Site icon Vistara News

ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ

mayamruga

ರಾವಣತ್ವದ ದರ್ಪಕ್ಕೆ ಸೀತಾಕಂಪನವನ್ನು ತಂದ ಅಕಂಪ

ಹಿಂದಿನ ಸಂಚಿಕೆಯಲ್ಲಿ ಸೀತಾಪಹರಣದ ಘಟನೆಯ ಹಿಂದಿನ ಮುಖ್ಯವಾದ ವಿಷಯಗಳನ್ನು ಗಮನಿಸಿದೆವು. ಅಕಂಪನ ಮೂಲಕ ರಾವಣನ ಮನಸ್ಥಿತಿಯನ್ನು ತಿಳಿದುಕೊಳ್ಳೋಣ.

ಭಾರ್ಯಾ ತಸ್ಯೋತ್ತಮಾ ಲೋಕೇ ಸೀತಾ ನಾಮ ಸುಮಧ್ಯಮಾ.
ಶ್ಯಾಮಾ ಸಮವಿಭಕ್ತಾಙ್ಗೀ ಸ್ತ್ರೀರತ್ನಂ ರತ್ನಭೂಷಿತಾ৷৷ಅ.31.29৷৷

ರಾಮನಿಗೆ ಸುಂದರವಾದ ನಡುವುಳ್ಳ ಸೀತಾ ಎನ್ನುವ ಹೆಸರಿನ ಉತ್ತಮಳಾದ ಹೆಂಡತಿಯಿದ್ದಾಳೆ. ಅವಳು ಯೌವನಮಧ್ಯಸ್ಥಳು. ಆಕೆಯ ಅಂಗಗಳು ಯಾವ ಯಾವ ಪರಿಮಾಣದಲ್ಲಿರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿವೆ. ರತ್ನಾಭರಣಗಳಿಂದ ಭೂಷಿತೆಯಾಗಿರುವ ಆಕೆ ಸ್ತ್ರೀ ರತ್ನವೇ ಆಗಿದ್ದಾಳೆ.

ಅಕಂಪನೆನ್ನುವ ರಾವಣನ ಗೂಢಚರ. ಆತ ಜನಸ್ಥಾನದಲ್ಲಿ ಖರನೊಂದಿಗೆ ಇದ್ದ. ರಾಮನ ಬಾಣದಿಂದ ಅದು ಹೇಗೋ ತಪ್ಪಿಸಿಕೊಂಡು ಲಂಕೆಗೆ ಬಂದು ರಾವಣನನ್ನು ಕಂಡು ಜನಸ್ಥಾನದಲ್ಲಿ ರಾಮನ ಪರಾಕ್ರಮಕ್ಕೆ ಖರ ದೂಷಣ ತ್ರಿಶಿರಾದಿಗಳ ಸಹಿತ ಹದಿನಾಲ್ಕು ಸಾವಿರ ರಾಕ್ಷಸರನ್ನು ರಾಮ ಏಕಾಂಗಿಯಾಗಿ ಸಂಹರಿಸಿದ ವಿವರಗಳನ್ನು ತಿಳಿಸಿದ. ಇದಕ್ಕೆ ಕಾರಣಳಾದ ಶೂರ್ಪನಖಿಯ ವಿಷಯವನ್ನು ರಾವಣನಿಂದ ಮುಚ್ಚಿಟ್ಟ. ಕ್ರುದ್ಧನಾದ ರಾವಣ ಆಗಲೇ ಎದ್ದು ರಾಮನನ್ನು ಕೊಂದುಬಿಡುವೆ ಎಂದು ಜನಸ್ಥಾನಕ್ಕೆ ಹೊರಡಲು ಸಿದ್ಧನಾದನು. ಆಗ ಆತನನ್ನು ತಡೆಯುವ ಅಕಂಪ ರಾವಣನಿಗೆ ರಾಮನ ಪರಾಕ್ರಮವನ್ನು ವಿವರವಾಗಿ ತಿಳಿಸುತ್ತಾನೆ. ಚಿನ್ನದ ರೆಕ್ಕೆಗಳುಳ್ಳ ರಾಮನ ಬಾಣಗಳಿಗೆ ಹುಸಿಯಿಲ್ಲವೆಂದು ಎಚ್ಚರಿಸುತ್ತಾನೆ, ದೇವತೆಗಳಿಂದಲೂ ರಾಮನು ಅವಧ್ಯನೆಂದು ಹೇಳುತ್ತಾನೆ. ರಾವಣ ತನ್ನ ಪರಾಕ್ರಮದಿಂದ ದೇವತೆಗಳನ್ನು ಸೋಲಿಸಿದವ. ಯಮಧರ್ಮನ ಕಾಲ ದಂಡವನ್ನೇ ಕಸಿದುಕೊಂಡವ. ಅಂತಹಾ ರಾವಣ ರಾಮನ ಪರಾಕ್ರಮದ ಕುರಿತು ಅಕಂಪ ಹೇಳಿದ ಮಾತುಗಳನ್ನು ಕೇಳುತ್ತಾನೆ ಎಂದರೆ ಆತನೋರ್ವ ನಂಬಿಗಸ್ಥ ದೂತನಾಗಿರಲೇಬೇಕು. ರಾವಣ ಎಲ್ಲ ಯುದ್ಧವನ್ನು ಗೆದ್ದಿದ್ದೂ ಕುಟಿಲತನದಿಂದಲೇ. ಅಜೇಯನೇನೂ ಅಲ್ಲ; ಅದಾಗಲೇ ಆತ ಕಾರ್ತವೀರ್ಯ, ಬಲಿ, ವಾನರರಾಜನಾದ ವಾಲಿಯ ಹತ್ತಿರ ಸೋತಿದ್ದ. ತನ್ನ ವರದ ಮಿತಿಯ ಅರಿವು (ಮನುಷ್ಯರನ್ನು ಹೊರತು ಪಡಿಸಿ ಬೇರೆ ಯಾರೂ ತನ್ನನ್ನು ಕೊಲ್ಲಲು ಸಾಧ್ಯವಾಗದಿರಲಿ ಎನ್ನುವುದು ಆತ ಬೇಡಿ ಪಡಕೊಂಡ ವರ) ಆತನಿಗೆ ಆಗಿರಬೇಕು. ಅಕಂಪನೇ ರಾವಣನಿಗೆ ರಾಮನನ್ನು ನೇರವಾದ ಯುದ್ಧದಲ್ಲಿ ಕೊಲ್ಲಲು ಸಾಧ್ಯವಾಗದಿದ್ದರೂ ಕುಟಿಲತೆಯಿಂದ ಆತನನ್ನು ಕೊಲ್ಲಬಹುದು ಎನ್ನುತ್ತಾ ಸ್ತ್ರೀ ಚಪಲಚಿತ್ತನಾದ ರಾವಣನಿಗೆ ಸೀತೆಯ ಸೌಂದರ್ಯದ ಕುರಿತು ಮೇಲೆ ಹೇಳಿದ ಶ್ಲೋಕದಲ್ಲಿದ್ದಂತೆ ವರ್ಣಿಸುತ್ತಾನೆ.

