ಅಲಕಾ ಕೆ
ಭಾರತೀಯ ಮನಸ್ಸುಗಳಲ್ಲಿ ಸ್ವಾತಂತ್ರ್ಯವೆಂಬ ಕನಸು ಪಲ್ಲವಿಸಿದ್ದಕ್ಕೆ ಸುದೀರ್ಘ ಇತಿಹಾಸವಿದೆ. ಪರಕೀಯರ ಬಂಧನದಿಂದ ವಿಮೋಚನೆ ಪಡೆಯಬೇಕು ಮತ್ತು ಸ್ವರಾಜ್ಯ ಬೇಕು ಎಂಬ ಕಲ್ಪನೆಯ ಉಗಮವನ್ನು ಯಾವುದೋ ಒಂದು ಸ್ಥಾನದಲ್ಲಿ ಗುರುತಿಸುವುದು ಸಾಧ್ಯವಿಲ್ಲ. ಕಾರಣ, ಹೋರಾಟದ ಕೆಚ್ಚೆಂಬುದು ಹಂತಹಂತವಾಗಿ ಪ್ರತಿಯೊಬ್ಬರ ನರ-ನಾಡಿಯಲ್ಲಿ ಪ್ರವಹಿಸಿದ್ದು. ಇದಕ್ಕಾಗಿ ನಾವೆಲ್ಲ ಒಗ್ಗೂಡಬೇಕು, ಹೋರಾಟ ಸಂಘಟಿತವಾಗಿರಬೇಕು ಎಂಬೆಲ್ಲ ಕಲ್ಪನೆಗಳು ತಿಳಿವಿಗೆ ಬರುವ ಮುನ್ನವೇ ಸೀಮೆಯ ಉದ್ದಗಲಕ್ಕೆ ಉರಿದುಹೋದ ನಕ್ಷತ್ರ ಕಡ್ಡಿಗಳಂತೆ ಹಲವು ಸಂಸ್ಥಾನಗಳು, ವೀರರು, ಸಮುದಾಯಗಳು, ಘಟನೆಗಳು ಮತ್ತು ಬಂಡಾಯಗಳು ನಮಗೆ ಕಾಣುತ್ತವೆ. ಇವು ನೂರಾರು ವರ್ಷಗಳ ಹರವಿನಲ್ಲಿ, ಹಲವಾರು ಸಂಸ್ಥಾನಗಳ ವ್ಯಾಪ್ತಿಯಲ್ಲಿ ಘಟಿಸಿದಂಥವು. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯ ಇತಿಹಾಸವನ್ನು ಪರಾಂಬರಿಸಿದರೆ- ಮೂರು ಪ್ರಮುಖ ಕಾಲಘಟ್ಟಗಳನ್ನಾಗಿ ವಿಂಗಡಿಸಬಹುದು.
ಮೊದಲನೆಯದು, ದೇಶೀಯ ರಾಜರುಗಳು ಬ್ರಿಟಿಷರ ವಿರುದ್ಧ ಹೋರಾಡಿದ್ದು.
ಎರಡನೆಯದು, ಸಶಸ್ತ್ರ ಬಂಡಾಯಗಳ ಕಾಲ.
ಮೂರನೆಯದು, ಸಕ್ರಿಯ ಚಳುವಳಿಗಳ ಕಾಲ.
