Site icon Vistara News

ಗೋ ಸಂಪತ್ತು: ದೇಶದ ಅತಿ ಪ್ರಾಚೀನ ಗೋತಳಿ ಹಳ್ಳಿಕಾರ್ !

go sampattu column by shylesh holla about Hallikar Native Cattle Breed Of karnataka

#image_title

ಗೀರ್, ಕಾಂಕ್ರೇಜ್ ಹಾಗೂ ಕರ್ನಾಟಕದ ಹೆಮ್ಮೆಯ ಹಳ್ಳಿಕಾರ್ ತಳಿ ದೇಶದ ಅತಿ ಪ್ರಾಚೀನ ಗೋತಳಿ ಗಳೆಂದು ಹೇಳಲಾಗುತ್ತದೆ. ಹಾಗೆಯೇ ದಕ್ಷಿಣ ಭಾರತದ ಬಹುತೇಕ ತಳಿಗಳ ಮೂಲ ಹಳ್ಳಿಕಾರ್ ತಳಿ ಎಂಬುದಾಗಿಯೂ ಸಹ ಹೇಳಲಾಗುತ್ತದೆ. ನಾಗರಿಕತೆಯ ಹೊಸ್ತಿಲಲ್ಲಿ ನಡೆದಿರಬಹುದೆನ್ನಲಾದ ಒಂದಷ್ಟು ಘಟನೆಗಳು ಇದಕ್ಕೆ ಪೂರಕ ಸಾಕ್ಷಿಯನ್ನು ಸಹ ನೀಡುತ್ತವೆ.

ಹಿಂದೆ ರಾಜ್ಯದ ಮೂಲ ನಿವಾಸಿಗರಿಗೆ ಗೋಪಾಲನೆಯೇ ಮುಖ್ಯ ಜೀವನೋಪಾಯವಾಗಿತ್ತು ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಸಾಕು ದನಗಳ ಹಿಂಡೇ ಇವರ ಆದಾಯದ ಮೂಲವಾಗಿದ್ದವು. ಹೀಗಾಗಿಯೇ ಮರಾಠಿಯಲ್ಲಿ ಇವರಿಗೆ ʻಧನಗರ್’ ಎಂಬ ಹೆಸರು ಬಂದಿರಲು ಸಾಧ್ಯ ಎಂದು ಹೇಳಲಾಗುತ್ತದೆ. ಇವರುಗಳು ಅಲ್ಲಲ್ಲಿ ದನಗಳ ಹಿಂಡನ್ನು ದೊಡ್ಡಿಯಲ್ಲಿ ಕೂಡಿಟ್ಟು ದನಗಳೊಂದಿಗೆ ಬೀಡು ಬಿಡುತ್ತಿದ್ದರು. ಹೀಗಾಗಿ ಈ ದನಗಳ ಹಿಂಡಿಗೆ ʻಹಟ್ಟಿ’ ಎಂದು, ದನಗಾರರಿಗೆ ʻಹಟ್ಟಿಕಾರ’ರೆಂದು ಕರೆಯಲಾಗುತ್ತಿತ್ತು. ಇಂದಿಗೂ ಸಹ ನಮ್ಮಲ್ಲಿ ʻಕರುಹಟ್ಟಿ’ ಎಂಬೆಲ್ಲಾ ಶಬ್ದಗಳು ಬಳಕೆಯಲ್ಲಿರುವುದೇ ಇದಕ್ಕೆ ಸಾಕ್ಷಿ. ಇದರಿಂದ ಈ ಹಟ್ಟಿಕಾರ ದನಗಳಿಗೆ ʻಹಟ್ಟಿ ದನಗಳು’ ಅಥವಾ ʻಹಳ್ಳಿಕಾರ ದನಗಳು’ ಎಂಬುದಾಗಿ ಹೆಸರು ಬಂದಿರಬಹುದು ಎಂಬುದಾಗಿಯೂ ಊಹಿಸಲಾಗುತ್ತದೆ.

