Site icon Vistara News

ಗೋವು ಮತ್ತು ಗ್ರಾಮಗಳಿಂದಲೇ ದೇಶದ ಪ್ರಗತಿ

cattle and agriculture

ಭಾರತದಲ್ಲಿನ ಬಹುಜನರ ಉತ್ಪಾದನೆಯ ಪ್ರಮುಖ ಉದ್ಯೋಗವೆಂದರೆ ಅದು ವ್ಯವಸಾಯ. ಹೀಗಾಗಿ ಇಲ್ಲಿಯ ಆರ್ಥಿಕ ಪ್ರಗತಿಗೆ ವ್ಯವಸಾಯವೇ ನೆಲೆಗಟ್ಟು. ವ್ಯವಸಾಯದಲ್ಲಿನ ಪ್ರಗತಿಯೇ ರಾಷ್ಟ್ರದ ಪ್ರಗತಿ. ಹಾಗೆಯೇ ಗೋವು ಮತ್ತು ಗ್ರಾಮ ಎರಡೂ ದೇಶದ ಅವಿಭಾಜ್ಯ ಅಂಗಗಳು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಗೋವುಗಳಿಂದಲೇ ಸ್ವಾವಲಂಬಿ ಗ್ರಾಮ ಸಾಧ್ಯ. ಇಂತಹ ಗ್ರಾಮಗಳ ಸುಭಿಕ್ಷದಿಂದಲೇ ದೇಶ ಸುಭಿಕ್ಷ. ಹೀಗಾಗಿಯೇ ೧೯೨೯ರಲ್ಲಿ “ಭಾರತೀಯ ಕೃಷಿ ರಾಯಲ್ ಕಮಿಷನ್ʼʼ ಭಾರತದ ಹಸು ಮತ್ತು ಎತ್ತುಗಳು ದೇಶದ ಅರ್ಥವ್ಯವಸ್ಥೆಯ ಭಾರವನ್ನು ಹೊತ್ತಿವೆ ಎಂಬುದಾಗಿ ಬರೆದಿತ್ತು.

ಗೋವುಗಳು ಸಂಕಷ್ಟಕ್ಕೆ ಒಳಗಾದರೆ ಗ್ರಾಮಗಳು ಸಹ ಸಂಕಷ್ಟಕ್ಕೊಳಗಾಗು ವುದರೊಂದಿಗೆ ದೇಶವೂ ಕೂಡಾ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ. ಸ್ವಾತಂತ್ರ್ಯ ಬಂದು ಬಹು ಸಮಯದ ನಂತರವೂ ನಮ್ಮಲ್ಲಿ ಸಾಕಷ್ಟು ಗ್ರಾಮಗಳು ಸ್ವಾವಲಂಬಿಯಾಗಿತ್ತು. ಕಾರಣ ಗೋವುಗಳು ಗ್ರಾಮದ ಆಧಾರವಾಗಿಯೇ ಉಳಿದುಕೊಂಡಿದ್ದು, ಅವುಗಳ ಮೂಲಕ ಸ್ವಾವಲಂಬನೆಯನ್ನು ಗ್ರಾಮಗಳು ಸಾಧಿಸಿಕೊಂಡಿದ್ದವು.

