Site icon Vistara News

ಗೋ ಸಂಪತ್ತು | ಬೆರಣಿ; ಇದು ಚಿನ್ನದ ಗಣಿ!

ಗೋ ಸಂಪತ್ತು berani cowdung

ಭಾರತ ಹಳ್ಳಿಗಳ ದೇಶ. ಈ ದೇಶದಲ್ಲಿ ಸುಮಾರು ಆರೂವರೆ ಲಕ್ಷ ಹಳ್ಳಿಗಳಿವೆ. ಇಂದಿಗೂ ಹೆಚ್ಚಿನ ಜನ ವಾಸಿಸುತ್ತಿರುವುದು ಹಳ್ಳಿಗಳಲ್ಲೇ. ಕೃಷಿಯೇ ಇವರೆಲ್ಲರ ಪ್ರಮುಖ ಉದ್ಯೋಗ. ಹಾಗಾಗಿ ಇವರ ಆರ್ಥಿಕ ಮೂಲವೂ ಸಹ ಕೃಷಿಯನ್ನು ಅವಲಂಬಿಸಿದೆ. ಇಂದಿಗೂ ಎಷ್ಟೋ ಹಳ್ಳಿಗಳಿಗೆ ಹೋಗಲು ಸರಿಯಾದ ರಸ್ತೆಯಿಲ್ಲ, ವಿದ್ಯುತ್ ಇಲ್ಲ, ಮೂಲಭೂತ ಸೌಕರ್ಯವಂತೂ ಇಲ್ಲವೇ ಇಲ್ಲ. ಇಷ್ಟಾದರೂ ತಲತಲಾಂತರಗಳಿAದಲೂ ಇಲ್ಲಿಯ ಜನರ ಮನೆಯ ಒಲೆ ಉರಿಯುತ್ತಿದೆ. ಆ ಒಲೆಗಳು ಉರಿಯುತ್ತಿರುವುದು ದೇಶಕ್ಕೆ ಹೊರೆಯಾದ ಎಲ್‌ಪಿಜಿಯಿಂದಲ್ಲ; ಬದಲಿಗೆ ಗೋವಿನ ಉತ್ಪನ್ನವಾದ ಬೆರಣಿಯಿಂದ.