ಈ ಹಟ್ಟಿಕಾರರು ಕಾಲಕ್ರಮೇಣ ಕೆಲವು ಅನುಕೂಲವಾದ ಸ್ಥಳಗಳಲ್ಲಿ ನೆಲೆ ನಿಂತ ಪರಿಣಾಮ ಆ ಪ್ರದೇಶಗಳೆಲ್ಲಾ ಜನವಸತಿ ಪ್ರದೇಶಗಳಂತಾದವು. ಹೀಗೆ ಮೊದಲೆಲ್ಲಾ ಕೇವಲ ದನಗಾರರಾಗಿದ್ದ ಹಟ್ಟಿಕಾರರು ಬರಬರುತ್ತಾ ರೈತರಾದರು. ಇದರಿಂದ ಹಳ್ಳಿಗಳು ಬೆಳೆದು ಊರುಗಳಾದವು. ಮುಂದೆ ಅಲ್ಲೆಲ್ಲಾ ಸಾಮೂಹಿಕ ಜೀವನ ಪ್ರಾರಂಭವಾಗಿ ಸಮಾಜದ ರಚನೆಯಾಯಿತು. ಹೀಗೆ ಸಾಮಾಜಿಕ ಜೀವನದ ಏಳಿಗೆಗೆ ಹಳ್ಳಿಕಾರ್ ಆಕಳುಗಳೇ ಅಡಿಗಲ್ಲಾಗುವಂತಾಗಿ, ದನ ಕಾಯುತ್ತಿದ್ದ ಹಟ್ಟಿಕಾರರೇ ಕರ್ನಾಟಕದ ದನಗಳ ಮೂಲ ಪುರುಷರು ಎಂದು ಹೇಳುವಂತಾಯಿತು. ಹೀಗಾಗಿಯೇ ಶಂ.ಬಾ. ಜೋಷಿಯವರು ʻಹಟ್ಟಿಕಾರನೆಂದರೆ ಜೀವಧನಂಗಳು ಸಾಕಿ ಬದುಕುವವನು’ ಎಂಬುದಾಗಿ ತಮ್ಮ ಸಂಶೋಧನಾತ್ಮಕ ʻಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ’ ಎಂಬ ಪುಸ್ತಕದಲ್ಲಿ ಬರೆದಿರುವುದು.

ಕಾಲಕ್ರಮೇಣ ಉತ್ತರ ಭಾರತದ ಕೆಲ ದನಗಾರರು ತಮ್ಮ ದನಗಳ ಹಿಂಡಿನೊಡನೆ ಸಂಚರಿಸುತ್ತಾ ದಕ್ಷಿಣಾಭಿಮುಖವಾಗಿ ಕೆಳಗೆ ಇಳಿದು ಬಂದು ಮೈಸೂರು ಪ್ರಾಂತ್ಯದಲ್ಲಿ ನೆಲೆಸಿರಬಹುದು ಎಂಬುದಾಗಿ ಪ್ರಾಜ್ಞ ಸಂಶೋಧಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಮೈಸೂರಿಗೆ ಬಂದು ನೆಲೆಸಿದವರನ್ನು ಗೊಲ್ಲರು ಎಂದು ಕರೆದಿರಬಹುದು ಎಂಬುದಾಗಿಯೂ ಸಹ ಅಂದಾಜಿಸಲಾಗುತ್ತದೆ.

