ಭಾರತ ಹಲವು ವಿಶಿಷ್ಟ ಗೋ ತಳಿಗಳನ್ನು ಪ್ರಪಂಚಕ್ಕೆ ನೀಡಿದೆ. ಅದರಲ್ಲಿ ಅತಿ ವಿಶಿಷ್ಟವಾದ ಗೋತಳಿಯೇ ಹಳ್ಳಿಕಾರ್ ತಳಿ. ಇದನ್ನು ಜಗತ್ತಿನಲ್ಲಿಯೇ ಉಳುಮೆಗೆ ಹೆಸರಾದ ತಳಿ ಎಂದು ಹೇಳಲಾಗುತ್ತದೆ.
ವಿಶಿಷ್ಟವೇನೆಂದರೆ ಈ ತಳಿಗಳ ಎತ್ತುಗಳಷ್ಟೇ ಅಲ್ಲದೆ ದನಗಳು ಸಹ ಉಳುಮೆಯಲ್ಲಿ ತಮ್ಮ ಸಹಭಾಗಿತ್ವವನ್ನು ನೀಡುತ್ತವೆ. ಈ ಲಕ್ಷಣ ಮತ್ತು ಕಾರ್ಯಕ್ಷಮತೆ ಬೇರೆ ಯಾವುದೇ ತಳಿಗಳಲ್ಲಿ ಈ ತಳಿಯಷ್ಟು ಕಂಡುಬರುವುದಿಲ್ಲ. ಕರ್ನಾಟಕವೇ ಇದರ ಮೂಲ ಸ್ಥಾನ ಎಂಬುದನ್ನು ಹಲವು ಸಮೀಕ್ಷೆಗಳು ದೃಢಪಡಿಸುತ್ತವೆ.
ಹೀಗಾಗಿ ಈ ತಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದಲ್ಲಿಯೇ ಕಂಡುಬರುತ್ತದೆ. ಇದರೊಂದಿಗೆ ಕರ್ನಾಟಕದ ಪೂರ್ವ ಜಿಲ್ಲೆಗಳೊಂದಿಗೆ ಹೊಂದಿಕೊಂಡಿರುವಂತಹ ತಮಿಳುನಾಡು ಮತ್ತು ಆಂಧ್ರಪ್ರದೇಶದ ಕೆಲ ಜಿಲ್ಲೆಗಳಲ್ಲೂ ಸಹ ಈ ತಳಿ ಕಂಡುಬರುತ್ತದೆ.
ಈ ತಳಿಯನ್ನು ದಕ್ಷಿಣ ಭಾರತದ ಅತಿ ಪುರಾತನ ತಳಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ದಕ್ಷಿಣ ಭಾರತದ ದೇಶಿ ತಳಿಗಳ ತಾಯಿ ಎಂದು ಸಹ ಇದನ್ನು ಕರೆಯಲಾಗುತ್ತದೆ. ಕಾರಣ ದಕ್ಷಿಣ ಭಾರತದ ಬಹುತೇಕ ತಳಿಗಳ ಮೂಲ ಇದೇ ಹಳ್ಳಿಕಾರ್ ತಳಿಯಾಗಿರುವುದೇ ಆಗಿದೆ. ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಈ ತಳಿಯನ್ನು ಮಾನವ ಕುಲದ ಭವಿಷ್ಯದ ತಳಿ ಎಂದು ಸಹ ಕರೆಯಲಾಗುತ್ತದೆ. ಕೆಲವೆಡೆ ಇದನ್ನು ಮೂಡಲ ತಳಿ ಎಂದು ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಸುಮಾರು 600 ವರ್ಷಗಳಿಗೂ ಹೆಚ್ಚಿನ ಚರಿತ್ರೆಯನ್ನು ಹೊಂದಿರುವ ಈ ತಳಿ ಕರ್ನಾಟಕದ ಪ್ರಮುಖ ಪಶುಪಾಲಕ ಸಮುದಾಯವಾದ ಕಾಡುಗೊಲ್ಲ ಮತ್ತು ಅದರ ಉಪ ಪಂಗಡವಾಗಿದ್ದ ಹಳ್ಳಿಕಾರ್ ಸಮುದಾಯಗಳಿಂದ ರೂಪಿತಗೊಂಡಿರುವುದಾಗಿದೆ ಎಂಬುದಾಗಿ ಹೇಳಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದಿಗೂ ದಕ್ಷಿಣ ಕರ್ನಾಟಕದ ಕಾಡುಗೊಲ್ಲರ ಹಟ್ಟಿಗಳಲ್ಲಿ ಈ ತಳಿ ಯಥೇಚ್ಛವಾಗಿ ಕಂಡುಬರುತ್ತದೆ.
