ನಮ್ಮ ನೆಲದಲ್ಲಿ ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎನ್ನುವುದು ಪ್ರಾಚೀನ ಕಾಲದ ಸೂಕ್ತದ್ರಷ್ಟಾರ ಋಷಿಗಳಿಂದಲೇ ತಿಳಿದು ಬರುತ್ತದೆ. ಮಾತೆತ್ತಿದರೆ ಜಾತಿಯ ಬಣ್ಣ ಬಳಿಯುವ, ವರ್ಣ ವ್ಯವಸ್ಥೆಯನ್ನು ಹೀಗಳೆಯುವ ಮಂದಿ ಸಿಗುತ್ತಿರುವಾಗ ಹಿಂದಿನ ನಮ್ಮ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆ ಹೇಗಿತ್ತು ಎನ್ನುವುದನ್ನು ಒಮ್ಮೆ ಗಮನಿಸುವೆ.
ಯತ್ಪುರುಷಂ ವ್ಯದಧುಃ ಕತಿಧಾ ವ್ಯಕಲ್ಪಯನ್ |
ಮುಖಂ ಕಿಮಸ್ಯ ಕೌ ಬಾಹೂ ಕಾ ಊರೂ ಪಾದಾ ಉಚ್ಯೇತೇ ||
ನಾರಾಯಣನೆನ್ನುವ ಋಷಿ ಪುರುಷನನ್ನು ದೇವತೆಯನ್ನಾಗಿ ಇಟ್ಟು ಸ್ತುತಿಸುವ ಇದು ಋಗ್ವೇದದ ಹತ್ತನೇ ಮಂಡಲದ 90ನೇ ಸೂಕ್ತ. ಇದನ್ನೇ ಪ್ರಸಿದ್ಧವಾದ ಪುರುಷ ಸೂಕ್ತ ಎಂದು ಕರೆಯಲಾಗುತ್ತದೆ. ಈ ಮೇಲಿನ ಮಂತ್ರ ಹನ್ನೊಂದನೆಯದು. ಈ ಪುರುಷ ಸೂಕ್ತದ ಕುರಿತು ಬರೆಯುವಷ್ಟು ದೊಡ್ದವನು ನಾನಲ್ಲದಿದ್ದರೂ, ಇದು ನನ್ನದೇ ಪರಿಮಿತಿಯಲ್ಲಿ ನನ್ನದೇ ಅನಿಸಿಕೆಯನ್ನು ಬರೆಯುವುದರಿಂದ ಇದರಲ್ಲಿ ತಪ್ಪುಗಳಿದ್ದರೆ ನನ್ನನ್ನು ಕ್ಷಮಿಸಿ.
ವಿರಾಟ್ ಪುರುಷನನ್ನು ಯಜ್ಞಾಹುತಿಯ ರೂಪದಲ್ಲಿ ಆರಾಧಿಸಿ ಅರ್ಪಿಸಲು ಸಂಕಲ್ಪಿಸಿದಾಗ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಅವನನ್ನು ಎಷ್ಟು ಪ್ರಕಾರವಾಗಿ ವಿಭಾಗಿಸಿದರು ಎನ್ನುವುದನ್ನೇ ‘ಕತಿಧಾ ವ್ಯಕಲ್ಪಯನ್’ ಎನಲಾಗಿದೆ. ಈ ವಿರಾಟ್ ಪುರುಷನ ಮುಖ ಯಾವುದು ಎನ್ನುವುದು ‘ಮುಖಂ ಕಿಮಸ್ಯ’ ಎಂದು ಹೇಳಲ್ಪಟ್ಟಿದೆ. ಇವನು ಬಾಹು(ಭುಜ)ಗಳು ಯಾವುವು ಎನ್ನುವುದನ್ನು ‘ಕೌ ಬಾಹೂ’ ಎಂದು ಸ್ತುತಿಸಲಾಗಿದೆ. ಇವನ ತೊಡೆ ಮತ್ತು ಪಾದಗಳು ಯಾವುವು ಎನ್ನುವುದನ್ನು ‘ಕಾ ಊರೂ’ ಎಂದು ಸ್ತುತಿಸಲಾಗಿದ್ದು, ಇವೆಲ್ಲಾ ಪ್ರಶ್ನಾ ರೂಪದಲ್ಲಿ ಉದ್ಭವವಾದಾಗ, ಅದಕ್ಕೆ ಉತ್ತರವಾಗಿ ಬರುವ ಮಂತ್ರ ಅನೇಕ ಅರ್ಥಗಳನ್ನು ಹೊರಹಾಕುತ್ತದೆ. ಸೃಷ್ಟಿಯ ಕ್ರಮವನ್ನು ಇದು ಸ್ಪಷ್ಟವಾಗಿ ಹೇಳಿದ್ದರೂ ಸೂಕ್ತಕಾರನ ಕಾಲದ ಸಾಮಾಜಿಕ, ರಾಜಕೀಯ ವ್ಯಾವಹಾರಿಕ ವ್ಯವಸ್ಥೆಯನ್ನು ಹೊರಹಾಕುತ್ತದೆ. ಈ ಪ್ರಶ್ನೆಗಳಿಗೆಲ್ಲ ಮುಂದಿನ ಮಂತ್ರ ಉತ್ತರವಾಗುತ್ತದೆ.
ಬ್ರಾಹ್ಮಣೋsಸ್ಯಮುಖಮಾಸೀತ್ ಬಾಹೂರಾಜನ್ಯಃ ಕೃತಃ |
ಊರೂ ತದಸ್ಯ ಯದ್ವೈಶ್ಯಃ ಪದ್ಭ್ಯಾಂ ಶೂದ್ರೋ ಅಜಾಯತ ||
ಇದನ್ನು ಅರ್ಥೈಸುವಾಗ ವಿರಾಟ್ ಪುರುಷನ ಮುಖವನ್ನು ಬ್ರಾಹ್ಮಣ ರೂಪ ಎನ್ನಲಾಯಿತು, ಕ್ಷತ್ರಿಯ ರೂಪವಾಗಿ ಅವನ ಬಾಹುಗಳು ಮಾಡಲ್ಪಟ್ಟವು, ತೊಡೆಗಳಿಂದ ವೈಶ್ಯರೂ, ಪಾದಗಳಿಂದ ಶೂದ್ರರೂ ಹುಟ್ಟಿದರು ಎನ್ನುವ ಅರ್ಥ ಧ್ವನಿಸಿದರೂ, ಇದನ್ನು ಇನ್ನೊಂದು ರೀತಿಯಲ್ಲಿಯೂ ನಾವು ಗಮನಿಸಬೇಕಾಗುತ್ತದೆ. ಇಂತಹ ವಿರಾಟ್ ಜಗತ್ತಿನ ವ್ಯವಸ್ಥೆಯನ್ನು ನಾವು ಗಮನಿಸಿದರೆ, ಇಲ್ಲಿ ಜಗತ್ತಿಗೆ ಸಚ್ಚಾರಿತ್ರ್ಯವನ್ನು, ಸುಸಂಸ್ಕೃತಿಯನ್ನು, ಆಚಾರವನ್ನು ಅನುಸರಿಸಿ ಆಚರಿಸಿ ಆದರ್ಶವನ್ನು ಸಮಾಜಕ್ಕೆ ಕೊಡುವವರಾಗಿರಬೇಕಾದವರು ಆದುದರಿಂದ ಮತ್ತು ಅಧ್ಯಯನ ಮತ್ತು ಅಧ್ಯಾಪನಗಳೆರಡನ್ನೂ ನಿರ್ವಹಿಸಿ ಪ್ರಜೆಗಳಿಗೆ ಮಾರ್ಗದರ್ಶನದ ಜೊತೆಗೆ ಒಂದು ಸಾಮಾಜಿಕ ವ್ಯವಸ್ಥೆಯ ಮುಖದಂತಿರಬೇಕಾದವನು ಬ್ರಾಹ್ಮಣ ಎಂದು ನಾವು ಭಾವಿಸಬೇಕು. ಅದೇ “ಬ್ರಾಹ್ಮಣೋsಸ್ಯ ಮುಖಮಾಸೀತ್” ಎಂದು ಜ್ಞಾನವನ್ನು ಪ್ರತಿನಿಧಿಸಲಿಕ್ಕೆ ಬ್ರಾಹ್ಮಣ್ಯ ಮತ್ತು ಬ್ರಾಹ್ಮಣ ಅವಶ್ಯ ಎನ್ನಿಸುತ್ತಾನೆ.
ಇನ್ನು ನಮ್ಮ ನೆಲ ಸುಭಿಕ್ಷವಾಗಿರಬೇಕು, ಸಂಪದ್ಭರಿತವಾಗಿರಬೇಕು, ನಮ್ಮನ್ನು ಎಲ್ಲಾ ರೀತಿಯಲ್ಲಿಯೂ ರಕ್ಷಿಸಿ ನಮ್ಮ ಅಭ್ಯುದಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಿ ಸಾಮರಸ್ಯ ಬೆಳೆಸಿ ನಿರ್ಭಯವಾಗಿ ಸುಖ ಸಂತೋಷದಿಂದಿರುವಂತೆ ಮಾಡಲು ತೋಳ್ಬಲ (ಪರಾಕ್ರಮಿಯಾದ)ದ ನಾಯಕನ ಅವಶ್ಯ ಇರುತ್ತದೆ. ಅದನ್ನೇ ಕ್ಷತ್ರಿಯ ಬಲ ಎನ್ನುವುದು. ಸಾಮ್ರಾಜ್ಯದ ಉನ್ನತಿಗೆ ಸಾಮ್ರಾಟ ಇರಬೇಕು. ಹೀಗೆ ತೋಳ್ಬಲದಲ್ಲಿ ಪರಾಕ್ರಮವನ್ನು ಹೊಂದಿದ ರಾಜರ ಅಭಯ ನಮಗೆ ಬೇಕು. ಅದು ವಿರಾಟ್ ಪುರುಷನ ಬಾಹುಗಳಂತಿರಲಿ ಎನ್ನುವುದು ʻಬಾಹೂ ರಾಜನ್ಯಃ ಕೃತಃ’ ಎನ್ನುವುದನ್ನು ಪ್ರತಿನಿಧಿಸುತ್ತದೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಆಚಾರ ವಿಚಾರ ಮತ್ತು ವ್ಯವಸ್ಥೆಗಳು ಸುಗಮವಾಗಿರಲು ಮತ್ತು ರಾಜನ ಆಡಳಿತ ಸುಸೂತ್ರವಾಗಿರಲು ದೇಶ ದೇಶಗಳ ನಡುವಿನ ವ್ಯವಹಾರಗಳು ಸುಸಂಬದ್ಧವಾಗಿರಬೇಕು. ವ್ಯವಹಾರ ಆಗೆಲ್ಲ ಇಂದಿನಂತೆ ಒಂದೆಡೆ ಅಂಗಡಿ ಅಥವಾ ಮಾರುಕಟ್ಟೆಯ ಕಲ್ಪನೆ ಇದ್ದಂತಿಲ್ಲ. ವ್ಯವಹಾರಕ್ಕಾಗಿ ಈಗಿನಂತೆ ಡೋರ್ ಡೆಲಿವರಿಯಲ್ಲದಿದ್ದರೂ ಊರಿಂದ ಊರಿಗೆ ತಿರುಗಿ ಮಾರಾಟಮಾಡುವ ವ್ಯವಸ್ಥೆಯಂತೂ ಇತ್ತು ಎನ್ನುವುದು ಋಗ್ವೇದದ ಕೆಲವೆಡೆ ಗಮನಿಸಬಹುದು. ಆದರೆ ಕ್ರಯ ವಿಕ್ರಯಗಳಲ್ಲಿ ಹಣದ ವಿನಿಮಯ ಇದ್ದಂತೆ ತೋರುತ್ತಿಲ್ಲ. ದಸ್ಯುಗಳು