ರಾಮಾಯಣದಲ್ಲಿ ರಾವಣನ ಪರಿಚಯವಾಗುವದೇ ಅಕಂಪನ ಮೂಲಕವಾಗಿ. ಅಲ್ಲಿಯ ತನಕ ಅವನ ವಿವರ ಬರುವುದೇ ಇಲ್ಲ. ರಾವಣನ ಶೌರ್ಯ ರೂಪ ಮತ್ತು ತೇಜಸ್ಸಿನ ಕುರಿತು ಕವಿ ವಿವರಿಸುವುದು ಶೂರ್ಪನಖಿ ರಾವಣನಲ್ಲಿಗೆ ಬಂದಾಗ. ಅರಣ್ಯಕಾಂಡದ 32ನೆಯ ಸರ್ಗ ಸಂಪೂರ್ಣವಾಗಿ ರಾವಣನ ವರ್ಣನೆಗಾಗಿ ಮೀಸಲಾಗಿದೆ. ಅದ್ಭುತ ತೇಜಸ್ಸು ಆತನದ್ದು. ಆಮೇಲೆ ಹನುಮಂತ ಸೀತಾನ್ವೇಷಣೆಯಲ್ಲಿ ಲಂಕೆಗೆ ಹೋದಾಗ ಅಶೋಕವನವನ್ನು ಹಾಳುಗೆಡವಿ ರಾವಣನ ಆಸ್ಥಾನಕ್ಕೆ ಬಂಧಿಯಾಗಿ ಬಂದಾಗ ರಾವಣನನ್ನು ನೋಡಿ ಅವನ ರೂಪವನ್ನು ವರ್ಣಿಸುತ್ತಾನೆ. ರಾಕ್ಷಸರಾಜನ ರೂಪ ಹನುಮಂತನನ್ನೇ ಸೆರೆಹಿಡಿದು ಬಿಟ್ಟಿತ್ತು. ಅಂತಹಾ ವರ್ಚಸ್ಸುಳ್ಳವ ರಾವಣ. ರಾಮ ಕಥಾ ನಾಯಕನಾದರೆ ರಾವಣ ರಾಮಾಯಣದ ಪ್ರತಿನಾಯಕ. ರಾವಣ ಇಲ್ಲದಿದ್ದರೆ ರಾಮನ ಅವತಾರವೇ ಆಗುತ್ತಿರಲಿಲ್ಲ. ಆತನ ಶೌರ್ಯ ಎಷ್ಟು ಪ್ರಖರವೋ ಅದೇ ರೀತಿ ಆತನ ಹೆಣ್ಣುಬಾಕತನವೂ ಅಷ್ಟೇ ತೀವ್ರವಾಗಿತ್ತು.

