ಪ್ರಾಚೀನ ನಮ್ಮ ನೆಲದಲ್ಲಿ ಸಪ್ತರ್ಷಿಗಳು ಅಂತ ಇದ್ದರು. ಇವರು ಪ್ರಾಯಶಃ ಇಂದ್ರನ ವ್ಯವಸ್ಥೆಯ ನೇರ ಹೊಣೆ ಹೊತ್ತವರು, ಸಾಮಾನ್ಯವಾಗಿ ಇವರು ಸಾಧನೆಯಲ್ಲಿಯೇ ಯಶಸ್ಸು ಪಡೆದು ಸಪ್ತರ್ಷಿಗಳ ಸ್ಥಾನ ಪಡೆದುಕೊಂಡವರು ಎನ್ನುವುದು ಅವರವರು ಕಂಡುಕೊಂಡ ವೈದಿಕ ಸೂಕ್ತಗಳಿಂದ ತಿಳಿದು ಬರುತ್ತದೆ. ಇವರು ಏಳು ಜನ ವೈಜ್ಞಾನಿಕ ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದಲ್ಲದೇ ರಾಜರ್ಷಿಗಳಾಗಿ ಮಂತ್ರಿ ಸ್ಥಾನವನ್ನೂ ಅಲಂಕರಿಸಿದ್ದರು. ಅಂದರೆ ರಾಜ ಪುರೋಹಿತನೇ ರಾಜನ ಆಪ್ತ ಸಲಹಾಕಾರನಾಗಿದ್ದ.
ಈ ಏಳು ಜನ ರಾಜನಿಗೆ ಸಲಹೆ ಕೊಡುವುದು ಒಂದು ದೃಷ್ಟಿಯಿಂದ ಆಡಳಿತಾತ್ಮಕ ನೆರವು ಅನ್ನಿಸಿದರೆ ಇನ್ನೂ ಒಂದು ಮುಖ್ಯ ಕೆಲಸ ಇವರು ನಿರ್ವಹಿಸುತ್ತಿದ್ದರು. ರಾಜನ ನ್ಯಾಯಸ್ಥಾನದ ಮುಖ್ಯಸ್ಥರಾಗಿ ನ್ಯಾಯ ನಿರ್ಣಯ ಮಾಡುತ್ತಿದ್ದರು. ಒಂದೊಮ್ಮೆ ರಾಜನೇ ತಪ್ಪು ಮಾಡಿದ ಆರೋಪ ಎದುರಿಸುತ್ತಿದ್ದಾಗ ಈ ಸಪ್ತ ಋಷಿಗಳಲ್ಲಿ ಮತ್ತೊಬ್ಬರು ಸೇರಿಕೊಂಡು ನ್ಯಾಯ ಒದಗಿಸುತ್ತಿದ್ದರು ಎನ್ನುವುದು ನಾಭಾನೇದಿಷ್ಟನೆನ್ನುವ ಋಗ್ವೇದದ ಹತ್ತನೇ ಮಂಡಲದ ಋಷಿ. ಇಲ್ಲಿ ನ್ಯಾಯಸ್ಥಾನ ಎನ್ನುವುದು ಆಡಳಿತದ ಅತ್ಯಂತ ಉನ್ನತ ಮಟ್ಟದ ಸ್ಥಾನ ಪಡೆದಿತ್ತು. ಹಿಂದೆಲ್ಲ ರಾಜರು ಆಸ್ಥಾನದಲ್ಲಿ ಕುಳಿತು ಆಡಳಿತ ಮಾಡುವುದು ಕಡಿಮೆ. ರಾಜರು ಸದಾ ಸಂಚಾರ ಮತ್ತು ಸದಾ ಯುದ್ಧ ಮತ್ತು ಶತ್ರುಗಳ ಕಡೆಗೆ ನಿಗಾ ವಹಿಸುವ ಕಾರ್ಯದಲ್ಲಿರುವಾಗ ನ್ಯಾಯಾಧೀಶರೇ ಇಡೀ ರಾಜ್ಯದ ಆಡಳಿತದ ಹಿಂದಿನ ರೂವಾರಿಯಾಗಿದ್ದರು ಎನ್ನುವುದು ವೇದ ಭಾಷ್ಯಗಳಿಂದ ತಿಳಿದು ಬರುತ್ತದೆ.