400 ರಿಂದ 500 ಕೆ.ಜಿ. ತೂಕದ ಗೋವು!
ಸಾಮಾನ್ಯವಾಗಿ ಹಳ್ಳಿಕಾರ್ ಹಸುವೊಂದು 400 ರಿಂದ 500 ಕೆ.ಜಿ.ಯಷ್ಟು ದೇಹ ತೂಕವನ್ನು ಹೊಂದಿರುತ್ತದೆ. ಇವುಗಳಲ್ಲಿ ಹೆಚ್ಚಿನವು ಬಣ್ಣದಲ್ಲಿ ಬಿಳಿಯ ಬಣ್ಣದಿಂದ ಇಲ್ಲವೇ ಕಪ್ಪು ಮಿಶ್ರಿತ ಬೂದಿ ಬಣ್ಣದಿಂದ ಕೂಡಿರುತ್ತವೆ. ಹೋರಿಗಳಲ್ಲಿ ಶರೀರದ ಮಧ್ಯ ಭಾಗವು ತಿಳಿ ಬಿಳಿಯ ಬಣ್ಣವಾಗಿದ್ದು, ಕುತ್ತಿಗೆ, ಡುಬ್ಬದ ಭಾಗ, ತೋಳು ಹಾಗೂ ಚಪ್ಪೆಯ ಭಾಗವು ಹೆಚ್ಚು ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೋರಿಗಳಲ್ಲಿ ಬೆನ್ನಿನ ಡುಬ್ಬವು ಚೆನ್ನಾಗಿ ಬೆಳೆದು ದಪ್ಪವಾಗಿರುತ್ತದೆ. ಮುಖದ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು ಕಂಡುಬರುವುದರೊಂದಿಗೆ ಮುಖವು ನೋಡಲು ಸುಂದರವಾಗಿ, ಮನೋಹರವಾಗಿ ಕಾಣಿಸುತ್ತದೆ.
ಇದರೊಂದಿಗೆ ಉದ್ದನೆಯ ಮುಖಚರ್ಯೆಯನ್ನು ಹೊಂದಿರುವ ಇವುಗಳ ತಲೆಯ ಭಾಗವು ತೀಕ್ಷ್ಣವಾಗಿದ್ದು, ಹಣೆಯ ಭಾಗವು ತಗ್ಗಾಗಿರುತ್ತದೆ. ತಲೆಯ ಮೇಲು ಭಾಗದಲ್ಲಿ ಸ್ವಲ್ಪ ದಪ್ಪವಾಗಿ ಮುಖವು ಹೆಚ್ಚು ಅಗಲವಿಲ್ಲದೆ ಕೆಳಗೆ ಬರಬರುತ್ತಾ ನೀಳವಾಗಿ, ಎಳಸಾಗಿ, ಸರಳವಾಗಿರುತ್ತದೆ. ಉತ್ತಮ ಮೈಕಟ್ಟನ್ನು ಹೊಂದಿರುವ ಇವುಗಳು ಉದ್ದನೆಯ ದೇಹವನ್ನು ಹೊಂದಿದ್ದು, ತಮ್ಮ ನಿಲುವು, ಮೈಕಟ್ಟು, ಆಕಾರ, ಗಾತ್ರದಲ್ಲಿ ಹೆಚ್ಚು ದಪ್ಪ ಅಥವಾ ಅತಿ ತೆಳುವು ಇಲ್ಲವೇ ಸಮತೋಲವಾಗಿ, ಸ್ವಲ್ಪ ಹೆಚ್ಚು ಕಡಿಮೆ ಜೂಜಿನ ಕುದುರೆಯನ್ನು ಹೋಲುತ್ತವೆ ಎಂದು ಹೇಳಬಹುದಾಗಿದೆ. ಕಪ್ಪು ಮಿಶ್ರಿತ ಬೂದಿ ಬಣ್ಣದ ದನಗಳು ಹೆಚ್ಚು ಗಡಸಿನ ದನಗಳೆಂದು ತಿಳಿದು ರೈತರು ಹೆಚ್ಚಾಗಿ ಇಂತಹ ದನಗಳನ್ನು ಹೊಲ ಮತ್ತು ಮನೆಯ ಕೆಲಸಗಳಿಗಾಗಿ ಉಪಯೋಗಿಸುತ್ತಾರೆ.
ಇವುಗಳ ಮೈ ಚರ್ಮವು ಮೃದುವಾಗಿ, ಕೂದಲುಗಳು ನಯವಾಗಿ ನುಣುಪಾಗಿರುತ್ತವೆ. ಕೋಡುಗಳು ಬುಡದಲ್ಲಿ ಒಂದಕ್ಕೊಂದು ಅತಿ ಸಮೀಪದಲ್ಲಿ ಹುಟ್ಟಿಕೊಂಡು, ಮೇಲಕ್ಕೆ ಹೋಗುತ್ತಾ ಅಗಲವಾಗಿ ಸ್ವಲ್ಪ ಹಿಂದಕ್ಕೆ ಬಾಗಿ ಪುನಃ ಮುಂದಕ್ಕೆ ಬಾಗಿಕೊಂಡು, ಉದ್ದವಾಗಿ ಬರಬರುತ್ತಾ ಗಾತ್ರದಲ್ಲಿ ಸಣ್ಣದಾಗುತ್ತಾ ತುದಿಯಲ್ಲಿ ಬಹಳ ಚೂಪಾಗಿರುತ್ತವೆ.
ಜಿಂಕೆಯಂತಹ ಕಣ್ಣಿನ ಹಸು
ಇವುಗಳ ಕಣ್ಣುಗಳು ಕಾಂತಿಯುಕ್ತವಾಗಿದ್ದು ಜಿಂಕೆಯ ಕಣ್ಣುಗಳಂತಿರುತ್ತವೆ. ಕಿವಿಗಳು ಸಣ್ಣದಾಗಿದ್ದು ತುದಿಯಲ್ಲಿ ಚೂಪಾಗಿರುತ್ತವೆ. ಇವುಗಳ ಒಳಭಾಗವು ತಿಳಿಹಳದಿ ಬಣ್ಣದಿಂದ ಕೂಡಿರುತ್ತದೆ. ಹೀಗೆ ಸಮಾನಾಂತರವಾಗಿ ನಿಮಿರಿದ ಕಿವಿಗಳು ಇವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ. ಈ ದನಗಳಲ್ಲಿ ಗಂಗೆದೊಗಲು ಬೇರೆ ಜಾತಿಯ ದನಗಳಿಗಿಂತ ಬಹಳ ಸಣ್ಣವಾಗಿರುತ್ತದೆ. ಕಾಲುಗಳು ಮತ್ತು ತೊಡೆಗಳು ಬಲವಾದ ಸ್ನಾಯುಗಳಿಂದ ತುಂಬಿಕೊಂಡಿರುತ್ತವೆ. ಗೊರಸುಗಳು ಬಿರುಸಾಗಿ, ಕಪ್ಪಾಗಿರುತ್ತವೆ. ಇವುಗಳ ಬಾಲ ಉದ್ದವಾಗಿದ್ದು ನೆಲವನ್ನು ಸೋಕುವಂತಿದ್ದು, ತುದಿ ಕಪ್ಪಾಗಿರುತ್ತದೆ. ಈ ದನಗಳು ಸಾಮಾನ್ಯವಾಗಿ 52 ಅಂಗುಲ ಎತ್ತರವಿರುತ್ತವೆ. ಎದೆಯು ವಿಶಾಲವಾಗಿದ್ದು, 60 ರಿಂದ 70 ಅಂಗುಲ ಸುತ್ತಳತೆ ಇರುತ್ತದೆ. ಉಳುಮೆಯ ತಳಿಯಾದ್ದರಿಂದ ಇವುಗಳ ಕೆಚ್ಚಲು ಸಣ್ಣ ಗಾತ್ರದಲ್ಲಿದ್ದು, ತೊಟ್ಟುಗಳು ಚಿಕ್ಕದಾಗಿರುತ್ತವೆ.
