Site icon Vistara News

ಧವಳ ಧಾರಿಣಿ ಅಂಕಣ: ʼನೇತಿ ನೇತಿ’- ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ

adi shankaracharya

ಇದು ನೇತ್ಯಾತ್ಮಕ ದೃಷ್ಟಿಕೋನವಲ್ಲ, ಅಪರಿಚಿತ ಹಾದಿಯಲ್ಲಿ ಗುರಿಯ ಹುಡುಕಾಟ

ಅಥಾತ ಆದೇಶೋ ನೇತಿ ನೇತಿ ಹ್ಯೇತಸ್ಮಾದಿತಿ ನೇತ್ಯನ್ಯತ್ II
ಪರಮಸ್ತ್ಯಥ ನಾಮಧೇಯಗ್ಂ ಸತ್ಯಸ್ಯ ಸತ್ಯಮಿತಿ ಪ್ರಾಣಾ
ವೈ ಸತ್ಯಮ್, ತೇಷಾಮೇಷ ಸತ್ಯಮ್ ಬೃ. ಉ.2-3-6II

ಆದುದರಿಂದ ʼಹೀಗಲ್ಲ ಹೀಗಲ್ಲʼ ಎನ್ನುವ ಆದೇಶವು. ಹೀಗಲ್ಲ ಹೀಗಲ್ಲ ಎನ್ನುವುದಕ್ಕಿಂತ ಹೆಚ್ಚಿನದು ಬೇರೊಂದಿಲ್ಲವಷ್ಟೆ. ಈಗ ನಾಮಧೇಯವು: ಸತ್ಯದ ಸತ್ಯವು. ಏಕೆಂದರೆ ಪ್ರಾಣಗಳೇ ಸತ್ಯವು, ಇವನು ಅವುಗಳ ಸತ್ಯ. (ಭಾವಾರ್ಥ).

ಭಾರತೀಯ ಅದ್ವೈತ ತತ್ತ್ವಶಾಸ್ತ್ರದಲ್ಲಿ ಬ್ರಹ್ಮವನ್ನು ವಿವರಿಸುವುದಕ್ಕೆ ಅತ್ಯಂತ ಪ್ರಬಲವಾದ ಸೂತ್ರವೆಂದರೆ “ನೇತಿ ನೇತಿ” ಎನ್ನುವ ಶಬ್ದ. ಶಂಕರಾಚಾರ್ಯರು ಇದನ್ನು ಆಗಮ ಪ್ರಧಾನವೆಂದು ವಿವರಿಸಿದ್ದಾರೆ. ಗುರು ತನ್ನ ಶಿಷ್ಯನಿಗೆ ಉಪದೇಶದ ಮೂಲಕ ತಿಳಿಸುವುದನ್ನು ಆಗಮವೆನ್ನುತ್ತಾರೆ. ಆಗಮ ಶಬ್ದಕ್ಕೆ “ಆ- ಆಗತಮ್, ಗ- ಗತಮ್, ಮ-ಮತಮ್” ಗುರುವಿನಿಂದ ವಿವರಿಸಿರುವುದು ಶಿಷ್ಯನೊಳಗೆ ಸೇರಿ ಅವನಿಂದ ಅರಿಯಲ್ಪಟ್ಟಿತು; ಹಾಗೆಯೇ ಇದು ಉಪದೇಶ ರೂಪದಿಂದ ಮುಂದಿನ ತಲೆಮಾರಿಗೆ ತಿಳಿಸಲ್ಪಟ್ಟಿತು” ಎನ್ನುವ ವಿವರಣೆಯನ್ನು ಕೊಡುತ್ತಾರೆ. ಶಂಕರಾಚಾರ್ಯರ ಭಾಷ್ಯದಲ್ಲಿ ಬ್ರಹ್ಮವನ್ನು ತಿಳಿಸುವುದಕ್ಕೆ ಆಗಮವನ್ನು ಬಲ್ಲ ಗುರುವೊಬ್ಬನೇ ಸಮರ್ಥನು ಎಂದಿದ್ದಾರೆ. ಗುರೂಪದೇಶ ಎನ್ನುವುದು ಕೇವಲ ಗುರು ಹೇಳಿರುವುದಕ್ಕೆ ಶಿಷ್ಯ ತಲೆಯಾಡಿಸುವುದಲ್ಲ. ಶಿಷ್ಯ ಪ್ರಶ್ನೆ ಮಾಡುತ್ತಲೇ ಹೋಗಬೇಕಾಗುತ್ತದೆ. ಅದಕ್ಕೆ ಗುರು ಉತ್ತರವನ್ನು ಕೊಡುತ್ತಾನೆ. ಒಂದು ವೇಳೆ ಗುರುವಿಗೆ ಉತ್ತರ ತಿಳಿದಿರದಿದ್ದರೆ ಆತ ಅದನ್ನು ತನಗೆ ತಿಳಿದಿಲ್ಲ ಎಂದು ಸುಮ್ಮನಾಗುವುದಲ್ಲ, ಅದನ್ನು ತಿಳಿದಿರುವ ವ್ಯಕ್ತಿಗಳ ಹತ್ತಿರ ಶಿಷ್ಯರನ್ನು ಕಳುಹಿಸಬೇಕು; ಇಲ್ಲವೇ ತಾನೇ ಬಲ್ಲವರ ಬಳಿಗೆ ಹೋಗಿ ಅವರಲ್ಲಿ ಕಲಿತು ಆ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕು.

