Site icon Vistara News

ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕದ ಕನಸಿನ ವಿಹಾರ

king dasharatha

ದಶರಥ- ಭಾಗ 4: ಪಟ್ಟಾಭಿಷೇಕಕ್ಕಾಗಿ ಘನ ದೊರೆಯ ಜಾಣ ನಡೆ

ಧವಳ ಧಾರಿಣಿ ಅಂಕಣ: ದಿವ್ಯನ್ತರಿಕ್ಷೇ ಭೂಮೌ ಚ ಘೋರಮುತ್ಪಾತಜಂ ಭಯಮ್
ಸ್ಚಚಕ್ಷೇಥ ಮೇಧಾವೀ ಶರೀರೇ ಚಾತ್ಮನೋ ಜರಾಮ್. ৷৷ಅ. 1.42৷৷

“ಮೇಧಾವಿಯಾದ ದಶರಥನು (ಮಂತ್ರಿಗಳನ್ನು ಉದ್ದೇಶಿಸಿ) ಸ್ವರ್ಗಾಕಾಶ, ಭೂಮಿಯಲ್ಲಿ ದೃಷ್ಟಿಗೆ ಗೋಚರವಾಗುವಂತೆ ಉತ್ಪಾತಗಳಾಗುತ್ತಿವೆ. ಭಯಂಕರವಾದ ಕಾಲವು ಹತ್ತಿರದಲ್ಲಿಯೇ ಬರಲಿದೆ. ನನ್ನ ದೇಹದಲ್ಲಿ ದಿನದಿನಕ್ಕೆ ವಾರ್ಧಕವೂ ಹೆಚ್ಚಾಗುತ್ತಿದೆ.”

ದಶರಥ (king dasharath) ಅಶ್ವಪತಿ ರಾಜನಿಗೆ ಕೈಕೇಯಿಯನ್ನು (Kaikeyi) ಮದುವೆಯಾಗುವ ಸಮಯಕ್ಕೆ ಕೋಸಲ ರಾಜ್ಯವನ್ನು ಕನ್ಯಾಶುಲ್ಕವಾಗಿ ಕೊಟ್ಟಿದ್ದ. ಆದರೆ ಈಗ ಆತನಿಗೆ ತನ್ನ ಕುಲದ ಪರಂಪರೆಯನ್ನು ಮೀರಿ ಹೀಗೆ ಕನ್ಯಾಶುಲ್ಕವಾಗಿ ಕೊಡಲು ಮನಸ್ಸಿಲ್ಲ. ಆ ಕಾರಣಕ್ಕೆ ಭರತನನ್ನು ಕೇಕಯಕ್ಕೆ ಕಳುಹಿಸಿದ್ದಾನೆ. ಇತ್ತ ಅಯೋಧ್ಯೆಯಲ್ಲಿ ರಾಮ ತನ್ನ ಸಹಜವಾದ ಗುಣಗಳಿಂದಾಗಿ ಹೇಗೆ ಹೂವು ದುಂಬಿಯನ್ನು ಆಕರ್ಷಿಸುವುದೋ ಅದೇ ರೀತಿ ಎಲ್ಲರ ಮನವನ್ನೂ ಗೆದ್ದಿದ್ದನು. ಹಣ್ಣು ಬಲಿತಿದೆ, ಇದೇ ಸರಿಯಾದ ಸಮಯ ಎಂದು ದಶರಥ ತನ್ನ ಕೆಲವೇ ಮಂತ್ರಿಗಳನ್ನು ಕರೆಯಿಸಿ “ಪ್ರಕೃತಿಯಲ್ಲಿ ಕೆಲ ಉತ್ಪಾತಗಳನ್ನು ತಾನು ನೋಡುತ್ತಿದ್ದೇನೆ. ತಾನು ವೃದ್ಧನೂ ಆಗುತ್ತಿದ್ದೇನೆ. ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಸಮರ್ಥನಾದ ರಾಜನ ಆಯ್ಕೆಯ ಸಮಯ ಬಂದಿದೆಯೆಂದು” ಹೇಳುತ್ತಾನೆ. ಅವರಿಗೆ ಮಾತನಾಡಲು ಅವಕಾಶ ಕೊಡದೇ ತಕ್ಷಣವೇ ಪೂರ್ಣಚಂದ್ರನಂತೆ ಮುಖವುಳ್ಳ ರಾಮನು ರಾಜನಾದರೆ ಸೂಕ್ತವಾಗುವುದೆಂದು ಹೇಳುವನು. ರಾಮನೇ ರಾಜನಾಗಬೇಕೆಂಬ ಅತುಲವಾದ ಆಸೆ ತನಗಿದ್ದರೂ ಅದನ್ನು ತೋರಿಸಿಕೊಳ್ಳದೇ ಪ್ರಜೆಗಳ ಶ್ರೇಯೋಭಿವೃದ್ಧಿಗೋಸ್ಕರ ಇದೇ ಸೂಕ್ತವೆಂದು ಮತ್ತೆ ಮತ್ತೆ ಹೇಳುತ್ತಿದ್ದನು.

