Site icon Vistara News

ಗೋ ಸಂಪತ್ತು : ಸಗಣಿಯ ಬೂದಿಗೆ ತಲೆಬಾಗುತ್ತಿರುವ ವೈಜ್ಞಾನಿಕ ಜಗತ್ತು

desi cow dung vibhuti

ವಿಭೂತಿ

ಇಂದು ಜಗತ್ತಿನಲ್ಲಿ ಶುದ್ಧ ಕುಡಿಯುವ ನೀರಿಗೆ ಆಹಾಕಾರ ಎದ್ದಿದೆ. ಇದರೊಂದಿಗೆ ನೀರನ್ನು ಶುದ್ಧೀಕರಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಸಗಣಿಯ ಬೂದಿಯಿಂದ ನೀರನ್ನು ಶುದ್ಧೀಕರಿಸಬಹುದು ಎಂಬುದನ್ನು ವೈಜ್ಞಾನಿಕ ಜಗತ್ತು ಕಂಡುಕೊಂಡು ಕಾರ್ಯಪ್ರವರ್ತವಾಗಿದೆ. ಸಾಮಾನ್ಯವಾಗಿ ನೀರನ್ನು ಶುದ್ಧಿ ಮಾಡುವ ವಿಧಾನದಲ್ಲಿ ಕ್ಲೋರಿನ್ ಸೇರಿದಂತೆ ಸಾಕಷ್ಟು ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಹೀಗೆ ನೀರನ್ನು ಶುದ್ಧಿ ಮಾಡಿದಾಗ ಅದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮಗಳು ಉಂಟಾಗುವುದು ಸಹಜವೆನ್ನುವಂತಾಗಿದೆ.

ಇತ್ತೀಚಿನ ವಿಜ್ಞಾನಿಗಳ ಸಂಶೋಧನೆಯಿಂದ ಸಗಣಿಯ ಬೂದಿ ಪ್ರಪಂಚದ ಒಂದು ಅತ್ಯಂತ ಸಮರ್ಪಕ ನೀರನ್ನು ಶುದ್ಧೀಕರಿಸುವ ಸಾಧನ ಎಂಬುದನ್ನು ಸಾಬೀತುಪಡಿಸಿದೆ. ಒಂದೆರಡು ಚಿಟಿಕೆ ಸಗಣಿಯ ಬೂದಿಯನ್ನು ಮಲೀನವಾದ ಕೆಲವು ಲೀಟರ್ ನೀರಿಗೆ ಹಾಕುವುದರಿಂದ ಅದರಲ್ಲಿರುವ ಎಲ್ಲಾ ರೀತಿಯ ಬ್ಯಾಕ್ಟೀರಿಯಾಗಳು ನಾಶವಾಗುವುದು ದೃಢಪಟ್ಟಿದೆ.

ಹಾಗೆಯೇ ಸಗಣಿಯ ಬೂದಿಯಲ್ಲಿ ʻವಿಟಮಿನ್-ಎʼ ಅಂಶವಿರುವುದು ಪತ್ತೆಯಾಗಿದೆ. ಇದರೊಂದಿಗೆ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ಸಲ್ಫರ್, ಫಾಸ್ಫರಸ್, ಪೊಟಾಷಿಯಂ, ಸೋಡಿಯಂ, ಅರ್‌ಸೆನಿಕ್, ಅನ್ಟಿಮೋನಿ, ಬಿಸ್ಮತ್, ವೆನಡಿಯಮ್, ರೋಡಿಯಂ, ಟೈಟಾನಿಯಂ, ಪ್ಲಾಟಿನಂ, ಸೆಲೆನಿಯಂ ಸೇರಿದಂತೆ ನೂರಕ್ಕೂ ಹೆಚ್ಚು ಖನಿಜಾಂಶವಿರುವುದು ಪತ್ತೆಯಾಗಿದೆ.

