ದೇಶದಲ್ಲಿ ಕೃಷಿ ಅನುಸಂಧಾನ ಪರಿಷತ್ತಿನಿಂದ ಸುಮಾರು ನಲವತ್ತು ಗೋತಳಿಗಳು ಗುರುತಿಸಲ್ಪಟ್ಟಿದ್ದು, ಆ ಎಲ್ಲಾ ತಳಿಗಳನ್ನು ಬಾಸ್ ಇಂಡಿಕಸ್ ವರ್ಗಕ್ಕೆ ಸೇರಿಸಲಾಗಿದೆ. ಹೀಗೆ ಸೇರಿಸಲ್ಪಟ್ಟ ಆ ತಳಿಗಳೆಲ್ಲಾ ಅತಿ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಲ್ಲವಾದುವುಗಳಾಗಿವೆ ಎಂದೇ ಹೇಳಲಾಗುತ್ತದೆ.
ಇವುಗಳು ಉತ್ತಮ ಜೀರ್ಣಕ್ರಿಯೆಯನ್ನು ಹೊಂದಿರುವುದರಿಂದ ಹೆಚ್ಚಿನ ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ನೀಡದಿದ್ದರೂ ಸಹ ಕೃಷಿ ಚಟುವಟಿಕೆಗಳಲ್ಲಿ ಎಂದಿನಂತೆ ದುಡಿಯುವ ಸಾಮರ್ಥ್ಯವನ್ನು ಈ ತಳಿಗಳು ಹೊಂದಿರುವುದು ಕಂಡುಬಂದಿದೆ. ಕೃಷಿ ಮಾಡಿದ ನಂತರ ಉಳಿಯುವ ಬೆಳೆಗಳ ಉಳಿಕೆಗಳಿಂದಲೇ ಇವುಗಳನ್ನು ಸಾಕಬಹುದಾಗಿದೆ. ಹೀಗೆ ಅತಿ ಕಡಿಮೆ ಖರ್ಚಿನಲ್ಲಿ ತಮ್ಮಲ್ಲಿರುವ ಗೋವಂಶವನ್ನು ಪೋಷಿಸುತ್ತಿರುವ ಲಕ್ಷಾಂತರ ರೈತಾಪಿ ವರ್ಗಗಳನ್ನು ರಾಜ್ಯದಲ್ಲಿಂದು ನಾವು ಕಾಣಬಹುದಾಗಿದೆ.
ಈ ಎಲ್ಲಾ ತಳಿಗಳನ್ನು ಪ್ರಮುಖವಾಗಿ ಹಾಲಿನ ತಳಿಗಳು ಅಂದರೆ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ನೀಡುವ ತಳಿಗಳು ಮತ್ತು ಉಳುಮೆ ತಳಿಗಳು ಅಂದರೆ ಕೆಲಸಕ್ಕೆ ಯೋಗ್ಯವಾದ ತಳಿಗಳು ಹಾಗೂ ದ್ವಿಗುಣ ತಳಿಗಳು ಅಂದರೆ ಹಾಲು ಮತ್ತು ಉಳುಮೆ ಎರಡಕ್ಕೂ ಯೋಗ್ಯವಾದ ತಳಿಗಳು ಎಂಬುದಾಗಿ ವರ್ಗೀಕರಿಸಲಾಗಿದೆ.