ಮಹಾಭಾರತದಲ್ಲಿ ಶಿಶುಪಾಲ ಶ್ರೀಕೃಷ್ಣನನ್ನು ಗೊಲ್ಲ ಎಂದು ಕರೆದಿರುವುದು ಇದಕ್ಕೆ ಒಂದು ನಿದರ್ಶನವಷ್ಟೇ. ಹಳೆ ಜಾನಪದ ಸಾಹಿತ್ಯದಲ್ಲಿ ಈ ಗೊಲ್ಲ ಶಬ್ದ ಹಲವಾರು ಬಾರಿ ಕೇಳಿ ಬಂದಿರುವುದನ್ನು ನಾವುಗಳು ಕಾಣಬಹುದು. ಉದಾಹರಣೆಗೆ, ʻʻಧರಣಿ ಮಂಡಲ ಮಧ್ಯದೊಳಗೆ….. ಇರುವ ಕಾಳಿಂಗನೆಂಬ ಗೊಲ್ಲನ ಪರಿಯನಾನೆಂತು ಪೇಳ್ವೆನು….ʼʼ ಈ ಪದ್ಯದಲ್ಲಿ ಗೊಲ್ಲ ಶಬ್ದವನ್ನು ನಾವು ಗಮನಿಸಬಹುದು. ಗೊಲ್ಲ ಎಂದರೆ ಗೋಗಾಯಿ, ದನಗಾರ ಇಲ್ಲವೇ ದನ ಕಾಯುವವನು ಎಂಬೆಲ್ಲಾ ಅರ್ಥಗಳಿವೆ. ಹೀಗೆ ಉತ್ತರದ ಕಡೆಯಿಂದ ಬಂದ ದನಗಾರರು ತಮ್ಮ ದನಗಳ ಹಿಂಡನ್ನು ಕಟ್ಟಿಕೊಂಡು ಅವುಗಳ ಪಾಲನೆಗಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹುಲ್ಲುಗಾವಲು, ನೀರು ಮತ್ತು ಅನುಕೂಲಕರವಾದ ಹವೆಯ ಸ್ಥಳಗಳನ್ನು ಹುಡುಕುತ್ತಾ ತಮ್ಮಲ್ಲಿದ್ದ ದನಗಳನ್ನು ಮೇಯಿಸುತ್ತಾ ತಿರುಗಾಡತೊಡಗಿದರು.

ಹೀಗೆ ತಿರುಗಾಡುವಾಗ ಯಾವ ದನಗಳು ಅನೇಕ ಅನಾನುಕೂಲ ಪರಿಸ್ಥಿತಿ, ಸನ್ನಿವೇಶಗಳಿಗೆ ಮತ್ತು ಕಠಿಣ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಶಕ್ತಿ, ಸಾಮರ್ಥ್ಯವನ್ನು ಹೊಂದಿದ್ದವೋ ಅವುಗಳು ಮಾತ್ರ ಬದುಕಿ ಬಾಳುವಂತಾದವು. ಇದನ್ನೇ ಡಾರ್ವಿನ್‌ನನು ʻಬಲಿಷ್ಠರ ಉಳಿವು’ ಎಂದು ಕರೆಯುವುದರೊಂದಿಗೆ ಪ್ರಕೃತಿಯ ಈ ಕೈವಾಡವನ್ನು ʻಪ್ರಕೃತಿಯ ಆಯ್ಕೆ’ ಎಂಬುದಾಗಿ ಹೇಳಿರುವುದು. ಇಂತಹ ಕಠಿಣ ಪರಿಸ್ಥಿತಿಗೆ ಹೊಂದಿಕೊಂಡು ಬಾಳಿ ಬದುಕಿ ಬಂದ ದನಗಳಲ್ಲಿ ರೋಗವನ್ನು ತಡೆಯುವ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ವರ್ಧಿಸಿತ್ತು. ಅಂದಿನ ಕಾಲದಲ್ಲಿ ಇಂದಿನಂತೆ ಬೇರೆ ಬೇರೆ ಭಾಗಗಳಿಗೆ ತೆರೆಳಲು ದೊಡ್ಡ ಮಾರ್ಗದ ಅನುಕೂಲತೆ ಮತ್ತು ಸಾಗಾಟಕ್ಕೆ ಅವಶ್ಯಕವಾದ ವಾಹನಗಳ ಸೌಕರ್ಯವಿಲ್ಲವಾದ್ದರಿಂದ ದನಗಳು ಅಲ್ಲಲ್ಲಿಯೇ ಉಳಿಯುವಂತಾದವು.

