Site icon Vistara News

ಧವಳ ಧಾರಿಣಿ ಅಂಕಣ | ರಾಮಕೃಷ್ಣ ಪರಮಹಂಸರ ತಪಸ್ಸಿನ ಸಾಫಲ್ಯದ ಫಲ ಸ್ವಾಮಿ ವಿವೇಕಾನಂದ

swami vivekananda birthday

ವಿಶ್ವಾತ್ಮನ ಸಂಯಮದಿಂದ ಸೃಷ್ಟಿಸಿದ ಅದ್ಭುತ ಸ್ವರಮೇಳ

“ನೀವು ದೇವರನ್ನು ನೋಡಿದ್ದೀರಾ?”

“ಹೌದು ನೋಡಿದ್ದೇನೆ, ಆತನನ್ನು ತ್ರಿಕಾಲದಲ್ಲಿಯೂ ನೋಡುತ್ತಿದ್ದೇನೆ. ಈ ಜಗತ್ತನ್ನೂ ನಿಮ್ಮೆಲ್ಲರನ್ನೂ ನೋಡುವಂತೆ ಅಲ್ಲ ಅದು. ಆತನನ್ನು ಒಳಗೂ ಹೊರಗೂ ಎಲ್ಲೆಲ್ಲಿಯೂ ನೋಡುತ್ತಿದ್ದೇನೆ… ನೋಡುವ ಸಾಮರ್ಥ್ಯ ನನ್ನಲ್ಲಿದೆ… ನೋಡುವೆ.”

“ನನಗೆ ತೋರಿಸುವಿರಾ?”

“ಓಹೋ! ಅದಕ್ಕೇನು! ನನಗೆ ಕಂಡ ಈ ಸತ್ಯ ನಿನಗೂ ಕಾಣಲೇಬೇಕಲ್ಲ. ನಿಮ್ಮೆಲ್ಲರನ್ನೂ ಕಾಣುವುದಕ್ಕಿಂತ ಚೆನ್ನಾಗಿ ಆತ ನನಗೆ ಕಾಣುತ್ತಾನೆ.ʼʼ

“ಹೇಗೆ ನೋಡುವುದು?ʼʼ

“ಕಾಣುವ ಪ್ರಯತ್ನ ಮಾಡಬೇಕು. ಆತನನ್ನು ಸಾಕ್ಷಾತ್ಕರಿಸಿಕೊಳ್ಳಬಹುದು.ʼʼ

ನರೇಂದ್ರ ಮತ್ತು ರಾಮಕೃಷ್ಣ ಪರಮಹಂಸ ಎನ್ನುವ ಗುರುಶಿಷ್ಯರ ಈ ಸಂಭಾಷಣೆ ಜಗತ್ಪ್ರಸಿದ್ಧ. ಬಹುಶಃ ಪ್ರಪಂಚದಲ್ಲಿ ಎಲ್ಲಿಯೂ ದೇವರನ್ನು ನಾನು ನೋಡಿದ್ದೇನೆ ಎಂದು ಧೈರ್ಯವಾಗಿ ಹೇಳಿದ ಮನುಷ್ಯನಿಲ್ಲ. ನೋಡಿದವರು ಹೇಳುವುದಿಲ್ಲ. ದೇವರು ಎನ್ನುವ ಸತ್ಯವನ್ನು ನಾವಾಗಿಯೇ ಅನುಭವಿಸಬೇಕು. ಡಿವಿಜಿ “ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ” ಎಂದಿದ್ದಾರೆ. ಇಲ್ಲಿ ನರೇಂದ್ರ ಕೇಳಿರುವುದು ಚಿತ್ರದಲ್ಲಿ ಕಾಣುವ ದೇವರಲ್ಲ; ಅದು ವಿಶ್ವಾತ್ಮನ ದಿವ್ಯಚೇತನ. ಉಪನಿಷತ್ತಿನಲ್ಲಿ ಗುರು ಶಿಷ್ಯನಿಗೆ ದೇವರನ್ನು ನೇರವಾಗಿ ತೋರಿಸುವುದಿಲ್ಲ. ಹೋಗಬಹುದಾದ ದಾರಿಯ ದರ್ಶನ ಮಾಡಿಸುತ್ತಾನೆ. ಕೊನೆಯ ಹಂತದಲ್ಲಿ ಆತ “ಇಲ್ಲಿಂದ ಮುಂದೆ ನೀನೇ ಹೋಗಿ ಅನುಭವ ಪಡೆದುಕೊ” ಎಂದು ನಿಂತು ಬಿಡುತ್ತಾನೆ. ಇಲ್ಲಿಂದ ಮುಂದೆ “ಯತೋ ವಾಚೇ ನಿವರ್ತಂತೆ/ ಅಪ್ರಾಪ್ಯ ಮನಸಾ ಸಹ- ವಾಕ್ಕೂ ಹೋಗುವುದಿರಲಿ, ಮನಸ್ಸಿಗೂ ಸಹ ಇಲ್ಲಿಂದ ಮುಂದೆ ಹೋಗಲಾಗುವುದಿಲ್ಲʼʼ ಎಂದು ಗುರು ಸುಮ್ಮನಾಗುತ್ತಾನೆ. ಹಾಗಂತ ಅಲ್ಲಿಂದ ಮುಂದೆ ಹೋಗುವ ಹಾದಿ ಇಲ್ಲವೆಂದಲ್ಲ. ಶಿಷ್ಯನೇ ಗುರುವನ್ನು ಹಿಂದಕ್ಕೆ ಬಿಟ್ಟು ಮುಂದೆ ಸಾಗಿ ತನ್ನೊಳಗೆ ತಾನು ಪಡೆಯುವ ಅನುಭೂತಿ ಅದು.

