾ ಭಾವದಲ್ಲಿರಬೇಕು. ರಾಜನ ನಿರ್ಣಯದಲ್ಲಿ ದೋಷಕಂಡು ಅದರಲ್ಲಿ ಬದಲಾವಣೆ ಆಗಬೇಕಾದಾಗ ಬಹಿರಂಗವಾಗಿ ಆ ಕುರಿತು ಚರ್ಚಿಸಕೂಡದು. ಸಭಾಸದರ ಎದುರು ಸತ್ಯವೇ ಆದರೂ ಅದನ್ನು ಪ್ರಕಟಿಸಿದರೆ ರಾಜನ ಮಹತ್ವ ಕಡಿಮೆಯಾಗಿಬಿಡುತ್ತದೆ. ಸಚಿವನಾದವ ಹೆಂಡತಿ ತನ್ನ ಗಂಡನಿಗೆ ಏಕಾಂತದಲ್ಲಿ ಹೇಗೆ ಎಲ್ಲವನ್ನು ತಿಳಿಸಿ ಹೇಳುತ್ತಾಳೆಯೋ ಅದೇ ರೀತಿ ರಾಜ ಏಕಾಂತದಲ್ಲಿರುವಾಗ ಆತ ತೆಗೆದುಕೊಂಡ ನಿರ್ಣಯಗಳ ಕುರಿತು ವಿಮರ್ಶಿಸಿ ಮಾಡಬೇಕಾದ ಬದಲಾವಣೆಗಳನ್ನು ತಿಳಿಸಿ ಕಾರ್ಯರೂಪಕ್ಕೆ ತರುವಂತೆ ನೋಡಿಕೊಳ್ಳಬೇಕು. ದಶರಥನಿಗೆ ಬಹುಕಾಲದವರೆಗೂ ಮಕ್ಕಾಳಾಗಿಲ್ಲದ ಕಾರಣದಿಂದ ಆತ ತನ್ನ ಮಂತ್ರಿಗಳನ್ನು ಪುರೋಹಿತರಾದ ವಶಿಷ್ಠ, ವಾಮದೇವರನ್ನೂ ಕರೆಯಿಸಿ ಅವರಲ್ಲಿ ಪರಿಹಾರ ಕೇಳಿದಾಗ, ಅವರು ರಾಜನಿಗೆ ಅಶ್ವಮೇಧ ಯಾಗವನ್ನು ಮಾಡಲು ಸಲಹೆನೀಡುತ್ತಾರೆ. ಅದಕ್ಕೆ ದೊರೆ ಒಪ್ಪಿಗೆ ಸೂಚಿಸಿಯೂ ಆಗುತ್ತದೆ. ಆದರೆ ಅಲ್ಲೇ ಇದ್ದ ಸುಮಂತ್ರನಿಗೆ ಈ ಸಲಹೆ ಪೂರ್ತಿ ಮನಸ್ಸಿಗೆ ಬರಲಿಲ್ಲ. ಆತ ರಾಜನ ಅಂತಃಪುರಕ್ಕೆ ಸಾಯಂಕಾಲ ಬಂದು ರಾಜನಿಗೆ ಮಹತ್ವದ ವಿಷಗಳ ಕುರಿತು ಹೇಳುತ್ತಾನೆ.

