Site icon Vistara News

Dr APJ Abdul Kalam Birthday | ಭವ್ಯ ಭಾರತದ ಕನಸುಗಾರ, ಜನರ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ

Dr APJ Abdul Kalam

| ಡಾ. ಡಿ. ಸಿ. ರಾಮಚಂದ್ರ, ಶ್ರೀ ಕ್ಷೇತ್ರ ಆದಿಚುಂಚನಗಿರಿ

ಕನಸಿಗೆ ಸ್ಫೂರ್ತಿಯಾಗಿ, ವಿದ್ಯಾರ್ಥಿಗಳ ಬದುಕಿಗೆ ಪ್ರೇರಣೆಯ ಶಕ್ತಿಯಾದವರೇ ಭವ್ಯಭಾರತದ ಕನಸುಗಾರ ಡಾ.ಎ.ಪಿ.ಜಿ ಅಬ್ದುಲ್ ಕಲಾಂ (Dr APJ Abdul Kalam). ನಿದ್ದೆಯಲ್ಲಿ ಕಾಣುವುದು ಕನಸಲ್ಲ ನಿದ್ದೆಗೆಡಿಸುವಂತೆ ಮಾಡುವುದೇ ಕನಸು ಎಂದು ಈ ದೇಶ ಜನತೆಗೆ ಕನಸಿನ ಪಾಠಮಾಡಿದ ಮೇಸ್ಟ್ರು ನಮ್ಮ ಕಲಾಂ ಸರ್. ದೋಣಿ ಮಾಡುವ ಕುಟುಂಬದ ಬಾಲಕನೊಬ್ಬ ಮುಂದೊಂದು ದಿನ ಈ ದೇಶದ ಉನ್ನತ ಹುದ್ದೆ ರಾಷ್ಟ್ರಪತಿ ಸ್ಥಾನಕ್ಕೇರುತ್ತಾನೆಂದರೆ ಅದು ಅವರ ಬೆವರ ಶ್ರಮವಲ್ಲವೇ? ಜಗಜಟ್ಟಿ ದೇಶಗಳೆದುರು ಭಾರತದ ಬಾಹ್ಯಾಕಾಶ ಶಕ್ತಿ ತೋರಿಸಲೆಂದೇ ಕ್ಷಿಪಣಿ, ಪರಮಾಣು ಪರೀಕ್ಷೆಗಳನ್ನು ನಡೆಸಿ ಭಾರತದ ಶಕ್ತಿ ಸಾಮರ್ಥ್ಯವನ್ನು ಸ್ಥಾಪಿಸಿದ ಭಾರತಮಾತೆಯ ಹೆಮ್ಮೆಯ ಪುತ್ರ ಅಬ್ದುಲ್ ಕಲಾಂ. ಇವರ ಜೀವನವೇ ದಂತಕಥೆ.

ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಅವರು ತಮಿಳುನಾಡು ರಾಜ್ಯದ ರಾಮೇಶ್ವರಂನಲ್ಲಿ ೧೫ನೇ ಅಕ್ಟೋಬರ್ ೧೯೩೧ ರಂದು ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಜೈನುಲಬ್ದೀನ್ ಮತ್ತು ತಾಯಿ ಆಶಿಮಾರವರು. ತಂದೆಯವರು ದೋಣಿ ಮಾಡುವ ಕುಟುಂಬದ ಮಾಲೀಕರಾಗಿದ್ದು, ತಾಯಿ ಗೃಹಿಣಿಯಾಗಿದ್ದರು. ಅಬ್ದುಲ್ ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯರಾಗಿದ್ದರು. ಅವರು ಬಡತನ ಹಿನ್ನಲೆಯಿಂದ ಬಂದವರು ಮತ್ತು ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು.