ಬೆರಣಿ ಗ್ರಾಮೀಣ ಜನರ ಕುರುಳಲ್ಲ ಕರುಳು. ಹಳ್ಳಿಯ ಜನರ ಉರುವಲಾಗಿ ಮನೆಯ ಇಂಧನವಾಗಿ ಸಾಕಷ್ಟು ಜನರಿಗೆ ಲಘು ಉದ್ಯೋಗವನ್ನು ಕಲ್ಪಿಸಿರುವ ಏಕೈಕ ಗ್ರಾಮೀಣ ಜನರ ಜೀವನಾಡಿ ಈ ಬೆರಣಿ. ಇಂದು ಇದೊಂದು ಗ್ರಾಮೀಣ ಜನತೆ ಮರೆಯುತ್ತಿರುವ ಹಳ್ಳಿಯ ಇಂಧನ ಎನ್ನಬಹುದು. ಎಲ್.ಪಿ.ಜಿ. ಗ್ಯಾಸ್ ನಮ್ಮ ದೇಶಕ್ಕೆ ಬಂದು ಏನಿಲ್ಲವೆಂದರೂ ೫೦ ವರ್ಷಗಳಾಗಿರಬಹುದು. ಇಷ್ಟು ವರ್ಷವಾದರೂ ಇಂದಿಗೂ ಸಂಪೂರ್ಣ ಗ್ರಾಮೀಣ ಜನರನ್ನು ತಲುಪಲು ಇದಕ್ಕೆ ಸಾಧ್ಯವಾಗಿಲ್ಲ. ಇಂದಿಗೂ ಗ್ರಾಮೀಣ ಭಾರತದ ಬಹುತೇಕ ಜನರಿಗೆ ಈ ಎಲ್.ಪಿ.ಜಿ. ಗ್ಯಾಸ್‌ನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಆದರೂ ಅವರು ಇಂದಿಗೂ ಬೆರಣಿಯನ್ನು ಉರುವಲಾಗಿ ಬಳಸಿಕೊಳ್ಳುವ ಮೂಲಕ ಪಟ್ಟಣವಾಸಿಗಳಿಗಿಂತ ಸ್ವಸ್ಥವಾದ ಅಡುಗೆ ಮಾಡಿಕೊಂಡು ಸ್ವಾಸ್ಥ್ಯ ಜೀವನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ದೇಶದ ಸಂಸ್ಕಂತಿ ಗೋ ಆಧಾರಿತ ಸಂಸ್ಕೃತಿಯಾಗಿದೆ ಎಂಬುವುದಕ್ಕೆ ಉತ್ತಮ ನಿದರ್ಶನವೇ ಬೆರಣಿ. ಹಾಗಾಗಿಯೇ ಇಲ್ಲಿಯ ಪ್ರತಿ ಜನರ ಜೀವನ ಶೈಲಿಯೂ ಗೋವಿನೊಂದಿಗೆ ಒಂದಲ್ಲ ಒಂದು ರೀತಿ ಅವಿನಾಭಾವ ಸಂಬಂಧವನ್ನು ಹೊಂದಿರುವುದು. ಅಷ್ಟೇ ಅಲ್ಲದೆ ನಮ್ಮ ಹಿರಿಯರು ಅಳವಡಿಸಿಕೊಂಡಿದ್ದ ಜೀವನ ಪದ್ಧತಿಯಲ್ಲಿ ಗೋವೆಂಬುದು ಹಾಸುಹೊಕ್ಕಾಗಿದ್ದಿದ್ದು. ಈ ಕಾರಣಕ್ಕಾಗಿಯೇ ಏನೋ, ಮಾಲಿನ್ಯಮುಕ್ತ ಗೋವಿನ ಸಗಣಿಯ ಬೆರಣಿಯಿಂದಲೇ ಈ ದೇಶದ ಅಡುಗೆ ಇಂಧನ ಹುಟ್ಟಿದೆ ಎಂದೆನಿಸುತ್ತದೆ. ಭಾರತವಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬೆರಣಿ ಜನಪ್ರಿಯ ಗ್ರಾಮೀಣ ಇಂಧನವಾಗಿ ಮಾರ್ಪಟ್ಟಿದೆ. ಅತಿ ಸುಲಭವಾಗಿ ಹಾಗೂ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಬಡವರ ಇಂಧನವಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಬೇರೆ ಯಾವುದೇ ಇಂಧನ ಇಲ್ಲದಿದ್ದಾಗ ನಿಶ್ಚಿತವಾಗಿ ಇದನ್ನು ನೆಚ್ಚಿಕೊಂಡು, ಬೇಕೆಂದಾಗ ಉರಿಸಿ ರುಚಿಕರವಾದ ಅಡುಗೆ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ನೆರವಾಗುವ ಏಕೈಕ ಉರುವಲು ಇದಾಗಿದೆ. ಅಕಸ್ಮಾತ್ ಮನೆಯಲ್ಲಿ ಜಾನುವಾರುಗಳಿಲ್ಲದಿದ್ದರೂ ಬೀದಿಯಲ್ಲಿ ಸಗಣಿಯಾಗಿ, ಮಾರುಕಟ್ಟೆಯಲ್ಲಿ ಬೆರಣಿಯಾಗಿ ಸಿಗುವ ಈ ಇಂಧನವನ್ನು ನಮ್ಮ ದೇಶದ ಹಳ್ಳಿಗಳ ಮುಕ್ಕಾಲುಪಾಲು ಜನಸಂಖ್ಯೆ ತಲತಲಾಂತರಗಳಿಂದಲೂ ಅವಲಂಬಿಸಿಕೊಂಡು ಬಂದಿದ್ದರು. ಈಗ ಈ ಅನುಪಾತದಲ್ಲಿ ಕೊಂಚ ಬದಲಾವಣೆ ಕಂಡರೂ ಈಗಲೂ ಸಹ ದೇಶದ ಸಾಕಷ್ಟು ಹಳ್ಳಿಗಳು ಈ ಇಂಧನವನ್ನೇ ನೆಚ್ಚಿಕೊಂಡಿವೆ ಎಂದರೆ ನಿಮಗಾಶ್ಚರ್ಯವಾಗಬಹುದು; ಆದರೆ ಇದು ಸತ್ಯ.

