Site icon Vistara News

ಧವಳ ಧಾರಿಣಿ ಅಂಕಣ: ಧರ್ಮಪ್ರಜ್ಞೆ ಸದಾ ಜಾಗೃತವಾಗಿರುವ ಶೃಂಗಾರದ ಪ್ರತಿಮೆ

shakuntala1

ಭಾಗ 2: ಪಾತ್ರವೊಂದು ರೂಪವೆರಡು: ಶಕುಂತಲಾ

ಕಾಡಿಗೆ ಬೇಟೆಗೆಂದು ಬಂದ ದುಷ್ಯಂತ, ಶಕುಂತಲೆಯ ಒಲವನ್ನು ಸೂರೆಗೈದನೆಂಬ ಎರಡು ಕವಿಗಳ ಚಿತ್ರಣವನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವೆ. ಇನ್ನು ಮುಂದೆ ಒಂದೇ ಪಾತ್ರ ಎರಡೂ ಕವಿಗಳ ಲೇಖನಿಯಲ್ಲಿ ಅರಳಿನಿಂತ ಬಗೆಯನ್ನು ವಿವೇಚಿಸೋಣ.

ಗಾಂಧರ್ವ ವಿಧಿಯಲ್ಲಿ ಲಗ್ನವಾದ ನಂತರ ದುಷ್ಯಂತನಿಗೆ ಹೆದರಿಕೆ ಪ್ರಾರಂಭವಾಯಿತು. ಎಲ್ಲಿಯಾದರೂ ಕಣ್ವರು ಬಂದು ನೋಡಿದರೆ… ಗಾಂಧರ್ವ ವಿವಾಹದ ವಿಷಯ ತಿಳಿದು ಕುಪಿತರಾಗಿ ಶಾಪ ಕೊಟ್ಟರೆ… ಹೀಗೆ ಚಿಂತಿಸುತ್ತಲೇ ಆತ ತನ್ನ ಸಮಗ್ರ ಸೇನಾಬಲಸಹಿತನಾಗಿ ಅರಮನೆಯನ್ನು ಸೇರಿಯೇಬಿಟ್ಟ. ಕಾಳಿದಾಸನಲ್ಲಿ ಕಣ್ವರು ಓರ್ವ ಕನ್ಯಾಪಿತೃವಿನಂತೆ ಕಾಣಿಸಿಕೊಂಡರೆ ಮಹಾಭಾರತದಲ್ಲಿ ಅವರು ನಿಜವಾಗಿ ತಪಸ್ವಿಯಾಗಿ ಇದ್ದಾರೆ. ಎರಡೂ ಕಡೆ ಗುಣ ಸ್ವಭಾವದಲ್ಲಿ ತಮ್ಮ ಹೆಸರಿಗೆ ತಕ್ಕಂತಹ ಘನತೆವೆತ್ತ ವ್ಯಕ್ತಿ ಅವರು. ಅವರಿಗೆ ಶಕುಂತಲೆಯ ಮೇಲೆ ದೋಷ ಕಾಣಿಸುವುದಿಲ್ಲ. ಶಕುಂತಲೆ ಮತ್ತು ದುಷ್ಯಂತರ ಮಿಲನ ಪ್ರಾಕೃತಿಕವಲ್ಲ, ಆಕೆ ಆಶ್ರಮದಲ್ಲಿ ಬೆಳೆದವಳು. ಆಕೆಗೆ ಕನ್ಯೆಯರಿಗೆ ಇರಬೇಕಾದ ಸಂಸ್ಕಾರದ ಅರಿವು ಚೆನ್ನಾಗಿದೆ. ಅವರಿಬ್ಬರ ಮಿಲನವೆನ್ನುವುದು ಲೋಕಲ್ಯಾಣಕ್ಕಾಗಿ ಆಗಬೇಕಾಗಿದೆ. ಅದರೆ ಮೂಲದಲ್ಲಿ ಈ ಇಬ್ಬರ ಮಿಲನವೆನ್ನುವುದು ಆಕಸ್ಮಿಕ. ಪ್ರೀತಿಯೆನ್ನುವುದು ಅವಳಲ್ಲಿ ಅಂಕುರವಾದರೂ ತನ್ನ ಭವಿಷ್ಯದ ಭದ್ರತೆಗಾಗಿ ರಾಜನಿಂದ ಪ್ರತಿಜ್ಞೆ ಮಾಡಿಸಿಕೊಂಡ ನಂತರವೇ ಆಕೆ ಕೂಡುತ್ತಾಳೆ. ಭವಿಷ್ಯದ ಕುರಿತು ಸ್ತ್ರೀಗೆ ಸಹಜವಾಗಿ ಇರಬೇಕಾದ ಕನಸುಗಳನ್ನು ನನಸಾಗಿ ಮಾಡಿಕೊಳ್ಳಲು ದುಷ್ಯಂತನನ್ನು ನಂಬಬಹುದೆಂದು ಆಕೆಗೆ ಅನಿಸುತ್ತದೆ. ಅವಳು ತನ್ನ ತಂದೆ ಕಣ್ವರಲ್ಲಿ ವಿಷಯವನ್ನು ತಿಳಿಸುವಾಗ ನೇರವಾಗಿಯೇ ಅರುಹುತ್ತಾಳೆ. ತನ್ನ ಪತಿ ಯಾವತ್ತಿಗೂ ಧರ್ಮಮಾರ್ಗದಲ್ಲಿ ನಡೆಯಬೇಕೆಂದೂ ಆತನ ರಾಜ ಪದವಿಯು ಭದ್ರವಾಗಿರಬೇಕೆಂದು ವರವನ್ನು ಕೇಳಿ ಪಡೆಯುತ್ತಾಳೆ.

