Site icon Vistara News

ಧವಳ ಧಾರಿಣಿ ಅಂಕಣ: ಸೂರ್ಯವಂಶದ ಮುಂಗಾಣ್ಕೆಯನು ಅರಿತ ಸಾಧಕ- ಸುಮಂತ್ರ

ಧವಳ ಧಾರಿಣಿ dhavala dharini sumantra

ಅಬ್ಬರಿಸಿದರೂ ಅತಿಕ್ರಮಿಸದ ಸಂಯಮಿ

ಧವಳ ಧಾರಿಣಿ ಅಂಕಣ: ಸುಮಂತ್ರ (Sumantra) ಅಯೋಧ್ಯೆಯ (Ayodhya) ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ ಮತ್ತು ದಶರಥನ (Dasharatha) ಆಪ್ತನೂ ಆಗಿದ್ದನೆನ್ನುವ ವಿಷಯವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಈಗ ಮುಂದಿನ ಭಾಗ.

ನೇರ ನಿಷ್ಠುರ ರಾಜನೀತಿಜ್ಞ

ಸುಮಂತ್ರನ ರಾಜ ನಿಷ್ಠೆ ಮತ್ತು ನಿಷ್ಠುರ ಸ್ವಭಾವ ಎದ್ದು ಕಾಣುವುದು ಕೈಕೇಯಿಯ ಅರಮನೆಯಲ್ಲಿ. ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕದ ಸಂಭ್ರಮವೆಂದು ತಿಳಿದ ಪ್ರಜೆಗಳ ಸಂತೋಷ ಮೇರೆ ಮೀರಿತ್ತು. ಅದೇ ಕಾಲಕ್ಕೆ ಕೈಕೇಯಿಯ ಅರಮನೆಯಲ್ಲಿ ದೊರೆ ದಶರಥ ಧರ್ಮವೆನ್ನುವ ಹಗ್ಗದಿಂದ ಬಿಗಿಯಲ್ಪಟ್ಟಿದ್ದ. ರಾಮನನ್ನು ಒಮ್ಮೆ ನೋಡಬೇಕೆಂದು ಚಡಪಡಿಸುತ್ತಿದ್ದ. ವಶಿಷ್ಠರು ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ಸುವಸ್ತುಗಳನ್ನು ಸಿದ್ಧಮಾಡಿಕೊಂಡಿದ್ದರು. ಮುಹೂರ್ತ ಮೀರಿ ಹೋಗದಂತೆ ರಾಜನನ್ನು ಕೈಕೇಯಿಯ ಅರಮನೆಯಿಂದ ಗೌರವದ ಬಿನ್ನವತ್ತಳೆಯ ಮೂಲಕ ಕರೆತರುವ ಹೊಣೆ ಮಂತ್ರಿಯದಾಗಿತ್ತು. ಆತ ಕೈಕೇಯಿಯ ಅರಮನೆಗೆ ಹೋಗಿ ದಶರಥನನ್ನು ಸ್ತುತಿಮಾಡುತ್ತಾ “ಇಂದ್ರನ ಸಾರಥಿಯಾದ ಮಾತಲಿಯು ದೇವರಾಜನನ್ನು ಎಚ್ಚರಗೊಳಿಸುವಂತೆ ನಾನು ನಿನ್ನನ್ನು ಪಟ್ಟಾಭಿಷೇಕದ ಸುಮೂಹರ್ತಕ್ಕಾಗಿ ಆಗಮಿಸಲು ವಿನಂತಿಸುವುತ್ತಿದ್ದೇನೆ, ಈ ಕೂಡಲೇ ಸಿದ್ಧನಾಗು” ಎಂದು ಹೊರಗಡೆಯಿಂದಲೇ ಬಗೆಬಗೆಯಾಗಿ ಹೊಗಳುತ್ತಾನೆ. ಅವೆಲ್ಲವೂ ರಾಜನಿಗೆ ತನ್ನ ಮರ್ಮಸ್ಥಳವನ್ನು ಕತ್ತರಿಸುವ ಆಯುಧಗಳಾಗಿ ಇರಿಯುತ್ತಿದ್ದವು. ಆತನಲ್ಲಿ ಮಾತು ಹೊರಡುತ್ತಿರಲಿಲ್ಲ. ಆಗ ಕೈಕೇಯಿ “ನಿಮ್ಮ ಮಹಾರಾಜ ರಾಮನ ಪಟ್ಟಾಭಿಷೇಕಮಾಡಬೇಕೆನ್ನುವ ಉತ್ಸಾಹದಲ್ಲಿ ರಾತ್ರಿಯೆಲ್ಲಾ ಎಚ್ಚರಗೊಂಡಿದ್ದನು. ಯಶೋವಂತನಾದ ರಾಜನಿಗೆ ಇದೀಗ ಆಯಾಸದಿಂದ ನಿದ್ರೆ ಹತ್ತುತ್ತಿದೆ. ರಾಮನನ್ನು ಒಮ್ಮೆ ಇಲ್ಲಿಗೆ ಬರುವಂತೆ ಹೇಳು” ಎನ್ನುತ್ತಾಳೆ.