ವಿಭಿನ್ನ ಕ್ಷೇತ್ರದ ವಿಜ್ಞಾನಿಗಳ ಮೂಲಕ ಮಾಡಲಾದ ಸಂಶೋಧನೆಗಳ ಪ್ರಕಾರ, ಇಂದಿನ ದಿನಗಳಲ್ಲಿ ಹಸು ಹಾಗೂ ಎಮ್ಮೆಗಳಿಂದ ಸಿಗುವಂತಹ ಸಗಣಿಯಲ್ಲ್ಲಿ ೨/೩ ಭಾಗದಷ್ಟು ಇಂಧನದ ರೂಪದಲ್ಲಿ ಹಾಗೂ ೧/೩ ಭಾಗದಷ್ಟು ಗೊಬ್ಬರದ ರೂಪದಲ್ಲಿ ಈ ದೇಶದಲ್ಲಿ ಬಳಕೆಯಾಗುತ್ತ್ತಿದೆ. ಹೀಗೆ ಇಂಧನದ ರೂಪದಲ್ಲಿ ಬಳಸುವ ಸಗಣಿ ಗೊಬ್ಬರದಲ್ಲಿ ಬಹುಪಾಲನ್ನು ಬೆರಣಿಯೇ ಆಕ್ರಮಿಸಿಕೊಂಡಿದೆ. ಹೀಗಾಗಿ ಗೋಬರ್ ಗ್ಯಾಸ್‌ನ ಅಳವಡಿಕೆ ತುಂಬ ವಿರಳ ಎಂದೇ ಹೇಳಬಹುದು.

ಎರಡು ಕಿಲೋಗ್ರಾಂ ಸಗಣಿ ಗೊಬ್ಬರದ ಬೆರಣಿಯಿಂದ ಒಂದು ಕಿಲೋಗ್ರಾಂ ಕಟ್ಟಿಗೆ ಅಥವಾ ಅರ್ಧ ಕಿಲೋಗ್ರಾಂ ಕಲ್ಲಿದ್ದಿಲಿನಷ್ಟು ಉರುವಲು ಸಿಗುತ್ತದೆ. ಇದರರ್ಥ ಒಂದು ಕೆ.ಜಿ. ಮರದ ಕಟ್ಟಿಗೆಯ ಅವಶ್ಯಕತೆಯನ್ನು ಎರಡು ಕೆ.ಜಿ. ಬೆರಣಿ ಪೂರೈಸಿದರೆ, ಒಂದು ಕೆ.ಜಿ. ಕಲ್ಲಿದ್ದಿಲಿನ ಅವಶ್ಯಕತೆಯನ್ನು ನಾಲ್ಕು ಕೆ.ಜಿ. ಬೆರಣಿ ಸರಿದೂಗಿಸುತ್ತದೆ. ಹಾಗೆಯೇ ನಾಲ್ಕು ಕೆ.ಜಿ. ಬೆರಣಿ ಬಯೋಗ್ಯಾಸ್‌ನಿಂದ ಉತ್ಪತ್ತಿಯಾಗುವ ಒಂದು ಘನ ಮೀಟರ್ ಬಯೋಗ್ಯಾಸ್‌ನ್ನು ಸರಿದೂಗಿಸುತ್ತದೆ. ಒಂದು ಘನ ಮೀಟರ್ ಬಯೋಗ್ಯಾಸ್ ಸುಮಾರು ಮೂರು ಯೂನಿಟ್ ವಿದ್ಯುಚ್ಛಕ್ತಿಯನ್ನು ಒದಗಿಸುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ. ಹಾಗಾದರೆ ಈ ಬೆರಣಿಯಿಂದ ಉಳಿಯುತ್ತಿರುವ ವಿದ್ಯುತ್ತಿನ ಪರಿಮಾಣಕ್ಕೆ ಲೆಕ್ಕವೇ ಇಲ್ಲ ಅಲ್ಲವೇ. ಎಲ್ಲದಕ್ಕೂ ಮಿಗಿಲಾಗಿ ಇದೊಂದು ಪರಿಸರ ಸ್ನೇಹಿ ಇಂಧನ.

