ಭಾರತೀಯ ಪರಂಪರೆಯಲ್ಲಿ ತ್ಯಾಗ ಮತ್ತು ಅರ್ಪಣಾ ಮನೋಭಾವವನ್ನು ತೋರಿಸಿದ ಅನೇಕ ಮಹಾನುಭಾವರು ಆಗಿ ಹೋಗಿದ್ದಾರೆ. ಅವರೆಲ್ಲಾ ಲೋಕದ ಕಲ್ಯಾಣಕ್ಕಾಗಿ ತಮ್ಮನ್ನೇ ತಾವು ಸಮರ್ಪಣೆ ಮಾಡಿಕೊಂಡು ಶಾಶ್ವತವಾಗಿ ಕೀರ್ತಿಯನ್ನು ಗಳಿಸಿರುತ್ತಾರೆ. ಪ್ರಸಿದ್ಧವಾದ ಉಪನಿಷತ್ತು “ಈಶಾವಾಸ್ಯ”ದಲ್ಲಿ ಬರುವ “ಈಶಾವಾಸ್ಯಮಿದಮ್ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ I ತೇನ ತ್ಯಕ್ತೇನ ಭುಂಜಿತಾ ಮಾ ಗೃಧಃ ಕಸ್ಯ ಸ್ವಿದ್ಧನಮ II” ಎನ್ನುವಲ್ಲಿ, ಸರ್ವವನ್ನು ಲೋಕದ ಒಳಿತಿಗೆ ಸಮರ್ಪಿಸಿ, ನಂತರ ಉಳಿದಿರುವದರಲ್ಲಿ ತೃಪ್ತಿಯನ್ನು ಹೊಂದಬೇಕು ಎಂದು ವಿವರಿಸಿರುವುದನ್ನು ಗಮನಿಸಬಹುದಾಗಿದೆ.
ಇದನ್ನೇ ಭಗವದ್ಗೀತೆಯಲ್ಲಿ ಗೀತಾಚಾರ್ಯ ಯಜ್ಞಶಿಷ್ಟವೆಂದು ಕರೆದಿರುವದು. ಗೀತೆಯಲ್ಲಿ ಯಜ್ಞವೆಂದು ಹೇಳಿರುವದು ಲೌಕಿಕವಾದ ಯಜ್ಞವನ್ನಲ್ಲ. ಭಗವಂತನಿಗೆ ಪ್ರೀತಿಯಾಗುವ ಕೆಲಸವೆಲ್ಲವೂ ಸಹ ಯಜ್ಞವೇ. ಫಲವನ್ನು ಭಕ್ಷಿಸುವದು ಅಂದರೆ ಕೊಟ್ಟು ಉಳಿದಿರುವುದನ್ನು ತಾನು ಉಪಭೋಗಿಸುವದು ಎನ್ನುವದನ್ನೇ ಆತ ಯಜ್ಞಶಿಷ್ಟವೆಂದು ಕರೆದಿದ್ದಾನೆ. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವುದು ಈ ಹಿನ್ನೆಲೆಯಲ್ಲಿಯೇ. ಜೀಮೂತವಾಹನ ನಾಗನನ್ನು ಉಳಿಸುವದಕ್ಕಾಗಿ ತನ್ನನ್ನೇ ತಾನು ಅರ್ಪಣೆ ಮಾಡಿಕೊಂಡ, ಋಷಿ ಧಧೀಚಿ ಲೋಕದ ಒಳಿತಿಗಾಗಿ ತನ್ನ ದೇಹದ ಮೂಳೆಯನ್ನೇ ಅರ್ಪಿಸಿ ಲೋಕವಿಖ್ಯಾತನಾದ. ಹೀಗೆ ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದಾಗಿದೆ. ಅಂತಹ ಮಹಾತ್ಮರ ಸಾಲಿಗೆ ಸೇರುವ ಇನ್ನೋರ್ವ ವ್ಯಕ್ತಿ ಚಂದ್ರವಂಶದ ದೊರೆಗಳಲ್ಲೊಬ್ಬನಾದ ರಂತಿದೇವ ಎನ್ನುವಾತ.