ಇಲ್ಲೆಲ್ಲ ಆಕೆಯಲ್ಲಿನ ಪ್ರೌಢತೆಯನ್ನು ಮತ್ತು ವಿವೇಕವನ್ನು ಗಮನಿಸಬಹುದು. ಕಾಳಿದಾಸನ ದುಷ್ಯಂತ ತನ್ನ ಗುರುತಿಗೆ ಉಂಗುರ ಕೊಟ್ಟು ಅದರಲ್ಲಿರುವ ತನ್ನ ಹೆಸರನ್ನು ದಿನಕ್ಕೊಂದರಂತೆ ಎಣಿಸುತ್ತಿರು, ಅಷ್ಟರೊಳಗೆ ಕರೆಸಿಕೊಳ್ಳುವೆ ಎಂದು ಹೋಗಿದ್ದ. ಕಾಳಿದಾಸನಿಗೆ ದುಷ್ಯಂತ ರಮ್ಯನಾಯಕ. ಆತನಲ್ಲಿ ರಾಜರಿಗೆ ಸಹಜವಾಗಿ ಇರಬೇಕಾದ ಸೌಂದರ್ಯಪ್ರಜ್ಞೆಯ ಆಶ್ವಾಸನೆ ಇದೆ. ಮಾಲವಿಕಾಗ್ನಿಮಿತ್ರದಲ್ಲಿ ನಾಯಕ ಅಗ್ನಿಮಿತ್ರ ತನ್ನ ರಾಣಿ ಧಾರಿಣಿಯ ಎದುರು ಕುಬ್ಜನಾಗಿಬಿಡುತ್ತಾನೆ. ವಿಕ್ರಮೋರ್ವಶೀಯದಲ್ಲಿ ಪುರೂರವ ವಿಪ್ರಲಂಭ ಶೃಂಗಾರದಲ್ಲಿ ತೋಯುತ್ತಾನೆ. ಈ ಎರಡರಲ್ಲಿಯೂ ನಾಯಕರಿಬ್ಬರೂ ನಾಟ್ಯಶಾಸ್ತ್ರದ ನಾಯಕ ಲಕ್ಷಣಕ್ಕೆ ಅನುಗುಣವಾಗಿಲ್ಲ. ವಿಮರ್ಶಕರು ಕಾಳಿದಾಸನಲ್ಲಿ ಈ ದೋಷವನ್ನು ಹುಡುಕುತ್ತಾರೆ. ಅದರೆ ಶಾಕುಂತಲಾದ ನಾಯಕ ಮಾತ್ರ ಎಲ್ಲಿಯೂ ನಾಟ್ಯಶಾಸ್ತ್ರದ ನಾಯಕನಲ್ಲಿರಬೇಕಾದ ಗುಣಗಳಿಗಿಂತ ಭಿನ್ನನಾಗಿರುವುದಿಲ್ಲ. ದುಷ್ಯಂತ ಅರಮನೆಗೆ ಹೋದಾಗ ತೋರುವ ಉದಾಸೀನ ಭಾವಕ್ಕೆ ಕಾರಣ ಯಾವ ಸಂಬಂಧವೂ ಇಲ್ಲದ ದೂರ್ವಾಸರನ್ನು ಸೃಷ್ಟಿಸಿ ಓದುಗರ ಆಕ್ಷೇಪವನ್ನು ಅವರ ಮೇಲೆ ತಂದು ದುಷ್ಯಂತನನ್ನು ಪಾರುಮಾಡುತ್ತಾನೆ. ಅದರೆ ವ್ಯಾಸರಲ್ಲಿ ಹಾಗಿಲ್ಲ. ಅರಮನೆಗೆ ಹೋದ ರಾಜ ಶಕುಂತಲೆಯನ್ನು ಮರೆತುಬಿಡುತ್ತಾನೆ. ಆಕೆ ಮೂವತ್ತಾರು ತಿಂಗಳ ದೀರ್ಘಕಾಲದ ಗರ್ಭವತಿಯಾಗಿ ಮಗ ಭರತನನ್ನು ಹಡೆದಳು. ಆರು ವರ್ಷ ಕಳೆದರೂ ದುಷ್ಯಂತನ ಸುಳಿವಿಲ್ಲದಾಗ ಕಣ್ವರೇ ಆಕೆಯನ್ನು ದುಷ್ಯಂತನ ಪಟ್ಟಣಕ್ಕೆ ಬಿಟ್ಟುಬರುವಂತೆ ತನ್ನ ಶಿಷ್ಯರನ್ನು ಕಳಿಸುತ್ತಾರೆ.