ಹಿಂದೆ ಒಮ್ಮೆ ಪ್ರಾಚೀನಶಾಲ, ಸತ್ಯಯಜ್ಞ ಮುಂತಾದವರು ವೈಶ್ವಾನರ ವಿದ್ಯೆಯನ್ನು ಕಲಿಯಬೇಕೆಂದು ಉದ್ದಾಲಕ ಮಹರ್ಷಿಯ ಹತ್ತಿರ ಬಂದಿದ್ದರು. ಋಷಿಗೆ ವೈಶ್ವಾನರ ವಿದ್ಯೆ ತಿಳಿದಿರಲಿಲ್ಲ, ಆಗ ಆತ ಕೇಕೇಯ ರಾಜ ಅಶ್ವಪತಿ ಈ ವಿದ್ಯೆಯನ್ನು ತಿಳಿದಿದ್ದಾನೆಂದು ಅವನಲ್ಲಿಗೆ ಶಿಕ್ಷಾರ್ಥಿಗಳನ್ನಾಗಿ ಬಂದವರನ್ನು ಕಳುಹಿಸಿಕೊಟ್ಟನು. ಅದೇ ರೀತಿ ದೇವಯಾನ ಮತ್ತು ಪಿತೃಯಾನದ ಹಾದಿಯ ಕುರಿತು ಕಲಿಯಲು ಸ್ವತಃ ತಾನೇ ಪ್ರವಾಹಣ ಜೈವಾಲಿ ರಾಜನ ಬಳಿ ಶಿಷ್ಯನಾಗಿ ಕಲಿತು ಮುಂದೆ ತನ್ನ ಶಿಷ್ಯರಿಗೆ ತಿಳಿಸಿದ ಕಥೆ ಬರುತ್ತದೆ.

ಈ ಬ್ರಹ್ಮವೆನ್ನುವದು ಆತ್ಮಸಾಕ್ಷಾತ್ಕರಕ್ಕಾಗಿ ಹಂಬಲಿಸುವ ಎಲ್ಲರನ್ನೂ ಕಾಡುವ ಪ್ರಶ್ನೆ. ಮನುಷ್ಯನ ಬದುಕಿಗೆ ಸ್ವರ್ಗವೇ ಅಂತಿಮ ಗುರಿಯೆನ್ನುವುದು ವೇದದಲ್ಲಿಲ್ಲ; ವೇದದ ನಿಜವಾದ ಅರ್ಥ ಮತ್ತು ಗುರಿಯೇ ಮೋಕ್ಷವೆನ್ನುವುದರ ವಿವರಣೆಯನ್ನು ಉಪನಿಷತ್ತು ತಿಳಿಸುತ್ತದೆ. ಗುರು ಶಿಷ್ಯಪರಂಪರೆ ಸ್ಪಷ್ಟವಾಗಿ ಮುನ್ನೆಲೆಗೆ ಬಂದಿರುವುದು ಉಪನಿಷತ್ತಿನ ಕಾಲದಲ್ಲಿ ಎನ್ನಬಹುದು. ಇಲ್ಲಿ ಸತ್ಯವನ್ನು ಕುರುಡಾಗಿ ಒಪ್ಪುತ್ತಿರಲಿಲ್ಲ. ಜಿಜ್ಞಾಸುಗಳಾಗಿ ವಿಚಾರ ಮಂಥನದ ಮೂಲಕ ಅರಿಯುತ್ತಿದ್ದರು. ಜನಕನಂತಹ ರಾಜನ ಆಸ್ಥಾನದಲ್ಲಿ ಇಂಥ ವಿಚಾರಮಂಥನಗಳು ನಡೆಯುತ್ತಿದ್ದವು.

