ಪ್ರಪಂಚದಲ್ಲಿಯೇ ಅತಿಹೆಚ್ಚು ಗೋಸಂತತಿ ಇದ್ದಿದ್ದೇ ಭಾರತದಲ್ಲಿ. ಆದರೆ ಅದರ ಸಂಪೂರ್ಣ ಲಾಭ ಇಂದಿಗೂ ಭಾರತಕ್ಕಾಗಿಲ್ಲ. ಬದಲಾಗಿ ನಮ್ಮ ದೇಶದ ಗೋವುಗಳ ಕಳ್ಳಸಾಗಾಣಿಕೆಯ ಮೂಲಕ ಪಕ್ಕದ ಬಾಂಗ್ಲಾದೇಶ ಲಾಭ ಮಾಡಿಕೊಳ್ಳುತ್ತಿದೆ. ಭಾರತದಿಂದ ಪ್ರತಿ ಐದು ಸೆಕೆಂಡಿಗೆ ಒಂದು ಗೋವು ಸಾಯಲೆಂದೇ ಗಡಿ ದಾಟಿ ಬಾಂಗ್ಲಾದೇಶಕ್ಕೆ ರವಾನೆಯಾಗುತ್ತಿದೆ (cows smuggled to Bangladesh). ಒಂದು ಸಮೀಕ್ಷೆಯಂತೆ ಭಾರತದಿಂದ ಪ್ರತಿವರ್ಷ ೨೦ ರಿಂದ ೨೫ ಲಕ್ಷ ಗೋವುಗಳನ್ನು ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಕಳ್ಳ ಸಾಗಾಟ ಮಾಡಲಾಗುತ್ತಿದೆಯಂತೆ. ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಇವುಗಳ ಸಾಗಾಟ ಅತಿ ಹೆಚ್ಚಾಗಿ ಕಂಡುಬರುತ್ತದೆಯಂತೆ.
ನಮ್ಮ ದೇಶದ ಒಳಗೂ ಹಾಗೂ ಹೊರಗೂ ಗೋವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಬಹುದೊಡ್ಡ ವ್ಯವಸ್ಥಿತ ಜಾಲವೇ ಇದೆ. ಈ ಜಾಲವಿಂದು ರಸ್ತೆಯ ಮೇಲಿರುವ ಗೋವುಗಳೊಂದಿಗೆ ಮನೆಗಳಲ್ಲಿರುವ ಗೋವುಗಳನ್ನು ಸಹಾ ಬಿಡುತ್ತಿಲ್ಲ. ಗೋಸಂತೆಗಳ ಮೇಲೆ ನಿಯಂತ್ರಣವನ್ನು ಹೊಂದಿರುವ ಇವರು ಅಲ್ಲಿರುವ ಬಹುತೇಕ ಗೋವುಗಳನ್ನು ದೇಶದ ಮತ್ತೊಂದೆಡೆಗೆ ಹಾಗೂ ಬಾಂಗ್ಲಾದೇಶಕ್ಕೆ ನಾನಾ ರೀತಿ ಸಾಗಿಸುವ ವ್ಯವಸ್ಥಿತ ಏರ್ಪಾಟು ಮಾಡಿಕೊಂಡಿದ್ದಾರೆ.
