Site icon Vistara News

ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಎಂಬ ರೂಪಕ ಲೋಕ

metaverse

ಭಾಗ- 2

ಮೆಟಾವರ್ಸ್‌ ಕುರಿತ ಈ ಮೊದಲಿನ ಲೇಖನದಲ್ಲಿ ಮೆಟಾವರ್ಸ್ ಎಂದರೆ ಏನು, ಅದಕ್ಕೆ ಸಂಬಂಧಿಸಿದ ಕೆಲ ಟೆಕ್ನಾಲಜಿಗಳು, ಅವುಗಳ ಸ್ಥೂಲ ವ್ಯಾಖ್ಯಾನ/ ಡೆಫಿನಿಷನ್ ಮತ್ತು ಕೆಲವು ಅಳವಡಿಸಿದ ನೈಜ ಉದಾಹರಣೆಗಳನ್ನು ವಿವರಿಸಿದೆ. ಅದನ್ನು ಮರು ನೆನಪಿಸಿಕೊಳ್ಳುವುದಾದರೆ…

ಮೆಟಾವರ್ಸ್ ಒಂದು ಕೃತಕ ಆನ್ಲೈನ್ ಜಗತ್ತು. ಇದು ಬ್ಲಾಕ್‌ಚೈನ್ ಟೆಕ್ನಾಲಜಿ ಮೇಲೆ ಕಟ್ಟುವಂತಹದ್ದು. ವೆಬ್ ೩.೦ ಇದಕ್ಕೆ ಪೂರಕವಾದ ಒಂದು ಭಾಗ. ಸದ್ಯಕ್ಕೆ ಇರುವ ಬಹಳಷ್ಟು ವೆಬ್‌ಸೈಟ್‌ಗಳನ್ನು ವೆಬ್ ೨.೦ ಆಗಿ ವಿಂಗಡಿಸಬಹುದು. ಮೆಟಾವರ್ಟ್‌ನಲ್ಲಿ ವಹಿವಾಟು ನಡೆಸುವುದು ಆನ್ಲೈನ್ ಕರೆನ್ಸಿಗಳಲ್ಲಿ ಹಾಗೂ ಎನ್‌ಎಫ್‌ಟಿಗಳು ಈಗಾಗಲೇ ಬಹಳಷ್ಟು ಜನಪ್ರಿಯಗೊಂಡಿವೆ.

ಈಗ ಮುಂದುವರಿದ ಭಾಗವಾಗಿ ಮೆಟಾವರ್ಸ್ ಹುಟ್ಟಿಕೊಂಡ ರೀತಿ, ಅದರ ಆಳ ಮತ್ತು ವಿಸ್ತಾರ ನೋಡೋಣ. ದಿನದಿಂದ ದಿನಕ್ಕೆ ವಿಕಸನಗೊಳ್ಳುತ್ತಿರುವ ಈ ಮೆಟಾವರ್ಸ್ ಇಂದಿಗೆ ಎಷ್ಟು ಪ್ರಸ್ತುತತೆ ಪಡೆದಿದೆ ಹಾಗೂ ಅದರ ತೊಡುಗುವಿಕೆ/ಅಪ್ಲಿಕೇಶನ್ ಗಮನಿಸೋಣ.