ಹಾಗಾದರೆ ಈ ಬ್ರಹ್ಮದ ಕುರಿತಾದ ವಿವರಗಳು ಏಕೆ ಬೇಕು ಎನ್ನುವ ಪ್ರಶ್ನೆ ಮೊದಲು ಬರುತ್ತದೆ. ಅನೇಕರಿಗೆ ಈ ಕುರಿತು ಗೊಂದಲಗಳು ಇವೆ. ಬ್ರಹ್ಮವನ್ನು ತಿಳಿದುಕೊಳ್ಳುವುದೆಂದರೆ ಯಾವುದೋ ಲೋಕದಲ್ಲಿ ಇರುವ ಗೊತ್ತಿಲ್ಲದ ವಿಷಯದ ಕುರಿತು ಕಥೆಯನ್ನು ಕಟ್ಟಿ ಮಂಕುಬೂದಿ ಎರಚುವುದಲ್ಲ, ಸಮಯವನ್ನು ಕಳೆಯುವುದಕ್ಕೂ ಅಲ್ಲ. ಇದೊಂದು ತತ್ತ್ವಶಾಸ್ತ್ರ. ನಮ್ಮನ್ನು ತಿಳಿದುಕೊಳ್ಳುವುದು. ಜಗತ್ತಿನಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ತತ್ತ್ವಶಾಸ್ತ್ರವನ್ನು ಪ್ರಧಾನ ವಿಷಯಗಳನ್ನಾಗಿ ಅಭ್ಯಸಿಸಲು ಒತ್ತು ನೀಡುತ್ತವೆ. ಇದಕ್ಕೆ ಕಾರಣ ತತ್ತ್ವಶಾಸ್ತ್ರದ ಅಧ್ಯಯನ ಮಾಡುವುದರಿಂದ ಬದುಕಿನಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತರ್ಕ ತತ್ತ್ವದ ಜೀವಾಳ, ತರ್ಕ ವಿಶ್ಲೇಷಣೆ ಮಾಡುವ, ಗುರಿಯತ್ತ ಸಾಗುವ ಮಾರ್ಗವನ್ನು ತೋರುತ್ತದೆ. ಯಾವುದೇ ವಿಷಯಗಳ ನಡುವಿನ ಸೂಕ್ಷ್ಮಾತಿಸೂಕ್ಷ್ಮ ವ್ಯತ್ಯಾಸಗಳನ್ನು ಅರಿಯಲು ಸಹಾಯಮಾಡುತ್ತದೆ. ವಿವಿಧ ದೃಷ್ಟಿಕೋನಗಳನ್ನು ಸಮಗ್ರವಾಗಿ ಸಂಯೋಜಿಸಲು ಇದರಿಂದ ಸಾಧ್ಯ. ದಾರ್ಶನಿಕ ಪ್ಲೇಟೊ ತತ್ತ್ವಶಾಸ್ತ್ರವನ್ನು ನಿರಂತರವಾಗಿ ಪ್ರಶ್ನೆ ಮಾಡುತ್ತಾ ಸತ್ಯದೆಡೆಗೆ ಸಾಗುವ ಮಾರ್ಗವೆಂದು ಕರೆಯುತ್ತಾನೆ. ಅದೇ ಕಾಲಕ್ಕೆ ಸಾಕ್ರೆಟಿಸ್ “ಜ್ಞಾನ, ನೈತಿಕತೆ, ಸದ್ಗುಣ ಮತ್ತು ಮಾನವನ ಸ್ವಭಾವದ ಕುರಿತಾದ ಮೂಲಭೂತ ಪ್ರಶ್ನೆಗಳಿಗೆ ಕಾರಣವನ್ನು ತರ್ಕದ ಮೂಲಕ ಕಂಡುಕೊಳ್ಳಬಹುದು” ಎನ್ನುತ್ತಾನೆ. ಹೀಗೆ ತತ್ತ್ವಶಾಸ್ತ್ರವೆನ್ನುವುದು ಮಾನವಿಕ ಅಧ್ಯಯನ ಶಾಸ್ತ್ರವೂ ಹೌದು ಮತ್ತು ಎಲ್ಲಾ ವಿಜ್ಞಾನಗಳ ಮೂಲವೂ ಹೌದು.

ಈ ನಿಟ್ಟಿನಲ್ಲಿ ಭಾರತೀಯ ತತ್ತ್ವಶಾಸ್ತ್ರದ ವಿಷಯದಲ್ಲಿಯೂ ಬ್ರಹ್ಮವೆನ್ನುವುದು ಅರಿಯದ ಲೋಕದ ಕುರಿತು ವ್ಯರ್ಥವಾಗಿ ಯೋಚಿಸುವುದಲ್ಲ. ಮೂಲಭೂತವಾಗಿ “ನಿನ್ನನ್ನು ಮೊದಲು ಅರಿತುಕೋ” ಎನ್ನುವದಾಗಿದೆ. ಈ ಹಿನ್ನೆಲೆಯಲ್ಲಿ “ನೇತಿ ನೇತಿ” ಎನ್ನುವುದನ್ನು ಗ್ರಹಿಸುವುದು ಒಳ್ಳೆಯದು. ಮೂಲತಃ ಈ ವಿಷಯ ಬರುವುದು ಬೃಹದಾರಣ್ಯಕದ ಮಧುಕಾಂಡದಲ್ಲಿ. ಮೇಲುನೋಟಕ್ಕೆ ಬ್ರಹ್ಮವನ್ನು ಕುರಿತು ಚರ್ಚಿಸುವ ಇದು ಬದುಕಿನ ವಾಸ್ತವನ್ನು ತೆರೆದಿಡುತ್ತದೆ. ಮನುಷ್ಯ ಜೀವನ ಪಥದಲ್ಲಿ ಸಾಗುವಾಗ ಹಲವಾರು ಗೊಂದಲವನ್ನು ಎದುರಿಸುತ್ತಾನೆ. ಅಲ್ಲಿ ಅವನಿಗೆ ಅನೇಕ ಸಲ ದ್ವಂದ್ವ ಕಾಡುತ್ತದೆ. ಇಂಗ್ಲೀಷಿನಲ್ಲಿ ಅದನ್ನು Catch 22nd situation ಎನ್ನುತ್ತಾರೆ. ಅಂತಹ ಹೊತ್ತಿನಲ್ಲಿ ನಾವು ಅದರಲ್ಲಿ ಸತ್ಯವನ್ನು ಹುಡುಕಬಹುದಾದ ದಾರಿಯೆಂದರೆ ಒಂದು ಮೂರ್ತ ಇನ್ನೊಂದು ಅಮೂರ್ತ ಈ ಎರಡು ರೂಪದಿಂದ ಸತ್ಯವನ್ನು ತಿಳಿಯಬಹುದು ಎಂದು ಗುರು ಆದೇಶದ ಮೂಲಕ ತಿಳಿಸುತ್ತಿದ್ದಾನೆ. ಅದೂ ಸಹ ಸತ್ಯವಲ್ಲ. ಬ್ರಹ್ಮ ಈ ಎರಡೂ ರೂಪದಲ್ಲಿಯೂ ಇಲ್ಲ. ಆದರೆ ಬ್ರಹ್ಮವನ್ನು ತಿಳಿಯಲು ಬೇರೆ ಮಾರ್ಗವೇ ಇಲ್ಲದೇ ಇರುವ ಕಾರಣದಿಂದ ಈ ಮಾರ್ಗವನ್ನು ಅನುಸರಿಸಲಾಗಿದೆ. ಇದನ್ನು ಅದ್ಯಾರೋಪ ಎನ್ನುತಾರೆ. ಅದ್ಯಾರೋಪವೆಂದರೆ ನಮಗೆ ಗೊತ್ತಿಲ್ಲದ ಮಾರ್ಗದಲ್ಲಿ ಸಾಗುವಾಗ ಯಾವುದೋ ಒಂದು ಗುರಿಯನ್ನು ತೋರಿಸುವುದು. ಮತ್ತು ಅದನ್ನು ಅಲ್ಲಗಳೆಯುತ್ತಾ ಸಾಗುವುದು.