ಇದು ಒಂದು ರೀತಿಯಲ್ಲಿ ಅಡುಗೆ ಮಾಡಿದ ವ್ಯಂಜನಗಳನ್ನು ವರ್ಣಿಸಿದಂತೆ. ಜಿಲೇಬಿ ಹೀಗಿದೆ, ತುಪ್ಪ ಮತ್ತು ಹಾಲಿನೊಂದಿಗಿನ ಹೋಳಿಗೆಯ ರುಚಿಯೇ ಬೇರೆ ಎಂದು ಬಣ್ಣಿಸಿ ಬಾಯಲ್ಲಿ ನೀರೂರಿಸಬಹುದು. ಅದನ್ನು ಸವಿದವನಿಗೆ ಮಾತ್ರ ಆ ವ್ಯಂಜನದ ರುಚಿಯ ಅನುಭವವಾಗುತ್ತದೆ.

ನರೇಂದ್ರನಿಗೆ ಹೀಗೆ ಕೇಳುವ ಪ್ರಶ್ನೆ ಹೊಸತಲ್ಲ, ಆತ ಈ ಪ್ರಶ್ನೆಯನ್ನು ಸಿಕ್ಕ ಸಿಕ್ಕ ಜನರ ಜತೆ ಕೇಳಿದ್ದ. ಮಾತು ನಿಲ್ಲುವ ಮನಸ್ಸಿನ ಆಗಮದಾಚೆ ಇರುವ ತಾಣದಲ್ಲಿದ್ದ ದೇವರನ್ನು ಕಂಡಿರುವೆ ಎಂದ ವ್ಯಕ್ತಿಯನ್ನು ಎಲ್ಲಿಯೂ ಕೇಳಿಲ್ಲ. ದೇವರು ಎನ್ನುವ ವಸ್ತುವೇ ಎಲ್ಲರನ್ನೂ ಕಾಡುವ ಪ್ರಶ್ನೆ. ಬೇಕಿರಲಿ ಬೇಡದಿರಲಿ ವಿಕ್ರಮಾದಿತ್ಯನ ಬೆನ್ನು ಹತ್ತಿದ ಬೇತಾಳನಂತೆ ನಮ್ಮೊಳಗೆ ಯಾರೋ ಈ ಪ್ರಶ್ನೆಯನ್ನು ನಿರಂತರ ಹುಟ್ಟುಹಾಕುತ್ತಲೇ ಇದ್ದಾರೆ. ಜಗತ್ತಿನ ಎಲ್ಲಾ ಮತಗಳಿಗೂ ದೇವರೇ ಮೂಲ ದ್ರವ್ಯ. ಅವರ ಪ್ರವಾದಿಗಳು ಕಂಡ ದೇವರು ಮಾತ್ರ ಸತ್ಯ. ಅವರ ಪವಿತ್ರ ಗ್ರಂಥಗಳೇ ಎಲ್ಲದಕ್ಕೂ ಆಧಾರ. ಮಿಕ್ಕಿದ್ದೆಲ್ಲ ಸ್ವೀಕಾರ್ಯವಲ್ಲ. ತತ್ವಶಾಸ್ತ್ರ, ಪ್ರಾರ್ಥನೆಗಳಿಂದ ಹಿಡಿದು ಭಯೋತ್ಪಾದನೆಗಳವರೆಗೆ ದೇವರನ್ನೇ ತಳಕುಹಾಕಿಕೊಂಡಿವೆ. ದೇವರಾಣೆಯಾಗಿ ದೇವರಿಲ್ಲವೆಂದು ಗೊತ್ತಾದರೆ ಬಹುಶಃ ಮನುಷ್ಯನಲ್ಲಿ ಪಾಶವೀ ಶಕ್ತಿ ವಿಜೃಂಭಿಸಿ ಬಲವಿದ್ದವನದ್ದೇ ಬದುಕು ಎನ್ನುವ ಕಾಡಿನ ಶಾಸನವೇ ಬರುತ್ತಿತ್ತೋ ಏನೊ. ಮನುಷ್ಯನೆಂದು ಈ ಜೀವಿಯನ್ನು ಕರೆಯುವದು, ಮನಸ್ಸೆನ್ನುವುದು ಇರುವುದರಿಂದ. ಚಿಂತಿಸುವುದು, ತರ್ಕಿಸುವುದು, ವಿಶ್ಲೇಷಿಸುವುದು, ತನಗೆ ತೋಚಿದ ರೀತಿಯಲ್ಲಿ ಅರ್ಥೈಸಿಕೊಳ್ಳುವುದು ಇವೆಲ್ಲವೂ ಮನಸ್ಸಿನಿಂದಲೇ.