ಉತ್ತರಕಾಂಡದಲ್ಲಿರುವ ರಾವಣನ ಶೌರ್ಯ ಮತ್ತು ಆತನ ಸಾಹಸವನ್ನು ಮೊದಲೇ ಕವಿ ಬರೆದಿದ್ದರೆ ಓದುಗರೂ ಸಹ ರಾಮನಿಗಿಂತಲೂ ರಾವಣನ ಪಕ್ಷಪಾತಿಯಾಗಿಬಿಡುವ ಸಾಧ್ಯತೆ ಇತ್ತು. ರಾವಣನಂತಹ ವ್ಯಕ್ತಿಗಳ ಸಾವು ಏಕಾಗಬೇಕೆಂದು ತಿಳಿಸಬೇಕಾದರೆ ಆತನ ದುರ್ಗುಣಗಳ ಪರಿಚಯ ಮೊದಲು ಆಗಲೇ ಬೇಕು. ರಾವಣನ ವಿದ್ವತ್ತು ಹೇಗೇ ಇರಲಿ, ಆರು ಕೋಟಿ ವರ್ಷಗಳ ಕಾಲ ಲೋಕವನ್ನು ಆಳಿದವ. ರಾವಣನ ವ್ಯಕ್ತಿತ್ವದ ಸ್ಥಾಯಿ ಭಾವ ದುರುಳತನ, ಪರಸ್ತ್ರೀಯರ ಅಪಹರಣ, ಸುಲಿಗೆ ಮತ್ತು ವಿಪರೀತ ಆತ್ಮಪ್ರಶಂಸೆ. ಭೂಗತ ಲೋಕದ ಪಾಪಿಗಳು ದಾನ ಧರ್ಮ ಮಾಡಿ ಜನರ ಅನುಕಂಪ ಗಳಿಸಿಕೊಂಡಂತೆ ಆಗಕೂಡದು. ವಾಲ್ಮೀಕಿಯ ಈ ರಸಪ್ರಜ್ಞೆಯನ್ನು ಕಾವ್ಯದುದ್ದಕ್ಕೂ ಕಾಣಬಹುದಾಗಿದೆ. ಪ್ರಪಂಚದಲ್ಲಿರುವ ಸುಂದರಿಯರೆಲ್ಲರೂ ತನ್ನ ಅಂತಃಪುರಕ್ಕೆ ಸೇರಬೇಕೆನ್ನುವ ಆತನ ವ್ಯಕ್ತಿತ್ವಕ್ಕೆ ತಕ್ಕ ರೀತಿಯಲ್ಲಿ ಅವನ ದೂತ ವರ್ಣಿಸುತ್ತಾನೆ. ಶೂರ್ಪನಖಿಗೆ ರಾಮ ಲಕ್ಷ್ಮಣರು ನೀಡಿದ ಶಿಕ್ಷೆಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾನೆ. ಸೀತೆಯ ಅಂದವನ್ನು ಬಿಟ್ಟಬಾಯಿಯಿಂದ ಕಿವಿಯನ್ನು ನೆಟ್ಟಗೆ ಮಾಡಿಕೊಂದು ಕೇಳಿದ ರಾವಣನಿಗೆ ಅವಳನ್ನು ತಂದೇ ತರಬೇಕೆನ್ನುವ ಬಯಕೆ ಹುಟ್ಟಿತು. ಸೀತೆಯ ಸೌಂದರ್ಯವನ್ನು ಅಕಂಪ ವರ್ಣಿಸಿರುವುದು ಸಂಭೋಗ ಶೃಂಗಾರದ ವಿಶೇಷಣಗಳಾದ ಶಾಮಾ, ಸಮವಿಭಕ್ತಾಙ್ಗೀ ಮತ್ತು ಸುಮಧ್ಯಮಾ ಎನ್ನುವುದರ ಮೂಲಕ. ಸುಮಧ್ಯಮಾ ಸುಂದರವಾದ ನಡುವುಳ್ಳವಳು ಇದಕ್ಕಿಂತ ಮುಖ್ಯವಾಗಿ ಸಮವಿಭಕ್ತಾಙ್ಗೀ ಎಂದರೆ ಯಾವ ಯಾವ ಅಂಗಗಳು ಎಷ್ಟು ಪ್ರಮಾಣದಲ್ಲಿ ಇರಬೇಕೋ ಅಷ್ಟೇ ಪರಿಣಾಮದಲ್ಲಿ ಸಮವಾಗಿ ವಿಭಕ್ತವಾಗಿದೆ. ಉತ್ತಮ ಜಾತಿಯ ಅಥವಾ ಪ್ರಸವಿಸದ ಹೆಂಗಸಿಗೆ ಶಾಮಾ ಎನ್ನುತ್ತಾರೆ. ಶೀತೇ ಸುಖೋಷ್ಣಸರ್ವಾಙ್ಗೀ ಗ್ರೀಷ್ಮೇ ಚ ಸುಖ ಶೀತಲಾ – ಶೀತಕಾಲದಲ್ಲಿ ಸುಖಕರವಾದ ಉಷ್ಣವಿರುವ ಮತ್ತು ಗ್ರೀಷ್ಮದಲ್ಲಿ ಹಿಮದಂತೆ ತಂಪಾಗಿ ಇರುವ ಸರ್ವಾಂಗಗಳಿಂದ ಕೂಡಿರುವವಳು.

