ತಾಯಿಯ ಮೊದಲ ಹಾಲು ಮಗುವಿಗೆ ಎಷ್ಟು ಶ್ರೇಷ್ಠವೋ ಅಷ್ಟೇ ಹಸು ಮತ್ತು ಎಮ್ಮೆಯ ಮೊದಲ ಹಾಲು (colostrum milk) ಅವುಗಳ ಕರುಗಳಿಗೂ ಅಷ್ಟೇ ಶ್ರೇಷ್ಠವಾದದು. ಹಸುವಿನ ಗಿಣ್ಣು ಹಾಲು ಸ್ವಲ್ಪ ಪ್ರಮಾಣದಲ್ಲಿ ಬಿಳುಪಾಗಿದ್ದರೆ, ಎಮ್ಮೆಯ ಹಾಲು ನಸು ಹಳದಿ ಬಣ್ಣದಿಂದ ಕೂಡಿರುತ್ತದೆ. ಗಿಣ್ಣು ಹಾಲು ಅಥವಾ ಎಳಗಂದಿ ಹಾಲು ಎಂದು ಕರೆಯಲ್ಪಡುವ ಈ ಹಾಲು ಸಾಮಾನ್ಯವಾಗಿ ಹಳದಿ ಬಣ್ಣದಿಂದಲೇ ಕೂಡಿದ್ದು ಅಧಿಕ ಪೌಷ್ಠಿಕಾಂಶವನ್ನು ಹೊಂದಿರುತ್ತದೆ.
ಈ ಹಾಲನ್ನು ಕಾಯಿಸಿ, ಹೆಪ್ಪು ಹಾಕಲು ಆಗುವುದಿಲ್ಲ. ಕಾಯಿಸಿದರೆ ಒಡೆದುಹೋಗುತ್ತದೆ. ಹೀಗಾಗಿ ಈ ಹಾಲಿನೊಂದಿಗೆ ಇನ್ನಷ್ಟು ಸಾಮಾನ್ಯ ಹಾಲನ್ನು ಬೆರೆಸಿ ಅದರೊಂದಿಗೆ ಬೆಲ್ಲ, ರವೆ, ಅವಲಕ್ಕಿ, ಏಲಕ್ಕಿ ಮುಂತಾದುವನ್ನು ಸೇರಿಸಿ ಗಿಣ್ಣು ಎಂಬ ರುಚಿಕರ ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಖಾದ್ಯವನ್ನು ಕರು ಹಾಕಿದ ಹಸುವಿನ ಮೊದಲ ಹಾಲಿನಿಂದಲೇ ಸಾಮಾನ್ಯವಾಗಿ ತಯಾರು ಮಾಡಲಾಗುತ್ತದೆ. ಹೀಗೆ ಪಲ್ಯದ ಹದ ಅಥವಾ ಹಲ್ವದ ಮಾದರಿಯಲ್ಲಿ ಚಟ್ಟಿ ಗಿಣ್ಣು ಹಾಗೂ ಉದುರು ಗಿಣ್ಣು ಎಂಬುದಾಗಿ ತಯಾರಿಸಲ್ಪಡುವ ಈ ಗಿಣ್ಣೆಂಬ ಖಾದ್ಯ ಅತ್ಯಂತ ರುಚಿಕರವಾಗಿರುತ್ತದೆ.
