ಭಾಗ 1: ಕವಿ ಕಡೆದ ಪಾತ್ರದ ನಿಜಸ್ವರೂಪದ ಅನಾವರಣ
ಭಾರತೀಯ ನಾಟಕಗಳ ನಾಯಿಕೆಯರ ಕುರಿತು ವಿವರಿಸುವಾಗ ಅತೀ ಹೆಚ್ಚು ಮನಸ್ಸನ್ನು ಸೆಳೆಯುವುದು ಕಾಳಿದಾಸನಿಂದ ಪುನಃಸೃಷ್ಟಿಸಲ್ಪಟ್ಟಂತಹ ಶಕುಂತಲಾ ಎನ್ನುವುದು ನಿರ್ವಿವಾದ. ಇಲ್ಲಿ ಶಕುಂತಲೆ ಮುಗ್ಧತೆಯೇ ತುಂಬಿದ ಸ್ನಿಗ್ಧ ಸೌಂದರ್ಯದ ಖನಿ. ಆಕೆ ಅಡವಿಯಲ್ಲಿ ಕಣ್ವಾಶ್ರಮದಲ್ಲಿ ಬೆಳೆದವಳು. ಆಶ್ರಮದ ಪರಿಸರದಲ್ಲಿನ ಮಲ್ಲಿಗೆಯೊಂದಕ್ಕೆ ಅವಳು ‘ವನಜ್ಯೋತ್ಸ್ನಾ’ ಅಂದರೆ ಕಾಡ ಬೆಳದಿಂಗಳು ಎಂದು ಕರೆಯುತ್ತಾಳೆ. ನಿಜವಾಗಿ ಕಾಳಿದಾಸ ಈ ಉಪಮೆಯ ಮೂಲಕ ಶಕುಂತಲೆಯೇ ಕಾಡಬೆಳದಿಂಗಳು ಎನ್ನುವುದನ್ನು ಸೂಚಿಸಿದ್ದಾನೆ. ಸೌಂದರ್ಯದ ಮೂರ್ತಸ್ವರೂಪಳಾಗಿ, ಸ್ತ್ರೀತ್ವದ ಆಕರ್ಷಣೆಯ ಕೇಂದ್ರವಾಗಿ, ಪ್ರೌಢ ಹೆಣ್ಣಾಗಿ ಬೆಳೆಯುವ ಪರಿ ಅನನ್ಯ.
ಆದರೆ ಇಡೀ ನಾಟಕದ ಮೊದಲ ಮೂರು ಅಂಕಗಳಲ್ಲಿ ಅಭಿವ್ಯಕ್ತವಾಗುವ ಸಂಭೋಗ ಶೃಂಗಾರರಸ ಶಕುಂತಲೆಯ ಗುಣಗಳನ್ನು ಅದರಿಂದಾಚೆಗೆ ನಮ್ಮನ್ನು ನೋಡಲು ಬಿಡುವುದೇ ಇಲ್ಲ. ಕಾಳಿದಾಸನ ಕಾವ್ಯವೇ ಇರಲಿ ನಾಟಕವೇ ಇರಲಿ ಪ್ರೇಮವೇ ಆತನ ಪ್ರಥಮ ಆಯ್ಕೆ. ಕುಮಾರ ಸಂಭವ ಸಂಪೂರ್ಣವಾಗಿ ಶಿವಪುರಾಣದ ವಸ್ತುವನ್ನಾಶ್ರಯಿಸಿದರೂ ಅಲ್ಲಿರುವ ಭಕ್ತಿರಸವೂ ಸಹ ನವಿರಾದ ಶೃಂಗಾರದ ಮಲ್ಲಿಗೆಯ ಬಳ್ಳಿಯಲ್ಲಿ ಕಾಳಿದಾಸನಿಂದ ಪೋಣಿತವಾಗಿದೆ. ರಘುವಂಶದಲ್ಲಿಯ ಅಜವಿಲಾಪವೇ ಇರಲಿ, ಮೇಘದೂತದ ಯಕ್ಷನ ವಿರಹವಾಗಲಿ, ವಿಕ್ರಮೋರ್ವಶೀಯ ಪುರೂರವ ಮತ್ತು ಊರ್ವಶಿಯ ಪ್ರಣಯದಲ್ಲಿಯಾಗಲೀ, ಮಾಲವಿಕಾಗ್ನಿಮಿತ್ರದಲ್ಲಿನ ಪ್ರಣಯದ ಕುರಿತಾದ ಉತ್ಕಂಠತೆಯ ಹಂಬಲವಾಗಲೀ ಸಹೃದಯರನ್ನು ಶೃಂಗಾರದ ರಸದಲ್ಲಿ ಮುಳುಗಿಸಿಬಿಡುತ್ತದೆ. ಆತನ ಕಾವ್ಯದಲ್ಲಿ ಪ್ರೇಮವೆನ್ನುವುದು ಐಹಿಕವಾಂಛೆಗಳಂತೆ ಕಾಣುವುದು ಮಾಲವಿಕಾಗ್ನಿಮಿತ್ರದಲ್ಲಿಯಾದರೂ ವಿಕ್ರಮೋರ್ವಶೀಯದಲ್ಲಿ ಪ್ರೇಮವೆನ್ನುವುದು ತನ್ನ ದೈಹಿಕಕ್ಕಿಂತ ದೈವನಿಯಾಮಕವಾಗಿರುವುದು ಎನ್ನುವುದನ್ನು ಸೂಚಿಸುತ್ತದೆ.