ಭಾರತದಲ್ಲಿ ಸರಿಸುಮಾರು ೬,೬೪,೩೬೯ ಹಳ್ಳಿಗಳಿವೆ. ಹೀಗಾಗಿ ನಮ್ಮ ದೇಶವನ್ನು ಹಳ್ಳಿಗಳ ದೇಶ ಎಂದು ಕರೆಯಲಾಗುತ್ತದೆ. ಇಲ್ಲಿ ಸುಮಾರು ೫೪.೬ರಷ್ಟು ಜನರ ಉದ್ಯೋಗ ಇಂದಿಗೂ ಕೃಷಿ. ೨೦೧೧ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆ ೧೨೧ ಕೋಟಿಯಾಗಿತ್ತು. ಇದರಲ್ಲಿ ೮೩.೩ ಕೋಟಿಯಷ್ಟು ಜನ ಹಳ್ಳಿಗಳಲ್ಲಿ ವಾಸಿಸುತ್ತಿದ್ದರೆ, ೩೭.೭ ಕೋಟಿಯಷ್ಟು ಜನ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಶೇಕಡಾವಾರು ಪ್ರಮಾಣದಲ್ಲಿ ಸುಮಾರು ಶೇಕಡಾ ೭೦ರಷ್ಟು ಜನ ಹಳ್ಳಿಗಳಲ್ಲೇ ವಾಸಿಸುತ್ತಿರುವುದು ಇದರಿಂದ ಸ್ಪಷ್ಟವಾಗಿತ್ತು. ೨೦೨೧ರ ಒಂದು ಮಾಹಿತಿಯಂತೆ ದೇಶದಲ್ಲಿ ಶೇಕಡಾ ೫೮ರಷ್ಟು ಜನರ ಉದ್ಯೋಗ ಕೃಷಿಯಾಗಿದೆ. ದೇಶ ಇಷ್ಟೆಲ್ಲಾ ಮುಂದುವರೆದಿದ್ದರೂ ಇಂದಿಗೂ ಕೃಷಿಯಲ್ಲಿ ಶೇಕಡಾ ೯೭.೬ರಷ್ಟು ಗೋವುಗಳು ರೈತರ ಆಧಾರವಾಗಿಯೇ ಉಳಿದುಕೊಂಡಿದೆ. ವ್ಯವಸಾಯಕ್ಕೆ ಬೇಕಾಗುವ ಶೇಕಡಾ ೯೦ಕ್ಕೂ ಹೆಚ್ಚಿನ ಶಕ್ತಿ ಗೋವುಗಳಿಂದಲೇ ದೊರೆಯುತ್ತಿದೆ. ಹಾಗೆಯೇ ಇಂದಿಗೂ ಸುಮಾರು ೧೦೦ ಮಿಲಿಯನ್ ಹೆಕ್ಟೇರ್‌ನಷ್ಟು ಭೂಮಿಯನ್ನು ಗೋವುಗಳೇ ನೇರವಾಗಿ ಉತ್ತು ಬಿತ್ತುತ್ತಿವೆ. ಶೇಕಡಾ ೬೦ರಷ್ಟು ಉಳುಮೆಯಾಗುವ ದೇಶದ ಕೃಷಿ ಭೂಮಿಯಲ್ಲಿ ಇಂದಿಗೂ ಇವುಗಳದ್ದೇ ಪಾತ್ರ ಪ್ರಮುಖವಾಗಿದೆ. ಇದರೊಂದಿಗೆ ಸುಮಾರು ೨೫ ಸಾವಿರ ಮಿಲಿಯನ್ ಟನ್‌ನಷ್ಟು ತೂಕವನ್ನು ಪ್ರತಿವರ್ಷ ಇವುಗಳು ಹೊತ್ತೊಯ್ಯುತ್ತವೆ ಎಂಬುದಾಗಿ ಹೇಳಲಾಗಿದೆ. ಇದರಿಂದ ಸುಮಾರು ೪ ಸಾವಿರ ಕೋಟಿಯಷ್ಟು ಬೆಲೆ ಬಾಳುವ ಸುಮಾರು ೬ ಮಿಲಿಯನ್ ಬ್ಯಾರಲ್‌ನಷ್ಟು ಡೀಸೆಲ್ ಉಳಿತಾಯವಾಗುತ್ತಿದೆ.

ನಮ್ಮಲ್ಲಿ ಸುಮಾರು ೮೮ ಮಿಲಿಯನ್‌ನಷ್ಟು ಕೃಷಿಗೆ ಉಪಯುಕ್ತವಾದ ಗೋವುಗಳಿವೆ ಎಂದು ಹೇಳಲಾಗುತ್ತಿದೆ. ಒಂದು ಜೊತೆ ಎತ್ತುಗಳು ಸುಮಾರು ೫೦ ಸಾವಿರ ಬೆಲೆ ಬಾಳುತ್ತವೆ ಎಂಬುದಾಗಿ ಅಂದಾಜಿಸಿದರೂ ಇವುಗಳ ಬೆಲೆ ಸುಮಾರು ೨೨ ಲಕ್ಷ ಮಿಲಿಯನ್‌ನಷ್ಟಾಗಲಿದೆ.