ವಿಷಾಣು ನಾಶಪಡಿಸುವ ಶಕ್ತಿ

ಬೆಂಗಳೂರಿನ ನಿವಾಸಿಯಾದ ಕಿರಣ್ ಕುಮಾರ್ ಎಂಬ ಗೋಪ್ರೇಮಿಯೊಬ್ಬ ಈ ನಿಟ್ಟಿನಲ್ಲಿ ನಿರಂತರ ಸಂಶೋಧನೆಯನ್ನು ನಡೆಸಿ ಯಶಸ್ಸನ್ನು ಕಂಡಿದ್ದಾನೆ. ಈತ 2019ರಲ್ಲಿ ಅತ್ಯಂತ ಕಲುಷಿತವಾಗಿದ್ದ ಬೆಂಗಳೂರಿನ ಬೆಳ್ಳಂದೂರು ಕೆರೆಯ ನೀರಿನ ಸ್ಯಾಂಪಲ್‌ನ್ನು ಸಂಗ್ರಹಿಸಿ ಅದಕ್ಕೆ ಸಗಣಿಯ ಬೂದಿಯಿಂದ ಸಿದ್ಧಪಡಿಸಿದ ದ್ರಾವಣವನ್ನು ಹಾಕಿದಾಗ, ಮಲೀನವಾದ ನೀರಿನಲ್ಲಿದ್ದ ಅಷ್ಟು ವಿಷಾಣುಗಳು ಸಂಪೂರ್ಣವಾಗಿ ನಾಶವಾಗಿರುವುದು ಲ್ಯಾಬೋರೇಟರಿ ಪರೀಕ್ಷೆಯಿಂದ ದೃಢಪಟ್ಟಿದೆ. ಇದರಿಂದ ಉತ್ತೇಜಿತಗೊಂಡಿರುವ ಈತ ಈ ಕುರಿತಂತೆ ಇನ್ನು ಹೆಚ್ಚಿನ ಸಂಶೋಧನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ.

ಹೀಗೆ ಬಳಸುವ ಸಗಣಿಯ ಬೂದಿ ಅತಿ ಕಡಿಮೆ ಬೆಲೆಗೆ ದೊರೆಯಲಿದ್ದು, ಯಾವುದೇ ಅಡ್ಡ ಪರಿಣಾಮದ ಭಯವಿಲ್ಲ ಎಂದೇ ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ನೀರನ್ನು ಶುದ್ಧೀಕರಿಸುವ ವಿಧಾನ ದುಬಾರಿಯಾಗಿದ್ದು, ಶುದ್ಧೀಕರಣಕ್ಕೆ ಹೆಚ್ಚಿನ ಹಣದೊಂದಿಗೆ ಸ್ಥಳದ ಅವಶ್ಯಕತೆಯೂ ಅತ್ಯಗತ್ಯವಾಗಿದೆ. ಇದರೊಂದಿಗೆ ಶುದ್ಧೀಕರಿಸಿದ ನೀರನ್ನು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ತುಂಬುವುದು ಇನ್ನು ಹೆಚ್ಚಿನ ಹೊರೆಯನ್ನು ತರುವುದರೊಂದಿಗೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಬೀರುವುದು ಕಂಡುಬಂದಿದೆ. ಆದರೆ ಯಾವುದೇ ಅಡ್ಡ ಪರಿಣಾಮವಿಲ್ಲದೆ ಸಗಣಿಯ ಬೂದಿಯಿಂದ ಅತಿ ಕಡಿಮೆ ಬೆಲೆಗೆ ನೀರನ್ನು ಶುದ್ಧೀಕರಿಸುವುದು ಹಲವು ಸಂಶೋಧನೆಗಳಿಂದ ದೃಢಪಟ್ಟಿದೆ.