ಆದರೆ ಶಾಕುಂತಲಾದ ಪ್ರೇಮ ಮಾತ್ರ ಈ ಎಲ್ಲ ಮಿತಿಯನ್ನು ಮೀರಿ ನಿಂತಿದೆ. ಇಲ್ಲಿಯದು ಐಹಿಕ ಆಕರ್ಷಣೆಯಂತೆ ಮೊದಲು ತೋರಿಸಿದರೂ ಅದರೊಳಗೆ ಲೋಕದ ಹಿತವಡಗಿದೆ ಎನುವುದನ್ನು ಕಣ್ವ ಮಹರ್ಷಿಯ “ಮಗಳೇ, ಯಜ್ಞಕರ್ತನ ಕಣ್ಣು ಹೊಗೆಯಿಂದ ಮಂಜಾಗಿಬಿಟ್ಟಿದ್ದರೂ ಆಹುತಿ ಮಾತ್ರ ಸರಿಯಾಗಿ ಯಜ್ಞಕುಂಡದಲ್ಲಿ ಬಿದ್ದಂತಾಯಿತು” ಎನ್ನುವ ಮಾತಿನಿಂದ ಇವೆಲ್ಲವೂ ಲೋಕದ ಹಿತದಲ್ಲಿಯೇ ಅಡಗಿದೆ ಎನ್ನುವುದನ್ನು ವಿಶದಪಡಿಸುವುದು ಕಾಳಿದಾಸನ ಉದ್ದೇಶವಾಗಿದೆ. ಆತನ ಇನ್ನೆರಡು ನಾಟಕಗಳ ನಾಯಕಿಯರಾದ ಊರ್ವಶಿ ಮತ್ತು ಮಾಲವಿಕೆ ಇಬ್ಬರಿಗೂ ಉನ್ನತ ಕುಲದ ಹಿನ್ನೆಲೆಯಿದೆ. ಆದರೆ ಶಕುಂತಲಾ ಹಾಗಲ್ಲ; ಆಕೆ ನಿಸರ್ಗದ ಶಿಶು. ಅಪ್ಸರೆ ಮೇನಕೆ ಮತ್ತು ಮಹಾತಪಸ್ವಿ ವಿಶ್ವಾಮಿತ್ರರ ಮಗಳಾದರೂ ಆಕೆಯನ್ನು ಸಾಕುವುದು ಶಕುಂತ ಪಕ್ಷಿಗಳು. ಹಾಗಾಗಿ ಆಕೆಗೆ ಆಶ್ರಮದಲ್ಲಿನ ಹೆಣ್ಣು ಜಿಂಕೆ, ಮಾಮರಕ್ಕೆ ಹಬ್ಬಿದ ಮಲ್ಲಿಗೆಯ ಬಳ್ಳಿ ಹಾರಾಡುವ ದುಂಬಿ ಎಲ್ಲದರಲ್ಲಿಯೂ ಜೀವ ಕಾರುಣ್ಯವನ್ನು ಕಾಣುತ್ತಾಳೆ. ದೇಹಕ್ಕೆ ಉಷ್ಣತೆ ಏರಿದರೆ ಆಕೆಗೆ ತಂಪನ್ನೀಯುವುದು ಕಮಲದ ಎಲೆಗಳ ಹಾಸಿಗೆ. ದುಷ್ಯಂತ ತನ್ನ ಪ್ರೇಮವನ್ನು ನಿವೇದಿಸಿ ಪ್ರಕೃತಿಯ ಮಡಿಲಲ್ಲಿ ಆಕೆಯನ್ನು ಕೂಡಿದಾಗ ಆ ಮಿಲನ ಪ್ರಕೃತಿ ಸಹಜವಾದ ಗುಣವಾಗಿಬಿಡುತ್ತದೆ. ಶಕುಂತಲಾ ಮೊದಲು ಅಷ್ಟನಾಯಿಕೆಯರಲ್ಲಿ ಪ್ರಸಿದ್ಧವಾದ ವಾಸಕಸಜ್ಜ ಅಂದರೆ ಇನಿಯನನ್ನು ಕೂಡಲು ಬಯಸುವ ನಂತರ ವಿರಹೋತ್ಕಂಟಿತೆಯಾಗಿ ಕಾಣಿಸುತ್ತಾಳೆ.