ಇದರಂತೆ ಉತ್ತರ ಭಾರತದಲ್ಲಿರುವ ಹೆಚ್ಚಿನ ಗೋತಳಿಗಳೆಲ್ಲವನ್ನು ಹಾಲಿನ ತಳಿಗಳೆಂದೇ ಗುರುತಿಸಲಾಗುತ್ತದೆ. ಪ್ರಮುಖವಾಗಿ ಗೀರ್, ಸಾಹಿವಾಲ್, ಕೆಂಪುಸಿಂಧಿ ಹಾಗೂ ಥಾರ್‌ಪಾರ್ಕರ್ ತಳಿಗಳನ್ನು ಹಾಲಿನ ತಳಿಗಳೆಂದು ಗುರುತಿಸಲಾಗುತ್ತದೆ. ಹಾಗೆಯೇ ದಕ್ಷಿಣ ಭಾರತದ ಬಹುತೇಕ ತಳಿಗಳನ್ನು ಕೆಲಸಕ್ಕೆ ಯೋಗ್ಯವಾದ ತಳಿಗಳು ಎಂಬುದಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ಹಳ್ಳಿಕಾರ್, ಅಮೃತ್ ಮಹಲ್, ಖಿಲಾರಿ, ಅಂಬ್ಲಾಪಾಡಿ, ಕಂಗಾಯಂ ಮತ್ತು ಬರಗೂರು ತಳಿಗಳು ಪ್ರಮುಖವಾದುವುಗಳಾಗಿವೆ.
ಇವುಗಳು ಅಲ್ಪ ಪ್ರಮಾಣದಲ್ಲಿ ಹಾಲನ್ನು ನೀಡುತ್ತವೆ ಎಂಬುದನ್ನು ಬಿಟ್ಟರೆ ದುಡಿಮೆಯ ವಿಚಾರದಲ್ಲಿ ಇವುಗಳಿಗೆ ಇವುಗಳೇ ಸಾಟಿ. ಇವುಗಳನ್ನು ಹೆಚ್ಚಾಗಿ ಉಳುಮೆಗಷ್ಟೇ ಅಲ್ಲದೆ ಗಾಡಿ ಎಳೆಯಲು ಮತ್ತು ಗೊಬ್ಬರಕ್ಕಾಗಿಯೂ ಸಾಕಲಾಗುತ್ತದೆ. ಹೀಗೆ ಅಲ್ಪ ಪ್ರಮಾಣದಲ್ಲಿ ಹಾಲೆಂಬ ಅಮೃತವನ್ನು ನೀಡಿ ಹೊಲದಲ್ಲಿ ಗಂಟೆ ಗಟ್ಟಲೆ ನಿರಾಯಾಸವಾಗಿ ದುಡಿಯುವ ಇಂತಹ ತಳಿಗಳಲ್ಲಿ ಕರ್ನಾಟಕದ ಹಳ್ಳಿಕಾರ್ ತಳಿ ಅತಿ ಪ್ರಮುಖವಾದುದು ಎಂದು ಹೇಳಲಾಗುತ್ತದೆ. ಹಾಗೆಂದು ಇನ್ನುಳಿದ ತಳಿಗಳು ಇದರಷ್ಟು ದುಡಿಯುವ ಸಾಮರ್ಥ್ಯವನ್ನು ಹೊಂದಿಲ್ಲವೆಂದರ್ಥವೇನಲ್ಲ.
ಹಾಗೆಯೇ ಕೃಷ್ಣಾವ್ಯಾಲಿ ಮತ್ತು ದೇವಣಿ ಗೋತಳಿಗಳನ್ನು ದ್ವಿಗುಣ ಶಕ್ತಿಯ ತಳಿಗಳು ಅಂದರೆ ಹಾಲನ್ನು ನೀಡುವುದಷ್ಟೇ ಅಲ್ಲದೆ ದುಡಿಯುವುದರಲ್ಲಿಯೂ ತಮ್ಮ ಸಹಭಾಗಿತ್ವವನ್ನು ಸಮ ಪ್ರಮಾಣದಲ್ಲಿ ನೀಡುವ ತಳಿಗಳು ಎಂಬುದಾಗಿ ವರ್ಗೀಕರಿಸಲಾಗಿದೆ. ಹೀಗೆ ವರ್ಗೀಕೃತಗೊಂಡ ತಳಿಗಳಲ್ಲಿ ಹಾಲನ್ನು ನೀಡುವ ತಳಿಗಳು ಸ್ವಲ್ಪ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶದಲ್ಲಿ ಕಂಡುಬಂದರೆ, ದುಡಿಮೆಗೆ ಯೋಗ್ಯವಾದ ಮತ್ತು ದ್ವಿಗುಣ ಶಕ್ತಿಯುಳ್ಳ ಗೋತಳಿಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದೆ.