ಇದೊಂದು ಪ್ರಶ್ನೋತ್ತರವಲ್ಲದಿದ್ದರೆ ನರೇಂದ್ರ ವಿವೇಕಾನಂದರಾಗಲು ಸಾಧ್ಯವಾಗುತ್ತಿರಲಿಲ್ಲ. ಇದು ಸ್ವಾಮಿ ವಿವೇಕಾನಂದರ ಬದುಕಿಗೆ ಮಹಾ ತಿರುವನ್ನು ಕೊಟ್ಟ ಘಟನೆ. ತಂದೆ ವಿಶ್ವನಾಥ ದತ್ತರು ಆ ಕಾಲದ ಪ್ರಸಿದ್ಧ ವಕೀಲರು. ಆ ಕಾಲದ ಕುಲೀನ ಬಂಗಾಲಿಗಳಂತೆ ಸಂಸ್ಕೃತ ತಿಳಿದಿದ್ದರೂ ಬೈಬಲ್‌ನ ಚಿಂತನೆಗಳ ಕುರಿತು ಓದಿದರೆ ಸಮಾಜದಲ್ಲಿ ಒಂದು ಗೌರವ ಎನ್ನುವವರ ಪ್ರಭಾವ ಅವರಲ್ಲಿಯೂ ಇತ್ತು. ತಾಯಿ ಭುವನೇಶ್ವರಿ ದೇವಿಯವರು ಪರಮ ದೈವಭಕ್ತರು. ಹೀಗೆ ಈ ಎರಡು ವಿಭಿನ್ನ ಮನೋಭಾವದ ನಡುವೆ ಬೆಳೆದವ ನರೇಂದ್ರ.

ಬಾಲ್ಯದಲ್ಲಿ ತಾಯಿ ಭುವನೇಶ್ವರಿ ದೇವಿ ಕಲಿಸಿದ ಭಕ್ತಿಗೀತೆ, ಭಜನೆಗಳನ್ನು ಹಾಡುತ್ತಿದ್ದ ಬಾಲಕನಿಗೆ ಬೆಳೆದಂತೆಲ್ಲ ವ್ಯಷ್ಟಿ, ಸೃಷ್ಟಿ, ಸಮಷ್ಟಿ ಮತ್ತು ಪರಮೇಷ್ಟಿಯ ಕುರಿತು ಹಲವಾರು ಗೊಂದಲಗಳು ಮೂಡಿದವು. ಇದಕ್ಕೆ ಉತ್ತರ ಕಂಡುಕೊಳ್ಳಲು ಆತ ಅನೇಕರನ್ನು ಪ್ರಶ್ನಿಸತೊಡಗಿದ. ಕಾಲೇಜಿನಲ್ಲಿ ಆತ ಆರಿಸಿಕೊಂಡಿರುವುದು ತತ್ತ್ವಶಾಸ್ತ್ರವನ್ನು. ಅಮ್ಮನ ನಂಬುಗೆಯ ಆಧ್ಯಾತ್ಮಿಕ ಭಾವನೆಯನ್ನು ಮೀರಲಾರ, ಹೊರಗೆ ಕುಲೀನರು ಅನುಸರಿಸುತ್ತಿರುವ ಪಾಶ್ಚಾತ್ಯ ನಡವಳಿಕೆಯ ಕಡೆ ಮನಸ್ಸು ಸೆಳೆಯದಿದ್ದರೂ ಇವೆಲ್ಲವೂ ಸತ್ಯವೇನೋ, ಎನ್ನುವ ಜಿಜ್ಞಾಸುತನ ಆತನಲ್ಲಿ ಸಹಜವಾಗಿಯೇ ಮೂಡಿತು. ಈ ಹಂತದಲ್ಲಿ ಆತನನ್ನು ಸೆಳೆದಿರುವುದು ಮಧ್ಯಮ ಮಾರ್ಗವನ್ನು ಅನುಸರಿಸುವ ಬ್ರಹ್ಮಸಮಾಜ.

ಬ್ರಹ್ಮ ಸಮಾಜದ ಬೇರು ಭಾರತೀಯ ಚಿಂತನೆಗಳ ಹಿನ್ನೆಲೆಯೆಂದಿದ್ದರೂ ಇದರ ಸ್ಥಾಪಕ ರಾಜಾರಾಮ ಮೋಹನರಾಯರು ಬೈಬಲ್ ಮತ್ತು ಇಸ್ಲಾಮಿನ ಓದಿನಿಂದ ಪ್ರಭಾವಿತರಾಗಿದ್ದರು.. ನರೇಂದ್ರನಾಥನು ಪ್ರಖ್ಯಾತರಾದ ಧರ್ಮಪ್ರಚಾರಕರನ್ನು ಭೇಟಿಯಾದರೂ ಸಹ ದೇವರ ಅಸ್ತಿತ್ವದ ಬಗೆಗಿನ ಇವನ ಪ್ರಶ್ನೆಗಳಿಗೆ ಸಮರ್ಪಕವಾದ ಯಾವ ಉತ್ತರವೂ ಸಿಗಲಿಲ್ಲ. ಇದು ಅವನಲ್ಲಿ ಆಧ್ಯಾತ್ಮಿಕ ಘರ್ಷಣೆಯನ್ನು ಮತ್ತಷ್ಟು ವೃದ್ಧಿಗೊಳಿಸಿತು. ಬ್ರಹ್ಮಸಮಾಜ ನಿರಾಕಾರ ಬ್ರಹ್ಮನನ್ನು ನಂಬುವ ಮತ್ತು ಮೂರ್ತಿಪೂಜೆಯನ್ನು ವಿರೋಧಿಸುವ ಮತ್ತು ಏಕದೇವತಾವಾದವನ್ನು ಪುರಸ್ಕರಿಸುವ ಕೇಂದ್ರವಾಗಿರುವುದರಿಂದ ಸಹಜವಾಗಿಯೇ ನರೇಂದ್ರನಿಗೆ ಸಮಾಧಾನವಿಲ್ಲ. “ಆದಿಮೂಲವ ಹುಡುಕಬೇಕು, ತೂರಿ ತುರ್ಯಾನಂದದಲಿ ನಿಲ್ಲಬೇಕು” ಎನ್ನುವ ಹಂಬಲ ಹೆಚ್ಚಾಯಿತೇ ಹೊರತು ಕಡಿಮೆಯಾಗಲಿಲ್ಲ. ಆಧ್ಯಾತ್ಮದ ಹಸಿವು ಒಮ್ಮೆ ಆದರೆ ಅದು ಮನಸ್ಸಿನ ಒಳಗೇ ಇಳಿದುಬಿಡುತ್ತದೆ. ಕಾಣದ ಬೆಳಕಿಗಾಗಿ ತಹತಹಿಸುತ್ತದೆ.