ಮೆಟಾವರ್ಸ್ ಅನ್ನೋ ಪದ ಮೊದಲು ಬಳಕೆಯಾಗಿದ್ದು ೧೯೯೨ರ ನಿಯಲ್ ಸ್ಟೀಫನ್ಸನ್ ಅವರ ಕಾದಂಬರಿ “ಸ್ನೋ ಕ್ರ್ಯಾಶ್”ನಲ್ಲಿ. ಈ ಕಾದಂಬರಿ ಮನುಷ್ಯರು ಹಾಗು ಮನುಷ್ಯರೇ ನಿರ್ಮಿಸಿದ ಅವರ ರೂಪಕಗಳ ನಡುವೆ ಒಂದು ಕೃತಕ ಪರಿಕಲ್ಪಿತ ಜಗತ್ತಿನಲ್ಲಿ ನಡೆಯುವ ಕಥೆ. ಇಂಗ್ಲೀಷಿನ ʻಮೆಟಾಫರ್ʼನ ಮೊದಲ ಭಾಗ ಹಾಗು ʻಯೂನಿವರ್ಸ್‌ʼನ ಎರಡನೇ ಭಾಗ ಸೇರಿಸಿದಾಗ ಉಂಟಾಗುವುದು “ಮೆಟಾವರ್ಸ್”. ತಿಳಿಗನ್ನಡದಲ್ಲಿ ಸ್ಟೂಲವಾಗಿ ಅನುವಾದಿಸಿದರೆ “ರೂಪಕ ಜಗತ್ತು” ಎಂದು ಕರೆಯಬಹುದು.

ಪುಸ್ತಕದ ಗ್ರಹಿಕೆಯಾಗಿ ಇದ್ದ ಈ ಪರಿಕಲ್ಪನೆಯನ್ನು ನಿಜವಾಗಿಸಿದ್ದು ಗೇಮಿಂಗ್ ಉದ್ಯಮ. ಒಂದು ಕೃತಕ ವೇದಿಕೆ ಸೃಷ್ಟಿಸಿ ಅದರಲ್ಲಿ ಬಹುಮಂದಿ ಆಟಗಾರರು ಸಂವಾದಾತ್ಮಕ ರೀತಿಯಲ್ಲಿ ಆಟವಾಡುವುದು ಇದರ ತಳಹದಿ. ಹೌದು, ನಿಜವಾದ ಭೌತಿಕ ಜಗತ್ತಿನಲ್ಲಿ ನಡೆಯುವ ಸನ್ನಿವೇಶಗಳನ್ನು ಯಥಾವತ್ತಾಗಿ ಆನ್ಲೈನ್ ಕೃತಕವಾಗಿ ಇಮ್ಮರ್ಸಿವ್ ಅನುಭವ ಕೊಡುವಲ್ಲಿ ಬಹಳಷ್ಟು ಗೇಮಿಂಗ್ ಕಂಪನಿಗಳು ಸೈ ಎನ್ನಿಸಿಕೊಂಡಿವೆ. ಉದಾಹರಣೆ ಕೊಡುವುದಾದರೆ ರೊಬ್ಲಾಸ್, ಸೆಕೆಂಡ್ ಲೈಫ್ ಹಾಗು ಮೈಮ್ ಕ್ರಾಫ್ಟ್ ಈ ಎರಡು ಆಟಗಳು ಅತ್ಯಂತ ಜನಪ್ರಿಯಗೊಂಡವು. ಭಾರತದಲ್ಲೂ ಈ ರೀತಿಯ ಆಟಗಳಿಗೆ ಅದರದೇ ಆದ ಹಿಂಬಾಲಕರಿದ್ದಾರೆ.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮಾಯಾಲೋಕದಲ್ಲಿ ಏನಿದೆ, ಏನಿಲ್ಲ?

ಈ ಆಟಗಳು ಮೊದಲಿಗೆ ಮೋಜಿನ ಕೇಂದ್ರಬಿಂದುವಾದರೆ ಇದರ ಆಳ ಮತ್ತು ವಿಸ್ತಾರಗಳನ್ನು ಗ್ರಹಿಸಿದ್ದು ಕೆಲವು ಟೆಕ್ ದಿಗ್ಗಜ ಕಂಪನಿಗಳು. ಮೊದಲು ೨ಡಿ ಮಾದರಿಯಲ್ಲಿ ಆಡಬಹುದಾಗಿದ್ದ ಆಟಗಳು ೩ಡಿ ಮೂಲಕ ಮತ್ತಷ್ಟು ಜನಪ್ರಿಯಗೊಂಡಾಗ ಆ ಸಮಯದಲ್ಲಿ ಇದನ್ನು ವರ್ಚುಯಲ್ ರಿಯಾಲಿಟಿಗೆ ವಿಸ್ತರಿಸುವ ಕನಸು ಹುಟ್ಟಿಕೊಳ್ಳತೊಡಗಿತು.

