1984ರಂದು ಪ್ರಪಂಚವನ್ನೇ ನಿಬ್ಬರಗೊಳಿಸಿದ್ದ ಈ “ಅಗ್ನಿಹೋತ್ರ” ಕ್ರಿಯೆ ಯಜ್ಞಗಳಲ್ಲೇ ಮೊಟ್ಟ ಮೊದಲ ಕರ್ಮ ಮತ್ತು ನಿತ್ಯಕರ್ಮ ಕಾರ್ಯಗಳಲ್ಲಿ ಒಂದು. ಅಗ್ನಿಯ ಮೂಲಕ ವಾತಾವರಣವನ್ನು ಶುದ್ಧೀಕರಿಸುವ ಪ್ರಕ್ರಿಯೆಯೇ ಇದರ ಮೂಲ ತತ್ವ. ಇದರ ಮೂಲವು ವೇದಕಾಲದಲ್ಲಿಯೇ ಲಭ್ಯವಿದ್ದು, ಪುರಾತನ ಋಷಿಮುನಿಗಳು ಆಚರಿಸುತ್ತಿದ್ದ ಯಾಗ, ರಾಜಮಹಾರಾಜರು ಅರಮನೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಹೋಮ, ಹವನಗಳು ಅಗ್ನಿಹೋತ್ರದ ತತ್ವವನ್ನು ಸಾರುತ್ತವೆ. ಆಗಿನ ಕಾಲದಲ್ಲಿ ಇಂತಹ ಯಾಗಗಳು ಲೋಕ ಕಲ್ಯಾಣಕ್ಕಾಗಿ ಆಚರಿಸಲ್ಪಡುತ್ತಿದ್ದವು.
ಅಗ್ನಿಹೋತ್ರ ಕ್ರಿಯೆಯ ಆಚರಣೆಯಲ್ಲಿ ತಾಮ್ರದ ಪಾತ್ರೆಯನ್ನೇ ಬಳಸಬೇಕೆಂದಿದೆ. ಅದಕ್ಕೆ ನಿಶ್ಚಿತವಾದ ಕಾರಣವು ಇದೆ. ತಾಮ್ರಕ್ಕೆ ಅಣು ಜೀವಿಗಳನ್ನು ನಾಶ ಮಾಡುವ ವಿಶೇಷ ಗುಣವಿದೆ. ಹಾಗೆಯೇ ಇದರ ಆಚರಣೆಗೆ ಅತಿ ಅವಶ್ಯಕವಾದುದು ದೇಸಿ ಗೋವಿನ ತುಪ್ಪ ಮತ್ತು ಗೋಮಯದ ಬೆರಣಿ. ಕೆಲವೊಂದು ಕಡೆ ಅಕ್ಕಿಯ ಕಾಳನ್ನು ಬಳಸುವುದೂ ಇದೆ. ಹೀಗಾಗಿ ದೇಸಿ ಆಕಳ ಗೋಮಯದಿಂದ ಮಾಡಿದ ಬೆರಣಿ ಮತ್ತು ತುಪ್ಪ ಹಾಗೂ ಆ ತುಪ್ಪದಲ್ಲಿ ಅದ್ದಿದ ಅಕ್ಕಿಯ ಅಕ್ಷತೆ ಕಾಳಿಗೂ ಒಂದು ವಿಶೇಷವಾದ ಅರ್ಥವಿದೆ.