ಮಿಸೈಲ್ ಮ್ಯಾನ್
ಅಬ್ದುಲ್ ಕಲಾಂ ಅವರು ರಾಮನಾಥಪುರಂನ ಶ್ವಾಟ್ಸ್ ಮೆಟ್ರಿಕ್ಯೂಲೇಷನ್ ಶಾಲೆಯಲ್ಲಿ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಕಲಾಂ ಸೇಂಟ್ ಜೋಸೆಫ್ ಕಾಲೇಜಿಗೆ ಸೇರಿಕೊಂಡರು. ೧೯೫೪ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ‘ಭೌತಶಾಸ್ತ್ರ’ದಲ್ಲಿ ಪದವಿಯನ್ನು ಪಡೆದರು. ವಿಜ್ಞಾನಿಯಾಗಿ ವೃತ್ತಿ ಜೀವನ ಒಬ್ಬರನ್ನು ಸೋಲಿಸುವುದು ಬಹಳ ಸುಲಭ, ಆದರೆ ಒಬ್ಬರನ್ನು ಗೆಲ್ಲುವುದು ಬಹಳ ಕಷ್ಟ. ೧೯೬೦ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಯದಿಂದ ಪದವಿ ಪಡೆದ ನಂತರ ಕಲಾಂ ಅವರು ಶಿಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ)ನ ವಾಯುಯಾನ ವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. ವೃತ್ತಿ ಜೀವನದ ಆರಂಭದಲ್ಲಿ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್‌ಗಳನ್ನು ವಿನ್ಯಾಸ ಮಾಡುತ್ತಿದ್ದರು. ಆದರೆ ಅವರಿಗೆ ಈ ಕೆಲಸದ ಬಗ್ಗೆ ಅಸಮಾಧಾನವಿತ್ತು.

ಕಲಾಂ ರವರು ಹೆಸರಾಂತ ‘ಬಾಹ್ಯಕಾಶ ವಿಜ್ಞಾನಿ’ ವಿಕ್ರಂ ಸಾಹಿಭಾಯ್ ಅವರ ಅಡಿಯಲ್ಲಿದ್ದ ಇನ್ಕೋಸ್ಟಾರ್ ಸಮಿತಿಯ ಭಾಗವಾಗಿದ್ದರು. ೧೯೬೯ ರಲ್ಲಿ ಕಲಾಂ ಅವರನ್ನು ‘ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ’(ಇಸ್ರೋ) ಗೆ ವರ್ಗಾಯಿಸಲಾಯಿತು. ಅಲ್ಲಿ ಕಲಾಂ ರವರು ‘ರೋಹಿಣಿ’ ಉಪಗ್ರಹವನ್ನು ೧೯೮೦ರಲ್ಲಿ ಭೂಮಿಯ ಕಕ್ಷೆಯನ್ನು ಸೇರಿಸಿದರು.

ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ (ಎಸ್.ಎಲ್.ವಿ-೩)ರ ಯೋಜನಾ ನಿರ್ದೇಶಕರಾದರು. ೧೯೬೫ರಲ್ಲಿಯೇ ಕಲಾಂ ಅವರು ವಿಸ್ತರಿಸಬಲ್ಲ ರಾಕೆಟ್ ಯೋಜನೆಯನ್ನು ಪ್ರತ್ಯೇಕವಾಗಿ ಆರಂಭಿಸಿದರು. ೧೯೬೯ರಲ್ಲಿ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿತು. ೧೯೬೩–೬೪ರಲ್ಲಿ ಕಲಾಂ ಅವರು ಹ್ಯಾಮ್ಟನ್ ವರ್ಜೀನಿಯಾದ ನಾಸಾದ ಲ್ಯಾಂಗ್ಲೀ ಸಂಶೋಧನಾ ಕೇಂದ್ರ, ಗ್ರೀನ್ ಬೆಲ್ಟ್, ಮೇರಿ ಲ್ಯಾಂಡ್‌ನ ಗೊಡಾರ್ಡ್ ಬಾಹ್ಯಕಾ಼ಶ ಹಾರಾಟ ಕೇಂದ್ರ ಮತ್ತು ವಾಲೋಪ್ಸ್ ಯುದ್ಧ ವಿಮಾನ ಫೆಸಿಲಿಲಿಗೆ ಭೇಟಿ ನೀಡಿದ್ದರು. ೧೯೭೦ ಮತ್ತು ೧೯೮೦ರ ನಡುವೆ ಕಲಾಂ ಅವರು ಪೋಲಾರ್ ಉಪಗ್ರಹ ವಾಹನ (ಪಿ.ಎಸ್.ಎಲ್.ವಿ) ಮತ್ತು (ಎಸ್.ಎಲ್.ವಿ-೩) ಯೋಜನೆಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಿದರು.