shurpanakha

ಈ ಬಣ್ಣನೆಗಳು ರಾವಣನಿಗೆ ಮಂಗನಿಗೆ ಹೆಂಡ ಕುಡಿಸಿದಂತೆ ಆಯಿತು. ಆ ಕ್ಷಣದಿಂದಲೇ ಸೀತೆಯನ್ನು ಪಡೆಯುವ ಬಯಕೆ ಉಂಟಾಯಿತು. ರಾಜನಿಗೆ ಏನನ್ನು ಹೇಳಬೇಕೋ ಅಂತಹ ಮಾತುಗಳನ್ನೇ ಭೃತ್ಯರು ಆಡುತ್ತಾರೆ. “ನೇರ ಯುದ್ಧದಲ್ಲಿ ರಾಮನನ್ನು ಎದುರಿಸುವುದು ಅಸಾಧ್ಯ. ನೀನೀಗಲೇ ಆ ಮಹಾರಣ್ಯಕ್ಕೆ ಹೋಗಿ ಅವನನ್ನು ವಂಚಿಸಿ ಅವನ ಭಾರ್ಯೆಯನ್ನು ಬಲತ್ಕಾರವಾಗಿ ಅಪಹರಿಸು, ಸೀತೆಯಿಲ್ಲದೇ ರಾಮನು ಖಂಡಿತವಾಗಿ ಬದುಕಿರುವುದಿಲ್ಲ” ಎಂದು ಹೇಳುತ್ತಾನೆ. ಅದನ್ನು ಕೇಳಿದ ರಾವಣನಿಗೆ ಈ ಮಾರ್ಗವೇ ಸರಿಯೆನಿಸಿತು. ಮಾರನೆಯ ದಿನವೇ ಹೇಸರಗತ್ತೆ ಎಳೆಯುತ್ತಿರುವ ರಥವನ್ನು ಏರಿ ಸೀದಾ ಮಾರೀಚನಲ್ಲಿಗೆ ಬಂದು ಸೀತಾಪಹರಣದಲ್ಲಿ ತನಗೆ ನೆರವಾಗುವಂತೆ ಕೇಳಿದ. ಮಾರೀಚ ಮೊದಲಿನ ರಾಕ್ಷಸನಾಗಿ ಉಳಿದಿಲ್ಲ. ಹಾಗಂತ ಸಾತ್ವಿಕನೂ ಅಲ್ಲ. ವಿಶ್ವಾಮಿತ್ರರ ಯಾಗವನ್ನು ಕೆಡಿಸಲಿಕ್ಕೆ ಹೋದಾಗ ರಾಮ ಬಾಣದಿಂದ ಆತನ ತಾಯಿ ಮತ್ತು ಅಣ್ಣನನ್ನು ಕಳೆದುಕೊಂಡ. ರಾಮ ಬಿಟ್ಟ ಮಾನವಾಸ್ತ್ರದಿಂದ ಸಮುದ್ರದಲ್ಲಿ ಬಿದ್ದು ಹೇಗೋ ಬದುಕಿಕೊಂಡಿದ್ದ.

ಆದರೂ ಪೂರ್ವ ವಾಸನೆ ಇನ್ನೂ ಇತ್ತು. ಆತನಿಗೆ ಮೃಗಗಳ ವೇಷವನ್ನು ತಾಳುವ ವಿದ್ಯೆ ತಿಳಿದಿತ್ತು. ಆಗಾಗ ದಂಡಕಾರಣ್ಯಕ್ಕೆ ಹೋಗಿ ಮೃಗವಾಗಿ ಇನ್ನಿತರ ಸಾಧು ಮೃಗಗಳನ್ನು ತಿನ್ನುತ್ತಿದ್ದ. ರಾಮ ಲಕ್ಷ್ಮಣ ಸೀತೆಯರು ದಂಡಕಾರಣ್ಯಕ್ಕೆ ಬಂದಾಗ ಅವರನ್ನು ಮಾರು ವೇಷದಲ್ಲಿರುವ ಮಾರೀಚ ಗಮನಿಸಿದ್ದ. ಪೂರ್ವದ್ವೇಷದಿಂದ ತಾಪಸಿವೇಷದಲ್ಲಿದ್ದ ರಾಮ ಸುಲಭದ ತುತ್ತಾಗಬಹುದೆಂದೂ ಮತ್ತು ಆತನನ್ನು ಕೊಲ್ಲಲು ಇದೇ ಸಮಯವೆಂದು ತಿಳಿದು ಆತ ಒಂದು ಮೃಗವಾಗಿ ತನ್ನ ಕೋರೆ ದಾಡೆಗಳಿಂದ ರಾಮನನ್ನು ಇರಿಯಲು ಬಂದಾಗ ರಾಮ ಮೂರು ಬಾಣಗಳನ್ನು ಬಿಟ್ಟ ರಭಸಕ್ಕೆ ಆತನ ಇಬ್ಬರು ಸಹಚರರು ಅದಕ್ಕೆ ಬಲಿಯಾದರು. ಈತ ಹೇಗೋ ತಪ್ಪಿಸಿಕೊಂಡು ಬಂದು ಗಜಪಚ್ಛವೆನ್ನುವ ಪ್ರದೇಶದಲ್ಲಿ ಆಶ್ರಮವನ್ನು ಕಟ್ಟಿಕೊಂಡಿದ್ದ. ಹಾಗಂತ ಆತನಲ್ಲಿದ್ದ ತಾಮಸ ಬುದ್ಧಿ ಹೋಗಿರಲಿಲ್ಲ; ರಾಮನ ಪರಾಕ್ರಮದ ಭಯ ಆತನನ್ನು ಆವರಿಸಿತ್ತು. ಮಾರೀಚ ರಾಮನನ್ನು ಗಂಧಹಸ್ತಿ (ಮದ್ದಾನೆ) ಎನ್ನುತ್ತಾ ಅವನ ಪರಾಕ್ರಮವನ್ನು ರಾವಣನಿಗೆ ವಿವರಿಸುತ್ತಾನೆ. ಸೀತಾಪಹರಣದ ಸಲಹೆಯನ್ನು ನೀಡಿ ನಿನ್ನ ತಲೆಯನ್ನು ಕೆಡಿಸಿದವ ಯಾರು, ಅವರನ್ನು ಶಿಕ್ಷಿಸು ಎನ್ನುತ್ತಾನೆ. ರಾವಣನಿಗೆ ತಲೆಗೇರಿದ ಪಿತ್ಥವಿಳಿದು “ಸರಿ ಹಾಗಾದರೆ” ಎಂದು ಲಂಕೆಗೆ ಮರಳುತ್ತಾನೆ.