ಸಗಣಿ ಮತ್ತು ಒಣ ಹುಲ್ಲಿನ ಮಿಶ್ರಣದಿಂದ ಮಾಡಿದ ಬೆರಣಿಯನ್ನು ಇಂದಿಗೂ ಗ್ರಾಮೀಣ ಭಾಗದಲ್ಲಿ ಉರುವಲಾಗಿ ಬಳಸಲ್ಪಡುತ್ತಿರುವುದರ ಹಿಂದೆ ಒಂದು ವಿಜ್ಞಾನವೂ ಇದೆ. ಪಾರಂಪರಿಕ ಜ್ಞಾನದ ಪ್ರಕಾರ ಬೆರಣಿಯನ್ನು ಉರುವಲಾಗಿ ಬಳಸಿದಾಗ ಅದು ತನ್ನ ಉಷ್ಣತೆಯನ್ನು ಒಂದು ವಿಶಿಷ್ಟ ಮಟ್ಟದಲ್ಲಿ ಉಳಿಸಿಕೊಳ್ಳುತ್ತದೆ. ಹಾಗಾಗಿ ಅದರಲ್ಲಿ ಬೇಯಿಸಿದ ಆಹಾರ ಪದಾರ್ಥಗಳು ತಮ್ಮಲ್ಲಿನ ಸತ್ವವನ್ನು ಕಳೆದುಕೊಳ್ಳುವುದಿಲ್ಲ. ಹೀಗಾಗಿಯೇ ಬೆರಣಿಯ ಉರಿಯಲ್ಲಿ ಮಾಡಿದ ಅಡುಗೆ ಅತಿ ಹೆಚ್ಚು ರುಚಿಕರವಾಗಿದ್ದು, ಹೆಚ್ಚು ಪೌಷ್ಟಿಕಾಂಶಗಳಿಂದ ಕೂಡಿರುವುದು.

ಪಶುಗಣತಿ ಪ್ರಕಾರ ದೇಶದಲ್ಲಿ ಅಂದಾಜು ೨೮.೩ ಕೋಟಿ ದನ ಮತ್ತು ಎಮ್ಮೆಗಳಿವೆ. ಅವುಗಳಿಂದ ಅಂದಾಜು ಪ್ರತಿದಿನ ೭೦ ಕೋಟಿ ಟನ್ ಸಗಣಿ ಉತ್ಪತ್ತಿಯಾಗುತ್ತಿದೆ. ಇಲ್ಲಿನ ಮಹಿಳೆಯರಿಗೆ ಈಗಲೂ ಗ್ಯಾಸ್ ತುಟ್ಟಿಯಾಗಿದ್ದು, ವಿದ್ಯುತ್ತನ್ನು ನಂಬಲು ಸಾಧ್ಯವಿಲ್ಲ. ಸೋಲಾರ್ ಎಂದರೆ ಏನೋ, ಎಂಥದೋ ಎಂಬ ಭಾವನೆಯಿದೆ. ಹೀಗಿರುವಾಗ ಇಲ್ಲಿರುವ ೧೨೬ ಕೋಟಿ ಜನಸಂಖ್ಯೆಗೆ ಇಂಧನ ಒದಗಿಸುವುದು ಸುಲಭದ ಮಾತಲ್ಲ. ಇಂತಹ ಸಂದರ್ಭದಲ್ಲಿ ಬೆರಣಿ ಕಡಿಮೆ ಖರ್ಚಿನಲ್ಲಿ ನಿಸರ್ಗದತ್ತವಾಗಿ ಸಿಗುವ ಮರುಪೂರಣಗೊಳ್ಳಬಹುದಾದ ಇಂಧನವಾಗಿ ನಮಗೆ ಒದಗಿ ಬಂದಿದೆ. ಇಂತಹ ಬೆರಣಿಯನ್ನು ಉರುವಲಿಗೆ ಬಳಸುವುದರಿಂದ ಮರಗಿಡಗಳೂ ಉಳಿಯುತ್ತವೆ, ಪರಿಸರವೂ ಶುದ್ಧವಾಗಿರುತ್ತದೆ.

