ಸೋಮೇಶ್ವರ ಗುರುಮಠ
ವಿಶಾಲವಾದ ಬ್ರಹ್ಮಾಂಡದಲ್ಲಿ, ಲಕ್ಷಾಂತರ ನಕ್ಷತ್ರಪುಂಜಗಳ ಮಧ್ಯದಲ್ಲಿ, ಸೌರಮಂಡಲದ ಅತ್ಯಂತ ಹೃದಯಭಾಗದಲ್ಲಿ ತನ್ನೊಳು ತಾನು ಹರ್ಷೋದ್ಗಾರದಲಿ ಸಂಭ್ರಮಿಸುತಿದ್ದ ಪ್ರಕೃತಿಗೆ ತಾನೇ ಸೃಷ್ಟಿಸಿದ ಜೀವಿಯೊಂದು ಕಂಟಕವನ್ನೊಡ್ಡಬಲ್ಲದೆಂದು ಎಂದಾದರೂ ಕಲ್ಪನೆಗೆ ಬಂದಿರಬಹುದೇ? ತಾನೇ ನೀಡಿದ ಪುಟ್ಟದಾದ ಮೆದುಳಿನ ಭಾಗವೊಂದರಲ್ಲಿ ಹುಟ್ಟುವ ಆಲೋಚನೆಗಳು ಆತನ ಸ್ವ ವಿಕಾಸದ ಹಾದಿಗೆ ಮೇಲ್ಪಂಕ್ತಿ ಹಾಕಿಕೊಡುವಾಗ ಎಲ್ಲೋ ಒಂದೆಡೆ ತನ್ನನ್ನು ಕೂಡಾ ಕಡೆಗಣಿಸಬಹುದಾದ ಸಾಧ್ಯತೆಯನ್ನು ಆರಂಭದಲ್ಲಿ ಊಹಿಸಿಕೊಳ್ಳಲೂ ಅಸಾಧ್ಯವಾಗಿತ್ತೇ? ಆಗಿರಲೂಬಹುದು ಅಥವಾ ಆಗಿರಲಾರದೂ ಕೂಡ.
ವಿಶ್ವ ಭೂಮಿ ದಿನವನ್ನು ಆಚರಣೆ ಮಾಡುತ್ತಿರುವ ಭೂಮಿಯ ಮೇಲಿನ ಅತೀ ಬುದ್ಧಿವಂತ ಜೀವಿಯಾದ ಮಾನವಕುಲದ ಕೆಲ ಆಯ್ದ ನಾಗರಿಕ ಪ್ರತಿನಿಧಿಗಳಿಗೆ ಒಂದೆಡೆ ಭುವಿಯ ಮುಂಬರುವ ದಿನಗಳ ಕುರಿತಾದ ಅಸ್ಪಷ್ಟತೆಯ ಆತಂಕವಿದ್ದರೆ ಮತ್ತೊಂದೆಡೆ ಅದೇ ಅಸ್ಪಷ್ಟತೆಯನ್ನು ಎಷ್ಟು ಸ್ಪಷ್ಟವಾಗಿ ವಿವರಿಸಿ ಹೇಳಿದರೂ ಕೇಳದಿರುವ ತಮ್ಮದೇ ಸಹಕುಲಬಾಂಧವರ ನಡೆಯ ನೋಡಿ ಇರುವ ಎಲ್ಲಾ ಆಶಾಭಾವಗಳನ್ನು ಕೈಯಾರೆ ಕೊಲ್ಲುವುದೋ ಬೇಡವೋ ಎಂಬ ಗೊಂದಲ.