ಅವನ ಆತುರ ಎಷ್ಟಿತ್ತೆಂದರೆ ಸ್ವಲ್ಪವೇ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲೂ ಆತನಿಗೆ ಮನಸ್ಸಿರಲಿಲ್ಲ. ಆ ಕೂಡಲೇ ಪಟ್ಟಾಭಿಷೇಕಕ್ಕೆ (Sri Rama Pattabhisheka) ಬೇಕಾಗಿರುವ ಸಾಂಬಾರಗಳನ್ನು ಸಿದ್ಧಮಾಡಿಕೊಳ್ಳುವಂತೆ ಮಂತ್ರಿಗಳಿಗೆ ತ್ವರೆಮಾಡಿದನು. ರಾಜನೀತಿಯಲ್ಲಿ ರಾಜ ತನಗೆ ಅನುಕೂಲವಾದ ವಿಷಯಗಳನ್ನು ಒಪ್ಪಿಗೆ ಪಡೆಯಲು ಅನುಸರಿಸುವ ಮಾರ್ಗವೆಂದರೆ ಮೊದಲು ತನ್ನ ಮನಸ್ಸಿನಲ್ಲಿ ಯೋಜನೆಗಳನ್ನು ಚನ್ನಾಗಿ ಮನನಮಾಡಿಕೊಂಡಿರಬೇಕು. ಅದು ರಾಜ್ಯದ ಹಿತದ ಸಲುವಾಗಿ ಎನ್ನುವ ರೀತಿಯಲ್ಲಿ ಬಿಂಬಿಸಬೇಕು. ಅರಸವಿನ ಅಭಿಪ್ರಾಯ ಸರಿ ಎಂದು ಹೇಳಲು ಅಗತ್ಯವಿರುವ ಮಂತ್ರಿಗಳನ್ನೂ ಇತರರನ್ನೂ ಆ ಮೊದಲೇ ಮಾನಸಿಕವಾಗಿ ಸಿದ್ಧತೆ ಮಾಡಿಸಿರಬೇಕು. ಸಭಾಸದರಿಗೆ ಆ ಕುರಿತು ವಿಮರ್ಶಿಸಲು ಸಮಯ ನೀಡದೇ ವಿಷವನ್ನು ಮಂಡಿಸಿದ ತಕ್ಷಣ ತನ್ನ ಕಡೆಯವರು ಅದಕ್ಕೆ ಒಪ್ಪಿಗೆ ಸೂಚಿಸುವಂತೆ ಮಾಡಿ ಸಭೆಯ ಅಭಿಪ್ರಾಯವನ್ನು ಏಕತ್ರ ತರುವ ಚಾಕಚಕ್ಯತೆಯನ್ನು ಪ್ರದರ್ಶಿಸಬೇಕು. ಇದನ್ನು ಗುಂಪು ಒಪ್ಪಿಗೆ (Mass acceptance) ಎನ್ನುತ್ತಾರೆ. ಆ ಕೂಡಲೇ ದಶರಥನು ತನ್ನ ರಾಜ್ಯದ ನಗರ ಪ್ರದೇಶಗಳಿಂದ, ಗ್ರಾಮ ಪ್ರದೇಶಗಳಿಂದ ಜನರನ್ನು ಕರೆಯುವಂತೆ ಮಂತ್ರಿಗಳಿಗೆ ನಿರ್ದೇಶನವನ್ನು ನೀಡಿದನು. ಪೃಥ್ವಿಯ ಇತರ ರಾಜರನ್ನೂ ಸಹ ಕರೆಯಿಸಿದನು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಅವಸರದ ಕಾರಣದಿಂದ ಕೇಕಯ ರಾಜನನ್ನೂ ಜನಕನನ್ನೂ ಕರೆಯಲಿಲ್ಲವಂತೆ. ದಶರಥನ ಜಾಣತನ ಇಲ್ಲಿ ವ್ಯಕ್ತವಾಗುತ್ತಿದೆ. ಜನಕರಾಜನ ಕುರಿತು ಅವನಿಗೆ ಸಮಸ್ಯೆಯಿರಲಿಲ್ಲ. ಆದರೆ ಕೇಕಯ ರಾಜ ಅಶ್ವಪತಿಯೇನಾದರೂ ಬಂದಿದ್ದರೆ, ಮದುವೆಯ ಕಾಲಕ್ಕೆ ಕನ್ಯಾಶುಲ್ಕವನ್ನಾಗಿ ಕೋಸಲ ರಾಜ್ಯವನ್ನು ಕೊಟ್ಟಿರುವ ವಿಷಯವನ್ನು ಎತ್ತಿದ್ದರೆ ಎನ್ನುವ ಆತಂಕ ಆತನಿಗಿತ್ತು.

ಕೇವಲ ಅಶ್ವಪತಿಯನ್ನು ಬಿಟ್ಟರೆ ಅಪವಾದ ಬರುವುದೆಂದೆಣಿಸಿ ಜನಕನನ್ನು ಕರೆಯಲಿಲ್ಲ. ಕೇಳಿದರೆ ಬಹುದೂರವಿರುವ ಅವರನ್ನು ಕರೆಯಿಸಲಾಗಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಬಹುದು. ರಾಜರುಗಳೆಲ್ಲರೂ ಬಂದು ಸೇರಲು ಕೆಲ ದಿನಗಳು ಹಿಡಿದಿರಬಹುದು. ಎಷ್ಟು ಸಮಯದೊಳಗೆ ಅವರೆಲ್ಲರೂ ಬಂದು ಸೇರಿದ್ದರು ಎನ್ನುವುದನ್ನು ವಾಲ್ಮೀಕಿ ಹೇಳುವುದಿಲ್ಲ. ಬಂದವರಿಗೆಲ್ಲ ಉಳಿದುಕೊಳ್ಳಲು ಯಥೋಚಿತವಾದ ಬಿಡಾರದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಬಂದು ಸೇರಿದ ರಾಜರುಗಳ ಮತ್ತು ಪ್ರಜೆಗಳ ವಿವರವನ್ನು ನೋಡಿದರೆ ಒಂದು ನಾಲ್ಕೈದು ದಿನಗಳಷ್ಟಾದರೂ ಸಮಯಬೇಕು. ದೂರದ ಗುಡ್ಡಗಾಡು ಪ್ರದೇಶದ ಮಾಂಡಲಿಕರು ಬರಬಹುದಾದರೆ ಕೇಕಯ ಮತ್ತು ಮಿಥಿಲೆಯವರಿಗೆ ಬರಲು ಸಾಧ್ಯವಿಲ್ಲವೇ! ರಾಮನ ಗುಣಗಳ ಕುರಿತು ಎಲ್ಲರಲ್ಲಿಯೂ ಒಳ್ಳೆಯ ಅಭಿಪ್ರಾಯ ಅದಾಗಲೇ ಮೂಡಿರುವುದರಿಂದ ಒಮ್ಮೆ ರಾಜನಾಗಿ ಬಿಟ್ಟರೆ ಅಶ್ವಪತಿ ತೋರಿಕೆಗಾದರೂ ಸಮ್ಮತಿ ಸೂಚಿಸಲೇ ಬೇಕಾಗುತ್ತದೆ. ಅವರೇನಾದರೂ ಕಾರಣ ಕೇಳಿದರೆ ತನಗೆ ಬಿದ್ದ ದುಃಸ್ವಪ್ನ ಮತ್ತು ಶುಕುನದ ವಿಷಯವನ್ನು ಹೇಳಿದರಾಯಿತು, ಎನ್ನುವ ನೆವ ಆತನಲ್ಲಿತ್ತು.