ಒಂದು ಉದಾಹರಣೆ ನೋಡೋಣ. ನಮಗೆ ಬಹು ಪರಿಚಿತ ಫೇಸ್‌ಬುಕ್‌ನಲ್ಲಿ “ಫಾರ್ಮ್‌ವಿಲ್ಲೆ” ಆಟ ನಿಮಗೆ ಪರಿಚಯವಿರಬಹುದು. ಒಂದಿಷ್ಟು ಬಿತ್ತುವ ಭೂಮಿ ನೀವು ಖರೀದಿಸಿ, ಒಂದಿಷ್ಟು ಬೆಳೆ ಬೆಳೆದು, ಒಂದಿಷ್ಟು ಪ್ರಾಣಿಸಾಕಣೆ ಮಾಡಿ, ಒಂದಿಷ್ಟು ಫಸಲನ್ನು ನೀವು ಬಿಕರಿಯೂ ಮಾಡಬಹುದಿತ್ತು. ನಿಮ್ಮ ಫೇಸ್ಬುಕ್ ಗೆಳಯರಿಗೆ “ರಿಕ್ವೆಸ್ಟ್’ ಕಳುಹಿಸಿ ಅವರನ್ನು ನಿಮ್ಮ ಫಾರ್ಮ್‌ಗೆ ಆಹ್ವಾನಿಸಿ ಅವರದ್ದೇ ಒಂದು ಹೊಸ ಫಾರ್ಮ್ ಕೂಡ ಮಾಡಬಹುದಿತ್ತು. ಇದು ಬಲು ಸೂಕ್ಶ್ಮವಾಗಿ ಫೇಸ್‌ಬುಕ್ ಮಾಡಿದ ಒಂದು ಪ್ರಯೋಗ. ನಿಜ ಜೀವನದಲ್ಲಿ ಸ್ನೇಹಿತರ ನಡುವಿನ ಇಂಟರ್ಯಾಕ್ಷನ್ ಆನ್‌ಲೈನ್‌ಗೂ ಹೇಗೆ ವಿಸ್ತಾರಗೊಳ್ಳುತ್ತದೆ ಎಂದು ತಿಳಿಯುವ ಪ್ರಯೋಗ.

ಮುಂದುವರಿದಂತೆ ಎಲ್ಲ ದಿಗ್ಗಜ ಕಂಪನಿಗಳಾದ ಗೂಗಲ್, ಫೇಸ್‌ಬುಕ್, ಮೈಕ್ರೋಸಾಫ್ಟ್ ತಮ್ಮ ತಮ್ಮ ರಿಸರ್ಚ್ ಅಂಡ್ ಡೆವಲಪ್ಮೆಂಟ್ ತಂಡಗಳನ್ನು ವರ್ಚುಯಲ್ ರಿಯಾಲಿಟಿ ಕಡೆಗೆ ಹೆಚ್ಚಿನ ಗಮನ ಹರಿಸಲು ನಿರ್ದೇಶಿಸಿದವು. ಇದರ ನಡುವೆಯೇ ಅನೇಕ ಸ್ಟಾರ್ಟ್ ಅಪ್ ಸಂಸ್ಥೆಗಳು ಅನೇಕ ಆವಿಷ್ಕಾರಗಳನ್ನು ಮಾಡುತ್ತಾ ಬಂದವು. ಇದು ಮೆಟಾವರ್ಸ್ ವೃದ್ಧಿಗೆ ಬಹಳ ಪ್ರಮುಖವಾದದ್ದು. ಈ ಮಾದರಿಯ ಸ್ಟಾರ್ಟ್ ಅಪ್ ಹಾಗು ಗೇಮಿಂಗ್ ಕಂಪನಿಗಳನ್ನು ಒಂದೊಂದಾಗಿ ಖರೀದಿಸುತ್ತಾ ಬಂದವು ದಿಗ್ಗಜ ಕಂಪನಿಗಳು.

