ಕನ್ನಡಿಗರಿಗೆ ರವಿ ಬೆಳಗೆರೆ ಅವರನ್ನು ಪರಿಚಯ ಮಾಡುವುದು ಎಂದರೆ ಸೂರ್ಯನಿಗೆ ಕನ್ನಡಿ ಹಿಡಿದ ಹಾಗೆ! ಕನ್ನಡದ ಧೀಮಂತ ಪತ್ರಕರ್ತ, ಲೇಖಕ, ಕಾದಂಬರಿಕಾರ ಹಾಗೂ ಸಿನೆಮಾ ನಟ ಅವರು. ‘ಹಾಯ್ ಬೆಂಗಳೂರು’ ಪತ್ರಿಕೆಯು ರಾಜ್ಯದ ಅತ್ಯಂತ ಜನಪ್ರಿಯ ವಾರಪತ್ರಿಕೆಯಾಗಿ ಬೆಳೆಯಲು ಕಾರಣ ಅವರ ಬರವಣಿಗೆ ಎಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ. ಅವರು ಬರೆದ ಅಷ್ಟೂ ಕಾದಂಬರಿಗಳು ಕನ್ನಡದ ಅಮೂಲ್ಯ ಆಸ್ತಿಗಳು ಎಂದು ನನ್ನ ಅಭಿಪ್ರಾಯ. ಅವರ ಎಲ್ಲ ಪುಸ್ತಕಗಳನ್ನೂ ನಾನು ತುಂಬಾ ಪ್ರೀತಿಯಿಂದ ಓದಿದ ಕಾರಣ ನನ್ನ ಬರಹದ ಮೇಲೆ ಅವರ ದಟ್ಟವಾದ ಪ್ರಭಾವ ಆಗಿದೆ. ಅಷ್ಟರ ಮಟ್ಟಿಗೆ ನಾನು ಅವರಿಗೆ ಋಣಿ.
ಅವರು ತಮ್ಮ ಬರವಣಿಗೆಯ ಭಾಗವಾಗಿ ಹಲವು ದೇಶಗಳನ್ನು ಸುತ್ತಾಡಿದ್ದಾರೆ. ಅದರಲ್ಲಿ ಈಜಿಪ್ಟ್ ದೇಶಕ್ಕೆ ಅವರು ಭೇಟಿ ನೀಡಿದಾಗ ಒಂದು ಸ್ಮರಣೀಯ ಅನುಭವ ಅವರಿಗೆ ಆಯಿತು. ಅದನ್ನು ಅವರದ್ದೇ ಮಾತುಗಳಲ್ಲಿ ಕೇಳುತ್ತ ಮುಂದೆ ಹೋಗೋಣ.
ನೈಲ್ ನದಿಯ ಮಗ್ಗುಲಲ್ಲಿ ಮೈ ಚಾಚಿ ಮಲಗಿರುವ ಹಾಗೂ ಪ್ರಾಚೀನ ನಾಗರಿಕತೆಯ ತೊಟ್ಟಿಲು ಆಗಿರುವ ಈಜಿಪ್ಟ್ ದೇಶಕ್ಕೆ ನಾನು ಹೋಗಿ ಅದರ ರಾಜಧಾನಿ ಆದ ಕೈರೋದ ಒಂದು ವೈಭವೋಪೇತ ಆದ ಒಂದು ತ್ರೀ ಸ್ಟಾರ್ ಹೋಟೆಲಿನಲ್ಲಿ ವಾಸ್ತವ್ಯ ಹೂಡಿದ್ದೆ. ಮಾಮೂಲಿನಂತೆ ಹಗಲು ಕ್ಯಾಮೆರಾ ಹಿಡಿದುಕೊಂಡು ಎಲ್ಲ ಕಡೆ ಸುತ್ತಾಡುವುದು, ರಾತ್ರಿ ರೂಮಿಗೆ ಬಂದು ಸಿಗರೇಟ್ ಸುಡುತ್ತ ಇಡೀ ರಾತ್ರಿ ಬರೆಯುವುದು ನನ್ನ ದಿನಚರಿ.
ಅದೇ ಹೋಟೆಲಿನಲ್ಲಿ ಒಬ್ಬಳು ಈಜಿಪ್ಟ್ ಸುಂದರಿ ತನ್ನ ದೇಶದ ಸಾಂಪ್ರದಾಯಿಕ ಡ್ರೆಸ್ ಧರಿಸಿ ರಿಸೆಪ್ಶನ್‌ನಲ್ಲಿ ನಗು ತುಳುಕಿಸುತ್ತ ಕುಳಿತಿರುತ್ತಿದ್ದಳು. ಆಕೆ ನನ್ನ ಕಣ್ಣಿಗೆ ಭೂಲೋಕದ ಅತಿ ಸುಂದರಿ ಆಗಿ ಕಂಡು ಬರುತ್ತಾಳೆ.