ಸಕ್ರಿಯ ಚಳವಳಿಗಳು ಪ್ರಾರಂಭವಾದ ಮೇಲೂ ಅಲ್ಲಲ್ಲಿ ಬಂಡಾಯದ ದನಿ ಕೇಳಿಸುತ್ತಲೇ ಇತ್ತು. ಆದರೆ ಸಂಘಟಿತವಾದ ಹೋರಾಟದಿಂದಲೇ ಗೆಲುವು ಸಾಧ್ಯ ಎಂಬ ಕಲ್ಪನೆ ಜನಮಾಸನದಲ್ಲಿ ಪ್ರಬಲವಾಗಿ ಬೇರೂರಿದ್ದರಿಂದ ಹಾಗೂ ಮಹಾತ್ಮ ಗಾಂಧಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಭಾವ ಎಲ್ಲೆಡೆ ವ್ಯಾಪಿಸಿದ್ದರಿಂದ ಬಂಡಾಯಗಳು ಮೊದಲಿಗಿಂತ ಕ್ಷೀಣಿಸಿದ್ದವು. ಈಗಿನ ಕರ್ನಾಟಕ ಎಂಬುದು ಸ್ವಾತಂತ್ರ್ಯ-ಪೂರ್ವ ಭಾರತದಲ್ಲಿ ಇರದಿದ್ದರೂ, ಕನ್ನಡ ಸೀಮೆಯೊಂದು ಅಸ್ತಿತ್ವದಲ್ಲಿತ್ತು. ಆದರೆ ಅದು ಹಲವು ಸಂಸ್ಥಾನಗಳ ಆಳ್ವಿಕೆಯಲ್ಲಿ ಹರಿದುಹೋಗಿತ್ತು. 1956ರಲ್ಲಿ ಅಸ್ತಿತ್ವಕ್ಕೆ ಬಂದ ವಿಶಾಲ ಮೈಸೂರು ರಾಜ್ಯದ ಅನ್ವಯ ಹೇಳುವುದಾದರೆ- ಬೀದರ್, ಗುಲ್ಬರ್ಗಾ, ರಾಯಚೂರು ಪ್ರದೇಶಗಳು ಹೈದರಾಬಾದ್ ಪ್ರಾಂತ್ಯದ ಆಡಳಿತದಲ್ಲಿದ್ದವು. ಬಿಜಾಪುರ, ಬೆಳಗಾವಿ, ಧಾರವಾಡ ಮತ್ತು ಉತ್ತರಕನ್ನಡ ಜಿಲ್ಲೆಗಳು ಮುಂಬಯಿ ಪ್ರಾಂತ್ಯದ ಅಡಿಯಲ್ಲಿದ್ದವು. ದಕ್ಷಿಣಕನ್ನಡ ಮತ್ತು ಬಳ್ಳಾರಿಯ ಕೆಲವು ಭಾಗಗಳು ಮದರಾಸಿನ ಆಳ್ವಿಕೆಗೆ ಒಳಪಟ್ಟಿದ್ದವು. ಕೊಡಗು ಪ್ರತ್ಯೇಕ ರಾಜ್ಯವಾಗಿತ್ತು. ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ಕೋಲಾರ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಜಿಲ್ಲೆಗಳು ಮೈಸೂರು ಸಂಸ್ಥಾನದ ಛತ್ರಛಾಯೆಯಲ್ಲಿದ್ದವು.
ಸ್ವಾತಂತ್ರ್ಯ ಹೋರಾಟಕ್ಕೆ ತನು-ಮನ-ಧನ ಸಮರ್ಪಣೆ…
ಇವುಗಳ ಆಡಳಿತ ಯಾವುದೇ ಸಂಸ್ಥಾನಕ್ಕೆ ಸೇರಿದ್ದರೂ, ಇಲ್ಲಿನ ಜನ ಸ್ವಾತಂತ್ರ್ಯ ಹೋರಾಟಕ್ಕೆ ತನು-ಮನ-ಧನದಿಂದ ಸಮರ್ಪಿಸಿಕೊಂಡವರು. ʻಭಾರತʼ ಎಂಬ ಕಲ್ಪನೆಯ ಮಗ್ಗುಲಲ್ಲೇ ʻಕರ್ನಾಟಕʼ ಎಂಬ ಕಲ್ಪನೆಯನ್ನೂ ಕಟ್ಟಿಕೊಂಡವರು ಈ ಮಂದಿ. ಹಾಗೆ ನೋಡಿದರೆ ಪ್ರಾಂತ್ಯವಾರು ದೃಷ್ಟಿಯಿಂದ ಸ್ವರಾಜ್ಯ ಹೋರಾಟದ ಇತಿಹಾಸವನ್ನು ವಿಂಗಡಿಸುವುದು ನಿಜಕ್ಕೂ ಕಷ್ಟ. ಕಾರಣ, ಪ್ರತಿರೋಧಗಳು ಹಲವು ಪ್ರಾಂತ್ಯಗಳಲ್ಲಿ ಒಟ್ಟಿಗೇ ಭುಗಿಲೇಳುತ್ತಿದ್ದವು ಅಥವಾ ಅಂತರ್ಗಾಮಿಯಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುತ್ತಿದ್ದವು. ಈ ಎಲ್ಲಾ ಭಾಗಗಳ ಜನರು ಸ್ವರಾಜ್ಯಕ್ಕಾಗಿ ಏಕಪ್ರಕಾರವಾಗಿ ದುಡಿದವರು. ಸ್ವರಾಜ್ಯದ ಬಗೆಗಿನ ಮಾನುಷವಾದ ಚೈತನ್ಯವನ್ನು ಭೌಗೋಳಿಕ ಗೆರೆಗಳಲ್ಲಿ ಸೀಮಿತಗೊಳಿಸುವುದೇ ಸವಾಲು. ಆದಾಗ್ಯೂ, ಪ್ರಾಂತ್ಯವಾರು ದೃಷ್ಟಿಯಿಂದ ಸ್ವಾತಂತ್ರ್ಯ ಹೋರಾಟದ ಮೈಲಿಗಲ್ಲುಗಳ ಮೇಲೆ ಬೆಳಕು ಬೀರುವ ಪ್ರಯತ್ನವಿದು. ಈ ನಿಟ್ಟಿನಲ್ಲಿ ಮೈಸೂರು-ಕರ್ನಾಟಕ ಭಾಗದ ಪ್ರಾದೇಶಿಕ ಅಸ್ಮಿತೆಯು ಸ್ವಾತಂತ್ರ್ಯ ಹೋರಾಟಕ್ಕೆ ತಿದಿಯೊತ್ತಿತೇ ಮತ್ತು ಇಲ್ಲಿನ ಜನರ ಕಾಣ್ಕೆ ಹೇಗಿತ್ತು ಎಂಬುದರ ಮೇಲೊಂದು ಬೆಳಕಿಂಡಿಯಿದು.
ಮೈಸೂರು-ಕರ್ನಾಟಕದ ಭಾಗಕ್ಕೆ ಇಂದಿಗೂ ಸ್ಥೂಲವಾಗಿ ʻಹಳೇ-ಮೈಸೂರುʼ ಎಂಬ ಹೆಸರು ಪ್ರಚಲಿತದಲ್ಲಿದೆ. ಈ ಅಜಮಾಸು ಭಾಗವು ಸುಮಾರು ಹದಿನಾಲ್ಕನೇ ಶತಮಾನದಿಂದಲೇ ಯದುವಂಶದ, ಅಂದರೆ ಮೈಸೂರು ಒಡೆಯರ ಆಳ್ವಿಕೆಗೆ ಒಳಪಟ್ಟಿತ್ತು. ಆದರೆ ನಡುವೆ ಅಧಿಕಾರ ಪಲ್ಲಟಗಳಾಗಿದ್ದವು. 1799ರಲ್ಲಿ ಟಿಪ್ಪುವಿನ ಕಾಲಾನಂತರ, ಬ್ರಿಟಿಷರಿಗೆ ಅವರ ಎಣಿಕೆಯಂತೆ ರಾಜ್ಯ ಸುಲಭವಾಗಿ ದಕ್ಕಲಿಲ್ಲ. ಟಿಪ್ಪುವಿನ ಸೇನೆಯಲ್ಲೇ ಸರದಾರನಾಗಿದ್ದ ಧೊಂಡಿಯಾ ವಾಘ್ ಎಂಬಾತ ಬ್ರಿಟಿಷರನ್ನು ಎದುರಿಸಿ ರಾಜ್ಯ ಕಟ್ಟಿದ. ಫ್ರೆಂಚರು ಆತನನ್ನು ಬೆಂಬಲಿಸಿದರು. ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡದಾಚೆಗೂ ವಿಸ್ತರಿಸಲು ಯತ್ನಿಸಿದ ಆತ 1800ರ ಕದನದಲ್ಲಿ ಬ್ರಿಟಿಷರೊಂದಿಗೆ ಹೋರಾಡಿ ಮಡಿದ. ಇದಾದ ಎರಡೇ ವರ್ಷಗಳ ನಂತರ, 1802ರಲ್ಲಿ ಐಗೂರು ಪಾಳೆಯಗಾರ ವೆಂಕಟಾದ್ರಿ ನಾಯಕ ಹಾಸನ ಜಿಲ್ಲೆಯ ಸಕಲೇಶಪುರದ ಅರಣ್ಯದ ಅರೆಕೆರೆ ಎಂಬಲ್ಲಿ ಕೋಟೆಯೊಂದನ್ನು ನಿರ್ಮಿಸಿ, ಬ್ರಿಟಿಷರೊಂದಿಗೆ ಹೋರಾಡಿ ಬಲಿಯಾದ. ಆನಂತರ ಗಮನ ಸೆಳೆಯುವುದು 1830ರಿಂದ 31ರವರೆಗೆ ಒಂದಿಡೀ ವರ್ಷ ನಡೆದ ನಗರ ದಂಗೆ ಅಥವಾ ಬಿದನೂರು ದಂಗೆ. ಆಳುವವರು ವಿಧಿಸಿದ್ದ ಕ್ರೂರ ತೆರಿಗೆ ಪದ್ಧತಿಯನ್ನು ವಿರೋಧಿಸಿ ಬೂದಿ ಬಸಪ್ಪ ಮುಂತಾದವರ ನೇತೃತ್ವದಲ್ಲಿ ದೀರ್ಘ ಕಾಲ ನಡೆದ ಪ್ರಬಲ ಪ್ರತಿರೋಧದಲ್ಲಿ ಸತ್ತವರ ಸಂಖ್ಯೆಯ ನಿಖರ ಅಂದಾಜಿಲ್ಲ. 250ರಿಂದ 700 ಎನ್ನುವವರೆಗೆ ಹೇಳಲಾಗುತ್ತದೆ.