ಬೆಂಗಳೂರಿಗೆ ಸೀಮಿತವಾಗಿರುವ ಐಟಿ ಕಂಪನಿಗಳು, ಬೇರೆ ನಗರಗಳಿಗೂ ವಿಸ್ತರಣೆಯಾಗಬೇಕು. ಮೈಸೂರು, ಬೆಳಗಾವಿ, ಮಂಗಳೂರು, ಮಡಿಕೇರಿ, ಹುಬ್ಬಳ್ಳಿ, ಧಾರವಾಡದಲ್ಲಿಯೂ ಐಟಿ ಕಂಪನಿಗಳು ಸ್ಥಾಪನೆಯಾಗಬೇಕೆಂಬುದು ಕಲಾಂ ಅವರ ದೃಢವಾದ ನಿಲುವಾಗಿತ್ತು. ೧೯೫೮ರಲ್ಲಿ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ‘ವೈಮಾನಿಕ ಎಂಜಿನಿಯರ್’ ನಲ್ಲಿ ಪದವಿಯನ್ನು ಪಡೆದರು. ಜೊತೆಗೆ ಪಿ.ಎಚ್.ಡಿ. ಎಮ್.ಟೆಕ್ ಪದವಿಯನ್ನು ಪಡೆದಿದ್ದಾರೆ. ಡಿ.ಆರ್.ಡಿ.ಒ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ‘ಭಾರತದ ಅಣುಬಾಂಬ್ ಹಾಗೂ ಕ್ಷಿಪಣಿಗಳ ಜನಕ’ ಎಂದೇ ಪ್ರಸಿದ್ಧರು.

ರಾಷ್ಟ್ರಪತಿ ಆಗುವುದಕ್ಕೂ ಮುನ್ನ ಇವರು ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್, ಡಿ.ಆರ್.ಡಿ.ಒ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. ಅಣ್ಣಾ ವಿಶ್ವವಿದ್ಯಾಲಯ (ಚೆನ್ನೈ) ಜೆ.ಎಸ್.ಎಸ್ ವಿಶ್ವವಿದ್ಯಾಲಯ (ಮೈಸೂರು) ಮತ್ತು ಅನೇಕ ಸಂಶೋಧನಾಲಯದಲ್ಲಿ ವೈಮಾನಿಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ೨೦೧೧ರ ಮೇನಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ್ದರು. ಕಲಾಂ ಅವರು ಓರ್ವ ವಿಜ್ಞಾನಿಯು, ತಮಿಳು ಕವಿಯು ಹಾಗೂ ವೀಣಾ ವಾದಕರೂ ಆಗಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ‘ಐಐಎಮ್’ ಅಹಮದಾಬಾದ್ ಮತ್ತು ಐಐಎಮ್ ಇಂದೋರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಜನ ಸಾಮಾನ್ಯರ ರಾಷ್ಟ್ರಪತಿ
ಕಲಾಂ ಅವರು ಭಾರತದ ೧೧ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ೨೦೦೨ರ ರಾಷ್ಟ್ರಪತಿ ಚುನಾವಣೆಯಲ್ಲಿ ಲಕ್ಷ್ಮೀ ಸೆಹಗಲ್ ವಿರುದ್ದ ೧೦೭,೨೬೬ ಮತಗಳ ಮುನ್ನಡೆಯಲ್ಲಿ ಗೆದ್ದರು. ೨೫ ಜುಲೈ ೨೦೦೨ರಿಂದ ೨೫ ಜುಲೈ ೨೦೦೭ರ ವರೆಗೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ ಮತ್ತು ಮೇಧಾವಿ ತನದ ಸಹಕಾರದಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ‘ಜನ ಸಾಮನ್ಯರ ರಾಷ್ಟ್ರಪತಿ’ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿಯಾದ ಇವರಿಗೆ ಮಕ್ಕಳೆಂದರೆ ಬಹು ಪ್ರೀತಿ. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ಪ್ರಿಯ ಹವ್ಯಾಸವಾಗಿತ್ತು.