ಸುಮಂತ್ರನ ಪಾತ್ರ ಮಹಾಭಾರತದ ವಿದುರನ ಪಾತ್ರವನ್ನು ಹೋಲುತ್ತದೆ. ಆತನಿಗೂ ವಿದುರನಂತೆ ಮಹಾನ್ ಋಷಿಗಳ ಸಂಪರ್ಕವಿತ್ತು. ಅವರಲ್ಲಿ ತನ್ನ ವಯಕ್ತಿಕವಾದ ವಿಷಯಗಳನ್ನು ಕೇಳುವುದಕ್ಕಿಂತ ಆತ ರಾಜ್ಯದ ಕಲ್ಯಾಣದ ವಿಷಯಗಳನ್ನು ಕೇಳುತ್ತಿದ್ದ. ಅಯೋಧ್ಯೆಯ ಅರಸನಿಗೆ ಮಕ್ಕಳಾಗಿಲ್ಲದ ವಿಷಯಗಳ ಕುರಿತು ಸುಮಂತ್ರನಿಗೂ ಚಿಂತೆ ಆಗಿತ್ತು. ಆ ಕುರಿತು ಆತ ಪರಿಹಾರಕ್ಕಾಗಿ ಅನೇಕ ಋಷಿಗಳನ್ನು ಬೇಡಿಕೊಳ್ಳುತ್ತಿದ್ದ. ಒಂದುಸಲ ಸುಮಂತ್ರ ಮಹಾತ್ಮರಾದ ಸನತ್ಕುಮಾರ ಋಷಿಗಳನ್ನು ಇನ್ನಿತರ ಮುನಿಗಳ ಸಮ್ಮುಖದಲ್ಲಿ ಭೇಟಿಯಾಗಿ ರಾಜನಿಗೆ ಮಕ್ಕಳಾಗುವಂತೆ ಬೇಡಿಕೊಂಡ. ಅದಕ್ಕೆ ಅವರು ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನ ವಿಚಾರವನ್ನು ಹೇಳಿ, ಆತನ ಚರಿತ್ರೆಯನ್ನು ಅಮಾತ್ಯನಿಗೆ ವಿವರಿಸುತ್ತಾರೆ. ಋಷ್ಯಶೃಂಗನನ್ನು ಹೆಣ್ಣುಗಳ ಮೋಹದಲ್ಲಿ ಕೆಡಹಿ ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ ರೋಮಪಾದ ರಾಜ ತನ್ನ ಮಗಳಾದ ಶಾಂತಾದೇವಿಯನ್ನು ಕೊಟ್ಟು ಮದುವೆಮಾಡಿದ್ದಾನೆ. ಸುಮಂತ್ರನ ನಿಸ್ಪ್ರಹ ಪ್ರಾರ್ಥನೆಗೆ ಮೆಚ್ಚಿದ ಸನತ್ಕುಮಾರರು ಧಶರಥನಿಗೆ ಮಕ್ಕಳಾಗಬೇಕೆಂದಿದ್ದರೆ ಆತ ಅಂಗರಾಜ್ಯಕ್ಕೆ ಹೋಗಿ ರೋಮಪಾದನನ್ನು ಒಲಿಸಿ ಋಷ್ಯಶೃಂಗನನ್ನು ಅಯೋಧ್ಯೆಗೆ ಕರೆಯಿಸಿ ಆತನಿಂದ ಪುತ್ರಕಾಮೇಷ್ಥಿ ಯಾಗವನ್ನು ಮಾಡಿಸಿದರೆ ನಾಲ್ವರು ಮಕ್ಕಳಾಗುವರು ಎಂದು ಉಪಾಯವನ್ನೂ ಸಹ ಹೇಳಿದ್ದ. ಈ ವಿಷಯವನ್ನು ಸೂಕ್ತ ಸಮಯದಲ್ಲಿ ದಶರಥನಿಗೆ ಹೇಳಬೇಕೆಂದುಕೊಂಡು ಅದು ತನಕ ಹೇಳಿರಲಿಲ್ಲ.