ದಿವೋದಾಸ ಎನ್ನುವ ಕಾಶಿಯ ರಾಜನೊಬ್ಬ ‘ವಶಿಷ್ಠ ಮಂಡಲ’ ಎನ್ನುವ ನ್ಯಾಯಸ್ಥಾನ ಇಟ್ಟುಕೊಂಡಿದ್ದ. ಇನ್ನು ವೇದಗಳಿಂದ ನಂತರಕ್ಕೆ ಬಂದಾಗ ವಾಜಸನೇಯನ ಮಗ ಯಾಜ್ಞವಲ್ಕ್ಯ ಜನಕನ (ಸೀತೆಯ ತಂದೆ ಅಲ್ಲ) ನ್ಯಾಯನಿರ್ಣಯದಲ್ಲಿಯೂ ಪಾಲ್ಗೊಂಡಿದ್ದ. ಆಗಲೇ ಆತ ಸ್ಮೃತಿ ರಚನೆ ಮಾಡಿದ ಎನ್ನಲಾಗುವುದು ಗಮನಿಸಿದರೆ ನಮ್ಮ ಕಾನೂನಿಗೆ ದೀರ್ಘಕಾಲೀನ ದೂರದೃಷ್ಟಿಯನ್ನು ಬಳಸಿಕೊಂಡು ಒಂದು ದಂಡ ಸಂಹಿತೆಯನ್ನು ರಚಿಸಿದ ಎನ್ನುವುದು ತಿಳಿದು ಬರುತ್ತದೆ. ಇವನ ಕಾಲದ ನಂತರ ಬಂದ ರಾಮಾಯಣವಂತೂ ನ್ಯಾಯವನ್ನೇ ಎತ್ತಿಹಿಡಿಯಿತು. ಅಲ್ಲಿ ರಾಮನ ನ್ಯಾಯಸ್ಥಾನದಲ್ಲಿಯೇ ವಿದ್ಯಾಪತಿ ಎನ್ನುವ ಕುಲಪತಿಯ ನ್ಯಾಯನಿರ್ಣಯದ ಪ್ರಸಂಗ ಬರುತ್ತದೆ. ನ್ಯಾಯನಿರ್ಣಯದಲ್ಲಿ ಹರಿಶ್ಚಂದ್ರ ತನ್ನ ಮಗನನ್ನು ಕಳೆದುಕೊಂಡಾಗಿನ ಪ್ರಸಂಗವಂತೂ ಅತ್ಯಂತ ಹೆಚ್ಚು ಹತ್ತಿರದ ಉದಾಹರಣೆ. ಸೀತೆ ರಾಮಾಯಣದಲ್ಲಿ ರಾಮನಿಗೆ ಆಡಳಿತದ ಉಪದೇಶ ಮಾಡುವ ಒಂದು ಸಂದರ್ಭ ಬರುತ್ತದೆ. ಅಲ್ಲಿ ನ್ಯಾಯಸ್ಥಾನದ ಘನತೆಯನ್ನು ಒತ್ತಿ ಹೇಳುತ್ತಾಳೆ. ಮಹಾಭಾರತದಲ್ಲಿಯಂತೂ ನ್ಯಾಯಶಾಸ್ತ್ರ ಮಹತ್ವದ ಸ್ಥಾನ ಪಡೆದಿದೆ. ಹಿರಣ್ಯ ಕಶಿಪುವಿನ ಮಗ ಪ್ರಹ್ಲಾದ ರಾಜ್ಯಾಡಳಿತದ ಜೊತೆಗೆ ನ್ಯಾಯನಿರ್ಣಯವನ್ನೂ ಮಾಡುತ್ತಿದ್ದ. ಅವನ ಒಂದು ಪ್ರಸಂಗ ಹೀಗಿದೆ. ಪ್ರಹ್ಲಾದನ ಮಗ ವಿರೋಚನ ಮತ್ತು ಸುಧನ್ವ ಎನ್ನುವ ಬ್ರಾಹ್ಮಣನೊಬ್ಬನ ನ್ಯಾಯತೀರ್ಮಾನ ಮಾಡುವ ಪ್ರಸಂಗ ಬರುತ್ತದೆ. ಅಲ್ಲಿ ಸುಧನ್ವ ಹೇಳುವ ಸುಳ್ಳು ಸಾಕ್ಷ್ಯ ಮತ್ತು ನ್ಯಾಯಾಧೀಶರಿಗೆ ಆಗುವ ಸಂಕಟ ಮತ್ತು ಸುಳ್ಳುಸಾಕ್ಷ್ಯವನ್ನೇ ನಂಬಿದರೆ ಆಗುವ ದೋಷವನ್ನು ಪ್ರಹ್ಲಾದನಿಗೆ ವಿವರಿಸುತ್ತಾನೆ.