ಇವೆಲ್ಲವೂ ಸಾಮೂಹಿಕವಾಗಿ ಮುಂದುವರಿಯುತ್ತಿರುವಂತೆಯೇ, ಕೋವಿಡ್-೧೯ ಪಿಡುಗು ಮೆಟಾವರ್ಸ್ ದಿಕ್ಕನ್ನೇ ಬದಲಿಸಿತು. ಲಾಕ್‌ಡೌನ್ ಆಗುತ್ತಿದ್ದಂತೆಯೇ ಹೆಚ್ಚು ಜನ ಮನೆಯಿಂದಲೇ ಕೆಲಸ ಮಾಡಲು ಪ್ರಾರಂಭಿಸಿದರು. ಹೆಚ್ಚಿನ ಸಮಯ ಆನ್ಲೈನ್‌ನಲ್ಲೇ ಕಳೆಯುತ್ತಿದ್ದರು. ಶಿಕ್ಷಣದಿಂದ ಹಿಡಿದು ಸ್ಟಾಕ್ ಮಾರ್ಕೆಟ್‌ವರೆಗೂ, ಕ್ರೀಡೆಯಿಂದ ಹಿಡಿದು ಮದುವೆಗಳವರೆಗೂ ಎಲ್ಲವೂ ಆನ್ಲೈನ್‌ನಲ್ಲೇ ಆಗುತ್ತಿದ್ದವು. ಇದು ವರ್ಚುಯಲ್ ರಿಯಾಲಿಟಿಯ ಎಷ್ಟೋ ಆಯಾಮಗಳು ಬಹಳಷ್ಟು ವರ್ಷಗಳ ನಂತರ ತೆರೆದುಕೊಳ್ಳುವ ಸಂದರ್ಭ ಇದ್ದಂತೆ ಭಾಸವಾಯಿತು. ಆದರೂ ಮಾನವ ಸಂಪರ್ಕ ಮೊದಲಿಗಿಂತ ಕೋವಿಡ್ ಸಮಯದಲ್ಲಿ ಇನ್ನೂ ಬಹಳ ಮುಖ್ಯ ಎನ್ನಿಸತೊಡಗಿತು. ಏಕಾಂತತೆ ತೊರೆಯಲು ಮಂದಿ ಮೊರೆಹೋದದ್ದು ಈ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೆ ಹಾಗು ತಮ್ಮ ಡಿಜಿಟಲ್ ಪ್ರೆಸೆನ್ಸ್ ಬಗ್ಗೆ ಬಹಳಷ್ಟು ಜನ ಗಮನ ಹರಿದದ್ದರಿಂದ ಮೆಟಾವರ್ಸ್ ಅಭಿವೃದ್ಧಿಗೂ ಇದು ಪೂರಕವಾಯಿತು.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ವರ್ಕ್ ಫ್ರಮ್ ಹೋಮ್- ಭವಿಷ್ಯದ ಕತೆ ಏನು?

ಮೆಟಾವರ್ಸ್ ಇಂದು

ಮೊದಲನೆಯ ಲೇಖನದಲ್ಲಿ ಉಲ್ಲೇಖಿಸಿದ ಹಾಗೆ, ಈಗಾಗಲೇ ಬೇರೆ ಬೇರೆ ನೆಲೆಗಳಲ್ಲಿ ಮೆಟಾವರ್ಸ್ ತನ್ನ ಬೇರೂರಿದೆ. ಇದು ಸದ್ಯದ ಚಿತ್ರಣ. ಮುಂದುವರಿದು ಇನ್ನೂ ಹೆಚ್ಚು ಅಭಿವೃದ್ಧಿ ದಿನದಿಂದ ದಿನಕ್ಕೆ ಸಾಗುತ್ತಿದೆ ಹಾಗು ರೂಪಾಂತರಗೊಳ್ಳುತ್ತಿದೆ.