ಕಥೆ ತಿರುವನ್ನು ಪಡೆದುಕೊಳ್ಳುವುದು ಇಲ್ಲಿಯೇ. ಶಾಕುಂತಲಾದಲ್ಲಿ ಈಕೆ ದುಷ್ಯಂತನ ಪ್ರೇಮದಲ್ಲಿ ಮೈಮರೆತ ಅಭಿಸಾರಿಕೆ. ಆಕೆಯ ಮನದಲ್ಲಿ ದುಷ್ಯಂತನ ಚಿತ್ರಣದ ಹೊರತಾಗಿ ಲೌಕಿಕದ ಅರಿವಿಲ್ಲ. ವನದಲ್ಲಿನ ಜಿಂಕೆ, ಮಾಮರವನ್ನು ಹಬ್ಬಿದ ಮಲ್ಲಿಗೆ ಚಕ್ರವಾಕ ಪಕ್ಷಿ ಇವೆಲ್ಲವೂ ಆಕೆಯ ಕೋಮಲ ಸ್ವಭಾವವನ್ನು ವರ್ಣಿಸುತ್ತದೆ. ಈ ಭಾಗದಲ್ಲಿ ಆಕೆ ವಾಸಕಸಜ್ಜಾ ನಾಯಿಕೆಯಿಂದ ವಿರಹೋತ್ಕಂಟಿತ ನಾಯಿಕೆಯಾಗಿ ಬದಲಾಗಿದ್ದಾಳೆ. ಆದರೆ ಮೂಲದ ಪ್ರಕಾರ ಶಕುಂತಲೆಯಲ್ಲಿ ಈ ಭಾವ ಯಾವುದೂ ಇಲ್ಲ, ಆಕೆ ರಾಜನಿಗೆ ತನ್ನ ರಾಜಕಾರ್ಯಬಾಹುಳ್ಯದಿಂದಾಗಿ ಕರೆದೊಯ್ಯಲಾಗಿಲ್ಲವೆಂದೇ ಭಾವಿಸಿದ್ದಾಳೆ. ಕಾಳಿದಾಸನ ಶಾಕುಂತಲೆಗೆ ಅವಳ ಸಖಿಯರು “ಮಹಾರಾಜರೇನಾದರೂ ಮರೆತಿದ್ದರೆ ಅವರಿಗೆ ಆತ ತೊಡಿಸಿದ ಉಂಗುರವನ್ನು ತೋರಿಸು” ಎಂದಾಗ ಇದೊಂದು ಅಪಶಕುನವೆನಿಸುತ್ತದೆ.