ನೀರು ಶುದ್ಧಿಗೂ ಸಗಣಿ ಬೂದಿ ಬಳಕೆ

ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ನೀರನ್ನು ಶುದ್ಧೀಕರಿಸುವ ಆರ್.ಓ. (ರಿವರ್ಸ್ ಆಸ್ಮೋಸೀಸ್) ವಿಧಾನ ಮಾನವನ ದೇಹಕ್ಕೆ ಹಾನಿಕಾರಕವಾದುದು ಎಂಬುದನ್ನು ಹಲವು ಸಮೀಕ್ಷೆಗಳು ಹೇಳುತ್ತಿವೆ. ಇದರಿಂದ ಹೊರಹೊಮ್ಮುವ ಅಲ್ಫಾ ನೇರಳೆ ಬಣ್ಣದ ರೇಡಿಯೇಷನ್ ವಿಕಿರಣಗಳಿಂದ ಮನುಷ್ಯನ ದೇಹದಲ್ಲಿ ಕ್ಯಾನ್ಸರ್, ಅಂಗಾಂಗಗಳ ಹಾನಿ ಹಾಗೂ ಅಸ್ಥಿರಂಧ್ರತೆ ಸೇರಿದಂತೆ ನಾನಾ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿದೆಯಂತೆ. ಹಾಗೆಯೇ ಈ ಶುದ್ಧೀಕರಣದ ವಿಧಾನದಲ್ಲಿ ನೀರಿನಲ್ಲಿರುವ ಮಾನವನಿಗೆ ಅತಿ ಅವಶ್ಯಕವಾದ ಕೆಲವೊಂದು ಅಂಶಗಳು ಸಹ ನಾಶವಾಗುವುದು ಕಂಡುಬಂದಿದೆಯಂತೆ. ಹೀಗಾಗಿ ಇಂದು ಬಾಟಲಿಯಲ್ಲಿ ಶೇಖರಿಸಲ್ಪಟ್ಟ ಹಾಗೂ ಆರ್.ಓ. ವಿಧಾನದಿಂದ ಶುದ್ಧೀಕರಿಸಿದ ನೀರು ಕುಡಿಯಲು ಅಪಾಯವೆನ್ನುವಂತಹ ಸ್ಥಿತಿ ನಿರ್ಮಾಣವಾಗುತ್ತಿರುವಾಗ ಸಗಣಿಯ ಬೂದಿ ವರವಾಗಿ ಪರಿಣಮಿಸಿದೆ.

ಸಗಣಿಯ ಬೂದಿಯಲ್ಲಿ ನೀರಿನಲ್ಲಿರುವ ಪಿ.ಹೆಚ್. ಗುಣಮಟ್ಟವನ್ನು ಹೆಚ್ಚಿಸುವ ಗುಣವಿರುವುದು ಸಾಬೀತಾಗಿದೆ. ನಗರವಾಸಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವ ಸಮಸ್ಯೆ ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಗಡಸು ಇಲ್ಲವೇ ಬೋರ್‌ವೆಲ್ ನೀರು ಎಂದು ಹೇಳಲಾಗುತ್ತದೆ. ವಿಶೇಷವೆಂದರೆ ಇಂತಹ ಗಡಸು ನೀರನ್ನು ಸಗಣಿಯ ಬೂದಿಯಿಂದ ಶುದ್ಧವಾಗಿಸಿ ಸ್ನಾನ ಮಾಡುವುದರಿಂದ ಉದುರುವ ಕೂದಲಿನಿಂದ ಮುಕ್ತಿಯನ್ನು ಪಡೆಯಬಹುದು. ಇನ್ನು ದೇಹದಲ್ಲಾಗುವ ಹಲವು ಗಾಯಗಳಿಗೆ ಸಗಣಿಯ ಬೂದಿ ಸಂಜೀವಿನಿಯಂತೆ ಕೆಲಸ ಮಾಡುವುದು ದೃಢಪಟ್ಟಿದೆ.

ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಪೀಡಿತರಲ್ಲಿ ಗಾಯಗಳು ಸಾಮಾನ್ಯವಾಗಿ ಬೇಗನೇ ಒಣಗುವುದಿಲ್ಲ ಮತ್ತು ವಾಸಿಯಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸಗಣಿಯ ಬೂದಿಯನ್ನು ಗಾಯಗಳ ಮೇಲೆ ಲೇಪಿಸಿದಾಗ, ಗಾಯಗಳು ಆಶ್ಚರ್ಯಕರ ರೀತಿಯಲ್ಲಿ ಅತಿ ಬೇಗನೇ ಗುಣವಾಗುವುದು ಕಂಡುಬಂದಿದೆ. ಇದಕ್ಕೆ ಕಾರಣ ಸಗಣಿಯ ಬೂದಿಯಲ್ಲಿರುವ ನಂಜು ನಿರೋಧಕ ಗುಣ ಎಂದೇ ಹೇಳಲಾಗಿದೆ. ಇದರೊಂದಿಗೆ ಚರ್ಮ ಸಂಬಂಧಿ ಕಾಯಿಲೆಗಳಿಗೆ ಸಗಣಿಯ ಬೂದಿಯ ಚಿಕಿತ್ಸೆ ಉತ್ತಮ ಫಲಿತಾಂಶವನ್ನು ನೀಡುವುದು ದೃಢಪಟ್ಟಿದೆ.