ಆಕೆಗೆ ದೊರೆ ತನ್ನ ಕೈಯಿಂದ ಜಾರಿಹೋದರೆ ಕೆಲಸ ಕೆಡುತ್ತದೆ, ಪ್ರಜೆಗಳೆಲ್ಲ ರಾಮನ ಪರವಾಗಿ ನಿಂತು ತನ್ನನ್ನೇ ತಿರಸ್ಕರಿಸಬಹುದು ಎನ್ನುವ ಭಯಕಾಡುತ್ತಿತ್ತು. ಸುಮಂತ್ರನಿಗೆ ಅಲ್ಲಿನ ನಡತೆಯನ್ನು ನೋಡಿ ಸಂಶಯವುಂಟಾಯಿತು. ರಾಜನ ಅಭಿಪ್ರಾಯ ತಿಳಿಯದೇ ತಾನು ಹೇಗೆ ಹೋಗಲಿ ಎನ್ನುತ್ತಾನೆ. ಆಗ ದಶರಥ ವಿವಶನಾಗಿ “ಸುಂದರನಾದ ರಾಮನನ್ನು ತಾನು ನೋಡಬೇಕೆಂದಿದ್ದೇನೆ. ಅವನನ್ನು ಕರೆದುಕೊಂಡು ಬಾ” ಎನ್ನುತ್ತಾನೆ. ಕೈಕೇಯಿ “ಯಶೋವಂತನಾದ ರಾಮನನ್ನು ಶೀಘ್ರವಾಗಿ ಕರೆತಾ” ಎನ್ನುವ ಮಾತುಗಳು ಆತನನ್ನು ಯೋಚಿಸುವಂತೆ ಮಾಡಿದವು. ರಾಮನನ್ನು ಕರೆತರಲು ಸಭೆಗೆ ಹೊರಟವನಿಗೆ ಸಮಾಧಾನವಾಗಲಿಲ್ಲ. ರಾಮನಲ್ಲಿಗೆ ಬರದೇ ನೇರವಾಗಿ ಸಭಗೆ ಬರುತ್ತಾನೆ. ವಿಷಯ ಎಲ್ಲಿಯೋ ಹದತಪ್ಪುತ್ತಿದೆಯೆಂದು ಆತನಿಗೆ ಎನಿಸುತ್ತಿತ್ತು. ಅಲ್ಲಿ ನೆರೆದ ರಾಜರು ರಾಜ ಮತ್ತು ರಾಮ ಇಬ್ಬರು ಇನ್ನೂ ಬರಲಿಲ್ಲವಲ್ಲವೆಂದು ತಮ್ಮತಮ್ಮಲ್ಲೇ ಮಾತಾಡಿಕೊಳ್ಳುತ್ತಿರುವಾಗ ಸುಮಂತ್ರ ಅವರೆಲ್ಲರೂ ರಾಜನನ್ನು ಕಾಯುತ್ತಿದ್ದಾರೆ ಎನ್ನುವುದನ್ನು ತಿಳಿಸುವ ನೆವದಿಂದ ಮತ್ತೊಮ್ಮೆ ಕೈಕೇಯಿಯ ಅರಮನೆಗೆ ಬಂದ. ರಾಜನನ್ನು ಇಂದ್ರ-ವರುಣ-ಕುಬೇರರಿಗೆ ಹೋಲಿಸಿ ಆತನ್ನು ಕಾಣುವ ಉದ್ಧೇಶದಿಂದ ಅರಮನೆಯ ದ್ವಾರದಲ್ಲಿ ಋಷಿಪ್ರಮುಖರು, ರಾಜರುಗಳೂ, ಪೌರಜಪದರೂ ಕಾಯುತ್ತಿದ್ದಾರೆ, ಬೇಗ ಸಿದ್ಧನಾಗುವಂತೆ ಸ್ತೋತ್ರಮಾಡತೊಡಗಿದ. ಒಳಗಡೆ ಇರುವ ರಾಜನ ಮುಖದರ್ಶನವಾಗಲಿಲ್ಲ. ಕೈಕೇಯಿಯ ಪ್ರೇರಣೆಗೆ ಒಳಗಾದ ರಾಜನಿಗೆ ರಾಮ ಬರಲಿ ಎಂದು ಅನಿಸಿತ್ತು. ಅದನ್ನು ತಪ್ಪಿದ ಸುಮಂತ್ರನಿಗೆ “ತನ್ನ ಆಜ್ಞಾನುಸಾರವಾಗಿ ರಾಮನನ್ನು ಶೀಘ್ರವಾಗಿ ಇಲ್ಲಿಗೆ ಕರೆದು ತಾ” ಎಂದು ಸಿಡುಕಿದ.