ಈ ಹಂತದಲ್ಲಿ ಕಾಲೇಜಿನಲ್ಲಿ ಇವರ ಪ್ರಾಧ್ಯಾಪಕರಾದ ವಿಲಿಯಮ್ ಹೇಸ್ಟಿಯವರು William Wordsworthನ The Excursion ಕವನವದಲ್ಲಿನ ಸಮಾಧಿ (Trance) ಎನ್ನುವ ಪದವನ್ನು ವಿವರಿಸುವಾಗ ತಾನು ಹುಡುಕುತ್ತಿರುವುದು ಸಿಕ್ಕಿದಂತೆ ನರೇಂದ್ರನಿಗೆ ಭಾಸವಾಯಿತು. ಅದರ ಕುರಿತು ವಿವರಣೆಯನ್ನು ಕೇಳಿದರೆ ಪ್ರೋ. ಹೇಸ್ಟಿಯವರಿಗೆ ವಿವರಿಸಲು ಸಾಧ್ಯವಾಗಲಿಲ್ಲ. ಅವರು ಈ ವಿಷಯದ ಕುರಿತು ಹೆಚ್ಚಿಗೆ ತಿಳಿಯಲು ದಕ್ಷಿಣೇಶ್ವರಕ್ಕೆ ಹೋಗಿ ರಾಮಕೃಷ್ಣ ಪರಮಹಂಸರನ್ನು ಕಾಣುವಂತೆ ಸಲಹೆ ನೀಡಿದರು. ಭಾರತೀಯ ಚಿಂತನೆಗಳು ಪಾಶ್ಚಾತ್ಯ ದೃಷ್ಟಿಯಿಂದ ನೋಡಿದರೆ ಅದು ಅರ್ಥವಾಗುವುದಿಲ್ಲ. ಮೂಲಭೂತವಾಗಿ ನಮ್ಮ ಏಕದೇವತಾ ವಾದವು “ಸತ್ಯವೊಂದೇ, ಆದರೆ ತಿಳಿದವರು ಅದನ್ನು ಬಹುವಿಧವಾಗಿ ಹೇಳುತ್ತಾರೆ” ಎನ್ನುವ ಮೂಲಕ ಬಹುತ್ವದಲ್ಲಿ ಏಕತೆಯನ್ನು ಕಲಿಸುತ್ತವೆ. ಭಾರತೀಯ ನೆಲದ ಚಳವಳಿ ಪಾಶ್ಚಾತ್ಯಮೂಲದಲ್ಲಿ ಭಾರತೀಯತೆಯನ್ನು ಬೋಧಿಸುವದಕ್ಕೂ ಪಾಶ್ಚಾತ್ಯ ತತ್ತ್ವಶಾಸ್ತ್ರದ ವ್ಯಕ್ತಿ ಭಾರತೀಯನ ಆಧ್ಯಾತ್ಮದ ಹಸಿವಿಗೆ ಭಾರತೀಯ ಗುರುವನ್ನು ಹುಡುಕು ಎಂದು ಹೇಳಿರುವುದು ನರೇಂದ್ರನ ವಿಚಾರದಲ್ಲಿ ಗಮನಾರ್ಹವಾದುದು.

