ಭಾರತದ ಸನಾತನ ಪರಂಪರೆಯಲ್ಲಿ ಗಣಪತಿಗೆ (Ganesh chaturthi) ಮಹತ್ವದ ಸ್ಥಾನವಿದೆ. ಗಣೇಶನಿಗೆ ಹಲವಾರು ಹೆಸರುಗಳಿವೆ. ಏಕದಂತ, ವಿಘ್ನೇಶ್ವರ, ಲಂಭೋದರ, ವಿನಾಯಕ, ಗಜಮುಖ, ಮೋದಕಪ್ರಿಯ ಹೀಗೆ ನಾನಾ ಹೆಸರುಗಳಿಂದ ಗಣಪತಿಯನ್ನು ಪೂಜಿಸಿ ಸ್ತುತಿಸುತ್ತಾರೆ. ಹಲವಾರು ಭಾಗವತೋತ್ತಮರು ಗಣಪತಿಯನ್ನು ತಮ್ಮ ಕೀರ್ತನೆಗಳ ಮೂಲಕ ಹಾಡಿ ಕೊಂಡಾಡಿದ್ದಾರೆ. ಕಾಲಜ್ಞಾನಿ, ಯೋಗಪುರುಷರಾದ ಕೈವಾರದ ತಾತಯ್ಯನವರು (Kaivara tatayya) ತಮ್ಮ ಕೀರ್ತನೆಯಲ್ಲಿ ಗಣಪತಿಯನ್ನು “ಕುಂಡಾಲಿಭೂಷಣ” ಎಂಬ ನಾಮಧೇಯದಿಂದ ವಿನಾಯಕನನ್ನು ಸ್ತ್ರೋತ್ರ ಮಾಡಿದ್ದಾರೆ. ಕುಂಡಾಲಿಭೂಷಣ ಎಂದರೆ ದೇಹದಲ್ಲಿರುವ ಯೋಗಕುಂಡಲಿ ಸ್ಥಾನದಲ್ಲಿ ಆಭರಣದಂತಿರುವ ಅಧಿದೇವತೆ ಎಂಬ ಅರ್ಥವು ಬರುತ್ತದೆ. ಮೂಲಾಧಾರಚಕ್ರದ ಅಧಿದೇವನೇ ಗಣಪತಿ.
ತಾತಯ್ಯನವರು ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರ ಎಂಬ ಗ್ರಂಥದ ಆರಂಭದಲ್ಲಿ ಗಣಪತಿಯ ಕೃಪೆಯನ್ನು ಬೇಡುತ್ತಾ ಕೀರ್ತನೆಯನ್ನು ರಚಿಸಿದ್ದಾರೆ.
ಶ್ರೀಗಣಾಧಿಪರಾಜಾ ಪಾರ್ವತೀಸುತ|
ಶ್ರೀಗಣಾಧಿಪರಾಜಾ
ಶ್ರೀಗಣಾಧಿಪರಾಜ ಮಿಮು ಭಕ್ತಿತೋಪೂಜಾ
ಸೇತುನು ಮಹಾರಾಜ ರವಿಕೋಟಿ ತೇಜಾ
ಎಂದು ಪ್ರಾರಂಭಿಸಿದ್ದಾರೆ.
ಕಾರ್ಯಸಾಧನೆಗೆ ಕಾರಣಭೂತರಾದ ಗಣದೇವತೆಗಳನ್ನು ಶಾಸನ ಮಾಡುವ ರಾಜನಾದ ಗಣಾಧಿಪನೇ, ಪಾರ್ವತೀ ಪುತ್ರನೇ, ರವಿಕೋಟಿ ತೇಜಾನಾಗಿ ಬೆಳಗುತ್ತಿರುವ, ಮಹಾರಾಜನಾದ ಗಣಪತಿಯೇ ನಿನ್ನನ್ನು ಭಕ್ತಿಯಿಂದ ಪೂಜಿಸುತ್ತೇನೆ ಎಂದಿದ್ದಾರೆ.