೧೯೮೧ರಲ್ಲಿ ಮಾಜಿ ಪ್ರಧಾನಿಯಾದ ಶ್ರೀಮತಿ ಇಂದಿರಾ ಗಾಂಧಿಯವರು ನೈರೋಬಿಯಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ಇಂದಿನ ಜೆಟ್ ಯುಗದಲ್ಲೂ ಸಹ ಗೋವುಗಳು ಭಾರತದ ಭವಿಷ್ಯವನ್ನು ಬರೆಯುತ್ತಿವೆ. ಹೀಗಾಗಿ ಜಾನುವಾರುಗಳು ಭಾರತದಲ್ಲಿ ಸುಮಾರು ೨೨,೦೦೦ ಮೆಗಾ ವ್ಯಾಟ್‌ನಷ್ಟು ಊರ್ಜ ಶಕ್ತಿಯನ್ನು ಉತ್ಪತ್ತಿ ಮಾಡುತ್ತಿವೆ. ಇದಕ್ಕೆ ಪರ್ಯಾಯವಾಗಿ ಮಾನವ ಕೇವಲ ವಿದ್ಯುತ್ ಶಕ್ತಿಯನ್ನು ಮಾತ್ರ ಉತ್ಪತ್ತಿ ಮಾಡಲು ಹೋದರೂ ಸಹ ಸುಮಾರು ೨೫ ರಿಂದ ೪೦ ಬಿಲಿಯನ್ ಅಮೆರಿಕನ್ ಡಾಲರ್ ಖರ್ಚಾಗಲಿದೆ. ಇನ್ನು ಇವುಗಳ ಗೊಬ್ಬರ ಮತ್ತು ಇವುಗಳು ತೈಲದಲ್ಲಿ ಉಳಿಸುವ ಪ್ರಮಾಣವನ್ನು ಅಂದಾಜಿಸಲು ಸಹ ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದರು.

ದೆಹಲಿಯ ಐ.ಐ.ಟಿ.ಯ ಭಾರತೀಯ ಕ್ಯಾಟಲ್ ರಿಸೋರ್ಸ್ ಡೆವಲಪ್‌ಮೆಂಟ್ ಫೌಂಡೇಶನ್‌ನ ಒಂದು ಸಮೀಕ್ಷೆಯಂತೆ ೧೦೦ಕ್ಕೆ ೧೦೦ ಮೀಟರ್ ಭೂಮಿಯನ್ನು ಉಳಲು ರೈತ ಗೋವಿನ ಹಿಂದೆ ಸುಡು ಬಿಸಿಲಿನಲ್ಲಿ ಸುಮಾರು ೬೫ ರಿಂದ ೭೦ ಕಿಲೋ ಮೀಟರ್ ನಡೆಯಬೇಕಾಗುತ್ತದೆಯಂತೆ. ಹಾಗೆಯೇ ಎತ್ತುಗಳು ರೈತನೊಂದಿಗೆ ದಿನದ ಪ್ರಾರಂಭದಲ್ಲಿ ಸುಮಾರು ಪ್ರತಿ ಗಂಟೆ ೧.೭ ಮೈಲ್‌ನಷ್ಟು ವೇಗದಲ್ಲಿ ಹಾಗೂ ಅಂತ್ಯದಲ್ಲಿ ಪ್ರತಿ ಗಂಟೆಗೆ ೧.೨ ಮೈಲ್‌ನಷ್ಟು ವೇಗದಲ್ಲಿ ಕೆಲಸ ಮಾಡುತ್ತವೆಯಂತೆ.