ವಿಭೂತಿ ಕಾಯಿಲೆಗಳಿಗೆ ರಾಮಬಾಣ

ಇನ್ನು ದೇಶಿ ಗೋವಿನ ಸಗಣಿಯಿಂದ ತಯಾರಿಸಿದಂತಹ ವಿಭೂತಿಯಂತೂ ಹಲವು ಕಾಯಿಲೆಗಳಿಗೆ ರಾಮಬಾಣವಾಗಿ ಕಂಡುಬಂದಿದೆ. ವಿಭೂತಿಯನ್ನು ದೇಹದ ಕೆಲವು ಭಾಗಗಳಿಗೆ ಪ್ರತಿ ನಿತ್ಯ ಹಚ್ಚುವುದರಿಂದ ಏಕಾಗ್ರತೆ ಹೆಚ್ಚುವುದರೊಂದಿಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು ದೃಢಪಟ್ಟಿದೆ. ಇಂದಿಗೂ ಅಘೋರಿಗಳು ಸಗಣಿಯ ಬೂದಿಯನ್ನು ಮೈಕೈಗೆಲ್ಲಾ ಹಚ್ಚಿಕೊಳ್ಳುವುದರ ಹಿಂದಿನ ವೈಜ್ಞಾನಿಕ ಮರ್ಮ ಇದರಿಂದ ತಿಳಿಯುತ್ತದೆ.

ಸಗಣಿಯ ಬೂದಿ ಕೃಷಿಯಲ್ಲಿಯೂ ತನ್ನ ಕರಾಮತ್ತನ್ನು ಪ್ರದರ್ಶಿಸುತ್ತಾ ಕೀಟನಾಶಕವಾಗಿಯೂ ಕೆಲಸ ಮಾಡುವುದು ಸಾಬೀತಾಗಿದೆ. ಇದನ್ನು ಬೆಳೆಗಳ ಮೇಲೆ ಎರಚುವುದರಿಂದ ಕೀಟಗಳ ಹಾವಳಿ ನಿಯಂತ್ರಣಕ್ಕೆ ಬರುವುದು ಕಂಡುಬಂದಿದೆ. ಹಾಗೆಯೇ ಗಿಡಗಳಿಗೆ ಬಾಧಿಸುವ ಹಲವು ವಿಧದ ರೋಗಗಳು ಹತ್ತಿರ ಸುಳಿಯದಂತಾಗುವುದು ದೃಢಪಟ್ಟಿದೆ. ಮುಖ್ಯವಾಗಿ ಗಿಡಗಳ ಎಲೆಗಳಿಗೆ ಬಾಧಿಸುವ ಹಲವು ವಿವಿಧ ರೋಗಗಳಿಗೆ ಸಗಣಿಯ ಬೂದಿಯನ್ನು ಅದರ ಮೇಲೆ ಹಾಕುವುದರಿಂದ ಲಾಭವನ್ನು ಪಡೆಯಬಹುದಾಗಿದೆ. ಇದು ಗಿಡಗಳ ಹಾಗೂ ಭೂಮಿಯ ಮೇಲೆ ಬಿದ್ದರೂ ಉಪಕಾರಿಯೇ ಹೊರತು ಎಂದಿಗೂ ಅಪಾಯಕಾರಿಯಲ್ಲ. ಆದರೆ ಕೀಟನಾಶಕಗಳು ಹಾಗಲ್ಲ. ಇವು ಗಿಡಗಳ ಮೇಲೆ ಹಾಗೂ ಬೆಳೆದ ಬೆಳೆಗಳ ಮೇಲೆ ಬಿದ್ದರೂ ಮತ್ತು ನೆಲದ ಮೇಲೆ ಬಿದ್ದರೂ ಅತಿ ಕೆಟ್ಟ ಪರಿಣಾಮವನ್ನು ಬೀರುವುದು ಸಾಬೀತಾಗಿದೆ.