ಹಳ್ಳಿಕಾರ್‌ ಹಸು

ಇದರೊಂದಿಗೆ ಆಗಿನ ಕಾಲದಲ್ಲಿ ಸುರಕ್ಷತೆ ಎಂಬುದು ಇಂದಿನಷ್ಟು ಸುಭದ್ರವಾಗಿಲ್ಲದ ಕಾರಣ ಆಯಾ ಜಾತಿಯ ದನಗಳು ತಮ್ಮ ತಮ್ಮ ಪ್ರದೇಶದಲ್ಲಿಯೇ ಪರಿಶುದ್ಧವಾಗಿ ಉಳಿದು ತಮ್ಮದೇ ಆದ ಒಂದು ವಿಶಿಷ್ಟ ಗುಣವನ್ನು ಸ್ಥಾಪಿಸಿಕೊಂಡವು. ಇದನ್ನು ನಾವು ಇಂದಿಗೂ ಸಹ ಆಯಾ ಸ್ಥಳೀಯ ಉತ್ತಮ ಜಾತಿಯ ದನಗಳಾದ ಸಿಂಧಿ, ಹರಿಯಾಣ, ಹಳ್ಳಿಕಾರ್, ಅಮೃತಮಹಲ್, ಗೀರ್, ಖಿಲಾರಿ, ಓಂಗೋಲ್ ಮೊದಲಾದ ಜಾತಿಯ ದನಗಳಲ್ಲಿ ಕಾಣುವಂತಾಗಿರುವುದು ಎಂಬುದಾಗಿ ಅಂದಾಜಿಸಲಾಗಿದೆ.

ಹೀಗೆ ಉತ್ತರ ಭಾರತದ ದನಗಾರರು ತಮ್ಮ ಜೊತೆಯಲ್ಲಿ ತಂದ ದನಗಳೊಂದಿಗೆ ಮೈಸೂರಿನ ಅಂದಿನ ಸ್ಥಳೀಯ ಹಳ್ಳಿಕಾರ್ ದನಗಳು ಬೆರೆತುದರ ಪರಿಣಾಮವಾಗಿ ಉತ್ತಮ ಉಪಜಾತಿಯ ದನಗಳು ಸಂವರ್ಧಿಸಿದವು ಎಂದು ಹೇಳಲಾಗುತ್ತದೆ. ಈ ದನಗಳ ಮೂಲ ಪುರುಷರಾದ ಗೊಲ್ಲರ ಹೆಸರು ಈಗ ಕೇಳಿಬರದಿದ್ದರೂ ಈ ಹಳ್ಳಿಕಾರ್ ದನಗಳ ಹೆಸರು ಮಾತ್ರ ಇವತ್ತಿಗೂ ಉಳಿದುಕೊಂಡು ಬಂದಿದೆ. ಮೂಲ ಹಳ್ಳಿಕಾರ್ ದನಗಳಿಂದ ಉತ್ಪನ್ನವಾದ ದನಗಳಲ್ಲಿ ಗುಜ್ಜಮಾವು ದನ, ಬೆಟ್ಟದ ಪುರದ ದನ, ಘಾಟಿ ಸುಬ್ರಹ್ಮಣ್ಯದ ದನ, ಸಣ್ಣಮಲ್ಲಿಗೆ ದನ ಹಾಗೂ ಹಾಗಲವಾಡಿ ದನಗಳು ಜನಪ್ರಿಯವಾದುದಾಗಿವೆ.