ಮೂಷಕ ವಾಹನ ಮುಜ್ಜಗಪಾವನ
ಕುಂಡಾಲಿ ಭೂಷಣ ಕುಂಜಾರವದನ
ಗೆಜ್ಜಲಂದೆಲು ಮುವುಲು ಗುಜ್ಜುಪಾದಂಬುಲು
ಹೆಚ್ಚೈನ ಕರಕಂಕಣಂಬುಲು ನಮರಿನ
ಅಗರು ಕುಂಕುಮ ಪುನುಗು ಜವ್ವಾಜಿ ಕಸ್ತೂರಿ
ಲೇಪನಂಬುಲು ಮೀಕು ವಾಮನರೂಪ||
ಗಣಪತಿಯ ವಾಹನ ಮೂಷಿಕ. ಮೂಷಿಕ ಎಂದರೆ ಇಲಿ. ಇಲಿ ಮಾನವನ ಚಂಚಲ ಮನಸ್ಸಿನ ಸಂಕೇತವಾಗಿದೆ. ಚಂಚಲವಾದ ಮನಸ್ಸನ್ನು ಮತ್ತು ಬುದ್ಧಿಯನ್ನು ನಿಯಂತ್ರಿಸಿ ಆತ್ಮಸ್ಥೈರ್ಯವನ್ನು ಮೂಡಿಸುವ ಸಲುವಾಗಿ ಗಣಪತಿಯು ಇಲಿಯ ಮೇಲೆ ಸವಾರಿ ಮಾಡುತ್ತಿದ್ದಾನೆ. ಮೂರು ಲೋಕಗಳಲ್ಲೂ ಪೂಜೆ ಪಡೆಯುವ ಪಾವನ ಮೂರ್ತಿ ಗಣೇಶ. ಕುಂಡಾಲಿಭೂಷಣನೇ, ಆನೆಯ ಮುಖವುಳ್ಳವನೇ, ಪುಟ್ಟ ಪಾದಗಳಲ್ಲಿ ಗೆಜ್ಜೆಕಡಗಗಳನ್ನೂ, ನಾಟ್ಯದ ಗೆಜ್ಜೆಗಳನ್ನೂ ಮತ್ತು ಕೈಗಳಲ್ಲಿ ಕಂಕಣವಿಶೇಷಗಳನ್ನು ಧರಿಸಿರುವ ಪುಟ್ಟಸ್ವರೂಪದ ವಾಮನ ಮೂರ್ತಿಯಾದ ಗಣಪತಿಯೇ ನಿನಗೆ ಅಗರು, ಕುಂಕುಮ, ಪುನುಗು, ಜವ್ವಾಜಿ, ಕಸ್ತೂರಿ ಸುಗಂಧಭರಿತವಾದ ದ್ರವ್ಯಗಳನ್ನು ಅರ್ಪಿಸಿ ಪೂಜಿಸುತ್ತೇನೆ ಎನ್ನುತ್ತಿದ್ದಾರೆ ತಾತಯ್ಯನವರು.
ಮಲ್ಲೆಲು ಮೊಲ್ಲ್ಯಾಲು ಯರ್ರಗನ್ನೇರುಲು
ಮೊಗ್ಗಾಲು ವಿರಿಸರುಲು ಮೋದಕ ಹಸ್ತಾ
ಅತಿರಸಾನ್ನಮು ಅಜ್ಯ ಕರ್ಜಿಕಜ್ಜಾಯಮು
ಇಂಟಿಂಟಿ ಭಕ್ಷಣ ವಿನಾಯಕಾ ಮೀಕು||
ಮೋದಕವನ್ನು ಕೈಯಲ್ಲಿ ಹಿಡಿದಿರುವ ಮೋದಕಹಸ್ತನೇ, ನಿನಗೆ ಮಲ್ಲಿಗೆ, ಮೊಲ್ಲೆ, ಕಣಗಲೆ ಹೂಗಳ ಮಾಲೆ, ಹೂದಂಡೆಗಳನ್ನು ಅರ್ಪಿಸುತ್ತೇನೆ, ಅಲಂಕರಿಸುತ್ತೇನೆ. ಮನೆಮನೆಗಳಲ್ಲಿಯೂ ನಿನಗೆ ನೈವೇದ್ಯಕ್ಕಾಗಿ ಅತಿರಸಭಕ್ಷ್ಯ, ಅನ್ನ, ಪರಮಾನ್ನ, ಕರ್ಜಿಕಾಯಿ, ಕರಿಗಡುಬು, ಕಜ್ಜಾಯಗಳನ್ನು ಭಕ್ತಿಯಿಂದ ಸಿದ್ದಪಡಿಸಿಕೊಂಡಿದ್ದಾರೆ. ನಮ್ಮನ್ನು ಆಶೀರ್ವದಿಸಿ ಸ್ವೀಕರಿಸಿ, ಭಕ್ಷಿಸು ಎನ್ನುತ್ತಿದ್ದಾರೆ ತಾತಯ್ಯನವರು.