ನಂತರ, ಈಸೂರು ದಂಗೆಯನ್ನು ಬಿಟ್ಟರೆ, ಚಳುವಳಿಗಳ ಸ್ವರೂಪದಲ್ಲೇ ಪ್ರಮುಖ ಪ್ರತಿರೋಧಗಳು ಮೈಸೂರು ಕರ್ನಾಟಕದ ಭಾಗದಲ್ಲಿ ನಮೂದಿಸಿಕೊಂಡಿವೆ. 1938ರಲ್ಲಿ ಮದ್ದೂರಿನ ಸಮೀಪ ಶಿವಪುರದಲ್ಲಿ ನಡೆದ ಧ್ವಜ ಸತ್ಯಾಗ್ರಹ. 1938ರ ಎಪ್ರಿಲ್ ೮ರಂದು ಧ್ವಜ ಹಾರಿಸುವುದಕ್ಕೆ ಮ್ಯಾಜಿಸ್ಟ್ರೇಟ್ ಹೇರಿದ್ದ ನಿಷೇಧಾಜ್ಞೆಗೆ ಬಗ್ಗದ ಚಳುವಳಿಗಾರರು ಧ್ವಜಾರೋಹಣ ಮಾಡಲು ತೀರ್ಮಾನಿಸಿದ್ದರು. ಇದಕ್ಕಾಗಿ ರಾಜ್ಯದ ಹಲವೆಡೆಗಳಿಂದ ಸುಮಾರು 10 ಸಾವಿರಕ್ಕೂ ಅಧಿಕ ಹೋರಾಟಗಾರರು ಜಮಾಯಿಸಿದ್ದರು. ಶಾಂತಿಯುತವಾಗಿಯೇ ಈ ಪ್ರತಿಭಟನೆ ಅಂತ್ಯಗೊಂಡರೂ ಬಾವುಟ ಹಾರಿಸಿದ್ದಕ್ಕಾಗಿ ನೂರಾರು ಜನರನ್ನು ಪೊಲೀಸರು ಬಂಧಿಸಿದ್ದರು.
