ಭೋಗವೇ ಬದುಕಿನ ಪರಮ ಗುರಿಯೆಂದುಕೊಂಡ ರಾವಣನಿಗೆ ಕಾಣದ ಋಜುಮಾರ್ಗ
ರಾವಣನ (Ravana) ಪೂರ್ವ ನಿಯೋಜಿತ ಯೋಜನೆಯಂತೆ ಮಾಯಾಜಿಂಕೆ ರಾಮನನ್ನು ದೂರ ಒಯ್ಯುತ್ತದೆ. ಜಿಂಕೆಯನ್ನು ಕೊಂದು ಅದರ ಚರ್ಮವನ್ನು ತರುವೆ ಎನ್ನುವ ರಾಮನಿಗೆ ಹುಸಿಯಿಲ್ಲದ ತನ್ನ ಬಾಣದಿಂದ ಕೊಲ್ಲುವುದು ಯಾವ ದೊಡ್ಡ ಕೆಲಸವೂ ಅಲ್ಲವಾಗಿತ್ತು. ಆದರೂ ರಾಮ ಜಿಂಕೆಯ ಬೆನ್ನೆಟ್ಟಿ ಹೋಗುತ್ತಾನೆ. ಆ ಜಿಂಕೆಯಾದರೋ ಒಮ್ಮೆ ಕಾಣಿಸಿಕೊಳ್ಳುತ್ತಾ, ಇನ್ನೊಮ್ಮೆ ಮರೆಯಾಗುತ್ತಾ, ಮಗದೊಮ್ಮೆ ಅದೃಶ್ಯವಾಗುತ್ತಾ ಮರುಕ್ಷಣವೇ ದೂರದಲ್ಲಿ ಪುಟಿಯುತ್ತಿರುವುದು ಕಾಣಿಸುತ್ತದೆ. ಕುಪಿತನಾದ ರಾಮ ಕೊನೆಗೊಮ್ಮೆ ಅದನ್ನು ಕೊಲ್ಲಲೇಬೇಕೆಂದು ನಿರ್ಧರಿಸಿ ಮಹಾಸ್ತ್ರವೊಂದನ್ನು ಬಿಟ್ಟನು. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವಲ್ಲ; ರಾಮನಿಗೆ ರಾಕ್ಷಸನ ಮಾಯೆ ಎನ್ನುವುದರ ಅರಿವಿರುವುದರಿಂದಲೇ ಮಹಾಸ್ತ್ರವನ್ನು ಬಿಟ್ಟಿರುವುದು. ಯಾವಾಗ ಮಾರೀಚನಿಗೆ ಬಾಣ ತಾಗಿತೋ, ಆತ ರಾಮನ ಧ್ವನಿಯನ್ನು ಅನುಕರಿಸಿ ಹಾ ಸೀತೆ! ಹಾ ಲಕ್ಷ್ಮಣ! ಎಂದು ಕೂಗುತ್ತಾ ತನ್ನ ರಾಕ್ಷಸ ಶರೀರವನ್ನು ಪಡೆದು ಬಿದ್ದನು. ಒಹೋ! ಏನೋ ವ್ಯತ್ಯಾಸವಾಯಿತು ಎಂದು ರಾಮ ಮತ್ತೊಂದು ಮೃಗವೊಂದನ್ನು ಹೊಡೆದು ಅದರ ಮಾಂಸವನ್ನು ತೆಗೆದುಕೊಂಡು ತನ್ನ ಆಶ್ರಮಕ್ಕೆ ತಿರುಗಿ ಹೊರಟನು.
ರಾಮನ ಧ್ವನಿಯ ಅನುಕರಣೆ ಸೀತೆಯಲ್ಲಿ ರಾವಣ ನಿರೀಕ್ಷಿಸಿದ ಪರಿಣಾಮವನ್ನು ಬೀರಿಬಿಟ್ಟಿತು. ಆ ಧ್ವನಿಯನ್ನು ಕೇಳಿದ ಆಕೆ ಲಕ್ಷ್ಮಣನ ಹತ್ತಿರ ರಾಮನಿಗೆ ಸಹಾಯ ಮಾಡಲು ಹೋಗು ಎಂದಳು. ಲಕ್ಷ್ಮಣ ಒಪ್ಪದಿದ್ದಾಗ ಅವನನ್ನು ಬಿರುನುಡಿಗಳಿಂದ ನಿಂದಿಸಿದಳು. ಮಾತೃಸ್ಥಾನದಲ್ಲಿರಿಸಿ ಸೀತೆಯನ್ನು ಸರ್ವದಾ ಗೌರವಿಸುತ್ತಿದ್ದ ಲಕ್ಷ್ಮಣನಿಗೆ ಆಡಬಾರದ ಮಾತುಗಳನ್ನು ಆಡಿದಳು. ‘ರಾಮನ ರಕ್ಷಣೆಗಾಗಿ ಈಗಲೇ ತೆರಳದಿದ್ದರೆ ತಾನು ಗೋದಾವರಿ ನದಿಯಲ್ಲಿ ಬಿದ್ದು ಸಾಯುತ್ತೇನೆ, ಅಥವಾ ನೇಣು ಹಾಕಿಕೊಳ್ಳುತ್ತೇನೆ’ ಎಂದು ಬೆದರಿಸಿದಳು. ಅನಿವಾರ್ಯವಾಗಿ ಲಕ್ಷ್ಮಣ ಆಕೆಯನ್ನು ಅಗಲಿ ರಾಮನಿಸೋಸ್ಕರವಾಗಿ ಅರಣ್ಯಕ್ಕೆ ತೆರಳಬೇಕಾಯಿತು. ಹೀಗೆ ಹೋಗುವಾಗ ಆತನಲ್ಲಿ ವಿಷಾದದ ಭಾವವಿತ್ತೇ ಹೊರತೂ ಆತ ಯಾವ ಲಕ್ಷ್ಮಣರೇಖೆಯನ್ನೂ ಎಳೆಯಲಿಲ್ಲ.