ಮತ್ತು ಪಣಿಗಳೆನ್ನುವ ಜನಾಂಗದವರು ವ್ಯಾಪಾರಿಗಳನ್ನು ಮತ್ತು ಯಾಜ್ಞಿಕರನ್ನು ಆಕ್ರಮಿಸಿ ಅವರ ಸಂಪತ್ತನ್ನು ಕೊಂಡೊಯ್ಯುತ್ತಿದ್ದುದು ಗಮನಿಸಿದರೆ ಪ್ರಾಯಶಃ ವ್ಯಾಪಾರ ವ್ಯವಹಾರ ನಡೆಯುತ್ತಿದ್ದಿರಲೇ ಬೇಕು. ಸರಸ್ವತೀ ಮತ್ತು ವಿಪಾಶಾ, ಸಿಂಧೂ ನದಿಯ ತಟದಲ್ಲಿ ಆಗಾಗ ಸುಲಿಗೆಗಳಾಗಿದ್ದು ಗಮನಿಸಬಹುದು. ಆದುದರಿಂದ ಅಂತಹ ಅಲೆದಾಟವನ್ನು ಸಮರ್ಥವಾಗಿ ನಿಭಾಯಿಸಿ ತೋಳ್ಬಲದ ರಕ್ಷಣೆಯಲ್ಲಿ ಕಾಲ್ಬಲವೂ ವೈಶ್ಯರಲ್ಲಿ ಸೇರಿರಲಿ ಎಂದೇ “ಊರೂ ತದಸ್ಯ ಯದ್ವೈಶ್ಯಃ” ಎಂದಿರುವುದು.
ಇದನ್ನೂ ಓದಿ | ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!
ಇನ್ನು ಈ ಕಾಲುಗಳು ಇಡೀ ಮನುಷ್ಯ ಶರೀರ ನಿಂತಿರಬೇಕಾದ ಪ್ರಮುಖ ಅಂಗ. ದೇಹವು ಸುಸ್ಥಿರವಾಗಿ ಇರಬೇಕಾದರೆ ಈ ಪಾದಗಳು ಸರಿಯಾಗಿರಲೇ ಬೇಕು. ಉಳಿದ ಅಂಗಗಳೆಲ್ಲಾ (ಅಂದರೆ ವ್ಯವಸ್ಥೆ) ಕ್ರಿಯಾತ್ಮಕವಾಗಿ ಕೆಲಸ ಮಾಡಲು ಕೊನೆಯದಾದ ಮತ್ತು ದೇಹದ ಸಮತೋಲನವನ್ನು ಕಾಯ್ದುಕೊಳ್ಳುವ ವ್ಯವಸ್ಥೆ ಬಹಳ ಅಗತ್ಯ ಎನ್ನುವುದನ್ನು “ಪದ್ಭ್ಯಾಂ ಶೂದ್ರೋ ಅಜಾಯತ” ಎನ್ನುವುದಾಗಿ ಹೇಳುತ್ತಾ ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರತಿಯೊಂದು ಹೇಗೆ ನಮಗೆ ಪ್ರಾಮುಖ್ಯ ಎನ್ನುವುದನ್ನೇ ವರ್ಣಾಶ್ರಮ ವ್ಯವಸ್ಥೆಯಡಿ ಹೇಳಲಾಗಿದೆ. ಅದನ್ನೇ ವಿರಾಟ್ರೂಪದ ವಿರಾಟ್ ಪುರುಷನ ವ್ಯವಸ್ಥೆಯಾಗಿ ಹೇಳಲಾಗಿದೆ.