1881ರ ನವಂಬರ ತಿಂಗಳು. ಅದು ಸಾಮಾನ್ಯ ಬೆಳಗಾಗಿರಲಿಲ್ಲ. ಅದೊಂದು ಮಹಾ ಘಳಿಗೆಗೆ ಬಹುಶಃ ಕಾಲ ಕಾಯುತ್ತಿತ್ತೋ ಏನೋ. ಈ ಚಾರಿತ್ರಿಕ ಘಟನೆಗಳನ್ನು ವಿವರಿಸುವ ಉಪಮೆಗಳಲ್ಲಿ ಶಬ್ದಗಳು ಸೋಲುತ್ತವೆ. ಮಾತು ಮೌನಕ್ಕೆ ಶರಣಾಗುತ್ತದೆ. ಒಂದು ಕಡೆ ಈ ಕ್ಷಣಕ್ಕಾಗಿ ಕಾಯುತ್ತಿರುವ ಮಹಾ ಚೇತನ; ಇನ್ನೊಂದು ಕಡೆ ತನ್ನೊಳಗೇ ಇರುವ ಜ್ಯೋತಿಯನ್ನು ತಾನು ಅರಿಯಲಾರದೇ ಬಾಹ್ಯಪ್ರಪಂಚದಲ್ಲಿ ಹುಡುಕುತ್ತಿರುವ ತರುಣ. ಈ ಭೇಟಿಯೆನ್ನುವುದು ಆಕಳು ತನ್ನ ಕರುವನ್ನು ಕಂಡಾಗ ಜೋರಾಗಿ ಅಂಬಾ ಎನ್ನುವ ಕೂಗಿನಂತೆ ಇರಲಿಲ್ಲ. ಶೃಂಗದ ತುದಿಯಿಂದ ಹರಿದು ಬಂದ ನದಿ ಸಾಗರ ಸೇರುವಾಗಿನ ಮಂದ ನಡೆಯೂ ಅದಾಗಿರಲಿಲ್ಲ. ಈ ಮಹಾಸಂಪರ್ಕವನ್ನು ರಸಋಷಿ ಕುವೆಂಪು “ದಕ್ಷಿಣೇಶ್ವರದ ಮಹಾಜ್ಯೋತಿಯ ಬಳಿಗೆ ಮತ್ತೊಂದು ಮಹಾಜ್ಯೋತಿ ಬಂದಿತು” ಎಂದು ವರ್ಣಿಸುತ್ತಾರೆ. ಈ ಪರಸ್ಪರ ಸಂದರ್ಶನವನ್ನು ಕುವೆಂಪು “ಭೂಮಂಡಲದ ಧರ್ಮಚರಿತ್ರೆಯಲ್ಲಿ ಒಂದು ಮಹಾ ಸಂಘಟನೆ. ಅದರಿಂದ ಪ್ರಾಚೀನ ಅರ್ವಾಚೀನಗಳೆರಡಕ್ಕೂ ಅಭಿಮಾನದ ವಿಷಯವಾದ ಒಂದು ದಿಗ್ವಿಜಯ ಸಂಭವಿಸಿತೆಂದೇ ಹೇಳಬಹುದು” ಎನ್ನುತ್ತಾರೆ.

ಈ ಭೇಟಿಯ ಮೂಲವಿರುವುದು ʼಸಮಾಧಿʼಯೆನ್ನುವ ಇನ್ನೊಂದು ಬೆಳಕಿನ ಮೂಲಕವಾಗಿ. ಈ ಸಮಾಧಿಯೆನ್ನುವುದು ಪರಮಹಂಸರಿಗೂ ಸೂಚನೆಯನ್ನು ಕೊಟ್ಟಿತ್ತು. ಅವರೊಮ್ಮೆ ಸಮಾಧಿಯಲ್ಲಿರುವಾಗ ಅಖಂಡವಾಗಿ ಪ್ರಸರಿಸಿದ್ದ ಜ್ಯೋತಿ ಘನೀಭೂತವಾಗಿ ಒಂದು ದಿವ್ಯ ಶಿಶುವಿನ ಆಕಾರ ತಾಳಿ ಧರಾಭಿಮುಖವಾಗಿ ಅವತರಿಸುತ್ತಿದ್ದುದ್ದನ್ನು ನೋಡಿ ವಿಸ್ಮಿತರಾಗಿದ್ದರು (ಕುವೆಂಪು ಅವರ ವಿವರಣೆ). ಉಪನಿಷತ್ತಿನಲ್ಲಿ ಗುರು ತನ್ನ ಶಿಷ್ಯನನ್ನು ಕಂಡ ತಕ್ಷಣ ಆತನನ್ನು ಸ್ವೀಕರಿಸುವುದಿಲ್ಲ. ಪರಮಹಂಸರು ನರೇಂದ್ರನನ್ನು ನೋಡಿದೊಡನೆಯೇ ತಾನು ಸಮಾಧಿ ಸ್ಥಿತಿಯಲ್ಲಿದ್ದಾಗ ಕಂಡ ಬೆಳಕಿನ ಪುಂಜ ಈತನೇ ಎನ್ನುವುದು ತಿಳಿಯಿತು. ಆದರೂ ಸುಮ್ಮನಿದ್ದರು. ನರೇಂದ್ರನಿಗೆ ರಾಮಕೃಷ್ಣರನ್ನು ನೋಡಿ ಏನೋ ಒಂದು ಸೆಳೆತ ಹುಟ್ಟಿತು. ಅವರ ಎದುರು ಏನನ್ನೂ ಕೇಳಬೇಕೆನಿಸಲಿಲ್ಲ. ಕೆಲವು ಕೀರ್ತನೆಗಳನ್ನು ಹಾಡಿದನು. ಆತನಲ್ಲಿರುವ ಅತೃಪ್ತಿ ಮತ್ತು ಆಧ್ಯಾತ್ಮಿಕ ಹಸಿವು ರಾಮಕೃಷ್ಣರ ಸುತೀಕ್ಷ್ಣ ದೃಷ್ಟಿಗೆ ಬಿತ್ತು. ಸುಮ್ಮನಿದ್ದರು. ಆತನನ್ನು ದಕ್ಷಿಣೇಶ್ವರಕ್ಕೆ ಬರುವಂತೆ ಕರೆದರು. ನರೇಂದ್ರನಿಗೆ ಏನೋ ಒಂದು ಸಿಕ್ಕ ಅನುಭವ; ಆದರೆ ದೇವರ ಕುರಿತಾದ ಆತನ ಸಂಶಯ ಬಗೆಹರಿಯಲಿಲ್ಲ. ಹೊಳಹು ಮಾತ್ರ ತೋರುತ್ತಿದೆ. ಒಂದು ಬಗೆಯ ಆಕರ್ಷಣೆಗೆ ಆತ ಸಿಲುಕಿಬಿಟ್ಟ. ತಡಮಾಡಲಿಲ್ಲ. ಕೆಲ ದಿನಗಳಲ್ಲಿಯೇ ಆತ ದಕ್ಷಿಣೇಶ್ವರಕ್ಕೆ ಬಂದು ರಾಮಕೃಷ್ಣರನ್ನು ಕಂಡ, ಹಾಡಿದ. ಪರಮಹಂಸರಿಗೆ ತಡೆದುಕೊಳ್ಳಲಾಗಲಿಲ್ಲ. ಭಾವಪರವಶರಾಗಿ ಆತನ ಕೈಹಿಡಿದು ಒಳಕರೆದುಕೊಂಡು ಹೋಗಿ “ತನ್ನ ಅಂತರಂಗದ ಅನುಭವವನ್ನು ಹೇಳಲು ಅಧಿಕಾರಿಯೊಬ್ಬನಿಗಾಗಿ ಕಾಯುತ್ತಿರುವೆ” ಎಂದು ಕೈಹಿಡಿದು ಅಳುತ್ತಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಜಗದ್ವಂದ್ಯನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ

ಸುಲಭದಲ್ಲಿ ದೇವರನ್ನು ತೋರಿಸುತ್ತೇನೆ ಎಂದ ಗುರು ತಕ್ಷಣಕ್ಕೆ ಜಾದು ಮಾಡಿ ತೋರಿಸಲಿಲ್ಲ. ಬೆಳಕಿಗಾಗಿ ಕಾಯುತ್ತಿದ್ದವನಿಗೆ ತೋರಿಸಬೇಕಾದ ಬೆಳಕು ಕಠೋಪನಿಷತ್ತಿನಲ್ಲಿ ಯಮ ಹೇಳುವ “ಅಲ್ಲಿ ಸೂರ್ಯನಿಲ್ಲ; ಚಂದ್ರತಾರೆಗಳೂ ಇಲ್ಲ, ಮೋಡಗಳಿಂದ ಕೋರೈಸುವ ಮಿಂಚುಗಳಿಲ್ಲ ಇನ್ನು ಅಗ್ನಿಯ ಮಾತೆಲ್ಲಿ; ಆದರೆ ಈ ಎಲ್ಲಾ ವಸ್ತುಗಳು ಯಾವುದರಿಂದ ಪ್ರಕಾಶಿಸುವುವೋ ಆ ಶುದ್ಧ ಚೈತನ್ಯವೆನ್ನುವ ಬೆಳಕು ಅಲ್ಲಿದೆ” ಎನ್ನುವ ಬೆಳಕನ್ನು ತನ್ನ ಉತ್ತರಾಧಿಕಾರಿಗೆ ತೋರಿಸಬೇಕಿದೆ. ಗುರುವಿಗೆ ಶಿಷ್ಯನೆನ್ನುವ ಹಣತೆಯಲ್ಲಿ ತೈಲವಿತ್ತೆನ್ನುವುದರ ಅರಿವಿತ್ತು; ಆದರೆ ಉರಿಯಬೇಕಾದ ಬತ್ತಿ ಇನ್ನೂ ಎಣ್ಣೆಯಲ್ಲಿ ಮುಳುಗಿರಲಿಲ್ಲ. ಹಾಗಾಗಿ ಕಾಯಬೇಕಿತ್ತು. ತಂದೆ ವಿಶ್ವನಾಥ ದತ್ತರು 1884ರಲ್ಲಿ ತೀರಿಕೊಂಡ ಮೇಲೆ ಸಿರಿವಂತ ಮನೆತನದಲ್ಲಿದ್ದ ವ್ಯಕ್ತಿಗೆ ಒಮ್ಮೆಲೇ ಬಡತನ ಆವರಿಸಿ ಬಿಟ್ಟಿತು.