ಕದಳಿ ಪಂಡ್ಲು ಮಂಚಿ ಜಂಬು ಫಲಂಬುಲು
ಮೆಚ್ಚು ಮೀಕು ಇಕ್ಷು ವಿನಾಯಕೋತ್ತಮ
ನಾರಿಕೇಳಮು ಧೂಪ ದೀಪ ನೈವೇದ್ಯಮು
ಸುವರ್ಣ ಕಾನುಕ ಸಮರ್ಪಯಾಮಿ
ಕೈವರ ಪುರಮುನ ಅಮರನಾರೇಯಣ
ಶ್ರೀಕೃಷ್ಣಚರಿತ ಪ್ರಭಾವ ಮಾನತಿಯಿಮ್ಮು||
ವಿನಾಯಕನೇ, ನಿನಗಾಗಿ ಬಾಳೆಹಣ್ಣು, ಒಳ್ಳೆಯ ಜಂಬುನೇರಳೆ ಹಣ್ಣು ಹಾಗೂ ನಿನಗೆ ಇಷ್ಟವಾದ, ಮೆಚ್ಚಾಗಿರುವ ಕಬ್ಬುನ್ನು ಸಮರ್ಪಿಸಿದ್ದೇನೆ. ತೆಂಗಿನಕಾಯಿ, ಪೂರ್ಣಫಲ, ಧೂಪ, ದೀಪ, ನೈವೇದ್ಯವನ್ನು ಮತ್ತು ಸುವರ್ಣದಕ್ಷಿಣೆಯನ್ನು ಭಕ್ತಿಯಿಂದ ಸಮರ್ಪಿಸುತ್ತಿದ್ದೇನೆ. ಅಮರನಾರೇಯಣಸ್ವಾಮಿ ಕೃಪೆಯಿಂದ ಶ್ರೀಕೃಷ್ಣಚರಿತ ತತ್ವವನ್ನು ರಚಿಸಲು ಅನುವಾಗುತ್ತಿದ್ದೇನೆ. ಈ ಯೋಗಾಮೃತ ತತ್ವಸಾರವನ್ನು ನನ್ನ ಮನಸ್ಸಿನಲ್ಲಿ ನಿಶ್ಚಲವಾಗಿ ಮೂಡಿಸಿ, ನಿರ್ವಿಘ್ನವಾಗಿ ಬರೆಯುವಂತೆ ಅನುಗ್ರಹವನ್ನು ಮಾಡಿ ಹಾಗೂ ತಮ್ಮ ಅಪ್ಪಣೆಯನ್ನು ಕೋರುತ್ತಿದ್ದೇನೆ ಎಂದು ತಾತಯ್ಯನವರು ವಿಘ್ನೇಶ್ವರನಲ್ಲಿ ಭಿನ್ನವಿಸಿಕೊಂಡಿದ್ದಾರೆ. ತಾತಯ್ಯನವರು ಪರಿಪೂರ್ಣವಾಗಿ ಗಣಪತಿಯನ್ನು ಸ್ತುತಿಸಿ, ಕೊಂಡಾಡಿ ಬರೆದಿರುವ ಕೃತಿಯೇ ಶ್ರೀಕೃಷ್ಣಚರಿತ ತತ್ವಾಮೃತ ಯೋಗಸಾರ. ಈ ಗ್ರಂಥವನ್ನು ತಾತಯ್ಯನವರೇ “ವೆಲಲೇನಿ ರತ್ನಮು”(ಬೆಲೆಕಟ್ಟಲಾಗದ ರತ್ನ) ಎಂದಿದ್ದಾರೆ.
ಸನ್ಮುನಿ ವಿಘ್ನೇಶ್ವರ..