ಬಾಯಲ್ಲಿ ನೀರೂರಿಸುವ ಈ ಖಾದ್ಯವನ್ನು ಕನ್ನಡದಲ್ಲಿ ಗಿಣ್ಣು ಎಂದು ಕರೆದರೆ ತೆಲುಗಿನಲ್ಲಿ ಜುನ್ನು, ಮರಾಠಿಯಲ್ಲಿ ಕರ್ವಸ್ ಎಂದು ಕರೆಯಲಾಗುತ್ತದೆ. ದೇಸೀ ಖಾದ್ಯಗಳಲ್ಲಿ ಒಂದಾದ, ಅದ್ಭುತ ರುಚಿ ಇರುವ ಇಂತಹ ಗಿಣ್ಣು ಸೇವಿಸುವುದು ನಾಲಿಗೆಗೂ ಹಾಗೂ ದೇಹಕ್ಕೂ ಅತ್ಯಂತ ಉಪಯುಕ್ತವಾದುದು. ಇದರೊಂದಿಗೆ ಗಿಣ್ಣು ಹಾಲನ್ನು ಶರೀರಕ್ಕೆ ಮಾಲೀಶ್ ಮಾಡಲು ಮತ್ತು ಮುರಿದ ಎಲುಬುಗಳನ್ನು ಜೋಡಿಸುವ ಸಂದರ್ಭದಲ್ಲಿ ಅದಕ್ಕೆ ಲೇಪಿಸಿ ಸರಿಪಡಿಸುವ ಪದ್ಧತಿ ಇಂದಿಗೂ ಬಹುತೇಕ ಕಡೆಗಳಲ್ಲಿ ಚಾಲ್ತಿಯಲ್ಲಿದೆ.
ಅತ್ಯಂತ ಪೌಷ್ಟಿಕವಾದದು ಈ ಗಿಣ್ಣು
ಕರು ಹಾಕಿದ ಐದು ದಿನಗಳಲ್ಲಿ ದೊರೆಯುವ ಈ ಹಾಲು ಅತ್ಯಂತ ಪೌಷ್ಟಿಕವಾಗಿದ್ದು, ಗಿಣ್ಣು ತಯಾರಿಕೆಗೆ ಸೂಕ್ತವಾಗಿರುತ್ತದೆ. ಇದರಲ್ಲಿ ಪ್ರೋಟೀನ್, ಕೊಬ್ಬು, ಖನಿಜಗಳ ಜೊತೆಗೆ ಅಪಾರ ಪ್ರಮಾಣದ ರೋಗ ನಿರೋಧಕ ಅಂಶಗಳಿರುವುದು ಕಂಡುಬಂದಿದೆ. ಕರು ಹಾಕಿದ ಸುಮಾರು ಹತ್ತು ದಿನಗಳವರೆಗಿನ ಹಾಲನ್ನು ಗ್ರಾಮೀಣ ಭಾರತದಲ್ಲಿ ಗಿಣ್ಣು ಮಾಡಲಷ್ಟೇ ಬಳಸಲಾಗುತ್ತದೆ. ಕೆಲವೆಡೆ ಗೀಬು ಹಾಲು ಅಥವಾ ಗಿಣ್ಣು ಹಾಲು ಎಂದೂ ಸಹ ಕರೆಯಲ್ಪಡುವ ತುಂಬ ಗಟ್ಟಿ ಇರುವ ಮೊದಲ ಹಾಲನ್ನು ಚೆನ್ನಾಗಿ ಒಣಗಿಸಿ ಬಹು ದಿನಗಳವರೆಗೆ ಇಟ್ಟು ಸೇವಿಸುವ ವ್ಯವಸ್ಥೆಯೂ ಇದೆ. ಹತ್ತು ದಿನದ ನಂತರ ಈ ಹಾಲನ್ನು ಕಾಫಿಗೆ ಮತ್ತು ಮೊಸರಿಗೆ ಉಪ್ಪು ಇಲ್ಲದೆ ಬಳಸಲಾಗುತ್ತದೆ. ಕೆಲವೆಡೆ ಈ ಹಾಲನ್ನು ಸೇವಿಸುವುದು ಶೀತವೆಂದು ಮಕ್ಕಳಿಗೆ ಕೊಡುವುದಿಲ್ಲ. ಎಮ್ಮೆಯ ಗಿಣ್ಣು ಹಾಲು ಸಹ ಬೇಗ ಮಕ್ಕಳಲ್ಲಿ ಶೀತವನ್ನು ಉಂಟು ಮಾಡುತ್ತದೆ ಎಂದೇ ಹೇಳಲಾಗುತ್ತದೆ.