ಬರಹಗಾರ
ರಾಷ್ಟ್ರಪತಿ ಹುದ್ದೆಯಿಂದ ವಿರಮಿಸಿದ ಆನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸಿದ್ದವರು. ಇವರು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತಾರು ಗ್ರಂಥಗಳನ್ನು ರಚಿಸಿದ್ದಾರೆ. ‘ವಿಂಗ್ಸ್ ಆಫ್ ಫೈರ್’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ ೨೦೨೦’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪು ರೇಖೆಗಳನ್ನು ಹಾಕಿಕೊಟ್ಟಿದ್ದಾರೆ. ‘ಮೈ ಜರ್ನಿ’, ‘ಟಾರ್ಗೆಟ್ ತ್ರಿ ಬಿಲಿಯನ್’ ಇವು ಇವರ ಇತ್ತೀಚಿನ ಕೃತಿಗಳು. ಅಪ್ರತಿಮ ದೇಶ ಭಕ್ತರೂ ಉತ್ತಮವಾಗಿಯೂ ಆಗಿದ್ದವರು. ಡೆವಲಪ್ಮೆಂಟ್ಸ್ ಇನ್‌ಫ್ಲುಯಿಡ್ ಮೆಕಾನಿಕ್ಸ್ ಅಂಡ್ ಸ್ಪೇಸ್ ಟೆಕ್ನಾಲಜಿ ವಿಂಗ್ಸ್ ಆಫ್ ಫೈಯರ್, ಇಂಡಿಯಾ–೨೦೨೦, ಇಗ್ನೆಟೆಡ್ ಮೈಂಡ್ಸ್ (ಮಕ್ಕಳಿಗಾಗಿ), ಮೈ ಜರ್ನೀ, ಎನ್ವಿಶನಿಂಗ್ ಅನ್ ಎಂಪವರ್ಡ್ ನೇಷನ್, ದಿ ಲೈಫ್ ಟ್ರೀ, ಚಿಲ್ಡ್ರೆನ್ ಆಸ್ಕ್ ಕಲಾಂ ಕೃತಿಗಳನ್ನು ರಚಿಸಿದ್ದಾರೆ.