ಈಗ ಮಾತ್ರ ಸುಮಂತ್ರನಿಗೆ ಬೇರೆ ವಿಕಲ್ಪಗಳಿರಲಿಲ್ಲ. ಅನಿವಾರ್ಯವಾಗಿ ರಾಮನ ಅರಮನೆಗೆ ಹೋಗಿ “ರಾಜ ನಿನ್ನನ್ನು ಶೀಘ್ರವಾಗಿ ಒಮ್ಮೆ ಅಲ್ಲಿಗೆ ಬರಹೇಳಿದ್ದಾನೆ” ಎನ್ನುತ್ತಾನೆ. ಕೈಕೇಯಿಯಲ್ಲಿಗೆ ಹೋದ ರಾಮನಿಗೆ ನಡೆದ ವಿಷಯ ಮನದಟ್ಟಾಗುತ್ತದೆ. ರಾಜ ಮಾತನ್ನೇ ಆಡಲಿಲ್ಲ. ಯಾವ ಕೈಕೇಯಿ ರಾಮನನ್ನು ಮಾತೆಯೆನ್ನುವ ಭಾವದಿಂದ ಇದುತನಕ ನೋಡುತ್ತಿಳೋ ಅವಳ ಮಾತು ಅರಣ್ಯವಾಸದೆಡೆಗೆ ತನ್ನನ್ನು ಕಳುಹಿಸುತ್ತಿದೆ ಎನ್ನುವದನ್ನು ತಿಳಿದಾಗ ರಾಮ ಕೊಂಚವೂ ಯೋಚಿಸುವುದಿಲ್ಲ. ತನ್ನ ತಾಯಿಯನ್ನು, ಇತರ ಪರಿವಾರದವರನ್ನೂ ಸಮಾಧಾನಿಸಿ ಅರಣ್ಯಕ್ಕೆ ಹೋಗಲು ತಂದೆಯ ಅಪ್ಪಣೆಯನ್ನು ಪಡೆಯಲು ಬರುತ್ತಾನೆ. ಆದರೆ ಈ ವೇಳೆಗೆ ಸುಮಂತ್ರ ಕೈಕೇಯಿಯ ಅರಮನೆಯ ಹೊರಗೆ ಪರಿಸ್ಥಿತಿಯನ್ನು ನಿಭಾಯಿಸಲು ಮತ್ತು ರಾಜನನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಸಿದ್ಢತೆಯನ್ನು ಮಾಡಿಕೊಂಡು ರಾಜನ ಅನುಮತಿ ಸಿಕ್ಕಿತೋ ಎಂದು ಕಾಯುತ್ತಿರುತ್ತಾನೆ. ಆತನ ಎಲ್ಲ ನಿರೀಕ್ಷೆಗೆ ವಿರುದ್ದವಾಗಿ ರಾಮ ತನ್ನ ತಂದೆಯ ಹತ್ತಿರ,

ನೈವಾಹಂ ರಾಜ್ಯಮಿಚ್ಛಾಮಿ ನ ಸುಖಂ ನ ಚ ಮೈಥಿಲೀಮ್.
ನೈವ ಸರ್ವಾನಿಮಾನ್ ಕಾಮಾ ನ್ನಸ್ವರ್ಗಂ ನೈವ ಜೀವಿತಮ್৷৷ಅಯೋ.34.47৷৷

ನನಗೆ ಸತ್ಯದ ಹೊರತಾಗಿ ರಾಜ್ಯ, ಸುಖ, ಜೀವನ ಹೆಚ್ಚೇನು ಸೀತೆಯೂ ಸಹ ಬೇಕಾಗಿಲ್ಲವೆನ್ನುವ ಮಾತನ್ನು ಹೇಳಿದನೋ, ಅದನ್ನು ಕೇಳಿದ ಸುಮಂತ್ರನ ಕೈ ಕಟ್ಟಿಹೋಯಿತು. ಆದರೆ ತನ್ನ ಪ್ರಾಣಕ್ಕಿಂತ ಪ್ರಿಯನಾದ ರಾಮ ನಾರುಮಡಿಯನ್ನು ಧರಿಸಿ ಅರಣ್ಯಕ್ಕೆ ಹೋಗುವುದನ್ನು ಕಲ್ಪಿಸಿಕೊಳ್ಳಲಾಗದ ದಶರಥ ಅಸಹಾಯಕತೆಯಿಂದ ಮೂರ್ಛೆಹೋದಾಗ ಸುಮಂತ್ರನೂ ಒಮ್ಮೆ ಮೂರ್ಛಿತನಾದ. ಸಾವರಿಸಿಕೊಂಡು ಎದ್ದವನಿಗೆ ತಡೆಯಲಾಗಲಿಲ್ಲ. ಪರೋಕ್ಷವಾಗಿ ಕೈಕೇಯಿಯ ದಾಸನಾಗಿ ಇತರ ರಾಣಿಯರನ್ನು ಕಡೆಗಣಿಸಿದ ದಶರರಥ ಮಾವಿನ ಮರವನ್ನು ಕಡಿದು ಬೇವಿನಮರವನ್ನು ಬೆಳೆಸಿದುದರ ಫಲವಿದು ಎಂದು ಕೈಕೇಯಿಯನ್ನು ದೂಷಿಸುತ್ತಾನೆ. ನಿನ್ನ ಮಗನೇ ರಾಜನಾಗಲಿ, ನಾವೆಲ್ಲರೂ ಶ್ರೀರಾಮನನ್ನು ಅನುಸರಿಸಿ ಆತ ಹೋಗುವಲ್ಲಿಗೇ ಹೋಗುತ್ತೇವೆ, ಮರ್ಯಾದೆಗೆಟ್ಟವಳು ನೀನು ಎನ್ನುವ ಮಾತುಗಳನ್ನು ದಿಟ್ಟತನದಿಂದ ರಾಜನ ಎದುರೇ ಆಡುತ್ತಾನೆ. ಹೀಗೆ ಹೇಳುವಾಗ ಕೈಕೇಯಿಯ ತಾಯಿಗೂ ಇಂತಹುದೇ ಕೆಟ್ಟಗುಣವಿತ್ತು ಎನ್ನುತ್ತಾ ಒಂದು ಕಥೆಯನ್ನು ಹೇಳುತ್ತಾನೆ.