ಈತ ಕಾವ್ಯದಲ್ಲಿ ಪ್ರಸಿದ್ಧನಾದ ದುಷ್ಯಂತ ಮಹಾರಾಜನಿಂದ ಆರನೆಯ ತಲೆಮಾರಿನಲ್ಲಿ ಜನಿಸಿದವ. ಸಂಕೃತಿ ಈತನ ತಂದೆ. ಈತನಿಗೆ ಗುರು ಎನ್ನುವ ಇನ್ನೊಬ್ಬ ಅಣ್ಣನೂ ಇದ್ದ. ಈತ ಹಸ್ತಿನಾವತಿಯ ದೊರೆಯಂತೂ ಆಗಿರಲಿಲ್ಲ. ಕೆಲವು ಪುರಾಣಗಳು ಈತ ದೊರೆಯಾಗಿದ್ದ ಎಂದು ತಿಳಿಸುತ್ತವೆ. ಚಂದ್ರವಂಶದವರು ತಮ್ಮ ತಮ್ಮ ರಾಜ್ಯವನ್ನು ಅನೇಕ ಕಡೆ ಸ್ಥಾಪಿಸಿರುವ ಅಥವಾ ಕೆಲವೊಂದು ಕಡೆ ಮಾಂಡಲೀಕರಾಗಿರುವ ಉದಾಹರಣೆಗಳು ಬೇಕಾದಷ್ಟು ಸಿಗುತ್ತವೆ. ಹಾಗಾಗಿ ಈ ರಂತಿದೇವನೂ ಓರ್ವ ಸಾಮಾನ್ಯ ದೊರೆಯಾಗಿದ್ದ ಎಂದು ತಿಳಿದುಕೊಳ್ಳಬಹುದಾಗಿದೆ. ಇವನ ಕುರಿತಾದ ವಿಶೇಷತೆ ಏನೆಂದರೆ ಈತ ಪರಮ ವೈಷ್ಣವನಾಗಿದ್ದನೆನ್ನುವದು. ಅಷ್ಟೇ ಅಲ್ಲ ಈತ ಅತ್ಯಂತ ಜನಾನುರಾಗಿ ರಾಜನೂ ಆಗಿದ್ದ. ಈತನಲ್ಲಿ ಕುಬೇರೆನಿಗೆ ಸಮವಾದ ಸಂಪತ್ತಿತ್ತು. ಆದರೆ ಈತ ದಾನಪ್ರಿಯನಾಗಿದ್ದ. ಯಾರಿಗೆ ಎಂತಹುದೇ ಕಷ್ಟ ಬರಲಿ ಯಾಚಕರಿಗೆ ಈತ ಅವರು ಕೇಳಿದ್ದಕ್ಕಿಂತ ಹೆಚ್ಚನ್ನು ಕೊಟ್ಟು ಕಳುಹಿಸುತ್ತಿದ್ದ.
ಇವನ ಈ ದಾನಪರಾಯಣತೆಯಿಂದಾಗಿ ಈತನ ಶುಭ್ರವಾದ ಯಶಸ್ಸು ಮತ್ತು ಕೀರ್ತಿಗಳ ಕುರಿತಾಗಿ ಭೂಲೋಕ ಮತ್ತು ದೇವಲೋಕದಲ್ಲೆಲ್ಲಾ ಹಾಡಲ್ಪಡುತ್ತಿತ್ತು (ರಂತಿದೇವಸ್ಯ ಹಿ ಯಶ ಇಹಾಮುತ್ರ ಚ ಗೀಯತೆ) ಎಂದು ಭಾಗವತ ವರ್ಣಿಸುತ್ತದೆ. ಅವನ ಈ ದಾನದ ಗುಣಗಳಿಂದಾಗಿ ಸಂಪತ್ತು ಕ್ರಮೇಣ ಕರಗುತ್ತಾ ಬಂದಿತು. ಕೊನೆಗೊಮ್ಮೆ ಈತ ಎಲ್ಲವನ್ನೂ ಕಳೆದುಕೊಂಡು ದೀನಸ್ಥಿತಿಗೆ ಬಂದು ತಲುಪಿದ. ಭಾಗವತ ಆಗಲೂ ಆತನನ್ನು