ಸರ್ವರ ಮಂಗಳಕಾರಿಯಾಗಿರುವುದರಿಂದ ಮಂಗಳ ಮೂರ್ತಿ ಎಂದು ಕರೆಯಲ್ಪಡುವ ವಿಘ್ನ ಪರಿಹಾರಕನಾದ ಗಣಪತಿಯನ್ನು ತಾತಯ್ಯನವರು ಸನ್ಮುನಿ ಎಂದಿದ್ದಾರೆ. ಸನ್ಮುನಿ ಎಂದರೆ ಮುನಿಗಳಲ್ಲಿ ಶ್ರೇಷ್ಠನಾದವನು ಎಂದರ್ಥ. ತಾತಯ್ಯನವರು ಹೀಗೆ ಹೇಳಿದ್ದಾರೆ.
ಏಕದಂತಾ ಮೂಷಿಕ ವಾಹನ
ವೇದ ಮುನಿಗಣ ವಂದಿತಾ
ಸಕಲ ವಿದ್ಯಲಕಾದಿಕರ್ತವು
ಸನ್ಮುನೀ ವಿಘ್ನೇಶ್ವರಾ ಶರಣು ಶರಣೂ
ಒಂದು ದಂತವಿರುವುದರಿಂದ ಗಣಪತಿಯನ್ನು ಏಕದಂತಾ ಎಂದು ಕರೆಯುತ್ತಾರೆ. ವೇದಗಳೂ ಹಾಗೂ ಮುನಿಗಣರು ಗಣೇಶನನ್ನು ವಂದಿಸಿದ್ದಾರೆ. ತ್ರಿಮೂರ್ತಿಗಳಿಗಿಂತಲೂ ಮೊದಲ ಪೂಜೆ ಗಣೇಶನಿಗೆ ಸಲ್ಲುತ್ತದೆ. ಎಲ್ಲಾ ವಿದ್ಯೆಗಳಿಗೂ ಅಧಿದೇವತೆ ಗಣಪತಿಯೇ. ಸಕಲ ವಿದ್ಯೆಗಳನ್ನು ಪ್ರಾರಂಭಿಸುವಾಗ ಮೊದಲ ಪೂಜೆ ಗಣಪತಿಗೆ ಸಲ್ಲುತ್ತದೆ. ಗಣಪತಿ ಮುನಿ, ಸನ್ಮುನಿ. ಒದಗುವ ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರನೆಂದು ಕರೆಯುವ ಗಣಪನೇ ನಿನಗೆ ಶರಣು ಶರಣು ಎನ್ನುತ್ತಿದ್ದಾರೆ ತಾತಯ್ಯನವರು. ದು:ಖ ತೊಡೆದು ಸುಖ ಕೊಡುವುದರಿಂದ ದು:ಖಹರ್ತ-ಸುಖಕರ್ತನೆಂದು ಗಣಾಧಿಪನ ಮಹಿಮೆಗಳನ್ನು ಹೊಗಳಲಾಗುತ್ತದೆ. ಗಜಮುಖ ಹೊಂದಿರುವ ಗಣಪತಿ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದ್ದಾನೆ. ಗಣಪತಿಗೆ ಮೋದಕ ಬಲುಪ್ರಿಯ. ಮೋದಕವು ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ. ಪ್ರತಿಯೊಂದು ಕಾರ್ಯ ಸಾಧನೆಗೆ ಬೇಕಾಗುವ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನಶಕ್ತಿಗಳು ಮಾನವರಲ್ಲಿರುವ ಮೂಲಾಧಾರಶಕ್ತಿಯೇ ಆಗಿದೆ. ಮೂಲಾಧಾರಶಕ್ತಿಯೇ ಗಣಪತಿಶಕ್ತಿ. ಕಾರ್ಯಗಳಲ್ಲಿ ಯಶಸ್ಸನ್ನು ಬಯಸುವವರು ಗಣಪತಿಯನ್ನು ಆರಾಧಿಸಬೇಕು. ಗಣಪತಿಯನ್ನು ಸ್ಮರಿಸಿದಲ್ಲಿ ಮೂಲಾಧಾರ ಶಕ್ತಿನಾಡಿಯು ಸ್ಪಂದಿಸುತ್ತದೆ. ಇದರಿಂದ ಕಾರ್ಯಸಿದ್ಧಿಗೆ ಬೇಕಾಗುವ ಶಕ್ತಿ ಉತ್ಪನ್ನವಾಗುತ್ತದೆ. ಗಣಪತಿಯ ಸ್ಮರಣೆಯಿಂದ ಸುಖ, ಶಾಂತಿ, ಸಮೃದ್ಧಿಯು ಲಭಿಸುತ್ತದೆ.
