ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಕೋರಿದ ಅಪರೂಪದ ಸನ್ನಿವೇಶ
ಧವಳ ಧಾರಿಣಿ ಅಂಕಣ: ಸರ್ವಲೋಕಸ್ಯ ಧರ್ಮಾತ್ಮಾ ಶರಣ್ಯಃ ಶರಣಂ ಪುರಾ.
ಗುರುರ್ಮೇ ರಾಘವಃ ಸೋSಯಂ ಸುಗ್ರೀವಂ ಶರಣಂ ಗತಃ৷৷ಕಿ. ಕಾಂ.4.20৷৷
ಧರ್ಮಾತ್ಮನಾದ (ಶ್ರೀರಾಮನು) ಈ ಹಿಂದೆ ಹೇಗೆ ಸಕಲ ಲೋಕಗಳಿಗೆ ರಕ್ಷಕನಾಗಿದ್ದನೋ, ಎಲ್ಲರಿಗೂ ಆಶ್ರಯಭೂತನಾಗಿದ್ದನೋ, ನನ್ನ ಗುರುವಾದ ಈ ರಘುವರನು ಇಂದು ಸುಗ್ರೀವನನ್ನು ಆಶ್ರಯಿಸಲು ಬಂದಿರುವನು.
ಪಂಪಾನದಿಯ ತೀರದಲ್ಲಿ ಹನುಮಂತ ರಾಮ ಲಕ್ಷ್ಮಣರನ್ನು ಪರೀಕ್ಷಿಸಲು ಭಿಕ್ಷುವಿನ ವೇಷ ಧರಿಸಿ ಅವರೆದುರು ನಿಂತು ಅವರ ಪರಿಚಯ ಕೇಳಿದಾಗ ಲಕ್ಷ್ಮಣ ತಾವು ಸುಗ್ರೀವನಲ್ಲಿ ಶರಣಾಗಲು/ ಆಶ್ರಯ ಕೋರಲು ಬಂದಿದ್ದೇವೆ ಎಂದು ಹೇಳುತ್ತಾನೆ.
ಕಿಷ್ಕಿಂಡಾ ಕಾಂಡದ ನಾಲ್ಕನೆಯ ಸರ್ಗದಲ್ಲಿ ಬರುವ ಈ ರೀತಿಯ ಎಂಟು ಶ್ಲೋಕಗಳನ್ನು ಓದುತ್ತಾ ಹೋದಂತೆ ಒಮ್ಮೆಲೇ ರಾಮನ ಕುರಿತಾದ ನಮ್ಮ ಭಾವನೆಗಳೆಲ್ಲವುದಕ್ಕೂ ವಿರುದ್ಧವಾದ “ರಾಮ ಸುಗ್ರೀವನಲ್ಲಿ ಶರಣಾಗತಿಯನ್ನು ಬಯಸಿ ಬಂದಿದ್ದಾನೆ” ಎನ್ನುವ ಮಾತುಗಳು ನೋಡಿ ಆಶ್ಚರ್ಯ ಮೂಡುತ್ತದೆ. ಕೆಲ ಕಾಲ ನಾವು ಓದುತ್ತಿರುವುದು ವಾಲ್ಮೀಕಿ ಬರೆದ ರಾಮಾಯಣವೋ ಅಥವಾ ಇನ್ಯಾರದೋ ಎನ್ನುವ ಸಂಶಯಕ್ಕೆ ಒಳಗಾಗುತ್ತೇವೆ. ರಾಮನ ಹದಿನಾರು ಗುಣಗಳಲ್ಲಿ ಒಂದಾದ “ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ- ಸಿಟ್ಟುಗೊಂಡು ರಾಮನೇನಾದರೂ ಯುದ್ಧಕ್ಕೆ ನಿಂತರೆ ದೇವತೆಗಳೂ ಸಹ ಅಂಜುವರು” ಎನ್ನುವ ಪರಾಕ್ರಮಗಳನ್ನು ವರ್ಣಿಸಿದ ಕವಿ ಇಲ್ಲಿ ಎಲ್ಲವನ್ನೂ ಕಳೆದುಕೊಂಡು ದೀನನಾಗಿ ಮುಳುಗುವವನಿಗೆ ಹುಲ್ಲುಕಡ್ಡಿಯಾದರೂ ಆಗಬಹುದು ಎನ್ನುವ ರೀತಿಯಲ್ಲಿ ನಿಂತಿದ್ದಾನೆ. ಲಕ್ಷ್ಮಣ ಹನುಮಂತನ ಹತ್ತಿರ ಒಮ್ಮೆ ಸುಗ್ರೀವನನ್ನು ಭೆಟ್ಟಿ ಮಾಡಿಸು ಎಂದು ಯಾಚಿಸುವಾಗ ಉಪಯೋಗಿಸುವ ಶಬ್ದಗಳನ್ನು ಗಮನಿಸಿ:
- ರಾಮಶ್ಚ ಸುಗ್ರೀವಂ ಶರಣಂ ಗತೌ
- ಸುಗ್ರೀವಂ ನಾಥಮಿಚ್ಛತಿ
- ಸುಗ್ರೀವಂ ಶರಣಂ ಗತಃ
- ಶರಣ್ಯಶ್ಶರಣಂ ಪುರಾ…. ಸುಗ್ರೀವಂ ಶರಣಂ ಗತಃ
- ಸುಗ್ರೀವಂ ವಾನರೇನ್ದ್ರಂ ತು ರಾಮಶ್ಶರಣಮಾಗತಃ
- ಶರಣಂ ಗತೇ
ಇವೆಲ್ಲದಕ್ಕಿಂತಲೂ ಮಿಗಿಲಾಗಿ ಕಣ್ಣೀರು ತುಂಬಿಕೊಂಡು ಕೇಳಿಕೊಳ್ಳುವುದು
- ಯಸ್ಯ ಪ್ರಸಾದೇ ಸತತಂ ಪ್ರಸೀದೇಯುರಿಮಾಃ ಪ್ರಜಾಃ.