ಜನಕನಿಗೆ ತನ್ನ ಅಳಿಯ ರಾಜನಾಗುವುದು ಸಹಜವಾಗಿಯೇ ಸಂತೋಷದ ಸಂಗತಿ. ಸಂಶಯಾತ್ಮಾ ವಿನಶ್ಯತಿ ಎನ್ನುವ ಗಾದೆಯೊಂದಿದೆ. ರಾಜನೀತಿಯಲ್ಲಿ ರಾಜನಾದವ ಸದಾ ಜಾಗರೂಕನಾಗಿರಬೇಕು ಎನ್ನುವ ಹಿನ್ನೆಲೆಯಲ್ಲಿ ಒಂದು ಸಂಶಯದ ಕಣ್ಣನ್ನು ಇತರರಮೇಲೆ ಇರಿಸಬೇಕೆಂದಿದೆ. ರಾಜನ ಮೂರನೆಯ ಕಣ್ಣು ಮತ್ತು ಕಿವಿಯಾಗಿ ಸಮರ್ಥ ಗೂಢಾಚಾರರನ್ನು ಇರಿಸಿಕೊಂಡು ಆ ಮೂಲಕ ವಿಷಯಗಳನ್ನು ಸಂಗ್ರಹಿಸಿ ವಿವೇಚಿಸಿಬೇಕೆಂದಿದೆ. ದಶರಥ ಇಲ್ಲಿ ರಾಮನ ಪಟ್ಟಾಭಿಷೇಕದ ವಿಷಯದಲ್ಲಿ ಬರಬಹುದಾದ ವಿಘ್ನಗಳ ಕುರಿತು ಆಲೋಚಿಸಿದ್ದಾನೆ. ಆದರೆ ರಾಮನ ಕುರಿತು ಅಶ್ವಪತಿಗಾಗಲಿ, ಯುಧಾಜಿತ್ತುಗಾಗಲಿ, ಕೈಕೇಯಿಗಾಗಲಿ, ಕೊನೆಗೆ ಭರತನಿಗಾಗಲಿ ಯಾವ ಅಭಿಪ್ರಾಯ ಇದೆ ಎನ್ನುವುದನ್ನು ಒಮ್ಮೆಯೂ ತಿಳಿದುಕೊಳ್ಳುವ ಪ್ರಯತ್ನವನ್ನು ಆತ ಮಾಡಿಲ್ಲ. ತನ್ನ ಮನಸ್ಸಿನೊಳಗೇ ಎಲ್ಲವನ್ನೂ ಕಲ್ಪಿಸಿಕೊಂಡು ಅಪರಾಧಿ ಪ್ರಜ್ಞೆಯಿಂದ ಹೇಗಾದರೂಸರಿ ರಾಮನನ್ನು ಪಟ್ಟಕ್ಕೆ ಏರಿಸಿಬಿಡಬೇಕೆನ್ನುವ ಹುಂಬತನ ಆತನಲ್ಲಿತ್ತು. ಹಾಗಾಗಿ ಆತ ತನ್ನ ಮನಸ್ಸಿನೊಳಗಿರುವುದನ್ನು ವಶಿಷ್ಠರಿಗೂ ಮೊದಲು ಹೇಳಿಲ್ಲ.