ಯಾಂ ರಾತ್ರಿಮಧಿವಿನ್ನಾ ಸ್ತ್ರೀ ಯಾಂ ಚೈವಾಕ್ಷಪರಾಜಿತಃ |
ಯಾಂ ಚ ಭಾರಾಭಿತಪ್ತಾಙ್ಗ ದುರ್ವಿವಕ್ತಾ ಸ್ಮ ತಾಂ ವಸೇತ್ || 31 ||
ʻʻಮಹಾರಾಜ! ರಾತ್ರಿಯಲ್ಲಿ ತನ್ನ ಗಂಡನು ಸಪತ್ನಿಯೊಡನಿರುವುದನ್ನು ನೋಡಿದರೆ ಒಬ್ಬ ಸಾಧ್ವಿಗೆ ಎಷ್ಟು ಸಂಕಟವಾಗುತ್ತದೆಯೋ ಅಷ್ಟೇ ಸಂಕಟವನ್ನು ಅಥವಾ ದುಃಖವನ್ನು ನ್ಯಾಯಸಮ್ಮತವಲ್ಲದ ತೀರ್ಪನ್ನಿತ್ತವನು ಅನುಭವಿಸುತ್ತಾನೆ. ಪಗಡೆಯಾಟದಲ್ಲಿ ಸರ್ವಸ್ವವನ್ನೂ ಕಳೆದುಕೊಂಡವನು ಅನುಭವಿಸುವ ಮನಸ್ಸಿನ ಯಾತನೆಯನ್ನೇ ತೀರ್ಪು ಕೊಡದೆಯೇ ಇರುವವನು ಅಥವಾ ಅನ್ಯಾಯವಾದ ತೀರ್ಪು ಕೊಡುವವನು ಅನುಭವಿಸುತ್ತಾನೆ. ಹೊರಲಾರದ ಹೊರೆಯನ್ನು ಹೊತ್ತು ಸಂಕಟಪಡುವವನ ಕಷ್ಟಸ್ಥಿತಿಯನ್ನು ಪಡೆಯುತ್ತಾನೆ. ಎನ್ನುವಾಗ ನ್ಯಾಯವಾದಿಗಳು ಕೇವಲ ಮನವರಿಕೆ ಮಾಡುವ ಕಾರ್ಯದಲ್ಲಿರುತ್ತಾರೆ ಆಗ ಅಸತ್ಯವನ್ನೂ ಸತ್ಯದಂತೆ ಹೇಳುತ್ತಾರೆ. ಅದನ್ನೇ ನಂಬಿ ತೀರ್ಪಿತ್ತರೆ ಮುಂದೆ ಸಂಕಟಪಡುತ್ತಾರೆʼʼ ಎನ್ನಲಾಗಿದೆ.