ಹೀಗೆ ಸಾಗಿಸುವಾಗ ಅಲ್ಲಲ್ಲಿರುವ ಪೊಲೀಸ್ ಪೇದೆಯಿಂದ ಹಿಡಿದು ದೊಡ್ಡ ಅಧಿಕಾರಿಗಳನ್ನೊಳಗೊಂಡಂತೆ ಚೆಕ್‌ಪೋಸ್ಟ್‌ನಲ್ಲಿರುವ ಅಧಿಕಾರಿಗಳ ಕೈ ಬೆಚ್ಚಗೆ ಮಾಡಿರುತ್ತಾರೆ. ಹೊಟ್ಟೆಗೆ ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಸಾವಿರಾರು ಕಿಲೋ ಮೀಟರ್ ಇಕ್ಕಟ್ಟಿನಲ್ಲಿ ನಿಂತೇ ಸಾಗುವ ಈ ಗೋವುಗಳು ಭಾರತ ಬಾಂಗ್ಲಾ ಗಡಿ ತಲುಪುವಷ್ಟರಲ್ಲಿ ಕೆಲವೊಂದು ಸತ್ತೇ ಹೋದರೆ, ಇನ್ನುಳಿದವು ಮಾನಸಿಕವಾಗಿ ಸತ್ತು ಹೋಗಿರುತ್ತವೆ. ನಂತರ ಈ ಗೋವುಗಳನ್ನು ಬಾಂಗ್ಲಾದೇಶದ ಗಡಿ ರೇಖೆಯ ಬಳಿ ಒಂದೆಡೆ ಕೂಡಿ ಹಾಕಲಾಗುತ್ತದೆ. ಕೆಲವೊಂದು ಕಡೆಯಿಂದ ಗೋವುಗಳನ್ನು ರೈಲಿನಲ್ಲಿಯೂ ಸಹ ಸಾಗಾಣಿಕೆ ಮಾಡಿ ಇಲ್ಲಿಗೆ ತರಲಾಗುತ್ತದೆ.
ಇದೆಲ್ಲಾ ನಡೆಯುವುದು ಹೆಚ್ಚಾಗಿ ರಾತ್ರಿ ಹೊತ್ತಿನಲ್ಲಿಯೇ ಎಂಬುದು ನಿಗೂಢ. ಹೀಗೆ ಗಡಿ ಭಾಗದ ಯಾವುದಾದರೊಂದು ನಿಗದಿತ ಪ್ರದೇಶಕ್ಕೆ ಇವುಗಳನ್ನು ತಂದು ಒಪ್ಪಿಸಿದ ಮೇಲೆ ಇಲ್ಲಿಯ ಗೋಕಳ್ಳರ ಕೆಲಸ ಮುಗಿಯುತ್ತದೆ. ಆಮೇಲೆ ಈ ಗೋವುಗಳನ್ನು ಗಡಿ ದಾಟಿಸಿ ಬಾಂಗ್ಲಾಗೆ ಕಳುಹಿಸುವ ಪ್ರಕ್ರಿಯೆಗೆ ಇದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಮತ್ತೊಂದು ತಂಡ ಸಿದ್ಧವಾಗುತ್ತದೆ.
ಹೀಗೆ ಅಕ್ರಮವಾಗಿ ಕೂಡಿ ಹಾಕಲ್ಪಟ್ಟ ಎಲ್ಲಾ ಗೋವುಗಳನ್ನು ಬಾಂಗ್ಲಾ ದೇಶಕ್ಕೆ ರಸ್ತೆ ಹಾಗೂ ಸಮುದ್ರ ಮಾರ್ಗವಾಗಿ ಮೂಟೆ ತುಂಬುವ ಹಾಗೆ ತುಂಬಿ ಅತಿ ಅಮಾನುಷವಾಗಿ ಸಾಗಿಸಲಾಗುತ್ತದೆ. ಇನ್ನುಳಿದವನ್ನು ಇಲ್ಲಿಂದ ಗಡಿಯಲ್ಲಿನ ನದಿಯಲ್ಲಿಯೇ ದಾಟಿಸಿಕೊಂಡು ಹೋಗಲಾಗುತ್ತದೆೆ. ಈ ಸಂದರ್ಭದಲ್ಲಿ ಅವುಗಳಿಗೆ ಕೆಲವು ಚುಚ್ಚುಮದ್ದುಗಳನ್ನು ಚುಚ್ಚಲಾಗುತ್ತದೆ. ಅದರ ವೇದನೆಗೆ ನಿಲ್ಲಲಾಗದೆ ಓಡುತ್ತಲೇ ಅವು ಗಡಿಯನ್ನು ತಲುಪುತ್ತವೆ. ಇನ್ನು ಕೆಲವೊಂದನ್ನು ತಾತ್ಕಾಲಿಕ ಬಿದಿರಿನ ಸಣ್ಣ ಸಣ್ಣ ಸೇತುವೆಗಳ ಮೂಲಕ ಸಾಗಿಸಲಾಗುತ್ತದೆ. ಕೆಲವೊಮ್ಮೆ ಬಿದಿರಿನಿಂದ ಮಾಡಲ್ಪಟ್ಟ ಸಣ್ಣ ಕ್ರೇನ್‌ಗಳಿಗೆ ಇವುಗಳನ್ನು ದಾರದಿಂದ ಕಟ್ಟಿ ಗಡಿ ದಾಟಿಸಲಾಗುತ್ತದೆ.