ಅಷ್ಟೇ ಅಲ್ಲದೆ ಅಗ್ನಿಹೋತ್ರ ಕ್ರಿಯೆಯ ನಂತರ ಉದ್ಭವವಾದ ಅನಿಲವು ಸುತ್ತಮುತ್ತಲಿನ ವಾತಾವರಣದ ವಾಯುಮಾಲಿನ್ಯ ಸೇರಿದಂತೆ ಎಲ್ಲಾ ವಿಷಾನಿಲದ ದುಷ್ಟರಿಣಾಮವನ್ನು ಸಹ ಪರಿಣಾಮಕಾರಿಯಾಗಿ ನಿಷ್ಫಲಗೊಳಿಸುವುದು ರುಜುವಾತಾಗಿದೆ. ಭೋಪಾಲ್‌ನ ಆ ದುರ್ಘಟನೆಯ ನಂತರ ಜರ್ಮನಿಯ ಮುನಿಚ್ ಮತ್ತು ರಷ್ಯಾದ ವಿಜ್ಞಾನಿಗಳು ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆಯನ್ನು ನಡೆಸಿದ್ದಾರೆ. ನಂತರ ಅಲ್ಲಿನ ವಿಜ್ಞಾನಿಗಳು ಅಗ್ನಿಹೋತ್ರದ ಮಹಿಮೆಗೆ ಬೆರಗಾಗಿ, ಅದರ ವಿಸ್ಮಯವನ್ನು ಒಪ್ಪಿ, ಸನಾತನ ಭಾರತದ ಈ ಒಂದು ಕ್ರಿಯೆಯೇ ನಮ್ಮನ್ನು ಮುಂದೊಂದು ದಿನ ವಿಕಿರಣದಿಂದ ಉಳಿಸುವ ಏಕೈಕ ಮಾರ್ಗ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ಪ್ರಪಂಚದ ಮುಂದೆ ಮಂಡಿಸಿದ್ದಾರೆ. ಹಾಗೆಯೇ ಅಗ್ನಿಹೋತ್ರ ಆಚರಣೆಯ ನಂತರ ಉಳಿದ ಬೂದಿಯಿಂದ ಮಾತ್ರೆಗಳನ್ನು ತಯಾರಿಸುವ ಮೂಲಕ ಮಾನವನ ಜೀವಕ್ಕೆ ಅತಿ ಅವಶ್ಯಕವಾದ 92 ಖನಿಜಾಂಶಗಳಿರುವುದನ್ನು ಸಂಶೋಧನೆಯಿಂದ ಕಂಡುಕೊಂಡಿದ್ದಾರೆ.
ನಂತರ ಅಮೆರಿಕಾ, ರಷ್ಯಾ, ಜರ್ಮನಿ, ಪೋಲಂಡ್ ಮುಂತಾದ ದೇಶಗಳಲ್ಲಿ ಅಗ್ನಿಹೋತ್ರದ ಕುರಿತ ಸಾಕಷ್ಟು ಸಂಶೋಧನೆಗಳು ತೀವ್ರಗತಿಯಲ್ಲಿ ನಡೆಯುವಂತಾಗುತ್ತದೆ. ಆ ಎಲ್ಲಾ ಸಂಶೋಧನೆಯ ಅಂತ್ಯದಲ್ಲಿ ಅಲ್ಲಿಯ ವಿಜ್ಞಾನಿಗಳು ಹಾಗೂ ಸಂಶೋಧಕರು ಅಗ್ನಿಹೋತ್ರದಿಂದ ಹೊರ ಬೀಳುವ ಧೂಮವು ರಕ್ತಕ್ಕೆ ಸಮಸ್ಯೆ ಒಡ್ಡುವ ಸೂಕ್ಷ್ಮಾಣು ಜೀವಿಗಳನ್ನು ಹಾಗೂ ವೈರಾಣುಗಳನ್ನು ನಾಶಗೊಳಿಸುವ ಗುಣ ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.
ಇಂತಹ ಬೆಲೆ ಕಟ್ಟಲಾಗದ ಅಗ್ನಿಹೋತ್ರದಲ್ಲಿ ಪ್ರಮುಖವಾಗಿ ಬಳಸುವ ದೇಸಿ ಗೋವಿನ ತುಪ್ಪವು ಸ್ವಾಭಾವಿಕವಾಗಿಯೇ ಅತಿ ಹೆಚ್ಚು ಗುಣಗಳನ್ನು ಹೊಂದಿದೆ. ಇಂತಹುದನ್ನು ಉರಿಯುತ್ತಿರುವ ಬೆಂಕಿಗೆ ಹಾಕಿದಾಗ ಅದು ಮತ್ತಷ್ಟು ಧನಾತ್ಮಕ ಗುಣಗಳನ್ನು ಪ್ರಕಟಿಸುತ್ತದೆ. ಇದರಿಂದ ಉಂಟಾದ ಹೊಗೆಯ ಪ್ರಭಾವ ಎಲ್ಲಿಯವರೆಗೆ ಹರಡಿರುತ್ತದೆಯೋ ಅಲ್ಲಿಯವರೆಗಿನ ಎಲ್ಲಾ ಕ್ಷೇತ್ರಗಳು ಕೀಟಾಣು ಮತ್ತು ಬ್ಯಾಕ್ಟೀರಿಯಾ ಪ್ರಭಾವದಿಂದ ಮುಕ್ತವಾಗುತ್ತವೆ ಎಂಬುದು ಸಾಕಷ್ಟು ಸಂಶೋಧನೆಯಿಂದ ಸಾಬೀತಾಗಿದೆ.