ಕಾಳಿದಾಸನ ಶಕುಂತಲೆ ಆತನೇ ಕಡೆದ ಸಮ್ಮೋಹನವನ್ನು ಮೀರಿದ ಒಂದು ವಿಶಿಷ್ಟ ಪಾತ್ರ. ಇದಕ್ಕೆ ಹೋಲಿಕೆ ಮತ್ತೆ ಯಾವ ಪಾತ್ರವನ್ನೂ ಭಾರತೀಯ ಕಾವ್ಯಗಳಲ್ಲಿ ಕಾಣಸಿಗದು. ಆಕೆಯನ್ನು ರೂಪಿಸುವಲ್ಲಿ ಬದುಕಿನ ಗತಿಯನ್ನು ನಿರ್ಧರಿಸುವಲ್ಲಿ ಪ್ರಕೃತಿ ಮತ್ತು ವಿಧಿ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಕಾಳಿದಾಸ ಇಲ್ಲಿ ರಮ್ಯಭಾಷೆಯನ್ನು ಉಪಯೋಗಿಸಿದ್ದಾನೆ. ಕವಿಸಮಯ, ಉಪಮೆಗಳನ್ನು ನಿರೂಪಿಸಿರುವ ರೀತಿ ಸದಾಕಾಲಕ್ಕೂ ಸಲ್ಲುವಂತವುಗಳು. ಇಂತಹ ಗುಣಗಳುಳ್ಳ ಸಾಹಿತ್ಯವನ್ನು ಸದಾತನವೆಂದು ಸಂಸ್ಕೃತ ವಾಙ್ಮಯಗಳು ಕರೆದಿವೆ.
ಕಾಳಿದಾಸ ಈ ನಾಟಕಕ್ಕೆ ಆಯ್ದುಕೊಂಡಿರುವ ವಸ್ತುವಿನ ಮೂಲವಿರುವುದು ಮಹಾಭಾರತದಲ್ಲಿ. ಅಲ್ಲಿಯೂ ಶಕುಂತಲೋಪಾಖ್ಯಾನವಿದೆ. ವ್ಯಾಸರ ಮಹಾಭಾರತದ ಆದಿಪರ್ವದ ಸಂಭವ ಪರ್ವದಲ್ಲಿ ಬರುವ ಘಟನೆಯನ್ನು ಆಧರಿಸಿ ಬರೆದ ಈ ನಾಟಕ ಕಾಳಿದಾಸನನ್ನು ಪ್ರಪಂಚದ ಅತ್ಯಂತ ಶ್ರೇಷ್ಠ ನಾಟಕಕಾರರ ಸಾಲಿನಲ್ಲಿ ಸೇರಿಸಿದೆ. ಖ್ಯಾತ ಪಾಶ್ಚಿಮಾತ್ಯ ವಿದ್ವಾಂಸ ಕಾಳಿದಾಸನನ್ನು ಪಶ್ಚಿಮಕ್ಕೆ ಪರಿಚಯಿಸಿದ Mr. Arthur Berriedale Keith “Kalidasa represents he is the master of the Vaidarbha style… His skill in the Cakuntala (Shakuntala) never leads him into the defects of taste which betrayed his successors into exhibiting their skill in the wrong place. (Ref. The Sanskrit Drama, in its origin, Development theory and Practice- Kalidasa’s Dramatic Art) (ಸಂಸ್ಕೃತ ಕಾವ್ಯಗಳ ಧೀಮಂತ ಪಾತ್ರಚಿತ್ರಣಗಳನ್ನು ಕಟ್ಟುವುದರಲ್ಲಿ ಕಾಳಿದಾಸ ಎಲ್ಲರಿಗಿಂತಲೂ ಎತ್ತರದ ಸ್ತರದಲ್ಲಿದ್ದಾನೆ. ವೈದರ್ಭಿ ಶೈಲಿಯ ಕಾವ್ಯರಚನೆಯಲ್ಲಂತೂ ಆತನೇ ದೊರೆ… ಅವನ ನಂತರದ ಕವಿಗಳು ರಚಿಸಿದ ಕೀಳು ಅಭಿರುಚಿಯ ಕೌಶಲಗಳನ್ನು ಪ್ರದರ್ಶಿಸಬಾರದ ಸಂದರ್ಭಗಳಲ್ಲಿ ಪ್ರದರ್ಶಿಸಿದಂತೆ ʼಶಾಕುಂತಲಾʼದಲ್ಲಿ ಅವನೆಂದೂ ದೋಷಪೂರಿತ ಅಭಿರುಚಿಯನ್ನು ತೋರ್ಪಡಿಸಿಲ್ಲ) ಎಂದು ಹೊಗಳಿದ್ದಾನೆ.