ಇನ್ನು ಕರುಗಳ ಕತೆಯಂತೂ ಹೇಳ ತೀರದು. ಅವುಗಳನ್ನು ಗಡಿರೇಖೆಯ ಬಳಿ ಹರಿಯುವ ಗಂಗಾ ಹಾಗೂ ಬ್ರಹ್ಮಪುತ್ರ ನದಿಗಳಿಗೆ ಎಸೆಯಲಾಗುತ್ತದೆ. ಈ ರೀತಿ ಎಸೆದ ಎಳೆ ಕರುಗಳಲ್ಲಿ ಕೆಲವೊಂದು ನೀರಿನ ರಭಸಕ್ಕೆ ಅತ್ತಿತ್ತ ಹೋಗಿ ಕೊನೆಗೆ ಪ್ರಯಾಸದಿಂದ ದಡ ಸೇರಿದರೆ, ಇನ್ನು ಕೆಲವೊಂದು ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಈ ರೀತಿ ಕರುಗಳನ್ನು ನೀರಿನಲ್ಲಿ ಎಸೆಯಲು ಕಾರಣ, ತೂಕದಲ್ಲಿ ಅವುಗಳ ಮಾಂಸ ಕಡಿಮೆ ಇರುವುದು ಮತ್ತು ಹಡಗಿನಲ್ಲಿ ಜಾಗ ಇಲ್ಲದೇ ಇರುವುದೇ ಆಗಿದೆ.
ಅಕ್ಟೋಬರ್ 2013ರಂದು ಬಾಂಗ್ಲಾದೇಶದ ನಂ.1 ಪತ್ರಿಕೆಯಾದ ‘ದಿ ಡೈಲಿ ಸ್ಟಾರ್’ ಗೋವುಗಳ ಕಳ್ಳ ಸಾಗಾಣಿಕೆಯ ಕುರಿತು ಸವಿಸ್ತಾರವಾದ ವರದಿಯೊಂದನ್ನು ಪ್ರಕಟಿಸಿತ್ತು. ಆ ವರದಿಯ ಪ್ರಕಾರ ಪ್ರತಿವರ್ಷ ಸುಮಾರು ಒಂದರಿಂದ ಎರಡು ಕೋಟಿ ಮಿಲಿಯನ್ ಗೋವುಗಳು ಭಾರತದಿಂದ ಬಾಂಗ್ಲಾಗೆ ಸಾಗಾಟವಾಗುತ್ತಿವೆಯಂತೆ. ಈ ಪ್ರಮಾಣ ಬಕ್ರಿದ್ ಹಬ್ಬದ ಸಮಯದಲ್ಲಿಯೇ ಅತಿ ಹೆಚ್ಚಾಗಿದೆಯಂತೆ. ಹಾಗೆಯೇ ‘ಅಬ್ಸರ್ವರ್ ರಿಸರ್ಚ್ ಫೌಂಡೇಶನ್’ ಎಂಬ ಮತ್ತೊಂದು ಸಂಸ್ಥೆ ಗೋಕಳ್ಳ ಸಾಗಾಣಿಕೆಯ ಎಲ್ಲಾ ಆಗು ಹೋಗುಗಳನ್ನು ಸಮೀಕ್ಷೆ ಮಾಡಿ ವರದಿಯೊಂದನ್ನು ನೀಡಿತ್ತು. ಅದರಲ್ಲಿ ಅದು ಹೇಳುವಂತೆ ಪ್ರತಿನಿತ್ಯ ಸುಮಾರು ೮೧,೦೦೦ ಡಾಲರ್ ಬೆಲೆ ಬಾಳುವ ಅತ್ಯಮೂಲ್ಯ ೨೦,೦೦೦ ದಿಂದ ೨೫,೦೦೦ ಗೋವುಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಕಳ್ಳತನದಿಂದ ಸಾಗಿಸಲಾಗುತ್ತಿದೆಯಂತೆ. ಹಾಗೆಯೇ ಪ್ರತಿವರ್ಷ ಸುಮಾರು ೨೯,೦೦೦ ಕೋಟಿಯಷ್ಟು ಬೆಲೆ ಬಾಳುವ ೯೦ ಲಕ್ಷಕ್ಕೂ ಹೆಚ್ಚು ಗೋವುಗಳು ಈ ದೇಶದಿಂದ ಸಾಗಿಸಲ್ಪಡುತ್ತಿವೆಯಂತೆ.