ಅದೇ ರೀತಿ ಸುಳ್ಳು ಸಾಕ್ಷಿ ಹೇಳುವವನೂ ಸಹ ಅನುಭವಿಸುತ್ತಾನೆ ಎನ್ನುವುದು ಅದೇ ಮಹಾಭಾರತದ ಉದ್ಯೋಗಪರ್ವದ 35ನೇ ಅಧ್ಯಾಯದಲ್ಲಿ ಬರುತ್ತದೆ. ಅಲ್ಲಿ,
ನಗರೇ ಪ್ರತಿರುದ್ಧಃ ಸನ್ ಬಹಿದ್ರ್ವಾರೇ ಬುಭುಕ್ಷಿತಃ |
ಅಮಿತ್ರಾನ್ಭೂಯಸಃ ಪಶ್ಯೇತ್ ಯಃ ಸಾಕ್ಷ್ಯಮನೃತಂ ವದೇತ್ || 32 ||
ಊರೊಳಗೆ ರಕ್ಷಣೆಯು ಸಿಕ್ಕದೇ ನಗರದಿಂದ ಹೊರಹೊರಟು, ಅಲ್ಲಿಯೂ ಅನ್ನಾಹಾರಗಳಿಲ್ಲದೇ ತೊಳಲುತ್ತಿದ್ದಾಗಲೂ ಪದೇ-ಪದೇ ಶತ್ರುಗಳ ಉಪಟಳಕ್ಕೊಳಗಾದವನಿಗೆ ಯಾವ ವಿಧವಾದ ದುಃಖವುಂಟಾಗುವುದೋ ಅದೇ ವಿಧವಾದ ದುಃಖಕ್ಕೆ ಸುಳ್ಳುಸಾಕ್ಷಿಯನ್ನು ಹೇಳುವವನು ಈಡಾಗುತ್ತಾನೆ. (ನಗರದ ಹೊರಬಾಗಿಲಿನಲ್ಲಿ ತಡೆಯಲ್ಪಟ್ಟು ಹಸಿವಿನಿಂದ ಬಳಲಿ ಶತ್ರುಬಾಧೆಗೂ ಗುರಿಯಾದವನ ದುಃಖವನ್ನು ಹೊಂದುತ್ತಾನೆ) ಎನ್ನಲಾಗಿದೆ.
ಹೀಗೇ ಮಹಾಭಾರತದಲ್ಲಿ ನ್ಯಾಯದ ಕುರಿತಾಗಿ ವಿದುರ ನೀತಿ, ಭೀಷ್ಮೋಪದೇಶದಲ್ಲಿಯೂ ಸಹ “ಅಗ್ರಣೀಗ್ರಾಮಣಿ ಶ್ರೀಮಾನ್ ನ್ಯಾಯೋನೇತಾ ಸಮೀರಣಃ” ಎನ್ನುವುದನ್ನು ಗಮನಿಸಿದರೆ, ನಿಯಮಗಳಿಂದ ಪ್ರಜೆಗಳನ್ನು ಪಾಲಿಸುವವ ಅಥವಾ ಸನ್ಮಾರ್ಗದ ಕಡೆಗೆ ಕೊಂಡೊಯ್ಯುವವನೇ ನ್ಯಾಯಾಧೀಶ ಎನ್ನುವುದು ಸಿಗುತ್ತದೆ. ಇಲ್ಲಿಯೂ ಗ್ರಾಮಣಿ ಎನ್ನುವ ಪದವನ್ನು ಬಳಸಿ ನ್ಯಾಯಾಧೀಶನು ಪ್ರಾಚೀನ ಕಾಲದ ಜನಪದವೊಂದರ ಪ್ರಮುಖನಾಗಿದ್ದ ಎನ್ನುವಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ನ್ಯಾಯಾಧೀಶನಿಗೆ ಕೊಡಲಾಗುತ್ತಿತ್ತು ಎನ್ನುವುದು ತಿಳಿಯುತ್ತದೆ.