ಸಭೆಯನ್ನು ಸೇರಿಸಿದವನೇ ಎಲ್ಲರನ್ನೂ ಉದ್ಧೇಶಿಸಿ ಗಂಭೀರ ಧ್ವನಿಯಲ್ಲಿ ಮಾತನಾಡತೊಡಗಿದ. ಅವನ ಧ್ವನಿ ಭೇರಿಯ ಶಬ್ಧದಂತೆ ಇತ್ತು. ವಿಲಿಯಮ್ ಷೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ಜ್ಯುಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿ ತನ್ನ ಅಭಿಪ್ರಾಯವನ್ನು ಪ್ರಜೆಗಳು ಒಪ್ಪುವಂತೆ ಮಾಡಿದ ಭಾಷಣ ಬಹು ಪ್ರಸಿದ್ಧ. ಭಾರತೀಯ ಕಾವ್ಯದಲ್ಲಿ ಸಂದರ್ಭದಲ್ಲಿ ದಶರಥನ ಮಾತುಗಳು ಅದಕ್ಕೆ ಮಿಗಿಲಾಗಿದ್ದವು. ಎರಡರಲ್ಲಿಯೂ ಸಂಧರ್ಭ ಮತ್ತು ಉದ್ಧೇಶ ಬೇರೆ ಬೇರೆ. ಆದರೆ ಪರಿಣಾಮಕಾರಿ ಮಾತುಗಳಿಗೆ ಇದೊಂದು ಉದಾಹರಣೆಯಾಗಬಹುದು. ಸೂರ್ಯವಂಶದ ಶ್ರೇಷ್ಠ ದೊರೆಗಳನ್ನು ಉದಾಹರಿಸುತ್ತ “ತನ್ನ ಅರವತ್ತು ಸಾವಿರ ವರ್ಷಗಳ ಆಡಳಿತವನ್ನೂ ಸಮರ್ಥಿಸುತ್ತಾನೆ. ರಾಜ ಪರಿಪಾಲನೆಯೆನ್ನುವುದು ಸುಲಭವಲ್ಲ, ಧೈರ್ಯ-ಶೌರ್ಯ-ಪರಾಕ್ರಮಗಳಿಂದ ಮಾತ್ರವೇ ರಾಜ್ಯವನ್ನು ಆಳಲು ಸಾಧ್ಯವಿದೆ. ಜಿತೇಂದ್ರಿಯನಲ್ಲದಿರುವವ ರಾಜ್ಯಾಡಳಿತವನ್ನು ನಿರ್ವಹಿಸಲಾರ, ಇಂಥ ಹೊಣೆಯನ್ನು ಹೊತ್ತಿರುವ ತಾನು ನಿಶ್ಚರ್ಯವಾಗಿಯೂ ಬಹಳ ಬಳಲಿದ್ದೇನೆ” ಎಂದವನೇ ಮುಂದೆ ಈ ರಾಜ್ಯವನ್ನು ಆಳಲು ಇಲ್ಲಿರುವ ಬ್ರಾಹ್ಮಣಶ್ರೇಷ್ಠರ ಅನುಮತಿ ಪಡೆದು “ಪುಷ್ಯನಕ್ಷತ್ರಯುಕ್ತನಾಗಿರುವ ರಾಮನನ್ನು ತೊಡಗಿಸಿಕೊಳ್ಳುವೆ” ಎನ್ನುತ್ತಾನೆ. ದಶರಥನ ಜಾಣನುಡಿಗಳನ್ನು ಗಮನಿಸಿ “ನಾನು ಧರ್ಮದಿಂದ ರಾಜ್ಯವಳುತಿರುವಾಗ ನನ್ನ ಮಗನು ಯುವರಾಜನಾಗುವುದನ್ನ ನೀವು ಸ್ವಾಗತಿಸುವಿರೋ ಹೇಗೆ” ಎನ್ನುವ ಮಾತುಗಳನ್ನಾಡಿ ಭಾಷಣವನ್ನು ಮುಗಿಸುತ್ತಾನೆ. ನವಿರಾದ ಮಾತುಗಳು ಹೇಗಿತ್ತೆಂದರೆ ಪ್ರತಿರೋಧ ಇರಲೇ ಬಾರದು. ಅದಾಗಲೇ ರಾಮ ಪ್ರಜೆಗಳ ಮನಸ್ಸನ್ನು ಗೆದ್ದಿದ್ದ ಕಾರಣದಿಂದ ಪ್ರತಿರೋಧದ ಮಾತೇ ಬಂದಿಲ್ಲ. ಒಕ್ಕೋರಲಿಂದ ಒಪ್ಪಿಗೆ ಸೂಚಿಸಿದರು.

ತೇ ತಮೂಚುರ್ಮಹಾತ್ಮಾನಂ ಪೌರಜಾನಪದೈಸ್ಸಹ.
ಬಹವೋ ನೃಪ ಕಲ್ಯಾಣಾ ಗುಣಾಃ ಪುತ್ರಸ್ಯ ಸನ್ತಿ ತೇ৷৷ಅ .2.26৷৷