ಸುಮ್ಮನಿದ್ದ ರಾವಣನನ್ನು ಕೆರಳಿಸಿ ಎಬ್ಬಿಸಿದವಳು ಶೂರ್ಪನಖಿ. ಆಕೆ ಬೊಬ್ಬಿಡುತ್ತಾ ಬಂದು ರಾವಣನಲ್ಲಿ ಖರ ದೂಷಣ ತ್ರಿಶಿರಸ್ಸುಗಳ ವಧೆಯನ್ನು ರಾಮನೊಬ್ಬನೇ ಮಾಡಿರುವುದನ್ನು ವಿವರವಾಗಿ ವರ್ಣಿಸುತ್ತಾಳೆ. ಖರನಲ್ಲಿ ತನಗೆ ರಾಮಾದಿಗಳ ಮಾಂಸದ ಆಸೆಯಿದೆ ಎಂದು ಯುದ್ಧಕ್ಕೆ ಪ್ರಚೋದಿಸಿ ಕೊಲ್ಲಿಸಲು ಕಾರಣಳಾದ ರಾಕ್ಷಸಿ ರಾವಣನ ಹತ್ತಿರ ಸೀತೆಯ ಸೌಂದರ್ಯವನ್ನು ಹೊಗಳುತ್ತಾ ಆಕೆ ರಾವಣನಿಗೆ ಯೋಗ್ಯಳೆಂದು ತಿಳಿದು ಅವಳನ್ನು ತರುವ ಸಲುವಾಗಿ ಹೋದಾಗ ಈ ಎಲ್ಲ ಕೃತ್ಯ ಆಯಿತೆನ್ನುತ್ತಾಳೆ. ರಾಮನ ಪರಾಕ್ರಮವನ್ನು ಯಥಾವತ್ತಾಗಿ ವರ್ಣಿಸಿ ಆಮೇಲೆ ಸೀತೆಯ ಸೌಂದರ್ಯವನ್ನೂ ವಿವರವಾಗಿ ತಿಳಿಸುತ್ತಾಳೆ. ಒಂದು ಹೆಣ್ಣೇ ಇನ್ನೊಬ್ಬ ಹೆಣ್ಣಿನ ರೂಪವನ್ನು ವರ್ಣಿಸಿದರೆ ಗಂಡಸಿಗೆ ಹೇಗಾಗಬೇಡ. ಸದ್ಧರ್ಮನಾಶಕನಾದ ಮತ್ತು ಪರಸ್ತ್ರೀಯಲ್ಲಿ ಆಸಕ್ತನಾದ ರಾವಣನ ದೌರ್ಬಲ್ಯವನ್ನು ಆಕೆ ಚೆನ್ನಾಗಿ ಬಲ್ಲಳು. (ಸರ್ಗ 32) ರಾವಣ ಜನಸ್ಥಾನವನ್ನು ಅಲಕ್ಷ್ಯ ಮಾಡಿದ ಪರಿಣಾಮವಾಗಿ ಆತನ ಸಾಮ್ರಾಜ್ಯ ರಾಮನಿಂದ ಅಪಾಯದಲ್ಲಿದೆ. ಖರಾದಿಗಳಿಗೆ ಮತ್ತು ತನಗೆ ಆ ಸ್ಥಿತಿ ಬರಲು ಕಾರಣವಾಗಿರುವುದು ಸೀತೆಯನ್ನು ರಾವಣನಿಗೆ ತರಬೇಕೆನ್ನುವ ತಮ್ಮ ಕಾರ್ಯಗಳಿಂದಾಗಿ. ಹಾಗಾಗಿ ಪ್ರತೀಕಾರಕ್ಕಾಗಿ ರಾವಣ ಸೇಡನ್ನು ತೀರಿಸಿಕೊಳ್ಳಲೇಬೇಕು ಎಂದು ಅವಳು ಆಗ್ರಹಿಸುತ್ತಾಳೆ.