ಅಶ್ವಪತಿ ರಾಜನಿಗೆ ಸಾಧುವೊಬ್ಬ ಪ್ರಾಣಿಗಳ ಭಾಷೆಯನ್ನು ಅರ್ಥಮಾಡಿಕೊಳ್ಳುವ ವರವನ್ನು ಕೊಟ್ಟಿದ್ದ. ಅದನ್ನು ಯಾವ ಕಾರಣಕ್ಕೂ ಇನ್ನೊಬ್ಬರಿಗೆ ಹೇಳಬಾರದೆನ್ನುವ ನಿಬಂಧನೆಯನ್ನು ಹಾಕಿದ್ದ. ಒಮ್ಮೆ ತನ್ನ ಪಲ್ಲಂಗದ ಕೆಳಗೆ ಹರಿದಾಡುತ್ತಿದ್ದ ಇರುವೆಗಳ ಮಾತನ್ನು ಕೇಳಿ ಆತನಿಗೆ ನಗು ಬಂತು. ಕೈಕೇಯಿಯ ತಾಯಿಗೆ ಆತ ತನ್ನ ಕುರಿತು ನಗುತ್ತಿದ್ದಾನೆನ್ನುವ ಸಂಶಯ! ರಾಜನಲ್ಲಿ ನಕ್ಕಿದ್ದು ಯಾಕೆ ಎಂದು ಕೇಳಿದಳು. ರಾಜ “ಇದು ಗುಟ್ಟು, ಹೇಳಲಾಗದು. ಹೇಳಿದರೆ ನನಗೆ ಒಡನೆಯೇ ಮರಣ ಸಂಭವಿಸುತ್ತದೆ” ಎಂದು ಹೇಳಿದ. ಆದರೆ ಸಂಶಯ ಸ್ವಭಾವದವಳಾಗಿದ್ದ ರಾಣಿ “ಶಂಸ ಮೇ ಜೀವ ವಾ ಮಾ ವಾ ನ ಮಾಮಪಹಸಿಷ್ಯಸಿ” ನೀನು ಬದುಕು ಇಲ್ಲವೇ ಸಾಯಿ, ಈ ಗುಟ್ಟು ತನಗೆ ಹೇಳಲೇಬೇಕು ಎಂದು ಹಟಹಿಡಿದ ಗಯ್ಯಾಳಿಯಾಗಿದ್ದಳು. ರಾಜ ಮತ್ತೊಮ್ಮೆ ತನಗೆ ಕಲಿಸಿದ ಸಾಧುವನ್ನು ಈ ವಿಷಯದಲ್ಲಿ ಕೇಳಿದಾಗ ಆತ ನಿನ್ನ ಪತ್ನಿ ಸತ್ತುಹೋದರೂ, ಹಾಳಾಗಿ ಹೋದರೂ ಈ ವಿಷಯವನ್ನು ಹೇಳಕೂಡದು ಎಂದು ಎಚ್ಚರಿಸಿದ. ಆಗ ಅಶ್ವಪತಿ ಕೈಕೇಯಿಯ ತಾಯಿಯನ್ನು ಪರಿತ್ಯಜಿಸಿ ನೆಮ್ಮದಿಯಿಂದ ಬದುಕಿದ. ಈ ಕಥೆ ಕೈಕೇಯಿಯನ್ನು ದೂಷಿಸಿದಂತೆ ಕಂಡುಬಂದರೂ ಅದರ ಗುರಿ ದಶರಥನಾಗಿದ್ದ. ಈಗಲಾದರೂ ಧೈರ್ಯತೆಗೆದುಕೊಂಡು ಕೈಕೇಯಿಯನ್ನು ತ್ಯಜಿಸಿ ರಾಜ್ಯವನ್ನು ಉಳಿಸು ಎನ್ನುವ ಸೂಚನೆ ಅದರಲ್ಲಿ ಇತ್ತು.