ಮಾನವ ಜೀವಿ ತನ್ನ ವಿಕಸನದ ಹಾದಿಯಲ್ಲಿ ಹಲವಾರು ನಾಗರಿಕತೆಗಳ ಪರ್ವವನ್ನು ದಾಟಿ ಬಂದಿದ್ದಾನೆ. ಪ್ರತಿ ಹಂತದಲ್ಲಿ, ಕೆಲವು ಭವ್ಯತೆಗಳು ನಾಶ ಹೊಂದಿದ್ದರೆ ಮತ್ತೆ ಕೆಲವು ಕಾಲನ ಸವಾಲನ್ನು ಮೆಟ್ಟಿ ನಿಂತು ಈಗಲೂ ತಮ್ಮ ಪುಟಗಳನ್ನು ಅಷ್ಟೇ ಯಶಸ್ವಿಯಾಗಿ ಮುಂದುವರಿಸುತ್ತಿವೆ. ಆದರೆ ಕಳೆದ ಎರಡು ಶತಮಾನಗಳಲ್ಲಿ ಆದ ವಿಪರೀತ ಅನಪೇಕ್ಷಿತ ಭೌತಿಕ, ತಾಂತ್ರಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳ ಅಭಿವೃದ್ಧಿಯು 21 ನೇಯ ಶತಮಾನದ ಹೊಸ್ತಿಲಲ್ಲಿ ನಿಂತಿರುವ ಮಾನವ ಕುಲಕ್ಕೆ ಮುಂದಿನ ಶತಮಾನದ ಬಾಗಿಲನ್ನು ತಟ್ಟಲು ಬಿಡುವುದೋ ಇಲ್ಲವೋ ಎಂಬ ಗುಮಾನಿಯೇಳುವಂತೆ ಮಾಡಿರುವುದಂತೂ ಸುಳ್ಳಲ್ಲ. ಇಂಧನ, ಆಹಾರ, ಸಂಪರ್ಕಕ್ರಾಂತಿ, ಸಾರಿಗೆ, ವಿತ್ತಲೋಕ ಮತ್ತು ವೈದ್ಯಕೀಯ ವಿಜ್ಞಾನ ಸೇರಿದಂತೆ ಹಲವಾರು ವಿಭಾಗಗಲ್ಲಿ ಒಂದು ದೇಶ ಮತ್ತೊಂದು ದೇಶವನ್ನು ಅವಲಂಬನೆಯಾಗಿರುವುದನ್ನು ಅಲ್ಲಗಳೆಯಲಾಗದು. ಇತ್ತೀಚಿನ ದಶಕಗಳಲ್ಲಿ ಕೆಲ ದೇಶದ ನೀತಿಗಳು ಅಲ್ಲಿನ ಔದ್ಯೋಗಿಕ, ಕೈಗಾರಿಕಾ ಮತ್ತು ತಾಂತ್ರಿಕ ದೈತ್ಯ ಸಂಸ್ಥೆಗಳ ಬೆಳೆವಣಿಗೆಗೆ ಪೂರಕವಾಗುವಂತೆ ಮಾರ್ಪಾಡಾಗುತ್ತಿವೆ. ಬಹುಶಃ ಮಾನವ ಕಳೆದ ಕೆಲ ದಶಕಗಳಲ್ಲಿ ಕಂಡಿರುವ ವಿಪರೀತ ಅಭಿವೃದ್ಧಿಯನ್ನು ಹಿಂದೆಂದೂ ಕಂಡಿರಲಾರ. ಆದರೆ ಆತನ ಮುಂದಿನ ಉಳಿವನ್ನು ಇನ್ನೂ ಕ್ಲಿಷ್ಟಕರವಾಗಿಸಬಲ್ಲ ಕೆಲ ಸವಾಲುಗಳು ಇಂತಿವೆ. ದುರಂತವೆಂದರೆ ಆತ ತನ್ನೊಡನೆ ಭೂಮಿಯನ್ನು ಸಹ ನಾಶಮಾಡಿಬಿಡಬಲ್ಲ.