shurpanakha

ಅವಳ ಈ ಕುಮ್ಮಕ್ಕಿನಿಂದ ವೈದೇಹಿಯ ವಿಷಯದಲ್ಲಿ ರಾವಣ ಕಾಮಪೀಡಿತನಾದ. ಅವಳನ್ನು ತರಲೇ ಬೇಕೆಂದು ನಿಶ್ಚಯಿಸಿ ಮತ್ತೆ ಮಾರೀಚನಲ್ಲಿಗೆ ಬಂದು ಆತ ಸೀತಾಪಹರಣದ ಕಾರ್ಯದಲ್ಲಿ ಮೃಗವಾಗಿ ಸಹಕರಿಸಲೇಬೇಕು. ಇಲ್ಲದಿದ್ದರೆ ಆತನನ್ನು ಕೊಲ್ಲುವೆ ಎಂದು ಬೆದರಿಕೆ ಹಾಕುತ್ತಾನೆ. ರಾವಣನಿಂದಲೋ ರಾಮನಿಂದಲೋ ತಾನು ಸಾಯಲೇಬೇಕಾಗಿರುವಾಗ ರಾಮನಿಂದ ಸಾಯುವುದೇ ಲೇಸು ಎಂದು ಆತ ರಾವಣನಿಗೆ ಸಹಕರಿಸಲು ಒಪ್ಪುತ್ತಾನೆ. ಇಲ್ಲಿಂದ ಮುಂದೆ ಪಂಚವಟಿಯ ಪ್ರದೇಶದಲ್ಲಿ ಚಿನ್ನದ ಜಿಂಕೆಯನ್ನು ನೋಡಿ ಸೀತೆ ಆಕರ್ಷಿತಳಾಗುವುದು ಎಲ್ಲವೂ ನಮಗೆ ತಿಳಿದಿರುವ ಕಥೆಯಂತೆಯೇ ಸಾಗುತ್ತದೆ. ಆ ಮಿಗವನ್ನು ಗಮನಿಸಿದ ಲಕ್ಷ್ಮಣನಿಗೆ ಅದು ಮಾಯಾಮೃಗ, ಮಾರೀಚನೇ ಈ ವೇಷವನ್ನು ತಾಳಿ ಬಂದಿದ್ದಾನೆಂದು ತಿಳಿಯಿತು. ಅದನ್ನೇ ಅಣ್ಣನಿಗೆ ಹೇಳುತ್ತಾನೆ. ಸೀತೆ ಲಕ್ಷ್ಮಣನ ಮಾತನ್ನು ಅರ್ಧಕ್ಕೇ ತಡೆದು ತನಗೆ ಅದು ಬೇಕು ಎಂದು ಹಟಹಿಡಿಯುತ್ತಾಳೆ. ತಾನು ಈ ಮೃಗವನ್ನು ಬಯಸುವುದು ಯುಕ್ತವಲ್ಲವೆಂದೂ ಸಹ ಅವಳಿಗೆ ಅನಿಸಿದೆ. “ಕಾಮವೃತ್ತಮಿದಂ ರೌದ್ರಂ ಸ್ತ್ರೀಣಾಮಸದೃಶಂ ಮತಮ್”- ತನಗುಂಟಾದ ಮೃಗದ ಮೇಲಿನ ಕಾಮನೆಯು ಸಾಧ್ವಿಯರಿಗೆ ಉಚಿತವಲ್ಲವೆಂದು ತಿಳಿದಿದೆ. ಆದರೂ ಇದು ತನಗೆ ಬೇಕು ಎಂದು ಹಟ ಹಿಡಿಯುತ್ತಾಳೆ.