ಅಲ್ಲಿ ಸೇರಿದ ಪೌರ ಜಾನಪದ- ಪಟ್ಟಣಗಳ ಮತ್ತು ಹಳ್ಳಿಗಳಿಂದ ಬಂದ ಪ್ರಜಾಜನರು ಇನ್ನಿತರ ರಾಜರೊಡನೆ ಏಕಕಂಠದಲ್ಲಿ “ಮಹಾರಾಜಾ, ನಿನ್ನ ಮಗನಲ್ಲಿ ಅನೇಕ ಕಲ್ಯಾಣಗುಣಗಳಿವೆ. ಆತ ಬುದ್ಧಿವಂತನಾದವ, ದೇವಸೃದಶನಾದವ, ಗುಣವಂತನಾದವ ಎನ್ನುತ್ತಾ ಆತನು ಯುವರಾಜನಾಗಲು ಒಪ್ಪಿಗೆಯನ್ನು ಸೂಚಿಸಿದರು. ಅರಸನ ಸಂತಸಕ್ಕೆ ಪಾರವೇ ಇರಲಿಲ್ಲ. ವಶಿಷ್ಠರ ಹತ್ತಿರ ತಿರುಗಿದವನೇ ಚೈತ್ರಪಕ್ಷದ ಪುಷ್ಯನಕ್ಷತ್ರದ ಸುಮೂರ್ತವೇ ಒಳ್ಳೆಯದು ಎಂದು ತಾನೇ ನಿಶ್ಚಯಿಸಿದ್ದ ಮುಹೂರ್ತವನ್ನು ಸಾರಿಯೂ ಬಿಟ್ಟ. ಗಮನಿಸಬೇಕಾದ ಸಂಗತಿಯೆಂದರೆ ರಾಮಪಟ್ಟಾಭಿಷೇಕದ ಈ ಭಾಗದಲ್ಲಿ ಇನ್ನಿತರ ಕಾವ್ಯದಲ್ಲಿ ಬರುವಂತೆ ವಶಿಷ್ಠರಾಗಲಿ, ವಾಮದೇವರಾಗಲಿ ಇಟ್ಟ ಮೂಹೂರ್ತವಲ್ಲ. ದಶರಥನಿಗೆ ಮುಹೂರ್ತಗಳ, ಜ್ಯೋತಿಷ್ಯದ ಕಲ್ಪನೆಯಿತ್ತು. ರಾಮನದ್ದು ಪುನರ್ವಸು ನಕ್ಷತ್ರ, ಪುನರ್ವಸುವಿನ ನಂತರ ಬರುವ ನಕ್ಷತ್ರ ಪುಷ್ಯ ರಾಮನಿಗೆ ಸಂಪತ್ತನ್ನು ತರುವ ತಾರೆಯಾಗುತ್ತದೆ. ಅದೂ ಅಲ್ಲದೇ ಪುಷ್ಯ ನಕ್ಷತ್ರ ಕರ್ಕಾಟಕ ರಾಶಿಯಲ್ಲಿ ಬರುತ್ತದೆ. ಇದು ಚಂದ್ರನಿಗೆ ಸ್ವಕ್ಷೇತ್ರ. ಸ್ವಕ್ಷೇತ್ರದಲ್ಲಿ ಗ್ರಹಗಳು ಪ್ರಭಲರಾಗಿರುತ್ತವೆ. ಚಂದ್ರ ಮನಃಕಾರಕ. ರಾಜನಾದವನಿಗೆ ಮನಸ್ಸಿನ ಸ್ಥೈರ್ಯ ಬೇಕು. ರಾಮನಿಗೆ ರಾಜನಿಟ್ಟ ಮುಹೂರ್ತ ಸಂಪತ್ತು ಮತ್ತು ಧೈರ್ಯವನ್ನು ತಂದುಕೊಡುತ್ತದೆ ಎನ್ನುವ ಅರ್ಥವನ್ನು ಕೊಡುತ್ತದೆ. ಅವನ ಅವಸರ ಎಷ್ಟಿತ್ತೆಂದರೆ ತಕ್ಷಣವೇ ಸುಮಂತ್ರನಿಗೆ ರಾಮನನ್ನು ಕರೆತರಲು ಹೇಳಿಕಳಿಸಿಯೂಬಿಟ್ಟ. ಸುಮಂತ್ರ ರಾಮನನ್ನು ಯುವರಾಜನಿಗೆ ಒಪ್ಪುವ ಬಿರುದುಬಾವಲಿಗಳಿಂದಲೇ ಕರೆದುತಂದ. ದಶರಥನಿಗೆ ರಾಮನನ್ನು ನೋಡಿ ಆನಂದವೋ ಆನಂದ. ತನ್ನ ಒತ್ತಿನಲ್ಲಿಯೇ ಕುಳ್ಳಿರಿಸಿ ಪ್ರಜೆಗಳನ್ನು ತೋರಿಸಿ ಇವರೆಲ್ಲರೂ ನಿನ್ನನ್ನು ಯುವರಾಜನನ್ನಾಗಿ ನೋಡಲು ಕಾತರದಿಂದ ಇದ್ದಾರೆ ಎಂದು ಸಂಭ್ರಮಿಸಿದ. ಸಭಾಸದರ ಹರ್ಷೋದ್ಗಾರಗಳ ನಡುವೆ ರಾಮನೂ ಸಂತೋಷದಿಂದ ಒಪ್ಪಿ ತನ್ನ ಅರಮನೆಗೆ ಹಿಂತಿರುಗಿದ. ಸಭೆಯೂ ವಿಸರ್ಜಿಸಲ್ಪಟಿತು.

ದಶರಥ ರಾಮ ಪಟ್ಟಾಭಿಷೇಕದ ವಿಷಯದಲ್ಲಿ ತಾನೋರ್ವನೇ ಎಲ್ಲವನ್ನೂ ನಿಶ್ಚಯಿಸಿದ್ದಾನೆ. ಸಭಾಸದರೆಲ್ಲ ಹೊರಟ ಮೇಲೆ ಅಲ್ಲಿದ್ದ ಮಂತ್ರಿಗಳು ಮತ್ತು ವಶಿಷ್ಠರನ್ನು ಕರೆಯುತ್ತಾನೆ. ಮೊದಲು ಯಾವುದೋ ಒಂದು ನೆವದಿಂದ ಅವಸರದಲ್ಲಿ ಸಭೆ ಸೇರಿಸಿದವ, ತನಗೆ ಅನುಕೂಲವಾಗುವಂತೆ ರಾಮನ ವಿಷಯವನ್ನು ಪ್ರಸ್ತಾಪಿಸಿದ. ಅದಕ್ಕೆ ಒಪ್ಪಿಗೆ ಸಿಕ್ಕಮೇಲೆ ಚೈತ್ರಮಾಸದ ಶುಕ್ಲಪಕ್ಷದ ಪುಷ್ಯ ನಕ್ಷತ್ರದಂದು ಎಂದ. ಈಗ ಮಂತ್ರಾಲೋಚನೆಯಲ್ಲಿ ಇನ್ನಷ್ಟು ತನ್ನ ತಂತ್ರವನ್ನು ವಿಶದಪಡಿಸುತ್ತಾನೆ. ನಾಳೆಯೇ ಪುಷ್ಯ ನಕ್ಷತ್ರದ ಯೋಗವಿದೆ. ಹಾಗಾಗಿ ನಾಳೆಯೇ ಮುಹೂರ್ತವನ್ನು ನಿಗದಿಪಡಿಸಿ ಎನ್ನುತ್ತಾನೆ. ಅವರೆಲ್ಲರೂ ಹೋದಮೇಲೆ ಪುನಃ ರಾಮನನ್ನು ಕರೆಯಲು ಸುಮಂತ್ರನಿಗೇ ಹೇಳುತ್ತನೆ. ಸುಮಂತ್ರ ದಶರಥನ ಅಂತರಂಗವನ್ನು ಅರಿತ ನಂಬಿಗಸ್ತನಾಗಿದ್ದ. ರಾಮ ಮನೆಗೆ ಹೋಗಿದ್ದನೋ ಇಲ್ಲವೋ ಮತ್ತೊಮ್ಮೆ ದಶರಥನನ್ನು ನೋಡಲು ಕರೆ ಬಂದಿರುವುದರಿಂದ ಅವಸರವಾಗಿ ತಂದೆಯನ್ನು ಕಂಡ. ಇಲ್ಲಿ ರಾಜ ತನ್ನ ಅಂತರಂಗದ ಮಾತುಗಳನ್ನು ರಾಮನಲ್ಲಿ ಆಡುತ್ತಾನೆ. ಪಟ್ಟಾಭಿಷೇಕಕ್ಕೆ ಸಿದ್ದನಾಗಬೇಕಾದ ನೀನು ನಿನ್ನ ಪತ್ನಿಯೊಡನೆ ಉಪವಾಸವಿದ್ದು ಈ ರಾತ್ರಿ ದರ್ಭಾಸ್ತರಣದಲ್ಲಿ ಮಲಗಬೇಕು ಎನ್ನುತ್ತಾನೆ.