ಇಲ್ಲಿಯ ತನಕ ಕಥೆ ಸುಮಾರು ಒಂದೇ ತನಕ ಬರುತ್ತಿದ್ದರೆ ಇಲ್ಲಿಂದ ಮುಂದೆ ಈ ಇಬ್ಬರು ಶಕುಂತಲೆಯರ ವ್ಯಕ್ತಿತ್ವ ಸಂಪೂರ್ಣವಾಗಿ ಬೇರೆಯೇ ಆಗಿದೆ. ಎರಡರಲ್ಲಿಯೂ ಮಹಾರಾಜ ಶಕುಂತಲೆಯನ್ನು ಮರೆತುಬಿಟ್ಟಿದ್ದಾನೆ. ಒಂದರಲ್ಲಿ ಕಾರಣ ದೂರ್ವಾಸರ ಶಾಪವಾದರೆ ಇನ್ನೊಂದರಲ್ಲಿ ಆತ ಬೇಕೆಂದೇ ಮರೆತಿದ್ದಾನೆ. ಅಭಿಜ್ಞಾನದ ಶಾಕುಂತಲೆಗೆ ಕೊಟ್ಟ ಗುರುತಿನ ಉಂಗುರ ನೀರಿನಲ್ಲಿ ಬಿದ್ದುಬಿಟ್ಟಿದೆ. ರಾಜ ಆಕೆಯನ್ನು ಗುರುತಿಸುತ್ತಿಲ್ಲ. ಒಮ್ಮೆ ಆಕೆ ದಿಟ್ಟತನದಿಂದ ರಾಜನಿಗೆ ಎದುರುತ್ತರ ಕೊಡುತ್ತಾಳಾದರೂ ಮರುಕ್ಷಣ ತನ್ನ ದುರ್ವಿಧಿಯನ್ನು ನೆನೆದು ಅಸಹಾಯಕಳಾಗಿ ಬಿಕ್ಕುತ್ತಾಳೆ. ಕಣ್ವಾಶ್ರಮದಿಂದ ಬಂದ ಅವರ ಶಿಷ್ಯರು ಮತ್ತು ಗೌತಮಿ ಎಲ್ಲರೂ ಆಕೆಯ ಕೈ ಬಿಟ್ಟಾಗ ತಲೆ ಚಚ್ಚಿಕೊಂಡು ಅಳುವ ಆಕೆಯ ಚಿತ್ರಣ ಎಂಥವರ ಎದೆಯನ್ನೂ ಕರಗಿಸಿಬಿಡುತ್ತದೆ. ಇಲ್ಲಿ ರಾಮ ಸೀತೆಯನ್ನು ಮರಳಿ ಸ್ವೀಕರಿಸುವ ಹೊತ್ತಿನಲ್ಲಿ ನಡೆದ ಘಟನೆ ನೆನಪಿಗೆ ಬರುತ್ತದೆ. ವಾಲ್ಮೀಕಿ ಸೀತೆ ಪರಿಶುದ್ಧಳು ಎಂದು ಹೇಳಿದ ಮೇಲೂ ರಾಮನ ಅನುಮಾನ ಪರಿಹಾರವಾಗುವುದಿಲ್ಲ. ಆಗ ಆಕೆ ನೆನೆಯುವುದು ತನ್ನ ತಾಯಿ ಭೂಮಿಯನ್ನು. ಇಲ್ಲಿ ರಾಜ ಪುರೋಹಿತ ಈಕೆ ತನ್ನಲ್ಲಿರಲಿ, ಆಕೆ ಪ್ರಸವಿಸಿದ ನಂತರ ಚಕ್ರವರ್ತಿ ಲಕ್ಷಣದ ಮಗ ಜನಿಸಿದರೆ ಆಕೆಯನ್ನು ಪರಿಗ್ರಹಿಸಬಹುದೆಂದಾಗ ರಾಜ ಅರ್ಧ ಮನಸ್ಸಿನಿಂದ ಒಪ್ಪುತ್ತಾನೆ.