ಹೀಗೆ ಮನುಷ್ಯನಿಗೆ ಸಾಕಷ್ಟು ಉಪಯುಕ್ತವಾದ ಇಂತಹ ಗಿಣ್ಣು ಹಾಲು ಹಸುಗಳ ಕರುಗಳಿಗೆ ಅಮೃತವೆಂದೇ ವೈದ್ಯಕೀಯ ರಂಗದಲ್ಲಿ ಹೇಳಲಾಗಿದೆ. ಇಂದಿನ ಕರುವೇ ನಾಳಿನ ಹಸುವಾಗಿರುವುದರಿಂದ, ಅಂತಹ ಕರು ಆರೋಗ್ಯಯುತವಾಗಿ ಹಸುವಾಗಿ ಬೆಳೆಯಲು ಗಿಣ್ಣು ಹಾಲು ಅತ್ಯಂತ ಅವಶ್ಯಕವಾದುದು. ಈ ಗಿಣ್ಣು ಹಾಲು ಕರು ಹುಟ್ಟುವ ಮೊದಲೇ ಹಸುವಿನ ಕೆಚ್ಚಲಲ್ಲಿ ಶೇಖರಣೆಯಾಗಿರುತ್ತದೆ. ಆಗ ತಾನೇ ಹುಟ್ಟಿದ ಕರುವಿನ ಪಾಲಿಗೆ ಗಿಣ್ಣು ಹಾಲು ನಿಸರ್ಗದತ್ತ ಸಂಜೀವಿನಿ ಎಂದೇ ಹೇಳಲಾಗುತ್ತದೆ. ಇಂತಹ ಗಿಣ್ಣು ಹಾಲು ಯಥೇಚ್ಚವಾಗಿ ಕರುಗಳು ಕುಡಿದು ಆರೋಗ್ಯವಾಗಿ ಮತ್ತು ಸಮೃದ್ಧವಾಗಿ ಬೆಳೆಯುವುದರೊಂದಿಗೆ ಹೆಚ್ಚಿನ ತೂಕವನ್ನು ಸಹ ಪಡೆಯುತ್ತವೆ. ಇಂತಹ ಕರುಗಳು ಮುಂದೆ ಬೇಗ ಬೆದೆಗೆ ಬರುವುದಷ್ಟೇ ಅಲ್ಲದೆ ಬೇಗ ಗರ್ಭವನ್ನು ಸಹ ಕಟ್ಟುತ್ತವೆ. ಪ್ರಮುಖವಾಗಿ ಇವುಗಳು ಕರು ಹಾಕಿದ ನಂತರ ಹೆಚ್ಚಿನ ಪ್ರಮಾಣದ ಹಾಲನ್ನು ಕೊಡುವುದು ಕಂಡುಬಂದಿದೆ.
ಕರುವಿಗೆ ಗಿಣ್ಣು ಹಾಲು ಕುಡಿಸಿ
ಹಸು ಕರು ಹಾಕಿದ ನಂತರ ಕಸ ಅಥವಾ ಮಾಸ ಹಾಕುವುದನ್ನು ಕಾಯದೆ ಕರು ಜನಿಸಿದ 30 ನಿಮಿಷದೊಳಗೆ ಗಿಣ್ಣು ಹಾಲನ್ನು ಕರುವಿಗೆ ಕುಡಿಸಬೇಕು. ಇದಕ್ಕೂ ಮುನ್ನ ಸ್ವಲ್ಪ ಬೆಚ್ಚನೆಯ ನೀರಿನಲ್ಲಿ ಹಸುವಿನ ಕೆಚ್ಚಲನ್ನು ಸ್ವಚ್ಛಗೊಳಿಸಿ, ಮೊದಲ ಒಂದೆರಡು ಹನಿ ಹಾಲನ್ನು ಕರೆದು ಚೆಲ್ಲಿ ನಂತರ ಕರುವಿಗೆ ಕುಡಿಯಲು ಬಿಡಬೇಕು. ಹೀಗೆ ಕರು ಹಾಕಿದ ತಕ್ಷಣ ಹಾಲನ್ನು ಕುಡಿಸುವುದರಿಂದ ಹಸು ಬೇಗ ಕಸ ಅಥವಾ ಮಾಸವನ್ನು ದೇಹದಿಂದ ಹೊರ ಹಾಕಲು ಸಹಾಯಕವಾಗುತ್ತದೆ. ನಂತರ 6 ರಿಂದ 12 ಗಂಟೆಯೊಳಗೆ ಮತ್ತೆ ಒಂದರಿಂದ ಎರಡು ಲೀಟರ್ ಹಾಲು ಕುಡಿಸುವುದು ಉತ್ತಮ.