ಆಕೆಯ ಮುಗ್ಧ ನಗು, ಮೆದುವಾದ ಮಾತು, ಅರಳುವ ಕಣ್ಣುಗಳು, ಚೂಪಾದ ಮೂಗು ನೋಡುತ್ತ ನಾನು ಆಕೆಯನ್ನು ತುಂಬಾ ಮೆಚ್ಚಿಕೊಂಡೆ. ನೀನು ಈ ಜಗತ್ತಿನಲ್ಲಿಯೇ ಅತ್ಯಂತ ಸುಂದರಿ ಎಂದು ಆಕೆಗೆ ಹೇಳಿದಾಗ ಆಕೆಯ ಕೆನ್ನೆಯಲ್ಲಿ ಕಾಮನಬಿಲ್ಲು ಮೂಡುತ್ತದೆ. ಆಕೆ ನನ್ನ ಬಗ್ಗೆ ತುಂಬಾ ಆಸಕ್ತಿಯಿಂದ ಕೇಳಿ ತಿಳಿದುಕೊಳ್ಳುತ್ತಾಳೆ. ಭಾರತ ಅಂದಾಗ ಬೆರಗಾಗುತ್ತಾಳೆ. ನಾನು ಒಬ್ಬ ಲೇಖಕ ಅನ್ನುವಾಗ ಆಕೆಯ ಕಣ್ಣಲ್ಲಿ ಗೌರವದ ಒರತೆ ಚಿಮ್ಮುತ್ತದೆ. ನನಗೆ ಆ ಹುಡುಗಿಯನ್ನು ನೋಡುವಾಗ ನನ್ನ ಮಗಳು ಭಾವನಾ ನೆನಪಾಗುತ್ತಾಳೆ.
ರಿಸೆಪ್ಷನಿಸ್ಟ್ ಆಗಿ ಕೂಡಾ ಆಕೆಯ ಸೇವೆ ಅದ್ಭುತವೇ ಆಗಿತ್ತು. ಒಂದು ಸಣ್ಣ ತಪ್ಪು ಕೂಡ ಇಲ್ಲದೆ ಅವಳು ತನ್ನ ಕರ್ತವ್ಯದ ನಿರ್ವಹಣೆ ಮಾಡಿದ್ದಳು. ಎಲ್ಲ ಗ್ರಾಹಕರ ಜೊತೆಗೂ ಆಕೆ ಅತ್ಯಂತ ಪ್ರೀತಿಯಿಂದ ಮಾತಾಡುತ್ತಿದ್ದಳು.
ಹಾಗಿರುವಾಗ ನಾನು ಭಾರತಕ್ಕೆ ಹೊರಡುವ ಕ್ಷಣ ಬಂದಿತು. ನಾನು ಆಕೆಗೆ ಥ್ಯಾಂಕ್ಸ್ ಹೇಳಲು ರಿಸೆಪ್ಶನ್‌ಗೆ ಬಂದೆ. ಆಕೆಯ ಕಣ್ಣಲ್ಲಿ ಕಂಡೂ ಕಾಣದಂತೆ ಒಂದು ತೊಟ್ಟು ನೀರು ಜಿನುಗಿದ್ದು ನನ್ನ ಗಮನಕ್ಕೆ ಬಂದಿತು.
ಆಕೆಯು ” ಸರ್, ನೀವು ಭಾರತಕ್ಕೆ ಹೋಗುತ್ತಾ ಇದ್ದೀರಿ. ಇನ್ನು ಯಾವಾಗ ಬರುತ್ತೀರೋ ಗೊತ್ತಿಲ್ಲ. ನೀವು ಲೇಖಕ ಎಂದು ಹೇಳಿದ್ದೀರಿ. ನಿಮಗೆ ನಾನೊಂದು ಅಮೂಲ್ಯವಾದ ಉಡುಗೊರೆ ಪ್ಯಾಕ್ ಮಾಡಿ ಇಟ್ಟಿದ್ದೇನೆ. ಅದು ನನಗೆ ನನ್ನ ಪ್ರಾಣಕ್ಕಿಂತ ಹೆಚ್ಚು. ಅದನ್ನು ಭಾರತಕ್ಕೆ ಹೋದ ನಂತರ ತೆರೆಯಬೇಕು. ಇದು ನನ್ನ ವಿನಂತಿ. ಸಾಧ್ಯವಾದರೆ ನನ್ನ ಬಗ್ಗೆ ನಿಮ್ಮ ಪತ್ರಿಕೆಯಲ್ಲಿ ಬರೆಯಿರಿ” ಎಂದು ಹೇಳುತ್ತ ಆಕೆ ಆ ಉಡುಗೊರೆ ಕೊಟ್ಟು ನನ್ನನ್ನು ಬೈ ಹೇಳಿ ಬೀಳ್ಕೊಡುತ್ತಾಳೆ. ಆಕೆಯ ಹಣೆಯ ಮೇಲೊಂದು ಮುತ್ತು ಕೊಡಬೇಕು ಅಂತ ನನಗೆ ಅನ್ನಿಸಿದರೂ ನಿಯಂತ್ರಣ ಮಾಡಿಕೊಂಡೆ!