ಮುಗ್ಧ ತಾಯಿ, ದಾಯಾದಿಗಳ ಮೋಸ ಈ ಎಲ್ಲವುಗಳಿಂದ ಮತ್ತೆ ದೇವರ ಕುರಿತು ಸಂಶಯ ನರೇಂದ್ರನಿಗೆ. ತನಗೆ ಆಗುತ್ತಿರುವ ನೋವು ವಿಷಾದ ಆರ್ಥಿಕ ಮುಗ್ಗಟ್ಟುಗಳಿಂದ ಕಂಗೆಟ್ಟ, ಇಲ್ಲಿಯೂ ಆತ ಅನುಭವಿಸುತ್ತಿದ್ದ ಬಡತನದ, ಅವಮಾನಗಳು ಲೋಕದ ಬಡತನ ಅಂದುಕೊಂಡಿದ್ದ. ಅಲ್ಲಿ ನಾನು ಎನ್ನುವ ಭಾವವಿತ್ತು. (ಅದೇ ಸ್ವಾಮೀ ವಿವೇಕಾನಂದರು ಅಮೇರಿಕಾಕ್ಕೆ ಹೋಗುವಾಗ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತು ದೇಶದ ಬಡತನದ ಕುರಿತು ದುಃಖಿಸುತ್ತಾರೆ. ಅಮೇರಿಕಾದಲ್ಲಿ ಪಲ್ಲಂಗದ ಮೇಲೆ ಮಲಗಿ ನಿದ್ರಿಸುತ್ತಿರುವವರಿಗೆ ಒಮ್ಮೆಲೇ ತನ್ನ ದೇಶದ ಲಕ್ಷಾಂತರ ಜನ ಚಳಿಯಲ್ಲಿ ನಡುಗುವ, ಊಟಕ್ಕಿಲ್ಲದೇ ಒದ್ದಾಡುವ ನೆನಪು ಒತ್ತರಿಸಿ ನೆಲದ ಅಳುತ್ತಾ ನೆಲದ ಮೇಲೆ ಹೊರಳಾಡುತ್ತಾರೆ. ಅದು ನಿಜವಾದ ಪರಮಹಂಸತತ್ತ್ವ). ಹಾಗಾಗಿ ನರೇಂದ್ರನಿಗೆ ರಾಮಕೃಷ್ಣರು ನೇರವಾಗಿ ಸಮಾಧಿಯ ದರ್ಶನವನ್ನು ಮಾಡಿಸಲಿಲ್ಲ. ಸ್ವಲ್ಪ ಸ್ವಲ್ಪವೇ ಅನುಭವ ಕೊಟ್ಟು ಸುಮ್ಮನಾದರು.

ಬ್ರಹ್ಮಸಮಾಜದ ಪ್ರಭಾವದ ಕಾರಣ ಅವನಿಗೆ ಇವೆಲ್ಲವೂ ಏನೋ ಬೇರೆಯದು ಎಂದುಕೊಂಡ. ರಾಮಕೃಷ್ಣರೊಡನೆ ವಾದ ಮಾಡುತ್ತಿದ್ದ. ಅದ್ವೈತ ಸಿದ್ಧಾಂತವನ್ನು ಪೊಳ್ಳು ಎಂದು ಗೇಲಿ ಮಾಡುತ್ತಿದ್ದ. ಒಮ್ಮೆ ಆತ ಹೂಜಿಯೂ ಬ್ರಹ್ಮ, ನೊಣವೂ ಬ್ರಹ್ಮ, ನೀನೂ ನಾನೂ ಎಲ್ಲವೂ ಬ್ರಹ್ಮ ಎಂದು ಎಲ್ಲರನ್ನು ಮುಟ್ಟಿ ಬ್ರಹ್ಮನನ್ನು ಮುಟ್ಟಿದೆ ಎಂದು ಗೇಲಿ ಮಾಡುವಾಗ ಬಂದ ಪರಮಹಂಸರು ಆತನನ್ನು ಕಾಳಿಮಾತೆಯ ವಿಗ್ರಹಕ್ಕೆ ಕರೆದೊಯ್ದು ಮುಟ್ಟಿದರು. ತಕ್ಷಣಕ್ಕೆ ಆತನಿಗೆ ಬ್ರಹ್ಮಜ್ಞಾನವುಂಟಾಯಿತು. ಇದು ನರೇಂದ್ರ ಎನ್ನುವ ಜಿಜ್ಞಾಸು ಸ್ವಾಮಿ ವಿವೇಕಾನಂದರೆನ್ನುವ ಜ್ಞಾನಿಯಾದ ಮಾರ್ಗ.

ರಾಮಕೃಷ್ಣರು ತೋರಿಸಿದ ಸಮಾಧಿ ಕಾಳಿಗುಡಿಯಲ್ಲಿ. ರಾಮಕೃಷ್ಣರಿಗೆ ಕಾಳಿಯೇ ಸರ್ವಸ್ವ. ವಿಗ್ರಹಾರಾಧನೆ ರಾಮಕೃಷ್ಣರಿಗೆ ಪ್ರೀತಿ. ಅವರು ದೇವಿಯ ಬಳಿ ಅಳುತ್ತಾರೆ, ನಗುತ್ತಾರೆ, ತನಗೋರ್ವ ಉತ್ತರಾಧಿಕಾರಿಯನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ. ಅವರೇ ಈಗ ನರೇಂದ್ರನಿಗೆ ಅದ್ವೈತದ ತುರೀಯವಾಕ್ಯವಾದ “ಸರ್ವಂ ಖಲ್ವಿದಂ ಬ್ರಹ್ಮ” ಬ್ರಹ್ಮವನ್ನು ತೋರಿಸಿದ್ದಾರೆ. ಇದು ವಿರೋಧಾಭಾಸವಲ್ಲ; ಸುಪ್ತವಾಗಿರುವ ಆತ್ಮನನ್ನು ಚೇತರಿಸುವುದು.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಆತ್ಮವಿಶ್ವಾಸದ ಕೊರತೆ ಅಧೈರ್ಯದ ಮೂಲ ಎಂಬ ವಿಷಾದ ಯೋಗ