ಲಕ್ಷ್ಮಣನಿಗೆ ತಿಳಿದ ಸತ್ಯ ರಾಮ ಸೀತೆಯರಿಗೆ ಅರಿವಾಗದೇ ಹೋದೀತೋ! ಆದರೂ ಏನೂ ತಿಳಿದಿಲ್ಲದಂತೆ ನಟಿಸುತ್ತಿದ್ದಂತೆ ಅನಿಸುತ್ತದೆ. ವನವಾಸ ಮುಗಿಸಿ ಅಯೋಧ್ಯೆಗೆ ತೆರಳುವಾಗ ಈ ಜಿಂಕೆಯನ್ನು ಕೊಂಡೊಯ್ದರೆ ಕೌಸಲ್ಯೆ, ಸುಮಿತ್ರೆಯರೂ ಸಂತಸ ಪಡುತ್ತಾರೆ ಎಂದು ಹೇಳುವ ಸೀತೆ ನಂತರ “ಇದು ಜೀವಂತ ಸಿಗದೇ ಇದ್ದರೆ ಇದನ್ನು ಕೊಂದು ಅದರ ಚರ್ಮವನ್ನು ತೆಗೆದುಕೊಂಡು ಬಾ. ನಾನು ಅದರ ಮೇಲೆ ಕುಳಿತುಕೊಳ್ಳುವೆ” ಎನ್ನುತ್ತಾಳೆ. ಜೀವಂತವಾಗಿ ಹಿಡಿದು ತಾ, ಎನ್ನುವ ಮಾತಾಡಿದವಳು ತಕ್ಷಣವೇ ಅದನ್ನು ಕೊಂದು ಚರ್ಮವನ್ನಾದರೂ ತೆಗೆದುಕೊಂಡು ಬಾ ಎನ್ನುವ ಮಾತುಗಳಿಂದ ರಾಮ ಸೀತೆಯರಿಗೂ ಈ ಕುರಿತು ಅರಿವಿತ್ತು. ಎಲ್ಲವನ್ನೂ ಲೆಕ್ಕಾಚಾರದ ಮೂಲಕವೇ ದಾಳ ಹಾಕುತ್ತಿರುವಂತಹ ಅರ್ಥವನ್ನೂ ನೀಡುತ್ತದೆ. ಆದರೆ ಸೀತೆಗೆ ಸ್ಪಷ್ಟವಾಗಿ ತಾನು ಪಾತ್ರಧಾರಿಯೋ ಅಥವಾ ಅಲ್ಲವೋ ಎನ್ನುವುದರ ಅರಿವಿದೆ ಎನ್ನುವುದಕ್ಕೆ ಸಾಕ್ಷಿ ರಾಮನ ವಿಷಯದಲ್ಲಿ ಸಿಗುವಷ್ಟು ಸಿಗುವುದಿಲ್ಲ. ಇಲ್ಲಿ ಹೇಳಿದ “ಮಿಗವನ್ನು ಕೊಂದಾದರೂ ಜಿಂಕೆಯನ್ನು ತಾ, ಚರ್ಮದ ಮೇಲೆ ಕುಳಿತುಕೊಳ್ಳುವೆ” ಎನ್ನುವ ಮಾತುಗಳು ಈ ವಿಷಯದಲ್ಲಿ ಪುಷ್ಟಿ ಕೊಡಲಾರವು. ಹಾಗಾಗಿ ಸೀತೆಗಾಗಲೀ, ಲಕ್ಷ್ಮಣನಿಗಾಗಲೀ ಇದೊಂದು ದೇವತೆಗಳು ಬಯಸಿದ ವ್ಯೂಹ, ಅದರ ಲಕ್ಷ್ಯ ರಾವಣ, ಅವನ ವಧೆಯಲ್ಲಿ ಇವುಗಳೆಲ್ಲವೂ ಪರ್ಯಾವಸಾನವಾಗಬೇಕು ಎನ್ನುವುದರ ಅರಿವಿಲ್ಲ.

ರಾಮ “ಲಕ್ಷ್ಮಣ, ಈ ಜಿಂಕೆ ಮಾರೀಚನ ಮೋಸವೇ ಹೌದಾದರೆ ಅವನನ್ನು ಕೊಲ್ಲುವುದು ತನ್ನ ಧರ್ಮ, ಅದನ್ನು ಕೊಂದು ಅದರ ಚರ್ಮವನ್ನು ತರುತ್ತೇನೆ, ಸೀತೆಯ ರಕ್ಷಣೆಯನ್ನು ಜಾಗರೂಕತೆಯಿಂದ ಮಾಡುತ್ತಿರು, ಜಟಾಯುವಿನ ಸಹಾಯವನ್ನೂ ಅಗತ್ಯವಿದ್ದರೆ ಪಡೆ” ಎನ್ನುವ ಮಾತುಗಳ ಅರ್ಥವನ್ನು ವಿಶ್ಲೇಷಿಸಿದರೆ ಇವೆಲ್ಲವೂ ಯಾವುದೋ ಒಂದು ತಂತ್ರಗಾರಿಕೆಯ ಮರ್ಮದಿಂದ ಕೂಡಿದೆ ಎನ್ನುವುದು ಸ್ಪಷ್ಟ. ಪತಂಗದ ಹುಳ ತಾನಾಗಿಯೇ ಹೋಗಿ ದೀಪದ ಜ್ವಾಲೆಗೆ ಬೀಳುವಂತೆ ಇಲ್ಲಿನ ಸನ್ನಿವೇಶದಲ್ಲಿ ಸ್ಪಷ್ಟವಾಗಿದೆ.

ಪ್ರದಕ್ಷಿಣೇನಾತಿಬಲೇನ ಪಕ್ಷಿಣಾ ಜಟಾಯುಷಾ ಬುದ್ಧಿಮತಾ ಚ ಲಕ್ಷ್ಮಣ.
ಭವಾಪ್ರಮತ್ತಃ ಪರಿಗೃಹ್ಯ ಮೈಥಿಲೀಂ ಪ್ರತಿಕ್ಷಣಂ ಸರ್ವತ ಏವ ಶಙ್ಕಿತಃ৷৷ಅ.43.50৷৷

“ಲಕ್ಷ್ಮಣ ! ಬಹಳ ದಕ್ಷನಾದ, ಅತಿಬಲಿಷ್ಠನಾದ, ಬುದ್ಧಿವಂತನಾದ, ಸುತ್ತಲೂ ಹಾರುತ್ತಿರುವ ಜಟಾಯುವಿನ ಸಹಕಾರವನ್ನು ಪಡೆದು ಪ್ರತಿಕ್ಷಣದಲ್ಲಿಯೂ ಆಪತ್ತು ಸಂಭವಿಸುವದೆನ್ನುವ ಶಂಕೆ ಪಡುತ್ತಾ ಜಾಗರೂಕನಾಗಿರುತ್ತಾ ಸೀತೆಯನ್ನು ಎಲ್ಲಾ ದಿಕ್ಕುಗಳಿಂದಲೂ ರಕ್ಷಿಸು”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು

ಜಟಾಯುವಿನ ಹೆಸರನ್ನು ರಾಮ ಉಲ್ಲೇಖಿಸಿರುವುದನ್ನು ಗಮನಿಸಿದರೆ ರಾಮನಿಗೆ ಜಟಾಯುವಿನ ಮಿತ್ರತ್ವವೂ ಇತ್ತೆನ್ನುವುದು ಅರಿವಾಗುತ್ತದೆ. ರಾಮನ ಈ ಎಲ್ಲ ಕಾರ್ಯಗಳ ಹಿಂದೆ ಅಗಸ್ತ್ಯಾಶ್ರಮ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಗಸ್ತ್ಯರು ರಾಮನಿಗೆ ವೈಷ್ಣವ ಧನುಸ್ಸನ್ನೂ, ಇಂದ್ರನಿಂದ ಅಗಸ್ತ್ಯರಿಗೆ ಕೊಡಲ್ಪಟ್ಟಂತಹ ಚಿನ್ನದ ರೆಕ್ಕೆಗಳಿರುವ ಅಕ್ಷಯವಾದ ಎರಡು ಬತ್ತಳಿಕೆಗಳನ್ನೂ ಕೊಡುತ್ತಾರೆ. ದೇವತೆಗಳ ಕೋರಿಕೆಯ ಮೇರೆಗೆ ರಾವಣನ ವಧೆಗಾಗಿಯೇ ರಾಮಾವತಾರವಾಗಿರುವುದು. ಅದಕ್ಕೆ ಪೂರ್ವಭಾವಿಯಾಗಿ ಅಗಸ್ತ್ಯರ ಆಶ್ರಮದಲ್ಲಿ ರಾಮನಿಗೆ ಕೊಡಲ್ಪಟ್ಟ ಧನುಸ್ಸು ಮಹಾವಿಷ್ಣುವೇ ಹಿಂದೆ ರಾಕ್ಷಸರನ್ನು ಕೊಲ್ಲಲು ಬಳಸಿರುವಂತಹದ್ದು. ಆಗ ಬಿಲವನ್ನು ಸೇರಿರುವ ರಾಕ್ಷಸರೆಲ್ಲರೂ ರಾವಣನಿಂದಾಗಿ ಲಂಕೆಯನ್ನು ಆಶ್ರಯಿಸಿರುವ ವಿಷಯಗಳೆಲ್ಲವೂ ಒಂದಕ್ಕೊಂದು ಸೇರಿಕೊಂಡಿದೆ. ರಾಮನನ್ನು ಸದಾ ಅಗಸ್ತ್ಯರು ಗಮನಿಸುತ್ತಿದ್ದರು ಎನ್ನುವುದಕ್ಕೆ ರಾವಣನನ್ನು ಕೊಲ್ಲಲಾಗದೇ ರಾಮ ಆಯಾಸಗೊಂಡಾಗ ಲಂಕೆಯ ರಣಭೂಮಿಗೆ ಬಂದು ಆದಿತ್ಯಹೃದಯವನ್ನು ಬೋಧಿಸಿರುವುದನ್ನು ಉದಾಹರಿಸಬಹುದು.

ಅವರ ಆಶ್ರಮದಿಂದ ಎರಡು ಯೋಜನ ದೂರದಲ್ಲಿ ಇರುವ ಪಂಚವಟಿ ಪ್ರದೇಶದಲ್ಲಿ ವಾಸಮಾಡಲು ಸೂಚಿಸಿದ ಉದ್ದೇಶವೂ ತನ್ನ ಕಣ್ಣಳತೆಯಲ್ಲಿ ರಾಮ ಇರಬೇಕೆನ್ನುವುದು. ಅಗಸ್ತ್ಯರ ಆಶ್ರಮದ ಹೊರ ಆವರಣದಲ್ಲಿಯೇ ರಾಮನಿಗೆ ಜಟಾಯುವಿನ ಪರಿಚಯವಾಗಿ ಆತನೇ ರಾಮ ಲಕ್ಷ್ಮಣರಿಬ್ಬರೂ ಆಶ್ರಮದಿಂದ ಹೊರ ಹೋಗಬೇಕಾಗಿರುವ ಸಂದರ್ಭಗಳಲ್ಲಿ ತಾನು ಸೀತಾದೇವಿಯನ್ನು ಸಂರಕ್ಷಿಸುತ್ತೇನೆ ಎಂದು ಮಾತನ್ನು ಜಟಾಯು ಆಡುತ್ತಾನೆ. ಹೀಗಾಗಿ ಇವೆಲ್ಲವೂ ರಾವಣನ ವಧೆಗಾಗಿ ರಾಮನಿಗೆ ಅರಿವಿದ್ದೋ ಅಥವಾ ಮುಂಗಾಣ್ಕೆಯನ್ನು ಬಲ್ಲ ದೇವತೆಗಳೇ ಹೀಗೆ ವ್ಯೂಹವನ್ನು ಬಲಿದಿದ್ದಾರೆ ಎಂದುಕೊಳ್ಳಬಹುದು.

ಈ ವ್ಯೂಹದಲ್ಲಿ ರಾವಣ ತನಗರಿವಿಲ್ಲದೇ ಸಿಕ್ಕಿಬಿದ್ದ ವಿವರವನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ

Exit mobile version