ರಾವಣ ಸೀತೆಯನ್ನು ಕದ್ದೊಯ್ಯಲು ಇದೇ ಸಮಯವನ್ನು ಕಾಯುತ್ತಿದ್ದ. ನವುರಾದ ಕಾಷಾಯವಸ್ತ್ರವನ್ನುಟ್ಟಿದ್ದ. ಶಿಖೆಯನ್ನು ಬಿಟ್ಟಿದ್ದ. ಛತ್ರಿಯನ್ನು ಹಿಡಿದಿದ್ದ. ತೊಗಲಿನ ಪಾದರಕ್ಷೆಯನ್ನು ಹಾಕಿಕೊಂಡಿದ್ದ. ತ್ರಿದಂಡಧಾರಿಯಾಗಿ ಕಮಂಡಲುಗಳನ್ನು ಎಡಭಾಗದ ಹೆಗಲಿಗೆ ಕಟ್ಟಿಕೊಂಡು ಸಂನ್ಯಾಸಿಯ ವೇಷದಲ್ಲಿ ವೈದೇಹಿಯ ಬಳಿಗೆ ಬಂದ. ಆತನ ಈ ಮಾರು ವೇಷವನ್ನು ನೋಡಿದ ಗೋದಾವರಿ ನದಿ ಎಲ್ಲಿ ಸೀತೆಗೆ ಈ ಮೋಸವನ್ನು ಹೇಳಿಬಿಡುವುದೋ ಎಂದು ಆತ ನದಿಯ ಕಡೆ ದುರುಗುಟ್ಟಿ ನೋಡಿದ ತಕ್ಷಣ ನದಿ ಹೆದರಿ ಮೆಲ್ಲಮೆಲ್ಲನೆ ಪ್ರವಹಿಸಿತು. ಹುಲ್ಲಿನಿಂದ ಹರಡಿ ಬಾವಿಯಮೇಲೆ ಯಾರಾದರೂ ಕಾಲಿಟ್ಟರೆ ಅವರು ಬಾವಿಯೊಳಗೇ ಬೀಳುವಂತೆ ಮೋಸದ ವೇಷದಲ್ಲಿದ್ದ ರಾವಣ ಆಶ್ರಮಕ್ಕೆ ಬಂದು ಜಾನಕಿಯ ಸೌಂದರ್ಯವನ್ನು ನೋಡಿದ್ದೇ ತಡ, ಆತ ಮನ್ಮಥನ ಬಾಣಕ್ಕೆ ಪೀಡಿತನಾದ. ಬಾಯಲ್ಲಿ ಉಪನಿಷದ್ವಾಕ್ಯಗಳನ್ನು ಉಸುರುತ್ತಾ ವಿನಯಭಾವದಿಂದ ಆಕೆಯಲ್ಲಿ ಮಾತಾಡಿಸುತ್ತಾನೆ. ಅವಳ ಕುರಿತು ಕಾಳಜಿ ಇರುವವರಂತೆ “ಈ ಅರಣ್ಯವು ದುಷ್ಟರಾದ ರಾಕ್ಷಸರಿಂದ ತುಂಬಿದೆ, ಯಾಕೆ ಒಬ್ಬಳೇ ಇದ್ದಿಯೇ” ಎಂದು ವಿಚಾರಿಸುತ್ತಾನೆ. ಪಂಚವಟಿಯ ಸ್ಥಳದ ಕುರಿತುಮೊದಲೇ ಹೆದರಿದ್ದ ಸೀತೆಗೆ ಇನ್ನೂ ಹೆಚ್ಚು ಬೆದರಿಕೆ ಉಂಟಾಗುವರೀತಿಯಲ್ಲಿ ಅರಣ್ಯದ ಕುರಿತು ಭೀತಿಯನ್ನೂ ಜೊತೆಗೆ ಆಕೆಯ ಸೌಂದರ್ಯವನ್ನೂ ಹಾಡಿಹೊಗಳುತ್ತಾ ಅವಳ ಪರಿಚಯವನ್ನು ಕೇಳುತ್ತಾನೆ. ಅತಿಥಿಯನ್ನು ಸತ್ಕಾರಮಾಡುವ ವಿಧಿಯಂತೆ ಮೈಥಿಲಿ ಆತನನ್ನು ಸತ್ಕರಿಸಿ ಭೋಜನಕ್ಕೆ ಸಿದ್ಧಳಾಗು ಎನ್ನುತ್ತಾಳೆ. ಬಾರಿ ಬಾರಿಗೂ ರಾಮ ಲಕ್ಷ್ಮಣರ ಬರವನ್ನು ಎದುರುನೋಡುತ್ತಾ ಅರಣ್ಯದೆಡೆಗೆ ಗಮನಿಸುತ್ತಿದ್ದ ಸೀತೆಗೆ ರಾವಣನ ಕಾಮುಕ ದೃಷ್ಟಿಯ ಅರಿವಾಗಲಿಲ್ಲ. ಅವಳಿಗೆ ಹೊರಗಡೆ ಮಹಾರಣ್ಯದ ಹೊರತಾಗಿ ರಾಮಲಕ್ಷ್ಮಣರೂ ಸಹ ಕಾಣಲಿಲ್ಲವಂತೆ.