ಗಣೇಶ ಚಕ್ರ
ಯೋಗಶಾಸ್ತ್ರದ ಪ್ರಕಾರ ಶರೀರದಲ್ಲಿ ಷಟ್ಚಕ್ರಗಳಿವೆ. ಈ ಷಟ್ಚಕ್ರಗಳಿಗೆ ನಿರ್ಣಯಿಸಲ್ಪಟ್ಟಿರುವ ತತ್ವಗಳ ಪೈಕಿ ಮೂಲಾಧಾರವು ಪೃಥ್ವೀತತ್ವವಾಗಿದೆ. ಈ ಪೃಥ್ವೀತತ್ವದ ಅಧಿದೇವತೆ ಗಣಪತಿಯಾಗಿದ್ದಾನೆ. ಷಟ್ಚಕ್ರಗಳ ಸಾಧನೆಯನ್ನು ಮಾಡಬಯಸುವ ಯಾರೇ ಆದರೂ ಮೊದಲು ಮೂಲಾಧಾರಚಕ್ರದ ಸಾಧನೆಯನ್ನು ಮಾಡಿ ಗಣಪತಿಯ ಅಪ್ಪಣೆ ಪಡೆದೇ ಮುಂದಕ್ಕೆ ಹೋಗಬೇಕು. ಈ ಕಾರಣದಿಂದ ತಾತಯ್ಯನವರು ಗಣಪತಿಗೆ ಕುಂಡಾಲಿಭೂಷಣ ಎಂದು ಹೆಸರಿಸಿದ್ದಾರೆ. ಯೋಗವಿಧಾನದಿಂದ ಘಟಶೋಧ ಸಾಧನೆ ಮಾಡಿದ ಸಾಧಕರಿಗೆ ಮಾತ್ರ ತಿಳಿಯುವಂತೆ ತಾತಯ್ಯನವರು ಮೂಲಾಧಾರಚಕ್ರದ ಅಂದರೆ ಗಣೇಶಚಕ್ರದ ಬಗ್ಗೆ ಗೂಢವಾದ ಯೋಗಭಾಷೆಯಲ್ಲಿ ಈ ರೀತಿಯಾಗಿ ಒಗಟಿನ ಪದ್ಯವನ್ನು ಬೋಧಿಸಿದ್ದಾರೆ.
ದ್ವಯವಾಲಮುವಾಡು ಧರಣಿಲೋ ವುನ್ನಾಡು
ತೆಲಿಸಿ ಚೆಪ್ಪವಲೆನು ತೆಲಿವಿಪರುಲು
ತೆಲಿಸೇದಿ ದುರ್ಲಭಂ ತೆಲಿವಿ ಕೊಂಚಮು ಕಾದು
ನಾದ ಬ್ರಹ್ಮಾನಂದ ನಾರೇಯಣ ಕವಿ||
ಇದನ್ನೂ ಓದಿ: ತಾತಯ್ಯ ತತ್ವಾಮೃತಂ: ಶಿಷ್ಯನನ್ನು ಉದ್ಧರಿಸುವ ಕಾರುಣ್ಯಗುರು
“ದ್ವಯವಾಲಮುವಾಡು” ಎಂದರೆ ಎರಡು ಬಾಲಗಳುಳ್ಳವನು ಪೃಥ್ವಿಯಲ್ಲಿದ್ದಾನೆ. ಅವನಾರೆಂಬುದನ್ನು ಜ್ಞಾನವಂತರು ತಿಳಿದು ಹೇಳಬೇಕು. ತಿಳಿದುಕೊಳ್ಳುವುದು ಬಹಳ ಕಷ್ಟವಿದೆ, ದುರ್ಲಭ. ಇದನ್ನು ತಿಳಿದುಕೊಳ್ಳಲು ಸ್ವಲ್ಪ ಅರಿವಿದ್ದರೇ ಸಾಲದು, ಇದನ್ನು ತಿಳಿದುಕೊಂಡರೆ ಅಂತಹವನ ಜ್ಞಾನ ಸಾಮಾನ್ಯವಾದುದಲ್ಲ ಎಂದಿದ್ದಾರೆ ತಾತಯ್ಯನವರು.