ಹಳ್ಳಿಕಾರ್ ಜಾತಿಯ ದನಗಳನ್ನು ಮತ್ತು ಅವುಗಳ ಉಪಜಾತಿಯ ದನಗಳನ್ನು ಹಾಸನ, ಬೆಟ್ಟದಪುರ, ಪಿರಿಯಾಪಟ್ಟಣ, ಸಾಲಿಗ್ರಾಮ, ಅತ್ತಿಗುಪ್ಪೆ, ಕೃಷ್ಣರಾಜಪೇಟೆ, ಹುಣಸೂರು, ಕೃಷ್ಣರಾಜನಗರ, ಶ್ರೀರಂಗಪಟ್ಟಣ, ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ, ಕೋಲಾರ, ಹಾಸನ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಇಂದಿಗೂ ಅಲ್ಲಲ್ಲಿ ಕಾಣಬಹುದಾಗಿದೆ. ಇವರಲ್ಲಿ ಬೆಟ್ಟದಪುರ, ಚುಂಚನಕಟ್ಟೆ, ಹೇಮಗಿರಿ, ಮುಡುಕತೊರೆ, ಘಾಟಿ ಸುಬ್ರಹ್ಮಣ್ಯ, ಹಾಸನ, ಹೊಳೆನರಸಿಪುರ, ಶಿವಮೊಗ್ಗ, ರಾಮನಾಥಪುರ, ಸಿದ್ದಗಂಗಾ, ಕ್ಯಾಮೇನಹಳ್ಳಿ ಇತ್ಯಾದಿ ಭಾಗದ ರೈತರು ಬೇರೆಲ್ಲಾ ಭಾಗದ ಜನರಿಗಿಂತ ಹೆಚ್ಚು ಪಶುಪರಿಣಿತರಾಗಿದ್ದರು. ಹೀಗಾಗಿ ಇಂದಿಗೂ ಈ ಭಾಗದ ಪಶುಪಾಲಕರಿಗೆ ಹಳ್ಳಿಕಾರ್ ದನಗಳ ಕುಲ, ವರಸೆ, ಸುಳಿ ಸೇರಿದಂತೆ ಈ ತಳಿಯ ಕುರಿತಾದ ಎಲ್ಲಾ ಅನುಭವ ವಂಶಪಾರಂಪರ‍್ಯವಾಗಿ ಸಾಗಿಬಂದಿದೆ.

ಈ ಕಾರಣದಿಂದಲೇ ಕಾವೇರಿ ನದಿ ಜಲಾಯನದ ಭಾಗವನ್ನು ಈ ತಳಿಯ ತವರೂರು ಎಂದು ಹೇಳಲಾಗಿರುವುದು. ಇದರೊಂದಿಗೆ ದಕ್ಷಿಣ ಭಾರತದ ಹೆಚ್ಚಿನ ಗೋತಳಿಗಳ ಮೂಲ ಈ ಹಳ್ಳಿಕಾರ್ ದನಗಳು ಎಂಬುದಾಗಿ ಸಾರಿ ಹೇಳಿರುವುದು.

ಇಂದಿಗೂ ಸಹ ಕರ್ನಾಟಕದಲ್ಲಿ ಬೇರೆಲ್ಲಾ ತಳಿಗಳ ಹೋಲಿಕೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಕಾರ್ ತಳಿ ಕಂಡುಬರುತ್ತದೆ. ವಿಪರ್ಯಾಸವೆಂದರೆ ಕಸಾಯಿಖಾನೆಯ ದಾರಿ ಹಿಡಿಯುತ್ತಿರುವ ಗೋತಳಿಗಳಲ್ಲಿ ಇವುಗಳದ್ದೇ ಸಿಂಹಪಾಲು. 2012ರ ದನಗಣತಿಯ ಪ್ರಕಾರ ಸುಮಾರು 28.4 ಲಕ್ಷ ಹಳ್ಳಿಕಾರ್ ತಳಿಗಳು ಮಾತ್ರ ಉಳಿದಿರುವುದು ಕಂಡುಬಂದಿದೆ. ಈ ಸಂಖ್ಯೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಕಡಿತವಾಗಿರುವುದಂತೂ ಸತ್ಯ. ಅತಿ ಕಡಿಮೆ ಖರ್ಚಿನಲ್ಲಿ ನಿರ್ವಹಿಸಬಹುದಾದ ಮತ್ತು ರೈತನಿಗೆ ಹೇಳಿಮಾಡಿಸಿದಂತಹ ಶ್ರೇಷ್ಠ ತಳಿಗಳಿವು. ಹಾಗೆಯೇ ಅತಿ ಕಡಿಮೆ ಆಹಾರವನ್ನು ಸೇವಿಸಿ ಅತಿ ಹೆಚ್ಚಿನ ಸಮಯ ರೈತನೊಂದಿಗೆ ಹೊಲ ಗದ್ದೆಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಹೊಂದಿರುವ ವಿಶಿಷ್ಟ ತಳಿಯಿದು.