ಗೋವಿನ ತುಪ್ಪ ಮತ್ತು ತುಂಡಾಗದ ಅಕ್ಕಿ, ಅಂದರೆ ಅಕ್ಷತೆಯನ್ನು ಮಿಶ್ರಣಮಾಡಿ ಉರಿಸುವುದರಿಂದ ಅತ್ಯಂತ ಮಹತ್ವಪೂರ್ಣ ಅನಿಲಗಳಾದ ಇಥಿಲಿನ್ ಆಕ್ಸೈಡ್, ಪ್ರೊಪಲೀನ್ ಆಕ್ಸೈಡ್ ಮತ್ತು ಫಾರ್ಮಲಾ ಡಿ ಹೈಡ್ ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾಗುವ ಹಲವು ಅನಿಲಗಳಲ್ಲಿ ಇಥಿಲಿನ್ ಆಕ್ಸೈಡ್ ಇಂದಿನ ಸಮಯದಲ್ಲಿ ಎಲ್ಲಕ್ಕಿಂತ ಅಧಿಕ ಉಪಯುಕ್ತ ಜೀವಾಣು ರೋಧಕ ಅನಿಲ ಎಂಬುದು ಸಾಬೀತಾಗಿದೆ. ಮೆಡಿಕಲ್ ಸೈನ್ಸ್‌ನಲ್ಲಿ ಈ ಅನಿಲವನ್ನು ಆಪರೇಷನ್ ಥಿಯೇಟರ್‌ನಿಂದ ಹಿಡಿದು ಜೀವ ರಕ್ಷಕ ಔಷಧಿಗಳನ್ನು ತಯಾರಿಸಲು ಉಪಯೋಗಿ ಸಲಾಗುತ್ತದೆ. ಇನ್ನು ಪ್ರೊಪಲೀನ್ ಆಕ್ಸೈಡ್ ಅನ್ನು ಕೃತಕ ಮಳೆಗೋಸ್ಕರ ಮಾಡುವ ಮೋಡಬಿತ್ತನೆಯಲ್ಲಿ ಇಂದಿನ ವೈಜ್ಞಾನಿಕರು ಬಹುಮುಖ್ಯವಾಗಿ ಇಂದಿಗೂ ಬಳಸುತ್ತಿದ್ದಾರೆ.
ಉರಿಯುತ್ತಿರುವ ಬೆಂಕಿಗೆ ದೇಸಿ ಗೋವಿನ ತುಪ್ಪವನ್ನು ಹಾಕುವುದರಿಂದ ಉಂಟಾಗುವ ಧೂಮವು ವಿಕಿರಣದ ತೀವ್ರತೆಯನ್ನು ಕೂಡಲೇ ಕಡಿಮೆ ಮಾಡುತ್ತದೆ. ದೇಶಿ ಗೋವಿನ ತುಪ್ಪವು ಶೇಕಡಾ 90ರಷ್ಟು ಇಂಗಾಲವನ್ನು ಒಳಗೊಂಡಿದೆ. ಪ್ರಪಂಚದ ಯಾವುದೇ ವಸ್ತುವಿನಲ್ಲಿ ಇಷ್ಟು ಪ್ರಮಾಣದ ಇಂಗಾಲವಿಲ್ಲ. ಹೀಗಾಗಿ ಅಗ್ನಿಹೋತ್ರದಲ್ಲಿ ದಹಿಸಿದ ಈ ತುಪ್ಪವು ನಂತರ ಖನಿಜದಂತೆ ಕೆಲಸ ಮಾಡುವುದು ಕಂಡುಬಂದಿದೆ.