ಸ ರಾಮೋ ವಾನರೇನ್ದ್ರಸ್ಯ ಪ್ರಸಾದಮಭಿಕಾಙ್ಕ್ಷತೇ
ಯಾವನ ಪ್ರಸನ್ನತೆಯಿಂದ ಎಲ್ಲ ಪ್ರಜೆಗಳೂ ಸರ್ವದಾ ಪ್ರಸನ್ನಚಿತ್ತರಾಗಿರುತ್ತಿದ್ದರೋ ಅಂತಹ ಶ್ರೀರಾಮನೀಗ ವಾನರೇಂದ್ರನಾದ ಸುಗ್ರೀವನ ಅನುಗ್ರಹವನ್ನು ಬಯಸಿ ಬಂದಿದ್ದಾನೆ.
ಒಂದು ಕಡೆ ಮಹಾತೇಜಸ್ವಿಯಾದ, ಸರ್ವಗುಣ ಸಂಪನ್ನನಾದ, ವಶಿಷ್ಠ, ವಿಶ್ವಾಮಿತ್ರ, ಅತ್ರಿ, ಅಗಸ್ತ್ಯರಿಂದ ಅನುಗ್ರಹಿಸಲ್ಪಟ್ಟ, ನಾಲ್ಕು ಸಮುದ್ರಪರ್ಯಂತರವೂ ಧರ್ಮಸ್ಥಾಪನೆಗಾಗಿ ಇರುವ ಚಕ್ರವರ್ತಿಗಳ ಪೀಠ ಎಂದು ಕೀರ್ತಿಸಲ್ಪಟ್ಟ ರಾಮ ಲಕ್ಷ್ಮಣನ ಮಾತನ್ನು ಮೌನವಾಗಿ ಕೇಳುತ್ತಾ ನಿಂತಿದ್ದಾನೆ. ಅವರು ಆಶ್ರಯವನ್ನು ಕೇಳುವುದು ಯಾರಲ್ಲಿ ಅಂದರೆ, ಹೆಂಡತಿಯನ್ನೂ ಸೇರಿ, ತನ್ನದೆಲ್ಲವನ್ನೂ, ಕಳೆದುಕೊಂಡು ವಾಲಿಯ ಭಯದಿಂದ ಜೀವ ಉಳಿಸಿಕೊಳ್ಳಲು ಋಷ್ಯಮೂಕ ಪ್ರರ್ವತಶ್ರೇಣಿಯಲ್ಲಿ ನಾಲ್ವರೊಂದಿಗೆ ಇರುವ ಸುಗ್ರೀವನಲ್ಲಿ. ಲಕ್ಷ್ಮಣನಿಗೆ ಈ ಮಾತುಗಳನ್ನು ಹೇಳುವಾಗ ಹೊಟ್ಟೆಯಲ್ಲಿ ಸಂಕಟವಾಗಿರಬೇಕು. ಹೇಳಲೇ ಬೇಕಾದ ಅನಿವಾರ್ಯತೆಯಿಂದ ಹೇಳುವಾಗ ಆತ ದೀನನಾಗಿ ಕಣ್ಣೀರಧಾರೆಯನ್ನು ಹರಿಸುತ್ತಾ – “ಏವಂ ಬ್ರುವಾಣಂ ಸೌಮಿತ್ರಿಂ ಕರುಣಂ ಸಾಶ್ರುಲೋಚನಮ್” ಹನುಮಂತನಲ್ಲಿ ಯಾಚಿಸುತ್ತಿದ್ದ. ಈ ಘಟನೆಯನ್ನು ನೆನಪಿನಲ್ಲಿಟ್ಟುಕೊಂಡು ತಾಳಮದ್ದಳೆಯಲ್ಲಿ ವಾಲಿ ರಾಮನಿಗೆ ಸುಗ್ರೀವನ ಸಹಾಯವನ್ನು ಕೇಳಿರುವುದರ ಕುರಿತು “ಇವನು ನಿನಗೆ ಸಹಾಯಿಯೇ ನೀ I ನೀನವನ ಬಲದಲಿ ನಿನ್ನ ವೈರಿಯIʼ ಎಂದು ಛೇಡಿಸುವ ಪದ್ಯಗಳಿವೆ. (ಪಾರ್ತಿಸುಬ್ಬನ ಪದ್ಯಗಳ ರಚನೆಯ ಕುರಿತು ಕನ್ನಡಸಾಹಿತ್ಯ ಲೋಕ ಚರ್ಚೆ ಮಾಡಬೇಕು. ಯಕ್ಷಗಾನ ಕವಿಗಳೆನ್ನುವ ಅಸಡ್ಡೆಯಿಂದ ಹೊರಬರಬೇಕಾಗಿದೆ). ವಾಲಿಯ ಪ್ರಮುಖವಾದ ಪ್ರಶ್ನೆಯೇ ರಾಮ ಸುಗ್ರೀವನಲ್ಲಿ ಶರಣು ಬಂದಿರುವುದು ಯಾಕೆ ಎನ್ನುವುದು. ಅದಕ್ಕೆ ಆಧಾರವಾಗಿ ಈ ಮೇಲಿನ ಶ್ಲೋಕವನ್ನು ಗಮನಿಸಬಹುದು.