ಹಾಗೆಯೇ ಬೀಜ ಕೆಡದಂತೆ ಇಡಲು ಸಗಣಿಯ ಬೂದಿಯನ್ನು ಇಂದಿಗೂ ಬಹುತೇಕ ಕಡೆಗಳಲ್ಲಿ ಬಳಸಲಾಗುತ್ತಿದೆ. ಇದರಿಂದ ಬೀಜ ಕೆಡದೇ ಅದರಲ್ಲಿ ಪೌಷ್ಠಿಕಾಂಶಗಳು ಹೆಚ್ಚುವುದನ್ನು ನಮ್ಮ ಪೂರ್ವಜರು ಅಂದೇ ಕಂಡುಕೊಂಡಿದ್ದರು. ಬೀಜ ನೆಡುವ ಕ್ರಮದಲ್ಲೂ ಸಹ ಸಗಣಿಯ ಬೂದಿಯ ಪಾತ್ರ ಬಹುಮುಖ್ಯವಾದುದಾಗಿದೆ.
ಸಗಣಿಯ ಬೂದಿ ಪಾತ್ರೆಗಳನ್ನು ತೊಳೆಯಲು ಅತಿ ಸಮರ್ಪಕವಾದ ವಸ್ತುವಾಗಿದ್ದು ಯಾವುದೇ ಡಿಶ್ ವಾಶ್‌ಗಿಂತ ಪರಿಣಾಮಕಾರಿಯಾದುದಾಗಿದೆ. ಇದರಲ್ಲಿ ಎಣ್ಣೆ ಸೇರಿದಂತೆ ಎಲ್ಲಾ ಜಿಡ್ಡಿನ ಪದಾರ್ಥಗಳನ್ನು ಇನ್ನಿಲ್ಲವಾಗಿಸುವ ಸಾಮರ್ಥ್ಯವಿರುವುದು ಕಂಡುಬಂದಿದೆ. ಹೀಗಾಗಿ ತಾಮ್ರದ ಪಾತ್ರೆಗಳಿಗೆ ಸಗಣಿಯ ಬೂದಿ ಒಳ್ಳೆಯ ಫಲಿತಾಂಶವನ್ನು ನೀಡುವುದನ್ನು ಕಾಣಬಹುದಾಗಿದೆ.

ದೇಸಿ ಹಸುವಿನ ಸಗಣಿಯನ್ನು ಒಣಗಿಸಿ ಸುಟ್ಟರೆ ಬೂದಿ ದೊರೆಯುತ್ತದೆ.

ಪಾತ್ರೆ ತೊಳೆಯಲೂ ಬಳಕೆ!

ಸಗಣಿಯ ಬೂದಿಯೊಂದಿಗೆ ಹುಣಸೇಹಣ್ಣನ್ನು ಮಿಶ್ರಣ ಮಾಡಿ ತಾಮ್ರದ ಪಾತ್ರೆಯನ್ನು ತೊಳೆಯುವುದು ಅತಿ ಹಿಂದಿನಿಂದ ಬಂದಂತ ಒಂದು ಸಂಪ್ರದಾಯ. ಕೆಲವು ದಶಮಾನಗಳ ಹಿಂದಿನವರೆಗೂ ಇದೇ ವಿಧಾನ ನಗರ ಹಾಗೂ ಗ್ರಾಮೀಣ ಭಾರತದಲ್ಲಿ ರೂಢಿಯಲ್ಲಿತ್ತು. ಈ ವಿಧಾನದಲ್ಲಿಯೇ ತಾಮ್ರ ಹಾಗೂ ಇನ್ನಿತರೆ ಮನೆಯ ಪಾತ್ರೆಗಳು ಬೆಳಗುತ್ತಿದ್ದವು, ಪಳಪಳನೇ ಹೊಳೆಯುತ್ತಿದ್ದವು. ಇದರಲ್ಲಿರುವ ಉತ್ಕರ್ಷಣ ಸ್ವಭಾವವೇ ಪಾತ್ರೆಗಳಿಗೆ ಹೊಳಪನ್ನು ನೀಡುವಲ್ಲಿ ಸಹಕಾರಿಯಾಗಿತ್ತು.