ಇದನ್ನು ಹೀಗೆ ವಿವರಿಸಬಹುದು. ಜಪಮಣಿಯನ್ನು ತಿರುಗಿಸುತ್ತಾ ಜಪ ಮಾಡುತ್ತಾರೆ. ಒಂದು ಸುತ್ತು ಆದ ಮೇಲೆ ಅದನ್ನು ಲೆಕ್ಕಮಾಡಲು ಮತ್ತೊಂದು ಕೈಯ ಬೆರಳನ್ನೋ ಅಥವಾ ಕಡೆಲೆಕಾಯಿಯನ್ನೋ ಇಟ್ಟುಕೊಳ್ಳುತ್ತಾರೆ. ಒಂದು ಸುತ್ತು ಜಪಮಣಿ ತಿರುಗಿದರೆ ನೂರಾಎಂಟು ಆಯಿತೆಂದುಕೊಳ್ಳೋಣ, ಇಂತಹ ಹತ್ತು ಸುತ್ತು ಆದಾಗ ಹತ್ತು ಕಡಲೆಕಾಯಿ ತನ್ನ ಜಾಗವನ್ನು ಬಿಟ್ಟು ಪಕ್ಕಕ್ಕೆ ಜರುಗಿರುತ್ತದೆ. ಒಟ್ಟು ಸಾವಿರದ ಎಂಟು ಆಯಿತು ಎಂದು ಕೊನೆಗೆ ಹೇಳುತ್ತಾ ಮಣಿ ಮತ್ತು ಕಡೆಲೆಕಾಯಿಯನ್ನು ಸೇರಿಸಿಬಿಡುತ್ತೇವೆ. ಇಲ್ಲಿ ಜಪಮಣಿಸರವಾಗಲಿ, ಕಡಲೆಕಾಯಿಯಾಗಲಿ ದೇವರನಾಮ ಸ್ಮರಣೆಯಲ್ಲ. ಅವು ದೇವರ ನಾಮಸ್ಮರಣೆಗೆ ಬೇಕಾಗುವ ಉಪಾಯಗಳು ಮಾತ್ರ. ಹಾಗೆಯೇ ಮೂರ್ತ ಮತ್ತು ಅಮೂರ್ತಗಳನ್ನು ಮೊದಲು ತೋರಿಸಿ, ಆಮೇಲೆ ಅವುಗಳನ್ನು ಬಿಟ್ಟು ಮನಸ್ಸಿನಲ್ಲಿ ಧ್ಯಾನಿಸಿರುವ ನಮ್ಮಿಷ್ಟದ ದೇವರನ್ನು ಬ್ರಹ್ಮ ಎಂದು ಕೊಂಡಾಗ ಸುಲಭವಾಗಿ ಅರ್ಥವಾಗುತ್ತದೆ.