ಶಿಕ್ಷಣದಲ್ಲಿ

ಮೆಟಾವರ್ಸ್‌ನ ಬಹು ದೊಡ್ಡ ಪ್ರಭಾವ ಇರುವುದು ಶಿಕ್ಷಣ ಕ್ಷೇತ್ರದಲ್ಲಿ. ಸುಮಾರು ೧೬.೮ ಕೋಟಿ ಮಕ್ಕಳು ಕೋವಿಡ್‌ನಿಂದಾಗಿ ತಮ್ಮ ಶಾಲೆಗೆ ಹೋಗಲಾಗಲಿಲ್ಲ. ತಕ್ಷಣದಲ್ಲಿ ಶುರುವಾದ ಆನ್ಲೈನ್ ತರಗತಿಗಳು ಶಿಕ್ಷಣದ ಹೊಸ ಆಯಾಮಗಳನ್ನು ತೆರೆಯುವಂತೆ ಮಾಡಿದವು. ಹೆಚ್ಚು ವಿಷಯ ಇಂಟರ್ನೆಟ್ ಮೂಲಕ ಲಭ್ಯವಾಗುವಂತೆ ಮಾಡಿತು ಹಾಗು ಬೇರೆ ಬೇರೆ ಭಾಷೆಯಲ್ಲಿದ್ದ ಕಂಟೆಂಟ್ ತಮ್ಮದೇ ಭಾಷೆಯಲ್ಲಿ ಸಿಗುವಂತಾಯಿತು. ಇದರಿಂದ ಆಸಕ್ತರಿಗೆ ಜ್ಞಾನ ವೃದ್ಧಿಗೆ ಆನ್ಲೈನ್ ಶಿಕ್ಷಣ ಬಹಳಷ್ಟು ಉಪಯೋಗಕಾರಿಯಾಯಿತು. ಇದರ ಮುಂದುವರಿದ ಭಾಗವೇ ಮೆಟಾವರ್ಸ್ ಶಿಕ್ಷಣ. ಒಂದು ಕೃತಕ ಕ್ಲಾಸ್ ರೂಮಿನಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಕಲಿಕೆಯ ಒಂದು ಆಯಾಮ ಈಗಾಗಲೇ ಹಲವಾರು ದೇಶಗಳಲ್ಲಿ ಪ್ರಾರಂಭವಾಗಿದೆ. ಇದರ ಪ್ರಭಾವ ಮತ್ತಷ್ಟು ವೃದ್ಧಿಸಲು ಇನ್ನೂ ಹೆಚ್ಚು ಪ್ರಯೋಗಗಳು ನಡೆಯುತ್ತಿವೆ. ಒಂದು ಉದಾಹರಣೆ ನೋಡುವುದಾದರೆ, ನಮ್ಮ ಎಷ್ಟೋ ಇತಿಹಾಸದ ಪಾಠಗಳನ್ನು ಮೆಟಾವರ್ಸ್‌ನಲ್ಲಿ ಮರುಸೃಷ್ಟಿಸಿ ಒಂದು ಇಮ್ಮರ್ಸಿವ್ ಲೆರ್ನಿಂಗ್/ಕಲಿಕೆಗೆ ನಾಂದಿಯಾಗಬಹುದು.