ಸಂಕಟದ ಸಮಯದಲ್ಲಿ ತನ್ನ ಪತಿ ಸುರಕ್ಷಿತವಾಗಿ ಬರಲು ಸಂನ್ಯಾಸಿಯ ಆಶೀರ್ವಾದ ಒಳ್ಳೆಯದೆಂದು ಸ್ತ್ರೀ ಸಹಜವಾದ ಯೋಚನೆಯಲ್ಲಿ ಆಕೆ ತನ್ನ ಮತ್ತು ರಾಮನ ಪರಿಚಯವನ್ನೂ ತಾವು ಅರಣ್ಯಕ್ಕೆ ಬರಲು ನಡೆದ ಕಾರಣವನ್ನೂ ವಿವರಿಸುತ್ತಾಳೆ. ಹೀಗೆ ವಿವರಿಸುತ್ತಾ ರಾಮನಿಗೆ ಆ ಸಮಯದಲ್ಲಿ ರಾಮನಿಗೆ 38 ವರ್ಷ ಮತ್ತು ತನಗೆ 31 ವರ್ಷ ವಯಸ್ಸೆಂದೂ ನುಡಿಯುತ್ತಾಳೆ. ತನ್ನ ಕುರಿತಾದ ಎಲ್ಲ ಪರಿಚಯವನ್ನು ಹೇಳಿದ ಆಕೆ ಬಂದ ಸಂನ್ಯಾಸಿಯ ಪರಿಚಯವನ್ನು ಕೇಳುತ್ತಾಳೆ. ರಾವಣ ಇಲ್ಲಿ ನೇರವಾಗಿ ತನ್ನ ಕುರಿತು ದೇವಾಸುರ ಮಾನವರಿಂದ ಕೂಡಿದ ಎಲ್ಲಾ ಲೋಕಗಳನ್ನು ಯಾವಾತ ತನ್ನ ಭುಜಬಲಗಳಿಂದ ಭಯಗೊಳಿಸುತ್ತಿದ್ದಾನೋ ಆ ರಾವಣನೆನ್ನುವ ಪ್ರಸಿದ್ಧನಾದ ರಾಕ್ಷಸನು ತಾನು ಎಂದು ಪರಿಚಯ ಮಾಡಿಕೊಡುತ್ತಾನೆ. ತನಗೆ ಪ್ರಪಂಚದಲ್ಲಿರುವ ಉತ್ತಮ ಸ್ತ್ರೀಯರನ್ನು ಅನುಭವಿಸುವ ತನ್ನ ನಡವಳಿಕೆಗಳು ಎಲ್ಲವನ್ನೂ ಹೇಳುತ್ತಾನೆ. ಯಾವಾಗ ಸೀತೆಯನ್ನು ತಾನು ಕಂಡೆನೋ ಆಗ ತನಗೆ ಇತರ ಉತ್ತಮ ಸ್ತ್ರೀಯರ ಮೇಲಿದ್ದ ವ್ಯಾಮೋಹವೇ ಹೊರಟು ಹೋಯಿತು ಎನ್ನುತ್ತಾ “ನೀನು ಅವರೆಲ್ಲರಿಗೂ ಮೊದಲ ಪಟ್ಟಮಹಿಷಿಯಾಗು. ಈ ಕ್ಲಿಷ್ಟವಾದ ವನವಾಸ ನಿನ್ನಂತಹ ಕೋಮಲ ಸ್ತ್ರೀಯರಿಗಲ್ಲ. ನೀನು ನನ್ನ ಹೆಂಡತಿಯಾದರೆ ಸರ್ವಾಭರಣ ಭೂಷಿತೆಯಾದ ಐದು ಸಾವಿರ ದಾಸಿಯರು ನಿನ್ನನ್ನು ಸದಾ ಉಪಚರಿಸುತ್ತಾರೆ” ಎಂದು ಅವಳಿಗೆ ಪ್ರಲೋಭನೆಯನ್ನುಂಟುಮಾಡುತ್ತಾನೆ.
ರಾವಣನ ಅಂತಃಪುರದಲ್ಲಿ ಎಷ್ಟೇ ಸ್ತ್ರೀಯರಿರಲಿ, ಮಂಡೋದರಿಯ ಕುರಿತು ಆತನಿಗೆ ವಿಶೇಷ ಪ್ರೀತಿಯಿತ್ತು ಎನ್ನುವ ಮಾತುಗಳು ಬರುತ್ತದೆ. ಸ್ತ್ರೀಚಪಲನಾದ ರಾವಣನಿಗೆ ಸೀತೆಯ ಸೌಂದರ್ಯವನ್ನು ನೋಡಿದಾಗ ಮಂಡೋದರಿಯನ್ನೂ ಸಹ ಸೀತೆಯನ್ನು ಓಲೈಸುವಂತೆ ಮಾಡುತ್ತೇನೆ ಎನ್ನುವ ಮಾತುಗಳನ್ನು ಆಡುತ್ತಾನೆ. ಆತನಿಗೆ ಹೆಣ್ಣಗಳೆಂದರೆ ತನಗೆ ಭೋಗಿಸಲು ಇರುವ ಮುತ್ತುಗಳು ಎಂತ ತಿಳಿದುಕೊಂಡಿದ್ದ. ಸೀತೆ ಅವನ ಈ ಮಾತುಗಳನ್ನು ಕೇಳುತ್ತಲೇ ಆತ ಮಹಾಭಯಂಕರ ಮತ್ತು ಘೋರರೂಪಿಯೆನ್ನುವುದನ್ನು ಕಡೆಗಣಿಸಿ ತಿರಸ್ಕಾರದಿಂದ ಆತನನ್ನು ನಿಂದಿಸಲು ಪ್ರಾರಂಭಿಸಿದಳು. ಆತನ ಪರಾಕ್ರಮವೆಲ್ಲವನ್ನೂ ಗುಳ್ಳೇನರಿಯ ಹಾಗೇ ವಂಚಿಸಿ ಸಾಧಿಸಿರುವಂತಹದ್ದು ಎಂದು ಜರಿಯುವಳು. ಸೂರ್ಯಪ್ರಭೆಯನ್ನು ಹೇಗೆ ಮುಟ್ಟಲು ಸಾಧ್ಯವಿಲ್ಲವೋ ಹಾಗೆಯೇ ತನ್ನನ್ನು ಮುಟ್ಟಲೂ ಸಹ ನಿನಗೆ ಸಾಧ್ಯವಿಲ್ಲ ಎಂದು ರಾಕ್ಷಸನನ್ನು ತಿರಸ್ಕಾರಮಾಡುವಳು. ರಾಮನ ಪರಾಕ್ರಮದ ವಿಷಯದಲ್ಲಿ ಎಚ್ಚರಿಕೆ ಕೊಡುವಳು. ರಾಮನ ಪ್ರಿಯಸತಿ ತಾನು, ತನ್ನನ್ನು ನೀನು ಬಯಸುತ್ತಿರುವುದು ಎಂದರೆ ಅದು ಕಲ್ಲನ್ನು ಕುತ್ತಿಗೆಗೆ ಕಟ್ಟಿಕೊಂಡು ಸಮುದ್ರವನ್ನು ದಾಟಲು ಯತ್ನಿಸಿದಂತೆ ಎನ್ನುವ ಎಚ್ಚರಿಕೆಯನ್ನೂ ನೀಡುವಳು. ರಾವಣ ತನ್ನ ವ್ಯಕ್ತಿತ್ವದ ಕುರಿತು ಕೊಚ್ಚಿಕೊಂಡಿರುವುದನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡಿ ಆತನಿಗೂ ರಾಮನಿಗೂ ಇರುವ ಹೋಲಿಕೆ ಮಾಡುವುದು ಹೀಗೆ:-
ಯದನ್ತರಂ ಸಿಂಹಶೃಗಾಲಯೋರ್ವನೇ ಯದನ್ತರಂ ಸ್ಯನ್ದಿನಿಕಾ ಸಮುದ್ರಯೋಃ
ಸುರಾಗ್ರ್ಯ ಸೌವೀರಕಯೋರ್ಯದನ್ತರಂ ತದನ್ತರಂ ವೈ ತವ ರಾಘವಸ್ಯ ಚ৷৷ಅ.47.44৷৷
“ಅರಣ್ಯದಲ್ಲಿರುವ ಸಿಂಹಕ್ಕೂ ಗುಳ್ಳೇನರಿಗೂ ಯಾವ ಬೇಧವಿರುವುದೋ, ಸಮುದ್ರಕ್ಕೂ ಕ್ಷುದ್ರನದಿಗೂ ಯಾವ ತಾರತಮ್ಯವಿರುವುದೋ, ಶ್ರೇಷ್ಠವಾದ ಮದ್ಯಕ್ಕೂ ಹುಳಿ ಹೆಂಡಕ್ಕೂ ಯಾವ ವೆತ್ಯಾಸವಿರುವುದೋ ಆ ಅಂತರ ನಿನಗೂ ಮತ್ತು ರಾಮನಿಗೂ ಇದೆ” ಎಂದು ಲಂಕೇಶನನ್ನು ತಿರಸ್ಕಾರಮಾಡುತ್ತಾಳೆ.
ಕಾಮಾತುರನಾದ ರಾವಣನಿಗೆ ಸೀತೆ ತನ್ನನ್ನು ಹೀಗೆ ನಿಂದಿಸಿದಂತಲ್ಲೇ ಆಕೆಯನ್ನು ಪಡೆಯುವ ಅವನ ಹಂಬಲ ಇನ್ನೂ ಹೆಚ್ಚಾಗುತ್ತದೆ. ಅರಣ್ಯದಲ್ಲಿರುವ ಕಿಡಿಗೆ ಬೀಸುವ ಗಾಳಿಯಿಂದ ಸುಡುವ ಸಾಮರ್ಥ್ಯ ವೃದ್ಧಿಸುವಹಾಗೇ ಆತನಲ್ಲಿ ಕಾಮಭಾವನೆಗಳು ಇನ್ನಷ್ಟು ಹೆಚ್ಚಾಯಿತು. ಮತ್ತೊಮ್ಮೆ ತನ್ನನ್ನು ಹೊಗಳಿಕೊಳ್ಳುತ್ತಾ ಕುಬೇರ ತನ್ನಿಂದ ಹೇಗೆ ಪರಾಭವಗೊಂಡನು ಎನ್ನುವುದನ್ನು ಕೊಚ್ಚಿಕೊಳ್ಳುತ್ತಾನೆ. ಮುಂದುವರಿದು ತಾನು ತಿರುಗಾಡಿದೆ ಎಂದರೆ ಅಲ್ಲಿ ಗಾಳಿಯೂ ಜೋರಾಗಿ ಬೀಸುವುದಿಲ್ಲ, ಇಂದ್ರನೂ ತನ್ನನ್ನು ಕಂಡು ಹೆದರಿದ್ದಾನೆ, ನದಿಗಳು ತನ್ನನ್ನು ನೋಡಿದೊಡನೆ ನಿಧಾನವಾಗಿ ಹರಿಯುತ್ತದೆ ಎಂದೆಲ್ಲಾ ಹೇಳಿ ಅವಳಿಗೆ ಲಂಕೆಯ ವರ್ಣನೆ ಮಾಡಿ ಆಕೆಯ ಹತ್ತಿರ “ರಾಮ ತನ್ನ ಒಂದು ಬೆರಳಿಗೂ ಸಾಟಿಯಿಲ್ಲ, ನಾನು ನಿನ್ನನ್ನು ಕಾಮಿಸಿದ್ದೇನೆ ಎಂದರೆ ಅದು ನಿನ್ನ ಸೌಭಾಗ್ಯವೆಂದು ಭಾವಿಸು” ಎಂದು ಹದ್ದುಮೀರಿದ ಮಾತುಗಳನ್ನು ಆಡುತ್ತಾನೆ. ಸೀತೆ ಈಗ ಕೆರಳಿ ಆತನಿಗೆ ಛೀಮಾರಿ ಹಾಕುತ್ತಾಳೆ.