ಎಲ್ಲರೂ ಕೈ ಬಿಟ್ಟಾಗ ನೆನಪಾಗುವುದು ತಾಯಿಯೆ. ಇಲ್ಲಿ ಶಕುಂತಲಾ ನೆಲವನ್ನಲ್ಲ; ಮೇಲೆ ಆಕಾಶಕ್ಕೆ ಕೈ ಚಾಚುತ್ತಾಳೆ. ಆಗ ಮೇನಕೆ ಬಂದು ಈಕೆಯನ್ನು ತಬ್ಬಿಕೊಂಡು ಹಾರಿಹೋಗಿ ಮಾರೀಚ ಋಷಿಯ ಆಶ್ರಯದಲ್ಲಿ ಬಿಡುತ್ತಾಳೆ. ವ್ಯಾಸರ ಶಕುಂತಲೆ ಹಾಗಲ್ಲ; ಆಕೆಗೆ ರಾಜನ ಮಾತುಗಳನ್ನು ಕೇಳಿ ಆಶ್ಚರ್ಯವಾಗುತ್ತದೆ. ಒಮ್ಮೆ ಪ್ರಜ್ಞಾಹೀನಳಾಗುತ್ತಾಳಾದರೂ ಮರುಕ್ಷಣದಲ್ಲಿ ಸಾವರಿಸಿಕೊಂಡು ಚಂಡಿಯಂತೆ ಘೋರರೂಪಿಣೀಯಾದಳು. ಆಕೆಗೆ ತಪಸ್ಸಿನ ಪ್ರಭಾವದಿಂದ ರಾಜನನ್ನು ದಹಿಸಿ ಬಿಡುವ ಶಕ್ತಿಯಿದ್ದಿತು. ಶಾಪವನ್ನು ಕೊಡುವ ಸಾಮರ್ಥ್ಯವೂ ಇದ್ದಿತು. ಆದರೂ ತಪಸ್ಸಿನಿಂದ ಸಂಚಿತವಾದ ತೇಜಸ್ಸನ್ನು ಕೋಪದ ಕಾರಣದಿಂದ ವ್ಯಯಿಸಲು ಇಚ್ಚಿಸದ ಹೆಣ್ಣು ಅವಳಾಗಿದ್ದಳು. ನೇರವಾಗಿ ರಾಜನಲ್ಲಿ ತಾನ್ಯಾರೆಂದು ತಿಳಿದಿದ್ದರೂ ‘ನ ಜಾನಾಮಿ’ ‘ನ ಸ್ಮರಾಮಿ’ ಎಂದು ಹೇಳುವಾಗ ನಿನಗೆ ಸ್ವಲ್ಪವೂ ಸಂಕೋಚವಾಗಲಿಲ್ಲವೇ ಎಂದು ಕೇಳುತ್ತಾಳೆ. ಯಾವ ರಾಜ “ಆತ್ಮನೋ ಬನ್ಧು ರಾತ್ಮೈವ ಗತಿರಾತ್ಮೈವ ಚಾತ್ಮನಃ” ಎಂದು ಹೇಳಿ ತನ್ನನ್ನು ಕೂಡಿದ್ದನೋ ಆತನಿಗೆ ನಿನಗೆ ಹೃದಯಸಾಕ್ಷಿಯಿಲ್ಲವೇ ಎಂದು ಪ್ರಶ್ನೆ ಮಾಡುತ್ತಾಳೆ. ಆತ್ಮದ್ರೋಹವನ್ನು ಮಾಡಿಕೊಳ್ಳಬೇಡ, ಆತ್ಮದ್ರೋಹಿ ಎಸಗದ ಪಾಪಗಳೇ ಇಲ್ಲವೆಂದು ಎಚ್ಚರಿಸುತ್ತಾಳೆ.

ಇಲ್ಲಿ ದುಷ್ಯಂತ ರಾಜನಿಗೆ ಅನುಗುಣವಾಗಿ ವ್ಯವಹರಿಸುವುದಿಲ್ಲ. ಆಕೆ ಆಡುವ ಒಂದೊಂದು ಮಾತೂ ಧರ್ಮಶಾಸ್ತ್ರಕ್ಕೆ ಅನುಗುಣವಾಗಿದೆ. “ಪ್ರಪಂಚದಲ್ಲಿ ಸೂರ್ಯ, ಚಂದ್ರ, ವಾಯು, ಅಗ್ನಿ, ಅಂತರಿಕ್ಷ, ಭೂಮಿ, ಜಲ, ಹೃದಯ, ಯಮ, ಹಗಲು-ರಾತ್ರಿ, ಎರಡು ಸಂಧ್ಯೆಗಳು ಮತ್ತು ಧರ್ಮ ಇವರೆಲ್ಲರೂ ಮನುಷ್ಯ ಮಾಡುವ ಎಲ್ಲ ಕಾರ್ಯಗಳನ್ನೂ ಎಲ್ಲ ಸಮಯದಲ್ಲಿಯೂ ತಿಳಿಯುತ್ತಿರುತ್ತಾರೆ” ಎಂದು ಎಚ್ಚರಿಸುತ್ತಾಳೆ. “ಸ್ತ್ರೀ ಮಾನವನ ಜನ್ಮ ಕ್ಷೇತ್ರ, ಜನ್ಮಭೂಮಿಯಷ್ಟೇ ಆಕೆಯೂ ಪವಿತ್ರಳು, ಈ ಕಾರಣದಿಂದ ಸ್ತ್ರೀಯರು ತಮ್ಮ ಪತಿಗಳಿಗೆ ಸನಾತನವಾದ ಪುಣ್ಯಕ್ಷೇತ್ರವೂ ಆಗಿದ್ದಾಳೆ. ತನ್ನ ತೊಡೆಯ ಮೇಲೆ ಆಡುತ್ತಿರುವ ಈ ನಿನ್ನ ನಿಜ ಪುತ್ರನನ್ನು ನೋಡಿ ನಿನ್ನ ಆತ್ಮಸಾಕ್ಷಿಯಂತೆ ಮಾತಾಡು” ಎಂದು ಚುಚ್ಚುತ್ತಾಳೆ. ನಿನ್ನಿಂದಲೇ ಜನಿಸಿದ ಮಗನಿಗೆ ಜಾತಕಕರ್ಮವನ್ನು ಮಾಡುವ ನಿನ್ನದಾದ ಕರ್ತವ್ಯದಿಂದ ಚ್ಯುತನಾಗಬೇಡ” ಎಂದು ಆತನ ಭಾವನೆಯನ್ನು ಮತ್ತು ಕರ್ತವ್ಯಪ್ರಜ್ಞೆಯ ಅರಿವನ್ನು ನೆನಪಿಗೆ ತಂದುಕೊಳ್ಳಲು ಪ್ರಯತ್ನಿಸುತ್ತಾಳೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶೃಂಗಾರದ ಪ್ರತಿರೂಪ ಮತ್ತು ಧರ್ಮಪ್ರಜ್ಞೆಯ ದಿಟ್ಟ ನಾರಿ ಶಕುಂತಲೆ