ತಾತಯ್ಯನವರು ಎರಡು ಬಾಲಗಳುಳ್ಳವನು ಧರಣಿಯಲ್ಲಿದ್ದಾನೆ ಎಂದಿದ್ದಾರೆ. ಇದರ ಅರ್ಥವೇನು? ಸ್ವಲ್ಪ ಯೋಚಿಸೋಣ. ಗಣಪತಿಯ ಸೊಂಡಿಲು ಬಾಲದ ಆಕಾರವನ್ನು ಹೊಂದಿದೆ. ಪುರಾಣಗಳ ಪ್ರಕಾರ ಗಣಪತಿಯ ವಾಹನವಾಗಿರುವ ಇಲಿಯ ಬಾಲವನ್ನು ಪರಿಗಣಿಸಿ, ಗಣೇಶನನ್ನು “ಎರಡು ಬಾಲಗಳುಳ್ಳವನು” ಎಂದು ಗೂಡಾರ್ಥವುಳ್ಳ ಶಬ್ದ ಪ್ರಯೋಗದಿಂದ ತಾತಯ್ಯನವರು ಸೂಚಿಸಿದ್ದಾರೆ. ಇನ್ನೊಂದು ಅರ್ಥದಲ್ಲಿ ಹೀಗೆಯೂ ಹೇಳಬಹುದು. ಗಣಪತಿಗೆ ತಲೆಯ ಪ್ರಾಣಿ ಆನೆ. ವಾಹನದ ಪ್ರಾಣಿ ಇಲಿ. ಈ ಎರಡೂ ಪ್ರಾಣಿಗಳಿಗೂ ಬಾಲಗಳಿವೆ. ಈ ಎರಡೂ ಪ್ರಾಣಿಗಳ ಸಂಬಂಧವುಳ್ಳವನು ಗಣಪತಿ. ಈ ಕಾರಣದಿಂದ ದ್ವಯವಾಲಮುವಾಡು ಎಂದು ನಿಗೂಢವಾದ ಅರ್ಥದಲ್ಲಿ ತಾತಯ್ಯನವರು ಯೋಗಬಾಷೆಯಲ್ಲಿ ಹೇಳಿದ್ದಾರೆ. ಸಿದ್ಧಯೋಗಿಗೆ ಮಾತ್ರ ಇಂತಹ ಚಿಂತನೆಯನ್ನು ಹೇಳುವ ಸಾಮಥ್ರ್ಯವಿರುತ್ತದೆ.
ತ್ರಿಮೂರ್ತಿಗಳಿಗಿಂತಲೂ ಮೊದಲು ಗಣಪತಿಯನ್ನು ಪೂಜಿಸುತ್ತೇನೆ ಎನ್ನುತ್ತಾರೆ ತಾತಯ್ಯನವರು. ಗಣಪತಿಗೆ ಆಡಂಬರದ ಪೂಜೆ ಬೇಕಿಲ್ಲ.. ಶ್ರದ್ಧಾಭಕ್ತಿಗಳಿಂದ ಕೇವಲ ಗರಿಕೆಯಿಂದ ಪೂಜಿಸಿದರೆ ಸಾಕು, ಸಕಲ ಸಂಕಷ್ಟಗಳನ್ನೂ ದೂರ ಮಾಡುತ್ತಾನೆ. ಸರ್ವರಿಗೂ ಗಣಪತಿಯು ಅನುಗ್ರಹಿಸಲಿ, ಒಳಿತಾಗಲಿ.
ಇದನ್ನೂ ಓದಿ: Ganesh Chaturthi Recipes: ಈ 5 ತಿನಿಸುಗಳು ಗಣಪತಿಗೆ ತುಂಬಾ ಇಷ್ಟ; ಹೀಗೆ ಸುಲಭವಾಗಿ ತಯಾರಿಸಿ