ವಿದುರಾಶ್ವತ್ಥ ಗ್ರಾಮದಲ್ಲೂ ಹೋರಾಟ
ಇದೇ ಧ್ವಜ ಸತ್ಯಾಗ್ರಹದ ಅಂಗವಾಗಿ, 1938ರ ಎಪ್ರಿಲ್ 25ರಂದು ಗೌರಿಬಿದನೂರಿನ ಬಳಿ ವಿದುರಾಶ್ವತ್ಥ ಗ್ರಾಮದಲ್ಲೂ ಧ್ವಜ ಹಾರಿಸಲು ಸತ್ಯಾಗ್ರಹಿಗಳು ಸೇರಿದ್ದರು. ಆದರೆ ಸರಕಾರ ಅದಕ್ಕೂ ನಿರ್ಬಂಧ ಹೇರಿತ್ತು. ಇದನ್ನು ಉಲ್ಲಂಘಿಸಿ ಧ್ವಜಾರೋಹಣ ಮಾಡುತ್ತಿದ್ದಂತೆ ಬಂದೂರುಗಳು ಮೊರೆಯತೊಡಗಿದವು. ಸುಮಾರು 96 ಸುತ್ತು ಗುಂಡುಗಳು ಹಾರಿ, ʻಕರ್ನಾಟಕದ ಜಲಿಯನ್‌ವಾಲಾ ಬಾಗ್ʼ ಎಂದೇ ಕುಖ್ಯಾತಿ ಪಡೆದಿರುವ ಈ ದುರಂತದಲ್ಲಿ 32 ಮಂದಿ ಹೋರಾಟಗಾರರು ಜೀವ ಕಳೆದುಕೊಂಡರು. ಈ ಘಟನೆಯಿಂದ ಗಾಂಧೀಜಿ ನೊಂದರು. ಸರ್ಕಾರ ಸಂಧಾನಕ್ಕೆ ಸಿದ್ಧವಾಯಿತು. ಸರ್ದಾರ್ ಪಟೇಲರೂ ಆಚಾರ್ಯ ಕೃಪಲಾನಿಯವರೂ ಸಂಸ್ಥಾನಕ್ಕೆ ಬಂದು ಒಪ್ಪಂದ ಮಾಡಿಸಿದರು. ಮೈಸೂರು ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವೆಂದು ಸರ್ಕಾರ ಅಂಗೀಕರಿಸಿತು. ಸಾರ್ವಜನಿಕ ಸಮಾರಂಭಗಳಲ್ಲಿ ರಾಷ್ಟ್ರಧ್ವಜದೊಡನೆ ಮೈಸೂರು ಧ್ವಜವನ್ನೂ ಹಾರಿಸಬೇಕೆಂದೂ ಒಪ್ಪಿಗೆಯಾಯಿತು. ಬಂಧನದಲ್ಲಿದ್ದ ಕಾಂಗ್ರೆಸ್ಸಿಗರೆಲ್ಲರೂ ಖುಲಾಸೆಯಾದರು.
ಶಿಖಾರಿಪುರದ ಈಸೂರು ಗ್ರಾಮದಲ್ಲಿ 1942ರಲ್ಲಿ ʻಏಸೂರು ಕೊಟ್ಟರೂ ಈಸೂರು ಕೊಡೆವುʼ ಎಂಬ ಘೋಷಣೆ ಮೊಳಗಿದ್ದು ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ. ತಮ್ಮನ್ನು ತಾವು ಸ್ವತಂತ್ರ ಎಂದು ಘೋಷಿಸಿಕೊಂಡ ಈಸೂರು ಜನತೆ ಕಂದಾಯ ಕೊಡಲು ನಿರಾಕರಿಸಿತು. ಮೈಸೂರು ಸರಕಾರದಿಂದ ಈ ಬಗ್ಗೆ ವಿಚಾರಣೆ ನಡೆಸಲು ಬಂದಿದ್ದ ಅಮಲ್ದಾರರು ಮತ್ತು ಸಬ್‌ಇನ್ಪೆಕ್ಟರ್‌ಗೆ ಜನ ಖಾದಿ ಟೋಪಿ ಧರಿಸಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆಯಲ್ಲಿ ಇಬ್ಬರೂ ಅಧಿಕಾರಿಗಳನ್ನು ಊರಿನ ಜನ ಕೊಂದುಹಾಕಿದರು. ಇದರಿಂದ ಕುಪಿತವಾದ ಸರಕಾರಿ ಅರೆಮಿಲಿಟರಿ ಪಡೆಯನ್ನು ಕಳುಹಿಸಿ, ಜನರನ್ನು ನಿಗ್ರಹಿಸಿತು. ಗ್ರಾಮವನ್ನು ಸೂರೆಗೈದು ಹಲವಾರು ಜನರನ್ನು ಬಂಧಿಸಲಾಯಿತು. ಅವರಲ್ಲಿ ಐವರಿಗೆ ಮರಣದಂಡನೆ ವಿಧಿಸಿ, ಕೆಲವು ಮಹಿಳೆಯರೂ ಸೇರಿದಂತೆ 13 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಧ್ವಜ ಸ್ತಂಭ ತೆಗೆಸಿದರು…