ನಾನು ಭಾರತಕ್ಕೆ ಬಂದು ಒಂದೆರಡು ದಿನಗಳು ಆದ ನಂತರ ಆ ಸುಂದರಿ ಮತ್ತೆ ನೆನಪಾಗುತ್ತಾಳೆ. ಆಕೆ ಕೊಟ್ಟ ಉಡುಗೊರೆಯು ನೆನಪಾಗುತ್ತದೆ. ನಾನು ನಿಧಾನಕ್ಕೆ ಸೂಟ್‌ಕೇಸ್ ತೆರೆದು ಆಕೆಯ ಉಡುಗೊರೆಯ ಪೊಟ್ಟಣವನ್ನು ಬಿಚ್ಚುತ್ತೇನೆ. ಅದನ್ನು ನೋಡಿದ ನನಗೆ ನಿಜಕ್ಕೂ ಶಾಕ್ ಆಯಿತು!
ಆಕೆ ಕೊಟ್ಟದ್ದು ಈಜಿಪ್ಟ್ ದೇಶದ ಒಂದು ಪುಟ್ಟ ಧ್ವಜ! ಅದರ ಜೊತೆಗೆ ಒಂದು ಸಣ್ಣ ಚೀಟಿ ಕೂಡ ಇತ್ತು. ಆಕೆ ಬರೆದಿದ್ದಳು..
“ಸರ್, ಇದು ನನಗೆ ಪ್ರಾಣಕ್ಕಿಂತ ಅಮೂಲ್ಯವಾದದ್ದು. ನೀವು ಲೇಖಕರು, ಭಾರತೀಯರು ಎಂಬ ಗೌರವದಿಂದ ಇದನ್ನು ನಾನು ನಿಮಗೆ ಉಡುಗೊರೆಯಾಗಿ ಕೊಟ್ಟಿರುವೆ. ನಿಮ್ಮ ಮತ್ತು ನಮ್ಮ ರಾಷ್ಟ್ರೀಯ ಧ್ವಜಗಳು ಎರಡೂ ತ್ರಿವರ್ಣ ಧ್ವಜಗಳು. ನಿಮ್ಮಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಇವೆ. ನಮ್ಮಲ್ಲಿ ಕೆಂಪು, ಬಿಳಿ ಮತ್ತು ಕಪ್ಪು ಇವೆ! ನಿಮ್ಮಲ್ಲಿ ನಡುವೆ ಅಶೋಕ ಚಕ್ರ ಇದೆ. ನಮ್ಮಲ್ಲಿ ನಮ್ಮ ರಾಷ್ಟ್ರೀಯ ಸಂಕೇತವಾದ ಹದ್ದು ಇದೆ. ಭಾರತ ಮತ್ತು ಈಜಿಪ್ಟ್ ದೇಶದ ಸೌಹಾರ್ದತೆ ಮತ್ತು ಪ್ರೀತಿಯ ಸಂಕೇತವಾಗಿ ನಾನು ನಿಮಗೆ ಈ ಧ್ವಜವನ್ನು ಉಡುಗೊರೆ ಕೊಟ್ಟಿದ್ದೇನೆ. ದಯವಿಟ್ಟು ಈ ಉಡುಗೊರೆಯನ್ನು ಜಾಗ್ರತೆಯಿಂದ ಕಾಪಾಡಿ!”
ಆ ಸಾಲುಗಳನ್ನು ಓದುತ್ತ ಬೆಳಗೆರೆ ಕಣ್ಣೀರು ಸುರಿಸಿದ್ದು, ಆ ಧ್ವಜವನ್ನು ಅವರು ಸಾಯುವತನಕ ತನ್ನ ಟೇಬಲ್ ಮೇಲೆ ಇಟ್ಟು ಜಾಗೃತೆ ಮಾಡಿದ್ದು ನಿಜಕ್ಕೂ ಅಚ್ಚರಿಯ ಸಂಗತಿ! ಆಕೆಯನ್ನು ಅವರು ಕೊನೆಯವರೆಗೆ ಮರೆಯಲಿಲ್ಲ. ಆಕೆ ಕೊಟ್ಟ ಉಡುಗೊರೆಯನ್ನು ಕೂಡ!
ಇದನ್ನೂ ಓದಿ | ರಾಜ ಮಾರ್ಗ ಅಂಕಣ | ವಯಸ್ಸಿನ ಬಗ್ಗೆ ಅವನು ಅಚಿಂತ! 40ನೇ ವಯಸ್ಸಲ್ಲಿ ಕೈಯಲ್ಲಿತ್ತು ನಾಲ್ಕು ಪದಕ