Site icon Vistara News

ಗ್ಲೋಕಲ್‌ ಲೋಕ ಅಂಕಣ: ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಯಂತ್ರಿಸುವುದು ಹೇಗೆ?

AI data collection

ದಿನವೂ ಹೊಸದೊಂದು ಆವಿಷ್ಕಾರಕ್ಕೆ ಒಳಗಾಗುತ್ತಿರುವ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ದಿನವೂ ಒಂದೊಂದು ಅವಾಂತರವನ್ನೂ ಹುಟ್ಟು ಹಾಕುತ್ತಿದೆ. ಉದಾಹರಣೆಗಳನ್ನು ನೋಡಿ:

⦁ ಕ್ಯಾಥೊಲಿಕ್ ಚರ್ಚ್‌ನ ಸರ್ವೋಚ್ಚ ನಾಯಕ ಪೋಪ್ ಅವರ ಫೋಟೋಗಳು ಇತ್ತೀಚಿಗೆ ವೈರಲ್ ಆದವು- ಸದಾ ಪಾದ್ರಿ ಅಂಗಿಯಲ್ಲಿ ಇರುವ ಅವರು ಫ್ಯಾಷನ್ ಜಾಕೆಟ್ ಹಾಕಿಕೊಂಡಿರುವ ಫೋಟೋ ಹಾಗು ಮತ್ತೊಂದು ಅವರು ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ
⦁ ಅಮೆರಿಕಾದ ಪೆಂಟಗಾನ್ ಬಿಲ್ಡಿಂಗ್ ಮೇಲೆ ದಾಳಿ ಆಗಿರುವ ಫೋಟೋ.
⦁ ಬರಾಕ್ ಒಬಾಮ ಹಾಗು ವ್ಲಾಡಿಮಿರ್ ಪುಟಿನ್ ಯುದ್ಧಗಳ ಬಗ್ಗೆ ಮಾತನಾಡುತ್ತಿರುವ ವಿಡಿಯೋ.

ಈ ಮೇಲಿನ ಎಲ್ಲ ವೈರಲ್ ಫೋಟೋ/ ವಿಡಿಯೋ “ಡೀಪ್ ಫೇಕ್” ಅನ್ನೋ ಟೆಕ್ನಾಲಜಿ ಬಳಸಿ ಸೃಷ್ಟಿಸಿರುವುದು ನಿಜಕ್ಕೂ ಅಪಾಯಕಾರಿ. ಕೇವಲ ಒಂದು ಪ್ರಾಂಪ್ಟ್ ಬಳಸಿ ಚಾಟ್ ಜಿಪಿಟಿ ಅಂತಹ ಪ್ಲಾಟ್‌ಫಾರರ್ಮ್‌ಗಳನ್ನೂ ಬಳಸಿ ಈ ರೀತಿ ಫೇಕ್ ಇಮೇಜ್ ಅಥವಾ ಡೀಪ್ ಫೇಕ್ ಸೃಷ್ಟಿಯಾಗುತ್ತಿವೆ.

“ಇತಿಹಾಸ ಮರುಕಳಿಸುವುದು” ಎಂಬಂತೆ ಈ ರೀತಿಯ ಫೇಕ್ ನ್ಯೂಸ್‌ಗಳು ಮಾಡಿರುವ ರಾದ್ಧಾಂತ ಇನ್ನೂ ಹಸಿಯಾಗಿಯೇ ಇವೆ. ಹಾಗಾದರೆ ಈ ಎಐ ಅನ್ನು ನಿಯಂತ್ರಿಸುವ ಅಗತ್ಯ ಹಾಗು ಅದರ ತುರ್ತು ಅವಶ್ಯಕತೆ ಇದೆ. ಇವು ಏನು ಮಾಡಬಲ್ಲವು?