ವಿಶ್ವಾಮಿತ್ರ ಮೇನಕೆಯರು ಹಸುಗೂಸಾದ ತನ್ನನ್ನು ನಿರ್ದಯದಿಂದ ಬಿಟ್ಟುಹೋದರು; ತನ್ನ ಅದೃಷ್ಟವೇ ಹೀಗಿರಬೇಕು ಎನ್ನುವುದು ಅವಳು ತಾಳುವ ನಿಲುವು. “ತನಗೆ ಈ ರಾಜ್ಯದ ಸಿರಿಸಂಪತ್ತು ಬೇಡ; ಪುನಃ ತಾನು ಕಣ್ವಾಶ್ರಮಕ್ಕೆ ಹೋಗುತ್ತೇನೆ, ಆದರೆ ನಿನ್ನ ಆತ್ಮಜನಾದ ಈ ಬಾಲಕನನ್ನು ಪರಿತ್ಯಾಗ ಮಾಡಬೇಡ” ಎನ್ನುವ ಶಾಕುಂತಲೆಗೂ ಅಸಹಾಯಕಳಾಗಿ ಗೋಳಿಡುವ ಕಾಳಿದಾಸನ ಶಾಕುಂತಲೆಗೂ ಅಜಗಜಾಂತರವಿದೆ. ದುಷ್ಯಂತ ಆಕೆಯನ್ನು ವೇಶ್ಯೆಯ ಮಗಳು ಎಂದು ಇಲ್ಲಿಯೂ ಕಟಕಿಯಾಡುತ್ತಾನೆ. ಆಗಲೂ ಆಕೆ ಕೋಪಗೊಳ್ಳುವುದಿಲ್ಲ. ತಾನು ಅಪ್ಸರೆಯ ಮಗಳಾಗಿರುವ ಕಾರಣ ಅಂತರಿಕ್ಷದಲ್ಲಿ ಹಾರಬಲ್ಲೆ, ಆದರೆ ರಾಜನಾದ ಆತ ಧರ್ಮಮಾರ್ಗವನ್ನು ಬಿಡಕೂಡದೆನ್ನುವ ಕಳಕಳಿಯನ್ನು ಹೊತ್ತೇ ಆಕೆ ತನ್ನ ವಾದವನ್ನು ಮುಂದುವರಿಸುತ್ತಾಳೆ. ರಾಜನಿಗೆ ಸತ್ಯವೆನ್ನುವ ಪರಬ್ರಹ್ಮದ ಕುರಿತು ಧರ್ಮಬೋಧನೆಯನ್ನು ಮಾಡುತ್ತಾಳೆ. ಕೊನೆಗೆ ಆಕೆ ರಾಜನ ಹತ್ತಿರ “ನಿನ್ನ ಸಂಬಂಧವೇ ತನಗೆ ಬೇಡ, ನಿನ್ನ ಸಂಬಂಧವೇ ನನ್ನ ಪುತ್ರನಿಗಿಲ್ಲದಿದ್ದರೂ ಈ ನನ್ನ ಪುತ್ರನು ಅಖಂಡ ಭೂಮಂಡಲವನ್ನು ಪರಿಪಾಲಿಸುತ್ತಾನೆ” ಎಂದು ತಾನೇ ಆತನನ್ನು ತನ್ನ ಸಂಸ್ಕಾರದ ಮತ್ತು ಸಾಮರ್ಥ್ಯದ ನೆಲೆಯಿಂದ ಬೆಳೆಸಬಲ್ಲೆ ಎನ್ನುವ ದಿಟ್ಟತನವನ್ನು ತೋರುವಾಗ ಮಹಾಕಾವ್ಯದಲ್ಲಿ ಬರುವ ನಾಯಕಿಯರಾದ ಸೀತೆ, ದ್ರೌಪದಿ, ಕುಂತಿಯರಿಗಿಂಲೂ ದಿಟ್ಟೆಯಾಗಿ ಮೂಡಿಬರುತ್ತಾಳೆ.