ಅಷ್ಟೇ ಅಲ್ಲದೆ ಬಾಂಗ್ಲಾದೇಶದಲ್ಲಿ ಹತ್ಯೆಯಾಗುವ ಪ್ರತಿ ಮೂರು ಗೋವುಗಳಲ್ಲಿ ಒಂದು ಭಾರತದಿಂದ ಕದ್ದೊಯ್ದ ಗೋವಾಗಿದೆಯಂತೆ. ಈ ರೀತಿಯ ಗೋಕಳ್ಳ ವ್ಯವಹಾರದಲ್ಲಿ ಬಿ.ಎಸ್.ಎಫ್.ನವರ ಪಾಲು ಇದೆ ಎಂಬ ಮಾತು ಆಗಾಗ ಕೇಳಿ ಬರುತ್ತಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಗೋಕಳ್ಳರು ಮತ್ತು ಬಿ.ಎಸ್.ಎಫ್. ಯೋಧರ ನಡುವೆ ಹಲ್ಲೆಗಳು ನಡೆಯುತ್ತಿರುತ್ತದೆ.
ಹೀಗೆ ಬಾಂಗ್ಲಾಕ್ಕೆ ಸಾಗಾಟವಾಗುವ ಗೋವುಗಳ ಈ ಯಾತನಾಮಯ ಅವಸ್ಥೆ ಇಷ್ಟಕ್ಕೇ ಮುಗಿದಿರುವುದಿಲ್ಲ. ನಮ್ಮ ದೇಶದ ಯಾವುದೋ ಹಳ್ಳಿಯಿಂದ ಕೇವಲ ೫೦೦ ರಿಂದ ೩,೦೦೦ ರೂಪಾಯಿ ಕೊಟ್ಟು ಖರೀದಿಸಲ್ಪಟ್ಟ ಒಂದೊಂದು ಗೋವು ಬಾಂಗ್ಲಾದೇಶದಲ್ಲಿ ಸುಮಾರು ೨೦,೦೦೦ ದಿಂದ ೪೦,೦೦೦ ದವರೆಗೂ ಮಾರಾಟವಾಗುತ್ತದೆ. ಈ ರೀತಿ ಸಾಗಿಸಲ್ಪಟ್ಟ ಗೋವುಗಳಲ್ಲಿ ಯಾವೊಂದು ಸಹಾ ಅಲ್ಲಿನ ಕೃಷಿ ಚಟುವಟಿಕೆಗಳಿಗೆ ಅಥವಾ ಹೈನೋತ್ಪಾದನೆಗೆ ಬಳಕೆಯಾಗುವುದಿಲ್ಲ. ಎಲ್ಲವೂ ಸಹ ಮಾಂಸ, ಮೂಳೆ, ಚರ್ಮ ಹಾಗೂ ಇನ್ನಿತರ ಉತ್ಪನ್ನಕ್ಕಾಗಿ ಬಳಕೆಯಾಗುತ್ತವೆ. ಒಂದರ್ಥದಲ್ಲಿ ಹೇಳಬೇಕೆಂದರೆ ಬಾಂಗ್ಲಾದೇಶದ ಅರ್ಥವ್ಯವಸ್ಥೆ ನಿಂತಿರುವುದೇ ನಮ್ಮ ದೇಶದ ಗೋವುಗಳಿಂದ ಮತ್ತು ಅದರ ಮಾಂಸ ಹಾಗೂ ಇತರೆ ಉತ್ಪನ್ನಗಳಿಂದ.