  1. ಸೋಷಿಯಲ್ ಮ್ಯಾನಿಪುಲೇಷನ್ :

ಅತ್ಯಂತ ಬುದ್ಧಿವಂತ “ಸೋಶಿಯಲ್ ಇಂಜಿನಿಯರಿಂಗ್” ಸಾಧನಗಳನ್ನು ಬಳಸಿ ಎಐ ಮಾಡೆಲ್‌ಗಳನ್ನು ತರಬೇತಿ ಮಾಡಿ ಜನರ ಆಲೋಚನಾ ನಡೆಯನ್ನು ಬದಲಿಸುವುದೇ ಸೋಶಿಯಲ್ ಮ್ಯಾನಿಪ್ಯುಲೇಷನ್. ರಾಜಕೀಯವಾಗಿ ಇದನ್ನು ದುರುಪಯೋಗಪಡಿಸಿ ಚುನಾವಣೆಗಳನ್ನು ಗೆದ್ದ ಉದಾಹರಣೆಗಳು ಇವೆ.

  1. ಪ್ರೈವೆಸಿ ಮತ್ತು ಸೆಕ್ಯೂರಿಟಿ:

ಎಐನ ಮೂಲ ಡೇಟಾ. ನಮ್ಮ ನಿಮ್ಮಂತಹ ಜನಸಾಮಾನ್ಯರ ದೈನಂದಿನ ಡೇಟಾ. ನಮ್ಮ ಬಗ್ಗೆ ಗೊತ್ತೋ ಗೊತ್ತಿಲ್ಲದೆಯೋ ಶೇರ್ ಮಾಡುತ್ತಿರುವ ಈ ಡೇಟಾ ನಮ್ಮ ಬಿಹೇವಿಯರ್ ಪ್ಯಾಟರ್ನ್‌ಗಳನ್ನು ಗ್ರಹಿಸುವಲ್ಲಿ ಸಹಾಯಕಾರಿಯಾಗಿದೆ. ಹಾಗೆಯೇ ನಮ್ಮ ಗೌಪ್ಯತೆ /ಪ್ರೈವಸಿ ಮೇಲೆ ತೀರಾ ಪರಿಣಾಮ ಬೀರಿದೆ. ನಾವು ಆನ್ಲೈನ್ ಏನನ್ನು ನೋಡುತ್ತಿದ್ದೇವೆ, ಏನನ್ನು ಸರ್ಚ್ ಮಾಡಿದ್ದೇವೆ/ ಲೊಕೇಶನ್ ಎನೇಬಲ್ಡ್ ಸರ್ಚ್‌ಗಳಲ್ಲಿ ನಾವು ಎಲ್ಲಿದ್ದೇವೆ, ನಮ್ಮ ಇಷ್ಟಗಳೇನು, ನಮ್ಮ ವಯಸ್ಸೆಷ್ಟು, ನಾವು ಯಾವ ಔಷಧ ಸೇವಿಸುತ್ತಿದ್ದೇವೆ, ಇವೆಲ್ಲವೂ ಎಐ ಪ್ಲಾಟ್‌ಫಾರ್ಮ್‌ಗಳು ಟ್ರ್ಯಾಕ್ ಮಾಡಿ ಬಳಸುತ್ತಿವೆ.

3. ಯುವಜನತೆ ಮೇಲಿನ ಪ್ರಭಾವ:

ಮೇಲೆ ವಿವರಿಸಿದ ಸೋಶಿಯಲ್ ಮ್ಯಾಪಿಂಗ್ ಬಳಸಿ ಯುವಜನತೆಯ ಬಿಹೇವಿಯರ್ ಬದಲಿಸುವ ನಡೆ ಆತಂಕಕಾರಿಯಾಗಿದೆ. ವ್ಯಸನಕ್ಕೊಳಗಾಗಿ ದಿನದ ಬಹು ಪಾಲು ಸಮಯ ಗೇಮಿಂಗ್ ಹಾಗು ಸೋಶಿಯಲ್ ಮೀಡಿಯಾಗಳಲ್ಲಿ ಕಳೆಯುವ ಪರಿ ನಮ್ಮೆಲ್ಲರಿಗೂ ಕಾಣಿಸುತ್ತದೆ. ಎಷ್ಟರ ಮಟ್ಟಿಗೆ ಎಂದರೆ “ಟ್ರೆಂಡ್”ಗಳನ್ನು ಅನುಸರಿಸಲು ಹೋಗಿ ಪ್ರಾಣ ಕಳೆದುಕೊಂಡಿರವ ಘಟನೆಗಳೂ ಇವೆ. ಇವು ಸೋಶಿಯಲ್ ಮೀಡಿಯಾ ಹಾಗು ಗೇಮಿಂಗ್ ಕಂಪನಿಗಳು ಎಐ ಬಳಸಿ ಮಾಡುತ್ತಿರುವ ಕುತಂತ್ರ. ಪೋಷಕರಿಗೆ ಸುಳ್ಳು ಹೇಳುವುದು ಹೇಗೆ?” ಎಂಬ ಚಾಟ್ ಜಿಪಿಟಿ ಪ್ರಾಂಪ್ಟ್ ಇತ್ತೀಚಿಗಷ್ಟೇ ಟ್ರೆಂಡ್‌ನಲ್ಲಿ ಇತ್ತು. ಇದು ನಿಜಕ್ಕೂ ಆತಂಕಕಾರಿ.

ಹಾಗಾದರೆ ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಯಂತ್ರಿಸುವುದು ಹೇಗೆ?

  1. ಎಐ ಮಾಡೆಲ್‌ಗಳನ್ನು ಲೈಸೆನ್ಸ್ ಹಾಗು ಕಂಪ್ಲೇಯನ್ಸ್ ಮಾಡೆಲ್ ಕೆಳಗೆ ತರುವುದು:

ಇರುವ ಎಐ ಮಾಡೆಲ್ ಹಾಗೂ ಮುಂದೆ ಸೃಷ್ಟಿಸುವ ಎಐ ಮಾಡೆಲ್‌ಳನ್ನು ಒಂದು ರೆಗ್ಯುಲೇಟರಿ ಬಾಡಿಯಡಿ ತಂದು ಅದರ ಪರಿಮಿತಿ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಅರ್ಥೈಸಿ ಪರ್ಮಿಷನ್ ಕೊಡುವುದು. ಇದು ಒಂದು ಹಂತದ ವರೆಗೆ ಎಐ ಮಾಡೆಲ್‌ಗಳನ್ನು ಸ್ಟ್ರೀಮ್ ಲೈನ್ ಮಾಡಿ ಗ್ರಹಿಸಲು ನೆರವಾಗುತ್ತದೆ.

  1. ಸೇಫ್ಟಿ ಪ್ರೋಟೋಕಾಲ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಸೃಷ್ಟಿಸುವುದು:

ನಿಬಂಧನೆಗೆ ಒಳಗಾಗುವ ಒಂದಿಷ್ಟು ಸೇಫ್ಟಿ ಪ್ರೋಟೋಕಾಲ್‌ಗಳನ್ನು ತಂದು ಎಐ ದುರ್ಬಳಕೆಗೆ ಕಡಿವಾಣ ಹಾಕುವುದು. ಇವು “ಸೆಲ್ಫ್ ರೆಪ್ಲಿಕೇಟಿಂಗ್” ಎಐ ಮಾಡೆಲ್‌ಗಳಿಗೆ ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಅವು ಇರುವ “ಸೆಲ್ಫ್‌ ಲರ್ನಿಂಗ್” ಮೆಕ್ಯಾನಿಸಂ ಬಳಸಿ ನಿಮಿಷದಿಂದ ನಿಮಿಷಕ್ಕೆ ಬುದ್ಧಿಶಾಲಿಯಾಗಿ ಕೊನೆಗೆ ಅಪಾಯಕಾರಿಯಾಗುವ ಸಾಮರ್ಥ್ಯ ಹೊಂದಿರುತ್ತವೆ.

metaverse

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ: ಎಐ ಇದೆ, ಚಾಟ್ ಜಿಪಿಟಿ ಬಂದಿದೆ, ಮುಂದೇನು?