ಇಷ್ಟಾದರೂ ಸಹ ಇಂದಿನ ದಿನಗಳಲ್ಲಿ ಈ ತಳಿ ರೈತನಿಗೆ ಬೇಡವಾಗಿ ಅವನಿಂದ ಬಹುದೂರವಾಗಿ ಕಸಾಯಿಖಾನೆಯ ಕದ ತಟ್ಟುತ್ತಿರುವುದು ಮಾತ್ರ ವಿಪರ್ಯಾಸ. ಹೀಗೆ ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಅಮಾನುಷವಾಗಿ ಹತ್ಯೆಯಾಗು ತ್ತಿದ್ದರೂ ಸಹ ಇಂದಿಗೂ ರಾಜ್ಯದ ಸುಮಾರು ಶೇಕಡಾ 60ಕ್ಕೂ ಹೆಚ್ಚಿನಷ್ಟು ಭೂಮಿಯನ್ನು ಈ ತಳಿಗಳೇ ಸಾಗುವಳಿ ಮಾಡುತ್ತಿವೆ. ಹೀಗೆ ನಮ್ಮಲ್ಲಿಯ ದನಗಳ ಮತ್ತು ಜನಗಳ ಜೀವನ ಬಾಂಧವ್ಯ ಬಹಳ ಹಿಂದಿನ ಕಾಲದಿಂದ ನಿಕಟವಾಗಿ ಹೆಣೆದುಕೊಂಡು ಬಂದಿರುವುದು ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಹೀಗಾಗಿ ಆಕಳು ಅಳಿದರೆ ನಮ್ಮ ದೇಶ ಉಳಿಯುವ ಎಲ್ಲಾ ಸಾಧ್ಯತೆಗಳೂ ಕಡಿಮೆ ಎನ್ನಲಾಗುತ್ತಿರುವುದು.

ಈ ತಳಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಉದ್ದೇಶದಿಂದ ʻಕರ್ನಾಟಕ ಹಳ್ಳಿಕಾರ್ ಪೋಷಕ ಸಂಘʼ ಮಕ್ಕಳಲ್ಲಿ ಈ ಐತಿಹಾಸಿಕ ತಳಿಯ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳಿಗಾಗಿ ಹಳ್ಳಿಕಾರ್ ತಳಿಯ ಕುರಿತಂತೆ ಹಾಡಿನ ರಚನೆ ಮತ್ತು ಗಾಯನ ಸ್ಪರ್ಧೆಯನ್ನು ಏರ್ಪಡಿಸಿಕೊಂಡು ಬಂದಿದೆ. ಇದಕ್ಕೆ ಸೂಕ್ತ ನಗದು ಬಹುಮಾನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಿದೆ. ಇನ್ನೇಕೆ ತಡ, ಪಾಲಕರು ತಮ್ಮ ಮಕ್ಕಳನ್ನು ಈ ಸ್ಪರ್ಧಾತ್ಮಕ ಚಟುವಟಿಕೆಗೆ ಹುರಿದುಂಭಿಸಿ, ಕಾರ್ಯ ಯೋಜನೆಯನ್ನು ಯಶಸ್ವಿಗೊಳಿಸಲು ಸಹಕರಿಸಬೇಕಾಗಿದೆ.

ಇದನ್ನೂ ಓದಿ : ಗೋ ಸಂಪತ್ತು: ತುಪ್ಪದಿಂದ ಯಾವೆಲ್ಲಾ ಔಷಧಿ ತಯಾರಿಸುತ್ತಾರೆ ನೋಡಿ!

Exit mobile version