ವರ್ಣಿಸುವದು ಆಗಲೂ ಆಕಾಶವೇ ರಂತಿದೇವನ ಸಂಪತ್ತಾಗಿತ್ತೆಂದು. ಅಂತಹ ಸ್ಥಿತಿಯಲ್ಲಿಯೂ ಆತ ದೇಹಿ ಎಂದು ಬಂದವರಿಗೆ ಇರುವದನ್ನೆಲ್ಲವನ್ನೂ ಕೊಟ್ಟು ಕಳುಹಿಸಿಬಿಡುತ್ತಿದ್ದ. ಆತ ತನಗಾಗಿ ಏನನ್ನೂ ಬಯಸುತ್ತಿರಲಿಲ್ಲ. ಇಂಥ ಹೊತ್ತಿನಲ್ಲಿ ಒಮ್ಮೆ ಆತನ ರಾಜ್ಯದಲ್ಲಿ ಭೀಕರ ಬರಗಾಲ ಬಂದುಬಿಟ್ಟಿತು. ಪರಿಣಾಮ ಎಷ್ಟಿತ್ತೆಂದರೆ ಹನಿ ನೀರೂ ಸಹ ಕುಡಿಯಲು ಸಿಗುತ್ತಿರಲಿಲ್ಲ. ರಂತಿದೇವ ಪ್ರಜಾವತ್ಸಲನಾಗಿದ್ದ. ಪ್ರಜೆಗಳು ಕೊಡಬೇಕಾದ ಕರವನ್ನು ಮನ್ನಾ ಮಾಡಿಬಿಟ್ಟ. ಅರಮನೆಯ ಬೊಕ್ಕಸದಿಂದ ಅವರಿಗೆಲ್ಲ ಬೇಕಾದ ಕಾಳುಕಡಿಗಳನ್ನು ಪೂರೈಸತೊಡಗಿದ. ಆತನ ರಾಜ್ಯದಲ್ಲಿ ಯಾರೂ ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕಾಗಿ ಯಾವ ಯಾವ ಕ್ರಮವನ್ನು ತೆಗೆದುಕೊಳ್ಳಬೇಕೋ ಅದನ್ನೆಲ್ಲ ತೆಗೆದುಕೊಂಡ. ಪರಿಣಾಮ ಕುಬೇರನನ್ನು ಮೀರಿಸುವಂತಿದ್ದ ಆತನ ಸಂಪತ್ತು ಕರಗತೊಡಗಿತು. ಕೊನೆಗೊಮ್ಮೆ ಖಜಾನೆ ಬರಿದಾದಾಗ ತನ್ನ ಮನೆ ಮತ್ತು ಸಂಪತ್ತುಗಳನ್ನು ಮಾರಾಟ ಮಾಡಿ ಪ್ರಜೆಗಳನ್ನು ಸಂತೈಸಿದ. ಈಗಲೂ ಆತ ಶ್ರೀಮಂತನಾಗಿದ್ದನಂತೆ. ಹೇಗೆಂದರೆ ವಿಸ್ತಾರವಾದ ಆಕಾಶವೇ ಆತನ ಸೂರಾಗಿತ್ತಂತೆ. ಧರ್ಮಾತ್ಮನಾಗಿರುವದರಿಂದ ಆ ಮನೆಗೆ ಬಾಗಿಲುಗಳ ಅಗತ್ಯ ಕಂಡುಬರಲಿಲ್ಲವಂತೆ. ಕ್ಷಣಿಕವಾದ ಧನವನ್ನು ಆತನೇ ಕಳುಹಿಸಿಬಿಟ್ಟಿದ್ದನಂತೆ. ಇಷ್ಟಾದರೂ ಆತ ತನ್ನ ದಾನಗುಣಗಳನ್ನು ಬಿಟ್ಟಿರಲಿಲ್ಲ. ಆತನ ದಾನದ ಕುರಿತು ಮೂರುಲೋಕದಲ್ಲಿಯೂ ಕೀರ್ತಿ ಹಬ್ಬಿತು.