ದೇವಗುಟ್ಟು, ಋಷಿ ಗುಟ್ಟುಗಳನ್ನು ಏಕಾಏಕೀ ಬಹಿರಂಗಪಡಿಸಬಾರದೆಂದು ಶಾಸ್ತ್ರ ಹೇಳುತ್ತದೆ. ಕಾಲವಲ್ಲದ ಕಾಲದಲ್ಲಿ ಅದನ್ನು ಹೇಳಿದರೆ ಅದು ಫಲ ನೀಡದೇ ಹೋಗಬಹುದು. ಅದೂ ಅಲ್ಲದೇ ಮನುಷ್ಯ ಪ್ರಯತ್ನ ಮೀರಿದಾಗ ಮಾತ್ರವೇ, ದೇವತೆಗಳಲ್ಲಿ ಅನುಗ್ರಹಕ್ಕಾಗಿ ಕೋರಬೇಕು. ಮಕ್ಕಳಾಗಲು ಅಶ್ವಮೇಧ ಯಾಗವನ್ನು ಮಾಡುವಂತೆ ವಶಿಷ್ಠರು ಸಲಹೆ ನೀಡಿದಾಗ ಸಭೆಯ ಮರ್ಯಾದೆಯ ದೃಷ್ಟಿಯಿಂದ ಅಲ್ಲಿ ಸುಮಂತ್ರ ಏನೂ ಹೇಳಲಿಲ್ಲ. ಮಂತ್ರಾಲೋಚನೆಯ ನೆಪದಲ್ಲಿ ಅಂತಃಪುರಕ್ಕೆ ಬಂದು ಅರಸನಿಗೆ ತಾನು ರಾಜನ ಸಲುವಾಗಿ ಸನತ್ಕುಮಾರರಲ್ಲಿ ಮಕ್ಕಳಾಗುವಂತೆ ವರಬೇಡಿದುದರ ವಿಷಯವನ್ನು ಬಹಿರಂಗಪಡಿಸುತ್ತಾನೆ. ಸನತ್ಕುಮಾರರೇ ಸಲಹೆ ನೀಡಿದಂತೆ ಪುತ್ರಕಾಮೇಷ್ಟಿಯಾಗವನ್ನು ಮಾಡಲು ಪ್ರೇರೇಪಿಸುತ್ತಾನೆ. ಪುತ್ರಕಾಮೇಷ್ಟಿಯಾಗ ಅಥರ್ವ ಮಂತ್ರಕ್ಕೆ ಸಂಬಂಧಿಸಿದುದರಿಂದ ಸಭೆಯಲ್ಲಿ ನೇರವಾಗಿ ಹೇಳಕೂಡದು ಎನ್ನುವ ಪ್ರಜ್ಞೆ ಸುಮಂತ್ರನಲ್ಲಿತ್ತು. ಪುರೋಹಿತರಾದ ವಶಿಷ್ಠರು ಆಸ್ಥಾನದಲ್ಲಿ ಇರುವಾಗ ಇನ್ನೊಬ್ಬ ಪುರೋಹಿತರನ್ನು ಕರೆಯಿಸಿ ಯಾಗ ಮಾಡುವ ಸಲಹೆ ನೀಡಿದರೆ ಅದರಿಂದ ವಶಿಷ್ಠರಿಗೆ ಅವಮಾನ ಆಗಿ ಕೋಪಿಸಿಕೊಳ್ಳಬಹುದೆನ್ನುವ ಆತಂಕವೂ ಮನೆಮಾಡಿತ್ತು.