ಈ ವಿವರಗಳು ಕೈಕೇಯಿಯಲ್ಲಿ ಯಾವ ಪರಿಣಾಮವನ್ನೂ ಬೀರದೇ ಇರುವುದನ್ನು ನೋಡಿ ಕೊನೆಯ ಅಸ್ತ್ರವಾಗಿ ದೀನನಾಗಿ “ಸನ್ಮಾರ್ಗಪ್ರವರ್ತಕನಾದ ರಾಮನನ್ನು ದುಷ್ಟೆಯಾದ ಕೈಕೇಯಿಯು ಅರಣ್ಯಕ್ಕೆ ಕಳುಹಿಸಿದಳು ಎನ್ನುವ ದೊಡ್ಡ ಅಪವಾದಕ್ಕೆ ಗುರಿಯಾಗಬೇಡ” ಎಂದು ಬೇಧನೀತಿಯನ್ನು ಬೋಧಿಸುತ್ತಾನೆ. ಒಮ್ಮೆ ಸಾಮದಿಂದ ಇನ್ನೊಮ್ಮೆ ಬೇಧದಿಂದ ಮಗದೊಮ್ಮೆ ದಯೆತೋರು ಎಂದು ಕೊನೆಗೆ ದಂಡಪ್ರಯೋಗದವರೆಗೂ ಸುಮಂತ್ರ ಪರಿಸ್ಥಿತಿಯನ್ನು ಸಂಭಾಳಿಸಲು ಪ್ರಯತ್ನಿಸುತ್ತಾನೆ. ಆದರೆ ಯಾವಾಗ ರಾಮ ಅರಣ್ಯಕ್ಕೆ ಹೋಗಲು ಸಿದ್ಧನಾಗುತ್ತಾನೋ ಆಗ ಆತ ಹತಾಶೆಯಿಂದ ಮೌನವಾಗಬೇಕಾಗುತ್ತದೆ. ದಶರಥನ ಆಜ್ಞೆಯಂತೆ ರಥದ ಸೂತನಾಗಿ ರಾಮನನ್ನು ಅರಣ್ಯಕ್ಕೆ ಬಿಡಲು ಹೊರಡುತ್ತಾನೆ. ಸುಮಂತ್ರ ರಾಜ್ಯಕ್ಕಾಗಿ ಕರ್ತವ್ಯನಿಷ್ಟನೇ ಹೊರತೂ ವಯಕ್ತಿಕವಾಗಿ ರಾಜನಿಗೆ ಅಲ್ಲ. ರಾಮನನ್ನು ರಥದಲ್ಲಿ ಕುಳ್ಳಿರಿಸಿ ಹೊರಡುವಾಗ ದಶರಥ ತನ್ನ ಪತ್ನಿಯಾದ ಕೌಸಲ್ಯೆ ಮತ್ತು ಸುಮಿತ್ರೆಯರ ಸಂಗಡ ರಥದ ಹಿಂದೆ ಓಡೋಡಿ ಬರುತ್ತಿದ್ದರೆ ಸುಮಂತ್ರ ರಾಮನ ಆಜ್ಞೆಯಂತೆ ಶೀಘ್ರವಾಗಿ ರಥವನ್ನು ಓಡಿಸಿಕೊಂಡು ಹೋಗುತ್ತಾನೆ.

ರಾಮಭಾವದಲ್ಲಿ ತನ್ನತನ ಮರೆತ

ಸಚಿವ, ಆಪ್ತ, ಸೂತ ಹೀಗೆ ಹಲವು ವಿಧಗಳಲ್ಲಿ ಅಯೋಧ್ಯೆಯ ರಾಜಮನೆತನವನ್ನು ಸೇವಿಸಿದ ಸುಮಂತ್ರ ರಾಮನನ್ನು ಶೃಂಗಬೇರಪುರದಿಂದ ಅರಣ್ಯಕ್ಕೆ ಕಳಿಸುವಾಗ ಮಾತ್ರ ಚಿಕ್ಕಮಗುವಿನಂತೆ ಅಳುತ್ತಾನೆ. ರಾಮನ ಗುಣ ಸುಮಂತ್ರನನ್ನು ಆತನ ಬಾಲ್ಯದ ನಡವಳಿಕೆಯಿಂದಲೇ ಸೆಳೆದಿತ್ತು. ರಾಮರಾಜ್ಯವನ್ನು ನೋಡಬೇಕೆಂದು ಆತ ದಶರಥನಿಗೆ ಎಲ್ಲಾಬಗೆಯ ಸಹಕಾರವನ್ನು ನೀಡಿದ್ದ. ಅರಣ್ಯದಲ್ಲಿ ಸುಮಂತ್ರ ರಾಮನ ಸಂಗದಲ್ಲಿ ತನ್ನನ್ನೇ ಮರೆಯುತ್ತಾನೆ. ರಾಮನ ಬಾಯಲ್ಲಿ ತನ್ನ ಕುರಿತಾಗಿ “ಸುಮಂತ್ರ! ಭವ ಮೇ ಪ್ರತ್ಯನನ್ತರಃ- ಸುಮಂತ! ನೀನು ನನ್ನ ಸಮೀಪದಲ್ಲಿಯೇ ಇರು” ಎನ್ನುವ ಮಾತುಗಳನ್ನು ಕೇಳಲು ಬಯಸಿದ್ದ. ಆತನಿಗೆ ಅಯೋಧ್ಯೆಯ ಯಾವ ಅಧಿಕಾರವೂ ಬೇಡವಾಗಿತ್ತು. ನೀನೇನಾದರೂ ತನ್ನನ್ನು ತ್ಯಜಿಸಿದರೆ ಅಯೋಧ್ಯೆಯ ಪ್ರಜಾವರ್ಗ ತನ್ನನ್ನು ರಾಮನನ್ನು ಅರಣ್ಯಕ್ಕೆ ಕಳುಹಿಸಿಬಂದವನೆಂದು ದೂಷಿಸುತ್ತಾರೆ. ಅದರ ಬದಲು ತಾನು ಕುದೆರಗಳ ಸಮೇತ ಬೆಂಕಿಯಲ್ಲಿ ಬಿದ್ದು ಸಾಯುತ್ತೇನೆ ಎಂದು ಅಲವತ್ತುಕೊಳ್ಳುತ್ತಾನೆ. ರಾಮ ಸ್ತಿತಪ್ರಜ್ಞ; ಯಾವಾಗ ಆತ ಗಂಗಾನದಿಯನ್ನು ದಾಟಲು ಹೊರಟನೋ ಆಗ ಸುಮಂತ್ರನಿಗೆ ದುಃಖ ತಡೆದುಕೊಳ್ಳಲಾಗಲಿಲ್ಲ. ತನ್ನತನವನ್ನೇ ಮರೆಯುತ್ತಾನೆ. ರಾಮ ಆತನಿಗೆ ಅಯೋಧ್ಯೆಯಲ್ಲಿ ರಾಜನನ್ನು ಮತ್ತು ತಾಯಂದಿರನ್ನು ಜಾಗರೂಕನಾಗಿ ರಕ್ಷಿಕೊಂಡಿರು ಎನ್ನುವ ಆದೇಶವನ್ನು ನೀಡುತ್ತಾನೆ. ಎಲ್ಲಿಯಾದರೂ ಭರತ ಮತ್ತು ಕೈಕೇಯಿಯಿಂದ ಅವರಿಗೆ ತೊಂದರೆಯುಂಟಾದೀತೋ ಎನ್ನುವ ಸಂಶಯ ರಾಮನಿಗೆ ಇದ್ದೇ ಇತ್ತು. ರಾಜನಿಷ್ಟೆಯುಳ್ಳ ಸುಮಂತ್ರ ಅವರನ್ನು ರಕ್ಷಿಸಬಲ್ಲನೆನ್ನುವ ನಂಬಿಕೆಯಿತ್ತು. ಅದನ್ನು ವಿವರವಾಗಿ ತಿಳಿಸುತ್ತಾನೆ. ಜೊತೆಗೆ ಸುಮಂತ್ರ ಓರ್ವನೇ ಹಿಂದಿರುಗಿರುವುದನ್ನು ಗಮನಿಸಿದ ಕೈಕೇಯಿಗೆ ರಾಮ ಬೇರೆಲ್ಲಿಯೂ ಹೋಗದೇ ಅರಣ್ಯಕ್ಕೆ ಹೋಗಿದ್ದಾನೆ ಎನ್ನುವ ನಂಬಿಕೆ ಬರುತ್ತದೆ.