ರಾಮಾಯಣದಲ್ಲಿ ಸುಗ್ರೀವನ ಕುರಿತು ತಿಳಿದಿರುವ ಅಂಶಗಳೆಂದರೆ ಆತುರಗೆಟ್ಟವ, ಸ್ತ್ರೀವ್ಯಾಮೋಹಿ, ಅಂಜುಕುಳಿ, ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಿದ್ದವ. ತನಗೇ ಒಂದು ನೆಲೆಯಿಲ್ಲದ ವಾನರನೋರ್ವನಲ್ಲಿ ರಾಮ ಅದು ಹೇಗೆ ಶರಣು ಬರಲು ಸಾಧ್ಯ, ವಾಲ್ಮೀಕಿ ಈ ಭಾಗವನ್ನು ಯಾಕೆ ಹೇಳಿರಬಹುದು ಎನ್ನುವುದನ್ನು ವಿವೇಚಿಸಲು ಅರಣ್ಯಕಾಂಡದೊಳಗೆ ಪ್ರವೇಶಿಸಬೇಕು.
ರಾಮಾಯಣದಲ್ಲಿ ಅರಣ್ಯಕಾಂಡ ಮತ್ತು ಕಿಷ್ಕಿಂಧಾ ಕಾಂಡಗಳಿಲ್ಲದಿದ್ದರೆ ಈ ಮಹಾಕಾವ್ಯವೇ ಹುಟ್ಟುತ್ತಿರಲಿಲ್ಲವೇನೋ. ರಾಮಾವತಾರದ ಉದ್ದೇಶವೇ ಅರಣ್ಯಕಾಂಡದಲ್ಲಿ ಅದೂ ಆತ ಚಿತ್ರಕೂಟಕ್ಕೆ ಬರುವಾಗಿನಿಂದ ಪ್ರಾರಂಭವಾಗುತ್ತದೆ. ರಾವಣವಧೆಗೆ ಯೋಜನೆಯನ್ನು ನಿರೂಪಿಸಿರುವುದು ಅಗಸ್ತ್ಯರ ಆಶ್ರಮದಲ್ಲಿ. ಇದಕ್ಕಿಂತಲೂ ರೋಚಕವಾದ ವಿಷಯವೆಂದರೆ ಕೈಕೇಯಿ ದಶರಥನ ಹತ್ತಿರ ಕೇಳುವ ವರ “ರಾಮ ವನವಾಸಕ್ಕೆ ಹೋಗಲಿ” ಎಂದು, ಆದರೆ ರಾಮನ ಹತ್ತಿರ “ದಶರಥ ನನಗೆ ವರವನ್ನು ಕೊಟ್ಟ ಪ್ರಕಾರ ನೀನು ದಂಡಕಾರಣ್ಯಕ್ಕೆ ಹೋಗಬೇಕು” ಎನ್ನುತ್ತಾಳೆ. ಬುದ್ಧಿವಂತೆಯಾದ ಕೈಕೇಯಿಗೆ ದಂಡಕಾರಣ್ಯದ ರಾಕ್ಷಸರ ವಿಷಯ ತಿಳಿದಿದೆ. ಹಿಂದೆ ದಶರಥ ಶಂಬರನ ಹತ್ತಿರ ಕಾಳಗ ಮಾಡಿದ್ದು ಇದೇ ದಂಡಕಾರಣ್ಯದಲ್ಲಿ. ಹಾಗಾಗಿ ರಾಕ್ಷಸರ ಕೈಯಲ್ಲಿ ರಾಮನಿಗೆ ಅಪಾಯವಾದರೆ ಆಗಲಿ ಎನ್ನುವ ಕುತ್ಸಿತ ಬುದ್ಧಿ ಅವಳದಾಗಿತ್ತು.