ದೇಸಿ ಗೋವಿನ ಗೋಮಯದಲ್ಲಿ ಅಣು ಜೀವಿಗಳನ್ನು ನಾಶಮಾಡುವ ವಿಶೇಷ ಗುಣವಿರುವುದರಿಂದಲೇ ಅಗ್ನಿಹೋತ್ರದಲ್ಲಿ ಬೆರಣಿಗಳನ್ನು ಉರುವಲಾಗಿ ಉಪಯೋಗಿಸಲಾಗುತ್ತದೆ. ಮನೆಯ ಗೋಡೆಗಳಿಗೆ ಗೋಮಯವನ್ನು ದಪ್ಪವಾಗಿ ಬಳಿದಿದ್ದೇ ಆದಲ್ಲಿ ಅದು ಅಣು ವಿಕಿರಣದಿಂದ ನಮ್ಮನ್ನು ರಕ್ಷಿಸುತ್ತದೆ. ಹಾಗೆಯೇ ಗೋಮಯವು ಅತಿ ಕೆಟ್ಟ ಪರಿಣಾಮ ಬೀರುವ ಆಲ್ಫಾ, ಬೀಟಾ ಮತ್ತು ಗಾಮ ಕಿರಣಗಳನ್ನು ತಡೆಯುವ ಶಕ್ತಿಯನ್ನು ಹೊಂದಿದೆ. ನ್ಯೂಕ್ಲಿಯರ್‌ನ ಗಾಮ ಕಿರಣಗಳು ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ನಮ್ಮ
ದೇಶದಲ್ಲೂ ಸಾಕಷ್ಟು ನ್ಯೂಕ್ಲಿಯರ್ ಪ್ಲಾಂಟ್‌ಗಳಿದ್ದು, ಒಂದೊಮ್ಮೆ ಏನಾದರೂ ಅನಾಹುತ ಘಟಸಿದರೆ ಅದಕ್ಕೆ ನಮ್ಮ ಸನಾತನ ಧರ್ಮದಲ್ಲಿರುವ ಈ ಅಗ್ನಿಹೋತ್ರ ಪದ್ಧತಿಯೊಂದೇ ನಮ್ಮನ್ನು ವಿಕಿರಣದಿಂದ ಕಾಪಾಡ ಬಹುದಾಗಿದೆ. ಹೀಗೆ ಆಧುನಿಕ ಯುಗದಲ್ಲೂ ಗೋವು ತನ್ನ ಮಹಿಮೆಯನ್ನು ಒಂದಲ್ಲ ಒಂದು ರೀತಿ ಸಾರುತ್ತಲೇ ಬಂದಿದೆ.
ಹೀಗೆ ಭೋಪಾಲ್‌ನಲ್ಲಿ ಘಟಿಸಿದ ಆ ದುರ್ಘಟನೆಯ ನಂತರ ದೇಶಾದ್ಯಂತ ಅಗ್ನಿಹೋತ್ರ ಕ್ರಿಯೆಯನ್ನು ಪುರಸ್ಕರಿಸುವ ಸಂಸ್ಥೆಗಳು ಹುಟ್ಟಿಕೊಂಡವು. ಇದು ಕ್ರಮೇಣ ಇತರ ರಾಷ್ಟ್ರಗಳಿಗೂ ವಿಸ್ತರಿಸಿತು. ಅದರಲ್ಲೂ ಮಲೇಶಿಯಾದಲ್ಲಿ ಇದು ತೀವ್ರಗತಿಯಲ್ಲಿ ಪ್ರಚಾರವನ್ನು ಪಡೆಯಿತು. ನಂತರ ಅದು ಅಲ್ಲಿಯ ಆಕಾಶವಾಣಿಯ ಮೂಲಕ ದಿನಕ್ಕೆರಡು ಬಾರಿ ಅಗ್ನಿಹೋತ್ರದ ಪಾಠಗಳನ್ನು ಪ್ರಸಾರ ಮಾಡುವಷ್ಟು ಪ್ರಚಾರ ಮಾಡಲಾಯಿತು. ಅಲ್ಲಿ ಈ ಕ್ರಿಯೆಗೆ ಬೇಕಾದ ಗೋಮಯದ ಬೆರಣಿಗಳನ್ನು ಮಾಡುವುದೇ ಒಂದು ಬಹುದೊಡ್ಡ ಗೃಹೋದ್ಯೋಗವಾಯಿತು. ಇದರಂತೆ ಪೆರು ದೇಶದಲ್ಲಿಯೂ ಅಗ್ನಿಹೋತ್ರದ ಪ್ರಚಾರ ಮತ್ತು ಆಚರಣೆ ಜೋರಾದ ಪ್ರಚಾರದೊಂದಿಗೆ ಆಚರಣೆಗೆ ಬಂತು.
