Site icon Vistara News

ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮುಂದಿರುವ ಸವಾಲುಗಳು

metaverse

ಮುಂಬರುವ ಮೆಟಾವರ್ಸ್ ಹೇಗಿರಬಹುದು ಎಂಬ ಆಲೋಚನೆಯೇ ರೋಚಕ. ಏಕೆಂದರೆ ನಾವು ಹೇಗೆ ಊಹಿಸಿಕೊಳ್ಳುತ್ತೇವೆಯೋ ಯಥಾವತ್ ಹಾಗೆಯೇ ನಿರ್ಮಿಸಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೆಲ ಸವಾಲುಗಳಿವೆ. ಇವೆಲ್ಲವನ್ನೂ ಮೀರಿ ಒಂದು ಸಮಗ್ರ ಹಾಗು ಬಲಿಷ್ಠ ಮೆಟಾವರ್ಸ್ ಕಟ್ಟುವ ಕಾಲ ಸದ್ಯದಲ್ಲೇ ಒದಗಲಿದೆ.

ಇಂಟರ್ನೆಟ್:

ಜಗದ್ವ್ಯಾಪಿಯಾಗಿರುವ ಇಂಟರ್ನೆಟ್ ಮೆಟಾವರ್ಸ್‌ನ ಮೂಲ. ಕೇವಲ ಎರಡು ದಶಕಗಳಷ್ಟು ಹಿಂದೆ ಇಂಟರ್ನೆಟ್ ಅಂಬೆಗಾಲಿಡುತ್ತಿತ್ತು. ಆದರೆ ಇಂದು ಸರಿ ಸುಮಾರು ನಮ್ಮ ಬಹು ಭಾಗ ಚಟುವಟಿಕೆಯ ಭಾಗವಾಗಿದೆ. ಇದೇ ಇಂಟರ್ನೆಟ್ ಈಗ ಅಗ್ಗವೂ ಸುಲಭವಾಗಿಯೂ ದೊರೆಯುವಂತಾಗಿದೆ.

ಆದರೆ ಒಂದು ವರ್ಚುಯಲ್ ಸೆಟ್ಟಿಂಗ್‌ನಲ್ಲಿ ಇಂಟರ್ನೆಟ್ ಸಮವಾಗಿರುವುದು ಬಲು ಮುಖ್ಯ. ಒಂದು ಉದಾಹರಣೆ, ನಮ್ಮ ಆನ್ಲೈನ್ ಮೀಟಿಂಗ್‌ಗಳಲ್ಲಿ ಸಂವಹನ ಸಲೀಸಾಗಿ ನಡೆಸಲು ಇಂಟರ್ನೆಟ್ ಸ್ಪೀಡ್ ಮತ್ತು ಬ್ಯಾಂಡ್‌ವಿಡ್ತ್ ಅತ್ಯಾವಶ್ಯಕ. ಇದರಲ್ಲಿ ಒಂದಕ್ಕೆ ಕುಂದು ಒದಗಿದರೆ ನಾವು ಪರಸ್ಪರ ಮಾತನಾಡುವುದು, ಸಂವಹಿಸುವುದು, ದೃಶ್ಯಗಳು ವಿರೂಪಗೊಳ್ಳುತ್ತದೆ. ಇದನ್ನು ನಾವೆಲ್ಲರೂ ಅನುಭವಿಸಿಯೇ ಇರುತ್ತೇವೆ.
“ನಾನು ಮಾತನಾಡುತ್ತಿರುವುದು ನಿಮಗೆ ಕೇಳಿಸುತ್ತಿದೆಯೇ” ಎಂದು ಎಷ್ಟೋ ಬಾರಿ ನಾವು ಗಾಬರಿಗೊಂಡು ನಮ್ಮ ಇಂಟರ್ನೆಟ್ ಕಾರ್ಯನಿರ್ವಹಿಸುತ್ತಿದೆಯೇ ಎಂದು ಮರು ಪರಿಶೀಲಿಸುತ್ತೇವೆ ಅಲ್ಲವೇ? ಹಾಗೆಯೇ ಮೆಟಾವರ್ಸ್‌ನಲ್ಲಿ ನಮ್ಮ ಚಲನವಲನ ನಮ್ಮ ಚಟುವಟಿಕೆ ನಮ್ಮ ಸಂವಹನ ಹಾಗು ನಮ್ಮ ಸಮಗ್ರ ಅನುಭವಕ್ಕೆ ಒಳ್ಳೆ ಬ್ಯಾಂಡ್‌ವಿಡ್ತ್ ಇರುವ ವೇಗವಾದ ಇಂಟರ್ನೆಟ್ ಬಲು ಮುಖ್ಯ. ಎಷ್ಟೋ ದೇಶಗಳಲ್ಲಿ ಇಂಟರ್ನೆಟ್ ಇನ್ನೂ ದುಬಾರಿಯಾಗಿವೆ. ಕೆಲವು ದೇಶಗಳಲ್ಲಿ ಇಂಟರ್ನೆಟ್ ಅಷ್ಟು ವ್ಯಾಪಕವಾಗಿಲ್ಲ. ಹಾಗೂ ಮೂಲಸೌಕರ್ಯಗಳ ತೊಂದರೆ ಒಂದು ಸಮಗ್ರ ಮೆಟಾವರ್ಸ್‌ಗೆ ಮಾರಕವಾಗಬಹುದು.