ಬರಿದಾದ ರಥವನ್ನು ತೆಗೆದುಕೊಂಡು ಅರಮನೆಗೆ ಬಂದು ದಶರಥನನ್ನು ನೋಡಿದಾಗ ಸುಮಂತ್ರನಿಗೆ ರಾಮನ ಅಗಲುವಿಕೆಯ ನೋವು ತಡೆದುಕೊಳ್ಳಲಾಗುವುದಿಲ್ಲ. ದಶರಥ ರಾಮ, ಸೀತೆ ಲಕ್ಷ್ಮಣರ ಸಂದೇಶ ಏನಿತ್ತು ಎಂದು ಕೇಳಿದಾಗ ಭರತನಿಗೆ ಕೈಕೇಯಿಯನ್ನು ನೋಡುವಂತೆ ಕೌಸಲ್ಯೆ ಮತ್ತು ಸುಮಿತ್ರೆಯರನ್ನೂ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿರುವುದನ್ನು ಮತ್ತು ಲಕ್ಷ್ಮಣನ ಕ್ರೋಧದ ಮಾತುಗಳನ್ನು ಯಥಾವತ್ತಾಗಿ ಹೇಳಿದರೂ ಸೀತೆ ಕೈಕೇಯಿಯ ವಿಷಯದಲ್ಲಿ ಹೇಳಿರುವ ದೂರನ್ನು ಮಾತ್ರ ಬಹಿರಂಗಪಡಿಸುವುದಿಲ್ಲ. ಮುಂದೆ ಕೈಕೇಯಿಯ ಅಧೀನದಲ್ಲಿ ಇರಬೇಕಾದ ಕಾರಣ, ಸೀತೆ ಹೇಳಿದ ಕೈಕೇಯಿಯ ಸಂಬಂಧಿತ ದೂರನ್ನು ಕೇಳಿದ ಅವಳು ತೊಂದರೆಕೊಟ್ಟಾಳು ಎನ್ನುವ ಪ್ರಜ್ಞೆ ಸುಮಂತ್ರನಿಗಿತ್ತು. ವಾಲ್ಮೀಕಿಯೂ ಕೈಕೇಯಿಯ ವಿಷಯದಲ್ಲಿ ಸೀತೆಯ ಅಭಿಪ್ರಾಯವನ್ನು ತಿಳಿಸದೇ ಗೂಢವಾಗಿಟ್ಟಿದ್ದಾನೆ. ನಂದೀಗ್ರಾಮದಲ್ಲಿ ಭರತ ಆಳುವಾಗ ಆತನಿಗೆ ಕೋಶ ಮತ್ತು ರಾಜ್ಯದ ಆಡಳಿತದ ವಿಷಯದಲ್ಲಿ ನೆರವನ್ನು ಸಮರ್ಥವಾಗಿಯೇ ಸುಮಂತ್ರ ನೀಡುತ್ತಾನೆ.