ವಿಪರ್ಯಾಸವೆಂದರೆ ೧೯೬೧ರಲ್ಲಿ ಕೃಷಿಯಲ್ಲಿ ಗೋವುಗಳ ಸಹಭಾಗಿತ್ವ ಶೇಕಡಾ ೭೧ರಷ್ಟಿದ್ದಿದ್ದು, ೧೯೯೧ರಲ್ಲಿ ಶೇಕಡಾ ೨೩.೩ರಷ್ಟು ಇಳಿಕೆಯಾಗಿತ್ತು. ಮತ್ತೊಂದು ಸಮೀಕ್ಷೆಯ ಪ್ರಕಾರ ಗೋವುಗಳ ಒಟ್ಟಾರೆ ದುಡಿಮೆಯ ಶಕ್ತಿಯಲ್ಲಿ ಕೇವಲ ಶೇಕಡಾ ೧೦ರಷ್ಟು ಮಾತ್ರ ದೇಶದ ಕೃಷಿಯಲ್ಲಿ ಬಳಕೆಯಾಗುತ್ತಿದೆಯಂತೆ. ಇನ್ನು ಸಂಪೂರ್ಣ ಶಕ್ತಿಯನ್ನು ಸರಿಯಾದ ಪ್ರಮಾಣದಲ್ಲಿ ಕೃಷಿಯಲ್ಲಿ ಬಳಸಿಕೊಂಡಿದ್ದೇ ಆದ್ದಲ್ಲಿ ಒಬ್ಬ ರೈತನೂ ಸಹ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವೇ ಬರುವುದಿಲ್ಲವಂತೆ. ಹೀಗೆ ಗೋವುಗಳು ಕೃಷಿಯಲ್ಲಿ ಸಂಪೂರ್ಣ ಬಳಕೆಯಾಗದೇ ಇರುವುದರ ಪರಿಣಾಮ ರೈತನ ಮತ್ತು ದೇಶದ ಆರೋಗ್ಯ ಹಾಳಾಗುವುದರೊಂದಿಗೆ ಗೋವುಗಳು ಸಹ ವ್ಯರ್ಥವಾಗುತ್ತಾ ಕಸಾಯಿಖಾನೆಯ ದಾರಿ ಹಿಡಿಯುತ್ತಿವೆ.

ವಿಪರ್ಯಾಸವೆಂದರೆ ಇಂದಿಗೂ ದೇಶದ ಬಹುತೇಕ ಜನರಿಗೆ ದೇಶದಾದ್ಯಂತ ಅನ್ನ, ವಸ್ತ್ರ ಪೂರೈಸುತ್ತಿರುವುದು ಇಂದಿಗೂ ನಮ್ಮ ಹಳ್ಳಿಗಳೇ ಎಂಬುದರ ಅರಿವೇ ಇಲ್ಲ. ನಗರ ವಾಸಿಗಳ ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾದ ಹಾಲು, ಬೆಣ್ಣೆ, ಮೊಸರು, ಹಣ್ಣು, ಕಾಯಿಪಲ್ಯಗಳನ್ನು ಭಾಗಶಃ ಪೂರೈಸುತ್ತಿರುವುದು ಮತ್ತು ಗಿರಣಿಗಳಿಗೆ ಬೇಕಾದ ಕಚ್ಚಾವಸ್ತುಗಳನ್ನು ಸಹ ಪೂರೈಸಿ ಕೊಡುತ್ತಿರುವ ಇಂತಹ ಹಳ್ಳಿಗರ ಮತ್ತು ಹಳ್ಳಿಗಳ ಬಗ್ಗೆ ದೇಶವಾಸಿಗಳು ಅರಿಯಬೇಕಾಗಿದೆ. ಇನ್ನು ನಮ್ಮ ಪೂರ್ವಜರ ಜೀವನ ಶೈಲಿಯಲ್ಲಿ ಹಾಲೆಂಬುದು ಮಾರಾಟದ ವಸ್ತುವಾಗಿರಲೇ ಇಲ್ಲ. ಹಾಲನ್ನು ಮಾರುವುದು ಪಾಪಕೃತ್ಯವೆಂದೇ ಭಾವಿಸಲಾಗಿತ್ತು.