ನೆಟ್‌ವರ್ಕಿಂಗ್‌

ಮೂಲಭೂತವಾದ ಇಂಟರ್ನೆಟ್ ಬಳಕೆ ಆಗುವುದು ನೆಟ್‌ವರ್ಕಿಂಗ್‌ ವಿಷಯಕ್ಕೆ. ಒಂದು ಡಿವೈಸ್ ಒಂದು ಸರ್ವರ್ ಮೂಲಕ ಮತ್ತೊಂದು ಡಿವೈಸ್/ ಸರ್ವರ್ ಇಂಟರಾಕ್ಟ್ ಮಾಡುವುದನ್ನು ನೆಟ್‌ವರ್ಕಿಂಗ್ ಎಂದು ಸ್ಥೂಲವಾಗಿ ಕರೆಯಬಹುದು. ಇದು ಮೆಟಾವರ್ಸ್‌ನ ತೊಡಕಾಗಬಹುದು. ಒಂದು ಉದಾಹರಣೆ. ನಾವು ಒಂದು ಅಪ್ಲಿಕೇಶನ್ (ಆಪ್) ನಮ್ಮ ಮೊಬೈಲ್‌ನಲ್ಲಿ ಡೌನ್ಲೋಡ್ ಮಾಡುತ್ತೇವೆ. ಕೆಲ ದಿನಗಳ ನಂತರ ಅದೇ ಆಪ್ ನ ಮುಂದಿನ ವರ್ಷನ್ ಬಂದಿರುತ್ತದೆ. ಇದರಲ್ಲಿ ಹಿಂದಿನ ಆಪ್‌ನ ತೊಡಕುಗಳನ್ನು ನಿವಾರಿಸಿ ಹೊಸ ಫೀಚರ್ಸ್ ಇರುತ್ತವೆ. ಇದನ್ನು ವರ್ಷನ್ ಅಪ್‌ಗ್ರೇಡ್ ಎನ್ನುತ್ತೇವೆ. ಮೆಟಾವರ್ಸ್‌ನಲ್ಲಿ ಹತ್ತು ಹಲವು ವರ್ಷನ್‌ಗಳು ಬಹಳ ಅವಶ್ಯಕ. ಏಕೆಂದರೆ ಏಕಪಕ್ಷೀಯ ಚಟುವಟಿಕೆ ಇಲ್ಲದೆ ಎಷ್ಟೋ ಡಿವೈಸ್ ಅಥವಾ ಸರ್ವರ್‌ಗಳ ಸಮಾಗಮ ಬೇಕಿರುತ್ತದೆ. ಒಂದು ಇಮ್ಮರ್ಸಿವ್ ಅನುಭವಕ್ಕೆ ಈ ಎಲ್ಲ ಡಿವೈಸ್‌ಗಳು ಒಂದೇ ವರ್ಷನ್‌ನಲ್ಲಿರಬೇಕು. ಇಲ್ಲವಾದರೆ ಒಂದು ಡಿವೈಸ್ ಕಳಿಸುವ ಡೇಟಾ ಬಳಕೆ ವ್ಯತ್ಯಯಗೊಳ್ಳುತ್ತದೆ. ಇದರಿಂದ ಸಿಂಕ್ ಆಗದ ತೊಡಕು ಪದೇ ಪದೆ ಎದುರಾಗುತ್ತದೆ.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಎಂಬ ರೂಪಕ ಲೋಕ