1 – ಹವಾಮಾನ ಬದಲಾವಣೆ : ಕಳೆದ ದಶಕದಿಂದ ಅಂತರರಾಷ್ಟ್ರೀಯ ಸುದ್ದಿ ಮಾಧ್ಯಮಗಳಿಂದ ಹಿಡಿದು ಸ್ಥಳೀಯ ಮಾಧ್ಯಮದವರೆಗೂ ನಿರಂತವಾಗಿ ಸದ್ದು ಮಾಡಿರುವ ಏಕೈಕ ಬಹುದೊಡ್ಡ ಪರಿಸರಸಂಬಂಧಿ ವಿಷಯವೆಂದರೆ ಹವಾಮಾನ ಬದಲಾವಣೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲದ ಡೈ ಆಕ್ಸೈಡ್, ಹಸಿರುಮನೆ ಅನಿಲಗಳು, ಇಂಗಾಲದ ಮಾನಾಕ್ಸೈಡ್, ಅನಿರೀಕ್ಷಿತ ಸಂವತ್ಸರಗಳ ಬದಲಾವಣೆ, ಅತೀವೃಷ್ಠಿ, ಅನಾವೃಷ್ಠಿ, ಬರಗಾಲ, ಅನಪೇಕ್ಷಿತ ಕಾಡ್ಗಿಚ್ಚು, ಇಂಧನ ನಿಕ್ಷೇಪಗಳ ಮೇಲಿನ ವಿಪರೀತ ಅವಲಂಬನೆ, ಬಿಸಿಗಾಳಿ, ಚಂಡಮಾರುತ ಇತ್ಯಾದಿಗಳೆಲ್ಲವೂ ಈಗಾಗಲೇ ಹವಾಮಾನ ಬದಲಾವಣೆಯ ಕುರಿತಂತೆ ಗಂಭೀರ ಎಚ್ಚರಿಕೆಯ ಮುನ್ಸೂಚನೆಯನ್ನು ನೀಡುತ್ತಿರುವಂತಿದೆ. ಹವಾಮಾನ ಬದಲಾವಣೆಯನ್ನು ಕೇವಲ ನೈಸರ್ಗಿಕ ವಿಕೋಪದ ದೃಷ್ಟಿಕೋನದಿಂದ ನೋಡುವಂತಿಲ್ಲ ಬದಲಾಗಿ ಮುಂಬರುವ ದಿನಗಳಲ್ಲಿ ಮೂರನೇಯ ಮಹಾಯುದ್ಧಕ್ಕೆ, ಅನೈಸರ್ಗಿಕ ರೋಗ ಪ್ರಸರಣಕ್ಕೆ, ಸ್ವಾರ್ಥಯುತ ನೀತಿ ನಿರೂಪಣೆಗೂ ನಾಂದಿ ಹಾಡಿದರೆ ಅಚ್ಚರಿ ಪಡಬೇಕಾಗಿಲ್ಲ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬಿಸಿ ತಾಪಮಾನದ ಅಪಾಯದಲ್ಲಿ ಭಾರತ
2. ಪರಮಾಣು ಯುದ್ಧ – ಯಾವ ಸಂದರ್ಭದಲ್ಲಿ ಅರಣ್ಯದಲ್ಲಿ ಯಾವ ಪ್ರಾಣಿ ಬೇಟೆಯಾಗುವುದು? ಅಥವಾ ಬೇಟೆಗಾರನಾಗುವುದು ಎಂದು ಅರಿಯುವುದು ಎಷ್ಟು ಕಷ್ಟವೋ ಇಂದಿನ ಜಾಗತಿಕ ವಲಯದಲ್ಲಿ ಯಾವ ರಾಷ್ಟ್ರ ಪರಮಾಣು ಯುದ್ಧವನ್ನು ಆರಂಭಿಸಿಬಿಡಬಲ್ಲದೋ ಎಂದರಿವುದು ಅಷ್ಟೇ ಕ್ಲಿಷ್ಟಕರ. 1991 ಸೋವಿಯತ್ ಯೂನಿಯನ್ ತನ್ನ ಮೊದಲಿದ್ದ ಶಕ್ತಿಯನ್ನು ಕಳೆದುಕೊಂಡ ನಂತರ ತುಸುವೇ ಉಸಿರಾಡಲು ಆರಂಭಿಸಿದ್ದ ದೇಶಗಳಿಗೆಲ್ಲ ಉಕ್ರೇನ್ ಜೊತೆಗಿನ ಯುದ್ಧ ಚಿಂತೆಗೀಡಾಗುವಂತೆ ಮಾಡಿದೆ. ಒಂದುವೇಳೆ ರಷ್ಯಾ ಮೌನವಾಗಿದ್ದರೂ ಕೂಡ ಚೀನಾ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇರಾನ್ ರೀತಿಯ ದೇಶಗಳು ಎಂದು ಸಿಡಿಯಬಹುದೆಂದು ಊಹಿಸುವುದು ಅಸಾಧ್ಯವೇ ಆಗಿದೆ. ಇವೆಲ್ಲವುಗಳ ಮಧ್ಯೆ ದೊಡ್ಡಣ್ಣನೂ ತನ್ನ ಬತ್ತಳಿಕೆಯಲ್ಲಿನ ಶಸ್ತ್ರಾಸ್ತ್ರಗಳನ್ನು ನವೀಕರಿಸಿ ನುಣುಪಾಗಿಸುವುದನ್ನು ನಿಲ್ಲಿಸಿಲ್ಲ.