ದರ್ಭಾಸ್ತರಣವೆನ್ನುವುದು ಇಂದು ಸತ್ತಮೇಲೆ ಮಲಗಿಸುವ ಕ್ರಿಯೆಯಾಗಿದೆ. ಅದರ ಮೂಲ ಕಾರಣ ರಾಜನಾದವನಿಗೆ ತನ್ನದು ಎನ್ನುವುದಿರುವುದಿಲ್ಲ. ಸಮಷ್ಟಿಯ ಹಿತವನ್ನು ಆತ ಗಮನಿಸುವಾಗ ಸ್ವಾರ್ಥರಹಿತನಾಗಿರಬೇಕಾಗುತ್ತದೆ. ಸನ್ಯಾಸವನ್ನು ಸ್ವೀಕರಿಸುವ ಮೊದಲದಿನ ರಾತ್ರಿಯೂ ದರ್ಭಾಸ್ತರಣದಲ್ಲಿ ಮಲಗಬೇಕಾಗುತ್ತದೆ. ಸನ್ಯಾಸಿಯೂ ಪ್ರಾಪಂಚಿಕ ಸುಖವನ್ನು ಆತ್ಮಶ್ರಾದ್ಧ ಮಾಡಿಕೊಂಡು ತ್ಯಜಿಸುತ್ತಾನೆ. ಒಂದು ಅವಸ್ಥೆಯಿಂದ ಇನ್ನೊಂದಕ್ಕೆ ಹೋಗುವಾಗ ತನ್ನದೆನ್ನುವ ಎಲ್ಲವನ್ನೂ ಬಿಡಬೇಕೆನ್ನುವುದು ಇದು ಸೂಚಿಸುತ್ತದೆ. ರಾಜ ಆತ್ಮ ಶಾದ್ಧ ಮಾಡಿಕೊಳ್ಳುವುದಿಲ್ಲ. ಆತ ಪ್ರಾಪಂಚಿಕ ಪ್ರಪಂಚದಲ್ಲಿ ಇದ್ದೂ ಇಲ್ಲದಂತಿರಬೇಕು. ಆತ್ಮ ಸಂಯಮವನ್ನು ಆತ ಇಟ್ಟುಕೊಳ್ಳಬೇಕು. ಸನ್ಯಾಸಿಯಂತೆ ಆತ ಋಣಮುಕ್ತನಲ್ಲ; ಆತನಿಗೆ ದೇವಋಣ, ಋಷಿಋಣ, ಪಿತೃಋಣಗಳ ಜೊತೆಗೆ ವಿಪ್ರಋಣ ಮತ್ತು ಆತ್ಮಋಣಗಳಿವೆ. ಈ ಭೂಮಿಯನ್ನು ಪರಶುರಾಮ ಕ್ಷತ್ರಿಯರನ್ನು ಗೆದ್ದ ಮೇಲೆ ಕಾಶ್ಯಪರಿಗೆ ದಾನವಾಗಿ ಕೊಟ್ಟಿದ್ದ. ಅವರು ಪುನಃ ಅದನ್ನು ಕ್ಷತ್ರಿಯರಿಗೆ ರಾಜ್ಯವಾಳಲು ಕೊಟ್ಟಿದ್ದರು. ಆ ಕಾರಣಕ್ಕೆ ವಿಪ್ರಋಣವಿರುತ್ತದೆ. ಅದರ ನಿವಾರಣೆಗೆ ಆತ ದಾನ ಧರ್ಮಗಳನ್ನು ಮಾಡಬೇಕು. ಶರೀರವನ್ನು ಪುಷ್ಟಿಯುತವಾಗಿರಿಸಿಕೊಳ್ಳಲೇ ಬೇಕಾಗಿರುವುದರಿಂದ ವಿಹಿತವಾದ ಸುಖವನ್ನು ಅನುಭವಿಸಬೇಕು. ಸನ್ಯಾಸಿ ಪ್ರಾಪಂಚಿಕವನ್ನು ಬಿಟ್ಟವನಾದರೆ, ರಾಜ ಪ್ರಾಪಂಚಿಕದಲ್ಲಿದ್ದು ತನ್ನದೆನ್ನುವ ಸ್ವಾರ್ಥವನ್ನು ಬಿಟ್ಟಿರಬೇಕು. ನಾನು ಎನ್ನುವುದು ವಯಕ್ತಿಕ ನಾವು ಎನ್ನುವುದು ಸಮಷ್ಟಿ. ಹಾಗಾಗಿ ಸನ್ಯಾಸಿಗಳು ಮತ್ತು ರಾಜ ತನ್ನನ್ನು ಉದ್ಧೇಶಿಸಿ ಹೇಳುವಾಗ ನಾನು ಎನ್ನದೇ ನಾವು ಎನ್ನುತ್ತಾರೆ. ಒಂದೊಂದು ಮಾತಿನ ಮೂಲಕವೂ ವಾಲ್ಮೀಕಿ ದಶರಥನ ಜ್ಞಾನ ಮತ್ತು ಸಮಯಪ್ರಜ್ಞೆಯನ್ನು ಎತ್ತಿ ತೋರಿಸುತ್ತಾರೆ. ಆಧ್ಯಾತ್ಮ ಮತ್ತು ಲೌಕಿಕ ಎರಡರಲ್ಲಿಯೂ ಪಾರಂಗತನಾಗಿರುವುದರಿಂದ ಆತ ರಾಜರ್ಷಿಯಾಗಿದ್ದ.