  1. ಸ್ವತಂತ್ರವಾದ ಆಟೊನಾಮಸ್ ತಪಾಸಣಾ ಸಂಸ್ಥೆ:

ಜನರೇಟಿವ್ ಎಐ ಹಾಗು ಪ್ರೆವೆಂಟಿವ್ ಎಐ ಸಾಲಿನಲ್ಲಿ ನಿಗ್ರಹಿಸುವ ಈ ಸಂಸ್ಥೆ ಪ್ರಾಪಂಚಿಕ ಮಾನದಂಡ/ಸ್ಟ್ಯಾಂಡರ್ಡ್‌ಗಳನ್ನು ಜಾರಿಗೊಳಿಸಬೇಕು. ಯಾವುದೇ ದೇಶದಲ್ಲಿ ಆಗುವ ವಿನ್ಯಾಸ ಮತ್ತು ಆವಿಷ್ಕಾರ ಈ ಸಂಸ್ಥೆಯ ಅಡಿಯ ಸ್ಟ್ಯಾಂಡರ್ಡ್‌ಗಳಿಗೆ ಬದ್ಧವಾಗಿ ಇರುವುದು ಹಾಗು ನಿಯಮದಡಿ ಉತ್ತರಿಸುವ ಹೊಣೆ/ ಆನ್ಸರೇಬಲ್ ಆಗಿರಬೇಕು.

  1. ಆಯಾ ದೇಶದ ಟೆಕ್ನಾಲಜಿ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆ:

ಇರುವ ಟೆಕ್ನಾಲಜಿ ಸಂಬಂಧಿಸಿದ ಕಾನೂನುಗಳಲ್ಲಿ ಬದಲಾವಣೆ ಮಾಡಿ, ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು. ಈ ನಿಟ್ಟಿನಲ್ಲಿ ಟೆಕ್ನಾಲಜಿ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟುವಲ್ಲಿ ಉಪಯೋಗಕಾರಿಯಾಗಲಿದೆ.

ಒಟ್ಟಿನಲ್ಲಿ ಮೇಲಿರುವ ಸೂತ್ರಗಳು ಎಐ ನಿಯಂತ್ರಿಸುವ ಪ್ರಾರಂಭಿಕ ನಡೆಯಷ್ಟೇ. ಈಗಾಗಲೇ ಹಲವಾರು ರಾಷ್ಟ್ರಗಳು ಹಾಗು ಹಲವಾರು ದಿಗ್ಗಜ ಕಂಪನಿಗಳು ಈ ನಿಟ್ಟಿನಲ್ಲಿ ಯೋಚಿಸಿ ಕೆಲವಷ್ಟು ಬದಲಾವಣೆಗಳನ್ನು ತರುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ.

ಚಾಟ್ ಜಿಪಿಟಿಯ “ಓಪನ್ ಎಐ” ಸಂಸ್ಥೆಯ ಮುಖ್ಯಸ್ಥ ಸಾಮ್ ಆಲ್ಟ್‌ಮ್ಯಾನ್ ಅಮೇರಿಕಾ ಕಾಂಗ್ರೆಸ್ ಮುಂದೆ ಕೆಲ ಪ್ರಸ್ತಾವನೆಗಳನ್ನು ಮಂಡಿಸಿ ತನ್ನ ಸಹಕಾರವನ್ನು ಸೂಚಿಸಿದ್ದಾರೆ. ಇನ್ನಷ್ಟು ಕಂಪನಿಗಳು ಈ ದಿಕ್ಕಿನಲ್ಲಿ ಸ್ವಯಂ ಪ್ರೇರಿತವಾಗಿ ಕೆಲ ನಿಯಮಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಿರುವುದು ಆಶಾದಾಯಕ ಸಂಗತಿ.

ಇದನ್ನೂ ಓದಿ: ಗ್ಲೋಕಲ್‌ ಲೋಕ ಅಂಕಣ: ಚಾಟ್ ಜಿಪಿಟಿ ಮತ್ತು ಉದ್ಯೋಗ; ಹೋಗೋದೆಷ್ಟು, ಬರೋದೆಷ್ಟು?

Exit mobile version