ಆದರೆ ಈ ನಾಟಕದಲ್ಲಿ ಬರುವ ಶಕುಂತಲೆಯನ್ನು ಮೂಲ ವ್ಯಾಸರ ಶಕುಂತಲೆಯ ಜೊತೆ ಹೋಲಿಕೆ ಮಾಡುವಾಗ ಒಂದೇ ಕಥಾವಸ್ತು ವಿಭಿನ್ನ ಧ್ರುವಗಳಲ್ಲಿ ನಿಂತಿರುವುದನ್ನು ಗಮನಿಸಬಹುದಾಗಿದೆ, ವ್ಯಾಸರು ಮಹಾಭಾರತವನ್ನು ಬರೆಯುವಾಗ ನಿರ್ಭಾವುಕರಾಗಿದ್ದಾರೆ. ಅವರಿಗೆ ಕಾವ್ಯದ ನಾಯಕನ ಕುರಿತು ಯಾವ ಕಕ್ಕುಲತೆಯಿಲ್ಲ. ಅವರಿಗೆ ಕಾವ್ಯಕ್ಕಿಂತ ಒಂದು ಇತಿಹಾಸವನ್ನು ರಚಿಸಬೇಕು ಎನ್ನುವತ್ತ ಆಸಕ್ತಿ ಇದೆ. ವ್ಯಾಸರ ಕಾವ್ಯದಲ್ಲಿ ಬರುವ ಎಲ್ಲಾ ಪಾತ್ರಗಳು ಮನುಷ್ಯಸಹಜವಾದ ದೌರ್ಬಲ್ಯಕ್ಕೆ ಸಿಲಿಕಿದಂತವುಗಳು. ಭೀಷ್ಮ ಸಮರ್ಥನಾದರೂ ಆತ ಅಪರವಯಸ್ಸಿನ ತಂದೆಗೆ ಮದುವೆ ಮಾಡಿಸಲು ತನ್ನ ಹಕ್ಕಾಗಿರುವ ಸಿಂಹಾಸನವನ್ನು ತ್ಯಜಿಸಿದ ಕುರಿತು ನಾವು ಚರ್ಚೆ ನಡೆಸಬಹುದು. ಧರ್ಮರಾಯ, ಭೀಮಾರ್ಜುನರು, ಧುರ್ಯೋಧನ, ಕರ್ಣ, ದ್ರೋಣ ಹೀಗೆ ಎಲ್ಲರಲ್ಲಿಯೂ ಎರಡು ಮುಖಗಳನ್ನು ಕಾಣಬಹುದಾಗಿದೆ. ಕೃಷ್ಣ ಮತ್ತು ವಿದುರನನ್ನು ಬಿಟ್ಟರೆ ವ್ಯಾಸರ ಮೆಚ್ಚುಗೆಗೆ ಪಾತ್ರವಾದ ವ್ಯಕ್ತಿಗಳು ಯಾರೂ ಅಲ್ಲಿಲ್ಲ. ಹಾಗಾಗಿ ಮಹಾಭಾರತವನ್ನು ಆಧರಿಸಿ ಕಡೆಯುವ ಸಾಹಿತ್ಯದ ಕ್ಯಾನ್ವಾಸ್ ತುಂಬಾ ದೊಡ್ಡದು.