ಗಂಡು ಮತ್ತು ಹೆಣ್ಣು ಕರುಗಳೆಂಬ ಬೇಧ ಮಾಡದೆ ಗಿಣ್ಣು ಹಾಲನ್ನು ಹುಟ್ಟಿದ ಎಲ್ಲಾ ಕರುಗಳಿಗೆ ಕುಡಿಸಬೇಕು. ಕರುವಿನ ದೇಹ ತೂಕದ ಶೇಕಡಾ ಹತ್ತರಷ್ಟು ಗಿಣ್ಣು ಹಾಲನ್ನು ಸಮ ಭಾಗ ಮಾಡಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಸುವುದು ಅತ್ಯವಶ್ಯ. ಶೇಕಡಾ ಹತ್ತಕ್ಕಿಂತ ಹೆಚ್ಚು ಪ್ರಮಾಣದ ಗಿಣ್ಣು ಹಾಲನ್ನು ಕರುವಿಗೆ ಕುಡಿಸಿದಾಗ ಕೆಲವೊಮ್ಮೆ ಬೇಧಿಯಾಗುತ್ತದೆ. ಕಡಿಮೆ ಗಿಣ್ಣು ಹಾಲನ್ನು ಕುಡಿಯುವ ಕರುಗಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಂಡು, ಹಲವಾರು ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ಇಂತಹ ಕರುಗಳ ಬೆಳವಣಿಗೆ ಸಹಜವಾಗಿ ಕುಂಠಿತಗೊಳ್ಳುತ್ತದೆ. ಸರಿಯಾದ ಸಮಯದಲ್ಲಿ ಗಿಣ್ಣು ಹಾಲು ಸಿಗದ ಕರುಗಳು ಬೇಧಿ, ನೆಗಡಿ, ಜ್ವರ ಇತ್ಯಾದಿ ರೋಗಗಳಿಂದ ಸೊರಗುತ್ತವೆ. ಮುಖ್ಯವಾಗಿ ಗಿಣ್ಣು ಹಾಲನ್ನು ಪರಿಪೂರ್ಣವಾಗಿ ಕುಡಿಯದೆ ಬೆಳೆದ ಕರುಗಳು ಮುಂದಿನ ದಿನಗಳಲ್ಲಿ ತಡವಾಗಿ ಬೆದೆಗೆ ಬರುವುದಷ್ಟೇ ಅಲ್ಲದೆ ನಿಧಾನವಾಗಿ ಗರ್ಭ ಕಟ್ಟುವುದು ಕಂಡುಬಂದಿದೆ.