ಈ ಹಿಂದೆ ವಶಿಷ್ಠ ಪರಂಪರೆಯ ಹಿರಿಯರು ಹರಿಶ್ಚಂದ್ರನ ತಂದೆ ಸತ್ಯವ್ರತ(ತ್ರಿಶಂಕು)ನಿಗೆ ಇನ್ನೊಬ್ಬ ಪುರೋಹಿತರನ್ನು ಕರೆದು ಯಾಗ ಮಾಡಿಸುವೆ ಎಂದಾಗ ಶಾಪ ಕೊಟ್ಟಿದ್ದ. ಈ ಕಾರಣದಿಂದ ಮಹಾರಾಜನೇ ಋಷ್ಯಶೃಂಗನನ್ನು ಕರೆತರುವ ವಿಚಾರದಲ್ಲಿ ವಶಿಷ್ಠರನ್ನು ಒಲಿಸಲಿ ಎನ್ನುವ ವಿವೇಕದ ನಡತೆ ಅವನಲ್ಲಿತ್ತು. ವಿದ್ವಾಂಸನೂ ಎಲ್ಲಾ ಕಾರ್ಯಗಳಲ್ಲಿ ಶುದ್ಧನಾಗಿರುವವನು, ದೇಶಿಯನು (ಜಾನಪದಃ), ತೀಕ್ಷ್ಣವಾದ ಬುದ್ಧಿಯುಳ್ಳವ (ಕೃತಪ್ರಜ್ಞಶ್ಚ) ಆದ ಮಂತ್ರಿಯನ್ನು ಅರಸ ಹೊಂದಿರಬೇಕೆನ್ನುವ ಶೃತಿವಾಕ್ಯಕ್ಕೆ ನಿದರ್ಶನನಾಗಿ ಸುಮಂತ್ರ ಇದ್ದ. ಸುಮಂತ್ರನ ಸಲಹೆಯನ್ನು ಸ್ವೀಕರಿಸಿದ ರಾಜ ವಶಿಷ್ಠರ ನೇತ್ರತ್ವದಲ್ಲಿ ಅಶ್ವಮೇಧ ಯಾಗವನ್ನೂ ಆ ನಂತರ ಋಷ್ಯಶೃಂಗರ ಅದ್ವರ್ಯದಲ್ಲಿ ಪುತ್ರಕಾಮೇಷ್ಟಿ ಯಾಗವನ್ನೂ ನಡೆಸಲು ವಶಿಷ್ಥರಿಂದ ಅನುಮತಿ ಪಡೆಯುತ್ತಾನೆ. ನಂತರ ದಶರಥನ ಪರಿವಾರದೊಡನೆ ಅಂಗದೇಶಕ್ಕೆ ಹೋಗಿ ರೋಮಪಾದನೊಡನೆ ಋಷ್ಯಶೃಂಗನನ್ನು ಯಾಗಕ್ಕಾಗಿ ಕರೆತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದವ ಸುಮಂತ್ರನೇ.

ಮಂತ್ರಾಲೋಚನಾ ಪ್ರವೀಣ

ಸುಮಂತ್ರನಲ್ಲಿ ಮದ ಮತ್ಸರ ಕ್ರೋಧಗಳು ಮನೆಮಾಡಿರಲಿಲ್ಲ. ಅಯೋಧ್ಯೆಯಲ್ಲಿ ಮಂತ್ರಿಗಳಾಗುವವರನ್ನು ಕಾಯಕ, ವಾಚಕ, ಮಾನಸಿಕ, ಕರ್ಮಕೃತ ಮತ್ತು ಸಂಕೇತಜನಿತ ಎನ್ನುವ ಐದು ಅಂಗಗಳಿಂದ ಪರೀಕ್ಷಿಸಿ ತೇರ್ಗಡೆಯಾದವರನ್ನು ಮಂತ್ರಿಗಳಾಗಿ ತೆಗೆದುಕೊಳ್ಳಲಾಗುತ್ತಿತ್ತು. ಸುಮಂತ್ರ ಈ ಎಲ್ಲಾ ವಿಷಯಗಳಲ್ಲಿ ರಾಜನ ಮೊದಲ ಆಯ್ಕೆಯಾಗಿದ್ದ. ಸುಮಂತ್ರನೆನ್ನುವುದು ಈತನಿಗೆ ಅನ್ವರ್ಥನಾಮವಾಗಿದ್ದಿರಬೇಕು. ಮಂತ್ರಕ್ಕೆ ಸಚಿವ ಎನ್ನುವ ಅರ್ಥವಿದೆ. “ಸುಮಂತ್ರ” ಎಂದರೆ ಒಳ್ಳೆಯ ಸಲಹೆಯನ್ನು ಕೊಡುವವ ಎಂದು ಆಗುತ್ತದೆ. ಸುಮಂತ್ರ ಮಂತ್ರಾಲೋಚನೆಯಲ್ಲಿ ನಿಪುಣನಾಗಿದ್ದ. ಕುಮಾರವ್ಯಾಸನ ಭಾರತದಲ್ಲಿ ರಾಜನಿಗೆ ನೆರವಾಗಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ ಸಚಿವರಿರಬೇಕು ಎನ್ನುತ್ತಾನೆ.