ಈ ನಿಟ್ಟಿನಲ್ಲಿ ಮಹಾಭಾರತದ ಶಕುಂತಲೆ ಕಾಳಿದಾಸನ ಶಕುಂತಲೆಯಂತೆ ಕರುಣರಸ ತುಂಬಿದ ಕೋಮಲೆ ಮಾತ್ರವಲ್ಲ. ಆಕೆ ತೆಗೆದುಕೊಳ್ಳುವ ನಿಲುವುಗಳು ಮತ್ತು ದಿಟ್ಟ ನಿರ್ಧಾರ ದುಷ್ಯಂತನಂತಹ ಮಹಾರಾಜನನ್ನು ಕಂಗೆಡಿಸಿ ಆತ ಶಕುಂತಲೆಯನ್ನು ಸ್ವೀಕರಿಸಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. ನಾಟಕದಂತೆ ಇಲ್ಲಿಯೂ ದುಷ್ಯಂತ ನಾಯಕ ಪಾತ್ರಕ್ಕೆ ಯೋಗ್ಯವಾದ ಗುಣಗಳನ್ನು ಹೊಂದಿದವನಾಗಿದ್ದಾನೆ. ನಾಟ್ಯಶಾಸ್ತ್ರದ ಪ್ರಕಾರ ನಾಯಕನಾದವನು ಉದಾತ್ತ ಚರಿತನಾಗಿರುತ್ತಾನೆ. ದುಷ್ಯಂತನ ಕುರಿತು ಮಹಾಭಾರತದಲ್ಲಿ ಆತ ಆನಂದಪೂರ್ಣವಾಗಿದ್ದನು ಎಂದು ವರ್ಣಿಸಲಾಗಿದೆ. ಮನುಷ್ಯನಿಗಿರುವ ಪೂರ್ಣಾನಂದವನ್ನು ಉಪನಿಷತ್ತಿನಲ್ಲಿ ಹೀಗೆ ವರ್ಣಿಸಲಾಗಿದೆ. ಯುವಕನಾಗಿರಬೇಕು, ಸಾಧುವಾಗಿರಬೇಕು, ವಿದ್ಯಾವಂತ, ಅಶಿಷ್ಟನಾಗಿಯೂ ನಿರೋಗಿಯಾಗಿಯೂ ದೃಢಕಾಯನಾಗಿಯೂ ಬಲಿಷ್ಠನಾಗಿಯೂ ಇರಬೇಕು. ದುಷ್ಯಂತ ಈ ಎಲ್ಲ ಗುಣಗಳನ್ನು ಹೊಂದಿರುವ ಕಾರಣ ಕಾಳಿದಾಸ ಆತನನ್ನು ಧೀರಲಲಿತ ನಾಯಕನನ್ನಾಗಿಸಿದ್ದಾನೆ. ಆತ ಕಣ್ವಾಶ್ರಮಕ್ಕೆ ಬರುವಾಗ ಅಲ್ಲಿನ ಪರಿಸರ ರಾಜನ ಮೇಲೆ ಪ್ರಭಾವ ಬೀರಿತು. ಅಲ್ಲಿರುವ ಹುಲಿ ಜಿಂಕೆಗಳೆಲ್ಲವೂ ಸಾಧುಸ್ವಭಾವದಿಂದ ಮಿತ್ರರಾಗಿ ವ್ಯವಹರಿಸುತ್ತಿದ್ದವು. ಇದನ್ನೆಲ್ಲವನ್ನೂ ನೋಡಿದ ರಾಜ ಅಮಾತ್ಯ ಪುರೋಹಿತರನ್ನೆಲ್ಲ ಹೊರಗಿಟ್ಟು ತಾನೊಬ್ಬನೇ ಆಶ್ರಮವನ್ನು ಪ್ರವೇಶಿಸಿದನು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ಆತ್ಮವಿಶ್ವಾಸದ ಕೊರತೆ ಅಧೈರ್ಯದ ಮೂಲ ಎಂಬ ವಿಷಾದ ಯೋಗ
ಕಣ್ವ ಮಹರ್ಷಿಗಳು ಆ ಸಮಯದಲ್ಲಿ ಆಶ್ರಮದಲ್ಲಿ ಇದ್ದಿರಲಿಲ್ಲ. ಅಲ್ಲಿರುವ ಅವರ ಶಿಷ್ಯರೆಲ್ಲರೂ ತಮ್ಮ ತಮ್ಮ ತಪೋನುಷ್ಠಾನಗಳಲ್ಲಿ ನಿರತರಾಗಿದ್ದರು. ಆಶ್ರಮಕ್ಕೆ ಬಂದ ಅತಿಥಿಯನ್ನು ಸತ್ಕರಿಸುವ ಸಲುವಾಗಿ ಸುಂದರಿಯಾದ ಶಕುಂತಲೆ ಹೊರಬಂದು ರಾಜನನ್ನು ಸತ್ಕರಿಸುತ್ತಾಳೆ. ರಾಜನಿಗೆ ಆಕೆಯನ್ನು ಕಂಡ ತಕ್ಷಣವೇ ಮೋಹವುಂಟಾಗಿಬಿಡುತ್ತದೆ. ಕಾಳಿದಾಸ ದುಷ್ಯಂತನ ಈ ದೋಷವನ್ನು ಮರೆಮಾಚಿದ್ದಾನೆ. ಶಕುಂತಲೆಯನ್ನು ರಾಜ ನೋಡುವುದು ಆಶ್ರಮದ ಹೊರವಲಯದ ಮರಗಿಡಗಳ ಮರೆಯಲ್ಲಿ. ಆಕೆಯ ಎದೆಗೆ ಕಟ್ಟಿದ ವಸ್ತ್ರದ ಕಟ್ಟು ಬಿಗಿಯಾಗಿದೆ. ಅದಕ್ಕೆ ಆಕೆಯ ಸಖಿ ಪ್ರಿಯಂವದೆ “ನನ್ನನ್ನೇಕೆ ದೂರುತ್ತೀಯಾ; ಸ್ತನಗಳನ್ನು ವಿಸ್ತಾರವಾಗಿ ಬೆಳೆಸಿದ ನಿನ್ನ ಯೌವನವನ್ನು ದೂರು” ಎನ್ನುವ ಮಾತುಗಳು ರಾಜ ಅವಳ ಕುರಿತು ಮೋಹಗೊಳ್ಳುವಂತೆ ಮಾಡಿದೆ. ಮೊದಲ ಅಂಕದಲ್ಲಿ ಅವರಿಬ್ಬರ ನಡುವಿನ ಪ್ರೇಮಕ್ಕೆ ಕಾರಣವಾಗುವ ದುಂಬಿ, ಸಖಿಯರು ಇಲ್ಲಿಲ್ಲ. ಚೇತೋಹಾರಿಯಾಗಿ ಓದುಗರನ್ನು ಬಡಿದೆಬ್ಬಿಸುವ ಲಲಿತತೆಯಿದೆ. ಶಕುಂತಲೆ ತಾನು ಕಣ್ವಋಷಿಯ ಮಗಳು ಎಂದಾಗ ರಾಜನಿಗೆ ಅನುಮಾನ; ಆಕೆ ತನ್ನ ಮತ್ತು ತನ್ನ ತಂದೆ ವಿಶ್ವಾಮಿತ್ರ ಮತ್ತು ತಾಯಿ ಮೇನಕೆಯ ವೃತ್ತಾಂತವನ್ನೆಲ್ಲ ಹೇಳುತ್ತಾಳೆ. ರಾಜನಿಗೆ ಆಕೆ ಕ್ಷತ್ರಿಯ ಕನ್ಯೆ ಎನ್ನುವುದು ತಿಳಿದು ಆಕೆಯನ್ನು ಮದುವೆಯಾಗಬೇಕೆಂದು ಕೇಳಿಕೊಳ್ಳುತ್ತಾನೆ. ಶಕುಂತಲೆ ಸುಮ್ಮನೆ ಒಪ್ಪಿಕೊಳ್ಳುವುದಿಲ್ಲ. ತನ್ನ ತಂದೆ ಕಣ್ವ ಮಹರ್ಷಿ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಬರುತ್ತಾರೆ, ಅವರ ಸಮ್ಮತಿ ಪಡೆದು ವಿವಾಹವಾಗು ಎನ್ನುತ್ತಾಳೆ. ಇಲ್ಲಿ ರಾಜನಿಗೆ ಅವಳನ್ನು ಕೂಡಲೇ ಹೊಂದಬೇಕೆನ್ನುವ ಚಪಲ. ಅದಕ್ಕೆ ಆತ ತನ್ನಮಾತಿನ ಜಾಲವನ್ನು ಹೆಣೆಯುತ್ತಾನೆ.