ಕಂಪ್ಯೂಟಿಂಗ್

ನೆಟ್‌ವರ್ಕಿಂಗ್‌ನ ಮುಂದುವರೆದ ಭಾಗ ಕಂಪ್ಯೂಟಿಂಗ್. ಒದಗಿರುವ ಡೇಟಾ ಸ್ವೀಕರಿಸಿ, ಕೋಡ್‌ಗಳನ್ನಾಗಿ ತುಂಡರಿಸಿ, ಆ ಕೋಡ್‌ಗಳನ್ನು ಅರ್ಥೈಸಿ, ಅದರೊಳಗಿರುವ ಲಾಜಿಕ್ ನಿರೂಪಿಸಿ, ಅದರ ಔಟ್‌ಪುಟ್ ಧ್ವನಿ ಹಾಗು ದೃಶ್ಯವಾಗಿ ಪ್ರಸರಿಸುವುದನ್ನು ಸ್ಥೂಲವಾಗಿ ಕಂಪ್ಯೂಟಿಂಗ್ ಎನ್ನಬಹುದು. ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಮಾಡುವ ಈ ಪ್ರಕ್ರಿಯೆ ಕ್ಷಣಮಾತ್ರದಲ್ಲಿ ಬ್ಯಾಕೆಂಡ್‌ನಲ್ಲಿ ಪೂರೈಸುವುದು ಅಚ್ಚರಿಯೇ ಸರಿ. ಮೆಟಾವರ್ಸ್‌ನಲ್ಲಿ ಲಕ್ಷಾಂತರ ಡಿವೈಸ್‌ಗಳು ಒಮ್ಮೆಲೇ ಈ ಕಂಪ್ಯೂಟಿಂಗ್ ಸಲೀಸಾಗಿ ಮಾಡಬೇಕು. ಇಲ್ಲವಾದರೆ ಡಿಸ್‌ಪ್ಲೇ ಔಟ್‌ಪುಟ್ ವಿರೂಪವಾಗಿರುತ್ತದೆ. ಮುಂದುವರೆದು ನಾವು ಬಳಸುವ ಡಿವೈಸ್ ಸೆಂಟ್ರಲ್ ಪ್ರೊಸೆಸಿಂಗ್ ಯೂನಿಟ್ (CPU) ಹಾಗು ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ (GPU) ಬಹಳ ಬಲಿಷ್ಠವಾಗಿರಬೇಕು. ಸದ್ಯದ ಎಲ್ಲ ಕಂಪ್ಯೂಟರ್ ಹಾಗು ಮೊಬೈಲ್ ಡಿವೈಸ್‌ಗಳು ಕೇವಲ ಗೇಮಿಂಗ್ ದೃಷ್ಟಿಯಲ್ಲಿಟ್ಟುಕೊಂಡು ಮಾಡಲಾಲಾಗಿದೆ. ಇದನ್ನು ಮೆಟಾವರ್ಸ್ ದಿಕ್ಕಿನಲ್ಲಿ ಅನ್ವೇಷಿಸುವುದು ಬಹಳ ಮುಖ್ಯ.