ಹನ್ತಿ ಜಾತಾನಜಾತಾಂಶ್ಚ ಹಿರಣ್ಯಾರ್ಥೇ„ನೃತಂ ವದನ್ |
ಸರ್ವಂ ಭೂಮ್ಯನೃತೇ ಹನ್ತಿ ಮಾ ಸ್ಮ ಭೂಮ್ಯನೃತಂ ವದೇಃ || 34 ||
ಚಿನ್ನ ಅಥವಾ ತತ್ಸಮಾನ ಸಂಪತ್ತಿನ ಆಶೆಯಿಂದ ಸುಳ್ಳು ಸಾಕ್ಷ್ಯವನ್ನು ಹೇಳಿದವನು ಅಥವಾ ಅದನ್ನು ಪರಾಮರ್ಶಿಸದೇ ಸುಳ್ಳು ತೀರ್ಪನ್ನಿತ್ತವನು, ತನ್ನ ವಂಶದಲ್ಲಿ ಹಿಂದೆ ಹುಟ್ಟಿದ್ದವರನ್ನೂ, ಮುಂದೆ ಹುಟ್ಟುವವರನ್ನೂ ಅಧೋಗತಿಗೆ ತಳ್ಳುತ್ತಾನೆ. ಭೂ ವ್ಯಾಜ್ಯಗಳಿದ್ದರೆ ಅಲ್ಲಿ ಸುಳ್ಳು ಸಾಕ್ಷ್ಯ ಹೇಳುವವನು(ಆ ಕಾಲಕ್ಕೆ ದಾಖಲೀಕರಣ ಬಂದಿರಲಿಲ್ಲ) ಅಥವಾ ಸುಳ್ಳು ತೀರ್ಪನ್ನಿತ್ತವನು ಸಂಪೂರ್ಣ ಆಡಳಿತ ವ್ಯವಸ್ಥೆಯನ್ನೂ ಹಾಳು ಮಾಡುತ್ತಾನೆ ಎನ್ನುವುದಾಗಿ ವ್ಯಾಖ್ಯಾನಕಾರರು ಅಭಿಪ್ರಾಯಪಡುತ್ತಾರೆ. ಆದುದರಿಂದ ಭೂಮಿಯ ವಿಷಯವಾಗಿ ಖಂಡಿತವಾಗಿಯೂ ಸುಳ್ಳು ಹೇಳಬೇಡ ಎಂದು ವಿರೋಚನನಿಗೆ ಹೇಳುತ್ತಾನೆ. (ವ್ಯಾಖ್ಯಾನಕಾರರು ಭೂಮಿತುಲ್ಯಾ ಕೇಶಿನೀ ತದರ್ಥಂ ಅನೃತಂ ಭೂಮ್ಯನೃತಂ? ಎಂದು ವ್ಯಾಖ್ಯಾನ ಮಾಡಿರುತ್ತಾರೆ. ಭೂಮಿಯ ಸದೃಶಳಾಗಿರುವ ಕೇಶಿನಿಗಾಗಿ ಸುಳ್ಳು ಹೇಳಬೇಡ’ ಭೂಮಿಗಾಗಿ ಸುಳ್ಳು ಹೇಳಬೇಡ ಎಂದು ನೇರವಾಗಿಯೇ ಅರ್ಥ ಮಾಡಬಹುದು. ಏಕೆಂದರೆ, ಪುತ್ರನಿದ್ದರಲ್ಲವೇ ರಾಜ್ಯ? ಪುತ್ರನನ್ನೇ ಕಳೆದುಕೊಂಡ ಮೇಲೆ ರಾಜ್ಯದಿಂದ ಆಗಬೇಕಾದುದೇನು? ಮೇಲಾಗಿ ಮುಂದೆ ಧೃತರಾಷ್ಟ್ರನಿಗೆ ವಿದುರನು ”ತಸ್ಮಾದ್ರಾಜೇನ್ದ್ರ ಭೂಮ್ಯರ್ಥೇ” ಎಂದೇ ಹೇಳುವುದರಿಂದ ಇಲ್ಲಿಯೂ ʼಭೂಮಿಗಾಗಿʼ ಎಂದೇ ನೇರವಾದ ಅರ್ಥ ಮಾಡಬಹುದಾಗಿದೆ.)
ದೇವರು ಧರ್ಮಿಷ್ಟರು ಎಲ್ಲರೂ ನಮ್ಮ ರಕ್ಷಕರು ನಿಜ, ಆದರೆ ಅವರೆಲ್ಲ ನಮ್ಮ ಸಂದಿಗ್ಧ ಕಾಲದಲ್ಲಿ ಪಶುಪಾಲಕರಂತೆ ಕೈನಲ್ಲಿ ದಂಡಹಿಡಿದು ರಕ್ಷಣೆಗಾಗಿ ಬರುವುದಿಲ್ಲ. ನಾವು ಸತ್ಯಸಂಧರಾಗಿದ್ದು ಕಪಟ ವಂಚನೆಗಳನ್ನು ಮಾಡದೇ ಅಥವಾ ಅದನ್ನು ಪ್ರೋತ್ಸಾಹಿಸದೇ ಅಥವಾ ಮೋಸ ಆಗುತ್ತಿರುವುದನ್ನು ಗಮನಿಸಿಯೂ ಪ್ರತಿಭಟಿಸದೇ ಇದ್ದಾಗ ನಾವು ಸಹ ಸಮಭಾಗಿಗಳಾಗುತ್ತೇವೆ ಎನ್ನುವ ಉಪದೇಶದ ಮಾತು ಭಾರತೀಯ ಪ್ರಾಚೀನ ಸಾಹಿತ್ಯಗಳಲ್ಲಿಯೇ ನೈತಿಕ ಪಾಠ ಅಡಗಿದ್ದು ತಿಳಿದು ಬರುತ್ತದೆ.