ಆತ್ಮನೋ ಬನ್ಧು ರಾತ್ಮೈವ ಗತಿರಾತ್ಮೈವ ಚಾತ್ಮನಃ |
ಆತ್ಮನೋ ಮಿತ್ರಮಾತ್ಮೈವ ತಥಾತ್ಮಾ ಚಾತ್ಮನಃ ಪಿತಾ |
ಆತ್ಮನೈವಾತ್ಮನೋ ದಾನಂ ಕರ್ತುಮರ್ಹಸಿ ಧರ್ಮತಃ |
(ಬೇರೊಬ್ಬರನ್ನು ಅವಲಂಬಿಸದೇ ತನ್ನ ಅದೃಷ್ಟವನ್ನು ತಾನೇ ರೂಪಿಸಿಕೊಳ್ಳಬೇಕು. ನಮ್ಮ ಬಂಧುಗಳು ನಾವೇ. ನಮ್ಮ ಆತ್ಮವೇ ನಮಗೆ ಗತಿ. ನಮ್ಮ ಆತ್ಮವೇ ಮಿತ್ರ. ತಂದೆಯೂ ಸಹ ನಮ್ಮ ಆತ್ಮನೇ ಆಗಿದ್ದಾನೆ. ಆದುದರಿಂದ ಶಕುಂತಲೆ! ಬೇರೆಯವರಿಂದ ದಾನ ಮಾಡಿಸಿಕೊಳ್ಳದೇ ನಿನ್ನನ್ನು ನೀನೇ ಸ್ವತಃ ಧರ್ಮದ ಮೂಲಕವಾಗಿ ಅರ್ಪಿಸಿಕೊಳ್ಳುವುದೇ ಯೋಗ್ಯವಾಗಿದೆ.)
ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ಜಗದ್ವಂದ್ಯನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ
ಇದೊಂದು ಮಹತ್ವದ ಪದ್ಯವಾಗಿದೆ. ಗೀತೆಯ ಆರನೆಯ ಅಧ್ಯಾಯದಲ್ಲಿ ಕೃಷ್ಣ “ಉದ್ಧೇರೇತ್ಮಾನಂ ನಾತ್ಮಾನಮವಸಾದಯೇ…” ಎಂದಿದ್ದಾನೆ. ʼʼತನ್ನ ಔನ್ನತ್ಯ, ಅಧಃಪತನಕ್ಕೆಲ್ಲ ತಾನೇ ಕಾರಣ. ಇಂದ್ರಿಯಗಳ ಸುಖಕ್ಕೆ ವಶನಾಗದೇ ಅದನ್ನು ಜಯಿಸಬೇಕು. ಇಂದ್ರಿಯಗಳನ್ನು ಜಯಿಸದವನಿಗೆ ಆತ್ಮವು ಬಾಹ್ಯಶತ್ರುವಿನಂತೆ ಶತ್ರುವಾಗಿರುವುದು” ಎನ್ನುವುದು ಗೀತೆಯ ಶ್ಲೋಕದ ತಾತ್ಪರ್ಯ. ಈ ಶ್ಲೋಕ ಆಧ್ಯಾತ್ಮದ ತುತ್ತತುದಿಗಿದ್ದರೆ ಅಂತಹುದೇ ಬೇರೊಂದು ಅರ್ಥ ಬರುವ ಶ್ಲೋಕದ ಮೂಲಕ ದುಷ್ಯಂತ ಇಲ್ಲಿ ಮಾತಿನ ಜಾಣನಡೆಯನ್ನು ಹಣೆದಿದ್ದಾನೆ. ತಮ್ಮಿಬ್ಬರ ಮೂಲ ಕ್ಷತ್ರಿಯತ್ವ; ಕ್ಷತ್ರಿಯರಿಗೆ ಗಂಧರ್ವ ವಿವಾಹ ಯೋಗ್ಯವೆನ್ನುವುದನ್ನು ಮತ್ತೆ ಮತ್ತೆ ಮನಗಾಣಿಸುತ್ತಾನೆ, ಇಲ್ಲಿ ಕಣ್ಣಿಗೆ ಕಾಣುವ ದೇಹವೇ ಆತ್ಮವೆನ್ನುವ ಭ್ರಮೆಗೆ ಶಕುಂತಲ ಸಿಕ್ಕುಬಿದ್ದಿದ್ದಾಳೆ. ಮಾತು ಹೇಗೆ ಮನವನ್ನು ಕೆಡಿಸಬಹುದೆನ್ನುವದಕ್ಕೆ ಇದೊಂದು ಉದಾಹರಣೆ.