ಒಂದು ಉದಾಹರಣೆ- ಒಂದು ಊರನ್ನು ಮೆಟಾವರ್ಸ್‌ನಲ್ಲಿ ಮರುಸೃಷ್ಟಿ ಮಾಡಲಾಯಿತು ಎಂದುಕೊಳ್ಳೋಣ. ಆ ಊರಿನ ಒಂದು ಪ್ರಮುಖ ರಸ್ತೆ ಯಾವುದೇ ಡಿವೈಸ್‌ನಲ್ಲಿ ಲಾಗಿನ್ ಮಾಡಿ ನೋಡಿದರೆ ಒಂದೇ ತರಹದ ಅನುಭವ ಕೊಡಬೇಕು. ಈ ನಿಟ್ಟಿನಲ್ಲಿ ಬಳಸುವ ಡಿವೈಸ್ ಒಂದೇ ವರ್ಷನ್‌ಲ್ಲಿರಬೇಕು ಹಾಗು ಅದರ CPU ಹಾಗು GPU ಯೂನಿಫಾರ್ಮಿಟಿ ಕಾಯ್ದಿರಿಸಿಕೊಳ್ಳಬೇಕು. ಇಲ್ಲವಾದರೆ ಮೆಟಾವರ್ಸ್ ಒಂದು ಸಮಗ್ರ ಅನುಭವ ಕೊಡುವಲ್ಲಿ ವಿಫಲವಾಗುತ್ತದೆ

ಹಾರ್ಡ್‌ವೇರ್

ಮೇಲಿನ ಎಲ್ಲ ವಿಷಯಗಳು ಸಾಫ್ಟ್‌ವೇರ್ ಸಂಬಂಧಪಟ್ಟಿರುವವು. ಮೆಟಾವರ್ಸ್‌ನ ಮತ್ತೊಂದು ಕಂಬ ಬಲಿಷ್ಠ ಹಾರ್ಡ್‌ವೇರ್. ಮೆಟಾವರ್ಸ್‌ನ ಸದ್ಯ ಸವಿಯಲು ಇರುವ ಡಿಸ್‌ಪ್ಲೇ “ಕನ್ನಡಕಗಳು” ಈ ಹಾರ್ಡ್‌ವೇರ್ ಅಡಿ ಬರುತ್ತದೆ.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮಾಯಾಲೋಕದಲ್ಲಿ ಏನಿದೆ, ಏನಿಲ್ಲ?

ಒಂದು ಉದಾಹರಣೆ- ಇತ್ತೀಚೆಗಷ್ಟೇ ಬಿಡುಗಡೆಯಾದ ಅವತಾರ್ ಸಿನಿಮಾವನ್ನು ನಮ್ಮಲ್ಲಿ ಸುಮಾರು ಜನ 3ಡಿ ಕನ್ನಡಕದ ಮೂಲಕ ಅನುಭವಿಸಿದ್ದೇವೆ. ಒಂದು 3ಡಿ ಚಿತ್ರವನ್ನು 2ಡಿ ಮೂಲಕ ನೋಡಿದರೆ ಮೋಜೆನಿಸುವುದಿಲ್ಲ. ಇದೇ ಕಾರಣಕ್ಕೆ ಮೆಟಾವರ್ಸ್ ಅನುಭವಕ್ಕೆ ಆಗ್ಮೆಂಟೆಡ್ ರಿಯಾಲಿಟಿ (AR) ಹಾಗು ವರ್ಚುಯಲ್ ರಿಯಾಲಿಟಿ (VR) ಹೆಡ್‌ಸೆಟ್‌ಗಳು ಬಲು ಮುಖ್ಯ. ಈಗಾಗಲೇ ಬಹಳಷ್ಟು ಕಂಪನಿಗಳು ಇದರಲ್ಲಿ ತಮ್ಮ ರಿಸರ್ಚ್ ಮತ್ತು ಡೆವಲಪ್ಮೆಂಟ್ ಡಿಪಾರ್ಟ್ಮೆಂಟ್‌ಗಳನ್ನು ತೊಡಗಿಸಿವೆ. ಎಷ್ಟೋ ಸಣ್ಣ ಕಂಪನಿಗಳನ್ನು ದಿಗ್ಗಜ ಕಂಪನಿಗಳು ವಶಪಡಿಸಿಕೊಂಡಿವೆ.

ಉದಾ, ಗೂಗಲ್ ಮೈಕ್ರೋಸಾಫ್ಟ್ ಹಾಗು ಫೇಸ್‌ಬುಕ್ ಮೆಟಾ ತಮ್ಮದೇ ಆದ ಹೆಡ್‌ಸೆಟ್ ಬಿಡುಗಡೆಗೊಳಿಸಿವೆ. ಆದರೆ ಇವೆಲ್ಲವೂ ಇನ್ನೂ ಆವೃತ್ತಿಗೊಳ್ಳುತ್ತಿರುವುದರಿಂದ ಹಾಗೂ ಮೆಟಾವರ್ಸ್ ಪ್ರಪಂಚವೇ ಅಷ್ಟು ನಿರ್ಮಿತವಾಗಿಲ್ಲದಿರುವುದರಿಂದ ಇದರ ಬಳಕೆ ಅಷ್ಟು ವ್ಯಾಪಕವಾಗಿ ಕಾಣದೊರೆಯುವುದಿಲ್ಲ. ಸದ್ಯದ ಮಟ್ಟಿಗೆ ಈ ಹೆಡ್‌ಸೆಟ್‌ಗಳು ಬಲು ದುಬಾರಿ ಕೂಡ ಹೌದು. ವ್ಯಾಪಕವಾದ ಬಳಕೆಯಿಂದ ದರ ಕಮ್ಮಿಯಾಗುವ ಸಾಧ್ಯತೆ ಇದೆ ಎಂದು ಟೆಕ್ ವಿಶ್ಲೇಷಕರ ಆಶಾವಾದ.

ಇನ್ನು ಮೆಟಾವರ್ಸ್‌ಗೆ ಬಹಳಷ್ಟು ಸಾಮಾಜಿಕ ತೊಡಕುಗಳೂ ಇವೆ.

ಸೆಕ್ಯೂರಿಟಿ

ಬಲು ದೊಡ್ಡ ತೊಂದರೆ ಎದುರಾಗುವುದು ಡೇಟಾ ಸೆಕ್ಯೂರಿಟಿ ದೃಷ್ಟಿಯಲ್ಲಿ. ನಮ್ಮ ಚಲನವಲನ, ನಮ್ಮ ಚಟುವಟಿಕೆ, ನಮ್ಮ ಆಗುಹೋಗುಗಳನ್ನು ಕೂಲಂಕಷವಾಗಿ ಟ್ರ್ಯಾಕ್ ಮಾಡುವ ಈ ಮೆಟಾವರ್ಸ್ ನಮ್ಮ ಬಗ್ಗೆ ಪ್ರಾಯಶಃ ಎಲ್ಲವನ್ನು ತಿಳಿದಿರುತ್ತದೆ. ನಮ್ಮ ವೈಖರಿ, ನಮ್ಮ ಇಷ್ಟಗಳು, ನಮ್ಮ ಇಷ್ಟವಲ್ಲದ ವಿಷಯಗಳು, AI ಮೂಲಕ ಹಿಡಿದಿಟ್ಟುಕೊಂಡು ನಮ್ಮ ಮುಂದಿನ ಬಿಹೇವಿಯರ್ ಪ್ಯಾಟರ್ನ್ ಊಹಿಸುವ ಮಹಾನ್‌ ಶಕ್ತಿ ಒಂದು ಯಂತ್ರಕ್ಕೆ ಕೊಟ್ಟಂತಾಗುತ್ತದೆ.