ರಾಮನಿಗೆ ಸೀತೆಯ ಮೇಲೆ ಅಪಾರವಾದ ಪ್ರೀತಿ ಇತ್ತು. ಸೀತಾಪಹರಣವೆನ್ನುವುದು ಆತ ನಿರೀಕ್ಷಿಸದ ಘಟನೆ. ಆಕೆಗೆ ರಾಕ್ಷಸರಿಂದ ತೊಂದರೆ ಆಗಬಹುದೆನ್ನುವ ಅನುಮಾನ ಇದ್ದೇ ಇತ್ತು. ಲಕ್ಷ್ಮಣ ಆಕೆಯನ್ನು ಬಿಟ್ಟು ತನ್ನನ್ನು ಹುಡುಕಲು ಬಂದಾಗಲೇ ಆತನಿಗೆ ಅನುಮಾನ ಕಾಡಿತ್ತು. “ಅವಳು ಏನೇ ಅಂದರೂ ಆಕೆಯನ್ನು ಒಂಟಿಯಾಗಿ ಬಿಟ್ಟು ನೀನು ಬರಬಾರದಿತ್ತು” ಎಂದು ಲಕ್ಷ್ಮಣನ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಾನೆ. ಸೀತೆ ಬದುಕಿದ್ದಾಳೋ ಅಥವಾ ಅಪಹರಣಕ್ಕೊಳಗಾದಳೋ ಎನ್ನುವುದನ್ನು ತಿಳಿಯದೇ ದಿಗ್ಮೂಢನಾಗಿದ್ದ. ಅಡವಿಯಲ್ಲಿ ಇರುವ ಎಲ್ಲಾ ಗಿಡಗಳನ್ನೂ, ಮರಗಳನ್ನೂ ಆತ ಹುಚ್ಚನಂತೆ ಕೂಗಿ ಕೂಗಿ ತನ್ನ ಸೀತೆ ಎಲ್ಲಿ ಇದ್ದಾಳೆ ವಿಲಾಪಿಸುತ್ತಿದ್ದ. ವಿರಹದ ದುಃಖ ಎಲ್ಲಿಯವರೆಗೆ ತಿರುಗಿತು ಎಂದರೆ ಗೋದಾವರೀ ನದಿಯ ಹತ್ತಿರ ಸೀತೆಯ ವಿಷಯವನ್ನು ಕೇಳುತ್ತಾನೆ. ಪರ್ವತವನ್ನು ಪುಡಿಮಾಡಿಬಿಡುತ್ತೇನೆ ಎಂದು ಕೂಗಾಡುತ್ತಾನೆ.
ಸಕಲ ಪ್ರಪಂಚವನ್ನೇ ಸುಟ್ಟು ಪುಡಿಮಾಡುವೆ ಎಂದು ಬಿಲ್ಲಿನ ನಾಣನ್ನು ಬಿಗಿದು “ಕ್ಷುರವೆನ್ನುವ ಬಾಣವನ್ನು” ಹೂಡಿದಾಗ ಆತನ ಕ್ರೋಧವನ್ನು ಗಮನಿಸಿದ ಲಕ್ಷ್ಮಣ ಆತನನ್ನು ಸಮಾಧಾನ ಪಡಿಸುತ್ತಾನೆ. ಲಕ್ಷ್ಮಣ ರಾಮನಿಗೆ ಧರ್ಮದ ವಿವೇಕವನ್ನು ಹೇಳುವುದು ರಾಮಾಯಣದಲ್ಲಿ ಸೊಗಸಾಗಿ ವರ್ಣಿತವಾಗಿದೆ. ವಿಪತ್ತು ಎನ್ನುವುದು ಎಂತಹ ದೊಡ್ದ ಮನುಷ್ಯರಿಗೂ ಬರುತ್ತದೆ. ಆಗ ವಿವೇಕವನ್ನು ಕಳೆದುಕೊಳ್ಳಬಾರದು. ತಮ್ಮ ಕುಲಪುರೋಹಿತರಾದ ವಶಿಷ್ಠರ ನೂರುಮಂದಿ ಮಕ್ಕಳು ವಿಶ್ವಾಮಿತ್ರರಿಂದ ಹತರಾದರೂ ಅವರು ತಾಳ್ಮೆಯನ್ನು ತಂದು ಪ್ರತಿ ಶಾಪವನ್ನು ಕೊಡದಿರುವ ವಿಷಯವನ್ನು ತಿಳಿಸಿ ಸಮಾಧಾನ ಮಾಡುತ್ತಾನೆ. ಸಂಕಟ ಬಂದಾಗ ಧೃತಿಗೆಡದೇ ಅದನ್ನು ಪರಿಹರಿಸುವ ಉಪಾಯವನ್ನು ಹುಡಕಬೇಕೆಂದು ಹೇಳಿದಾಗ ರಾಮ ಸ್ವಲ್ಪಮಟ್ಟಿಗೆ ಸಮಾಧಾನಗೊಳ್ಳುತ್ತಾನೆ. ಅರಣ್ಯದಲ್ಲಿದ್ದ ಮೃಗಗಳ ಹತ್ತಿರ ವೈದೇಹಿಯ ಎಲ್ಲಿದ್ದಾಳೆ ಎಂದು ಕೇಳಿದಾಗ ಅವುಗಳು ದಕ್ಷಿಣ ದಿಕ್ಕಿಗೆ ಮುಖಮಾಡಿ ಆಕಾಶದ ಕಡೆಗೆ ನೋಡುತ್ತಿದ್ದವು. ಈ ಶಕುನದ ಲಕ್ಷಣದಂತೆ ಅವರು ಆಕಾಶಮಾರ್ಗದಲ್ಲಿ ದಕ್ಷಿಣದ ಕಡೆ ಹುಡುಕಲು ಪ್ರಾರಂಭಿಸುತ್ತಾರೆ.