ಇಷ್ಟರತನಕ ಸಂನ್ಯಾಸಿ ವೇಷದಲ್ಲಿ ಆಶ್ರಮದ ಒಳಗೆ ತಾನು ರಾವಣ ಎಂದು ಸೀತೆಗೆ ಪರಿಚಯವನ್ನು ಮಾಡಿಕೊಟ್ಟ ಆ ರಾಕ್ಷಸ ತನ್ನ ಸೌಮ್ಯವಾದ ರೂಪವನ್ನು ತ್ಯಜಿಸಿ ಯಮನ ರೂಪಕ್ಕೆ ಸದೃಶ್ಯವಾದ ಭಯಂಕರವಾದ ರೂಪವನ್ನು ತಾಳಿ ಸೀತೆಯನ್ನು ಅಪಹರಿಸಲು ಆಕೆಯ ಮುಡಿಯನ್ನೂ ತೊಡೆಯನ್ನೂ ಹಿಡಿದು ಎತ್ತಿ ಅಪಹರಿಸಿಕೊಂಡು ಹೋಗುತ್ತಾನೆ. ಹೀಗೆ ಇವೆಲ್ಲವೂ ಆಶ್ರಮದ ಒಳಗೇ ಆಗಿದೆ. ಎಲ್ಲಿಯೂ ಹೊರಗಡೆ ನಿಂತು ಬಿಕ್ಷೆಯನ್ನು ಕೇಳಿದ ಎನ್ನುವ ವಿಷಯಗಳಿಲ್ಲ. ಮರೆಯಲ್ಲಿ ಬಚ್ಚಿಟ್ಟಿದ್ದ ಹೇಸರಗತ್ತೆಯಿಂದ ಹೂಡಲ್ಪಟ್ಟ ಕರ್ಕಶಧ್ವನಿಯಿಂದ ಕೂಡಿದ ಮಹಾರಥವನ್ನು ಹೊರತಂದು ಸೀತೆಯನ್ನು ರಥದಲ್ಲಿ ಬಲಾತ್ಕಾರವಾಗಿ ಕುಳ್ಳಿರಿಸಿಕೊಂಡು ಅಂತರಿಕ್ಷಕ್ಕೆ ಹಾರಿದನು. ಮಾರೀಚನಲ್ಲಿ ಹೋಗುವಾಗ ನೆಲದ ಮೇಲೆ ಸಾಗಿದ ಹೇಸರಗತ್ತೆಯ ರಥ ಇಲ್ಲಿ ಅಂತರಿಕ್ಷಕ್ಕೆ ಹಾರಿತು ಎಂದಿದೆ. ಅತ ಅಲ್ಲಿಗೆ ತನ್ನ ಪುಷ್ಪಕ ವಿಮಾನವನ್ನು ತಂದಿರಲಿಲ್ಲ. ಸೀತೆಗೆ ಈಗ ಲಕ್ಷ್ಮಣ ಹೇಳಿದ “ಜಿಂಕೆ ಮಾಯಾಮೃಗ, ಮಾರಿಚನ ಮಾಯೆ ಅದು, ರಾಮನ ಧ್ವನಿಯಲ್ಲ, ಅವನ ಧ್ವನಿಯನ್ನು ಅನುಕರಿಸಿ ಹಾಕಿದ ಕೂಗು. ನಿನ್ನನ್ನು ನಾನು ಬಿಟ್ಟು ಹೋಗುವವನಲ್ಲ” ಮುಂತಾದ ವಿವೇಕದ ಮಾತುಗಳು ನೆನಪಾದವು. ಅವಳು ಮೊದಲು ಸಹಾಯಕ್ಕಾಗಿ ಕೂಗಿಕೊಳ್ಳುವುದೇ ಲಕ್ಷ್ಮಣನ ಹೆಸರನ್ನು ಹೇಳುವ ಮೂಲಕ.
ಹಾ ಲಕ್ಷ್ಮಣ ಮಹಾಬಾಹೋ ಗುರುಚಿತ್ತಪ್ರಸಾದಕ
ಹ್ರಿಯಮಾಣಾಂ ನ ಜಾನೀಷೇ ರಕ್ಷಸಾ ಮಾಮಮರ್ಷಿಣಾ৷৷ಅ.49.23৷৷
ಅಯ್ಯೋ ಮಾಹಾಬಾಹುವಾದಂತ ಲಕ್ಷ್ಮಣ! ಗುರುವಾದ ರಾಮನ ಮನಸ್ಸನ್ನು ಸದಾ ಪ್ರಸನ್ನಗೊಳಿಸುವವನೇ! ಕಾಮರೂಪಿಯಾದ ರಾಕ್ಷಸನು ನನ್ನನ್ನು ಸೆಳೆದುಕೊಂಡು ಹೋಗುತ್ತಿರುವುದನ್ನು ನೀನು ಅರಿಯೆದಾದೆಯಾ?