ಇಂತಹ ಮನಃಸ್ಥಿತಿಯುಳ್ಳವರು ಗೋವನ್ನು ಕಟುಕರಿಗೆ ಮಾರುತ್ತಿದ್ದರು ಎಂದರೆ ನಂಬಲಾದಿತೆ. ಹೀಗಾಗಿ ಗ್ರಾಮೀಣ ಸಭ್ಯತೆಯಲ್ಲಿ ಗೋವನ್ನು ಮಾರುವುದು ಬಹಳ ಹಿಂದಿನಿಂದಲೂ ಪಾಪವೆಂದು ತಿಳಿಯುವುದರೊಂದಿಗೆ, ಗೋವನ್ನು ದೇವ ಸ್ವರೂಪವಾಗಿ ನೋಡುವ ಸಂಸ್ಕೃತಿ ನಮ್ಮದಾಗಿತ್ತು. ಹೀಗಾಗಿ ಭಾರತೀಯ ಸನ್ನಿವೇಶದಲ್ಲಿ ಗೋವುಗಳಿಲ್ಲದೆ ಅಭಿವೃದ್ಧಿ ಮತ್ತು ಜೀವನ ಮಟ್ಟ ಸುಧಾರಣೆ ಎಂಬುದಕ್ಕೆ ಅರ್ಥವೇ ಇಲ್ಲ ಎಂದೇ ಹೇಳಲಾಗುತ್ತದೆ. ಒಂದು ಚಿಕ್ಕ ಗ್ರಾಮದಲ್ಲಿ ೫೦೦ ಗೋವುಗಳಿದ್ದರೆ ಆ ಗ್ರಾಮವನ್ನು ಸ್ವಾವಲಂಬಿ ಗ್ರಾಮವನ್ನಾಗಿಸುವ ಎಲ್ಲಾ ಸಾಧ್ಯತೆಗಳಿವೆ. ಇಂದಿನ ದಿನಗಳಲ್ಲಿ ಗೋವಿನಿಂದ ಹಾಲು ಮಾತ್ರವಲ್ಲದೆ ಬೆಲೆ ಕಟ್ಟಲಾಗದ ಗೋಮೂತ್ರ, ಗೋಮಯ ಸೇರಿದಂತೆ ಸಾಕಷ್ಟು ಗೋ ಉತ್ಪನ್ನಗಳನ್ನು ಪಡೆಯಲು ಸಾಧ್ಯ. ಇದರಿಂದ ಔಷಧ, ಜೈವಿಕ ಅನಿಲ, ಗೊಬ್ಬರ, ಬೆರಣಿಯನ್ನು ಪಡೆದು ಸಂಪೂರ್ಣ ಗೋ ಆಧಾರಿತ ಕೃಷಿಯಿಂದ ಸ್ವಸ್ಥ ಮತ್ತು ಸಾಲ ಮುಕ್ತ ಸಮಾಜ ಸೃಷ್ಟಿಯಾಗಿ ಜನ ನೆಮ್ಮದಿ ಮತ್ತು ಆರೋಗ್ಯದಿಂದ ಬಾಳಬಹುದಾಗಿದೆ.

ಒಂದರ್ಥದಲ್ಲಿ ಗೋವುಗಳಿಲ್ಲದ ಭಾರತದ ಕೃಷಿ ಪರಿಪೂರ್ಣವಾಗುವುದೇ ಇಲ್ಲ. ಭಾರತದ ಆರ್ಥಿಕ ಮತ್ತು ಸಾಮಾಜಿಕ ಬದುಕು ನಿಂತಿರುವುದೇ ಗೋವುಗಳಿಂದ ಮತ್ತು ಅವುಗಳನ್ನೊಳಗೊಂಡ ಗ್ರಾಮಗಳಿಂದ. ಹೀಗಾಗಿ ಗೋವುಗಳಿಲ್ಲದ ಕೃಷಿಯನ್ನು ಮತ್ತು ಗೋವುಗಳಿಲ್ಲದ ಗ್ರಾಮಗಳನ್ನು ಹೊರಗಿಟ್ಟು ಸ್ವಾಸ್ಥ್ಯ ಸಮಾಜದ ನಿರ್ಮಾಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಒಂದರ್ಥದಲ್ಲಿ ನಮ್ಮ ದೇಶದ ಸಂಸ್ಕೃತಿ ಇರುವುದೇ ಗ್ರಾಮಗಳಲ್ಲಿ. ನಮ್ಮ ಸಂಸ್ಕೃತಿಯನ್ನು ಉಳಿಸಿದ್ದು ಮತ್ತು ಇಂದಿಗೂ ಉಳಿಸುತ್ತಿರುವುದು ಈ ಗ್ರಾಮಗಳೇ. ಹೀಗಾಗಿಯೇ ಹಿಂದೆಲ್ಲಾ ಗ್ರಾಮಗಳೇ ಭಾರತೀಯ ಸಮಾಜದ ಬೆನ್ನೆಲುಬು ಎಂದು ಹೇಳಲಾಗುತ್ತಿತ್ತು. ಆದ್ದರಿಂದ ಗೋವುಗಳನ್ನು ಜೊತೆಗಿಟ್ಟುಕೊಂಡೇ ಗ್ರಾಮದ ಮತ್ತು ಜನರ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ.