ಭೂತ ಭವಿಷ್ಯತ್ತನ್ನು ಬಲ್ಲ ಪ್ರಾಜ್ಞ

ಸುಮಂತ್ರ ರಾಮ ವನವಾಸದಿಂದ ಪುನಃ ಬಂದು ಅಯೋಧ್ಯೆಯ ಪಟ್ಟವನ್ನು ಏರಿದಮೇಲೂ ಅವನ ಅಮಾತ್ಯನಾಗಿಯೇ ಮುಂದುವರಿಯುತ್ತಾನೆ. ಹೇಗೆ ಕರ್ತವ್ಯ ನಿಷ್ಠನೋ, ಅದೇ ರೀತಿ ಮಹಾತ್ಮರ ಒಲವನ್ನೂ ಆತ ಗಳಿಸಿಕೊಂಡಿದ್ದ. ಅವರು ಹೇಳಿದ ವಿಷಯಗಳನ್ನು ಸಂದರ್ಭ ಬಂದಾಗ ಮಾತ್ರ ಹೇಳುತ್ತಿದ್ದ. ಈ ಹಿಂದೆ ಮಹಾತ್ಮರಾದ ಸನತ್ಕುಮಾರರು ದಶರಥನಿಗೆ ಋಷ್ಯಶೃಂಗರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಿದರೆ ಮಕ್ಕಳಾಗುವರು ಎನ್ನುವುದನ್ನು ತಿಳಿಸಿದಂತೆ ಆತನಿಗೆ ರಾಮನ ನಂತರದ ಅಯೋಧ್ಯೆ ಹೇಗಿರಬಹುದೆನ್ನುವ ವಿಷಯವೂ ತಿಳಿದಿತ್ತು. ಅದರ ವಿವರ ಹೀಗಿದೆ.

ರಾಮ ಜನಪಾವದಕ್ಕೆ ಅಂಜಿ ಸೀತೆಯನ್ನು ಅರಣ್ಯಕ್ಕೆ ಬಿಟ್ಟುಬರುವಂತೆ ಲಕ್ಷ್ಮಣನಿಗೆ ಆಜ್ಞೆಮಾಡುತ್ತಾನೆ. ಅಣ್ಣನ ಆಜ್ಞೆಯನ್ನು ಶಿರಸಾವಹಿಸಿ ಲಕ್ಷ್ಮಣ ಆಕೆಯನ್ನು ವಾಲ್ಮೀಕಿ ಋಷಿಗಳ ಆಶ್ರಮದ ಹತ್ತಿರ ಬಿಡಲು ಹೋಗುವಾಗ ಆ ರಥವನ್ನು ನಡೆಸುವ ಸೂತನಾದವ ಸುಮಂತ್ರನೇ. ಸೀತೆಯನ್ನು ಬಿಟ್ಟು ಬರುವಾಗ ಲಕ್ಷ್ಮಣನ ಸುಮಂತ್ರನ ಹತ್ತಿರ ಗೋಳಾಡುತ್ತಾನೆ. ಈ ಮೊದಲು ರಾಮ ಲಕ್ಷ್ಮಣ ಮತ್ತು ಸೀತೆಯರನ್ನು ಅರಣ್ಯಕ್ಕೆ ಬಿಟ್ಟುಬರುವಾಗ ದುಃಖಿಯಾಗಿದ್ದ ಸುಮಂತ್ರ ಇಲ್ಲಿ ಮಾತ್ರ ಶೋಕಪಡುವುದಿಲ್ಲ ಬದಲಾಗಿ ಲಕ್ಷ್ಮಣನಿಗೆ ಹೀಗೆ ಆಗಬೇಕಾದದ್ದು ಬಲು ಹಿಂದೆಯೇ ನಿರ್ಧಾರಿತವಾಗಿದೆ ಎನ್ನುತ್ತಾನೆ. ಒಂದು ಸಂದರ್ಭದಲ್ಲಿ ದಶರಥನನ್ನು ನೋಡಲು ದೂರ್ವಾಸರು ಬಂದಿದ್ದರು. ದಶರಥ ಕುತೂಹಲದಿಂದ ತನ್ನ ವಂಶ ಎಲ್ಲಿಯತನಕ ಮುಂದುವರೆಯುತ್ತದೆ ಎನ್ನುವ ಭವಿಷ್ಯವನ್ನು ದೂರ್ವಾಸರಲ್ಲಿ ಕೇಳಿದ್ದ. ಅದಕ್ಕೆ ದೂರ್ವಾಸರು ಮಕ್ಕಳಿಲ್ಲದ ದಶರಥನಿಗೆ ನಿನ್ನ ಉದರದಲ್ಲಿ ಮಹಾವಿಷ್ಣುವೇ ಜನಿಸುತ್ತಾನೆ ಎನ್ನುತ್ತಾರೆ. ಅಷ್ಟೇ ಅಲ್ಲ; ಭೃಗು ಮಹರ್ಷಿಯ ಹೆಂಡತಿಯಾದ ಖ್ಯಾತಿಯನ್ನು ಶ್ರೀಮನ್ನಾರಾಯಣ ಕೊಂದಿರುವ ಕಾರಣ ಭೂಮಿಯಲ್ಲಿ ಜನಿಸಿ ವಿರಹದುಃಖವನ್ನು ತನ್ನಂತೆಯೇ ಅನುಭವಿಸು ಎಂದು ಭೃಗು ಕೊಟ್ಟ ಶಾಪದ ವಿಷಯವನ್ನು ತಿಳಿಸುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಈ ಕಾರಣದಿಂದ ಆತ ಭೂಮಿಯಲ್ಲಿ ಅವತರಿಸಿದರೂ ತನ್ನ ಪತ್ನಿಯ ವಿರಹದ ನೋವನ್ನು ಅನುಭವಿಸಬೇಕಾಗುತ್ತದೆ. ಆತನ ಕಾಲದಲ್ಲಿ ಅಯೋಧ್ಯೆ ತುಂಬಾ ಪ್ರವರ್ಧಮಾನಕ್ಕೆ ಬರುತ್ತದೆ. ಹನ್ನೊಂದು ಸಾವಿರ ವರ್ಷಗಳಕಾಲ ಆತ ರಾಜ್ಯಭಾರವನ್ನು ಮಾಡಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ. ಆತನಿಗೆ ಇಬ್ಬರು ಗಂಡುಮಕ್ಕಳು ಜನಿಸುತ್ತಾರೆ ಎಂದು ದೂರ್ವಾಸರು ಸುಮ್ಮನಾದರು. ಆದರೆ ಸುಮಂತ್ರ ಅವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ಪ್ರಾರ್ಥಿಸಿ ಇನ್ನೂ ಮುಂದಿನ ಗುಟ್ಟನ್ನು ಹೇಳಬೇಕೆಂದು ಕೇಳಿಕೊಂಡಾಗ “ರಾಮ ಇಬ್ಬರೂ ಗಂಡುಮಕ್ಕಳಿಗೂ ಅಯೋಧ್ಯೆಯಲ್ಲಿ ಪಟ್ಟಾಭಿಷೇಕಮಾಡುವುದಿಲ್ಲ, ಬೇರೆಯದೇ ಆದ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡುತ್ತಾನೆ ಎಂದಿದ್ದಾರೆ” ಎಂದು ನುಡಿದು ಇದೆಲ್ಲವೂ ದೈವಸಂಕಲ್ಪ, ಶೋಕಪಡಬೇಡ ಎಂದು ಸಮಾಧಾನ ಮಾಡುತ್ತಾನೆ. ದೇವಗೌಪ್ಯತೆಯನ್ನು ಮತ್ತು ಋಷಿ ಗೌಪ್ಯತೆಯನ್ನು ಕಾಪಾಡುವ ಮಹತ್ವದ ಹೊಣೆಗಾರಿಕೆಯನ್ನು ಬಲ್ಲ ಸುಮಂತ್ರನಂತವ ಅಯೋಧ್ಯೆಯ ಬಲಿಷ್ಟ ಸಾಮ್ರಾಜ್ಯದ ಪ್ರಮುಖ ಆಧಾರ ಸ್ತಂಭಗಳಲ್ಲಿ ಒಂದಾಗಿದ್ದ.