ಬರಗಾಲ ಯಾರ ಕೈಯಲ್ಲೂ ಇಲ್ಲವಲ್ಲ. ಅನೇಕ ವರ್ಷಗಳ ಕಾಲ ಬರಗಾಲ ಮುಂದುವರಿದಾಗ ಎಲ್ಲರ ಪರಿಸ್ಥಿತಿಯೂ ಒಂದೇ ತೆರನಾಯಿತು. ಇಂತಹ ಹೊತ್ತಿನಲ್ಲಿ ರಂತಿದೇವನಿಗೆ ತನ್ನ ಕುಟುಂಬದ ಪೋಷಣೆ ಸಹ ಬಲು ದುಸ್ತರವಾಯಿತು. ಆದರೂ ಆತ ಬಂದವರ ಊಟದ ವ್ಯವಸ್ಥೆಗಳಿಗಾಗಿ ತನ್ನ ಕೈಲಾದ ಪ್ರಯತ್ನ ಪಡುತ್ತಿದ್ದ. ಹರಿಯ ಮೇಲಿನ ಭಕ್ತಿ ಮತ್ತು ನಂಬುಗೆಯನ್ನು ಆತ ಮರೆತಿರಲಿಲ್ಲ. ಒಮ್ಮೆಯಂತೂ ನಿರಂತರ ನಲವತ್ತೆಂಟು ದಿನಗಳ ತನಕ ಕುಡಿಯಲು ನೀರು ಸಿಗಲಿಲ್ಲ. ಅವನ ಕುಟುಂಬದವರೆಲ್ಲ ಹಸಿವು ಬಾಯಾರಿಕೆಗಳಿಂದ ಸಂಕಟಪಡುತ್ತಿದ್ದರು.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಕರುಣೆಯೇ ಎದೆಯೊಳಗೆ ತುಂಬಿಕೊಂಡ ಮಮತಾಮಯಿ ಮಾತೆ ಕೌಸಲ್ಯಾದೇವಿ
ಅದೃಷ್ಟವಶಾತ್ ನಲತ್ತೊಂಬತ್ತನೆಯ ಅವನಿಗೆ ದಿವಸ ಸ್ವಲ್ಪ ತುಪ್ಪ, ಪಾಯಸ, ಗೋಧಿಯ ಅನ್ನ ಮತ್ತು ನೀರು ಇವು ದೊರೆತವು. ಮೊದಲೇ ಅವನ ಕುಟುಂಬದವರೆಲ್ಲ ಹಸಿವು ಬಾಯಾರಿಕೆಗಳಿಂದ ಗಡಗಡ ನಡುಗುತ್ತಿದ್ದರು. ಅಂತೂ ಸ್ವಲ್ಪವಾದರೂ ಹೊಟ್ಟೆಗೆ ಸಿಕ್ಕಿತಲ್ಲ ಎಂದು ಸಿಕ್ಕಿದ ಅನ್ನ ಮತ್ತು ಪಾಯಸವನ್ನು ಊಟ ಮಾಡಲು ಕುಳಿತರು. ಅಷ್ಟು ಹೊತ್ತಿಗೆ ಓರ್ವ ತಪಸ್ವೀ ಹಸಿವಿನಿಂದ ಕಂಗೆಟ್ಟು ಅಲ್ಲಿಗೆ ಬಂದ. ಅತಿಥಿಯನ್ನು ದೇವರೆಂದೇ ಕಾಣುತ್ತಿದ್ದ. ಬಂದವ ಶ್ರೀಹರಿಯೆಂದೇ ಭಾವಿಸಿದ ಅವನ ಕುಟುಂಬದವರು ಇದ್ದ ಆಹಾರವನ್ನು ವಿಭಾಗಿಸಿ ಆ ತಪಸ್ವಿಗೆ ಒಂದು ಪಾಲನ್ನು ನೀಡಿದರು. ಆತ ತೃಪ್ತಿಯಿಂದ ಊಟ ಮಾಡಿ ಹೊರಟುಹೋದ. ಉಳಿದ ಅನ್ನವನ್ನು ತಮ್ಮತಮ್ಮಲ್ಲಿಯೇ ಹಂಚಿಕೊಂಡು ಊಟ ಮಾಡಬೇಕೆಂದು ಕುಳಿತ ಹೊತ್ತಿನಲ್ಲಿಯೇ ಇನ್ನೊಬ್ಬ ವ್ಯಕ್ತಿ ಹಸಿವು ಎನ್ನುತ್ತಾ ಆತನಲ್ಲಿಗೆ ಗೋಳಾಡುತ್ತಾ ಬಂದ. ಆಗ ಉಳಿದ ಅನ್ನದಲ್ಲಿ ವಿಭಾಗ ಮಾಡಿ ಅವನಿಗೂ ನೀಡಿ ಕಳುಹಿಸಿದರು. ಇನ್ನೇನು ಊಟ ಮಾಡಬೇಕೆನ್ನುವಷ್ಟರಲ್ಲಿ ಮತ್ತೋರ್ವ ಕಪ್ಪನೆಯ ವ್ಯಕ್ತಿ ತನ್ನ ನಾಯಿಯೊಂದಿಗೆ ಹಸಿವು ಎನ್ನುತ್ತಾ ಇವನ ಮನೆಯ ಬಾಗಿಲಿಗೆ ಯಾಚಿಸುತ್ತ ಬಂದ. ʼʼಮಹಾರಾಜ, ನಾನು ನನ್ನ ನಾಯಿ ಇಬ್ಬರೂ ತುಂಬಾ ದಿನದಿಂದ ಹಸಿವೆಯಲ್ಲಿದ್ದೇವೆ, ಏನಾದರೂ ಹೊಟ್ಟೆಗೆ ನೀಡಿʼʼ ಎಂದು ದೈನ್ಯದಿಂದ ಬೇಡಿಕೊಂಡ. ಈಗ ಉಳಿದಿದ್ದ ಅನ್ನವನ್ನೇ ಅವನಿಗೂ ಮತ್ತು ಆತನ ನಾಯಿಗೂ ನೀಡಿ ಅವನನ್ನು ಸಂತೃಪ್ತಿಪಡಿಸಿ ಕಳುಹಿಸಿಕೊಟ್ಟ.