ಯಾವ ಗ್ರಾಮದಲ್ಲಿ ಹಿಂದೆಲ್ಲಾ ಗೋವಿನ ದರ್ಶನ ಮಾಡದೆ ಜನ ಊಟ ಮಾಡುತ್ತಿರಲಿಲ್ಲವೋ ಇಂದು ಅದೇ ಗ್ರಾಮದಿಂದ ಗೋವನ್ನು ಭಾರವೆಂದು ತಿಳಿದು ಹೊರದೂಡಲಾಗುತ್ತಿದೆ. ಹಿಂದೆಲ್ಲಾ ಗೋವುಗಳು ಯಾವುದೇ ಕೃಷಿ ಭೂಮಿಯಲ್ಲಿ ನುಗ್ಗಿ ಆಹಾರವನ್ನು ಹುಡುಕಿಕೊಂಡಾಗ ಅವುಗಳನ್ನು ಹೊಡೆದು ಓಡಿಸುತ್ತಿರಲಿಲ್ಲ. ಬದಲಿಗೆ ಇದರಿಂದ ಅವರ ಫಸಲು ಮುಂದೆ ಹೆಚ್ಚಿನ ಇಳುವರಿ ಮತ್ತು ಲಾಭವನ್ನು ನೀಡುತ್ತದೆ ಎಂದು ಭಾವಿಸಲಾಗುತ್ತಿತ್ತು. ಕರು ಹುಟ್ಟಿದಾಗ ಸಂಪೂರ್ಣ ಹಾಲನ್ನು ಕರುವಿಗೆ ಕುಡಿಸಲಾಗುತ್ತಿತ್ತು. ಇದರಿಂದ ಕರುಗಳು ದಷ್ಟ ಪುಷ್ಟವಾಗಿ ಬೆಳೆದು ದೊಡ್ಡದಾಗಿ ರೈತರಿಗೆ ಹೆಚ್ಚಿನ ಕೆಲಸಗಳಿಗೆ ಸಹಾಯವಾಗುವುದರೊಂದಿಗೆ ಗ್ರಾಮದ ಮತ್ತು ಪರಿವಾರದ ಆಧಾರವಾಗುತ್ತಿದ್ದವು. ಮುಖ್ಯವಾಗಿ ಹಳ್ಳಿಗಳಲ್ಲಿನ ಗುಡಿ ಕೈಗಾರಿಕೆಗೆ ಗೋವುಗಳೇ ಕಾರಣೀಭೂತವಾಗಿದ್ದವು. ಇಂದು ಕೃಷಿಯಲ್ಲಿ ಗೋವುಗಳ ಬಳಕೆ ಕಡಿಮೆಯಾಗುತ್ತಿರುವ ಕಾರಣ ಹಳ್ಳಿಗಳಲ್ಲಿನ ಗುಡಿ ಕೈಗಾರಿಕೆಗಳು ಭಾಗಶಃ ಬಾಗಿಲು ಮುಚ್ಚಿಹೋಗಿವೆ. ಇದರ ಪರಿಣಾಮ ಹಳ್ಳಿಗಳಲ್ಲಿನ ಜನ ಕೆಲಸವಿಲ್ಲದೇ ನಗರದೆಡೆಗೆ ವಲಸೆ ಹೋಗುವಂತಾಗಿದೆ.

ಶೂನ್ಯ ಬಂಡವಾಳವಾಗಿದ್ದ ಕೃಷಿ ದುಬಾರಿಯಾಗಿದೆ. ಹೀಗಾಗಿಯೇ ಗೋವುಗಳನ್ನು ಉಳಿಸಿದರೆ ಗ್ರಾಮಗಳನ್ನು ಉಳಿಸಿದಂತೆ, ಗ್ರಾಮಗಳು ಉಳಿದರೆ ಭಾರತವು ಉಳಿದಂತೆ ಎಂಬುದಾಗಿ ಹೇಳಿರುವುದು. ಒಟ್ಟಿನಲ್ಲಿ ಗ್ರಾಮಗಳು ಭಾರತದಲ್ಲಿದೆ ಎನ್ನುವುದಕ್ಕಿಂತ ಭಾರತ ಗ್ರಾಮದಲ್ಲಿದೆ ಎನ್ನುವುದೇ ಬಹಳ ಸೂಕ್ತವಾದುದು.

ಇದನ್ನೂ ಓದಿ | Kiccha Sudeep | ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾದ ಕಿಚ್ಚ ಸುದೀಪ್‌; ಜಿಲ್ಲೆಗೆ ಒಂದರಂತೆ 31 ಗೋವುಗಳ ದತ್ತು

Exit mobile version