ಬಾಂಗ್ಲಾದಲ್ಲಿನ ಗೋ ಭಕ್ಷಕರ ಬಾಯಿ ಚಪಲ ತೀರಿದ ಬಳಿಕ ಉಳಿದ ಗೋಮಾಂಸವು ಬೇರೆ ದೇಶಗಳಿಗೆ ರಫ್ತಾಗುತ್ತದೆ. ಇದರೊಂದಿಗೆ ರಫ್ತಾಗುತ್ತಿರುವ ಗೋವುಗಳ ಚರ್ಮದಿಂದಲೇ ಅವರಿಗೆ ಪ್ರತಿವರ್ಷ ಸುಮಾರು ೧,೦೦೦ ಕೋಟಿಗೂ ಹೆಚ್ಚು ಆದಾಯ ಬರುತ್ತಿದೆ. ಆನಂತರ ಹೀಗೆ ಅಲ್ಲಿಂದ ರಫ್ತಾಗುವ ಕೆಲವೊಂದು ಚರ್ಮದ ಉತ್ಪನ್ನಗಳು ನಮ್ಮಲ್ಲಿಯ ಮಾರುಕಟ್ಟೆಗೂ ಬರುತ್ತವೆ. ಈ ರೀತಿಯ ದಂಧೆಯಿಂದ ವಾರ್ಷಿಕವಾಗಿ ಸುಮಾರು ೨,೫೦೦ ಕೋಟಿ ಡಾಲರ್ ವಹಿವಾಟು ಬಾಂಗ್ಲಾ ಪಾಲಾಗುತ್ತಿದೆ. ಮತ್ತೊಂದು ವಿಚಾರವೇನೆಂದರೆ ಭಾರತದಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುವುದಕ್ಕೆ ಬಹುತೇಕ ನಿಷೇಧವಿದ್ದರೆ, ಬಾಂಗ್ಲಾದೇಶದಲ್ಲಿ ಈ ರೀತಿಯ ಸಾಗಾಟ ಮತ್ತು ಕಳ್ಳತನಕ್ಕೆ ಯಾವುದೇ ಕಾನೂನಿನ ಅಡೆತಡೆಯಿಲ್ಲ.
ಅಲ್ಲಿ ೧೯೯೩ರ ನಂತರ ಭಾರತದಿಂದ ಸಾಗಿಸಲ್ಪಟ್ಟ ಎಲ್ಲಾ ಗೋವುಗಳನ್ನು ಕಾನೂನಿನ ಅಡಿಯಲ್ಲೇ ವಹಿವಾಟು ಮಾಡಲಾಗುತ್ತಿದೆ. ಸಾಲದ್ದಕ್ಕೆ ಅನಧಿಕೃತವಾಗಿ ಕದ್ದೊಯ್ಯಲ್ಪಟ್ಟ ಗೋವುಗಳ ಮೇಲೆ ಅಲ್ಲಿನ ಸರ್ಕಾರ ತೆರಿಗೆ ವಸೂಲಿ ಮಾಡುವ ಮೂಲಕ ಆದಾಯ ಮಾಡಿಕೊಳ್ಳುತ್ತಿದೆ. ಭಾರತದ ಪ್ರತಿ ಗೋವುಗಳ ಮೇಲೆ ಅಲ್ಲಿನ ಕಸ್ಟಮ್ಸ್ ತೆರಿಗೆಯಾದ ೫೦೦ ಟಾಕಾವನ್ನು ಅಂದರೆ ಇಲ್ಲಿನ ೩೯೪ ರೂಪಾಯಿಗೆ ಸಮನಾದ ಅಲ್ಲಿಯ ಹಣವನ್ನು ಪಾವತಿಸಲಾಗುತ್ತದೆ. ಆನಂತರ ಗೋವನ್ನು ಗಡಿ ಬಳಿ ತಿರುಗಾಡುತ್ತಿತ್ತು ಎಂದು ನಮೂದಿಸಿ ಅದನ್ನು ಅಧಿಕೃತ ದಾಖಲೆಯೊಂದಿಗೆ ತನ್ನದಾಗಿಸಿಕೊಳ್ಳುವ ಮುಕ್ತ ಅವಕಾಶ ಅಲ್ಲಿಯ ಕಟುಕರಿಗೆ ಸರ್ಕಾರ ಒದಗಿಸಿದೆ.