ಈಗ ರಂತಿದೇವನಲ್ಲಿ ದಾಹ ತಣಿಸಿಕೊಳ್ಳಲು ಕೆಲವೊಂದು ಗುಟುಕು ನೀರು ಮಾತ್ರ ಇತ್ತು. ಇನ್ನೇನು ಅದನ್ನಾದರೂ ಕುಡಿದು ಹೊಟ್ಟೆ ತಂಪು ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಹಸಿವಿನಿಂದ ಕಂಗೆಟ್ಟು ಸಾಯುವ ಸ್ಥಿತಿಯಲ್ಲಿದ್ದ ಚಾಂಡಾಲನೋರ್ವ ನಿತ್ರಾಣ ಸ್ಥಿತಿಯಲ್ಲಿ ಬಂದು ನೀರನ್ನಾದರೂ ಕೊಟ್ಟು ತನ್ನ ಜೀವ ಉಳಿಸಿ ಎಂದು ಬೇಡಿಕೊಂಡ. ಇಷ್ಟು ಮಾತುಗಳನ್ನಾಡಲೂ ಆತ ಬಲು ಕಷ್ಟಪಡುತ್ತಿದ್ದ. ಅವನ ದಯನೀಯ ಸ್ಥಿತಿಯನ್ನು ನೋಡಿದ ರಂತಿದೇವ ಮರು ಮಾತಾಡದೇ ಇರುವ ನೀರನ್ನು ಸಹ ಅವನಿಗೆ ಕೊಟ್ಟಬಿಟ್ಟ. ಈಚೆ ಆತನ್ನಮಕ್ಕಳು ಹಸಿವಿನಿಂದ ಸಾಯತೊಡಗಿದ್ದರು. ಅಂತಹ ಹೊತ್ತಿನಲ್ಲಿಯೂ ರಂತಿದೇವ ತನ್ನ ಪ್ರಜೆಯನ್ನು ಆತ ಯಾವ ವರ್ಣದವ ಎನ್ನುವದನ್ನೂ ಗಮನಿಸದೇ,
ನ ಕಾಮಯೇsಹಂ ಗತಿಮೀಶ್ವರಾತ್ಪರಾ-
ಮಷ್ಟರ್ಧಿಯುಕ್ತಾಮಪುನರ್ಭವಂ ವಾ I
ಆರ್ತಿಂ ಪ್ರಪದ್ಯೇsಖಿಲದೇಹಭಾಜಾ-
ಮನ್ತಃ ಸ್ಥಿತೋ ಯೇನ ಭವನ್ತ್ಯ ದುಃಖಾಃ (ಭಾ.9-21)
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ರಾಮಾಯಣದಲ್ಲಿ ಗುಣಗೌರವಗಳಿಗೆ ಮೆರುಗನ್ನಿತ್ತ ಪಾತ್ರ ಸುಮಿತ್ರೆ
ನಾನು ಭಗವಂತನಿಂದ ಅಣಿಮಾದಿ ಅಷ್ಟಸಿದ್ಧಿಗಳಿಂದ ಯುಕ್ತವಾದ ಪರಮಪದವನ್ನು ಬಯಸುವದಿಲ್ಲ. ಹುಟ್ಟು ಸಾವುಗಳಿಲ್ಲದ ಮೋಕ್ಷಪದವಿಯೂ ನನಗೆ ಬೇಡ. ಸಮಸ್ತಪ್ರಾಣಿಗಳ ಹೃದಯದಲ್ಲಿಯೂ ನಾನು ಇರಲು ಬಯಸುತ್ತೇನೆ. ಯಾಕೆಂದರೆ ಅವುಗಳ ಹೃದಯದಲ್ಲಿದ್ದು ಅವುಗಳ ಎಲ್ಲ ಕಷ್ಟಗಳನ್ನು ಭರಿಸಲು ಅಪೇಕ್ಷಿಸುತ್ತೇನೆ. ಯಾವ ಪ್ರಾಣಿಯೂ ಯಾವತ್ತೂ ದುಃಖದಲ್ಲಿರಬಾರದೆನ್ನುವದೇ ನನ್ನ ಅಪೇಕ್ಷೆ. ಒಂದು ಗುಟುಕು ನೀರಿನಿಂದ ಈ ಅಂತ್ಯಜನ ಜೀವ ರಕ್ಷಣೆಯಾಯಿತಲ್ಲ. ತನ್ನ ಮಕ್ಕಳು, ಹೆಂಡತಿ ಅಥವಾ ತನಗೆ ಏನಾದರೂ ಚಿಂತೆಯಿಲ್ಲ; ನಿಶ್ಚಯವಾಗಿಯೂ ತಾನು ಈಗ ಅತೀ ಸುಖಿ ಎನ್ನುತ್ತಾ ಹೆಂಡತಿಯೊಡನೆ ತಾನೂ ಕುಸಿದುಬಿಟ್ಟ.