ಶುಕ್ರನೀತಿಯಲ್ಲಿ ದಶರಥ ಪರಿಣಿತನಾಗಿದ್ದ. ಆತನಿಗೆ ಶತ್ರುಗಳು ಎಲ್ಲಿಯಾದರೂ ಯುವರಾಜನಾಗುವ ರಾಮನ ಮೇಲೆ ಆಕ್ರಮಣ ಮಾಡಿದರೆ ಎನ್ನುವ ಸಂಶಯವಿದೆ. ಅದಕ್ಕೆ ಆತ ರಾಮನ ಹತ್ತಿರ ವ್ರತಸ್ಥನಾದ ರಾಮ ನಿರಾಯುಧನಾಗಿ ಇರುತ್ತಾನೆ. ಹಾಗಾಗಿ ಆತನಿಗೆ ನಂಬಿಗಸ್ತರಾದ ಸ್ನೇಹಿತರು ಆತನನ್ನು ಬಹಳ ಜಾಗರೂಕತೆಯಿಂದ ಕಾಯಬೇಕು. ಅಂಥವರನ್ನು ನಿಯಮಿಸಿಕೋ ಎನ್ನುತ್ತಾನೆ. ರಾಜಕಾರಣದ ಅಂತರಂಗವನ್ನೆಲ್ಲ ರಾಮನಿಗೆ ರಾಜ ಹೇಳುತ್ತಾನೆ. ರಾಮ ಇಷ್ಟು ಅವಸರವೇಕೆ ಎಂದು ಕೇಳಿದ್ದನೋ ಏನೋ. ಆಗ “ಭವನ್ತಿ ಬಹುವಿಘ್ನಾನಿ ಕಾರ್ಯಾಣ್ಯೇವಂವಿಧಾನಿ ಹಿ” ಮಹತ್ತರವಾದ ಕಾರ್ಯವಾಗಬೇಕಾದರೆ ಅದಕ್ಕೆ ಅನೇಕ ವಿಧವಾದ ವಿಘ್ನಗಳು ಬರುತ್ತದೆ ಎಂದು ಎಚ್ಚರಿಸುತ್ತಾ “ಭರತ ಬರುವದರೊಳಗಾಗಿ ನಿನಗೆ ಪಟ್ಟಾಭಿಷೇಕವಾಗಬೇಕು” ಎನ್ನುವ ಮಾತುಗಳನ್ನು ಆಡುತ್ತಾನೆ. ಅದರೊಂದಿಗೆ ಭರತನ ಗುಣಗಳನ್ನು “ಆತ ಸತ್ಪುರುಷರ ಮಾರ್ಗದಲ್ಲಿಯೇ ನಡೆಯತಕ್ಕವನು, ಅಣ್ಣನಾದ ನಿನ್ನನ್ನೇ ಅನುಸರಿಸಿ ಇರುವವನು; ಧರ್ಮಾತ್ಮನು; ದಯಾಪರನು; ಜಿತೇಂದ್ರಿಯನು ಇದರಲ್ಲಿ ಯಾವ ಸಂಶಯವೂ ಇಲ್ಲ ಎನ್ನುತ್ತಾ

ಕಿನ್ತು ಚಿತ್ತಂ ಮನುಷ್ಯಾಣಾಮನಿತ್ಯಮಿತಿ ಮೇ ಮತಿಃ.
ಸತಾಂ ಚ ಧರ್ಮನಿತ್ಯಾನಾಂ ಕೃತಶೋಭಿ ಚ ರಾಘವ!৷৷ಅ.4.27৷৷

“ಮಾನವರ ಮನಸ್ಸು ಸ್ಥಿರವಲ್ಲವೆಂಬುದು ನನ್ನ ಖಚಿತವಾದ ಅಭಿಪ್ರಾಯವಾಗಿದೆ. ಧರ್ಮನಿರತರಾದ ಸತ್ಪುರುಷರ ಮನಸ್ಸೂ ಸಹ ತತ್ತನ್ನಿಮಿತ್ತವಾದ ರಾಗದ್ವೇಷಗಳಿಂದ ಕೂಡಿರುತ್ತದೆ.”

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಶ್ರೀರಾಮ ಪಟ್ಟಾಭಿಷೇಕ ಸಂಕಲ್ಪದ ಹಿಂದಿನ ಗೂಢಗಳು