ಇದಲ್ಲದೆ, ಚಳುವಳಿಯ ಇತಿಹಾಸದ ಉದ್ದಕ್ಕೂ ಪ್ರತಿರೋಧ, ಹೋರಾಟದ ಗಾಥೆಗಳು ಅಡಿಗಡಿಗೆ ದೊರೆಯುತ್ತವೆ. ಶಿರಾಳಕೊಪ್ಪದಲ್ಲಿ ಇರ್ವಿನ್ ನಾಲೆಯ ಸಾವಿರಾರು ರೈತರು ತಮ್ಮ ಮೇಲಿನ ಅನ್ಯಾಯದ ಕಂದಾಯ ನಿವಾರಣೆಗಾಗಿ 70 ಮೈಲಿ ನಡೆದು ಬೆಂಗಳೂರಿಗೆ ಬಂದರು. 1931ರಲ್ಲಿ ನೆಹರೂ ಅವರು ಬೆಂಗಳೂರಿಗೆ ಆಗಮಿಸಿದಾಗ ಧರ್ಮಾಂಬುಧಿ ಕೆರೆಯ ಅಂಗಳದಲ್ಲಿ ರಾಷ್ಟ್ರಧ್ವಜವನ್ನು ಏರಿಸಿದಾಗ ಅದನ್ನು ಸಹಿಸದ ಬ್ರಿಟಿಷ್ ರೆಸಿಡೆಂಟರು ಮೈಸೂರು ಆಡಳಿತವರ್ಗದ ಮೂಲಕ ಸ್ತಂಭವನ್ನು ಕಿತ್ತೊಗೆಸಿದರು. ಅದೇ ಜಾಗದಲ್ಲಿ ಮತ್ತೊಂದು ಸ್ತಂಭವನ್ನು ಜನರು ನಿರ್ಮಿಸಿ ಮತ್ತೆ ಧ್ವಜ ಏರಿಸಿದರು.
ಇದನ್ನೂ ಓದುವುದು ಹೇಗೆ: How To Become Rich: ಸುಲಭವಾಗಿ ಶ್ರೀಮಂತರಾಗಿ, ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ?
ಹೈದರಾಬಾದಿನಿಂದ ಗಡೀಪಾರಾಗಿದ್ದ ಕೊಪ್ಪಳದ ಜಯರಾಮಾಚಾರ್ಯರು ಬೆಂಗಳೂರಿನಲ್ಲಿ ತಮ್ಮ ಕೀರ್ತನೆಗಳ ಮೂಲಕ ಜನರನ್ನು ಹುರಿದುಂಬಿಸುತ್ತಿದ್ದರು. ಕರ್ನಾಟಕ ಮುಂದಾಳುಗಳಾದ ಮುದವೀಡು ಕೃಷ್ಣರಾಯರು, ಕಡಪಾ ರಾಘವೇಂದ್ರರಾಯರು ಬೆಂಗಳೂರು ಜನರನ್ನು ಜಾಗೃತಗೊಳಿಸುತ್ತಿದ್ದರು. ಮಹಾತ್ಮಾ ಗಾಂಧಿಯವರು 1921ರಲ್ಲಿ ಮೌಲಾನಾ ಶೌಕತಾಲಿ ಮತ್ತು ಮೌಲಾನಾ ಮಹಮದಾಲಿಯವರೊಡನೆ ಬೆಂಗಳೂರಿಗೆ ಬಂದಿದ್ದರು. ಶಾಲೆಗಳನ್ನು ಬಹಿಷ್ಕರಿಸಿದ್ದ ವಿದ್ಯಾರ್ಥಿಗಳಿಗಾಗಿ ದಂಡಿನಲ್ಲಿ ವರ್ತಕ ಉಸ್ಮಾನ್ ಸೇಟರು ಸ್ಥಾಪಿಸಿದ ರಾಷ್ಟ್ರೀಯ ಶಾಲೆ ಹೆಸರು ಗಳಿಸಿತು. ಬೆಂಗಳೂರಿನ ವ್ಯಾಪಾರಿ ಷಾ ಧನಜಿ ಜವೇರ್‌ಚಂದ್ ತಮ್ಮ ವಿದೇಶಿ ವಸ್ತ್ರಗಳ ಅಂಗಡಿಯನ್ನು ಮುಚ್ಚಿ ಚರಖಾ ಮತ್ತು ಖಾದಿ ಪ್ರಚಾರಕ್ಕಿಳಿದರು.