ಶಕುಂತಲೆ ಇಲ್ಲಿ ಕಾಳಿದಾಸನ ನಾಟಕದ ನಾಯಿಕೆಯಂತೆ ಮುಗ್ಧಳಲ್ಲ. ಅವಳಿಗೆ ತನ್ನ ಭವಿಷ್ಯದ ಕುರಿತು ಸ್ಪಷ್ಟವಾದ ನಿಲುವಿದೆ. “ಸರಿ, ನೀನು ಹೇಳಿದಂತೆ ನನ್ನ ಆತ್ಮವೇ ನನಗೆ ಪ್ರಭು ಎನ್ನುವುದಾದರೆ ನನ್ನ ಆತ್ಮವನ್ನು ಪ್ರದಾನ ಮಾಡುವೆನು. ಆದರೆ ಒಂದು ನಿಬಂಧನೆಯ ಮೇಲೆ” ಎನ್ನುತ್ತಾ ಮುಂದೆ ತಮ್ಮಿಬ್ಬರಿಗೆ ಹುಟ್ಟುವ ಮಗನನ್ನೇ ಮುಂದಿನ ಚಕ್ರಾಧಿಪತಿಯಾಗಬೇಕು ಎನ್ನುವ ಭಾಷೆ ಕೊಡು ಎನ್ನುತ್ತಾಳೆ. ದುಷ್ಯಂತ ಮುಂದುವರಿದು ನಿನ್ನನ್ನೇ ಪಟ್ಟದರಸಿಯನ್ನಾಗಿಯೂ ನಿನ್ನ ಮಗನನ್ನೇ ರಾಜನನ್ನಾಗಿಯೂ ಮಾಡುತ್ತೇನೆ ಎಂದು ಭಾಷೆ ಕೊಟ್ಟು ಅವಳೊಡನೆ ಗಾಂಧರ್ವ ವಿಧಿಯ ಮೂಲಕ ಸೇರುತ್ತಾನೆ. ಶಾಕುಂತಲಾ ನಾಟಕದಲ್ಲಿನ ಉದಾತ್ತತೆಗೂ ಇಲ್ಲಿನ ರಾಜನೀತಿಗೂ ನೆಲ-ಮುಗಿಲಿನ ಅಂತರವಿದೆ. ಇಲ್ಲಿ ಶಕುಂತಲೆಯ ವ್ಯವಹಾರ “ಕನ್ಯಾ ವರಯತೇ ರೂಪಂ– ಕನ್ಯೆ ತನ್ನ ಲಗ್ನವಾಗುವವ ರೂಪವಂತನಾಗಿರಬೇಕೆಂದು ಬಯಸುತ್ತಾಳೆ” ಎನ್ನುವ ಸುಭಾಷಿತಕ್ಕನುಗುಣವಾಗಿದೆ. ಅಭಿಜ್ಞಾನದಲ್ಲಿ ಶಕುಂತಲೆ ಸಂಪೂರ್ಣ ಮುಗ್ಧೆ; ಆಕೆಯೂ ಮಹಾರಾಜನನ್ನು ನೋಡಿದ ಕೂಡಲೇ ಮೋಹಿತಳಾಗಿದ್ದಾಳೆ. ಆಶ್ರಮದ ಹೊರವಲಯದಲ್ಲಿ ಕಂಡ ಅವನಿಂದ ದೂರ ಹೋಗುವ ಮನಸ್ಸು ಆಕೆಗಿಲ್ಲ. ಹೂವಿನ ಮಧುವನ್ನು ಹೀರಿ ಮತ್ತೆ ತನ್ನ ಕೆಲಸವಾಯಿತು ಎಂದು ಮತ್ತೊಂದು ಹೂವಿಗೆ ಹಾರುವ ದುಂಬಿಯಂತೆ ಶಕುಂತಲೆಯನ್ನು ಕಾಡುವ ದುಂಬಿ ದುಷ್ಯಂತನಾಗಿ ರೂಪಾಂತರವಾಯಿತು ಎನ್ನುವ ಕಾಳಿದಾಸನ ಕಥಾನಿರ್ಮಾಣಕ್ಕೆ ತಲೆಬಾಗಲೇಬೇಕು.
ಕಾಳಿದಾಸನ ಶಕುಂತಲಾಗಿಂತ ಮಹಾಭಾರತದ ಶಕುಂತಲಾ ದಿಟ್ಟ ನಾರಿಯಾಗಿ ನಾಯಕಿಯ ಕೋಮಲತೆಗಳಿಗಿಂತಲೂ ಮೇಲಕ್ಕೆದ್ದ ರೀತಿಯನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ರಾಮಕೃಷ್ಣ ಪರಮಹಂಸರ ತಪಸ್ಸಿನ ಸಾಫಲ್ಯದ ಫಲ ಸ್ವಾಮಿ ವಿವೇಕಾನಂದ