ಮುಂದೇ ಇದೇ ಪರ್ವದಲ್ಲಿ ʼಮದ್ಯಪಾನಂ ಕಲಹಂ ಪೂಗವೈರಂ ಭಾರ್ಯಾಪತ್ಯೋರನ್ತರಂ ಜ್ಞಾತಿಭೇದಮ್ | ರಾಜದ್ವಿಷ್ಟಂ ಸ್ತ್ರೀಪುಂಸಯೋರ್ವಿವಾದಂ ವಜ್ರ್ಯಾನ್ಯಾಹುರ್ಯಶ್ಚ ಪನ್ಥಾಃ ಪ್ರದುಷ್ಟಃ || 43 ||ʼ ಮದ್ಯಪಾನ ಮಾಡುವುದು, ವೃಥಾ ವ್ಯಾಜ್ಯ ಮಾಡಿ ನ್ಯಾಯಸ್ಥಾನದ ಕಲಾಪಗಳ ಸಮಯ ಹಾಳು ಮಾಡುವುದು, ಒಂದು ಸಂಘ ಅಥವಾ ಸಮೂಹದೊಡನೆ ದ್ವೇಷ ಕಟ್ಟಿಕೊಳ್ಳುವುದು. ಪತಿ-ಪತ್ನಿಯರಲ್ಲಿ ವಿರಸವನ್ನುಂಟುಮಾಡುವುದು, ಅಣ್ಣ-ತಮ್ಮಂದಿರಲ್ಲಿ ದ್ವೇಷವನ್ನು ಹುಟ್ಟಿಸುವುದು, ರಾಜದ್ವೇಷ, ಸಂಬಂಧವಿಲ್ಲದ ಸ್ತ್ರೀ-ಪುರುಷರೊಡನೆ ವಿವಾದ ಮುಂತಾದ ಪಾಪಕ್ಕೊಯ್ಯುವ ಮಾರ್ಗಗಳನ್ನು ಬಿಡಬೇಕು ಎಂದು ಹೇಳುವುದನ್ನು ಗಮನಿಸಿದರೆ ಆ ಕಾಲಕ್ಕಾಗಲೇ ಇಂತಹ ನಡವಳಿಕೆಗಳು ರೂಢಿಯಲ್ಲಿದ್ದುದು ಸಹ ಗಮನಕ್ಕೆ ಬರುತ್ತದೆ.
ಇದನ್ನೂ ಓದಿ: ಧೀಮಹಿ ಅಂಕಣ | ಸಾಮಾಜಿಕ ವ್ಯವಸ್ಥೆಯನ್ನು ಬೋಧಿಸಿದ ಪುರುಷ ಸೂಕ್ತ
ಇನ್ನೂ ಬಹಳ ರೋಚಕ ವಿಷಯಗಳಲ್ಲಿ ʼಸಾಮುದ್ರಿಕಂ ವಣಿಜಂ ಚೋರಪೂರ್ವಂ… ನೈತಾನ್ಸಾಕ್ಷ್ಯೇ ತ್ವಧಿಕುರ್ವೀತ ಸಪ್ತ || 44 ||ʼ ಸಾಮುದ್ರಿಕ ಶಾಸ್ತ್ರವನ್ನು ತಿಳಿದವನು (ಹಸ್ತಗಳಲ್ಲಿರುವ ರೇಖೆಗಳನ್ನು ನೋಡಿ ಭವಿಷ್ಯ ಹೇಳುವವನು), ಕಳ್ಳಮಾಲುಗಳ ವ್ಯಾಪಾರಿ ಅಥವಾ ಮೊದಲು ಕಳ್ಳನಾಗಿದ್ದು ಅನಂತರದಲ್ಲಿ ವ್ಯಾಪಾರ ವೃತ್ತಿಯನ್ನವಲಂಬಿಸಿರುವವನು, ಮೋಸಗಾರ, ವೈದ್ಯ, ಶತ್ರು, ಯಾಚಕ ಅಥವಾ ಗಾಯಕ ಈ ಏಳು ಮಂದಿಯನ್ನು ಸಾಕ್ಷ್ಯ ಹೇಳಲು ಕರೆಯಬಾರದು ಎನ್ನುವುದು ನ್ಯಾಯದಾನದಲ್ಲಿನ ಪಾರತದರ್ಶಕತೆಯನ್ನು ಪ್ರಸ್ತುತಪಡಿಸುತ್ತದೆ.