ದ್ವಿಗುಣ ಶಕ್ತಿಯುಳ್ಳ ಗೋತಳಿ ಕೃಷ್ಣಾವ್ಯಾಲಿ
ಅದರಲ್ಲೂ ದ್ವಿಗುಣ ಶಕ್ತಿಯುಳ್ಳ ಗೋತಳಿ ಎಂದೇ ಗುರುತಿಸಲಾಗಿದ್ದ ಕೃಷ್ಣಾವ್ಯಾಲಿ ತಳಿ ಇಂದು ನೂರರ ಆಸುಪಾಸಿನ ಸಂಖ್ಯೆಯಲ್ಲಿರುವುದು ನಿಜಕ್ಕೂ ಆಘಾತಕಾರಿಯಾದುದಾಗಿದೆ. ಕೃಷ್ಣಾ ನದಿ ತೀರದಲ್ಲಿ ಹಿಂದೊಮ್ಮೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದ ಈ ತಳಿಗಳಿಂದು ಭಾಗಶಃ ಸರ್ವನಾಶದ ಹಾದಿ ಹಿಡಿದಿವೆ. ಮತ್ತೊಂದು ದ್ವಿಗುಣ ಶಕ್ತಿಯುಳ್ಳ ತಳಿಯಾದ ದೇವಣಿ ಸಹ ಇದರೊಂದಿಗೆ ಸರದಿ ಸಾಲಿನಲ್ಲಿರುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಗೋಚರವಾಗುತ್ತಿವೆ. ಇವುಗಳಂತೆ ಕೇವಲ ದುಡಿಯುವ ಸಾಮರ್ಥ್ಯವನ್ನು ಹೊಂದಿರುವ ಖಿಲಾರಿ ತಳಿಯ ಉತ್ತಮ ದನಗಳು ಸಹ ಭಾಗಶಃ ಅಳಿವಿನಂಚಿನಲ್ಲಿವೆ.
ಇನ್ನುಳಿದ ಕೆಲವೇ ತಳಿಗಳ ಹೋಲಿಕೆಯಲ್ಲಿ ಹಳ್ಳಿಕಾರ್ ಕೊಂಚ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡುಬರುತ್ತದೆ. ಹೀಗೆ ಹಾಲಿನಿಂದಲೇ ತಳಿಗಳ ಗುಣ ವೈಶಿಷ್ಟ್ಯತೆಯನ್ನು ತುಲನೆ ಮಾಡಿ ನೋಡುವ ಮನಸ್ಥಿತಿಯಿಂದ ಬಹುತೇಕ ತಳಿಗಳಿಂದು ಕಣ್ಮರೆಯಾಗುತ್ತಿವೆ. ಇಷ್ಟಾದರೂ ಸ್ಥಳೀಯ ವಾತಾವರಣ ಹಾಗೂ ಮೇವಿನ ಲಭ್ಯತೆಗೆ ಅನುಗುಣವಾಗಿ ಸಾವಿರಾರು ವರ್ಷಗಳಿಂದ ಸ್ವಾಭಾವಿಕವಾಗಿ ಬೆಳೆದು ಬಂದ ಸಾಕಷ್ಟು ತಳಿಗಳು ನಮ್ಮ ದೇಶದ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿ ಇಂದಿಗೂ ಉಳಿದುಕೊಂಡಿವೆ. ಸ್ಥಳೀಯವಾಗಿ ಲಭ್ಯವಿರುವ ಮೇವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇವುಗಳಿಗೆ ಇರುವುದರಿಂದ ಬಡ ಕುಟುಂಬದವರು ಕೂಡ ಸಾಕಿ ತಮ್ಮ ದೈನಂದಿನ ಚಟುವಟಿಕೆಗಳಿಗೆ ಇವುಗಳನ್ನು ಬಳಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬಕ್ಕೆ ಬೇಕಾದ ಉತ್ಕೃಷ್ಟವಾದ ಹಾಲನ್ನು ಸಹ ಪಡೆಯಬಹುದಾಗಿದೆ. ಈ ಸಾಲಿನಲ್ಲಿ ಹಳ್ಳಿಕಾರ್ ತಳಿಗೆ ಮೊದಲ ಸ್ಥಾನ.