ಮೂರ್ತವೆಂದರೆ ಮುದ್ದೆಯಾಗಿ ಮಾಡಿದ ಅವಯವಗಳಿರುವುದು. ಗಟ್ಟಿಯಾಗಿರುವುದು, ಒಂದರಳಗೊಂದು ಸೇರಿಕೊಂಡಿರುವುದು. ಭೂಮಿ, ಜಲ, ತೇಜಸ್ಸು ಇವು ಮೂರ್ತದ್ರವ್ಯಗಳು. ಇದರಲ್ಲಿ ಬ್ರಹ್ಮದ ಸ್ವರೂಪವನ್ನು ಕಾಣಲು ಸತ್ ಸ್ಥಿತ, ಮರ್ತ್ಯ ಮತ್ತು ಮೂರ್ತವೆನ್ನುವ ನಾಲ್ಕು ವಿಶೇಷಣಗಳನ್ನು ಹೇಳುತ್ತಾರೆ. ಒಂದು ಚಕ್ಕಡಿಗಾಡಿಯನ್ನೇ ತೆಗೆದುಕೊಂಡರೆ ಅದರಲ್ಲಿ ಮೂಕಿ, ಚಕ್ರ, ಕೀಲು, ತೊಟ್ಟಿಲು ಹೀಗೆ ಹಲವಾರು ವಸ್ತುಗಳು ಸೇರಿ ಗಾಡಿಯಾಗಿವೆ. ಪ್ರತೀ ಅವಯವಗಳೂ ಬೇರೆಯೇ. ಒಂದರ ಹಾಗೇ ಇನ್ನೊಂದಿಲ್ಲ. ಬಿಡಿಬಿಡಿಯಾಗಿ ನೋಡಿದರೆ ಇವ್ಯಾವುದೂ ಗಾಡಿಯಲ್ಲ. ಎಲ್ಲವೂ ಭಿನ್ನವಾದ ವಸ್ತುಗಳು. ಎಲ್ಲವೂ ಪರಿಚ್ಛಿನ್ನವಾಗಿವೆ. (ಬೌದ್ಧರು ಇದನ್ನೇ ಆತ್ಮದ ವಿವರಣೆಗೆ ಬಳಸುತ್ತಾರೆ). ಇದನ್ನು ಸ್ಥಿತ ಅಥವಾ ವ್ಯಾಪಕವಲ್ಲದ್ದು ಎನ್ನುತ್ತಾರೆ. ಇವು ಮರ್ತ್ಯವು- ನಾಶವಾಗುವ ಗುಣವುಳ್ಳದ್ದು. ಚಕ್ರ ಹಾಳಾದರೆ ಬದಲಾಯಿಸುತ್ತೇವೆ, ಮೂಕಿ ಹೋದರೆ ಹೊಸದನ್ನು ಹಾಕುತ್ತೇವೆ. ಗಾಡಿ ಅದೇ ಇರುತ್ತದೆ. ಹಾಗಾಗಿ ಇವು ಸ್ಥಿತವೂ ಹೌದು. ಶಬ್ದ ಪ್ರತ್ಯಯಗಳಿಗೆ ಗೋಚರವಾಗಿರುವುದರಿಂದ ಇವು ‘ಸತ್’- ಇರುವಂತಹದ್ದು ಆದುದರಿಂದಲೇ ಇದು ವಿನಾಶಿಯು. ಯಾವುದನ್ನು ಇದೆ ಎನ್ನುತ್ತೇವೆಯೋ ಅದರ ಅರ್ಥ ಯಾವುದೋ ಒಂದು ಕಾಲದಲ್ಲಿ ಅದು ಇಲ್ಲವೆಂದಾಗಿತ್ತು. ಮುಂದೆಯೂ ಅದು ಇಲ್ಲವಾಗುತ್ತದೆ. ಈಗ ಇದೆ ಅಷ್ಟೆ. ಊಟಕ್ಕೆ ಅಕ್ಕಿ ಇದೆ ಎಂದರೆ ಅಕ್ಕಿ ಖರ್ಚಾಗಿರುವ ಕಾಲವೂ ಇತ್ತು ಎಂದಹಾಗೆ. ಈ ಅವಯವಗಳೆಲ್ಲ ಒಂದಕ್ಕೊಂದು ಪೂರಕವಾಗಿ ಸೇರಿ ಗಾಡಿ ಎನ್ನುವ ಹೊಸವಸ್ತುವಿಗೆ ಕಾರಣವಾಗಿರುವುದರಿಂದ ಅದು ಮೂರ್ತವೂ ಹೌದು. ಹಾಗಾಗಿ ಮೂರ್ತವೆಂದರೆ “ಸತ್, ಸ್ಥಿತ, ಮರ್ತ್ಯ” ಎನ್ನುವುದನ್ನೂ ಹೇಳಿದಂತಾಯಿತು. ಪ್ರಥಿವಿ, ಜಲ ಮತ್ತು ತೇಜಸ್ಸು ಮೂರ್ತದ್ರವ್ಯವಾಗಿದೆ, ಆದರೆ ಅವು ಸತ್ ಸ್ಥಿತ ಮತ್ತು ಮರ್ತ್ಯದ ಲಕ್ಷಣಗಳನ್ನು ಹೊಂದಿದೆ. ಪ್ರಥಿವಿ ಜಲ ತೇಜಸ್ಸುಗಳಲ್ಲಿ ಸಾರವಾದದ್ದು ಯಾವುದೋ ಅದನ್ನು ಮೂರ್ತರಸವೆನ್ನುವರು. ಈ ಮೂರ್ತರಸವಿರುವುದೇ ಸೂರ್ಯನಲ್ಲಿ. ಹೇಗೆಂದರೆ ಆತನಲ್ಲಿರುವ ಕೆಂಪುಬಣ್ಣ ತೇಜಸ್ಸಿನದ್ದು, ಬಿಳುಪೆನ್ನುವುದು ಜಲದ ಸಂಬಂಧಿ, ಕಪ್ಪು ಪ್ರಥಿವಿಯದು; ಹಾಗಾಗಿ ಆದಿತ್ಯ ತ್ರಿವೃತ್ಕತ ದೇವತೆಯಾಗಿದ್ದಾನೆ ಎಂದು ಛಾಂದೋಗ್ಯೋಪನಿಷತ್ತು ವಿವರಿಸುತ್ತದೆ. ಪಂಚಮಹಾಭೂತಗಳ ಪೈಕಿ ಭೂಮಿ, ಅಗ್ನಿ(ತೇಜಸ್ಸು) ಮತ್ತು ಜಲಗಳಿಗೆ ಸೂರ್ಯನೇ ಆತ್ಮನೆಂದಾಗಿರುವುದರಿಂದ ಈ ಮೂರೂ ಸಹ ಆದಿತ್ಯನಲ್ಲಿಯೇ ಅಡಕವಾಗಿವೆ ಅಥವಾ ಆದಿತ್ಯನಿಂದಲೇ ಅವು ಹುಟ್ಟಿವೆ. (ವಿಜ್ಞಾನವೂ ಸಹ ಭೂಮಿ, ಜಲ ಮತ್ತು ಅಗ್ನಿಗಳಿಗೆ ಸೂರ್ಯನೇ ಕಾರಣನು ಎಂದಿದೆ). ಹಾಗಾಗಿ ಸೂರ್ಯ ಬ್ರಹ್ಮದ ಮೂರ್ತರೂಪವೇ ಆಗಿದ್ದಾನೆ.