3. ಸಾಂಕ್ರಾಮಿಕ ರೋಗಗಳು – COVID ಮಹಾಮಾರಿ ಜಗತ್ತಿನ ನಿದ್ದೆಗೆಡಿಸಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡ ಘಟನೆ ಕಣ್ಮುಂದೆಯೇ ಇದೆ. ಸೂಕ್ಶ್ಮವಾಗಿ ಸರ್ಕಾರಕ್ಕಿಂತಲೂ ಬಹುಮುಖ್ಯವಾಗಿ ನಿಮ್ಮ ಜೀವನಕ್ಕೆ ಹೊಣೆಯನ್ನು ಹೊರಬೇಕಾದವರು ನೀವೇ ಎಂಬ ಪ್ರಮುಖ ಪಾಠವನ್ನು ಹೇಳಿ ಕೊಟ್ಟಿದೆ. ಈ ಹಿಂದೆಯೂ ಜಗತ್ತು ಫ್ಲೇಗ್, ಸಿಡುಬು, ಕಾಲೆರಾದಂತಹ ಹಲವಾರು ಸಾಂಕ್ರಾಮಿಕ ರೋಗಗಳನ್ನು ಎದುರಿಸಿದೆ. ಆದರೆ ಮುಂಬರುವ ಸಮಯದಲ್ಲಿ ಮಾನವನೇ ಸ್ವತಃ ನಿರ್ಮಿಸಿದ ಪ್ರಬಲ ಕೃತಕ ವೈರಾಣುಗಳು ಜೈವಿಕ ಯುದ್ಧಕ್ಕೂ ಮುನ್ನುಡಿ ಬರೆಯಬಲ್ಲವು.
4. ಸಾಮಾಜಿಕ ಮಾಧ್ಯಮಗಳು – ಕೇಂಬ್ರಿಜ್ ಅನಾಲಿಟಿಕದಂತಹ ಘಟನೆಗಳು, COVID ಸಂದರ್ಭದಲ್ಲಿ ವ್ಯಾಕ್ಸಿನ್ ವಿರುದ್ಧದ ಸುಳ್ಳುಸುದ್ದಿಗಳ ಪ್ರೊಪೆಗಂಡಾ, ವೈಚಾರಿಕ ಧ್ರುವೀಕರಣ ಇತ್ಯಾದಿಗಳನ್ನು ಗಮನಿಸಿದರೆ ಸಾಮಾಜಿಕ ಜಾಲತಾಣಗಳ ಸಾಮರ್ಥ್ಯವನ್ನು ಅರಿಯಬಹುದು. ದಿನಕಳೆದಂತೆ ಇವುಗಳು ಇಂದಿನ ಜನಮಾನಸದ ದೈನಂದಿನ ಜೀವನದ ಅವಿಭಾಜ್ಯ ಅಂಗಗಳಾಗಿ ಮಾರ್ಪಟ್ಟಿವೆ. ಇವುಗಳ ಬಳಕೆ ವ್ಯಸನರೂಪವಾಗಿ ಮಾರ್ಪಾಡಾಗಿ, ಸಹಜಜೀವನಕ್ಕಿಂತ ತಾಂತ್ರಿಕತೆಯಲ್ಲೇ ತಮ್ಮ ಜೀವನ ದಾಖಲಿಸುವ ಭರದಲ್ಲಿ ನೈಜತೆಯ ಮಾಧುರ್ಯವನ್ನು ಮನುಕುಲ ಕಳೆದುಕೊಳ್ಳುವ ಸಾಧ್ಯತೆಯಿದೆ. ಇಂತಿರುವಾಗ ಪ್ರಕೃತಿದತ್ತವಾಗಿ ಮನುಜನಿಗೊದಗಿಬಂದ ಸಾಮರ್ಥ್ಯ ಇವುಗಳ ಅತಿಯಾದ ಬಳಕೆಯಿಂದ ಕುಂಠಿತಗೊಳ್ಳಬಹುದು.