ಆನ್ಲೈನ್ ಕೆಲಸ

ಒಂದು ಸಣ್ಣ ಮಾಹಿತಿ, ೨೦೧೯ರಲ್ಲಿ ಸುಮಾರು ೧ ಕೋಟಿ ಜನ ಮಾತ್ರ “ಜೂಮ್” ಆಪ್ಲೀಕೇಷನ್ ಬಳಸುತ್ತಿದ್ದರು. ೨೦೨೦ ಮಾರ್ಚ್ ಅಷ್ಟೊತ್ತಿಗೆ ಇದು ೨೦೦ ಕೋಟಿಗೆ ಜಿಗಿದಿತ್ತು. ಸಮಯಕ್ಕೆ ಅನುಗುಣವಾಗಿ ಒಗ್ಗಿಕೊಂಡು ಆನ್ಲೈನ್ ಕೆಲಸವೂ ಹಲವಾರು ತೊಡಕುಗಳನ್ನು ಎದುರಿಸಿಯೂ ಯಶಸ್ವಿಯಾಗಿ ಬಳಸಲ್ಪಟ್ಟಿತು. ಇದರ ರೂಪಾಂತರಿಯೇ ಮೆಟಾವರ್ಸ್ ಮೀಟಿಂಗ್‌ಗಳು. ಒಂದು ಮೀಟಿಂಗ್ ರೂಮಿನಲ್ಲಿ ನಿಮ್ಮ “ಅವತಾರ” ನಿಮ್ಮನ್ನು ಪ್ರತಿನಿಧಿಸುತ್ತಿರುತ್ತದೆ. ಕೊಲ್ಯಾಬೋರೇಷನ್ ದೃಷ್ಟಿಯಿಂದ ಎಷ್ಟೋ ಕಂಪನಿಗಳು ಈ ರೀತಿಯ ಮೀಟಿಂಗ್ ಆಯೋಜಿಸಲು ಶುರು ಮಾಡಿವೆ ಹಾಗು ಯಶಸ್ಸನ್ನು ಕಂಡಿವೆ. ಬೇರೆ ಬೇರೆ ದೇಶಗಳಿಗೆ ಪಯಣಿಸಿ ಮಾಡಬೇಕಿದ್ದ ಮೀಟಿಂಗ್‌ಗಳು ಈಗ ಆನ್ಲೈನ್‌ನಲ್ಲಿ ಸರಾಗವಾಗಿ ಎದುರು ಬದುರು ಕೂತು ಮಾತನಾಡುವ ರೀತಿಯಲ್ಲಿ ವೃದ್ಧಿಸಿರುವುದು ನಿಜಕ್ಕೂ ಟೆಕ್ನಾಲಜಿಯ ಗೆಲುವು.

ಲೈವ್ ಕಾರ್ಯಕ್ರಮಗಳು

ಈಗಾಗಲೇ ಬಲು ಪ್ರಸಿದ್ಧವಾದ ಮೆಟಾವರ್ಸ್ ಬಳಸುವಿಕೆ ಆನ್ಲೈನ್ ಲೈವ್ ಕಾರ್ಯಕ್ರಮಗಳು. ಬಹಳಷ್ಟು ದೇಶಗಳಲ್ಲಿ ಮೆಟಾವರ್ಸ್ ಕಾನ್ಸರ್ಟ್ ಹುಚ್ಚೆಬ್ಬಿಸಿವೆ. ಅತ್ಯಂತ ಸನಿಹದಲ್ಲಿ ತಮ್ಮ ನೆಚ್ಚಿನ ಸ್ಟಾರ್‌ಗಳನ್ನೂ ನೋಡಿ/ಕೇಳಿ ಎಷ್ಟೊಂದು ಜನ ಮೋಡಿಗೊಂಡಿದ್ದಾರೆ. ಭಾರತದಲ್ಲಿ ಅಷ್ಟು ಜನಪ್ರಿಯಗೊಂಡಿಲ್ಲವಾದರೂ ಇತ್ತೀಚಿನ ದಿನಗಳಲ್ಲಿ ಚುರುಕುಗೊಳ್ಳುತ್ತಿದೆ. ಬರಿ ಸಂಗೀತ ಕಾರ್ಯಕ್ರಮಗಳಲ್ಲದೆ ಮೆಟಾವರ್ಸ್ ನಾಟಕಗಳು ಬ್ಯಾಲೆ ಮ್ಯೂಸಿಕಲ್ಸ್ ಬಹಳಷ್ಟು ಜನಪ್ರಿಯವಾಗಿವೆ.