ಹಾಗಾದರೆ ಅಮೂರ್ತ ಎಂದರೆ ಯಾವುದು. ಮೂರ್ತದ ವಿರುದ್ಧಾರ್ಥಕವಲ್ಲ; ಅಮೂರ್ತವೆಂದರೆ ಕಣ್ಣಿಗೆ ಗೋಚರವಾಗದೇ ಇರುವುದು. ಇನ್ನುಳಿದ ಎರಡು ಭೂತಗಳಾದ ವಾಯು ಮತ್ತು ಆಕಾಶ ಅಮೂರ್ತ. ಇವು ಕಣ್ಣಿಗೆ ಕಾಣಿಸುವುದಿಲ್ಲ. ಅಮೂರ್ತದ ಲಕ್ಷಣಗಳು ಅಮೃತ್, ಯತ್ ಮತ್ತು ತ್ಯತ್. ಅಮೃತವೆಂದರೆ ಸಾವೇ ಇಲ್ಲದ್ದು. “ಯತ್” ಎಂದರೆ ವ್ಯಾಪಕವಾಗಿರುವುದು. ಸ್ಥಿತಕ್ಕೆ ವಿಪರೀತವಾಗಿರುವುದು. “ತ್ಯತ್” ಎಂದರೆ ಪರೋಕ್ಷವಾಗಿ ಕರೆಯಲ್ಪಡುವುದು. ವಾಯುವನ್ನಾಗಲೀ ಆಕಾಶವನ್ನಾಗಲೀ ಯಾರೂ ತುಂಡು ಮಾಡಲಾಗುವುದಿಲ್ಲ; ನಾಶವನ್ನೂ ಮಾಡಲಾಗುವುದಿಲ್ಲ. ಅವು ವ್ಯಾಪಕವೂ ಆಗಿವೆ, ಅವುಗಳನ್ನು ನೇರವಾಗಿ ಕರೆಯಲ್ಪಡುವಂತದ್ದು. ವಾಯುವನ್ನು ಗುರುತಿಸುವುದು, ಕೊಂಬೆ ಅಲ್ಲಾಡುವ ಕಾರಣದಿಂದ ವಾಯು ಬೀಸುತ್ತಿದೆ ಎನ್ನುತ್ತೇವೆ. ವಿಮಾನ ಆಕಾಶದಲ್ಲಿ ಹಾರುತ್ತದೆ ಎನ್ನುತ್ತೇವೆ ಹಾಗಾಗಿ ವಾಯು ಮತ್ತು ಆಕಾಶವನ್ನು ಪರೋಕ್ಷವಾಗಿಯೇ ತಿಳಿಸುತ್ತೇವೆ. ಮೂರ್ತಕ್ಕೆ ಆದಿತ್ಯ ಸಾರವಾಗಿರುವಂತೆ ಅಮೂರ್ತಕ್ಕೆ ಸಾರ ಯಾವುದು ಎಂದರೆ ಅದು ಪ್ರಾಣ. ಶರೀರಕ್ಕೆ ಪ್ರಾಣ ಹೇಗೆ ಸಾರವೋ ಅದಿದೈವಿಕವಾದ ಸೂರ್ಯನಿಗೆ ಅದರೊಳಗೆ ಅಡಗಿರುವ ಪುರುಷನು ಪ್ರಾಣ ಅಥವಾ ಸಾರ. ಅವನನ್ನು ಹಿರಣ್ಯಗರ್ಭನೆಂದೂ ಕರೆಯುತ್ತಾರೆ. ಗಾಡಿಯಂತೆ ಮನುಷ್ಯನ ಅವಯವಗಳೂ ಬೇರೆ ಬೇರೆ. ಆದರೆ ಅದರೊಳಗೆ ಪ್ರಾಣವಿರದೇ ಇದ್ದರೆ ಅದು ಚಲಿಸಲಾರದು. ಕೇವಲ ಪ್ರತಿಮೆ. ಮೇಡಂ ಟ್ಯುಸಾಡ್ ಮ್ಯೂಸಿಯಮ್ಮಿನಲ್ಲಿರುವ ಮೇಣದ ಮೂರ್ತಿಗೂ ಅದರ ಮೂಲ ವ್ಯಕ್ತಿಗೂ ಇರುವ ವ್ಯತ್ಯಾಸದಂತೆ ಇದು. ಗಾಡಿಯಲ್ಲಿ ಎಲ್ಲವೂ ಇದ್ದರೂ ಅದನ್ನು ಓಡಿಸಲು ಅಶ್ವವೋ ಅಥವಾ ಇಂಧನ ಮತ್ತು ಎಂಜಿನ್ ಬೇಕೇ ಬೇಕು. ಅದಿಲ್ಲದಿದ್ದರೆ ಗಾಡಿ ನಿರುಪಯೋಗ.

ಬ್ರಹ್ಮನ ಈ ಮೂರ್ತಾಮೂರ್ತಗಳನ್ನು ಅಧ್ಯಾತ್ಮವಾಗಿ ಹೇಳುವಾಗ ಶರೀರಕ್ಕೆ ಸಂಬಂಧಿಸುತ್ತೇವೆ. ಶರೀರ ಮೂರ್ತವೆಂದುಕೊಂದರೆ ಶರೀರದ ಸಾರವೇ ಕಣ್ಣು. (ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್) ಕಣ್ಣೇ ಎಲ್ಲ ಇಂದ್ರಿಯಗಳಿಗೂ ಪ್ರಧಾನ. ಕಣ್ಣು ತೇಜಸ್ಸಿನ ವಿಕಾರ; ಹಾಗಾಗಿ ಕಣ್ಣು ಮೂರ್ತರಸವೂ ಹೌದು. ಶರೀರದಲ್ಲಿನ ಪ್ರಾಣ ಆಧ್ಯಾತ್ಮವಾಗಿ ಅಮೂರ್ತ. ಪ್ರಾಣವೆನ್ನುವ ಅಮೂರ್ತದ ರಸವೇ ಬಲಗಣ್ಣಿನಲ್ಲಿರುವ ಪುರುಷನು. ಹೀಗಾಗಿ ಕಣ್ಣು ಅಮೂರ್ತರಸವಾದ ಪುರುಷನ ವಾಸಸ್ಥಾನವಾಗಿದೆ.