ಪ್ರಶಸ್ತಿಗಳಿಗೇ ಗೌರವ
೧೯೮೦ – ಪದ್ಮ ಭೂಷಣ – ಭಾರತ ಸರ್ಕಾರ
೧೯೯೦ – ಪದ್ಮವಿಭೂಷಣ – ಭಾರತ ಸರ್ಕಾರ
೧೯೯೪ – ಡಿಸ್ಟಿಂಗ್ವಿಶ್ಡ್ ಫೆಲೋ – ನಿರ್ದೇಶಕರ ಸಂಸ್ಥೆ (ಭಾರತ)
೧೯೯೭ – ದೇಶದ ಐಕ್ಯತೆಯ ಇಂದಿರಾಗಾಂಧಿ ಪ್ರಶಸ್ತಿ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
೧೯೯೭ – ಭಾರತ ರತ್ನ – ಭಾರತ ಸರ್ಕಾರ
೧೯೯೮ – ವೀರ್ ಸಾವರ್ಕರ್ ಪ್ರಶಸ್ತಿ – ಭಾರತ ಸರ್ಕಾರ
೨೦೦೦ – ರಾಮಾನುಜನ್ ಪ್ರಶಸ್ತಿ – ಅಲ್ವಾರ್ ಸಂಶೋಧನಾ ಕೇಂದ್ರ, ಚೆನೈ
೨೦೦೦ – ಡಾಕ್ಟರ್ ಆಫ್ ಇಂಜಿನಿಯರಿಂಗ್ – ವಾಟರ್ಲೂ ವಿಶ್ವವಿದ್ಯಾಲಯ
೨೦೦೨ – ಡಾಕ್ಟರ್ ಆಫ್ ಲಾ (ಆನರಿಸ್ ಕೌನಾ) – ಸೈಮನ್ ಫೇಸರ್ ವಿಶ್ವವಿದ್ಯಾಲಯ
೨೦೦೪ – ಡಾಕ್ಟರ್ ಆಫ್ ಸೈನ್ಸ್, ಎಡಿನ್‌ಬರ್ಗ್ ವಿಶ್ವವಿದ್ಯಾಲಯ, – ಯು.ಕೆ
೨೦೦೭ – ಕಿಂಗ್ ಚಾರ್ಲ್ಸ್|| ಪದಕ – ರಾಯಲ್ ಸೊಸೈಟಿ, ಯೂಕೆ
೨೦೦೭ – ಸೈನ್ಸ್ ಗೌರವ ಡಾಕ್ಟರೇಟ್ – ವಾಲ್ವರ್ಹ್ಯಾಂಪೈನ್ ವಿಶ್ವವಿದ್ಯಾಲಯ, ಯು.ಕೆ
೨೦೦೮ – ಡಾಕ್ಟರ್ ಆಫ್ ಇಂಜಿನಿಯರಿಂಗ್ (ಆನರಿಸ್ ಕೌನಾ) – ನನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ, ಸಿಂಗಪುರ್
೨೦೦೯ – ಗೌರವ ಡಾಕ್ಟರೇಟ್ – ಓಕ್ಲಾಂಡ್ ವಿಶ್ವವಿದ್ಯಾಲಯ
೨೦೦೯ – ಹೂವೆರ್ ಮೆಡಲ್ ಎ.ಎಸ್.ಎಮ್.ಇ. ಫೌಂಡೇ಼ಶನ್ – ಯು.ಎಸ್.ಎ
೨೦೦೯ – ಇಂಟರ್‌ನ್ಯಾಷನಲ್ ವೊನ್ ಕಾರ್ಮಾನ್ ವಿಂಗ್ಸ್ ಪ್ರಶಸ್ತಿ – ಕ್ಯಾಲಿಫೋರ್ನಿಯಾ ಇನ್ಸಿಟಿಟ್ಯೂಟ್ ಟೆಕ್ನಾಲಜಿ, ಯುಎಸ್‌ಎ

ಉಪನ್ಯಾಸ ನೀಡುತ್ತಲೇ ಕೊನೆಯುಸಿರು
ಇಷ್ಟೆಲ್ಲಾ ನಾನಾ ರೀತಿಯಲ್ಲಿ ನಾಡಿನ ಪ್ರಗತಿಗಾಗಿ ಸೇವೆಗೈದ ಕಲಾಂರವರು ಜುಲೈ ೨೭, ೨೦೧೫ ರಂದು ಶಿಲ್ಲಾಂಗ್ ನಲ್ಲಿ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು. ಕೊನೆಯ ಉಸಿರು ಇರುವವರೆಗೂ ಅವರು ಸೇವೆಯಲ್ಲಿ ನಿರತರಾಗಿದ್ದು, ಇಡೀ ದೇಶದ ಜನತೆಗೆ ಮಾದರಿಯಾದ ವ್ಯಕ್ತಿತ್ವದ ಮೂರ್ತಿಯಾಗಿದ್ದಾರೆ.

ಇದನ್ನೂ ಓದಿ | National Technology Day ಪೋಖ್ರಾನ್‌ ಅಣು ಪರೀಕ್ಷೆ ಯಶಸ್ವಿಯಾಗಿ ನಡೆದ ಹೆಮ್ಮೆಯ ದಿನ

Exit mobile version