ಅಂತೆಯೇ ಅಗ್ನಿಹೋತ್ರದ ನಂತರ ಅದರ ಭಸ್ಮವನ್ನು ಸಸ್ಯಗಳಿಗೆ ಮತ್ತು ಗಿಡಗಳಿಗೆ ಗೊಬ್ಬರದಂತೆ ಬಳಸಿದಲ್ಲಿ ಅವುಗಳು ಚೆನ್ನಾಗಿ ಬೆಳೆಯುವುದು ಸಂಶೋಧನೆಯಿಂದ ಸಾಬೀತಾಗಿದೆ. ಇದರ ಭಸ್ಮವನ್ನು ಭೂಮಿಗೆ ಹಾಕಿದಾಗ ಸಸ್ಯಗಳಿಗೆ ಬೇಕಾದ ಪೊಟ್ಯಾಷಿಯಂ ಮತ್ತು ನೈಟ್ರೋಜನ್ ಹೇರಳವಾಗಿ ದೊರೆಯುತ್ತದೆ. ಇದರಿಂದ ಭೂಮಿಯೂ ಹೆಚ್ಚು ಫಲವತ್ತಾಗುವುದಲ್ಲದೆ ಅಲ್ಲಿ ಎರೆಹುಳುಗಳು ಸಮೃದ್ಧವಾಗಿ ಬೆಳೆಯುತ್ತವೆ. ಈಗಾಗಲೇ ಯುರೋಪ್ ದೇಶಗಳಲ್ಲಿ ಇದನ್ನರಿತು ಅಗ್ನಿಹೋತ್ರವನ್ನು ಕೃಷಿ ಉತ್ಪನ್ನಗಳ ವೃದ್ಧಿಗಾಗಿ ಬಳಸತೊಡಗಿದ್ದಾರೆ. ಜರ್ಮನಿಯಲ್ಲಿನ ಸುಮಾರು 60ಕ್ಕೂ ಹೆಚ್ಚು ಸಂಶೋಧಕರು ಈ ವಿಧಾನವನ್ನು ಯಶಸ್ವಿಯಾಗಿ ಪ್ರಯೋಗಿಸಿ ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಸಂಸ್ಕರಿಸಿದ ಬೀಜಗಳು ಸಹ ಹೆಚ್ಚು ಆರೋಗ್ಯವಾಗಿಯೂ ಶಕ್ತಿಯುತವಾಗಿಯೂ ಇರುವುದನ್ನು ಅವರೆಲ್ಲರು ಕಂಡುಕೊಂಡಿದ್ದಾರೆ.
ಹೀಗಾಗಿಯೇ ಇಂದಿನ ಯುಗದಲ್ಲಿ ಅಗ್ನಿಹೋತ್ರ ಕ್ರಿಯೆಯನ್ನು ದೇಸಿ ಗೋವಿನ ಉತ್ಪನ್ನಗಳ ಒಂದು ವೈಜ್ಞಾನಿಕ ಪವಾಡ ಎಂದೇ ಹೇಳಬಹುದಾಗಿದೆ. ಇಂದು ಇಡೀ ಜಗತ್ತೇ ನಮ್ಮ ಸನಾತನ ಧರ್ಮದ ಪ್ರತೀಕವಾದ ಈ ಅಗ್ನಿಹೋತ್ರ ಕ್ರಿಯೆಗೆ ಪ್ರಚಾರ ಕೊಡುವ ಮೂಲಕ ಆಚರಣೆಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಸಂಘ ಸಂಸ್ಥೆಗಳು ನಿರಂತರ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಇದೆಲ್ಲದರ ಪರಿಣಾಮ ಸ್ವಲ್ಪಮಟ್ಟಿಗಾದರೂ ಇದಕ್ಕೆ ಪ್ರಚಾರ ಸಿಗುವಂತಾಗಿದೆ.
ಹೀಗೆ ಒಂದು ಕಾಲದಲ್ಲಿ ಸಾಮಾನ್ಯವಾಗಿದ್ದ ಈ ಕ್ರಿಯೆ ತದನಂತರ ಭಾಗಶಃ ಅಳಿದೇ ಹೋಗುವ ಸ್ಥಿತಿ ನಿರ್ಮಾ ಣವಾಗಿತ್ತು. ಈಗ ಇದಕ್ಕೆ ಸ್ವಲ್ಪ ಪ್ರಚಾರ ದೊರೆತು ಜೀವ ಪಡೆದುಕೊಳ್ಳುತ್ತಿದೆ. ಆದರೆ ಈ ಕ್ರಿಯೆ ಮುಂದೊಂದು ದಿನ ನಮ್ಮ ಜೀವವನ್ನು ಉಳಿಸುವ ಏಕೈಕ ಸಾಧನ ಎಂಬುದು ಬಹಳಷ್ಟು ಜನರಿಗೆ ಮನವರಿಕೆಯಾಗಬೇಕಾಗಿದೆ. ಹಾಗೆಯೇ ಈ ಕ್ರಿಯೆಗೆ ಪೂರಕವಾದ ದೇಶಿ ಗೋವು ಮತ್ತು ಅದರ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಅವುಗಳ ಉಳಿವಲ್ಲೇ ಮನುಜ ತನ್ನ ಅಸ್ತಿತ್ವವನ್ನು ಕಾಣಬೇಕಾಗಿದೆ.
ಇದನ್ನೂ ಓದಿ | ಗೋವು ಮತ್ತು ಗ್ರಾಮಗಳಿಂದಲೇ ದೇಶದ ಪ್ರಗತಿ