ಏಕಾಂಗಿಯಾಗಿ ದುಷ್ಯಂತನ ಸಭೆಯಲ್ಲಿಯೇ ಆತನನ್ನು ಎದುರಿಸುವ ಶಕುಂತಲೆ ಧರ್ಮದ ಚರ್ಚೆಯಲ್ಲಿ ಮತ್ತೋರ್ವ ಗಾರ್ಗಿಯಾಗಿ ಮೂಡಿಬರುತ್ತಾಳೆ. ಆಕೆಯ ಈ ದಿಟ್ಟ ನಿಲುವೇ ಅಶರೀರವಾಣಿಯ ರೂಪವನ್ನು ತಾಳಿ ದುಷ್ಯಂತನಿಗೆ ಈಕೆ ನಿನ್ನ ಪತ್ನಿ, ಸರ್ವದಮನ ನಿನ್ನದೇ ಮಗನೆನ್ನುವ ಮಾತುಗಳನ್ನು ಹೇಳಿರುವುದು. ಪ್ರಜೆಗಳು ತನ್ನನ್ನು ಸಂಶಯದ ದೃಷ್ಟಿಯಿಂದ ನೋಡಬಾರದು ಎನ್ನುವ ಕಾರಣಕ್ಕಾಗಿ ಹೀಗೆ ಮಾಡಿದೆ, ತನಗೆ ಈಕೆ ತನ್ನ ಧರ್ಮ ಪತ್ನಿ, ಆತ ತನ್ನ ಮಗನೆನ್ನುವುದು ಗೊತ್ತು ಎಂದು ದುಷ್ಯಂತ ತಿಪ್ಪೆಸಾರಿಸಿ ಒಪ್ಪಿಕೊಂಡು ತಾಯಿ ಮಗನನ್ನು ಅನಿವಾರ್ಯವಾಗಿ ಸ್ವೀಕರಿಸುತ್ತಾನೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ರಾಮಕೃಷ್ಣ ಪರಮಹಂಸರ ತಪಸ್ಸಿನ ಸಾಫಲ್ಯದ ಫಲ ಸ್ವಾಮಿ ವಿವೇಕಾನಂದ

ಅಭಿಜ್ಞಾನದ ಶಾಕುಂತಲೆ ಶೃಂಗಾರ ಮತ್ತು ಕರುಣ ರಸದ ಪಾತ್ರವಾದರೆ ಮಹಾಭಾರತದ ಶಕುಂತಲೆ ವಿವೇಕ ಮತ್ತು ಸಂಯಮಕ್ಕೆ ಸಾಕ್ಷಿಯಾಗುತ್ತಾಳೆ. ಆಕೆಯಲ್ಲಿ ಅತಿಥಿ ಸತ್ಕಾರದ ಕರ್ತವ್ಯ ಪ್ರಜ್ಞೆಯಿದೆ. ಆಶ್ರಮದ ಬದುಕಿಗಿಂತಲೂ ತನ್ನ ಬದುಕು ಉನ್ನತ ಸ್ಥಳಕ್ಕೆ ಹೋಗುವುದೆನ್ನುವ ಕಾರಣದಿಂದ ಆಕೆ ದುಷ್ಯಂತನ ಪ್ರಣಯಬಿಕ್ಷೆಯನ್ನು ಒಪ್ಪಿಕೊಳ್ಳುತ್ತಾಳೆ. ಕೋಪದ ಸಂದರ್ಭಗಳೆಲ್ಲಲ್ಲಾ ಅದನ್ನು ನಿಯಂತ್ರಣದಲ್ಲಿರಿಸಿ ತನ್ನ ವಾದದಿಂದಲೇ ರಾಜನನ್ನು ಗೆಲ್ಲುವ ಆಕೆಯ ದಿಟ್ಟನಿಲುವು ಮೆಚ್ಚುಗೆಯಾಗುತ್ತದೆ. ಯಾವ ರಾಜ ಬಣ್ಣದ ಮಾತಿನಿಂದ ಆತ್ಮ ತತ್ತ್ವವನ್ನು ಹೇಳಿ ಆಕೆಯನ್ನು ಕೂಡಿದ್ದನೋ ಆತನಿಗೆ ನಿಜವಾದ ಆತ್ಮತತ್ತ್ವವನ್ನು ಬೋಧಿಸುವ ಶಕುಂತಲೆ ಎಲ್ಲಿಯೂ ಅಬಲೆಯಾಗಿ ಕಾಣಿಸುವುದಿಲ್ಲ. ತನ್ನ ತಾಯಿ ತಂದೆ ಹಸುಗೂಸಾದ ತನ್ನನ್ನು ಬಿಟ್ಟುಹೋದ ರೀತಿಗೆ ಆವರಲ್ಲಿ ಆಕೆಗೆ ಗೌರವವಿಲ್ಲ. ತನ್ನ ಮಗ ಹಾಗೆ ಅನಾಥನಾಗಿ ಬಾಳಬಾರದೆನ್ನುವ ಕಳಕಳಿ ಆಕೆಯಲ್ಲಿದೆ.