ಬಾಂಗ್ಲಾದೇಶದ ಮತ್ತೊಂದು ಸಮೀಕ್ಷೆಯ ಪ್ರಕಾರ ೨೦೧೦ರಲ್ಲಿ ಸುಮಾರು ೩೦.೭೮ ಮಿಲಿಯನ್ ಡಾಲರ್ ಆದಾಯ ಕೇವಲ ಭಾರತದಿಂದ ಕದ್ದೊಯ್ಯಲ್ಪಟ್ಟ ಗೋವುಗಳ ಮೂಳೆಗಳನ್ನು ರಫ್ತು ಮಾಡುವುದರಿಂದಲೇ ಅಲ್ಲಿಯ ಸರ್ಕಾರ ಸಂಪಾದಿಸಿದೆ. ಇಂದು ಚೀನಾ ಸೇರಿದಂತೆ ೫೦ ಕ್ಕೂ ಹೆಚ್ಚು ದೇಶಗಳಿಗೆ ಬಾಂಗ್ಲಾದಿಂದ ಗೋವಿನ ಮೂಳೆಗಳು ರಫ್ತಾಗುತ್ತಿವೆ. ಹೀಗಾಗಿ ಇಂದು ವಿಶ್ವದಲ್ಲೇ ಮೂಳೆ ಸರಬರಾಜು ಮಾಡುವುದರಲ್ಲಿ ಬಾಂಗ್ಲಾದೇಶ ಮುಂಚೂಣಿ ಯಲ್ಲಿದೆ. ಒಟ್ಟಾರೆ ಅಕ್ರಮವಾಗಿ ಬಾಂಗ್ಲಾದೇಶಕ್ಕೆ ಸಾಗಿಸಲ್ಪಟ್ಟ ನಮ್ಮ ಗೋಸಂಪತ್ತಿನಿಂದ ಅಲ್ಲಿಯ ಸರ್ಕಾರ ಆದಾಯ ಮಾಡಿಕೊಂಡು, ಅದರಲ್ಲಿನ ಒಂದಷ್ಟು ಪಾಲನ್ನು ನಮ್ಮ ದೇಶದಲ್ಲಿ ಖೋಟಾನೋಟು ಚಲಾವಣೆ ಮಾಡಿಸುವ ಮೂಲಕ ದೇಶದ ಆರ್ಥಿಕತೆಗೆ ಸವಾಲೊಡ್ಡುತ್ತಿದೆ. ಹಾಗೆಯೇ ಅಕ್ರಮ ವಲಸೆ, ಭಯೋತ್ಪಾದನೆ ಹಾಗೂ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಮೂಲಕ ನಮ್ಮ ದೇಶದ ಸಾಮರಸ್ಯವನ್ನು ಹಾಳು ಮಾಡುತ್ತಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಕೆಲ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಪರಿಣಾಮ ಗೋವಿನ ಕಳ್ಳಸಾಗಣೆ ದಂಧೆಗೆ ಸ್ವಲ್ಪ ಮಟ್ಟಿಗೆ ತೊಡಕು ಬಿದ್ದಿದೆಯಂತೆ. ಏನೇ ಆದರೂ ಈ ವ್ಯವಹಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ..!
ಇದನ್ನೂ ಓದಿ | ಗೋ ಸಂಪತ್ತು | ಅಮೃತ್ ಮಹಲ್… ದಿ ವಾರಿಯರ್ ಬ್ರೀಡ್!!