5. ಅಸಾಧಾರಣ ಸಾಮರ್ಥ್ಯವುಳ್ಳ AI – ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕೃತಕ ಬುದ್ಧಿಮತ್ತೆ ತನ್ನ ಕಾರ್ಯಾಲಾಪಗಳಲ್ಲಿ ಸಹಕಾರಿಯಾಗಿರಲೆಂಬ ಉದ್ದೇಶದಿಂದ ನಿರ್ಮಿಸಿದ ಮನುಜನಿಗೆ ಆತನ ನಿರೀಕ್ಷೆ ಮೀರಿ ಕಾರ್ಯಕ್ಷಮತೆಯನ್ನು ವಿಸ್ತರಿಸಿಕೊಳ್ಳುತ್ತ ಆತನ ಬದುಕನ್ನೆಲ್ಲ ಆವರಿಸಿಕೊಳ್ಳುತ್ತ ಹೋಗುತ್ತಿದೆ. ಮನುಷ್ಯನಿಗೆ ಯಂತ್ರವೊಂದು ಪರ್ಯಾಯವಾಗಬಹುದೆಂಬ ಪರಿಕಲ್ಪನೆ ಎಂದು ಧೃಢಗೊಳ್ಳುವುದೋ ಅಂದೇ ಮನುಕುಲದ ಅವನತಿ ಆರಂಭವೆನ್ನಬಹುದು. ಇತ್ತೀಚಿಗೆ AI ನ್ಯೂಸ್ ರೀಡರ್, ಸ್ವಯಂ- ಚಾಲಿತ ಕಾರಿನಂತೆ ಇತರೆ ಯಂತ್ರೋಪಕರಣಗಳಿಗೆ ಸ್ವಯಂ ಚಾಲಿತ ವಿಕಸನ ರೂಪವನ್ನು ಕೂಡ ಒದಗಿಸಿಕೊಟ್ಟರೆ ಆಗಬಹುದಾದ ಪರಿಣಾಮಗಳ ಕುರಿತು ಸ್ವತಃ ಅವುಗಳ ನಿರ್ಮಾತೃವಿಗೂ ಕಲ್ಪನೆಯಿರಲಿಕ್ಕಿಲ್ಲ. ಇವೆಲ್ಲವುಕ್ಕಿಂತ ಮುಖ್ಯವಾಗಿ ಮಿಲಿಟರಿ ರೊಬೊಟಿಕ್ಸ್ ಕ್ಷೇತ್ರದಲ್ಲಿ ಸ್ವಯಂ ಚಾಲಿತ ಯಂತ್ರ ಮಾನವನೋ ಅಥವಾ ಯೋಧನನ್ನೋ ನಿರ್ಮಿಸಿದರೆ? ಸ್ವತಂತ್ರ ಆಲೋಚನಾ ಶಕ್ತಿಯನ್ನು ಕಂಡು ಕಲಿಯುವ ಅಲ್ಗೊರಿಥಮ್ ಅನ್ನು ಆಂತರಿಕವಾಗಿ ಅಳವಡಿಸಿದರೆ ಏನಾಗಬಲ್ಲದು ಎಂಬುದು ಇಂದಿಗೂ ಅನಿಶ್ಚಿತ ಸ್ಥಿತಿಯಲ್ಲಿದೆ.
6. ಜೇನು ಸಂತತಿಯ ನಾಶ – ಬರೀ ನಾಲ್ಕು ವರ್ಷಗಳ ಕಾಲ ಜೇನುಹುಳುಗಳ ಅಸ್ತಿತ್ವ ಈ ಜಗತ್ತಿನಲ್ಲಿ ಇಲ್ಲವೆಂದರೆ ಮನುಷ್ಯ ಸಂಕುಲವೇ ನಾಶವಾಗುತ್ತದೆ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟಿನ್ ಹೇಳಿದ್ದಾರೆ. ಜೇನುನೊಣ ಪ್ರಕೃತಿಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಅವುಗಳಿಲ್ಲದೆ ಪರಾಗಸ್ಪರ್ಶ ಸಾಧ್ಯವೇ ಇಲ್ಲ. ಅಂದಾಗ ಸಹಜವಾಗಿ ಬೆಳೆ ಉತ್ಪಾದನೆಯ ಮೇಲೂ ಇದು ದುಷ್ಪಾರಿಣಾಮವನ್ನು ಉಂಟುಮಾಡುತ್ತದೆ. ಆಹಾರವೇ ಉತ್ಪಾದನೆಯಾಗದಿದ್ದರೆ ಮನುಜನಿರಲು ಸಾಧ್ಯವೇ. ಇಷ್ಟೆಲ್ಲಾ ಅರಿತ ಮೇಲೂ ನಮ್ಮ ತೋಟ, ಹೊಲಗಳಲ್ಲಿ ಕೀಟನಾಶಕಗಳನ್ನು ಮತ್ತು ರಾಸಾಯನಿಕಗಳನ್ನು ಸಿಂಪಡಿಸುವುದನ್ನು ಬಿಡುತ್ತಿದ್ದೇವೆಯೇ ? ಎಂಬ ಪ್ರಶ್ನೆಯ ಕುರಿತಂತೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.