ಅಷ್ಟರಲ್ಲಿ ಅವನ ಎದುರು ಮೂರು ದಿವ್ಯಪುರುಷರು ಪ್ರತ್ಯಕ್ಷರಾದರು. ಅವರು ಸಾಕ್ಷಾತ್ ಬ್ರಹ್ಮ, ವಿಷ್ಣು ಮಹೇಶ್ವರರಾಗಿದ್ದರು. ಅತಿಥಿಗಳ ಸೇವೆಯೇ ಭಗವಂತನೆನ್ನುವ ರಂತಿದೇವನ ಧರ್ಮಪ್ರಜ್ಞೆಗೆ ಅವರೆಲ್ಲ ಈತನನ್ನು ಮೆಚ್ಚಿ ಹರಸಿದರು. ಅತ ನಿಸ್ಪೃಹನಾಗಿದ್ದ. ಸಮಾಜಕ್ಕೆ ಎಲ್ಲವೂ, ಉಳಿದುದು ಏನಾದರೂ ಇದ್ದರೆ ತನಗೆ ಎನ್ನುವ ಮನೋಭಾವನೆಯನ್ನು ಹೊಂದಿದ್ದ. ಎಲ್ಲವೂ ಹರಿಕೃಪೆ ಎಂದು ಭಗವಂತನಲ್ಲಿ ಭಕ್ತಿಯಿಟ್ಟಿದ್ದ. ತ್ರಿಮೂರ್ತಿಗಳು ನಿನಗೇನು ಬೇಕೆನ್ನುವ ವರ ಕೇಳಿದರೆ ತನ್ನ ಪ್ರಜೆಗಳು ಯಾರೂ ಇನ್ನು ಹಸಿವಿನಿಂದ ನರಳಬಾರದು, ಮಳೆಯನ್ನು ಕರುಣಿಸಿ ಎಂದು ಕೇಳಿದ. ತನಗಾಗಿ ಬೇರೇನನ್ನೂ ಬೇಡದ ಅವನ ಭಕ್ತಿಗೆ ಅವರೆಲ್ಲಾ ಮೆಚ್ಚಿ ಹರಸಿದರು. ಮಳೆಯಿಂದ ಭೂಮಿಯನ್ನು ಉತ್ತಿ ಬಿತ್ತಿ ಪ್ರಜೆಗಳು ತಮ್ಮ ತಮ್ಮ ಕರ್ತವ್ಯವನ್ನು ಮಾಡಬೇಕೆನ್ನುವದು ಆತನ ವರದ ಹಿನ್ನೆಲೆಯಾಗಿತ್ತು. ದೇವತೆಗಳು ಆತನ ರಾಜ್ಯವನ್ನು ಸುಭಿಕ್ಷವನ್ನಾಗಿ ಮಾಡಿದರು.
ರಾಜರುಗಳ ಮೊದಲ ಹಿತ ಪ್ರಜಾವಾತ್ಸಲ್ಯ ಪರತೆ ಎನ್ನುವದನ್ನು ಲೋಕಕ್ಕೆ ತೋರಿಸಿಕೊಟ್ಟವನು ರಂತಿದೇವ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