ಹಲವರ ನೇತೃತ್ವದಲ್ಲಿ ಬಂಡಾಯ…
ಮೈಸೂರಿನಲ್ಲಿ ಕಟ್ಟಿದ ಪೊಲೀಸ್ ಭವನಕ್ಕೆ ಪೊಲೀಸ್ ಮುಖ್ಯಾಧಿಕಾರಿಯಾಗಿದ್ದ ಹ್ಯಾಮಿಲ್ಟನ್‌ರ ಹೆಸರನ್ನಿಟ್ಟುದುದರಿಂದ ತಗಡೂರು ರಾಮಚಂದ್ರರಾಯರ ನಾಯಕತ್ವದಲ್ಲಿ ಸತ್ಯಾಗ್ರಹ ಪ್ರಾರಂಭವಾಯಿತು. 1939ರಲ್ಲಿ ಬೆಂಗಳೂರಿನಲ್ಲಿ ಟಿ.ಸಿದ್ಧಲಿಂಗಯ್ಯನವರು ಸ್ವಾತಂತ್ರ್ಯ ಹೋರಾಟದ ಕಹಳೆ ಊದಿದರು. ಅವರ ಬಂಧನ-ಶಿಕ್ಷೆಯಿಂದ ದಬ್ಬಾಳಿಕೆ ಆರಂಭವಾಯಿತು. ಮುಖಂಡರೆಲ್ಲ ಒಬ್ಬೊಬ್ಬರಾಗಿ ಬಂಧಿತರಾದರು. ಒಂದು ತಿಂಗಳಲ್ಲೇ ನೂರಾರು ದಸ್ತಗಿರಿಗಳಾಗಿ, ಶಿಕ್ಷೆಗಳಾದವು. ಚಿತ್ರದುರ್ಗ ಜಿಲ್ಲೆಯ ತುರುವನೂರು ಎಂಬಲ್ಲಿ ಸರ್ಕಾರ ಪುಂಡುಗಂದಾಯ ವಿಧಿಸಿತು. ಸಾರ್ವಜನಿಕ ರಕ್ಷಣಾ ಕಾನೂನಿನ ಅಡಿಯಲ್ಲಿ ಬಂಧನಕ್ಕೀಡಾದವರ ಸಂಖ್ಯೆ ಹಲವು ಸಾವಿರ ಮೀರಿತು.
ಕ್ವಿಟ್ ಇಂಡಿಯಾ ಚಳವಳಿ ಪ್ರಾರಂಭವಾಗಿ ಎಲ್ಲೆಲ್ಲಿಯೂ ಅಪೂರ್ವ ಉತ್ಸಾಹ, ಸ್ಫೂರ್ತಿ ಕಂಡುಬಂದವು. ಹರತಾಳ, ಪ್ರತಿಭಟನೆ, ಮೆರವಣಿಗೆಗಳಾದವು. ಲಾಠಿ ಪ್ರಯೋಗ, ಗೋಲೀಬಾರ್ ನಡೆದವು. ಕಾರ್ಮಿಕರ ಮುಷ್ಕರ ಮತ್ತು ರೈಲ್ವೇ ಮುಷ್ಕರ ನಡೆದವು. ಪೊಲೀಸರೂ ಸಹಾ ಮುಷ್ಕರ ಹೂಡಿದರು. ಈ ಚಳವಳಿಯಲ್ಲಿ ಹಲವು ಸಾವಿರ ಮಂದಿ ಸೆರೆಮನೆ ಸೇರಿದರು, ಬಹಳಷ್ಟು ಮಂದಿಗೆ ಶಿಕ್ಷೆಗಳಾದವು; ಅನೇಕರು ವಿಚಾರಣೆಯಿಲ್ಲದೆ ಬಂಧನದಲ್ಲಿರಬೇಕಾಯಿತು. ಹೀಗೆ, ಭಾರತದ ಉಳಿದೆಲ್ಲೆಡೆ ಜನ ತೋರಿದ ಉತ್ಸಾಹದಂತೆಯೇ ಮೈಸೂರು ಕರ್ನಾಟಕ ಭಾಗದ ಜನರಿಂದ ಸ್ವಾತಂತ್ರ್ಯ ಸಂಗ್ರಾಮದುದ್ದಕ್ಕೂ ವ್ಯಕ್ತವಾಗಿದ್ದು ಕಂಡುಬರುತ್ತದೆ.