ಇನ್ನು ಬಹುತೇಕ ಕಡೆಗಳಲ್ಲಿ ಮಣ್ಣು ಹಾಗೂ ಲಿಂಬೆಹಣ್ಣಿನೊಂದಿಗೆ ಸಗಣಿಯ ಬೂದಿಯನ್ನು ಮಿಶ್ರಣ ಮಾಡಿ ಗಾರೆಯಂತೆ ಬಳಸುವ ವಿಧಾನ ಇಂದಿಗೂ ಚಾಲ್ತಿಯಲ್ಲಿದೆ. ದೇಶದ ಹಲವೆಡೆ ಸಗಣಿಯ ಬೂದಿಯಿಂದ ಇಟ್ಟಿಗೆಗಳನ್ನು ತಯಾರಿಸಲಾಗುತ್ತಿದೆ. ಇಂತಹ ಇಟ್ಟಿಗೆಗಳು ಪರಿಸರ ಸ್ನೇಹಿಯಾಗಿದ್ದು, ಮನೆಯ ಒಳಗಿನ ತಾಪಮಾನವನ್ನು ನಿಯಂತ್ರಿಸುವುದು ಕಂಡುಬಂದಿದೆ. ಇನ್ನು ಇಂದಿಗೂ ಬಹುತೇಕ ಗ್ರಾಮೀಣ ಭಾರತದಲ್ಲಿ ಸಗಣಿಯ ಬೂದಿಯೇ ಹಲ್ಲನ್ನು ಉಜ್ಜುವ ಸಾಧನವಾಗಿದೆ. ಇದೇ ಕಾರಣಕ್ಕೆ ಇರಬಹುದು, ಇಂದಿಗೂ ಗ್ರಾಮೀಣ ಭಾರತೀಯರಲ್ಲಿ ಗುಟ್ಕಾ ಸೇರಿದಂತೆ ಇನ್ನಿತರೆ ದುಶ್ಚಟಗಳು ನಗರ ವಾಸಿಗಳಿಗಿಂತ ಹೆಚ್ಚಾಗಿದ್ದರೂ ಅವರಲ್ಲಿ ದಂತ ಸಮಸ್ಯೆಗಳು ಅತಿ ಕಡಿಮೆ ಎಂದೇ ಹೇಳಲಾಗಿದೆ.

ನಮಗಿಂತ ಒಂದು ಹೆಜ್ಜೆ ಮುಂದಿರುವ ಜಪಾನಿಯರು ಸಗಣಿಯ ಬೂದಿಯನ್ನು ದುರ್ಗಂಧ ಬರುವ ವಸ್ತುವಿನ ಮೇಲೆ ಹಾಕುವುದರಿಂದ ನಾರುವ ದುರ್ಗಂಧದಿಂದ ಮುಕ್ತಿಯನ್ನು ಪಡೆಯಬಹುದು ಎಂಬುದನ್ನು ಕಂಡುಕೊಂಡು ಕಾರ್ಯಪ್ರವರ್ತರಾಗಿದ್ದಾರೆ. ಇದರಿಂದ ನಮ್ಮ ಹಿರಿಯರು ಸಣ್ಣ ಮಕ್ಕಳು ಹಾಗೂ ಸಾಕು ಪ್ರಾಣಿಗಳು ಮನೆಯಲ್ಲಿ ಮಲ ವಿಸರ್ಜನೆ ಮಾಡಿದಾಗ ಮೊದಲಿಗೆ ಅದರ ಮೇಲೆ ಸಗಣಿಯ ಬೂದಿಯನ್ನೇ ಹಾಕುತ್ತಿದ್ದುದರ ಹಿನ್ನೆಲೆ ಇಂದು ನಮಗರ್ಥವಾಗುತ್ತಿದೆ. ಹೀಗೆ ಹತ್ತು ಹಲವು ರೀತಿಯಲ್ಲಿ ಸಗಣಿಯ ಬೂದಿಯಿಂದು ಮನುಷ್ಯನ ದಿನ ನಿತ್ಯದ ಬಳಕೆಯಲ್ಲಿ ಬಹುಪಯೋಗಿಯಾಗಿ ಕಂಡುಬಂದಿದೆ. ಆದರೆ ಹೀಗೆ ಬಳಸುವ ಸಗಣಿಯ ಬೂದಿ ದೇಶಿ ಗೋತಳಿಗಳದ್ದಾಗಿದ್ದರೆ ಮಾತ್ರ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ : ಗೋ ಸಂಪತ್ತು : ದೇಶಿ ಗೋವಿನ ಸಗಣಿಯ ಮಹತ್ವ ನಿಮಗೆಷ್ಟು ಗೊತ್ತು?

Exit mobile version