ಸ್ವಭಾವತ ಸಾಧುವಾದ ಭರತನ ಮನಸ್ಸು ಕೇಕಯದವರ ಮಾತುಗಳನ್ನು ಕೇಳಿ ವಿರುದ್ಧವಾಗಿ ವರ್ತಿಸಬಹುದು ಎನ್ನುವ ಎಚ್ಚರಿಕೆ ಇಲ್ಲಿದೆ. ದಶರಥನಿಗೆ ತನ್ನ ಮಾತುಗಳ ಕುರಿತು ಎಷ್ಟೊಂದು ಅಳುಕಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಈ ಸಂಭಾಷಣೆಯ ಹೊತ್ತಿನಲ್ಲಿಯೇ ರಾಮ ಇದಕ್ಕೆ ಕಾರಣವನ್ನು ಕೇಳಿರಬಹುದು. ಅದಕ್ಕೆ ಕನ್ಯಾಶುಲ್ಕದ ವಿಷಯ ಬಂದಿರಬಹುದಾಗಿದೆ. ಭರತ ಅರಣ್ಯಕ್ಕೆ ಬಂದು ರಾಮನಿಗೆ ಪುನಃ ಅರಮನೆಗೆ ಬರಬೇಕೆಂದು ಒತ್ತಾಯಿಸಿದಾಗ ಕನ್ಯಾಶುಲ್ಕದ ವಿಷಯವನ್ನು ಭರತನಿಗೆ ತಿಳಿಸುತ್ತಾನೆ. ರಾಜ್ಯ ಭರತನದೇ ಆಗಿತ್ತು ಎನ್ನುವುದನ್ನು ಒತ್ತಿಹೇಳಿ ತಾನು ಅರಣ್ಯದಿಂದ ಬರಲಾರೆ ಎನ್ನುತ್ತಾನೆ. ರಾಮ ತನ್ನ ತಂದೆಯ ಹತ್ತಿರ ಈ ವಿಷಯವನ್ನು ಹೇಳಿ ರಾಜ್ಯವನ್ನು ಏಕೆ ನಿರಾಕರಿಸಲಿಲ್ಲ. ಎನ್ನುವುದಕ್ಕೆ ಕಾರಣ ವಾಲ್ಮೀಕಿ ವಿವರಿಸುವುದಿಲ್ಲ. ಇದು ಧರ್ಮಸೂಕ್ಷ್ಮದ ಪ್ರಶ್ನೆ. ಮೊದಲನೆಯದ್ದು ಯುವರಾಜ ಪದವಿ ಎನ್ನುವುದು ಸೂರ್ಯವಂಶದಲ್ಲಿ ಜ್ಯೇಷ್ಠಾನುವರ್ತಿ. ಅದು ಹಿರಿಯವನ ಕರ್ತವ್ಯವೂ ಹೌದು. ಎರಡನೆಯದು ರಾಮ ತನ್ನ ತಂದೆಯ ಮಾತನ್ನು ಮೀರಲಾರ. ರಾಜನಾದವ ತನ್ನ ರಾಜ್ಯವನ್ನು ಯಾರು ಯಾರಿಗೋ ಕೊಡುವಂತಿಲ್ಲ ಎನ್ನುವುದನ್ನು ಗಣತಂತ್ರ ವ್ಯವಸ್ಥೆಯನ್ನು ಅನುಸರಿಸುತ್ತಿರುವ ಅಯೋಧ್ಯೆಯ ವಿಷಯದಲ್ಲಿ ಮೊದಲೇ ನೋಡಿದ್ದೇವೆ. ದಶರಥ ಕರೆದ ಸಭೆಯಲ್ಲಿ ಸಭಾಸದರು ಭರತ ಬೇಡ ಎಂದು ಹೇಳಿಬಿಟ್ಟಿದ್ದರೆ ದಶರಥನ ಭಾಷೆ ವ್ಯರ್ಥವಾಗಿ ಹೋಗುತ್ತಿತ್ತು. ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ರಾಜನ ಮುತ್ತಿನ ಸತ್ತಿಗೆಯನ್ನು ಕೊಡಲಾಗುವುದಿಲ್ಲ ಎನ್ನುವ ಅಭಿಪ್ರಾಯವಿದೆ.

ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು
ಜನನಿಯಂ ಜನಕನಂ ನಲ್ಲಳಂ ದೈವವಂ
ಮನವಾರೆ ನಂಬಿ ನಚ್ಚಿರ್ದ ಪರಿವಾರಮಂ ಕೊಡುವ ಬಿಡುವತಿಕಲಿಗಳು
ಜನರೊಳಗೆ ಜನಿಸರೆಂದೆನಲು

ಯಜುರ್ವೇದದಲ್ಲಿಯೂ ರಾಜತ್ವವೆನ್ನುವುದು ಅರ್ಹರು ಮಾತ್ರ ಪಾಲಿಸಬೇಕಾದ ಹೊಣೆ ಎನ್ನುತ್ತದೆಯೇ ಹೊರತು ಕೇವಲ ಪಿತ್ರಾರ್ಜಿತವಾದ ಆಸ್ತಿಯಾಗಿರುವುದಲ್ಲ ಎಂದಿದೆ. “ವಿಶ್ವಾಮಿತ್ರರು ಆತನಿಗೆ ಎರಡೆರಡು ಸಾರಿ “ಕರ್ತವ್ಯಂ ದೈವಮಾನ್ಹಿಕಂ- ಕರ್ತವ್ಯವೇ ನಿನಗೆ ದೇವಪೂಜೆ” ಎಂದು ಹೇಳಿರುವುದರಿಂದ ದೊರೆತನವನ್ನು ರಾಮ ತಾನು ಪಾಲಿಸಬೇಕಾದ ಕರ್ತವ್ಯದ ಭಾಗವಾಗಿ ನೋಡಿದ್ದಾನೆ. ತಂದೆಯ ಮಾತು ಸಹ ಕರ್ತವ್ಯದ ಭಾಗವಾಗಿರುವುದರಿಂದ ಆತ ಮುಂದೆ ಭರತನಿಗೋಸ್ಕರ ಸಿಂಹಾಸನವನ್ನು ತ್ಯಜಿಸಿದ್ದಾನೆ. ಆ ವಿವರ ಮುಂದಿನ ಭಾಗದಲ್ಲಿ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಘನ ದಶರಥನಿಗೆ ನಿಲುಕದ ಅಪೂರ್ವ ಮಿಲನ

Exit mobile version