ಕಾಳಿದಾಸನ ಶಕುಂತಲೆ ಸೀತಾ ಸಾವಿತ್ರಿಯರಂತೆ ಪತಿವ್ರತಾ ಸ್ತ್ರೀಯ ಲಕ್ಷಣವನ್ನು ಹೊಂದಿದ್ದರೆ ವ್ಯಾಸರ ಕನ್ಯೆ ಈ ಎಲ್ಲ ಮುಗ್ಧತೆಯ ನಡುವೆಯೂ ಅಗ್ನಿಯನ್ನು ತನ್ನೊಡಳೊಳಗಿಟ್ಟುಕೊಂಡ ಶಮೀವೃಕ್ಷದಂತೆ ಇದ್ದಾಳೆ. ಈಕೆಯ ಎದುರು ದುಷ್ಯಂತ ಪೂರ್ಣಾನಂದವನ್ನು ಹೊಂದಿದವ ಎನ್ನುವ ವ್ಯಾಸರ ಮಾತುಗಳೂ ಸಹ ಸೋಲುತ್ತವೆ; ಓರ್ವ ಕಾಮಪೀಡಿತ ವಂಚಕನಂತೆ ಕಾಣುತ್ತಾನೆ. ಈ ಇಬ್ಬರು ಶಕುಂತಲೆಯರಲ್ಲಿ ಮೊದಲನೆಯವಳು ತನ್ನ ಕುರಿತು ನಾಟಕ ರಚಿಸಿದ ಕವಿಯ ಕಾರಣದಿಂದ ಮಹತ್ವವನ್ನು ಪಡೆಯುತ್ತಾಳೆ. ಆಕೆ ಪ್ರೇಮಿಗಳ ಪವಿತ್ರ ಸಂಕೇತವಾಗುತ್ತಾಳೆ. ದುಷ್ಯಂತನನ್ನೂ ಸಹ ತನ್ನಷ್ಟೇ ಎತ್ತರಕ್ಕೆ ಕರೆದೊಯ್ಯುತ್ತಾಳೆ. ಕಾಳಿದಾಸನ ಈ ಕೋಮಲ ಕನ್ಯೆ ಈ ಕಾರಣಕ್ಕೆ ಇಷ್ಟವಾದರೆ ಮಹಾಭಾರತದ ಶಕುಂತಲೆ ಜೀವಚೈತನ್ಯದ ಸ್ವಭಾವವುಳ್ಳ ಹೆಣ್ಣಿನ ಪ್ರತೀಕವಾಗಿದ್ದಾಳೆ. ಸ್ತ್ರೀ ಸಹಜ ದೌರ್ಬಲ್ಯಕ್ಕೆ ಗುರಿಯಾದರೂ ಅದರಿಂದ ತಾನೇ ಹೊರಬರುವೆನೆನ್ನುವ ಗಟ್ಟಿಗಿತ್ತಿ ಈಕೆ. ಹಾಗಾಗಿ ಪ್ರತಿ ಹಣ್ಣಿನಲ್ಲಿಯೂ ಈ ದಿಟ್ಟತನವನ್ನು ಕಾಣಬಯಸುವ ಮಹಾಭಾರತದ ಶಕುಂತಲೆ ಹೆಚ್ಚು ಆಪ್ತಳಾಗುತ್ತಾಳೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ | ಜಗದ್ವಂದ್ಯನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ

Exit mobile version