ನವಜಾತ ಕರುಗಳ ಲೋಳೆ ಪದರದಲ್ಲಿ ಚಿಕ್ಕ ಚಿಕ್ಕ ರಂಧ್ರಗಳಿದ್ದು ಅವುಗಳ ಮೂಲಕ ಗಿಣ್ಣು ಹಾಲಿನಲ್ಲಿ ಯಥೇಚ್ಛವಾಗಿರುವ ಇಮ್ಯೂನೋಗ್ಲೋಬಿನ್ಸ್ ಮತ್ತು ಇತರ ಪೌಷ್ಟಿಕಾಂಶಗಳು ನೇರವಾಗಿ ಅವುಗಳ ರಕ್ತಕ್ಕೆ ಸೇರುತ್ತವೆ. ಈ ರಂಧ್ರಗಳು ಹುಟ್ಟಿದ ಮೊದಲ 12 ಗಂಟೆಗಳ ಕಾಲ ಮಾತ್ರ ತೆರೆದಿದ್ದು ನಂತರ ಮುಚ್ಚಿ ಹೋಗುತ್ತವೆ. ಹೀಗಾಗಿ ಕರು ಹುಟ್ಟಿದ ಅರ್ಧ ಗಂಟೆಯಿಂದ 12 ಗಂಟೆ ಅವಧಿಯಲ್ಲಿ ಸಾಕಷ್ಟು ಗಿಣ್ಣು ಹಾಲು ಕುಡಿಸುವುದು ಬಹು ಮುಖ್ಯ. ಆಧುನಿಕ ವೈಜ್ಞಾನಿಕ ಪರಿಶೋಧನೆಗಳಿಂದ ಹುಟ್ಟಿದ ಕರು ಗಿಣ್ಣು ಹಾಲನ್ನು ಪರಿಪೂರ್ಣವಾಗಿ ಸೇವಿಸಿ ಬೆಳೆಯುವುದರಿಂದ ಅದು ಹೊರಗಿನ ಸೋಂಕು ಜಾಡ್ಯಗಳಿಂದ ರಕ್ಷಿಸಲ್ಪಡುತ್ತದೆ. ಇದಕ್ಕೆ ಕಾರಣ ಗಿಣ್ಣು ಹಾಲಿನಲ್ಲಿ ರೋಗಗಳನ್ನು ಎದುರಿಸಲುಬೇಕಾದ ಇಮ್ಯೂನೋಗ್ಲೋಬಿನ್ಸ್ ಎಂಬ ಪ್ರೋಟೀನ್ ಸೇರಿದಂತೆ ಅದರಲ್ಲಿರುವ ಅಧಿಕ ಪ್ರಮಾಣದ ಪೌಷ್ಟಿಕಾಂಶಗಳೇ ಕಾರಣ ಎಂದೇ ಹೇಳಲಾಗುತ್ತದೆ.
ಗಿಣ್ಣು ಹಾಲಿನಲ್ಲಿದೆ ರೋಗ ನಿರೋಧಕ ಶಕ್ತಿ
ಈ ಹಾಲು ಹೆಚ್ಚಿನ ಪ್ರಮಾಣದ ಕಬ್ಬಿಣಾಂಶ ಮತ್ತು ಲ್ಯಾಕ್ಟೋಸನ್ನು ಹೊಂದಿದ್ದು, ಅಧಿಕ ರೋಗ ನಿರೋಧಕ ಶಕ್ತಿಯನ್ನು ಕರುವಿಗೆ ನೀಡುತ್ತದೆ. ಮೂರು ದಿನಗಳ ನಂತರ ಬರುವ ಹಾಲಿನಲ್ಲಿ ಇವುಗಳ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತಾ ಸಾಧಾರಣ ಹಾಲಿನ ಸ್ಥಿತಿಯುಂಟಾಗುತ್ತದೆ. ಹೀಗೆ ಗಿಣ್ಣು ಹಾಲು ಪೂರ್ಣವಾಗಿ ಸಾಮಾನ್ಯ ಹಾಲಿಗೆ ಪರಿವರ್ತನೆಯಾಗಲು ಸುಮಾರು ಒಂದೆರಡು ವಾರಗಳಾದರೂ ಬೇಕಾಗುತ್ತದೆ.