ದಿಟವೆಂದರೆ ನಾವು ಏನನ್ನು ನೋಡುತ್ತೇವೋ ಅದರ ಹತ್ತು ಪಾಲು ಮೆಟಾವರ್ಸ್ ನಮ್ಮನ್ನು “ನೋಡುತ್ತಿರುತ್ತದೆ”. ಈ ಡೇಟಾ ಸೋರಿಕೆಯಾಗುವ ಸಾಧ್ಯತೆ ಹಾಗು ಹ್ಯಾಕರ್ಸ್ ಪಾಲಾಗುವ ಭಯ ಇಂದಿಗೂ ಮುಂದೂ ಇದ್ದೇ ಇರುತ್ತವೆ. ಇದನ್ನು ಬಹಳಷ್ಟು ಕಂಪನಿಗಳು ದಿನಂಪ್ರತಿ ಎದುರಿಸುತ್ತಲೇ ಇವೆ.

ಇದನ್ನೂ ಓದಿ | ಗ್ಲೋಕಲ್‌ ಲೋಕ ಅಂಕಣ | ವರ್ಕ್ ಫ್ರಮ್ ಹೋಮ್- ಭವಿಷ್ಯದ ಕತೆ ಏನು?

ಮುಂದುವರಿದಂತೆ ನಮ್ಮ ಪ್ರೈವಸಿ ಮೇಲೂ ಇದರ ದಾಳಿ ತಪ್ಪಿದ್ದಲ್ಲ. ನಮ್ಮ ಗೌಪ್ಯ ಡೇಟಾ ಅಡ್ವಟೈಝರ್‌ಗಳ ಪಾಲಾದರೆ ಹೆಚ್ಚು ಟಾರ್ಗೆಟೆಡ್ ಆಡ್ಸ್ ನಮ್ಮನ್ನು ಹಿಂಬಾಲಿಸುತ್ತವೆ. ಇದರ ದುಷ್ಪರಿಣಾಮ ಈಗಾಗಲೇ ನಮ್ಮ ಗಮನಕ್ಕೆ ಬಂದಿರಬಹುದು. ಉದಾಹರಣೆ- ಒಂದು ಸಣ್ಣ ವಿಷಯ ಗೂಗಲ್ ಸರ್ಚ್ ಮಾಡಿ, ಒಂದು ಹತ್ತು ನಿಮಿಷ ಬಿಟ್ಟು ಬೇರೆ ವೆಬ್‌ಸೈಟ್ ನೀವು ತೆರೆದರೆ ನಿಮ್ಮ ಸರ್ಚ್‌ಗೆ ಸಂಬಂಧಿಸಿದ ಎಷ್ಟೋ ಉತ್ಪನ್ನಗಳನ್ನು ಕೊಳ್ಳಲು ಪ್ರೇರೇಪಿಸುವ ಲಿಂಕ್ ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ಇದು ಟಾರ್ಗೆಟೆಡ್ ಆಡ್ಸ್‌ನ ಒಂದು ಭಾಗ. ಮೆಟಾವರ್ಸ್ ಒಳಗಿನ ಡೇಟಾ ಇನ್ನಷ್ಟು ಗ್ರಾನುಲಾರ್ ಆಗಿ ದೊರೆಯುವುದರಿಂದ ಅದು ಮತ್ತಷ್ಟು ಅಮೂಲ್ಯವಾಗಿದೆ.