ಅವರಿಗೆ ಮೊದಲು ಎದುರಾದ ಸವಾಲು ಸೀತೆಯನ್ನು ಯಾರು ಕದ್ದೊಯ್ದಿರಬಹುದೆನ್ನುವುದು. ಆಗ ಆತನಿಗೆ ಈ ವಿಷಯವನ್ನು ಹೇಳುವುದು ಜಟಾಯು. “ಪುತ್ರೋ ವಿಶ್ರವಸಃ ಸಾಕ್ಷಾದ್ಭಾತ್ರಾ ವಶ್ರವಣಸ್ಯ ಚ” ರಾವಣ ವಿಶ್ರವಸನ ಮಗ, ಕುಬೇರನ ಸಾಕ್ಷಾತ ಸಹೋದರ, ಎನ್ನುವ ಮೂಲಕ ಮೊತ್ತಮೊದಲ ಬಾರಿಗೆ ರಾವಣನೆನ್ನುವವನ ವಿಷಯವನ್ನು ರಾಮನಿಗೆ ತಿಳಿಸುತ್ತಾ ಮುಂದೆ ಹೇಳಲು ಸಾಧ್ಯವಾಗದೇ ಜೀವಬಿಡುತ್ತಾನೆ. ಅಲ್ಲಿಂದ ಮುಂದೆ ಆತನಿಗೆ ರಾವಣನ ಇರುವ ತಾಣವೆಲ್ಲಿ ಎನ್ನುವ ಸಂಶಯ ಉಂಟಾಗುತ್ತದೆ. ರಾಮಾಯಣದ ಪ್ರಕಾರ ಲಂಕೆಯೆನ್ನುವುದು ಒಂದು ಅಭೇದ್ಯವಾದ ಪ್ರದೇಶವಾಗಿತ್ತು. ರಾವಣ ಅಲ್ಲಿಂದ ಜಗತ್ತಿನ ಬೇರೆಕಡೆ ಹೋಗಿ ಆಕ್ರಮಣ ಮಾಡುತ್ತಿದ್ದ. ಸಮುದ್ರದ ಮದ್ಯದಲ್ಲಿರುವ ಈ ದ್ವೀಪ ಪುರಾಣದ ಕಾಲದಿಂದಲೂ ಹೊರಗಿನ ಪ್ರಪಂಚಕ್ಕೆ ತಿಳಿದಿರಲಿಲ್ಲ. ಮೊದಲು ಅದು ಗಂಧರ್ವರ, ಯಕ್ಷರ ವಾಸ ಸ್ಥಳವಾಗಿತ್ತು. ದೇವತೆಗಳು ವಿಹಾರಕ್ಕಾಗಿ ಅಲ್ಲಿಗೆ ಬರುತ್ತಿದ್ದರು. ಕುಬೇರನಿಂದ ಲಂಕೆಯನ್ನು ರಾವಣ ವಶಪಡಿಸಿಕೊಂಡ ಮೇಲೆ ದೇವತೆಗಳಿಗೂ ಅದು ಅಪರಿಚಿತ ಪ್ರದೇಶವಾಯಿತು. ಲಂಕೆ ಇರುವ ಪ್ರದೇಶ ಯಾರಿಗೂ ಗೊತ್ತಿರಲಿಲ್ಲ.
ಅದನ್ನು ಮೊದಲು ತಿಳಿದುಕೊಳ್ಳಲು ದಕ್ಷಿಣದೆಡೆಗೆ ಹುಡುಕಲು ಹೊರಡುತ್ತಾರೆ. ಸತಿವಿಯೋಗದ ದುಃಖದಿಂದ ಭ್ರಮಿತನಾದ ರಾಮನಿಗೆ ಲಕ್ಷ್ಮಣನೇ ಮಾರ್ಗದರ್ಶನ ಮಾಡುತ್ತಾನೆ. ಇಲ್ಲಿ ಲಕ್ಷ್ಮಣನ ವಿವೇಕ ಮತ್ತು ಪ್ರಕೃತಿಯೊಡನೆ ಆತನಿಗಿರುವ ತಾದಾತ್ಯ್ಮ ಚನ್ನಾಗಿ ವ್ಯಕ್ತವಾಗುತ್ತದೆ. ತನ್ನ ವೈಪಲ್ಯದಿಂದ ಅಣ್ಣ ಹೆಂಡತಿಯನ್ನು ಕಳೆದುಕೊಳ್ಳಬೇಕಾಯಿತು ಎನ್ನುವ ಯಾವ ನೋವನ್ನು ಹೊರಗಡೆ ತೋರಿಸಿಕೊಳ್ಳುವುದಿಲ್ಲ. ವಾಸ್ತವದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಆತ ವಿವೇಚನೆಯನ್ನು ಮಾಡುತ್ತಿರುತ್ತಾನೆ. ಶೂರ್ಪನಖಿ, ಅಯೋಮುಖಿಯರಿಗೆ ಶಿಕ್ಷಿಸಿದ್ದು, ಇಂದ್ರಜಿತುವಿನ ವಧಾ ಪ್ರಕರಣ ಇಲ್ಲೆಲ್ಲ ಅದನ್ನು ಗಮನಿಸಬಹುದು. ಸುಮಿತ್ರೆ ಹೇಳಿದ ʼಇನ್ನು ಮುಂದೆ ಅರಣ್ಯವೇ ನಿನಗೆ ಅಯೋಧ್ಯೆ, ರಾಮನೇ ನಿನಗೆ ದಶರಥನಂತೆ, ಸೀತೆಯಲ್ಲಿ ತನ್ನನ್ನು ಕಾಣುʼ ಎನ್ನುವ ಮಾತುಗಳು ಅವನಲ್ಲಿ ಮನಮಾಡಿದ್ದವು. ಆತನಿಗೆ ಶಕುನಗಳ ಕುರಿತು ಅರಿವಿತ್ತು. ರಾಮನಿಗೆ ಸಮಾಧಾನ ಮಾಡುತ್ತಾ ಮುಂದೆ ಸೀತಾನ್ವೇಷಣೆಯ ಕರ್ತವ್ಯವನ್ನು ಸೂಚಿಸಿ ಅಡವಿಯಲ್ಲಿ ದಕ್ಷಿಣಕ್ಕೆ ನಡೆಯುವಂತೆ ಪ್ರೇರೇಪಿಸುತ್ತಾನೆ. ಆಗ ಇದ್ದಕ್ಕಿದ್ದಂತೆ ಅವನ ಎಡತೋಳು ಅದುರಿತು, ಅದು ಅನಿಷ್ಟಸೂಚಕವಾದ ಶಕುನ, ಆದರೆ ಅದರ ಬೆನ್ನಲ್ಲೇ ಮಂಜುಲಕವೆನ್ನುವ ಹೆಸರಿನ ಮಹಾಭಯಂಕರ ಪಕ್ಷಿಯ ಧ್ವನಿ ಕೇಳಿಸಿತು. ಆತ ರಾಮನಿಗೆ “ಸದ್ಯದಲ್ಲಿಯೇ ಭಯಂಕರವಾದ ಯುದ್ಧದ ಸನ್ನಿವೇಶ ತಮಗೆ ಎದುರಾಗುತ್ತದೆ. ಪಕ್ಷಿಯ ಧ್ವನಿ ಕೇಳಿಸಿರುವದರಿಂದ ಅದರಲ್ಲಿ ನಮ್ಮಿಬ್ಬರಿಗೂ ವಿಜಯವಾಗುತ್ತದೆ” ಎಂದು ಹೇಳುತ್ತಾನೆ.