ಇಂದಿನ ಸಮಾಜದಲ್ಲಿ ಇದಕ್ಕೆ ವೈರುಧ್ಯವನ್ನೇ ಕಾಣುತ್ತೇವೆ. ಆಚಾರದಲ್ಲಿ ಆದರ್ಶವನ್ನು ಬೋಧಿಸಬೇಕಾದವರು ಇಂದು ಅನಾಚಾರಿಗಳಾಗಿ ಕಾಣಿಸಿಕೊಳ್ಳುತ್ತಾರೆ, ಸಾಮಾಜಿಕ ಸುವ್ಯವಸ್ಥೆಗೆ ಇದರಲ್ಲಿ ಯಾವ ವ್ಯವಸ್ಥೆ ವಿರುದ್ಧವಾಗುತ್ತದೋ ಆಗ ಎಲ್ಲವೂ ಅಯೋಮಯವಂತೂ ನಿಶ್ಚಿತ. ಇದಕ್ಕಾಗಿ “ಬ್ರಾಹ್ಮಣೋsಸ್ಯ ಮುಖಮಾಸೀತ್” ಎನ್ನುವ ಪ್ರಾಚೀನ ವ್ಯವಸ್ಥೆ ನನಗೆ ಚೆನ್ನಾಗಿಯೇ ಕಾಣಿಸುತ್ತದೆ. “ಪದ್ಭ್ಯಾಂ ಶೂದ್ರೋ ಅಜಾಯತ” ಎನ್ನುವುದೂ ಸಾಮಾಜಿಕ ವ್ಯವಸ್ಥೆಗೆ ಬಹುಮುಖ್ಯ ಅನ್ನಿಸಿಬಿಡುತ್ತದೆ. ಆದರೆ ಇಂದಿನ ಜನ ಇದರಲ್ಲೇ ತಾರತಮ್ಯವನ್ನು ಕಲ್ಪಿಸಿಕೊಂಡು ಇಲ್ಲ ಸಲ್ಲದ ವೃಥಾಲಾಪವನ್ನು ಬಿಂಬಿಸುವುದು ಸಾಮಾನ್ಯವಾಗಿದೆ. ಮೇಲು ಕೀಳೆನ್ನುವ ಭಾವ ಬಹಳ ಪ್ರಾಚೀನದ್ದು ಎನ್ನುವ ಉದ್ಗಾರದೊಡನೆ ಹಳಿಯುವುದು ಸಾಮಾನ್ಯವಾಗಿದೆ. ಈ ನೆಲದ ವ್ಯವಸ್ಥೆ ಹೇಗಿತ್ತು ಮತ್ತು ಹೇಗಿರಬೇಕು ಎನ್ನುವುದನ್ನು ಇದು ಕಟ್ಟಿಕೊಡುತ್ತದೆ. ದೇಶದ ಅಭಿವೃದ್ಧಿಯಾಗಬೇಕಿದ್ದರೆ ಹಳ್ಳಿ ಹಳ್ಳಿಗಳು ಅಭಿವೃದ್ಧಿಯನ್ನು ಕಾಣಬೇಕು. ಈ ಹಳ್ಳಿಗಳೇ ಸಮರ್ಥವಾದ ಭಾರ ಹೊರುವ ಕಾಲುಗಳು. ಇಷ್ಟು ಅರ್ಥ ಮಾಡಿಕೊಂಡರೆ ಯಾರೂ ಮೇಲಲ್ಲ ಯಾರೂ ಕೆಳಗಲ್ಲ ಎನ್ನುವ ವಿಷಯ ವಿಷದವಾಗುತ್ತದೆ.
ಇದನ್ನೂ ಓದಿ | ಧೀಮಹಿ ಅಂಕಣ | ಕಾಲದೇಶದ ಸ್ಮರಣೆಯ ಮಹಾಸಂಕಲ್ಪ