ಇವುಗಳನ್ನು ಒಂದೊಂದನ್ನಾಗಿ ತೆಗೆದುಕೊಂಡರೆ ಅವ್ಯಾವದೂ ವಸ್ತುಗಳಲ್ಲ. ಈ ಅಲ್ಲಗೆಳೆಯುವಿಕೆಯನ್ನು ಹೇಳುವುದೇ ನೇತಿ ನೇತಿಯೆಂದು. ಮೂರ್ತಾSಮೂರ್ತದಲ್ಲಿ ಎಲ್ಲಹಂತದಲ್ಲಿಯೂ ಬ್ರಹ್ಮ ಸ್ವರೂಪವನ್ನು ಹೇಳುತ್ತಾ ಅದನ್ನು ಸರಿಸುತ್ತಾ ಮುಂದೆ ಬಂದು ಅಧ್ಯಾತ್ಮದವರೆಗೆ ತಂದು ನಿಲ್ಲಿಸಿರುವದನ್ನು ಗಮನಿಸಬಹುದು. ಸಕಲ ಜಗತ್ತನ್ನೂ ಕೇವಲ ವಸ್ತುವಾಗಿ ನೊಡದೇ ಅವನ್ನು ಬ್ರಹ್ಮನ ರೂಪವನ್ನಾಗಿ ನೊಡಬೇಕೆನ್ನುವದು ಇಲ್ಲಿನ ಸಾರವು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಅತಿಥಿ ಸತ್ಕಾರವೇ ದೈವದ ಸೇವೆ ಎಂದ ದಂಪತಿ; ಮುದ್ಗಲ ಮತ್ತು ಮುದ್ಗಲಾನಿ

ಸತ್ಯ ಮತ್ತು ಬ್ರಹ್ಮದ ವಿಷಯದಲ್ಲಿ ಶಿಷ್ಯನ ಸಂಶಯ ಇಷ್ಟಕ್ಕೇ ನಿಲ್ಲುವುದಿಲ್ಲ. ಆತನಿಗೆ ಬ್ರಹ್ಮ/ಆತ್ಮನು ಸತ್ಯಕಾಮನು, ಸತ್ಯಸಂಕಲ್ಪನು ಸರ್ವಗಂಧನು, ಸರ್ವರಸನು ಎನ್ನುವ ನಾಮರೂಪಾತ್ಮಕಗಳಿಂದ ಶೋಭಿಸುತ್ತಾನೆಂದು ಶ್ರುತಿಗಳು ಹೇಳುತ್ತಿವೆ. ಭಗವದ್ಗೀತೆಯಲ್ಲಿ ʼಜ್ಯೋತಿಷಾಮಪಿ ತಜ್ಜ್ಯೋತಿಸ್ತಮಸಃ ಪರಮುಚ್ಯತೇʼ (ಆತನು ಜ್ಯೋತಿಗಳಿಗೂ ಜ್ಯೋತಿಯು), ಸರ್ವತೋಕ್ಷಿರೋಮುಖನು ಎನ್ನುವ ರೂಪಗಳಿಂದ ವರ್ಣಿಸಲ್ಪಟ್ಟಿದೆ. ಹಾಗಾಗಿ ಮಾತುಗಳಿಗೆ ಗೋಚರವಾಗುವ ಅರ್ಥೈಸಿಕೊಳ್ಳಲು ಸುಲಭವಾಗುವ ಸಗುಣಾಕಾರದಿಂದಲೇ ಗುರುತಿಸಬಹುದಲ್ಲ; ತಿಳಿದುಕೊಳ್ಳಲೂ ಅನುಕೂಲ. ಅದ್ವೈತದ ಸಿದ್ಧಾಂತದ ಪ್ರಕಾರ ಬ್ರಹ್ಮಕ್ಕೆ ಆಕಾರವನ್ನು ತಿಳಿಸುವದಾದರೆ ಯಾವ ಆಕಾರವನ್ನು ಹೇಳುವುದು. ವಿಷ್ಣುವೋ, ಶಿವನೋ, ಗಂಡೋ ಹೆಣ್ಣೋ, ಗೃಹಸ್ಥನೋ ಬ್ರಹ್ಮಚಾರಿಯೋ. ಇದರಲ್ಲಿ ಯಾವುದೊಂದನ್ನೂ ಸ್ವೀಕರಿಸಿದರೂ ಇನ್ನೊಂದು ಸುಳ್ಳಾಗುವುದು. ಈ ಕಾರಣದಿಂದ ಅದ್ವೈತ ಸಿದ್ಧಾಂತ ಪ್ರಾಥಮಿಕ ಹಂತದಲ್ಲಿ ಸಗುಣ ರೂಪವನ್ನು ಪರಮಾತ್ಮನಿಗೆ ಆರೋಪಿಸಿ ಆತನ ವಿವಿಧ ಅವತಾರಗಳನ್ನು ತಿಳಿಸುತ್ತಾ ಹೋಗುತ್ತದೆ. ಕಾಣಿಸುವ ದೇವರ ಎಲ್ಲಾ ಅವತಾರಗಳು ಮಿಥ್ಯೆಯಲ್ಲ; ನಿರ್ಗುಣ ಬ್ರಹ್ಮನೇ ಮಾಯೆಯೊಡಗೂಡಿ ಈಶ್ವರನಾಗುತ್ತಾನೆ. ಭಕ್ತನಾದವ ತನ್ನ ಇಷ್ಟದ ದೇವರನ್ನು ಕಾಣಬೇಕೆಂದು ಉಪವಾಸಾದಿ ವ್ರತಗಳನ್ನು ಮಾಡಿ ಕಷ್ಟವನ್ನು ಅನುಭವಿಸಿ ಆತ ಬಯಸಿದ ತೀರ್ಥಕ್ಷೇತ್ರಕ್ಕೆ ಬರುತ್ತಾನೆ. ಭಗವಂತನನ್ನು ಕಂಡು ತನ್ನ ಬದುಕು ಪಾವನವಾಯಿತೆಂದು ಆನಂದಪಡುತ್ತಾನೆ. ಮಂಗಳಾರತಿಯಾಗುತ್ತಿರುತ್ತದೆ; ಮಂತ್ರಘೋಷ, ಮಂಗಲ ವಾದ್ಯವೆಲ್ಲ ಮೊಳಗುತ್ತಿರುತ್ತದೆ. ಅಷ್ಟೆಲ್ಲ ಕಷ್ಟಪಟ್ಟು ದೇವರನ್ನು ಕಣ್ತುಂಬಾ ನೋಡುವ ಭಕ್ತ ತನಗರಿವಿಲ್ಲದೆಯೇ ಕಣ್ಣುಮುಚ್ಚಿ ಭ್ರೂಮದ್ಯದಲ್ಲಿ ಅದೇ ಭಗವಂತನನ್ನು ಧ್ಯಾನ ಮಾಡುತ್ತಾ ಮೈಮರೆಯುತ್ತಾನೆ. ಇದು ಸಗುಣತ್ವದಿಂದ ನಿರ್ಗುಣ ದೇವರನ್ನು ಕಾಣುವ ರೀತಿ. ಇದನ್ನು ಶ್ರುತಿಗಳು ಸಾವಕಾಶ- ನಿರವಕಾಶಗಳೆಂದು ವಿಭಾಗ ಮಾಡಿ ನಿರವಕಾಶವನ್ನು ತತ್ಪರವೆಂದು, ಪ್ರಬಲವೆಂದು ಹೇಳುತ್ತಾರೆ. ಸಾವಕಾಶಾದಿ ರೂಪಗಳ ಆರಾಧನೆಯನ್ನು ಅತತ್ಪರವೆಂದು, ಉಪಾಸನಾಪರವೆಂದು ಕರೆದಿದ್ದಾರೆ.