ದಕ್ಷಿಣ ಭಾರತದಲ್ಲಿ ಕಂಡುಬರುವ ಭಾಗಶಃ ಎಲ್ಲಾ ತಳಿಗಳ ಮೂಲ ಹಳ್ಳಿಕಾರ್ ತಳಿ ಎಂಬುದನ್ನು ಸಂಶೋಧನೆಗಳೇ ಸ್ಪಷ್ಟಪಡಿಸುತ್ತಿವೆ. ವಿಪರ್ಯಾಸವೆಂದರೆ ಕರ್ನಾಟಕದಲ್ಲಿ ಕೊಂಚ ಮಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ದುಡಿಮೆಗೆ ಹೆಸರುವಾಸಿಯಾದ ಈ ಐತಿಹಾಸಿಕ ತಳಿ ಜನರ ಅಸಡ್ಡೆ ಹಾಗೂ ಆಧುನಿಕ ಕೃಷಿಯ ಪರಿಣಾಮ ಇನ್ನಿತರೆ ತಳಿಗಳಂತೆ ಕ್ರಮೇಣ ಕಣ್ಮರೆಯಾಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿವೆ. ಎಂತಹ ವಾತಾವರಣಕ್ಕೂ ಹೊಂದಿಕೊಳ್ಳುವ ಗುಣ, ದುಡಿಮೆಯ ಕ್ಷಮತೆ, ರೋಗ ನಿರೋಧಕ ಶಕ್ತಿ ಮತ್ತು ಅತಿ ಕಡಿಮೆ ಮೇವಿನ ಖರ್ಚಿನಲ್ಲಿ ನಿಭಾಯಿಸಬಲ್ಲವಾಗಿದ್ದ ಇವುಗಳಿಂದು ಹೆಚ್ಚಿನ ಸಂಖ್ಯೆಯಲ್ಲಿಂದು ಕೊಟ್ಟಿಗೆಯಿಂದ ಕಸಾಯಿಖಾನೆಯ ದಾರಿ ಹಿಡಿಯುತ್ತಿವೆ.
ಮುಂದಿನ ಜನಾಂಗಕ್ಕೆ ಬೇರೆ ತಳಿಗಳಂತೆ ಈ ತಳಿಯನ್ನು ಸಹ ಉಳಿಸಿ ಹೋಗುವ ಮನಸ್ಥಿತಿ ಇರುವವರು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಇನ್ನೇನು ಕೆಲವೇ ವರ್ಷಗಳಲ್ಲಿ ಇವುಗಳು ಕಣ್ಮರೆಯಾಗುವುದನ್ನು ತಡೆಯಲು ಸಹ ಸಾಧ್ಯವಿಲ್ಲದಂತಹ ಸ್ಥಿತಿ ದಟ್ಟವಾಗಿ ಗೋಚರಿಸುತ್ತಿದೆ.