ಇತ್ತೀಚಿನವರೆಗೂ ಸತ್ತ ವ್ಯಕ್ತಿಗಳ ಅಗ್ನಿ ಸಂಸ್ಕಾರಕ್ಕೂ ಸಗಣಿಯ ಉಪ ಉತ್ಪನ್ನವಾದ ಬೆರಣಿಯನ್ನು ಉಪಯೋಗಿಸಲಾಗುತ್ತಿತ್ತು. ಇದಕ್ಕೂ ಈಗ ಬೆರಣಿ ಸಿಗದೆ ಶವ ಸಂಸ್ಕಾರಕ್ಕೆಂದೇ ಸಾವಿರಾರು ಮರಗಳನ್ನು ಕಡಿಯಲಾಗುತ್ತಿದೆ. ಸುಮಾರು ೧೫ ವರ್ಷದ ಒಂದು ಮರ ೧೫.೭ ಲಕ್ಷ ರೂಪಾಯಿಗಳ ಮೌಲ್ಯ ಹೊಂದಿದೆ ಎಂಬುದನ್ನು ೧೯೮೦ರಲ್ಲಿ ಕೋಲ್ಕತ್ತಾದ ಕೃಷಿ ವಿಶ್ವವಿದ್ಯಾನಿಲಯದ ಫ್ರೊಫೆಸರ್ ಆದ ಟಿ.ವಿ.ದಾಸ್‌ರವರು ನಿರೂಪಿಸಿದ್ದರು. ಹೀಗೆ ಪ್ರತಿನಿತ್ಯ ಉರುವಲಿಗಾಗಿಯೇ ನಾಶವಾಗುತ್ತಿರುವ ಮರಗಳ ಮೌಲ್ಯ ಲೆಕ್ಕಕ್ಕೆ ಸಿಗುತ್ತಿಲ್ಲ. ಹಾಗೆಯೇ ವಿಶ್ವ ಮಾಹಿತಿಯನ್ನೊಮ್ಮೆ ಜಾಲಾಡಿದರೆ ಬೆರಣಿಯನ್ನು ಭಾರತವೊಂದೇ ಅಲ್ಲ; ಇರಾನ್, ಚೀನಾ, ಮಂಗೋಲಿಯಾ, ಪ್ಯಾಲೆಸ್ಟೀನ್ ಸೇರಿದಂತೆ ಹಲವು ದೇಶಗಳಲ್ಲಿ ಜನ ಇಂದಿಗೂ ಉರುವಲಾಗಿ ಬಳಸುತ್ತಿರುವುದು ಗಮನಕ್ಕೆ ಬರುತ್ತದೆ. ಹಾಗೆಯೇ ಗ್ರಾಮೀಣ ಈಜಿಪ್ಟ್‌ನಲ್ಲಿ ಸಗಣಿಯನ್ನು ಉರುವಲಿನೊಂದಿಗೆ ಗೋಡೆಗಳ ಮೇಲೆ ಮೆತ್ತಲು ಸಹಾ ಬಳಸುತ್ತಿದ್ದುದು ಕಂಡು ಬಂದಿದೆ. ಹೀಗೆ ವಿಶ್ವದಾದ್ಯಂತ ೨೦೦ ಕೋಟಿಗೂ ಹೆಚ್ಚು ಜನರ ಉರುವಲು ಇಂದಿಗೂ ಸಗಣಿಯೇ ಆಗಿದೆ ಎನ್ನುವುದನ್ನು ನಂಬಲೇ ಬೇಕಾಗಿದೆ.