ಈ ಕಾರಣಕ್ಕಾಗಿ ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದ ಶಂಕರಾಚಾರ್ಯರು ಜನಸಾಮಾನ್ಯರ ದಿನನಿತ್ಯದ ಉಪಾಸನೆಗಾಗಿ ಪಂಚಾಯತನ ಪೂಜಾವಿಧಿಯನ್ನು ಬೋಧಿಸಿದ್ದಾರೆ. ಗುರು ತನ್ನ ಶಿಷ್ಯನಿಗೆ ಈ ಎಲ್ಲಾ ಮಾರ್ಗಗಳ ಮೂಲಕ ಬ್ರಹ್ಮವನ್ನು ತೋರಿಸುತ್ತಾ, ಆ ಮೇಲೆ ಅದಲ್ಲ. ಅದಲ್ಲ, ಎನ್ನುತ್ತಾ ನಿರುಪಾದಿಕವೂ, ನಿರ್ವಿಶೇಷವೂ ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವನೂ ಆದ ಬ್ರಹ್ಮದ ದರ್ಶನ ಮಾಡಿಸುವ ಕ್ರಿಯೆಗೆ “ನೇತಿ ನೇತಿ” ಎನ್ನುತ್ತಾರೆ. ಖಗೋಳಶಾಸ್ತ್ರಜ್ಞರು ನಿರಭ್ರರಾತ್ರಿಯಲ್ಲಿ ಆಕಾಶದಲ್ಲಿನ ಸಪ್ತರ್ಷಿಮಂಡಲವನ್ನೋ, ಧ್ರುವ ನಕ್ಷತ್ರವನ್ನೋ ತೋರಿಸುವಾಗ ಮೊದಲು “ನನ್ನ ಕೈಬೆರಳ ತುದಿಯನ್ನು ನೋಡು, ಅದೋ ಅಲ್ಲಿ ಕಾಣುವ ಆ ಮರದ ತುದಿಯನ್ನು ನೋಡು, ಆ ಮರದ ತುದಿಯ ಸ್ವಲ್ಪ ಎಡಗಡೆ ಹೊಳೆಯುವ ನಕ್ಷತ್ರಗಳ ಗುಂಪಿದೆಯಲ್ಲ, ಅದೇ ಸಪ್ತರ್ಷಿಮಂಡಲವೆಂದು” ತೋರಿಸುವ ರೀತಿಯಲ್ಲಿದೆ. ಇದನ್ನೇ ʼಸತ್ಯಸ್ಯ ಸತ್ಯಂʼ ಎಂದು ಕರೆದಿರುವುದು.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಕಲ್ಯಾಣ ರಾಜ್ಯ: ಬಹುಜನ ಸುಖಕ್ಕಾಗಿ, ಬಹುಜನ ಹಿತಕ್ಕಾಗಿ

Exit mobile version