ಸ್ವಭಾವದಲ್ಲಿ ತುಸು ಗಡುಸಾದರೂ ಸಹ ಇವುಗಳು ಒಳ್ಳೆಯ ಸ್ನೇಹ ಜೀವಿಗಳು. ಭಾರತದ ಕಚ್ಚಾ ರಸ್ತೆಗೆ ಇವುಗಳು ಹೇಳಿ ಮಾಡಿಸಿದಂತವುಗಳು. ಹೀಗಾಗಿಯೇ ರಸ್ತೆ ಸಮತಟ್ಟಾಗಿಲ್ಲದಿದ್ದರೂ ಸಹ ಎಂತಹ ರಸ್ತೆಯಲ್ಲೂ ಸಾಮಾನ್ಯವಾಗಿ 2 ರಿಂದ 3 ಟನ್ ತೂಕವನ್ನು ಎಳೆಯುವ ಸಾಮರ್ಥ್ಯ ಇವುಗಳಿಗಿದೆ. ಈ ದನಗಳಲ್ಲಿ ಒಂದು ಮುಖ್ಯ ಕೊರತೆಯೆಂದರೆ ಇವು ಹೆಚ್ಚು ಹಾಲನ್ನು ಹಿಂಡುವುದಿಲ್ಲ. ದಿನಕ್ಕೆ 2 ರಿಂದ 3 ಲೀಟರ್‌ನಷ್ಟು ಸಿಗುವ ಇವುಗಳ ಹಾಲು ಮನುಷ್ಯನ ದೇಹಕ್ಕೆ ಹೇಳಿ ಮಾಡಿಸಿದ್ದು ಎಂದೇ ಹೇಳಲಾಗುತ್ತದೆ.
ದಪ್ಪ ಹಾಲು ಕೊಡುವ ಹಳ್ಳಿಕಾರ್ ಹಸು
ಬೇರೆ ತಳಿಗಳಿಗೆ ಹೋಲಿಸಿದ್ದಲ್ಲಿ ಇವುಗಳ ಹಾಲು ದಪ್ಪವಾಗಿದ್ದು, ತಿಳಿ ಹಳದಿ ಬಣ್ಣದಿಂದ ಕೂಡಿರುತ್ತದೆ. ಇಂತಹ ಹಾಲಿನಲ್ಲಿ ಮನುಷ್ಯನಿಗೆ ಅವಶ್ಯಕವಾಗಿ ಬೇಕಾದ ಎಲ್ಲಾ ಪೌಷ್ಠಿಕಾಂಶಗಳು ಅಡಕವಾಗಿರುತ್ತವೆ ಎಂದು ಹೇಳಲಾಗಿದೆ. ಹಿಂದೊಮ್ಮೆ ಇವುಗಳು ಸಹ ಹೆಚ್ಚಿನ ಪ್ರಮಾಣದ ಹಾಲನ್ನು ನೀಡುತ್ತಿದ್ದವು ಎಂಬುದನ್ನು ದಾಖಲೆಗಳು ದೃಢಪಡಿಸುತ್ತವೆ.