ಇದ್ದಕ್ಕಿದ್ದಂತೆ ಯಾವುದೋ ವಿಶಾಲವಾದ ತೋಳುಗಳು ಅವರಿಬ್ಬರನ್ನೂ ಬಂಧಿಸಿಬಿಡುತ್ತವೆ. ಅದು ಕಬಂಧನೆನ್ನುವ ರಾಕ್ಷಸನದು. ಆತನಿಗೆ ತಲೆಯೇ ಇರಲಿಲ್ಲ, ಹೊಟ್ಟೆಯಲ್ಲಿ ಬಾಯಿ ಇತ್ತು. ಅರಣ್ಯದಲ್ಲಿರುವ ಮೃಗ ಪಕ್ಷಿ ಪ್ರಾಣಿಗಳನ್ನು ತನ್ನ ಬಾಹುಗಳಲ್ಲಿ ಹಿಡಿದು ತಿನ್ನುತ್ತಿದ್ದ. ರಾಮ ಲಕ್ಷ್ಮಣರಿಬ್ಬರನ್ನೂ ಒಂದೊಂದು ತೋಳಿನಲ್ಲಿ ಹಿಡಿದು ತಿನ್ನಲು ಬಯಸಿದಾಗ ಆತನಿಂದ ತಪ್ಪಿಸಿಕೊಳ್ಳಲು ಅವರಿಬ್ಬರೂ ಆತನ ತೋಳುಗಳನ್ನು ಕತ್ತರಿಸಿಬಿಡುತ್ತಾರೆ. ಯಾವಾಗ ಆತನ ಕೈ ಕತ್ತರಿಸಲ್ಪಟ್ಟಿತೋ ಆ ರಾಕ್ಷಸ ಆಶ್ವರ್ಯಚಕಿತನಾಗಿ ಅವರಿಬ್ಬರ ಪರಿಚಯವನ್ನು ಕೇಳುತ್ತಾನೆ. ರಾಮ ತಮ್ಮಿಬ್ಬರ ಪರಿಚಯವನ್ನು ಹೇಳಿದೊಡನೆಯೇ ಅತ ತನ್ನ ಪರಿಚಯವನ್ನು ಹೇಳಲುಪಕ್ರಮಿಸುತ್ತಾನೆ. ದನುವಿನ ಪುತ್ರನಾದ ಆತ ಗಂಧರ್ವನಾಗಿದ್ದ. ಸುಂದರನಾದ ರೂಪವನ್ನು ಹೊಂದಿದ್ದ, ಆದರೆ ಘೋರವಾದ ರೂಪವನ್ನು ಧರಿಸಿ ಅಡವಿಯಲ್ಲಿದ್ದ ಋಷಿಮುನಿಗಳಿಗೆ ತೊಂದರೆ ಕೊಡುತ್ತಿದ್ದ. ಒಮ್ಮೆ ಸ್ಥೂಲಶಿರಸನೆನ್ನುವ ಮುನಿಗೆ ಹೀಗೆ ಪೀಡಿಸಲು ಹೋದಾಗ ಮುನಿ, ನಿನಗೆ ಈ ಘೋರರೂಪವೇ ಶಾಶ್ವತವಾಗಿ ಉಳಿಯಲಿ ಎಂದು ಶಾಪವನ್ನು ಕೊಟ್ಟ ಕಾರಣದಿಂದ ಅರಣ್ಯದಲ್ಲಿ ರಾಕ್ಷಸನಾಗಿಬಿಟ್ಟ. ತನ್ನ ತಪ್ಪಿನ ಅರಿವಾಗಿ ಆತ ಋಷಿಯಲ್ಲಿ ಉಶ್ಶ್ಯಾಪವನ್ನು ಬೇಡಿದಾಗ, ಮುನಿ ”ರಾಮಲಕ್ಷ್ಮಣರು ಮುಂದೊಂದು ದಿನ ಅರಣ್ಯಕ್ಕೆ ಬಂದಾಗ ನಿನ್ನ ಎರಡೂ ತೋಳುಗಳನ್ನು ಕಡಿದು ಜೀವಂತವಾಗಿ ಸುಡುವರು. ಆಗ ಪುನಃ ನಿನ್ನ ಕಾಂತಿಯುತವಾದ ಶರೀರ ನಿನಗೆ ದೊರೆಯುವುದು” ಎಂದು ನುಡಿಯುತ್ತಾನೆ.