7. ಕ್ಷುದ್ರಗ್ರಹ ಪರಿಣಾಮ – ಕ್ಷುದ್ರಗ್ರಹಗಳನ್ನು ಅಸ್ಟೆರೊಯ್ಡ್ ಗಳೆಂದು ಕೂಡ ಸಂಬೋಧಿಸುತ್ತಾರೆ. ಸೌರ ಮಂಡಲದಲ್ಲಿರುವ ಕುಬ್ಜಗ್ರಹಗಳು ಇವಾಗಿವೆ. ಕೆಲವು ವಿಜ್ಞಾನಿಗಳ ಅಭಿಪ್ರಾಯದಂತೆ ಇವುಗಳ ಹುಟ್ಟು ಮಿಲಿಯನ್ ವರ್ಷಗಳ ಹಿಂದಿನ ಚೂರುಚೂರಾದ ಗ್ರಹಗಳ ವಸ್ತುಗಳಿಂದ ಮಾಡಲ್ಪಟ್ಟಿದೆ. ಈಗಾಗಲೇ ಇವುಗಳಿಗೆ ಭೂಮಂಡಲದ ಮೇಲಿದ್ದ ಅತ್ಯಂತ ಬಲಿಷ್ಠ ಜೀವಿಸಮೂಹವೆಂದೇ ಗುರುತಿಸಲ್ಪಡುವ ಡೈನೋಸಾರ್ ಗಳ ನಾಗರೀಕತೆಯನ್ನು ಸಂಪೂರ್ಣವಾಗಿ ನಾಶ ಮಾಡಿದ ಅಪವಾದವಿದೆ. ಇಂತಿರುವಾಗ ಮಗದೊಮ್ಮೆ ಬಾಹ್ಯಾಕಾಶದಿಂದ ಉರುಳಿ ಭೂಮಂಡಲಕ್ಕೆ ಅಪಾಯವನ್ನು ತಂದೊಡ್ಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಅಂತರಿಕ್ಷದಲ್ಲಿ ಅಸ್ಟ್ರಾಯ್ಡ್ ಗಳು ಇರುವಾಗಲೇ ಅಂದರೆ ಭುವಿಯತ್ತ ಲಗ್ಗೆಯಿಡುತ್ತಿರುವಾಗಲೇ ನಾಶಮಾಡಿಬಿಡಬಲ್ಲ ರಕ್ಷಣಾ ವ್ಯವಸ್ಥೆಯನ್ನು NASA ನಿರ್ಮಿಸುವತ್ತ ಕಾಲಿಟ್ಟಿದ್ದೆ. ಆದರೂ ಅದರ ಯಥಾವತ್ ಪರೀಕ್ಷೆ ಮಾತ್ರ ನೈಜ ರಣಾಂಗಣದಲ್ಲೇ ಆಗಬೇಕಿದೆ. ಕಾರಣ ಹಾಲಿವುಡ್ ಸಿನಿಮಾವಂತೂ ಇದಲ್ಲವಲ್ಲ.
8. ಸಂಕೀರ್ಣ ವ್ಯವಸ್ಥೆಯ ಅಸ್ಥಿರತೆ – ಇಂದಿನ ದಿನಮಾನಗಳಲ್ಲಿ ಯಾವುದೇ ಸಾಮಾಜಿಕ, ಆರ್ಥಿಕ ಮತ್ತು ತಾಂತ್ರಿಕ ವ್ಯವಸ್ಥೆಯನ್ನು ಗಮನಿಸಿ. ಅತ್ಯಂತ ಉನ್ನತ ಸ್ಥಿತಿಯಲ್ಲಿರುವಾಗಲೇ ಅಲ್ಪ ದೋಷವುಂಟಾದರೂ ಸಂಪೂರ್ಣ ವ್ಯವಸ್ಥೆಯೇ ಅಸ್ಥಿರವಾಗಿ ಕುಸಿದುಬಿಡುವ ಆತಂಕವಿದೆ. ಈ ಸಂಕೀರ್ಣತೆಯು ಆರ್ಥಿಕ, ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಮತ್ತು ಇತರೆ ಎಲ್ಲ ವ್ಯವಸ್ಥೆಗಳ ನಡುವಿನ ಪರಸ್ಪರ ಸಂಬಂಧ ಮತ್ತು ಅತೀವ ಸೂಕ್ಷ್ಮ ಅವಲಂಬನೆಯ ಕಾರಣದಿಂದ ಉಂಟಾಗಿರುವದು. ಕೇವಲ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸನ್ನಿವೇಶ ಹಲವಾರು ದೇಶಗಳ ವ್ಯವಸ್ಥೆ ಮತ್ತು ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರಿರುವುದನ್ನು ನಾವೇ ಕಾಣುತ್ತಿದ್ದೇವೆ. ಹೀಗಾಗಿ ಸಂಕೀರ್ಣ ವ್ಯವಸ್ಥೆ ಎಷ್ಟು ಉಪಯುಕ್ತವೋ ಅಷ್ಟೇ ಸೂಕ್ಷ್ಮವೂ ಹೌದು.
9. ಏಲಿಯನ್ ದಾಳಿ – ಸೌರಮಂಡಲದಿಂದ ಆಚೆ ದೂರದಲ್ಲೆಲ್ಲೋ ನಮ್ಮಂತೆಯೇ ಯೋಚಿಸಬಲ್ಲ ಅಥವಾ ನಮಗಿಂತಲೂ ಬುದ್ಧಿವಂತ, ಶಕ್ತಿವಂತ ಸಮಾಜನಿರ್ಮಿಸಿರಬಲ್ಲ ಜೀವಿಗಳಿವೆಯೇ ಎಂಬ ಪ್ರಶ್ನೆ ಈಗಲೂ ಮನುಜಕುಲವನ್ನು, ವೈಜ್ಞಾನಿಕ ಲೋಕವನ್ನು ಕಾಡುತ್ತಿರುವುದು ಸುಳ್ಳಲ್ಲ. ಒಂದೊಮ್ಮೆ ಅಸ್ತಿತ್ವದಲ್ಲಿದ್ದರೆ, ಮುಂದೊಮ್ಮೆ ನಮ್ಮ ಭೂಮಿಗೆ ಅತಿಥಿಗಳಾಗಿ ಧಾವಿಸಿ ನಮ್ಮೊಂದಿಗೆ ಅತಿಥಿಯಾಗಿಯೋ ಅಥವಾ ನಮ್ಮನ್ನೇ ಅತಿಥಿಯನ್ನಾಗಿಸಿಯೋ ಬದುಕಬಲ್ಲ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಇಷ್ಟೆಲ್ಲ ಸವಾಲುಗಳ ಮಧ್ಯೆ 21 ನೇ ಶತಮಾನವನ್ನು ಭೂಮಿ ಮತ್ತು ಮನುಜಕುಲ ದಾಟಬೇಕಿದೆ. ಈ ನೂರೆಂಟು ಅಡೆತಡೆಗಳನ್ನು ದಾಟಿದಾಗ ಮಾತ್ರವೇ ನಮ್ಮ ಮತ್ತು ಭೂಮಾತೆಯ ಅಹವಾಲನ್ನು ಶತಮಾನದಾಚೆ ದಾಟಿಸುವಲ್ಲಿ ಯಶಸ್ವಿಯಾಗಬಲ್ಲೆವು. ಅಲ್ಲವೇ?
ಇದನ್ನೂ ಓದಿ: ಭಾವಲೋಕದೊಳ್ ಅಂಕಣ : ಮೊದಲ ಬಾರಿ ಅವಳು ಬಂದು ಕೈ ಹಿಡಿದಾಗ ನಾನು ಏನೂ ಆಗಿರಲಿಲ್ಲ, ಮುಂದೆ ಅವಳೇ ಎಲ್ಲವೂ ಆದಳು!