ಇವುಗಳ ಹಾಲಿನಿಂದ ಮಾಡಿದ ತುಪ್ಪವು ಸಹ ಆಹಾರದಲ್ಲಿ ಅತಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹುಟ್ಟಿದ ಮಕ್ಕಳಿಗೆ ಈ ತಳಿಯ ಹಾಲು ಮತ್ತು ತುಪ್ಪ ಅಮೃತವೆಂದೇ ಗ್ರಾಮೀಣ ಭಾಗದಲ್ಲಿ ಹೇಳಲಾಗುತ್ತದೆ. ಇದರ ಹಾಲು ಮಕ್ಕಳಿಂದ ಹಿಡಿದು ವಯೋವೃದ್ಧರಲ್ಲಿಯೂ ಸುಲಭವಾಗಿ ಜೀರ್ಣವಾಗುತ್ತದೆ. ರೋಗ ನಿರೋಧಕ ಶಕ್ತಿಗೆ ಹೆಸರುವಾಸಿಯಾದ ಈ ತಳಿಯ ಹಾಲಿನಲ್ಲಿ ಎಲ್ಲಾ ಅಂಶಗಳು ಮಿಳಿತವಾಗಿರುವುದರಿಂದ ಇದರ ಹಾಲು ಸ್ಥಳೀಯವಾಗಿಯೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಮುಖ್ಯವಾಗಿ ಯಾವುದೇ ಅಲೋಪತಿ ಔಷಧಿ ಹಾಗೂ ಇಂಜೆಕ್ಷನ್‌ನ ಅವಶ್ಯಕತೆ ಇವುಗಳಿಗೆ ಇಲ್ಲವಾದ್ದರಿಂದ ಇವುಗಳ ಹಾಲು ಮನುಷ್ಯನ ಬಳಕೆಗೆ ಅತಿ ಯೋಗ್ಯವಾದುದು ಎಂದೇ ಹೇಳಲಾಗುತ್ತದೆ.
ಇವುಗಳಲ್ಲಿ ಹೆಚ್ಚಿನವು ಕಾಡಿನಲ್ಲಿ ಇಲ್ಲವೇ ಹುಲ್ಲುಗಾವಲಿನಲ್ಲಿಯೇ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಇವುಗಳ ಸಾಕಾಣಿಕೆ ವೆಚ್ಚವು ಸಹ ಅತಿ ಕಡಿಮೆ. ಇವುಗಳ ಸಗಣಿ ಮತ್ತು ಗೋಮೂತ್ರವನ್ನು ಸರಿಯಾಗಿ ಬಳಸಿಕೊಂಡಿದ್ದೇ ಆದಲ್ಲಿ ಸಾಕುವವರಿಗೆ ಇವುಗಳಿಂದ ಲಾಭವೇ ಹೆಚ್ಚು. ಇನ್ನು ರೈತರು ಪ್ರತಿ ವರ್ಷ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕೆ ಖರ್ಚು ಮಾಡುತ್ತಿದ್ದ ಲಕ್ಷಾಂತರ ರೂಪಾಯಿಗಳನ್ನು ಇವುಗಳು ಉಳಿಸುತ್ತಿವೆ. ವಿಶೇಷವೇನೆಂದರೆ ದೇಶದಲ್ಲಿ ತಳಿ ಮಾನ್ಯತೆ ಪಡೆದ ಸುಮಾರು 39 ತಳಿಗಳಲ್ಲಿ ಕೆಲವಷ್ಟೇ ಉಳುಮೆಗೆ ಹೆಸರುವಾಸಿಯಾಗಿವೆ. ಅಂತಹ ತಳಿಗಳಲ್ಲಿಯೇ ಹಳ್ಳಿಕಾರ್‌ಗೆ ಅಗ್ರಸ್ಥಾನ.