ಚಟ

ಇಷ್ಟೆಲ್ಲಾ ವೈಶಿಷ್ಟ್ಯಗಳಿರುವ ಮೆಟಾವರ್ಸ್‌ನ ಮತ್ತೊಂದು ಸವಾಲು ಅದು ಚಟವಾಗಿ ಪರಿಣಮಿಸಿ ಸಮಾಜವನ್ನು ದಿಕ್ಕುಗೆಡಿಸಬಹುದು ಎಂದು. ಒಮ್ಮೆ ಊಹಿಸಿ, ನಾವಿರುವ ಜಗತ್ತನ್ನು ತೊರೆದು ಮತ್ತೊಂದು ಕೃತಕ ಜಗತ್ತಿಗೆ ಹೋಗಿ ಅಲ್ಲಿರುವ ಅನುಭವಗಳನ್ನು ಪಡೆಯುವ ಸಾಮರ್ಥ್ಯವಿದೆ. ಇದು ದುರ್ಬಳಕೆಯೂ ಆಗಬಹುದು ಹಾಗೂ ಈಗಾಗಲೇ ಎಷ್ಟೋ ದೇಶಗಳಲ್ಲಿ ಮಕ್ಕಳು ಇದನ್ನು ವ್ಯಸನವಾಗಿಸಿಕೊಂಡಿದ್ದಾರೆ. ಕೃತಕ ಹಾಗು ನೈಜ ಜಗತ್ತಿನ ಆ ತಿಳಿ ರೇಖೆಯನ್ನು ಅರ್ಥ ಮಾಡಿಕೊಂಡು ಯುವ ಜನತೆಗೆ ಅರ್ಥೈಸುವುದು ಬಹಳ ಮುಖ್ಯ.

ಆನ್‌ಲೈನ್ ಗೇಮಿಂಗ್ ಉದಾಹರಣೆ ನೋಡುವುದಾದರೆ ಯುವಕರೂ ವಯಸ್ಕರೂ ತಮ್ಮ ಸಮಯ ಪೋಲು ಮಾಡುವ ಕಥೆಗಳನ್ನು ನಾವು ನೋಡಿಯೇ ಇರುತ್ತೇವೆ. ಹಿಂದೆ ಟಿವಿ ಅಡಿಕ್ಷನ್, ಮೊಬೈಲ್ ಅಡಿಕ್ಷನ್ ಅನ್ನುತ್ತಿದ್ದ ರೀತಿ ಮೆಟಾವರ್ಸ್ ಅಡಿಕ್ಷನ್ ಕೂಡ ಬಲು ಬೇಗ ಆವರಿಸಬಹುದು.

ಇಷ್ಟೆಲ್ಲಾ ಸವಾಲುಗಳ ನಡುವೆಯೂ ಮೆಟಾವರ್ಸ್ ದಿನದಿಂದ ದಿನಕ್ಕೆ ಆವಿಷ್ಕಾರಗೊಳ್ಳುತ್ತಿದೆ. ಮೊದಲೇ ಉಲ್ಲೇಖಿಸಿದ ಹಾಗೆ ಈ ಸಮಸ್ಯೆಗಳ ಪರಿಹಾರಗಳನ್ನೂ ವ್ಯಾಪಕವಾಗಿ ಪರೀಕ್ಷಿಸಲಾಗುತ್ತಿದೆ ಹಾಗೂ ಮುಂಬರುವ ಸಮಸ್ಯೆಗಳ ಬಗ್ಗೆ ಕಾಳಜಿಯೂ ಹೆಚ್ಚಾಗಿದೆ. ಒಂದು ವಿಷಯ ನಿಜ- ಒಂದು ಸಮುದಾಯ ಕಟ್ಟುವ ನಿಟ್ಟಿನಲ್ಲಿ ದಿಗ್ಗಜ ಕಂಪನಿಗಳ ಪಾತ್ರ ಎಷ್ಟು ಮುಖ್ಯವೋ ಸಣ್ಣ ಉದ್ಯಮಗಳ ಆವಿಷ್ಕಾರವೂ ಅಷ್ಟೇ ಪ್ರಾಮುಖ್ಯ ಪಡೆಯಲಿದೆ.

Exit mobile version