ಸಗಣಿಯನ್ನು ನೋಡಿ ಮೂಗು ಮುರಿಯುವವರಿಗೊಂದು ಮಾತು ಹೇಳಬೇಕಿದೆ. ಹಾಗೆಯೇ ಅವರಂತೆಯೇ ಸಗಣಿಯನ್ನು ನೋಡಿ ಅಸಹ್ಯಪಟ್ಟು ಅದರಿಂದ ಸೊಳ್ಳೆಗಳು ಹೆಚ್ಚಾಗುತ್ತವೆ, ಕ್ರಿಮಿಕೀಟಗಳು ಉತ್ಪತ್ತಿಯಾಗುತ್ತವೆ ಎಂದು ಭಾವಿಸುವವರಿಗೊಂದು ಅಚ್ಚರಿಯ ಸಂಗತಿ ಇದೆ. ಅದೇನೆಂದರೆ, ಸಗಣಿಯಲ್ಲಿ ರಿಫಲ್ಲೆಂಟ್ ಅಂಶವಿರುವುದು. ಈ ರಿಫಲ್ಲೆಂಟ್ ಅಂಶ ಸೊಳ್ಳೆಗಳನ್ನು ಓಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೆ ಬೆರಣಿಯ ಹೊಗೆ ಕ್ರಿಮಿನಾಶಕ ಗುಣವನ್ನು ಹೊಂದಿದೆ. ಇದನ್ನು ಉರಿಸುವುದರಿಂದ ಸುತ್ತಮುತ್ತಲ ಪರಿಸರ ಶುದ್ಧವಾಗುವುದಲ್ಲದೆ ಆರೋಗ್ಯಪೂರ್ಣ ವಾತಾವರಣ ಸಹ ನಿರ್ಮಾಣವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶ ತೈಲ ಹಾಗೂ ಗ್ಯಾಸ್‌ಗಾಗಿ ಮತ್ತೊಂದು ದೇಶದ ಮುಂದೆ ಮಂಡಿಯೂರಿ ಕೂರುವ ಸನ್ನಿವೇಶ ನಿರ್ಮಾಣವಾಗುತ್ತಿದೆ. ಹಾಗಾಗಿ ಇಂದು ಪರ್ಯಾಯ ಇಂಧನವೊಂದನ್ನು ಸೃಷ್ಟಿಸಿಕೊಳ್ಳುವುದು ಈ ದೇಶಕ್ಕೂ ಹಾಗೂ ಮನುಷ್ಯ ಕುಲದ ಉಳಿವಿಗೆ ಮತ್ತು ನಾಗರೀಕತೆಯ ಉಳಿವಿಗೆ ಅತ್ಯಂತ ಅನಿವಾರ್ಯವೂ ಅತ್ಯವಶ್ಯಕವೂ ಆಗಿದೆ. ಇಂತಹ ಸಮಯದಲ್ಲಿ ಕಡಿಮೆ ದರದ ಈ ನಿಸರ್ಗ ಸ್ನೇಹಿ ಇಂಧನ ವ್ಯವಸ್ಥೆಯತ್ತ ಪ್ರಪಂಚದ ಕಣ್ಣು ಬೀಳಬೇಕಿದೆೆ. ಈಗಾಗಲೇ ಜಗತ್ತಿನ ಮುಂದುವರೆದ ದೇಶದ ಕೆಲ ನಾಯಕರು ಹಾಗೂ ವಿಜ್ಞಾನಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವರ್ತರಾಗಿದ್ದು, ಈ ಗ್ರಾಮೀಣ ಇಂಧನವನ್ನು ಅಭಿವೃದ್ಧಿಗೊಳಿಸುವಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಆದರೆ ನಾವಿಂದು ಪಾರಂಪರಿಕವಾಗಿ ಬಂದಿರುವ ಈ ಇಂಧನ ವ್ಯವಸ್ಥೆಯನ್ನು ಕಡೆಗಣಿಸುತ್ತಾ, ಮತ್ತೊಮ್ಮೆ ಅವನತಿಯತ್ತ ಸಾಗುತ್ತಿದ್ದೇವೆ.

ಇದನ್ನೂ ಓದಿ | ಗೋ ಸಂಪತ್ತು| ಗೋವಿನ ಉತ್ಪನ್ನಗಳ ಬಳಕೆಯಿಂದ ಹೆಚ್ಚಿದ ಅಗ್ನಿಹೋತ್ರದ ಮಹಿಮೆ

Exit mobile version