ಪ್ರವಾಸೋದ್ಯಮ

ಮೆಟಾವರ್ಸ್ ಮತ್ತೊಂದು ಉಪಯೋಗ ಪಡೆದಿರುವ ಕ್ಷೇತ್ರ ಪ್ರವಾಸೋದ್ಯಮ. ಲಾಕ್‌ಡೌನ್‌ನಿಂದಾಗಿ ಎಲ್ಲ ಪ್ರಯಾಣ ರದ್ದುಗೊಂಡದ್ದರಿಂದ ಹಲವಾರು ಜನ ಆನ್ಲೈನ್‌ನಲ್ಲಿ ತಮ್ಮ ನೆಚ್ಚಿನ ತಾಣಗಳನ್ನು ಅನ್ವೇಷಿಸಲು ಪ್ರಾರಂಭಿಸಿದರು. ವರ್ಚುಯಲ್ ಟೂರ್‌ಗಳು, ಗೈಡೆಡ್ ವಾಕಿಂಗ್ ಕಾರ್ಯಕ್ರಮಗಳು ಮೆಟಾವರ್ಸ್‌ನಲ್ಲಿ ನಡೆಯುತ್ತಿವೆ. ಉದಾಹರಣೆಗೆ ಮೆಟಾವರ್ಸ್‌ನಲ್ಲಿ ನೀವು ನಿಮ್ಮ ಅವತಾರದ ಮುಖೇನ ಈಜಿಪ್ಟ್‌ನ ಪಿರಮಿಡ್‌ಗಳನ್ನು ಅತ್ಯಂತ ಕೂಲಂಕಷವಾಗಿ ನೋಡಲು ಸಾಧ್ಯ. ನಿಜ, ಭೌತಿಕವಾಗಿ ಪ್ರವಾಸ ಮಾಡುವ ಮಜವೇ ಬೇರೆ. ಆದರೆ ಮೆಟಾವರ್ಸ್‌ನ ಆಳ ಅಗಲ ತಿಳಿಸಲು ಹಾಗು ಈಗಾಗಲೇ ನಡೆಯುತ್ತಿರುವ ವರ್ತಾಮಾನಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನವಷ್ಟೇ ನನ್ನದು.

ಇಷ್ಟೆಲ್ಲಾ ಉಪಯುಕ್ತವಾಗಿರುವ ಮೆಟಾವರ್ಸ್ ಇಂದಿಗೆ ಅಂಬೆಗಾಲಷ್ಟೇ ಇಡುತ್ತಿದೆ. ಇನ್ನು ಇದರ ರೂಪಾಂತರಿಗಳು ಬರುವಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ಭಾಗದಲ್ಲಿ ಟೆಕ್ ಕಂಪನಿಗಳ ಈವರೆಗಿನ ನಡೆ, ಮೆಟಾವರ್ಸ್‌ನ ಕೆಲ ಅನನುಕೂಲಗಳು ಹಾಗು ಸಾಮಾಜಿಕ ಬೆದರಿಕೆಗಳು, ಅಡೆತಡೆಗಳ ಬಗ್ಗೆ ವಿವರಿಸುವೆ. ಬಲು ಮುಖ್ಯವಾಗಿ ಕನ್ನಡ ಜಗತ್ತಿಗೆ ಹೇಗೆ ಮೆಟಾವರ್ಸ್ ಹೊಂದುತ್ತದೆ ಹಾಗು ನಾವು ಹೇಗೆ ತಯಾರಿರಬೇಕು ಎಂದು ಬೆಳಕು ಚೆಲ್ಲುವೆ.

Exit mobile version