ಶಾಪದ ಕಾರಣ ರೂಪಿನೊಂದಿಗೆ ಸ್ವಭಾವವವೂ ರಾಕ್ಷಸತ್ವವೇ ಆಗಿ ಬದಲಾಗಿಬಿಡುತ್ತದೆ. ಶಾಪಗ್ರಸ್ತನಾದವ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ದೀರ್ಘಾಯುಷ್ಯವನ್ನು ಪಡೆಯುತ್ತಾನೆ. ವರದ ಮದದಿಂದ ಇಂದ್ರನನ್ನು ಎದುರಿಸಿದಾಗ ದೇವೇಂದ್ರ ಈತನ ತಲೆಯ ಮೇಲೆ ವಜ್ರಾಯುಧದಿಂದ ಪ್ರಹಾರ ಮಾಡುತ್ತಾನೆ. ಪ್ರಹಾರಕ್ಕೆ ಕಬಂಧನ ತಲೆ ಕಾಲು ಎಲ್ಲ ಶರೀರದೊಳಗೆ ಸೇರಿ ಹೊಟ್ಟೆಯಲ್ಲಿ ಬಾಯಿ ಮೂಡಿತು. ಸೋತು ಸುಣ್ಣವಾದ ರಾಕ್ಷಸ ಇಂದ್ರನಿಗೆ ತನ್ನನ್ನು ರಕ್ಷಿಸೆಂದು ಕೇಳಲು, ಆತ “ನಿನ್ನ ತೋಳುಗಳು ಯೋಜನದಷ್ಟು ವಿಸ್ತೀರ್ಣವಾಗಲಿ, ಮುಂದೆ “ಯದಾ ರಾಮಃ ಸಲಕ್ಷ್ಮಣಃ I ಛೇತ್ಸತೇ ಸಮರೇ ಬಾಹೂ ತದಾ ಸ್ವರ್ಗಂ ಗಮಿಷ್ಯಸಿ II- ಲಕ್ಷ್ಮಣಸಹಿತನಾದ ರಾಮನು ನಿನ್ನ ಎರಡೂ ತೋಳುಗಳನ್ನು ಯಾವಾಗ ಕಡಿಯುವನೋ ಆಗ ನಿನ್ನ ಶಾಪವಿಮೋಚನೆಯಾಗುತ್ತದೆ” ಎಂದು ಹೇಳುತ್ತಾನೆ. ಇಷ್ಟು ಹೇಳಿ ಆತ ರಾಮನ ಹತ್ತಿರ ತನ್ನನ್ನು ಈಗಲೇ ಜೀವಂತವಾಗಿ ಸುಡು ಎಂದು ಹೇಳಿದಾಗ ರಾಮ ಒಪ್ಪುವುದಿಲ್ಲ. ಕಬಂಧನಿಗೆ ಸೀತೆಯನ್ನು ರಾವಣ ಕದ್ದೊಯ್ದಿರುವ ವಿಷಯ ತಿಳಿದಿದೆ. ಕುಳಿತಲ್ಲಿಯೇ ಆತ ಅದನ್ನು ಗಮನಿಸಿದ್ದಾನೆ. ರಾಮನಿಗೆ ಸೀತೆಯನ್ನು ರಾವಣ ಕದ್ದೊಯ್ದ ವಿಷಯ ತಿಳಿಸಿ ಅವನ ಲಂಕೆಯನ್ನು ಹುಡುಕಲು ಒಬ್ಬ ಒಳ್ಳೆಯ ಮಿತ್ರನನ್ನು ಹುಡುಕಿಕೊಡುವುದಾಗಿ ಹೇಳುತ್ತಾನೆ. ಹಾಗೆ ಹೇಳಬೇಕೆಂದರೆ ತನಗೆ ಮೊದಲಿನ ರೂಪ ಸಿಕ್ಕರೆ ಮಾತ್ರ ಸಾಧ್ಯವೆಂದು ಶರತ್ತು ಹಾಕುತ್ತಾನೆ. ರಾಮನಿಗೆ ರಾವಣ ಸೀತೆಯನ್ನು ಎಲ್ಲಿಟ್ಟರಬಹುದು, ಆತ ಹೇಗಿರಬಹುದು ಎನ್ನುವ ಸಂಗತಿಗಳ ಅರಿವಿಲ್ಲ. ರಾಕ್ಷಸನ ಹೆಸರು ಮಾತ್ರ ಆತನಿಗೆ ತಿಳಿದಿದೆ. ಆತ ಇರುವುದೆಲ್ಲಿ, ಹಾಗಾಗಿ ಕಬಂಧನ ಜೀವ ಇರುವಾಗಲೇ ಸುಡಲು ಒಪ್ಪುತ್ತಾನೆ.