ಎಮ್ಮೆಗಳಲ್ಲಿ ಮತ್ತು ದೇಶಿ ಹಸುಗಳಲ್ಲಿ ಗಿಣ್ಣು ಹಾಲಿನ ಪ್ರಮಾಣ ಕಡಿಮೆ ಇರುವುದರಿಂದ ಕರುಗಳಿಗೆ ಮೊದಲ ಮೂರು ದಿನ ಗಿಣ್ಣು ಹಾಲನ್ನು ಕುಡಿಯಲು ಬಿಡುವುದು ಅವುಗಳ ಬೆಳವಣಿಗೆಯ ದೃಷ್ಟಿಯಿಂದ ಅತಿ ಸೂಕ್ತ ಮತ್ತು ಅವಶ್ಯಕವೂ ಆಗಿದೆ.
ಆಗ ತಾನೆ ಹುಟ್ಟಿದ ಕರುಗಳಿಗೆ ಗಿಣ್ಣು ಹಾಲು ಶಕ್ತಿಯನ್ನು ಒದಗಿಸಿ ದೇಹದ ಉಷ್ಣತೆಯನ್ನು ಕಾಪಾಡುವುದು ಸಾಬೀತಾಗಿದೆ. ಇದರಲ್ಲಿ ಹೇರಳವಾಗಿ ಲಭ್ಯವಿರುವ ವಿಟಮಿನ್ ಮತ್ತು ಖನಿಜಾಂಶಗಳು ಕರು ಪಚನ ಕ್ರಿಯೆಯನ್ನು ಪ್ರಾರಂಭಿಸಲು ಮತ್ತು ಅದರ ಜೀರ್ಣಾಂಗಗಳ ಬೆಳವಣಿಗೆಗೆ ಸಹಾಯಮಾಡುವುದು ದೃಢಪಟ್ಟಿದೆ. ಹಾಗೆಯೇ ಕರುಗಳು ಹಾಕುವ ಮೊದಲ ಸಗಣಿಯನ್ನು ಮೃದುವಾಗಿ ಮಾಡಿ, ಅದು ಸರಾಗವಾಗಿ ಹೊರಬರಲು ಕರುಗಳಿಗೆ ಗಿಣ್ಣು ಹಾಲಿನ ಸೇವನೆ ಅತಿ ಅವಶ್ಯಕವಾದುದಾಗಿದೆ.
ಈ ಎಲ್ಲಾ ಕಾರಣಗಳಿಂದಲೇ ಆಧುನಿಕ ಪಶು ವೈದ್ಯಕೀಯಶಾಸ್ತ್ರ ಗಿಣ್ಣು ಹಾಲು ಕರುವಿಗೆ ಅಮೃತ ಸಮಾನ ಎಂದು ಹೇಳುವುದರೊಂದಿಗೆ ಗಿಣ್ಣು ಹಾಲಿನಲ್ಲಿ ಕರುವಿನ ಬೆಳವಣಿಗೆಗೆ ಬೇಕಾದ ಸಸಾರಜನಕ, ವಿಟಮಿನ್ಸ್ ಹಾಗೂ ರೋಗ ನಿರೋಧಕ ಶಕ್ತಿ ಒದಗಿಸಬಲ್ಲ ಜೀವಸತ್ವಗಳ ಭಂಡಾರವೇ ಅಡಗಿದೆ ಎಂದು ಹೇಳಿದೆ. ಇನ್ನು ಕೆಲವೊಂದು ಭಾಗದ ಜನರಲ್ಲಿ ಗಿಣ್ಣು ಹಾಲನ್ನು ಕರುಗಳಿಗೆ ಹೆಚ್ಚು ಕುಡಿಸಿದರೆ ಜಂತು ಹುಳುಗಳಾಗುತ್ತವೆ ಎಂಬ ಶುದ್ಧ ತಪ್ಪು ಕಲ್ಪನೆಯಿದೆ.
ಇದನ್ನೂ ಓದಿ : ಗೋ ಸಂಪತ್ತು : ಸಗಣಿಯ ಬೂದಿಗೆ ತಲೆಬಾಗುತ್ತಿರುವ ವೈಜ್ಞಾನಿಕ ಜಗತ್ತು