ಮಹಾಕಾವ್ಯದಲ್ಲಿ ನಾಯಕನ ಪಾತ್ರ ರೂಪುಗೊಳ್ಳಬೇಕಾದರೆ ಅದಕ್ಕೆ ಪೂರಕವಾದ ಪೋಷಕ ಪಾತ್ರಗಳಿರಬೇಕಾಗುತ್ತದೆ. ಅಮಾತ್ಯನ ಪಾತ್ರ ಅಂತಹದು. ಸಚಿವನಾಗಿರಬೇಕಾದವ ಉದಾರಚರಿತ, ಕುಲೀನತೆಯಲ್ಲಿ ಶ್ರೇಷ್ಠ, ಕಾರ್ಯದಕ್ಷತೆ, ಜಿತೇಂದ್ರಿಯತೆ, ಸತ್ಕುಲಪ್ರಸೂತರೊಡನೆ ಸಂಪರ್ಕ, ಶೌರ್ಯ, ಕೃತಜ್ಞತೆ ಮತ್ತು ಸತ್ಯನಿಷ್ಠೆ ಇವುಗಳಿಂದ ಕೂಡಿರಬೇಕಾಗಿರುತ್ತದೆ. ಸುಮಂತ್ರನಲ್ಲಿ ಇವೆಲ್ಲಗುಣಗಳಿದ್ದವು. ಅದರೆ ಆತನ ಜನ್ಮ ಮತ್ತು ತಂದೆತಾಯಿಗಳ ವಿವರ ಸಿಗುವುದಿಲ್ಲ. ಅವೆಲ್ಲವೂ ಮಹಾಕಾವ್ಯದ ನಾಯಕನ ನೆರಳಿನಲ್ಲಿ ಅಡಗಿ ಕುಳಿತಿವೆ. ರಾಮ ನಿರ್ಯಾಣಗೈಯುವ ಕಾಲಕ್ಕೆ ಈತನೂ ಸಹ ರಾಮನೊಂದಿಗೇ ಸರಯೂ ನದಿಯಲ್ಲಿ ಐಕ್ಯನಾಗಿ ಸಾಂತಾನಿಕವೆನ್ನುವ ಲೋಕವನ್ನು ಪಡೆಯುತ್ತಾನೆ.

ಎರಡು ತಲೆಮಾರಿನ ತನಕ ಅಯೋಧ್ಯೆಯನ್ನು ಎಲೆಯ ಮರೆಯಲ್ಲಿ ರಕ್ಷಿಸಿದವ ಸುಮಂತ್ರ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

Exit mobile version