ಏಷ ಸರ್ವೇಷು ಭೂತೇಷು ಗುಢೋ ಆತ್ಮಾ ನ ಪ್ರಕಾಶತೇ /
ದೃಶ್ಯತೇ ತು ಅಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಸೂಕ್ಷದರ್ಶಿಭಿಃ // ಕ.ಉ. 3.12

ಎಲ್ಲ ಪ್ರಾಣಿಗಳಲ್ಲಿಯೂ ಗೂಢನಾಗಿರುವ ಈ ಆತ್ಮನು ಸುಪ್ತನಾಗಿರುವುದರಿಂದ ಪ್ರಕಾಶಿಸುವುದಿಲ್ಲ; ಆದರೆ ಸೂಕ್ಷ್ಮಗ್ರಾಹಿಗಳಾದ ಸೂಕ್ಷ್ಮಬುದ್ಧಿಯ ಪರಿಣಿತರಿಂದ ಇದು ಗ್ರಹಿಸಲ್ಪಡುತ್ತದೆ.

ಇದು ಅದ್ವೈತ ತತ್ತ್ವದ ಚರಮಸೀಮೆ. ಸಮಗ್ರವೂ ಬ್ರಹ್ಮವೇ ಎಂದಾಗ ಅಲ್ಲಿ ತರತಮದ ಭಾವನೆಯೇ ಇರುವುದಿಲ್ಲ. ಹಾಗಾಗಿ ನೊರಜು, ಮೇಜು, ನಾನು ನೀನು ಎಲ್ಲವೂ ಬ್ರಹ್ಮನ ಅಂಶವೆಂದು ತಿಳಿದಾಗ ವಿಶ್ವಭಾತೃತ್ವದ ಕಲ್ಪನೆ ತನ್ನಿಂದ ತಾನೇ ಮೂಡುತ್ತದೆ. ಇತರರ ಮೇಲೆ ನಾವು ತೋರಬೇಕಾಗಿರುವುದು Sympathyಯಲ್ಲ. ಕರುಣೆಯಲ್ಲಿ ನಾನು ಮತ್ತು ಅವನು ಎನ್ನುವ ಬೇಧವಿರುತ್ತದೆ. ಅದು Empathy- ಅವರೊಳಗೊಂದಾಗುವಿಕೆ – Power of feeling ಆಗಿರಬೇಕು. ಈ ಸಹಾನುಭೂತಿ ನಿಂತಿರುವುದೇ ಅದ್ವೈತದ ತಳಹದಿಯ ಮೇಲೆ. ಇದನ್ನೇ ವಿವೇಕಾನಂದರು “ಸಮಷ್ಟಿಯಿಂದ ನಾವು ಬೇರೆ ಬೇರೆ ಎಂದು ಯೋಚಿಸಿದಷ್ಟೂ ನಾವು ಹೆಚ್ಚು ಹೆಚ್ಚು ದುಃಖಿತರಾಗುವೆವು. ಈ ಏಕತತ್ತ್ವದಿಂದಲೇ ನಾವು ನೈತಿಕತೆಯ ತಳಹದಿಯನ್ನು ಸಾಧಿಸಬಹುದು” ಎನ್ನುತ್ತಾರೆ. ಈ ನೈತಿಕತೆಯ ಮೂಲವನ್ನು ಅವರು ಅದ್ವೈತದಲ್ಲಿದೆಯೆನ್ನುತ್ತಾರೆ.

ರಾಮಕೃಷ್ಣರು ಕೊಟ್ಟ ಈ ಅನುಭವವ ಸುಪ್ತವಾಗಿರುವ ಚೇತನವನ್ನು ಜಾಗ್ರತಗೊಳಿಸುವುದು, ಹುದುಗಿರುವುದನ್ನು ಅರಳಿಸುವುದು. ಒಳಗಿರುವುದನ್ನು ಹೊರತರುವುದು. ಹಾಗಾಗಿ ಇಲ್ಲಿ ಕಾಳಿಮಾತೆಯನ್ನು ಆರಾಧಿಸುವ ರಾಮಕೃಷ್ಣರು ಅದ್ವೈತದ ಶಿಖರ, ಅದನ್ನು ಏರಿದ ಸ್ವಾಮಿ ವಿವೇಕಾನಂದರು ರಾಮಕೃಷ್ಣರ ಸಾಫಲ್ಯದ ಫಲ. ಈ ಕಾರಣದಿಂದಲೇ ಇವರಿಬ್ಬರ ಜೀವನ ಚರಿತ್ರೆಯನ್ನು ಬರೆದ ಫ್ರೆಂಚ್ ಸಾಹಿತಿ ರೋಮಾ ರೋಲಾ ಗುರು ಶಿಷ್ಯರನ್ನು Spledid symphony of the Universal Soul ಎಂದು ಕರೆದಿದ್ದಾರೆ. ಸನಾತನದ ಭಾರತದ ಅಪರೂಪದ ಈ ಘಟನೆ ಹಲ ಸಾಧನೆಗಳಿಗೆ ಹೇತುವಾಯಿತು.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ | ಇಂದು ಗೀತಾಜಯಂತಿ | ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ

Exit mobile version