ಈ ಮೊದಲು ವಿರಾಧನೆನ್ನುವ ರಾಕ್ಷಸ ರಾಮನಲ್ಲಿ ತನ್ನನ್ನು ಜೀವಂತವಾಗಿ ಹುಗಿಯಲು ಹೇಳಿದ್ದ. ಹಾಗೆ ಜೀವಂತ ಹುಗಿದಾಗ ಆತನ ಶಾಪವಿಮೋಚನೆಯಾಗಿತ್ತು. ಇದೀಗ ಕಬಂಧನನ್ನು ಸುಟ್ಟ ತಕ್ಷಣದಲ್ಲಿ ಆತ ಮೊದಲಿನ ಗಂಧರ್ವನಾಗಿ ರಾಮನಿಗೆ ಕಾಣಿಸಿಕೊಂಡು ಕೊಡುವ ಸಲಹೆಯೇ ಸುಗ್ರೀವ ಎನ್ನುವ ವಾನರ ಇಲ್ಲಿಯೇ ಋಷ್ಯಮೂಕ ಪರ್ವತದಲ್ಲಿದ್ದಾನೆ. ಆತ ಇಂದ್ರನ ಮಗ. ಆತನ ಅಣ್ಣನಾದ ವಾಲಿ ಸುಗ್ರೀವನನ್ನು ಕಾರಣಾಂತರದಿಂದ ರಾಜ್ಯಭ್ರಷ್ಟನನ್ನಾಗಿ ಮಾಡಿದ್ದಾನೆ, ಎನ್ನುತ್ತಾ ರಾವಣನಿರುವ ಸ್ಥಳವನ್ನು ತಿಳಿಸಲು ಸುಗ್ರೀವನೊಬ್ಬನಿಗೆ ಸಾಧ್ಯ ಎನ್ನುತ್ತಾನೆ. ಕಾರ್ಯಸಾಧನೆಗೆ ಆರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳು ಸಂಧಿ, ವಿಗ್ರಹ, ಯಾನ, ಆಸನ, ದ್ವೈಧೀಭಾವ ಮತ್ತು ಸಮಾಶ್ರಯಗಳು. ಇದರಲ್ಲಿ ನಿನ್ನಂತೆ ಪತ್ನಿಯನ್ನು ಕಳೆದುಕೊಂಡ ಸುಗ್ರೀವನಿಗೆ ನಿನ್ನ ಕಷ್ಟ ಅರ್ಥವಾಗುತ್ತದೆ. ಹಾಗಾಗಿ ಆತನಲ್ಲಿ ನೀನು ಸಮಾಶ್ರಯವನ್ನು ಕೋರಬಹುದು ಎನ್ನುತ್ತಾನೆ. ಆ ವಾನರನಲ್ಲಿ ಅಗ್ನಿಸಾಕ್ಷಿಯಾಗಿ ಮಿತ್ರತ್ವವನ್ನು ಮಾಡಿಕೋ ಎನ್ನುವುದನ್ನು ಒತ್ತಿ ಹೇಳುತ್ತಾನೆ. ಸುಗ್ರೀವನ ಸಂಪೂರ್ಣ ಪರಿಚಯವನ್ನು ಮೊದಲು ರಾಮನಿಗೆ ಮಾಡಿಕೊಡುವುದೇ ಕಬಂಧನ್ನುವ ರಾಕ್ಷಸ. ತಾಮಸೀ ವ್ಯಕ್ತಿತ್ವದ ರಾಕ್ಷಸನಿಗೆ ವಾಲಿಯ ಪರಿಚಯ ಇತ್ತು, ಆದರೆ ಆತ ವಾಲಿಗಿಂತ ಸುಗ್ರೀವನನ್ನೇ ಅಶ್ರಯ ಹೊಂದಲು ತಿಳಿಸುವ ಕಾರಣವೇ “ಕಷ್ಟದಲ್ಲಿರುವವರಿಗೆ ಕಷ್ಟದಲ್ಲಿರುವವರೇ ನೆರವಾಗುತ್ತಾರೆ” ಎನ್ನುವುದು.
ಲಕ್ಷ್ಮಣನ ಮೂಲಕ ಸುಗ್ರೀವನ ಹತ್ತಿರ ಸ್ನೇಹವನ್ನು ಯಾಚಿಸುವುದು ತನ್ನ ಪತ್ನಿಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಸಹಕಾರಿಯಾಗಲೆಂದು. ಇದು ಕಬಂಧನೇ ಹೇಳಿದಂತೆ ಹೆಂಡತಿಯ ವಿಯೋಗದಲ್ಲಿರುವ ಸುಗ್ರೀವನಿಗೆ ತನ್ನ ಕಷ್ಟ ಅರ್ಥವಾಗುತ್ತದೆ ಎನ್ನುವ ನಿಟ್ಟಿನಲ್ಲಿ. ರಾಜನೀತಿಗೆ ಅನುಗುಣವಾದ ಸಂಗತಿಯನ್ನು ರಾಮ ಇಲ್ಲಿ ಅನುಸರಿಸಿದ್ದಾನೆಯೇ ಹೊರತೂ ಮತ್ತೇನೂ ಅಲ್ಲ. ಸುಗ್ರೀವನ ಕುರಿತು ಪ್ರಚಲಿತದಲ್ಲಿದ್ದಂತೆ ಚಂಚಲ, ಅಂಜುಕುಳಿ ಸ್ವಭಾವ ಎನ್ನುವುದಕ್ಕೆ ವಿರುದ್ಧವಾದ ಸ್ವಭಾವ ಆತನದ್ದಾಗಿತ್ತು. ಅದನ್ನು ಮುಂದಿನ ಭಾಗದಲ್ಲಿ ನೋಡೋಣ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