ಚುರುಕುತನಕ್ಕೆ ಹೆಸರು ಹಳ್ಳಿಕಾರ್
ಹಳೆ ಮೈಸೂರು ಪ್ರಾಂತ್ಯದ ಹೆಮ್ಮೆಯ ತಳಿಯಾದ ಈ ಹಳ್ಳಿಕಾರ್ ತಳಿಗಳು ಬೇರೆ ತಳಿಗಳಿಗೆ ಹೋಲಿಸಿದಲ್ಲಿ ತಮ್ಮ ಕೊಬ್ಬು ರಹಿತ ದೇಹದಾರ್ಢ್ಯ, ಚುರುಕುತನ, ಹುಮ್ಮಸ್ಸು, ವೇಗ ಸಹಿಷ್ಣುತೆಗೆ ಹೆಸರುವಾಸಿಯಾದವುಗಳಾಗಿವೆ. ಹೀಗಾಗಿ ಸಾವಿರಾರು ವರ್ಷಗಳಿಂದ ಕಾವೇರಿ ನದಿ ತೀರದಲ್ಲಿ ನೆಲೆಸಿರುವ ಅದೆಷ್ಟೋ ಜನರಿಗೆ ಈ ದನಗಳು ಇಂದಿಗೂ ಮನೆಯ ಸದಸ್ಯನಾಗಿಯೇ ಉಳಿದುಕೊಂಡಿವೆ. ಬೇರೆಲ್ಲಾ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಮೈಸೂರು ಜಿಲ್ಲೆಯಲ್ಲಿ ಈ ತಳಿಗಳು ಹೆಚ್ಚಾಗಿ ಕಂಡುಬರುತ್ತವೆ. ನಂತರದ ಸ್ಥಾನ ತುಮಕೂರು ಜಿಲ್ಲೆಯದ್ದು. ಹಳೆ ಮೈಸೂರು ಪ್ರಾಂತ್ಯದಲ್ಲಿ ಕೆಂಪು ಮಿಶ್ರಿತ ಮಣ್ಣು ಹೆಚ್ಚಾಗಿದ್ದು ಇದರ ಮೇಲೆ ಬಿದ್ದ ನೀರು ಅತಿ ಬೇಗ ಇಂಗಿ ಹೋಗುತ್ತದೆ. ಹಾಗಾಗಿ ಭೂಮಿ ಮೆದುವಾಗಿರುವಾಗಲೇ ಉಳುಮೆ ಮಾಡಿ ಬೀಜ ನಾಟಿ ಮಾಡಿ ಬಿಡಬೇಕು. ಇಂತಹ ವಾತಾವರಣದಲ್ಲಿ ವೇಗವಾಗಿ ಉಳುಮೆ ಮಾಡುವ ಹಳ್ಳಿಕಾರ್ ದನಗಳು ಈ ಭಾಗದಲ್ಲಿ ಅತಿ ಸೂಕ್ತವಾಗಿರುವುದರಿಂದ ಪ್ರಸಿದ್ಧಿಯನ್ನು ಪಡೆಯಲು ಕಾರಣವಾಗಿವೆ.
ಇವುಗಳು ದಿನದ ಸುಮಾರು ಆರು ಗಂಟೆಗಳಲ್ಲಿ ನೊಗ ಕಟ್ಟಿಕೊಂಡು ನೇಗಿಲನ್ನು ಎಳೆಯುತ್ತಾ 8 ರಿಂದ 10 ಎಕರೆ ಭೂಮಿಯನ್ನು ಉಳುಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗೆಯೇ ಇವುಗಳನ್ನು ಚಕ್ಕಡಿಗೆ ಕಟ್ಟಿದರೆ ದಿನದಲ್ಲಿ ಸುಮಾರು 30 ಮೈಲು ಸಂಚರಿಸಬಲ್ಲ ಸಾಮರ್ಥ್ಯವನ್ನು ಸಹ ಹೊಂದಿವೆ. ಹೀಗೆ ಅಲ್ಪ ಸಮಯದಲ್ಲಿ ಹೆಚ್ಚು ಕೆಲಸವನ್ನು ಚುರುಕಿನಿಂದ ಅತಿ ವೇಗವಾಗಿ ಮಾಡಬಲ್ಲ ಸಾಮರ್ಥ್ಯ ಈ ತಳಿಗಳಿಗೆ ಇರುವುದರಿಂದಲೇ ಈ ಭಾಗಗಳಲ್ಲೆಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಗರ್ಭ ಧರಿಸಿದ ಹಳ್ಳಿಕಾರ್ ದನಗಳನ್ನು ಸಹ ಉಳುಮೆಗೆ ಬಳಸುವುದನ್ನು ನಾವು ಸಾಕಷ್ಟು ಕಡೆಗಳಲ್ಲಿ ಕಾಣಬಹುದಾಗಿದೆ. ನಂತರ ಹೀಗೆ ಬಳಸಲ್ಪಟ್ಟ ದನಗಳು ಪ್ರಸವ ಕಾಲದಲ್ಲಿ ಯಾವುದೇ ತೊಂದರೆ ಇಲ್ಲದೆ ಕರುವಿಗೆ ಜನ್ಮ ನೀಡಿರುವುದು ಕಂಡುಬಂದಿದೆ. ಹೀಗೆ ಹುಟ್ಟಿದ ಕರುಗಳು ಯಾವುದೇ ಉತ್ಕೃಷ್ಟವಾದ ಆಹಾರವಿಲ್ಲದೆಯೂ ಕೇವಲ ತನ್ನ ತಾಯಿ ಹಾಲು ಹಾಗೂ ಸ್ಥಳೀಯ ಮೇವನ್ನು ಸೇವಿಸಿ 9 ರಿಂದ 10 ತಿಂಗಳಲ್ಲಿ ಒಳ್ಳೆಯ ದೇಹದಾರ್ಢ್ಯವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿರುವುದು ಕಂಡುಬಂದಿದೆ.