ಹಿಂದೊಮ್ಮೆ ರಾಜ್ಯದಲ್ಲಿ ಜನ ಸಂಖ್ಯೆಗಿಂತ ಹಳ್ಳಿಕಾರ್ ದನಗಳ ಸಂಖ್ಯೆಯೇ ಹೆಚ್ಚಾಗಿತ್ತು ಎಂಬ ಮಾತಿದೆ. ನಿರಂತರ ಇವುಗಳ ಹತ್ಯೆಯ ನಂತರವೂ ಸಹ ಇಂದಿಗೂ ರಾಜ್ಯದಲ್ಲಿ ಸುಮಾರು 15 ರಿಂದ 16 ಲಕ್ಷದಷ್ಟು ಈ ತಳಿಯ ಹಸುಗಳು ಉಳಿದಿರುವುದನ್ನು ಹಲವಾರು ಸಮೀಕ್ಷೆಗಳು ದೃಢಪಡಿಸುತ್ತವೆ. 2012ರ ಸಮೀಕ್ಷೆಗೆ ಹೋಲಿಸಿದ್ದಲ್ಲಿ ಇವುಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದು ಸ್ಪಷ್ಟವಾಗುತ್ತದೆ. ಹೀಗೆ ಐತಿಹಾಸಿಕ ಹಿನ್ನೆಲೆಯುಳ್ಳ ತಳಿಯಿಂದು ಕ್ರಮೇಣ ನಶಿಸುತ್ತಾ ಕಾಲಘಟ್ಟಗಳಲ್ಲಿ ಹುದುಗಿ ಹೋಗುತ್ತಿದೆ.
ಎಲ್ಲವನ್ನು ಹಾಲೆಂಬ ಬಿಳಿ ದ್ರಾವಣದಿಂದಲೇ ಅಳೆಯುವಂತಹ ಮನಃಸ್ಥಿತಿಗೆ ಬೆಲೆ ಕಟ್ಟಲಾಗದ ವಿಶಿಷ್ಟ ತಳಿಯೊಂದು ನಾಮಾವಶೇಷವಾಗುತ್ತಿದೆ. ಸರ್ಕಾರ ಮತ್ತು ರೈತರ ಅಸಡ್ಡೆ ಒಂದು ಕಡೆಯಾದರೆ ಕೃತಕ ಗರ್ಭಧಾರಣೆ ಮತ್ತು ತಳಿಯ ಅಸಮರ್ಥ ಸಂವರ್ಧನೆ ಈ ತಳಿಯನ್ನು ಇನ್ನಿಲ್ಲವಾಗಿಸುತ್ತಿದೆ. ಇಷ್ಟಾದರೂ ಸಹ ಇಂದಿಗೂ ಈ ತಳಿಗಳ ಜೋಡೆತ್ತುಗಳು ದಾಖಲೆ ಬೆಲೆಗೆ ಮಾರಾಟವಾಗುತ್ತಿರುವುದು ಇವುಗಳ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಸಮಾಧಾನಕರ ಅಂಶವೇನೆಂದರೆ ಕೆಲವೆಡೆ ಈ ತಳಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಸರ್ಕಾರವು ಸಹ ಹೆಸರುಘಟ್ಟ ಮತ್ತು ಕುಣಿಕೇನಹಳ್ಳಿಯಲ್ಲಿ ಈ ತಳಿಯ ಪಾಲನೆ, ಪೋಷಣೆ ಮತ್ತು ಸಂವರ್ಧನೆಯ ಕಾರ್ಯವನ್ನು ಮಾಡುತ್ತಿದೆ. ವಿಪರ್ಯಾಸವೆಂದರೆ ಇವ್ಯಾವುದು ಪ್ರತಿನಿತ್ಯ ಸಾಯುತ್ತಿರುವ ಇವುಗಳ ಸಂಖ್ಯೆಯನ್ನು ಇಂದಿಗೂ ಮೀರಿಸಲಾಗಿಲ್ಲ.
ಇದನ್ನೂ ಓದಿ : ಗೋ ಸಂಪತ್ತು: ತುಪ್ಪದಿಂದ ಯಾವೆಲ್ಲಾ ಔಷಧಿ ತಯಾರಿಸುತ್ತಾರೆ ನೋಡಿ!