ಕೆಲವೊಮ್ಮೆ ವಿವೇಕ ಹೇಳುವಾಗ ಅದು ಕಹಿಯಂತೆ ತೋರುತ್ತದೆ. ಅಂತವರ ಸಲಹೆಯನ್ನು ಅಲಕ್ಷ್ಯ ಮಾಡಿ ಅವರನ್ನು ಅವಮಾನಿಸಿ ಹೊರದೂಡುತ್ತೇವೆ. ಯಾವಾಗ ಅವರು ಹೇಳಿರುವ ಮಾತುಗಳು ನಿಜವಾಗುತ್ತದೆಯೋ ಆಗ ಅವರೇ ತಮ್ಮಲ್ಲಿಗೆ ಬಂದು ಸಹಾಯ ಮಾಡಬಹುದಿತ್ತಲ್ಲ ಎಂದು ಅಂಥವರನ್ನು ಮೊದಲು ನೆನೆಯುತ್ತೇವೆ. ಸೀತೆಯ ಮನಸ್ಥಿತಿ ಇಲ್ಲಿ ಹೀಗೆ ಆಗಿರುವುದು. ಸದಾ ಕಾಲವೂ ತನ್ನ ಮತ್ತು ರಾಮನನ್ನು ಕಾಯುತ್ತಿರುವ ಲಕ್ಷ್ಮಣ ದೂರ ಹೋಗದೇ ಎಲ್ಲಿಯಾದರೂ ಹತ್ತಿರದಲ್ಲಿ ಅವಿತು ತನ್ನನ್ನು ಗಮನಿಸಬಾರದಿತ್ತೆ ಎಂದು ಆಕೆಗೆ ಅನಿಸುತ್ತದೆ. ರಾಮನಾದರೂ ಬೇಗೆ ಬರಬಾರದಿತ್ತೇ, ಒಂದು ಜಿಂಕೆಗಾಗಿ ಅಷ್ಟು ದೂರ ಹೋಗಬೇಕಾಗಿತ್ತೇ, ತನ್ನನ್ನು ಈ ರಾವಣನಿಂದ ಯಾರಾದರೂ ರಕ್ಷಿಸಬಾರದೇ ಎಂದು ಎಲ್ಲಾ ಕಡೆ ನೋಡುತ್ತಾ ಗೋಳಾಡುತ್ತಾಳೆ. ತಮ್ಮ ಉತ್ಕರ್ಷವನ್ನು ನೋಡಿ ಸಹಿಸಲಾರದೇ ಕಾಡಿಗೆ ಕಳುಹಿಸಿರುವ ಕೈಕೇಯಿಯ ಇಷ್ಟಾರ್ಥವು ಈಡೇರಿದಂತಾಯಿತು ಎನ್ನುತ್ತಾಳೆ. ಆಕೆಯ ಮನಸ್ಸಿನಲ್ಲಿ ಬರುವ ಮಾನವ ಸಹಜವಾದ ಭಾವನೆಯನ್ನು ಕವಿ ವಿವರಿಸಿದ್ದಾನೆ. ಸಾಮಾನ್ಯವಾಗಿ ಮನುಷ್ಯರು ತಮ್ಮ ತಪ್ಪಿನಿಂದಲೇ ಗಂಡಾಂತರಕ್ಕೆ ಒಳಗಾದರೂ ಅದನ್ನು ಬೇರೆಯವರ ಮೇಲೆ ಹೊರಿಸಲು ಅವರ ಸ್ವಭಾವ ಬಯಸುತ್ತಿರುತ್ತದೆ. ಅದನ್ನು ವಾಲ್ಮೀಕಿ ಸೀತೆಯ ದುಃಖದತೀವ್ರತೆಯಲ್ಲಿ ವಿವರಿಸಿದ್ದಾನೆ.
ಹಾಗೆಯೇ ಪ್ರತಿಕ್ರಿಯೆಯಿಲ್ಲದ ಗೋಳಿಗೆ ಕಾಡಿನ ರೋದನವೆನ್ನುತ್ತೇವೆ. ಈ ಗಾದೆ ಸೀತೆಯ ಈ ದುಃಖವನ್ನು ನೋಡಿದ ಮೇಲೆ ಬಂದಿರುವಂತಹದ್ದು. ಆಕೆ ಅಲ್ಲಿರುವ ಪ್ರಸ್ರವಣ ಪರ್ವತವನ್ನೂ, ಗೋದಾವರಿ ನದಿಯನ್ನೂ, ಕಾಡಿನಲ್ಲಿರುವ ಮೃಗ, ನಾನಾ ವಿಧವಾದ ವೃಕ್ಷಗಳನ್ನೆಲ್ಲವನ್ನೂ ಹೆಸರಿಡಿದು ಕೂಗಿ ರಾವಣ ತನ್ನನ್ನು ಕದ್ದುಕೊಂಡು ಹೋದನೆಂದು ರಾಮನಿಗೆ ಹೇಳಿ ಎಂದು ಗೋಳಿಡುತ್ತಾಳೆ. ತಾನು ಯಾರಿಂದ ಅಪಹರಣಕ್ಕೆ ಒಳಗಾದನೆಂದು ತಿಳಿದ ತಕ್ಷಣ ಮಹಾಬಾಹುವಾದ ರಾಮ ಪರಾಕ್ರಮದಿಂದ ತನ್ನನ್ನು ಹಿಂದಕ್ಕೆ ಕರೆತರುತ್ತಾನೆ ಎನ್ನುತ್ತಾಳೆ. ಹೀಗೆ ಗೋಳಿಡುವಾಗ ಅವಳ ಕಣ್ಣಿಗೆ ಬಿದ್ದಿದ್ದು ಮರದ ಮೇಲೆ ಮಲಗಿದ್ದ ಜಟಾಯು. ರಾಮಲಕ್ಷ್ಮಣರಿಲ್ಲದ ವೇಳೆಯಲ್ಲಿ ತಾನು ಸೀತೆಯನ್ನು ರಕ್ಷಿಸುತ್ತೇನೆ ಎಂದು ಅಗಸ್ತ್ಯಾಶ್ರಮದಲ್ಲಿ ಮಾತು ಕೊಟ್ಟಿರುವುದು ನೆನಪಿಗೆ ಬಂತು. ಅವನನ್ನು ಕೂಗಿ ಕರೆಯುತ್ತಾ “ಆರ್ಯನೇ, ಪಾಪಿಷ್ಠನಾದ ರಾಕ್ಷಸೇಂದ್ರನು ನನ್ನನ್ನು ಅನಾಥೆಯಾದವಳನ್ನು ಸೆಳೆದೊಯ್ಯುವಂತೆ ಸೆಳೆದುಕೊಂಡು ಹೋಗುತ್ತಿರುವುದನ್ನು ನೋಡು, ಏನು ಮಾಡುವುದು ಬಲವಂತನಾದ ಅವನೊಡನೆ ಹೋರಾಟಮಾಡಲು ನಿನ್ನಿಂದ ಸಾಧ್ಯವಿಲ್ಲ. ನೀನೊಂದು ಉಪಕಾರವನ್ನು ಮಾಡು, ನನ್ನ ಅಪಹರಣದ ವಾರ್ತೆಯನ್ನು ರಾಮನಿಗೂ ಲಕ್ಷ್ಮಣನಿಗೂ ಯಥಾವತ್ತಾಗಿ ಹೇಳು” ಎನ್ನುತ್ತಾಳೆ. ಆತ ಕೂಡಲೇ ಎದ್ದು ರಾವಣನ ಮಾರ್ಗದಲ್ಲಿ ಅಡ್ದಬಂದು ರಾವಣನಿಗೆ ಅಧರ್ಮದಲ್ಲಿ ನಡೆಯಬೇಡ ಎಂದು ಬುದ್ಧಿವಾದವನ್ನು ಹೇಳುತ್ತಾನೆ. ಆತನಿಗೆ ಆಗ ಅರವತ್ತು ಸಾವಿರ ವರ್ಷ ವಯಸಾಗಿತ್ತು. ಪಕ್ಷಿಗಳಿಗೆ ರಾಜನಾಗಿರುವುದರಿಂದ ರಾವಣನಿಗೆ ಬುದ್ಧಿವಾದವನ್ನು ಹೇಳಲು ಆತನಿಗೆ ಅರ್ಹತೆಯಿದೆ. ಧರ್ಮಶಾಸ್ತ್ರವನ್ನೂ ಆತ ಚನ್ನಾಗಿ ತಿಳಿದುಕೊಂಡಿದ್ದಾನೆ. ಇಂಥ ಕಾರ್ಯವನ್ನು ನೀನು ಮಾಡುವುದರಿಂದ ಪ್ರಪಂಚದಲ್ಲಿ ಧರ್ಮ ಸಾಧನೆಯಾಗುವದಿಲ್ಲ, ಕೀರ್ತಿಯಾಗಲೀ, ಯಶಸ್ಸಾಗಲೀ ಲಭಿಸುವುದಿಲ್ಲ, ಅದರಿಂದ ಪರರಿಗೆ ದುಃಖವುಂಟಾಗುತ್ತದೆ ಹೊರತೂ ಮತ್ತೇನಿಲ್ಲ. ಕೇವಲ ಮೂಢನು ಮಾತ್ರ ಈ ರೀತಿಯ ಹೇಯ ಕಾರ್ಯವನ್ನು ಮಾಡುವನು ಎಂದು ತಿಳಿಹೇಳುತ್ತಾನೆ.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಅಗಸ್ತ್ಯರ ಆಶ್ರಮದಲ್ಲಿ ರಾವಣ ವಧೆಗೆ ಸಿದ್ಧವಾದ ವೇದಿಕೆ
ಅರಣ್ಯಕಾಂಡದ ಐವತ್ತನೇಸರ್ಗದಲ್ಲಿ ಜಟಾಯುವಿನ ಧರ್ಮೋಪದೇಶ ವಿವರವಾಗಿದೆ. ಇವು ಯಾವುದೂ ರಾವಣನ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಆಗ ಕ್ರುದ್ಧನಾದ ಜಟಾಯುವು ರಾಕ್ಷಸನ ಮೇಲೆ ಎರಗುತ್ತಾನೆ. ಆತ ತೋರುವ ಅತುಲ ಪರಾಕ್ರಮದ ಮುಂದೆ ರಾವಣ ಒಮ್ಮೆ ಹಿಮ್ಮೆಟ್ಟುತ್ತಾನೆ. ರಾವಣನ ಧನಸ್ಸನ್ನು ಮುರಿಯುತ್ತಾನೆ. ಅವನ ಕವಚಗಳನ್ನು ತನ್ನ ಕೊಕ್ಕಿನಿಂದ ಹರಿಯುತ್ತಾನೆ. ರಾವಣನ ರಥವನ್ನು ಎಳೆಯುತ್ತಿದ್ದ ಹೇಸರಗತ್ತೆಯನ್ನು ಕೊಲ್ಲುತ್ತಾನೆ. ಅವನ ರಥ ಪುಡಿಪುಡಿಯಾಗುತ್ತದೆ. ಸೀತಾ ಸಮೇತನಾಗಿ ರಾವಣ ರಥದಿಂದ ಧರೆಗೆ ಉರುಳಿ ಬೀಳುತ್ತಾನೆ. ಅವನ ಇಪ್ಪತ್ತು ತೋಳುಗಳನ್ನೂ ಕತ್ತರಿಸುತ್ತಾನೆ. ಹಾಗೆ ಕತ್ತರಿಸಲ್ಪಟ್ಟ ತೋಳುಗಳು ಮತ್ತೆ ಮತ್ತೆ ಚಿಗುರುತ್ತವೆ. ಅವಕಾಶವನ್ನು ಗಮನಿಸಿ ರಾವಣ ಕತ್ತಿಯನ್ನು ಸೆಳೆದು ಜಟಾಯುವಿನ ರಕ್ಕೆಯನ್ನು ಕತ್ತರಿಸಿಬಿಡುತ್ತಾನೆ. ವೀರಾವೇಶದಿಂದ ಹೋರಾಡಿದ ಜಟಾಯು ಒಮ್ಮೆಲೇ ಧೊಪ್ಪನೆ ನೆಲಕ್ಕೆ ಬಿದ್ದು ಮರಣಾವಸ್ಥೆಯನ್ನು ತಲುಪುತ್ತಾನೆ. ಜಟಾಯುವಿನ ಅರ್ಪಣೆಯನ್ನು ನೋಡಿದ ಸೀತೆಗೆ ತನ್ನ ಮೃಗವ್ಯಸನವೇ ಈ ಎಲ್ಲ ದುಃಖಕ್ಕೆ, ಜಟಾಯುವಿನಂತವನ ಮರಣಕ್ಕೆ ಕಾರಣವಾಯಿತು ಎಂದು ರೋದಿಸುತ್ತಾಳೆ. ಅವಳ ಅಸಹಾಯಕತೆ ಎಷ್ಟಿತ್ತೆಂದರೆ ಈಗ ಅವಳಿಗೆ ತನ್ನ ರೋದನ ಎಲ್ಲಿಯಾದರೂ ರಾವಣನಿಗೆ ಕೇಳಿದರೆ ಆತ ತನಗೆ ಇನ್ನೇನಾದರೂ ಕೇಡನ್ನುಂಟು ಮಾಡಬಹುದೋ ಎನ್ನುವಷ್ಟು ಬೆದರಿದ್ದಾಳೆ. ರಥವಿಲ್ಲದ ರಾವಣ ಆಕೆಯನ್ನು ಎತ್ತಿಕೊಂಡು ಆಕಾಶಮಾರ್ಗದಲ್ಲಿ ಹಾರಿಹೋಗುತ್ತಾನೆ. ಆಗ ನಕ್ಷತ್ರಗಳೆಲ್ಲವೂ ಮಂಕಾಗಿ ಲೋಕವೆಲ್ಲವೂ ಸೀತೆಯ ಗೋಳನ್ನು ಕೇಳಿ ಸ್ತಬ್ಧವಾಗಿಬಿಟ್ಟವು.
ನಾಸ್ತಿ ಧರ್ಮಃ ಕುತಸ್ಸತ್ಯಂ ನಾರ್ಜವಂ ನಾನೃಶಂಸತಾ.
ಯತ್ರ ರಾಮಸ್ಯ ವೈದೇಹೀಂ ಭಾರ್ಯಾಂ ಹರತಿ ರಾವಣಃ৷৷ಅ.52.41৷৷
ಸಾಧ್ವಿಯಾದ ರಾಮನ ಭಾರ್ಯೆಯಾದ ವೈದೇಹಿಯನ್ನು ರಾವನನು ಸೆಳೆದೊಯ್ಯುತ್ತಿದ್ದಾನೆ. ಅಯ್ಯೋ! ಧರ್ಮವೆಲ್ಲಿದೆ, ಸತ್ಯವೆಲ್ಲಿದೆ, ಋಜುತ್ವ ದಯಾಪರತೆ ಯಾವುದೂ ಈಗ ಇಲ್ಲವಾಗಿದೆ ಎನ್ನುತ್ತಾ ಕಾಡಿನ ಪ್ರಾಣಿಗಳೆಲ್ಲ ರಾವಣ ಈ ದೌಷ್ಟ್ಯವನ್ನು ನೋಡಿ ಎಲ್ಲ ಪ್ರಾಣಿಗಳು ಗುಂಪು ಗುಂಪಾಗಿ ಕುಳಿತು ದುಃಖಿಸುತ್ತಿದ್ದವಂತೆ.
ಆರು ಕೋಟಿ ವರ್ಷಗಳ ಕಾಲ ಜಗತ್ತನ್ನು ರೋದಿಸುವಂತೆ ಮಾಡಿದ ರಾವಣತ್ವದ ಅಂತ್ಯ ಸೀತೆಯ ಅಪಹಾರದ ನೆವದಿಂದ ಪರಾಕ್ರಮಿಯಾದ ರಾಮನಿಂದ ಆಗುವುದೆಂದು ಹಣೆಬರಹ ಬರೆದ ಬ್ರಹ್ಮ ಮತ್ತು ಅದನ್ನು ದಿವ್ಯ ದೃಷ್ಟಿಯಿಂದ ಅರಿತ ಋಷಿಮುನಿಗಳು ಮಾತ್ರ ಸಂತಸ ಪಟ್ಟರು ಎಂಬಲ್ಲಿಗೆ ಸೀತಾಪಹಾರದ ಮುಕ್ತಾಯವಾಗಿ ರಾವಣ ವಧೆಗೆ ನಾಂದಿಯಾಯಿತು.
ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಸೀತಾಪಹಾರದ ಹಿಂದಿನ ಕುತೂಹಲಕಾರಿ ವಿಷಯಗಳು