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು |
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ || ಸ. ಸಂ.1-49 ||

ರಾಜನಾದವ ಇಂಥ ಗುಣಲಕ್ಷಣಗಳನ್ನು ಹೊಂದಿರಬೇಕು, ಅಥವಾ ಅಂತವರನ್ನು ತನ್ನ ಆಪ್ತರನ್ನಾಗಿ ಆಯಾ ಹುದ್ಧೆಗಳಲ್ಲಿ ನಿಯುಕ್ತರನ್ನಾಗಿಸಿಕೊಳ್ಳಬೇಕು ಎನ್ನುವ ತಾತ್ಪರ್ಯ ಇದರಲ್ಲಿದೆ. ಸುಮಂತ್ರ ಈ ಎಲ್ಲಾ ಗುಣಗಳ ಸಾಕಾರ ಮೂರ್ತಿಯಾಗಿದ್ದ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕವನ್ನು ನಡೆಸಲು ದಶರಥ ಹೂಡಿದ್ದ ಮಂತ್ರಾಲೋಚನೆ ಬಲು ಪ್ರಸಿದ್ಧ. ಅಲ್ಲಿ ಆತ ವಶಿಷ್ಠ, ವಾಮದೇವ ಮತ್ತು ಸುಮಂತ್ರನನ್ನು ಸೇರಿಸಿ ರಾಮನಿಗೆ ಯುವರಾಜ ಪಟ್ಟಾಭಿಷೇಕವನ್ನುಮಾಡುವ ತನ್ನ ಮನಸ್ಸಿನ ಆಶಯವನ್ನು ವ್ಯಕ್ತಪಡಿಸುತ್ತಾನೆ. ರಾಜನಿಗೆ ಅಶ್ವಪತಿಗೆ ಕೊಟ್ಟ ಮಾತು ತಪ್ಪಿಸಬೇಕಾಗಿದೆ. ಅದಕ್ಕೆ ಮಂತ್ರಿಗಳ ಒಪ್ಪಿಗೆ ಪಡೆದು ನಿಧಾನಕ್ಕೆ ಸಾಮಂತರ ಮತ್ತು ಪ್ರಜೆಗಳ ಒಪ್ಪಿಗೆಯನ್ನು ಪಡೆಯುವ ಹಂತದಲ್ಲಿ ಕರೆದ ಮಂತ್ರಾಲೋಚನೆ ಅದು. ಮಂತ್ರಾಲೋಚನೆಯ ವಿಷಯದಲ್ಲಿ ರಾಜ ಕೊಡಬೇಕಾದ ಮಹತ್ವವನ್ನು ಮಹಾಭಾರತದ ಶಾಂತಿಪರ್ವಲ್ಲಿ ವಿವರವಾಗಿ ಬಂದಿದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಆತುರಗೆಟ್ಟು ಸ್ತಿಮಿತ ಕಳೆದುಕೊಂಡವನ ವಿಲಾಪ

“ಮನ್ತ್ರಸಂಹನನೋ ರಾಜಾ ಮನ್ತ್ರಾಙ್ಗಾನೀತರೇ ಜನಾಃ – ಮಂತ್ರಾಲೋಚನೆಯೇ ರಾಜನ ದೇಹವಾಗಿರುತ್ತದೆ. ಮಂತ್ರಿಗಳು ರಾಜರಹಸ್ಯಕ್ಕೆ ಅಂಗಭೂತರಾಗಿರುತ್ತಾರೆ” ಮಂತ್ರಾಲೋಚನೆಯ ನಡೆಯುತ್ತಿರುವಾಗ ಆ ಸ್ಥಳದ ಸುತ್ತಮುತ್ತಲೂ ವಾಮನರೂ, ಕುಬ್ಜರೂ, ಸ್ತ್ರೀಯರೂ, ನಪುಂಸಕರೂ ಸುಳಿಯದಂತೆ ಎಚ್ಚರಿಕೆ ವಶಿಸಬೇಕೆಂದಿದೆ. ರಾಜ ಅಶ್ವಪತಿಗೆ ನೀಡಿದ ವರದ ಗುಟ್ಟು ತಿಳಿದಿರುವುದು ಅಲ್ಲಿ ಸೇರಿದ್ದ ಸುಮಂತ್ರನಿಗೆ ಮಾತ್ರ. ಹಾಗಾಗಿ ಅದನ್ನು ಮರೆಮಾಚಿ ರಾಮನಿಗೆ ಪಟ್ಟಕಟ್ಟುವ ವಿಷಯವನ್ನು ರಾಜನೇ ಪ್ರಸ್ತಾಪ ಮಾಡುವಾಗ ಅದನ್ನು ಮೌನವಾಗಿ ಅನುಮೋದಿಸುವವನು ಸುಮಂತ್ರ. ಇದರ ವಿವರವನ್ನು ದಶರಥನ ಭಾಗದಲ್ಲಿ ನೀಡಲಾಗಿದೆ. ಆನಂತರದಲ್ಲಿ ರಾಮನಿಗೆ ಅಯೋಧ್ಯೆಯ ಅಧಿಪತಿಯಾಗಿ ಪಟ್ಟಗಟ್ಟುವ ನಿರ್ಣಯವನ್ನು ತಿಳಿಸಲು ಕರೆತರಲು ಹೋಗುವುದೂ ಸಹ ಸುಮಂತ್ರನೇ. ರಾಜ ಸಭೆಯ ನಂತರ ಕೂಡಲೇ ದಶರಥ ಸುಮಂತ್ರನನ್ನು ಕರೆದು ಮಂತ್ರಾಲೋಚನೆ ಮಾಡುತ್ತಾನೆ. ರಾಜನಿಗೆ ಎಲ್ಲಿ ವಿಘ್ನಗಳು ಬಂದುಬಿಡುವವೋ ಎನ್ನುವ ಹೆದರಿಕೆ ಇದ್ದಿರಬೇಕು. ಆ ಕಾರಣಕ್ಕಾಗಿ ಇಬ್ಬರೂ ಸಮಾಲೋಚಿಸಿ ಮತ್ತೊಮ್ಮೆ ರಾಮನನ್ನು ದಶರಥನ ಅಂತಃಪುರಕ್ಕೆ ಕರೆತರಲು ಸುಮಂತ್ರನೇ ಹೋಗುತ್ತಾನೆ. ದಶರಥ ರಾಮನಲ್ಲಿ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಎನ್ನುವ ಮೂಲಕ ಆತನ ಪಟ್ಟಾಭಿಷೇಕದ ವಿಷಯದಲ್ಲಿ ತನಗಿರುವ ಆತಂಕವನ್ನು ತೋಡಿಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ರಾಜನ ಸನಿಹದಲ್ಲಿದ್ದವ ಸುಮಂತ್ರ ಮಾತ್ರ. ರಾಮಾಯಣ ಮಹಾಕಾವ್ಯದಲ್ಲಿ ಸುಮಂತ್ರ ಮಾತನಾಡುವುದು ಬಲು ಕಡಿಮೆ. ಆದರೆ ಆತನ ಕಾರ್ಯದಕ್ಷತೆ ಪ್ರತಿಯೊಂದು ಸಂದರ್ಭಗಳಲ್ಲಿಯೂ ಎದ್ದು ಕಾಣುತ್ತದೆ.

ಸುಮಂತ್ರನ ರಾಜನಿಷ್ಠೆ ಮತ್ತು ಭಾವಪರವಶತೆಯ ಕುರಿತು ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

Exit mobile version