ಕೃಷಿಗೆ ಸಂಬಂಧಿಸಿದ ಲೇಖನ, ವರದಿಗಳನ್ನು ಓದಲು ಇಲ್ಲಿ (Click Here) ಕ್ಲಿಕ್ ಮಾಡಿ.
ಹಿಂದೆಲ್ಲಾ ಮನೆಯಲ್ಲಿ ಹೆಣ್ಣು ಮಕ್ಕಳು ಗರ್ಭವತಿಯಾದರೆ, ಮನೆಯಲ್ಲಿ ಹಳ್ಳಿಕಾರ್ ಆಕಳು ಇಲ್ಲವಾದ ಪಕ್ಷದಲ್ಲಿ ಕೂಡಲೇ ಒಂದು ಹಳ್ಳಿಕಾರ್ ಹಸುವನ್ನು ತಂದು ಸಾಕುವುದು ವಾಡಿಕೆಯಾಗಿತ್ತು. ಏಕೆಂದರೆ ಗರ್ಭಿಣಿ ಮತ್ತು ಹುಟ್ಟುವ ಮಗುವಿಗೆ ಹಳ್ಳಿಕಾರ್ ಹಸುವಿನ ಹಾಲು, ಮೊಸರು ಮತ್ತು ತುಪ್ಪವನ್ನ ನೀಡುವುದರಿಂದ ತಾಯಿ ಮತ್ತು ಮಗು ಆರೋಗ್ಯವಂತರಾಗಿರುವರೆಂಬ ಬಲವಾದ ನಂಬಿಕೆಯಿತ್ತು. ಇದು ವಾಸ್ತವ ಸತ್ಯವೂ ಹೌದು. ಒಂದು ವರ್ಷದವರೆಗೆ ತಾಯಿ ಹಾಲಿನಿಂದ ಆ ಮಗು ಬೆಳೆದರೆ, ನಂತರದ ಎಲ್ಲಾ ದಿನಗಳು ಆ ಮಗುವಿಗೆ ಹಳ್ಳಿಕಾರ್ ತಳಿಯ ಹಾಲನ್ನೇ ಹೆಚ್ಚಿನಂಶ ನೀಡಲಾಗುತ್ತಿತ್ತು. ಹೀಗೆ ಮನೆಯಲ್ಲೇ ಉತ್ಕೃಷ್ಟ ಗುಣಮಟ್ಟದ ಹಾಲು, ಮೊಸರು ಮತ್ತು ತುಪ್ಪವನ್ನು ಪಡೆಯುವ ಉದ್ದೇಶದಿಂದ ಮತ್ತು ತಮಗಿರುತ್ತಿದ್ದ ಸಣ್ಣ ಸಣ್ಣ ಜಮೀನನ್ನು ಉಳುಮೆ ಮಾಡಲು ಹಳ್ಳಿಕಾರ್ ದನಗಳನ್ನು ಸಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು.
ಇದನ್ನೂ ಓದಿ : ಗೋ ಸಂಪತ್ತು: ದೇಶದ ಅತಿ ಪ್ರಾಚೀನ ಗೋತಳಿ ಹಳ್ಳಿಕಾರ್ !