ಇನ್ನು ಇತಿಹಾಸದ ಕಡೆ ಬಂದಾಗ ಸಮುದ್ರಗುಪ್ತ ಇಡೀ ಭಾರತವನ್ನು ಗೆದ್ದದ್ದಲ್ಲದೇ ಸಮುದ್ರದಾಚೆಯ ಶ್ರೀಲಂಕಾವನ್ನು ಗೆಲ್ಲದೇ ಅನಾಯಾಸವಾಗಿ ಪಡೆದ. ಇಷ್ಟು ಯುದ್ಧಗಳನ್ನು ಮಾಡುವಾಗ ಅವನ ರಾಜ್ಯದಲ್ಲಿನ ಆಡಳಿತ ಯಾರು ಮಾಡಿರಬಹುದು ಎನ್ನುವುದನ್ನು ನಾವು ಗಮನಿಸಿದರೆ ಸಮುದ್ರಗುಪ್ತ ಆಡಳಿತಕ್ಕೆ ನೇಮಿಸಿದ್ದು ತನ್ನ ಆಸ್ಥಾನದ ಪ್ರಧಾನಮಂತ್ರಿಗಳು. ಆ ಕಾಲಕ್ಕೆ ಪ್ರಧಾನ ಮಂತ್ರಿಗಳೇ ನ್ಯಾಯಸ್ಥಾನದ ನಿರ್ವಹಣೆ ಮಾಡುತ್ತಿದ್ದರು. ಮಹತಿ ಎನ್ನುವ ಚಿಕ್ಕ ನ್ಯಾಯಸ್ಥಾನದಿಂದ ತನ್ನ ಆಸ್ಥಾನದ ನ್ಯಾಯಾಧೀಶನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದ. ಅಂದರೆ ಒಂದು ಕಾಲಘಟ್ಟದಲ್ಲಿ ಈ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯ ನಿರ್ವಹಣೆಯನ್ನು ನ್ಯಾಯಸ್ಥಾನ ಮಾಡುತ್ತಿತ್ತು. ಆರ್ಥಿಕ ವಿಷಯಗಳಲ್ಲಿ ತೆರಿಗೆ ಸಂಗ್ರಹಗಳನ್ನು ಇತರರು ಮಾಡುತ್ತಿದ್ದರು. ಯಾವಾಗ ಅಲ್ಲಿ ಕ್ಲೇಷಗಳು ಬರುತ್ತಿದ್ದವೋ ಆಗ ಅದೂ ಸಹ ನ್ಯಾಯದ ವ್ಯಾಪ್ತಿ ಪಡೆಯುತ್ತಿತ್ತು.
ಹೀಗೆ ಭಾರತೀಯ ಆಡಳಿತ ವ್ಯವಸ್ಥೆ ರೂಪುಗೊಂಡದ್ದೇ ಧಾರ್ಮಿಕ ಅಥವಾ ನೈತಿಕತೆಯ ತಳಹದಿಯ ಮೇಲೆ. ಅದೇ ಕಾರಣಕ್ಕೆ ನಮ್ಮಲ್ಲಿನ ಯಾವೊಬ್ಬ ರಾಜನೂ ಆಕ್ರಮಣಕಾರಿಯಾಗಿರಲಿಲ್ಲ.
ಇದನ್ನೂ ಓದಿ: ಧೀಮಹಿ ಅಂಕಣ | ಪ್ರಾಚೀನ ಭಾರತದ ಸಂಪತ್ತು ಲೂಟಿಯಾಗಿರಬಹುದು, ಜ್ಞಾನವನ್ನು ಕದಿಯಲಾಗಲಿಲ್ಲ!